ಆರನೇ ಹೆಂಡತಿಯ ಆತ್ಮಕಥೆ

Author : ಆರ್‌.ಕೆ. ಹುಡಗಿ (ರಾಹು)

Pages 608

₹ 400.00




Year of Publication: 2013
Published by: ಸೃಷ್ಟಿ ಪಬ್ಲಿಕೇಷನ್ಸ್
Address: 121, 13 ನೇ ಮುಖ್ಯರಸ್ತೆ, ಎಂ. ಸಿ. ಲೇಜೌಟ್, ವಿಜಯನಗರ, ಬೆಂಗಳೂರು - 560040
Phone: 9845096668

Synopsys

ಕನ್ನಡ ಸಾಹಿತ್ಯ ಲೋಕಕ್ಕೆ ಹೊಸ ಅನುಭವ ಹಾಗೂ ಆಯಾಮವನ್ನು ತೆರೆದಿಡುವ ಸಾಮರ್ಥ್ಯ ಹೊಂದಿರುವ ಇದು ತೆಹಮಿನಾ ದುರ್‍ರಾನಿಯ ಆತ್ಮಚರಿತ್ರೆಯೂ ಹೌದು. ಅವಳು ಸಕ್ರಿಯವಾಗಿ ತೊಡಗಿಕೊಂಡಿದ್ದ ಪಾಕಿಸ್ತಾನಿ ರಾಜಕಾರಣದ ದಾಖಲೆಯೂ ಆಗಿದ್ದಾಳೆ. ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಮಹಿಳೆ ಪಡುವ ಪಾಡು, ದಾಂಪತ್ಯದ ಪರಿಧಿಯೊಳಗೇ ಎದುರಿಸಬೇಕಾದ ಸಮಸ್ಯೆ, ಸವಾಲುಗಳು, ಕೊನೆಗೆ ಗೆದ್ದರೂ ಗೆಲುವಿನಲ್ಲಿಯೂ ಸೋಲಿನ ಅನುಭವ-ಮುಂತಾದ ಸಂಗತಿಗಳನ್ನು ತೆಹಮಿನಾ ದುರ್‍ರಾನಿ ಸಮರ್ಥವಾಗಿ ಗ್ರಹಿಸಿದ್ದಾರೆ.

’ಆರನೇ ಹೆಂಡತಿಯ ಆತ್ಮಚರಿತ್ರೆ’ ಈಗಾಗಲೇ ಅನೇಕ ಭಾಷೆಗಳಿಗೆ ಭಾಷಾಂತರಗೊಂಡಿದೆ.  ಕನ್ನಡಕ್ಕೆ ಅನುವಾದಕ, ಲೇಖಕರಾದ ರಾಹು ಅವರು ತಂದಿದ್ದಾರೆ.

ತೆಹಮಿನಾಳ ಪತಿ ಮುಸ್ತಾಫಾಖಾರ್‌ನ ಐದು ಜನ ಹೆಂಡಂದಿರು ಗಂಡನ ರಕ್ಕಸತನವನ್ನು ಸಹಿಸಿ ಮೌನದಿಂದಲೇ ನಿರ್ಗಮಿಸಿದರೆ ಅವನ ಆರನೇ ಹೆಂಡತಿಯಾಗಿದ್ದ ತೆಹಮಿನಾ ದುರ್‍ರಾನಿ  ಧೈರ್ಯದಿಂದ ಎಲ್ಲವನ್ನೂ ಮುಕ್ತವಾಗಿ ಈ ಕೃತಿಯಲ್ಲಿ ಹೇಳಿಕೊಂಡಿದ್ಧಾಳೆ.

ಕೃತಿಯ ಉದ್ದಕ್ಕೂ ಇತರರ ಬಗೆಗಿನ ಕಹಿ ಸತ್ಯವನ್ನಷ್ಟೇ ಬರೆದಷ್ಟೇ ನಿಷ್ಠುರವಾಗಿ, ಸತ್ಯನಿಷ್ಠಳಾಗಿ ತನ್ನ ತೊಂದರೆ, ಸಮಸ್ಯೆಗಳನ್ನೂ ತಿಳಿಸಿದ್ಧಾಳೆ.

