ಪಾಬ್ಲೊ ನೆರೂಡ ನೆನಪುಗಳು

Author : ಓ. ಎಲ್. ನಾಗಭೂಷಣಸ್ವಾಮಿ

Pages 338

₹ 330.00




Year of Publication: 2018
Published by: ಲಡಾಯಿ ಪ್ರಕಾಶನ
Address: 21, ಪ್ರಸಾದ್ ಹಾಸ್ಟೆಲ್, ಗದಗ- 582101
Phone: 9480286844

Synopsys

’ಜನರ ಕವಿ’ ಪಾಬ್ಲೊ ನೆರೂಡ. ಆತ ಮಾತನಾಡಿದರೆ ಸಾಕು ಅದು ಕಾವ್ಯವಾಗುತ್ತದೆ ಎನ್ನುವವರಿದ್ದಾರೆ. ಚಿಲಿಯ ವಿಶ್ವನದಿ ಎಂದೂ ಹೊಗಳಿಸಿಕೊಂಡವನು ನೆರೂಡ. ಅವನ ಆತ್ಮಕತೆ 1973ರಲ್ಲಿ ಮೆಮಾಯರ್ಸ್ ಹೆಸರಿನಲ್ಲಿ ದಾಖಲಾಯಿತು. ಹಿರಿಯ ವಿಮರ್ಶಕ ಒ.ಎಲ್‌. ನಾಗಭೂಷಣಸ್ವಾಮಿ ಅವರು ಇದನ್ನು ಕನ್ನಡಕ್ಕೆ ತಂದಿದ್ದಾರೆ. 

ಪುಸ್ತಕದ ಕುರಿತು ಪ್ರಾಸ್ತಾವಿಕ ಅಂಶಗಳನ್ನು ದಾಖಲಿಸಿರುವ ಲೇಖಕಿ ಡಾ.ಎಚ್‌.ಎಸ್‌. ಅನುಪಮಾ, ’೨೦೧೬ರಲ್ಲಿ ಕುಟುಂಬ ಸಮೇತ ದಕ್ಷಿಣ ಅಮೆರಿಕಾ ಪ್ರವಾಸ ಹೋಗುವ ಹೊತ್ತಿಗೆ ಓಎಲ್ಲೆನ್ ಅವರ ಕನ್ನಡಾನುವಾದದ ಕರಡು ನನಗೆ ಸಿಕ್ಕಿತು. ಅದನ್ನು ಓದುತ್ತ ದಕ್ಷಿಣ ಅಮೆರಿಕಾ ತಿರುಗಿದ್ದು ಆ ನೆಲ, ಜನ, ಸಮಾಜಗಳು ಪರಿಚಿತ ಎನ್ನುವಂತೆ ಮಾಡಿ ಅವಿಸ್ಮರಣೀಯ ಅನುಭವ ನೀಡಿತು. ಎಂದೇ ಓಎಲ್ಲೆನ್ ಸರ್‌ಗೆ ವೈಯಕ್ತಿಕವಾಗಿ ನಾನು ಋಣಿ’ ಎನ್ನುತ್ತಾರೆ. 

About the Author

ಓ. ಎಲ್. ನಾಗಭೂಷಣಸ್ವಾಮಿ
(22 September 1953)

