ಸದಭಿರುಚಿಯ ತಲ್ಲೀನತೆ

Author : ಎಸ್.ಬಿ. ಶಾಪೇಟಿ

Pages 340

₹ 275.00




Published by: ವಾಚಸ್ವತಿ ಪ್ರಕಾಶನ
Address: ಮೈಸೂರು

Synopsys

ಈ ಕೃತಿಯಲ್ಲಿ ಎಸ್.ಬಿ. ಶಾಪೇಟಿ ಅವರು ತಮ್ಮ ಕಾಲದ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ, ಶೈಕ್ಷಣಿಕ ಚಿತ್ರಣಗಳನ್ನೂ ಇಲ್ಲಿ ಚಿತ್ರಿಸಿದ್ದಾರೆ. ಬದುಕಿನ ಆರಂಭ, ಏರಿಳಿತ, ಸಮಸ್ಯೆ, ಅವರು  ಎದುರಿಸಿದ ಸವಾಲುಗಳನ್ನೂ ಅವರು ಈ ಕೃತಿಯಲ್ಲಿ ವಿವರಿಸಿದ್ದಾರೆ. ವಿಜಯಪುರ, ಕೊಲ್ಲಾಪುರ, ಧಾರವಾಡದ ಅಂದಿನ ಸ್ಥಿತಿಗತಿಗಳು, ಆ ಭಾಗಗಳ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಬೆಳವಣಿಗೆಗಳ ಕುರಿತು ಲೇಖಕರು ಈ ಕೃತಿಯಲ್ಲಿ ಮಾಹಿತಿಗಳನ್ನು ಒದಗಿಸಿದ್ದಾರೆ. ಧಾರವಾಡ ವಿಶ್ವವಿದ್ಯಾಲಯದ ಇತಿಹಾಸದ ಬಗ್ಗೆ ಈ ಕೃತಿಯಲ್ಲಿ ವಿವರಿಸಿದ್ದಾರೆ.

About the Author

ಎಸ್.ಬಿ. ಶಾಪೇಟಿ

ಮೂಲತಃ ವಿಜಯಪುರ ಜಿಲ್ಲೆಯ ಸಿದ್ದಪ್ಪ ಶಾಪೇಟಿ (ಎಸ್.ಬಿ.ಶಾಪೇಟಿ) ಅವರು ಮಹಾರಾಷ್ಟ್ರದ ಕೊಲ್ಹಾಪುರದ ರಾಜಾರಾಮ ಕಾಲೇಜಿನಲ್ಲಿ ಉಚ್ಛ ಶಿಕ್ಷಣ ಪಡೆದು ಅಲ್ಲಿಯೇ ಅಧ್ಯಾಪಕರಾದರು. ಇವರ ಕರ್ತವ್ಯ ದಕ್ಷತೆಯನ್ನು ಕಂಡ ಕರ್ನಾಟಕ ವಿಶ್ವವಿದ್ಯಾಲಯದ ಕುಲಪತಿ ಡಿ.ಸಿ.ಪಾವಟೆ, ಇವರನ್ನು ಕರ್ನಾಟಕ ವಿಶ್ವವಿದ್ಯಾಲಯಕ್ಕೆ ಆಮಂತ್ರಿಸಿದಾಗ ಶಾಪೇಟಿ ಅವರು ಧಾರವಾಡಕ್ಕೆ ಬಂದು ನೆಲೆಸಬೇಕಾಯಿತು. ನಂತರ ಅವರು ಕರ್ನಾಟಕ ವಿಶ್ವವಿದ್ಯಾಲಯದ ಪರೀಕ್ಷಾ ವಿಭಾಗದ ನಿಯಂತ್ರಣಾಧಿಕಾರಿಯಾಗಿ ನೇಮಕ ಗೊಂಡು, ಇಡೀ ವಿಶ್ವವಿದ್ಯಾಲಯದ ಶೈಕ್ಷಣಿಕ ಗುಣಮಟ್ಟ ಎತ್ತರಿಸಲು ಕಾರಣರಾದರು.ಅವರ ಕರ್ತವ್ಯನಿಷ್ಠೆ ಹಾಗೂ ಶಿಸ್ತು ಬದ್ಧ ಜೀವನವನ್ನುತಮ್ಮದೇ ಆದ ಆತ್ಮಕಥೆ-‘ಮೌನ ಮಾತನಾಡಿತು’ ಕೃತಿಯಲ್ಲಿ ಉಲ್ಲೇಖಿಸಿದ್ದು, ಇತರರಿಗೂ ಮಾದರಿಯಾಗಿದೆ.  ಬಾಲ್ಯದ ನೆನಪುಗಳು, ಕೊಲ್ಹಾಪುರ ಮಹಾಲಕ್ಷ್ಮಿಯ ಸನ್ನಿಧಿಯಲ್ಲಿ ಹಾಗೂ ಸ್ನೇಹಸುಧೆ ಹೀಗೆ ...