About the Author

ಆರ್‌.ಕೆ. ಹುಡಗಿ (ರಾಹು)

ರಾಹು ಎಂತಲೇ ಪ್ರಸಿದ್ಧರಾಗಿರುವ ಆರ್.ಕೆ.ಹುಡುಗಿ ಅವರು ಜನಿಸಿದ್ದು ಬೀದರ್ ಜಿಲ್ಲೆ ಬಸವಕಲ್ಯಾಣ ತಾಲ್ಲೂಕಿನ ಮುಚಳಂಬ. ಕಲಬುರ್ಗಿ ಪೂಜ್ಯ ದೊಡ್ಡಪ್ಪ ಅಪ್ಪ ಇಂಜಿನಿಯರಿಂಗ್ ಕಾಲೇಜಿನ ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿ ನಿವೃತ್ತಿ ಹೊಂದಿರುವ ಇವರು ಧಾರವಾಡ ರಂಗಾಯಣದ ನಿದೇರ್ಶಕರಾಗಿದ್ದರು. ಸಮುದಾಯ ಸಂಘಟನೆಯ ಸಂಚಾಲಕರಾಗಿಯೂ ಕೆಲಸ ಮಾಡಿದ್ದಾರೆ. ಇವರು ಅನುವಾದಿಸಿರುವ ಕೃತಿಗಳೆಂದರೆ ಆರನೇ ಹೆಂಡತಿ ಆತ್ಮಕತೆ, ಧರೆಹೊತ್ತಿ ಉರಿದಾಗ, ಭಾರತೀಯ ಮಹಿಳಾ ವಿಮೋಚನೆಯ ಆಂದೋಲನ, ಅಮ್ಮಿ, ಭಯೋತ್ಪಾಧಕ, ಜಾತಿ ವ್ಯವಸ್ಥೆ, ಸೆಕ್ಯುಲರ್ ವಾದ ಬುಡ ಬೇರು ಮುಂತಾದವು ​​​​​​. ಇವರಿಗೆ ಕುವೆಂಪು ಭಾಷಾ ಭಾರತಿ ಗೌರವ ಪ್ರಶಸ್ತಿ ಮುಂತಾದ ಪ್ರಶಸ್ತಿಗಳು ಒಲಿದು ಬಂದಿವೆ.  ...

READ MORE

Reviews

 

ತೆಹಮಿನಾ ಎಂಬ ಹೆಣ್ಣು ಮೀನು ತಿಮಿಂಗಲವಾದ ಕಥನ

’ಆರನೇ ಹೆಂಡತಿಯ ಆತ್ಮಕಥೆ' ಪುಸ್ತಕದ ಹೆಸರನ್ನು ನೋಡಿಯೇ ಏನೇನೋ ಭಾವನೆಗಳು ನನ್ನ ಒಳಹೊರಗೆಲ್ಲ ಸುಳಿದಾಡಿದ್ದರಿಂದ, ಜೊತೆಗೆ ಗೆಳತಿಯ ಪತಿಯೂ ಮುದ್ದಾಂ ರೆಕಮೆಂಡ್ ಮಾಡಿ ಓದಲು ಕೊಟ್ಟಿದ್ದರಿಂದ ಮನೆಗೆ ತಂದೆ. ಐದನೂರ ಎಂಬತ್ತೆಂಟು ಪುಟಗಳ ಸುದೀರ್ಘ ಆತ್ಮಕಥೆಯನ್ನು ಓದಿಮುಗಿಸುವುದೆಂದರೆ ಹತ್ತಾರು ಸಲ ಕಣ್ಣಂಚಿಗೆ ಬಂದು ಹೊರಧುಮುಕಲು ಪ್ರಯತ್ನಿಸುವ ಕಣ್ಣೀರನ್ನು ಕಷ್ಟಪಟ್ಟು ತಡೆಹಿಡಿಯುವ ವ್ಯರ್ಥ ಪ್ರಯತ್ನ, ಉಕ್ಕಿಬರುವ ಆಕ್ರೋಶದಲ್ಲಿ ಕೈಗೆ ಸಿಕ್ಕ ವಸ್ತುಗಳನ್ನೆಲ್ಲ ಎತ್ತಿ ಒಗೆಯಬೇಕಂಬ ಮನೋವಿಕಾರ, ನಾಚಿಕೆ, ಅಪಮಾನಗಳಿಂದ ಮುದ್ದೆಯಾಗಿ ಒಳಸರಿಯುವ ಮನಸ್ಸನ್ನು ಮತ್ತೆ ತಹಬದಿಗೆ ತರಲು ಮಾಡುವ ಹರಸಾಹಸ, ಏನೇನು ಭಾವಗಳು ಹೆಣ್ಣುಮಕ್ಕಳನ್ನು ಮತ್ತು ಹೆಂಗರುಳಿನ ಗಂಡಸರನ್ನು ಕಾಡುವುದು, ಅದಕ್ಕೊಂದು ಎಲ್ಲೆ ಸೀಮೆ ಇಲ್ಲವೇ ಇಲ್ಲ.

ನಾವು ಕಣ್ಣಾರೆ ಕಾಣದ ನಾನಾ ಲೋಕಗಳನ್ನು ಪುಸ್ತಕಗಳು ನಮಗೆ ಪರಿಚಯಿಸುವುದು ಗೊತ್ತಿದ್ದ ಸಂಗತಿಯೇ. ಆದರೆ ಇಂಥ ಲೋಕಗಳೂ ನಮ್ಮ ಅಕ್ಕಪಕ್ಕದಲ್ಲೇ ಇದ್ದಾವು ಎನ್ನುವ ಸಣ್ಣ ಸುಳಿವೂ ಇಲ್ಲದೇ ಓದಲು ಪ್ರಾರಂಭಿಸಿದ ಆರನೇ ಹೆಂಡತಿ ಹೊಸದೊಂದು ಯಾತನಾಲೋಕಕ್ಕೆ ನನ್ನನ್ನು ಕರೆದೊಯ್ದಿದ್ದಳು. ತೆಹಮಿನಾ ದುರಾನಿ ಪಾಕಿಸ್ತಾನದ ಶ್ರೀಮಂತ ಕುಟುಂಬವೊಂದರಲ್ಲಿ ಜನಿಸಿದ ಹೆಣ್ಣುಮಗಳು. ತಂದೆಗೆ ಪಾಕಿಸ್ತಾನದ ಬ್ಯಾಂಕೊಂದರಲ್ಲಿ ಹಿರಿಯ ಹುದ್ದೆ, ಬರೀ ಪಾರ್ಟಿಗಳು, ಮೋಜುಮಸ್ತಿಯಲ್ಲೇ ಕಾಲ ಕಳೆಯುವ ಫ್ಯಾಷನೇಬಲ್ ತಾಯಿ. ಅವಳಿಂದಲೇ ಅನಾದರಕ್ಕೊಳಗಾದ ತೆಹಮಿನಾ ಹದಿಹರೆಯದಲ್ಲೇ ಅನೀಸ್ ಎನ್ನುವ ಯುವಕ ನನ್ನು ಪ್ರೀತಿಸಿ ಮದುವೆಯಾಗುತ್ತಾಳೆ. ಆದರೆ ಪಾರ್ಟಿಯೊಂದರಲ್ಲಿ ಪ್ರಖರ ಮಾತಿನ ಮೋಡಿಗಾರ, ಪಾಕಿಸ್ತಾನದ ರಾಜಕಾರಣಿ ಮತ್ತು ಪಂಜಾಬಿನ ಮಾಜಿ ಗವರ್ನರ್ ಮುಸ್ತಾಫಾಖಾರ್‌ನೆಡೆಗೆ ಆಕರ್ಷಿತಳಾಗಿ ತನ್ನ ಪತಿ ಮತ್ತು ಪುಟ್ಟ ಮಗಳನ್ನು ಬಿಟ್ಟು ಮುಸ್ತಾಫಾನ ಆರನೇ ಹೆಂಡತಿಯಾಗಿ ಅವನ ಮನೆಗೆ ಬರುತ್ತಾಳೆ. 