ಓ ಎಲ್ ನಾಗಭೂಷಣ ಸ್ವಾಮಿ- ಹುಟ್ಟಿದ್ದು22 ಸೆಪ್ಟೆಂಬರ್ 1953,  ಬೆಂಗಳೂರು ಸಮೀಪದ ಹೊಸಕೋಟೆಯಲ್ಲಿ. ಮೈಸೂರು ವಿಶ್ವವಿದ್ಯಾಲಯದಿಂದ ಎಂ.ಎ ಇಂಗ್ಲಿಷ್  (1873) , ಎಂ.ಎ. ಕನ್ನಡ(1975)ಪದವಿ,  ಎಂಡಿಟಿಡಿಬಿ ಕಾಲೇಜು ಮೈಸೂರು, ಸಹ್ಯಾದ್ರಿ ಕಾಲೇಜು, ಶಿವಮೊಗ್ಗ,  ಸರ್ಕಾರಿ ಪ್ರಥಮ ದರ್ಜೆ ಕಾಲೇಜು. ಶಿಕಾರಿಪುರ, ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಆನೇಕಲ್. ಕನ್ನಡ ವಿಶ್ವವಿದ್ಯಾಲಯದಲ್ಲಿ ಭಾಷಾಂತರ ವಿಭಾಗದ ಪ್ರೊಫೆಸರ್ ಮತ್ತು ಮುಖ್ಯಸ್ಥರಾಗಿ ಸೇವೆ (1992-1998).  ಜನವರಿ2005 ರಲ್ಲಿ ಉದ್ಯೋಗದಿಂದ ಸ್ವಯಂ ನಿವೃತ್ತಿ, ಕೇಂದ್ರ ಸಾಹಿತ್ಯ ಅಕಾಡೆಮಿ, ಕನ್ನಡ ವಿಶ್ವವಿದ್ಯಾನಿಲಯ ಕೆ. ಕೆ. ಬಿರ್ಲಾ ಫೌಂಡೇಷನ್, ಜೆ. ಕೃಷ್ಣಮೂರ್ತಿ ಪೌಂಡೇಷನ್ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಹಲವು ಮಹತ್ವದ ...

READ MORE

Reviews

ಕಾವ್ಯಭಾಷೆಯಲ್ಲಿ ನೆರೂಡ ಬದುಕು

ದೇವರಾಗಲು ಒಲ್ಲದ ಕವಿಯ ನೆನಪುಗಳು

ನೆರೂಡನಂತಹ ಸಮೃದ್ಧ ಪಾಬ್ಲೊ ಕವಿಯ ಸಮೃದ್ಧ ಜೀವನ ಕಥಾನಕವನ್ನು ಓದುವುದು ಎಂದರೆ ಅದಿರನ್ನು ಕೈಯಲ್ಲಿ ಹಿಡಿದು ಅದು ನೆನಪುಗಳು ಹೇಗೆ ಅದ್ಭುತವಾದ -ಅನರ್ಘ್ಯವಾದ ಲೋಹವಾಯಿತು ಎಂದು ಊಹಿಸಿಕೊಂಡಂತೆ. ಅವನು ತನ್ನ ಶ್ರೀಮಂತವಾದ ಬದುಕನ್ನು ಯಾವುದೇ ಕಾಲಾನುಕ್ರಮಣಿಕೆಯ ಶಿಸ್ತುಬದ್ಧ ಮಾರ್ಗವನ್ನು ಅನುಸರಿಸದೆ ತನ್ನ ಮನಸ್ಸು ಹರಿದ ಕಡೆ ಚಲಿಸುತ್ತ ನಡೆದು ನಿರೂಪಿಸುವುದನ್ನು ನೋಡಿದರೆ ಅವನ ಕಾವ್ಯದೆ ಅಡೆತಡೆಗಳಿಲ್ಲದ ಸ್ವಚ್ಛಂದತೆಯೇ ನೆನಪಾಗುತ್ತದೆ. ಯಾವ ವರ್ಗೀಕರಣಗಳ ಇಕ್ಕಟ್ಟಿಗೆ ಬೀಳದೆ, ಅದರಾಚೆ ಸುಮ್ಮನಿರುವ ಬದುಕಿನ ನಿರುಮ್ಮಳ ಭಾವವನ್ನು ನಗ್ನವಾಗಿ ಅನುಭವಿಸಬೇಕು ಎನ್ನುವ ತೀವ್ರ ಹಂಬಲದ ನೆರೂಡನ ಬದುಕು ಆರಂಭದಿಂದಲೂ ಬಹಳ ಆಸಕ್ತಿದಾಯಕವಾಗಿದೆ. ಚಿಲಿಯ ದಟ್ಟ ಕಾಡುಕಣಿವೆ, ನದಿ ಬಯಲುಗಳಲ್ಲಿ ಅಲೆಯುತ್ತ ಬೆಳೆದ ಅವನಿಗೆ ಚಿಕ್ಕಂದಿನಲ್ಲೇ ಮನುಷ್ಯ ಮಾತ್ರವಲ್ಲ, ನಿಸರ್ಗದ ನಿಗೂಢ ಶಕ್ತಿಗಳನ್ನೂ ಒಳಗೊಳ್ಳುವಂತೆ ಕವಿತೆ ಬರೆಯಬೇಕು ಎಂಬ ಹಂಬಲ ಉಂಟಾಗುತ್ತದೆ. ಅದು ಕ್ರಮೇಣ ಅವನೇ ಹೇಳುವಂತೆ ‘ಸ್ವಂತಕ್ಕೆ ನಿಕಟವಾಗಿರುವುದು ಮತ್ತು ಹಾಗೆಯೇ ಒಟ್ಟು ಮನುಷ್ಯಕುಲಕ್ಕೆ ನಿಕಟವಾಗಿರುವಂತೆ ಬರೆಯುವುದು' ಎಂಬ ರೂಪವನ್ನು ಪಡೆಯಿತು ಎಂಬುದರ ಉಜ್ವಲ ಉದಾಹರಣೆಯಂತೆ ನಾವು ಅವನ ಆತ್ಮಕತೆಯನ್ನು ಓದಬಹುದು.