READ MORE

Reviews

ಆಡಳಿತಗಾರನೊಬ್ಬನ ಬದುಕಿನ ಸರಳ ನಿರೂಪಣೆ

ಸರಳತೆ, ನೈತಿಕತೆ, ಸಂವೇದನಾಶೀಲ ನಿರೂಪಣೆಯಿಂದ ನಮ್ಮನ್ನು ಸೆಳೆಯುವ ಎಸ್.ಬಿ. ಶಾಪೇಟಿ ಅವರ ಆತ್ಮಕಥನ 'ಸದಭಿರುಚಿಯ ತಲ್ಲೀನತೆ' ತನ್ನ ಪ್ರಾಮಾಣಿಕತೆಯ ದೃಷ್ಟಿಯಿಂದಲೂ ನಮ್ಮ ಗಮನ ಸೆಳೆಯುವ ಒಂದು ಕೃತಿಯಾಗಿದೆ. ಎಸ್. ಬಿ. ಶಾಪೇಟಿಯವರು ಕನ್ನಡದ ಪ್ರತಿಭಾವಂತ ಅಧ್ಯಾಪಕ ಮತ್ತು ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ಸುದೀರ್ಘ ಕಾಲ ಸೇವೆ ಸಲ್ಲಿಸಿದ ವರು. ಸುಪ್ರಸಿದ್ಧ ಕುಲಪತಿಗಳಾದ ಶ್ರೀ ಡಿ ಸಿ ಪಾವಟೆ ಅವರ ಜೊತೆ ಕೆಲಸ ಮಾಡಿ ಸೈ ಎನಿಸಿಕೊಂಡವರು. ಹೌದು, ಒಟ್ಟು ಆರು ವಿಭಾಗಗಳಲ್ಲಿ ನಿರೂಪಿತವಾಗಿರುವ ಈ ಕೃತಿ ಲೇಖಕರ ಆಡಳಿತದ ಪ್ರಧಾನವಾಗಿಟ್ಟುಕೊಂಡು, ಶಿಕ್ಷಣ ಕ್ಷೇತ್ರದ ಆಡಳಿತದ ಹಲವು ಮಜಲುಗಳನ್ನು ಓದುಗರಿಗೆ ಸರಳವಾಗಿ ಪರಿಚಯಿಸುತ್ತದೆ. ಯಾವುದೇ ಭಾವಾಸತಿರೇಖ ಅಥವಾ ಹೆಚ್ಚಿನ ಭಾವಾವೇಶವಿಲ್ಲದೆ ಕಟ್ಟಿರುವ ಈ ಪುಸ್ತಕದ ಓದಲೆರಡು ಭಾಗಗಳಲ್ಲಿ ಬಾಲ್ಯದ ನೆನಪು ಮತ್ತು ಪ್ರೌಢಾವಸ್ತೆ ಬಂದ ಮೇಲೆ ಹದಿನೆಂಟು ವರುಷಗಳ ಕಾಲ ಕೊಲ್ಲಾಪುರದ ರಾಜಾರಾಮ ಕಾಲೇಜಿನಲ್ಲಿ ಕನ್ನಡ ಅಧ್ಯಾಪಕರಾಗಿ ಸೇವೆ ಸಲ್ಲಿಸುದುದರ ಕುರಿತಾದ ವಿಪುಲ ವಿವರಗಳಿವೆ.