ಗೊತ್ತಿದ್ದೂ ಬಲೆಗೆ ಬಿದ್ದ ತೆಹಮಿನಾ 

ಈಗಾಗಲೇ ಇಲ್ಲಿದ್ದ ಐದನೇ ಹೆಂಡತಿಯು ಮುಸ್ತಾಫಾನ ಕೌರ್ಯದ ಬಗ್ಗೆ ಸಾಕಷ್ಟು ವಿವರವಾಗಿಯೇ ತಿಳಿಸಿ ನೀನೂ ಇವನ ಬಲೆಗೆ ಬೀಳಬೇಡ ಎಂದು ಎಚ್ಚರಿಸಿದಾಗಲೂ ಅವಳು ಕೇವಲ ಹೊಟ್ಟೆಕಿಚ್ಚಿನಿಂದ, ಸವತಿ ಮತ್ತರದಿಂದ ಇಂಥ ಮಾತುಗಳನ್ನು ಹೇಳುವುದೆಂದು ತನಗೆ ಅನುಕೂಲವಾಗುವಂತೆ ಅರ್ಥೈಸಿಕೊಳ್ಳುವ ತೆಹಮಿನಾ, ತನ್ನ ತೌರುಮನೆಯವರ ವಿರೋಧದ ನಡುವೆಯೂ ಖಾರನನ್ನು ಮದುವೆ ಯಾಗುತ್ತಾಳೆ. ಅಂದರೆ ಆರಿಸಿ ಆರಿಸಿ ನರಕವನ್ನು ಹೊಗುತ್ತಾಳೆ. ಅಲ್ಲಿಯವರೆಗೆ ಅತ್ಯಂತ ರೊಮ್ಯಾಂಟಿಕ್ಕಾಗಿ ವರ್ತಿಸಿ ಅವಳನ್ನು ಬುಟ್ಟಿಗೆ ಹಾಕಿಕೊಂಡ ಮುಸ್ತಾಫಾ ಒಮ್ಮೆ ಅವಳು ತನ್ನವಳಾದೊಡನೇ ಪಾಕಿಸ್ತಾನದ ಟಿಪಿಕಲ್ ಇಸ್ಲಾಂ ಸಂಪ್ರದಾಯಸ್ಥ ಪುರುಷನಂತೆ ಅವಳನ್ನು ಅತ್ಯಂತ ಹೀನಾಯವಾಗಿ ನರಕಯಾತನೆಗೆ ಒಳಪಡಿಸುತ್ತಾನೆ. ಅವನನ್ನು ಕೇಳದೇ, ಅವನ ಒಪ್ಪಿಗೆ ಪಡೆಯದೇ ಅವಳು ಹೊರಗೆಲ್ಲೂ ತಿರುಗಾಡುವ ಹಾಗೆಯೇ ಇಲ್ಲ ಒಪ್ಪಿಗೆ ನೀಡಿದಾಗಲೂ ಅವಳಿಗೆ ಗೊತ್ತಿಲ್ಲದಂತೆ ಅವಳ ಚಲನವಲನಗಳನ್ನು ಗಮನಿಸಲು ಅವನು ಜನರನ್ನು ನೇಮಿಸುವ ಸುದ್ದಿ ಎಷ್ಟೋ ದಿನಗಳ ನಂತರ ತೆಹಮಿನಾಳಿಗೆ ತಿಳಿಯುತ್ತದೆ. ಇಷ್ಟರಲ್ಲಿ ದೇಶಭ್ರಷ್ಟನಾಗುವ ಮುಸ್ತಾಫಾ ಹೆಂಡತಿ, ಮಕ್ಕಳೊಡನೆ ಲಂಡನ್ನಿಗೆ ಓಡಿ ಹೋಗುತ್ತಾನೆ. ಅಲ್ಲಿ ಮೊದಲೇ ಬಂದು ಸೆಟಲ್ ಆಗಿರುವ ತೆಹಮಿನಾಳ ತೌರುಮನೆಯವರೊಂದಿಗೆ ನಿರಾಯಾಸವಾಗಿ ಬೆರೆತು ಅತ್ತೆಯನ್ನೂ ಖುಷ್ ಮಾಡಿಬಿಡುವ ಮುಸ್ತಾಫಾನ 