ಪ್ರಕೃತಿಯ ಅಗಾಧತೆಯನ್ನು ಹೀರಿಕೊಂಡು ಬೆಳೆಯುತ್ತ ಮುಂದೆ ನೆರೂಡ ಹಲವು ದೇಶಗಳ ಪ್ರವಾಸ, ಅಲ್ಲಿನ ಜನರ ಬದುಕು ಬವಣೆ, ಜೀವನ ವೈವಿಧ್ಯ, - ಆಧ್ಯಾತ್ಮ, ರಾಜಕೀಯದ ಕರಾಳ ಪರಿಣಾಮಗಳನ್ನು ಅರಿಯುತ್ತ, ಬಹಳ ಉತ್ಕಟವಾಗಿ ಹಲವು ಹೆಣ್ಣುಗಳ ಜೊತೆಗಿನ ಪ್ರೇಮ-ಕಾಮಗಳ ಬದುಕನ್ನು ಅನುಭವಿಸುತ್ತ ತನ್ನ ಸಂವೇದನೆಯನ್ನು ಹೇಗೆ ರೂಪಿಸಿಕೊಂಡ ಎಂಬ ವಿವರಗಳನ್ನು ಆತ್ಮ ಕಥಾನಕದಲ್ಲಿ ಕಾಣಬಹುದು. ಮುಖ್ಯವಾಗಿ ಅವನು ಚಿಲಿಯ ರಾಯಭಾರಿಯಾಗಿ-ಪ್ರಭಾವಶಾಲಿ ಕವಿಯಾಗಿ ರಂಗೂನ್, ಕೊಲಂಬೋ, ಜಾವಾ, ಸಿಂಗಪೂರ್, ಚೈನಾ, ಕ್ಯೂಬಾ, ರಷ್ಯಾ, ಅಮೆರಿಕಾ ಹೀಗೆ ಹಲವು ದೇಶಗಳನ್ನು ಸುತ್ತುತ್ತ ಅಲ್ಲಿನ ಪ್ರಮುಖ ರಾಜಕೀಯ ನಾಯಕರು, ಪ್ರಭಾವಶಾಲಿ ಬರಹಗಾರರನ್ನು ಭೇಟಿಯಾದ ಬಗೆಗಿನ ವಿವರಗಳೂ ಇಲ್ಲಿವೆ. ರಾಯಭಾರಿಯಂತಹ ರಾಜಕೀಯವಾಗಿ ಬಹು ಸೂಕ್ಷ್ಮವಾದ, ಸಾಮಾಜಿಕವಾಗಿ ಅತಿ ಗಣ್ಯಹುದ್ದೆಯನ್ನು ನಿಭಾಯಿಸುತ್ತಲೇ ನೆರೂಡ ವ್ಯವಸ್ಥೆಯ ಬರ್ಬರತೆಯನ್ನು, ರಾಜಕೀಯ-ಆಧ್ಯಾತ್ಮಿಕ ಸಿದ್ಧಾಂತಗಳ ನಿಷ್ಟಯೋಜಕತೆಯನ್ನು, ಜೀವನದ ಸಮೃದ್ಧತೆ ಸರಳತೆಗಳನ್ನು ಎವೆತಪ್ಪದೆ ಗಮನಿಸುವುದನ್ನು ನೋಡಿದಾಗ ಅವನ ಕಾವ್ಯ ಯಾಕೆ ಪ್ರಪಂಚದಾತ್ಯಂತ ಎಲ್ಲ ವರ್ಗ-ವಯೋಮಾನದ ಜನರ ಅಂತರಂಗದ ಒಳಗೆ ಇಳಿಯಿತು ಎಂಬುದಕ್ಕೆ ಕಾರಣಗಳು ದೊರೆಯುತ್ತವೆ.