ಬಹಳ ಮುಖ್ಯವಾಗಿ ಕನ್ನಡ-ಮರಾಠಿ ದ್ವಿಭಾಷಿಕ ಪರಿಸರದಲ್ಲಿ ಬದುಕಿಯೂ ಕನ್ನಡದ ಬಗೆಗಿನ ಪ್ರೀತಿ, ಸೆಳೆತ ಮತ್ತು ಅದನ್ನು ಉಳಿಸಿಕೊಳ್ಳುವ ಅವರ ತಹತಹ ನಮ್ಮನ್ನು ಸೆಳೆಯುತ್ತದೆ. ತಾವು ಓದಬೇಕಾದರೆ ಎದುರಿಸಿದ ಸಂಕಷ್ಟ, ಅವರ ಗುರುಗಳ ನಿರ್ವಾಜ್ಯ ಪ್ರೀತಿ-ಪ್ರೇಮಗಳನ್ನು ಸಹ ಈ ಭಾಗದಲ್ಲಿ ಕಟ್ಟಿಕೊಡಲಾಗಿದೆ. ಇದರ ಒಂದು ಅಧ್ಯಾಯದಲ್ಲಿ ದಾಖಲಾದ ಹಾಗೆ ಅವರ ಗುರುಗಳೇ ಪರೀಕ್ಷಾ ಸಂದರ್ಭದಲ್ಲಿ ಹಾಸ್ಟೆಲ್ಲಿಗೆ ಬಂದು ಅವರನ್ನು ಎಬ್ಬಿಸಿ ಓದುವಂತೆ ಪ್ರಚೋದಿಸುತ್ತಿದ್ದರಂತೆ!!! ಅವರು ಕೊಲ್ಲಾಪುರದಲ್ಲಿರಬೇಕಾದರೆ ರಾಜಾರಾಮ ಕಾಲೇಜಿನಲ್ಲಿ ಅವರು ಕನ್ನಡ ವಿಭಾಗವನ್ನು ಉಳಿಸಿಕೊಳ್ಳಲು ದಿಟ್ಟವಾಗಿ ಹೋರಾಟ ಮಾಡಿರುವುದು ಅವರಿಗಿರುವ ಕನ್ನಡ ಪ್ರೇಮವನ್ನು ಎತ್ತಿ ತೋರಿಸುತ್ತದೆ. ಈ ಕೃತಿಯ ಮೂರನೆಯ ಸುದೀರ್ಘ ಭಾಗವು ಎಸ್.ಬಿ.ಶಾಪೇಟಿಯವರು ಕರ್ನಾಟಕ ವಿಶ್ವವಿದ್ಯಾಲಯಗಳಲ್ಲಿ ಆಡಳಿತಗಾರನಾಗಿ ಎದುರಿಸಿದ ಸವಾಲುಗಳು, ಆ ಕಾಲದಲ್ಲಾದ ಹಲವು ಬಗೆಯ ಬಿಕ್ಕಟುಗಳು ಹಾಗೂ ಅವರು ಪರೀಕ್ಷಾ ಕ್ಷೇತ್ರದಲ್ಲಿ ತಂದ ಸುಧಾರಣೆಗಳ ಬಗ್ಗೆ ವಿವರವಾಗಿ ದಾಖಲಿಸುತ್ತದೆ. ಈ ಭಾಗವು ಒಬ್ಬ ಆಡಳಿತಗಾರ ಸ್ವಜನ ಪಕ್ಷಪಾತ ಮಾಡದೆ, ಭ್ರಷ್ಟಾಚಾರ ಮಾಡದೆ ನೇರವಾಗಿ ಮತ್ತು ನೈತಿಕವಾಗಿ ಹೇಗೆ ಆಡಳಿತ ಮಾಡಬೇಕೆಂದು ತೋರಿಸಿಕೊಡುತ್ತದೆ. ಆಡಳಿತಕ್ಕೆ ನೈತಿಕತೆಯ ಮತ್ತು ವಿವೇಕದ ಸರ್ಶ ಇರಬೇಕೆಂಬುದನ್ನು ಒತ್ತಿ ಒತ್ತಿರ ಉದಾಹರಣೆಯಾಗಿ ದೂರದ ನೇಪಾಲದಿಂದ ಬಂದ ಒಬ್ಬ ವಿದ್ಯಾರ್ಥಿ ಮೀರಿ ಮಾನವೀಯತೆಯ ಆಧಾರದ ಮೇಲೆ ವಿದಾರ್ಥಿವೇತನ ನೀಡಿರುವುದನ್ನು ದಾಖಲಿಸುತ್ತಾರೆ. ಇದಕ್ಕೆ ಶಾಪೇಟಿಯವರು ನೀಡುವ ಸಮರ್ಥನೆ ಎಂದರೆ `ಕಾನೂನು ಇರುವುದು ಮನುಷ್ಯರಿಗೆ ಹೊರತು ಕಾನೂನಿಗಾಗಿ ಮನುಷ್ಯರಲ್ಲ’. ಇಂತಹ ನೈತಿಕತೆ, ಪ್ರಾಮಾಣಿಕತೆ ಮತ್ತು ದಿಟ್ಟತನದ ವ್ಯಕ್ತಿತ್ವವನ್ನು ಕಟ್ಟಿಕೊಡುವ ಅನೇಕ ಪ್ರಸಂಗಗಳು ಇಲ್ಲಿ ದಾಖಲಾಗಿವೆ. ಅನೇಕ ಬಾರಿ ಸರ್ಕಾರವನ್ನೇ ಎದುರು ರೂಪಿಸಲಾಗಿದೆ ರೀತಿಯ ಭಿನ್ನಾಭಿಪ್ರಾಯದ ಪತ್ರ ಬರೆದಿರುವುದನ್ನೂ ನಿರೂಪಿಸಲಾಗಿದೆ. ಹಾಗೆಯೇ ಶಿಕ್ಷಣ ಕ್ಷೇತ್ರದ ಭ್ರಷ್ಟಾಚಾರ, ವಿಶ್ವವಿದ್ಯಾಲಯದ ಪ್ರೊಫೆಸರುಗಳ ಸಣ್ಣತನ, ವಿಶ್ವವಿದ್ಯಾಲಯದ ಕ್ಯಾಂಪಸ್ ಒಳಗಿರುವ ಜಾತಿ ರಾಜಕೀಯವನ್ನು ಈ ಭಾಗದಲಲ್‌ಇ ಶಾಪೇಟೆಯವರು ಬಹಳ ವಿಷಾದದಿಂದ ಪ್ರಸ್ತಾಪಿಸುತ್ತಾರೆ. ನಾಲ್ಕನೇ ಭಾಗದಲ್ಲಿ ಇವರ ಹಲವು ಸ್ನೇಹಿತರ ಹಾಗೂ ಕನ್ನಡದ (ಧಾರವಾಡದ) ಮುಖ್ಯ ಕವಿ, ಪತ್ರಕರ್ತರ ಬಗೆಗೆ ಪರಿಚಯಾತ್ಮಕ ನೆಲೆಯ ಬರವಣಿಗೆ ಇದೆ. ಸಹಜವಾಗಿಯೇ ಸ್ವಲ್ಪ ದೇಶಾವರಿ ಎನಿಸುವ ಭಾಗ ಇದು. ಹೆಚ್ಚಿನ ವಿಶೇಷವಿಲ್ಲದ ಟಿಪ್ಪಣಿ ಸ್ವರೂಪದ ಬರವಣಿಗೆಯನ್ನು ಈ ಭಾಗದಲ್ಲಿ ಗಮನಿಸಬಹುದು. ಐದನೇ ಭಾಗದ ಒಂದು ಅಧ್ಯಾಯದಲ್ಲಿ ಕನ್ನಡದ ಪ್ರೊಫೆಸರ್ ಒಬ್ಬರು ಇವರ ಆತ್ಮಕಥನ `ಓದಿ 'ಅದರಲ್ಲೇನಿದೆ' ಎಂದು ಪ್ರಶ್ನಿಸಿದನ್ನು ದಾಖಲಿಸುತ್ತಾ ಆ ಪ್ರೊಫೆಸರದ್ದು ಏಕಪಕ್ಷೀಯ ಓದು ಎಂದು ಸೂಚಿಸುತ್ತಾರೆ. ಅಷ್ಟೇ ಅಲ್ಲ, ಇಂಥಹ ಪಕ್ಷಪಾತಿ ಓದಿಗೆ ತಮ್ಮ ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸುತ್ತಾರೆ. ಇದಕ್ಕೆ ಪೂರಕವೆಂಬಂತೆ ನಾಡಿನ ದೊಡ್ಡ ಲೇಖಕರು, ಕವಿಗಳು, ಎಂದರೆ ಚನ್ನವೀರ ಕಣವಿ, ಗಿರಡ್ಡಿ ಗೋವಿಂದರಾಜ, ಜಿ.ಎಸ್.