‘ಮತ್ತೊಂದು ಅವಕಾಶ’ ಕೇಶವ ಕುಡ್ಲ ಅವರ ಅನುಭವಕಥನವಾಗಿದೆ. ಜೀವನದುದ್ದಕ್ಕೂ ನಾನೊಂದು ಭ್ರಮೆಯಲ್ಲಿದ್ದೆ ಅಥವ ಅಹಂಕಾರವೆನ್ನಿ, ನನಗೆ ಯಾವತ್ತಿಗೂ ಯಾವ ರೋಗವೂ ಬರುವುದಿಲ್ಲ. ಸಾವು ಬರುವುದಾದರೆ ಅದು ನನಗೆ ಅಪಘಾತದ ಮೂಲಕವೆ ಬರಬೇಕು ಎನ್ನುವಷ್ಟು ತೀವ್ರತರಹದ ಅಹಂಕಾರವಾಗಿತ್ತು ಅದು. ಅದಕ್ಕೆ ಕಾರಣವೂ ಇತ್ತು. ನಾನು ಚಿಕ್ಕ ವಯಸ್ಸಿನಲ್ಲೆ ವ್ಯಾಯಾಮಕ್ಕೆ ಮನಸೋತವನು. ಮಂಗಳೂರಿಗೆ ಬಂದ ನಂತರವೂ ಹನುಮಾನ್ ಗರಡಿಗೆ ಸೇರಿಕೊಂಡು ಅಲ್ಲಿ ಗುರುಗಳ ಮಾರ್ಗದರ್ಶನದಲ್ಲಿ ಸತತ ಅಭ್ಯಾಸ ಮಾಡತೊಡಗಿದೆ. ಈಗಿನ ಜಿಮ್‍ಗಳಂತಲ್ಲದ, ಪಾರಂಪರಿಕ ಗರಡಿ ಮನೆಯಾಗಿದ್ದ ಅಲ್ಲಿ ಸಾಮು, ಬಸ್ಕಿ, ದಂಡ, ಇವುಗಳ ಜೊತೆಗೆ ಕೆಮ್ಮಣ್ಣಿನಲ್ಲಿನ ವ್ಯಾಯಾಮಗಳು, ಕೆಮ್ಮಣ್ಣನ್ನು ಅಗೆಯುವುದು, ಆಖಾಡವನ್ನು ಹದಗೊಳಿಸುವುದು ನಂತರ ಬೆವರು ಸುರಿಯುತ್ತಿದ್ದ ದೇಹವನ್ನು ವಿಶ್ರಾಂತಿಗೊಳಪಡಿಸಿ ನಂತರ ಅಲ್ಲೆ ಇದ್ದ ಭಾವಿಯಿಂದ ನಿರ್ಮಲ ಮತ್ತು ಶೀತಲ ಜಲವನ್ನು ಸೇದಿ ಹೊಯ್ದುಕೊಂಡು ಸ್ನಾನ ಮಾಡಿ ಮನೆಗೆ ಬಂದು ಬಿಸಿಬಿಸಿ ಊಟಮಾಡುವುದು ಆಹಾಹಾ. . . ಎಂತಹ ಸುಖಾನುಭವ? ಅದರ ಜೊತೆಗೆ ವಾಕಿಂಗ್ ಹವ್ಯಾಸ ಮತ್ತು ಗೆಳೆಯರ ಜೊತೆಗೂಡಿ ತಿಂಗಳಿಗೊಂದು ಚಾರಣ. ಹೀಗೆ ದೇಹ ಸುಂದರವಾಗಿ ರೂಪುಗೊಂಡಿತ್ತು. ಮಾಂಸಖಂಡಗಳು ಹುರಿಗಟ್ಟಿದ್ದವು. ಬಿಳಿಯಾಗುತ್ತಿದ್ದ ಕೂದಲಿಗೆ ಗುಟ್ಟಾಗಿ ಬಣ್ಣ ಹಾಕಿಕೊಳ್ಳುತ್ತ, ವಯಸ್ಸು ಕಳೆಯುತ್ತಾ ಹೋದಂತೆ, ನನ್ನ ಗೆಳೆಯರು ನೋಡಲು ವೃದ್ಧರಾಗುತ್ತ ಹೋದರೂ ನಾನು ನೋಡಲು ಹೆಚ್ಚುಕಡಿಮೆ ಹಾಗೆ ಇದ್ದೆ! (. . . ಭ್ರಮೆ!)
©2025 Book Brahma Private Limited.