ಪ್ರಪಂಚದಾತ್ಯಂತ ಜನಪ್ರಿಯವಾಗಿರುವ ನೆರೂಡನ ಕಾವ್ಯದ ಕಾರಣದಿಂದ ಅವನ ಕಮ್ಯುನಿಸ್ಟ್ ಚಿಂತನೆ, ತನ್ನ ಕಾಲದ ರಾಜಕೀಯ ನಿಲುವುಗಳ ವಿರೋಧ ಇತ್ಯಾದಿ ವಿವರಗಳು ಕನ್ನಡಿಗರಿಗೂ ಬಹುಪಾಲು ಚಿರಪರಿಚಿತವೇ ಆಗಿರುವುದರಿಂದ ಅವನ್ನು ಮತ್ತೆ ಇಲ್ಲಿ ಚರ್ಚಿಸುವ ಅಗತ್ಯವಿಲ್ಲ. ಅದನ್ನು ಹೊರತುಪಡಿಸಿ, ನೆರೂಡ ಭಾರತವನ್ನು ಒಳಗೊಂಡಂತೆ ಪೂರ್ವದೇಶಗಳ ರಾಜಕೀಯ ಸಾಮಾಜಿಕ ಆಧ್ಯಾತ್ಮಿಕ ಸ್ಥಿತಿಗಳ ಕುರಿತು ಮಾಡುವ ಟಿಪ್ಪಣಿಗಳ ಕಾರಣದಿಂದ ಕನ್ನಡದಲ್ಲಿ ದೊರಕುವ ಆತ್ಮಕಥಾನಕ ಅವನ ಕುರಿತ ನಮ್ಮ ಅರಿವನ್ನು ವಿಸ್ತರಿಸುವಂತಿದೆ. ಪೂರ್ವದೇಶಗಳ ಬದುಕು, ಅಲ್ಲಿನ ತತ್ವಶಾಸ್ತ್ರ ಇವೆಲ್ಲವುಗಳು ಪಶ್ಚಿಮ ಬದುಕಿನ ಕಳವಳ, ನ್ಯೂರಾಸಿಸ್, ಗೊಂದಲ, ಸಮಯ ಸಾಧಕಗುಣಗಳ ಉಪಉತ್ಪನ್ನಗಳು ಎಂಬಂತೆ ನೋಡುವ ಅವನಿಗೆ ಪಶ್ಚಿಮ ನಾಗರಿಕತೆಯ ಕಟುಟೀಕಾಕಾರರಾಗಿದ್ದ ಗಾಂಧಿ ಕೇವಲ ಪಕ್ಕಾ ವ್ಯವಹಾರಸ್ಥನಂತೆ ಕಾಣುವುದು ಕಿಟಕಿಯಲ್ಲಿ ಇಣುಕಿ ನೋಡುತ ಸಂಸ್ಕ ತಿಗಳ ಮೌಲ್ಯ ಮಾಪನ ಮಾಡುವ ಪ್ರವಾಸಿಯೊಬ್ಬನ ಬೀಸು ಗ್ರಹಿಕೆಯಂತೆ ಕಾಣುತ್ತದೆ. ಅದಿರಲಿ, ಆಧ್ಯಾತ್ಮ ಮತ್ತು ಆಫೀಮುಗಳ ಅಮಲಲ್ಲಿ ಮುಳುಗಿರುವ ಭಾರತೀಯ ಸಮಾಜದ ಕುರಿತ ನೆರೂಡಾನೆ ಟಿಪ್ಪಣಿಗಳು ಬಹಳ ಮಹತ್ವದ್ದಾಗಿವೆ. ಹಾಗೆ ನೋಡಿದರೆ ಪೂರ್ವದೇಶಗಳ ಕಡೆಗೆ ನೆರೂಡ ಬಂದಿದ್ದು ಭಾರತದಂತಹ ಪ್ರಾಚೀನ ಚೈತನ್ಯದೊಡನೆ ಇರಬೇಕು ಇಲ್ಲಿನ ಕರುಣಾಜನಕವಾದ ದೊಡ್ಡ ಸಂಸಾರದ ಭಾಗವಾಗಿ ಇರಬೇಕು ಎಂಬ ದೊಡ್ಡ ಆಶಯದಿಂದ.ಆದರೆ ಇಲ್ಲಿ ಬಂದಾಗ ಜೀವಂತ ಬುದ್ದನ ಹಾಗೆ ನಟಿಸುತ ದಿನಕ್ಕೊಂದು ಕಿತ್ತಳೆ ತಿಂದು ಆರೋಗ್ಯವನ್ನು ವೃದ್ಧಿಸಿಕೊಳ್ಳುವ ಬಗೆಯಲ್ಲಿ ದಿನಕ್ಕೊಂದು ಹೆಣ್ಣಿನ ಸಂಗ-ಮದುವೆಗೆ ಅಣಿಯಾಗುವ ಬುದ್ಧನ ಅನುಯಾಯಿಯೊಬ್ಬನನ್ನು ಕಂಡು ಅಸಹ್ಯಪಡುತ್ತಾನೆ. ವ್ಯಾಪಾರದ ಅಂಗಡಿಗಳಂತಿರುವ ಪವಿತ್ರ ಕ್ಷೇತ್ರಗಳು, ಸದಾ ಅಫೀಮಿನ ಅಮಲಿನಲ್ಲಿರುವ ಕೂಲಿಕಾರ್ಮಿಕವರ್ಗಗಳನ್ನು ಕಂಡು ಜನ ಆಧ್ಯಾತ್ಮಿಕತೆಯನ್ನೋ, ಆಫೀಮನ್ನೋ ಆಶ್ರಯಿಸುವುದು ಅವುಗಳಿಂದ ಸ್ವರ್ಗದಂತಹ ಅನುಭೂತಿ ದೊರಕುತ್ತದೆ ಎಂಬ ಕಾರಣದಿಂದಲ್ಲ. ಬದಲಾಗಿ ಅವು ಸಾಮಾಜಿಕ ಬದುಕಿನ ಅಸಮಾನತೆ ಶೋಷಣೆಗಳಿಂದ ಹೊರಬರುವ ತಾತ್ಕಾಲಿಕ ಕವಾಟಗಳನ್ನು ತೆರೆಯುತ್ತವೆ ಎಂಬ ಕಾರಣದಿಂದ ಎಂದು ಹೇಳುವುದು ಗಮನಾರ್ಹ ಸಂಗತಿಯಾಗಿದೆ.