ಮೋಡಿಗೆ ಒಳಗಾಗದವರೇ ಇಲ್ಲ ಎನ್ನುತ್ತಾಳೆ ತೆಹಮಿನಾ. ಅಲ್ಲಿ ತೆಹಮಿನಾಳ ಇನ್ನೂ ಹದಿನೈದು ವರ್ಷದ ತಂಗಿ ಆದಿಲಾಳೊಂದಿಗೆ ಅವನ ಸರಸ, ಸಮ್ಮಿಲನ ಶುರುವಾಗುತ್ತದೆ. ಸ್ವತಃ ತೆಹಮಿನಾಳೇ ಮುಸ್ತಾಫಾನಿಗಿಂತ ಸುಮಾರು ಇಪ್ಪತ್ತು ವರ್ಷಗಳಿಗೂ ಚಿಕ್ಕವಳು. ಅವಳಿಗಿಂತ ಸಾಕಷ್ಟು ಚಿಕ್ಕವಳಾದ ಆದಿಲಾ ಕೂಡ ಮುಸ್ತಾಫಾ ಬೀಸಿದ ಬಲೆಗೆ ಸಿಕ್ಕು ತನ್ನ ಅಕ್ಕನಿಗೆ ಮೋಸ ಮಾಡುತ್ತಾಳೆ. ಎಲ್ಲ ತಿಳಿದೂ ಏನೂ ಮಾಡಲು ಸಾಧ್ಯವಿಲ್ಲದ ಸ್ಥಿತಿಯಲ್ಲಿ ತೆಹಮಿನಾ ಸಾಕಷ್ಟು ನೊಂದುಕೊಳ್ಳುತ್ತಾಳೆ. ಇಂಥ ಎಲ್ಲ ಸಾಂಸಾರಿಕ ಹಗರಣಗಳ ಜೊತೆಗೆ ಪಾಕಿಸ್ತಾನದ ರಾಜಕೀಯ ಸ್ಥಿತ್ಯಂತರಗಳೂ ಕಲೆತಿದ್ದರಿಂದ ಪಾಕಿಸ್ತಾನ ಮತ್ತು ಇಂಗ್ಲೆಂಡ್‌ಗಳ ನಡುವೆ ಡೋಲಾಯಮಾನವಾದ ಬದುಕಿನಲ್ಲಿ ಅನೇಕ ಏಳುಬೀಳುಗಳನ್ನು ಅವನೊಟ್ಟಿಗೇ ಅನುಭವಿಸುವ ತೆಹಮಿನಾ ಸಾಕಷ್ಟು ಬಳಲಿ ಬೆಂಡಾಗುತ್ತಾಳೆ, ಅವಳು ಬಿಟ್ಟೆನೆಂದರೂ ಅವಳನ್ನು ಬಿಟ್ಟು ಬಿಡಲು ಮುಸ್ತಾಫಾ ತಯಾರಿರುವುದಿಲ್ಲ.

ದೇಶ-ಕಾಲಾತೀತವಾಗಿ ಗಂಡಿನಿಂದ ಹೆಣ್ಣಿನ ಶೋಷಣೆ ನಡೆಯುತ್ತಲೇ ಬಂದಿದೆ. ಕೆಲವು ದೈಹಿಕ ಮಟ್ಟದಲ್ಲಿದ್ದರೆ ಇನ್ನು ಕೆಲವು ಮಾನಸಿಕ ಮಟ್ಟದಲ್ಲಿರುತ್ತವೆ. ಒಟ್ಟಿನಲ್ಲಿ ಎಲ್ಲೆಲ್ಲಿಯೂ ಹೆಣ್ಣು ದೈಹಿಕವಾಗಿ, ಆರ್ಥಿಕವಾಗಿ ದುರ್ಬಲಳೆಂಬ ಕಾರಣಕ್ಕೆ ಅವಳ ಮೇಲೆ ಹಿಂಸೆ, ದೌರ್ಜನ್ಯ ನಡೆದೇ ಇರುತ್ತದೆ. ಆದರೆ ಆರನೇ ಹೆಂಡತಿಯ ಆತ್ಮಕಥೆಯಲ್ಲಿ ಬಂದ ದೌರ್ಜನ್ಯಗಳನ್ನು ಓದುತ್ತಿದ್ದರೆ ಮೈಯೊಳಗಿನ ರಕ್ತ ಹೆಪ್ಪುಗಟ್ಟಿದ ಅನುಭವವಾಗುತ್ತದೆ. ಹೆಂಡತಿಯನ್ನು ದೂರ ದೂರಿನಲ್ಲಿ ಬಂಧಿಯಾಗಿಟ್ಟು ಇಡೀ ಲೋಕದಿಂದಲೇ ಅವಳೆಲ್ಲ ಸಂಪರ್ಕಗಳನ್ನು ಕಡಿದುಬಿಡುವುದು, ಹೆಂಡತಿಯ ಪ್ರತಿಯೊಂದು ಫೋನ್ ಕರೆಯನ್ನು ಟ್ಯಾಪ್ ಮಾಡುವುದು, ಲಂಡನ್ನಿನಂಥ ಶಹರದಲ್ಲಿ ಕೂಡ ಅವಳು ಹೊರಗೆ ಹೋಗದಂತೆ ಬಂಧಿಸಿಡುವುದು, ತನ್ನ ಪರ್ಮಿಶನ್ ತೆಗೆದು ಕೊಳ್ಳದೇ ಹೊರಗೆ ಹೋದ ಹೆಂಡತಿಯನ್ನು ವಿವಸ್ತ್ರಗೊಳಿಸಿ ಹೊಡೆಯುವುದು, ಗಂಡನ ಮನೆ ತೊರೆದು ತೌರುಮನೆಗೆ ಬಂದು ಇರುವ ಹೆಂಡತಿಯನ್ನು ಕರೆಸುವ ಉಪಾಯವಾಗಿ - ಸ್ವಂತ ಮಕ್ಕಳನ್ನೇ ಅಪಹರಿಸಿ ಅವರನ್ನು ಪ್ಯಾರೀಸ್ ಮುಖಾಂ ತರ ಪಾಕಿಸ್ತಾನಕ್ಕೆ ಕಳಿಸಿ ಅವಳನ್ನು ಬ್ಯಾಕಮೇಲ್ ಮಾಡುವುದು, ಅಪ್ರಾಪ್ತ ವಯಸ್ಸಿನ ಹೆಂಡತಿಯ ತಂಗಿಯೊಡನೆಯೇ ದೈಹಿಕ ಸಂಬಂಧವಿರಿಸಿಕೊಳ್ಳುವುದು, ಪಾಕಿಸ್ತಾನದ ಜೈಲಿನಲ್ಲಿರುವಾಗ ಕೂಡ, ಇತರರೊಂದಿಗೆ ತನ್ನನ್ನು ಭೇಟಿಯಾಗಲು ಬಂದ ಹೆಂಡತಿಯನ್ನು ಸೆಲ್‌ನಲ್ಲಿಯೇ ಸಂಭೋಗಿಸುವುದು, ನಂತರ ಪುಸ್ತಕವನ್ನು ಬರೆದಿದ್ದಕ್ಕಾಗಿ ಅವಳ ಮೇಲೆ ಮಾನನಷ್ಟ ಮೊಕದ್ದಮೆ ಹೂಡುವುದು, ಒಂದೇ ಎರಡೇ! 