ಶಿವರುದ್ರಪ್ಪ, ಕಾಳೇಗೌಡ ನಾಗವಾರ ಮೊದಲಾದವರು ತಮ್ಮ ಕೃತಿಯನ್ನು ಹೊಗಳಿ ಬರೆದಿರುವುದನ್ನು ದಾಖಲಿಸಿದ್ದಾರೆ. ಇದೊಂದು ಅನಗತ್ಯವಾದ, ಸ್ವಲ್ಪ ಮುಜುಗರ ಉಂಟುಮಾಡುವ ಪ್ರತಿಕ್ರಿಯೆ ಎನಿಸುತ್ತದೆ. ಈ ಭಾಗದಲ್ಲಿ ಅವರ ನಿವೃತ್ತಿಯ ನಂತರದ ಜೀವನವನ್ನು ಕೂಡಾ ದಾಖಲಿಸಿದ್ದಾರೆ, ಆಧ್ಯಾತ್ಮದತ್ತ ಒಲವನ್ನು ವ್ಯಕ್ತಪಡಿಸಿ ಹಿಮಾಲಯಕ್ಕೆ ಹೋಗಿಬಂದಿದ್ದರ ವಿವರವನ್ನು ಕೂಡಾ ನೀಡಿದ್ದಾರೆ, ಒಟ್ಟಾರೆ ದೃಷ್ಟಿಯಿಂದ ಇವರದ್ದು ಬಹಳ ನೈತಿಕವಾದ ಸರಳವಾದ ಮತ್ತು ತಮ್ಮ ವೃತ್ತಿಗೆ ಯಾವಾಗಲೂ ನ್ಯಾಯ ಒದಗಿಸಿದ ವ್ಯಕ್ತಿತ್ವ ಬಹಳ ಸಾರ್ಥಕವಾದ ಬದುಕಿನ ವಿವರಗಳನ್ನು ಈ ಕೃತಿ ನಿರೂಪಿಸುತ್ತದೆ. ಕೊನೆಯದಾಗಿ, ಇಷ್ಟೆಲ್ಲ ಪ್ರಾಸಂಗಿಕ ವಿವರಗಳಿದ್ದರೂ, ನೈತಿಕ ಬದುಕಿನ ಸ್ಪರ್ಷವಿದ್ದರೂ ಈ ಆತ್ಮಚರಿತ್ರೆಗೆ ಗಂಭೀರ ಸ್ವರೂಪದ ಕೆಲವು ಕೊರತೆಗಳಿವೆ. ಆತ್ಮಕತೆ ಎಂಬ ಪ್ರಕಾರವೇ ಮನುಷ್ಯನ ಅಂತರಂಗದ ಒಳತೋಟಿಯ ನಿವೇದನೆ ಮತ್ತು ವಿಶಾಲಾರ್ಥದಲ್ಲಿ ಒಂದು ಕಾಲಘಟ್ಟದ ಸಾಮಾಜಿಕತೆಯ ಹಿನ್ನಲೆಯಲ್ಲಿ ಬಂದಿರುವಂತದ್ದು. ಈ ಕೃತಿಯಲ್ಲಿ ಈ ಬಗೆಯ ವೈಯಕ್ತಿಕ ಬದುಕಿನ ಭಾವಜಗತ್ತಿನ ವಿವರಗಳು ಹೆಚ್ಚಿಲ್ಲ. ಅವರ ಪತ್ನಿ ಮತ್ತು ಕುಟುಂಬಸ್ಥರ ಕುರಿತಾದ ದಟ್ಟ ವಿವರಗಳು ಕೂಡಾ ಗೈರು ಹಾಜರಾಗಿವೆ. (ನಾಲ್ಕು ಮಕ್ಕಳು ಸುಖೀ ಕುಟುಂಬಸ್ಥರು ಎಂಬ ಮಾತನ್ನು ಹೊರತು ಪಡಿಸಿ). ಹೀಗಾಗಿ ವಿಶಾಲಾರ್ಥದಲ್ಲಿ ಈ ಕೃತಿಗೆ ಸಾಮಾಜಿಕ ಮಹತ್ವ ಕಡಿಮೆ ಆಗಿದೆಯೇನೋ ಎಂಬ ಅನುಮಾನ ನನ್ನದು.

-ಅವಿನಾಶ್ ಟಿ.

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಏಪ್ರಿಲ್ 2018)

Related Books