ಕಪಿಮುಷ್ಟಿಯಿಂದ ಪಾರಾದ ಅಬಲೆ

ಎಷ್ಟೋ ಸಲ ಬಿಡುವುದು, ಕೂಡುವುದು ನಡೆದು ಕೊನೆಗೂ ಒಮ್ಮೆ ಗಟ್ಟಿಧೈರ್ಯ ಮಾಡಿ ಮುಸ್ತಾಫಾನ ಕಪಿ ಮುಷ್ಟಿಯಿಂದ ಹೊರಬರುವ ತೆಹಮಿನಾ ತನ್ನೆಲ್ಲ ನೋವುಗಳನ್ನು, ತಾನಿಟ್ಟ ತಪ್ಪು ಹೆಜ್ಜೆಗಳ ಸಹಿತವಾಗಿ ಜಗತ್ತಿಗೇ ತಿಳಿಸಲು ನಿರ್ಧಾರ ಮಾಡಿ ಬರೆದ 'ಮೈ ಸ್ಕೂಡಲ್ ಲಾರ್ಡ್' (1991) ಎಂಬ ಮೂಲ ಇಂಗ್ಲೀಷ್ ಕೃತಿ ಇಂಗ್ಲೆಂಡ್ ಮತ್ತು ಪಾಕಿಸ್ತಾನಗಳಲ್ಲಿ ಸಾಕಷ್ಟು ಅಲ್ಲೋಲಕಲ್ಲೋಲವನ್ನುಂಟು ಮಾಡಿತು, ಜಗತ್ತಿನ ಅನೇಕ ಭಾಷೆಗಳಿಗೆ ಅನುವಾದಗೊಂಡು ಲಕ್ಷಾಂತರ ಜನರಿಂದ ಓದಿಸಿಕೊಂಡಿದೆ. ಮೈ ಫೂಡಲ್ ಲಾರ್ಡ್ ಪ್ರಕಟವಾದ ನಂತರ ತನ್ನ ಹೂರಣವಲ್ಲ ಹೊರಬಿದಿತೆಂದು ತಳಮಳಗೊಂಡು ಫೋನ್ ಮಾಡುವ ಮುಸ್ತಾಫಾಗೆ ಕೊನೆಯದಾಗಿ ಧೈರ್ಯದಿಂದ ಉತ್ತರಿಸುವ ತೆಹಮಿನಾ “ನೀನೀಗ ಬರಿ ಪಾಕಿಸ್ತಾನದ ರಾಜಕಾರಣದಲ್ಲಿ ಮಾತ್ರ ಪ್ರಸ್ತುತವಿರುವ ಮುಸ್ತಾಫಾ ಎಂಬ ಮಂಡೂಕ, ನಾನೋ ಸಪ್ತಸಾಗರಗಳನ್ನು ದಾಟಿ ಸರ್ವತೀರಗಳಲ್ಲೂ ಅಲೆದಾಡುವ ತಿಮಿಂಗಿಲ! ನೆನಪಿರಲಿ ಮಂಡೂಕ ಮುಸ್ತಾಫಾ, ನಾನು ತೆಹಮಿನಾ ಎಂಬ ತಿಮಿಂಗಿಲ” ಎಂದು ಮಾತು ಮುಗಿಸುತ್ತಾಳೆ.

ರಾಹು ಅವರು ಇದನ್ನು ಕನ್ನಡಕ್ಕೆ ಅತ್ಯಂತ ಸಶಕ್ತವಾದ ಭಾಷೆಯಲ್ಲಿ ಅನುವಾದಿಸಿದ್ದಾರೆ. ಪುಸ್ತಕದ ಭಾಷೆ ಬಲು ಸೊಗಸಾಗಿದೆ, ಪ್ರೌಢಿಮೆಯಿಂದ ಕೂಡಿದೆ. ತೆಹಮಿನಾ ತನ್ನ ವೈಯಕ್ತಿಕ ಬದುಕಿನ ಜೊತೆಜೊತೆಗೆ ಪಾಕಿಸ್ತಾನದ ಜನರ ಬದುಕನ್ನೂ ಅಲ್ಲಿನ ರಾಜಕೀಯ ವಿಪ್ಲವಗಳನ್ನೂ ವಿಶದವಾಗಿ ಪ್ರಸ್ತುತ ಪಡಿಸಿದ್ದು, ಪಾಕಿಸ್ತಾನದ ಬಗ್ಗೆ ಅಲ್ಲಿನ ಜನರ ಅಭಿಪ್ರಾಯಗಳನ್ನು ತಿಳಿಯಲು ಸಾಧ್ಯವಾಗುತ್ತದೆ. ಜೊತೆಗೆ ಮುಸ್ಲಿಮ್ ಸಮಾಜದಲ್ಲಿ ಹೆಣ್ಣುಮಕ್ಕಳಿಗಿರುವ ದಿಗ್ಟಂಧನ,

 

ಅದೇ ಪುರುಷರಿಗಿರುವ ಮಿತಿಮೀರಿದ ಸ್ವಾತಂತ್ರ , ಅವುಗಳನ್ನು ಅವರು ನಿರ್ಲಜ್ಞತೆಯಿಂದ ಉಪಯೋಗಿಸಿ ಕೊಂಡು ವಿಲಾಸೀಜೀವನ ನಡೆಸುವ ರೀತಿ - ಎಲ್ಲವನ್ನೂ ವಿಸ್ತಾರವಾಗಿ ತಿಳಿದುಕೊಳ್ಳಲು ಬಹುಷಃ ನಮಗೆ ಸಾಧ್ಯವಾಗು ವುದು ಇದೊಂದೇ ಕೃತಿಯಿಂದ ಎನಿಸುತ್ತದೆ. ಅದೇ ಕಾಲಕ್ಕೆ ಪಾಕಿಸ್ತಾನದ ಜನಸಾಮಾನ್ಯರನ್ನು ಆಜ್ಞಾನದ ಗಾಢಾಂಧಕಾರ ದಲ್ಲಿಟ್ಟು ತಾವಷ್ಟೇ ಐರೋಪ್ಯ ದೇಶಗಳ ಮಾದರಿಯಲ್ಲೇ ಸಕಲ ಶ್ವರ್ಯಗಳನ್ನು ಅನುಭವಿಸುವ ಅಲ್ಲಿನ ರಾಜಕಾರ ಣಿಗಳ ಮುಸುಕನ್ನೂ ತೆಗೆದು ತೋರುವಲ್ಲಿ ಕೂಡ ಕೃತಿ ಯಶಸ್ಸನ್ನು ಕಾಣುತ್ತದೆ. ಜನಪದರು ಎಷ್ಟೇ ಕಷ್ಟದಲ್ಲಿದ್ದರೂ ಕೆಲವೇ ಸಂಖ್ಯೆಯಲ್ಲಿರುವ ಅಲ್ಲಿನ ಎಲಿಟ್ ಕ್ಲಾಸ್ ಜನ ವಿಲಾಸೀ ಜೀವನಕ್ಕೆ, ಪಾರ್ಟಿಗಳಿಗೆ, ಮನೆಯ ಶೃಂಗಾರಕ್ಕೆ ನೀರಿನಂತೆ ಹಣ ಖರ್ಚು ಮಾಡುವ ಬಗೆಯೂ ತಿಳಿಯು ತ್ತದೆ. ಭಾರತವನ್ನು ಇಬ್ಬಾಗ ಮಾಡಿ, ಮುಸ್ಲಿಂ ದೇಶವನ್ನು ಸೃಷ್ಟಿಸಿದ ಇಂಗ್ಲೀಷರು ಇವತ್ತಿಗೂ ಪಾಕಿಸ್ತಾನಿಯರ ಬಗ್ಗೆ ಹೊಂದಿರುವ ಮೃದು ಧೋರಣೆಯನ್ನೂ ತಿಳಿದೋ, ತಿಳಿಯದೆಯೋ ತೆಹಮಿನಾ ಅನಾವರಣಗೊಳಿಸಿದ್ದಾಳೆ. ಬಹಳಷ್ಟು ಜನ ಮೇಲ್ವರ್ಗದ ಪಾಕಿಸ್ತಾನಿಯರಿಗೆ ಡುಯಲ್ ನಾಗರೀಕತ್ವದ ಸೌಲಭ್ಯವಿದೆ. ಇತರರಿಗೆ ಕೇವಲ ಪ್ರವಾಸಕ್ಕಾಗಿ ಎಂಟು ದಿನ ಹೋಗಿಬರಲೂ ನೂರಂಟು ಕಾಯಿದೆಗಳನ್ನು ಹೇಳುವ ಇಂಗ್ಲೆಂಡ್, ಅವರಿಗೆ ತನ್ನ ದೇಶದ ನಾಗರೀಕತ್ವವನ್ನು ಉದಾರವಾಗಿ ದಯಪಾಲಿಸಿದೆ. ಇಮಿಗ್ರೇಷನ್‌ನಲ್ಲೂ ಅತ್ಯಂತ ಕಟ್ಟುನಿಟ್ಟಾದ ಚೆಕ್ಕಿಂಗ್ ಇರುವ ಇವರ ಏರಪೋರ್ಟ್‌ ಗಳಲ್ಲಿ ವೀಸಾ ಕೂಡ ಇಲ್ಲದೇ ಪ್ರಯಾಣಿಸುವ ಅನುಕೂಲ ವನ್ನು ಕೆಲ ಅಧಿಕಾರಿಗಳು ಮಾಡಿಕೊಡುತ್ತಾರೆಂಬ ಗುಟ್ಟು ಕೂಡ ಪುಸ್ತಕದ ಓದಿನಿಂದ ರಟ್ಟಾಗುತ್ತದೆ. - ಒಟ್ಟಿನಲ್ಲಿ ಹೇಳಬೇಕೆಂದರೆ ತೆಹಮಿನಾ ಎಂಬ ನಾಚಿಕೆ ಸ್ವಭಾವದ ಹೆಣ್ಣ ಮೀನು, ಪರಿಸ್ಥಿತಿಯ ಮನುಷ್ಯನಿರ್ಮಿತ ಸಂಕಷ್ಟಕ್ಕೆ ಸಿಲುಕಿ, ತಿಮಿಂಗಿಲವಾದ ಈ ಕಥನ ಓದಿ ಮುಗಿಸುವ ಹೊತ್ತಿಗೆ ನಮ್ಮ ರೋಮರೋಮಗಳೂ ಸೆಟೆದು ನಿಂತಿರುತ್ತವೆ.

ನೀತಾ ರಾವ್‌ ಬೆಳಗಾವಿ 01 ಡಿಸೆಂಬರ್‌ 2019 

ಕೃಪೆ : ವಿಶ್ವವಾಣಿ

ಈ ವಾರದ ಹೊತ್ತಗೆ : ಆರನೇ ಹೆಂಡತಿಯ ಆತ್ಮಕಥೆ- ಕನ್ನಡ ಪ್ರಭ

 

Related Books