ಜಾಣ ನಾಟಕಕಾರನಂತೆ ಕಾಣುವ ನೆಹರೂ ಹಾಗೂ ಮಾವೋ ಕುರಿತ ಟಿಪ್ಪಣಿಗಳೂ ದೀರ್ಘ ಚರ್ಚೆಗೆ ಅರ್ಹವಾಗಿವೆ. ನೆರೂಡ ಚೈನಾದಲ್ಲಿ ಮಾವೋತ್ಸೆ ತುಂಗನನ್ನು ಭೇಟಿಯಾಗಿ ಮಾವೋಗೆ ಒಬ್ಬ ಮಹಾಕಾವ್ಯದ ನಾಯಕನಿಗೆ ದೊರಕುವ ಪ್ರಭಾವಳಿ ಸಿಕ್ಕಿರುವುದನ್ನು ನೋಡಿ ಚಕಿತನಾಗುತ್ತಾನೆ. ಅಲ್ಲಿನ ಜನ ಮಾವೋನನ್ನು ಕುರುಡಾಗಿ ಕೆಮ್ಮು ಕಫಗಳಿಂದ ಶುರುವಾಗಿ ಅಂತಾರಾಷ್ಟ್ರೀಯ ರಾಜಕೀಯ ಸಮಸ್ಯೆಗಳಿಗೆಲ್ಲವಕ್ಕೂ ಮಾವೋವಾದವೇ ಮದ್ದು ಎಂಬ ಅನುಕರಣಶೀಲ ಭ್ರಮೆಯಲ್ಲಿ ಸಿಲುಕಿರುವುದನ್ನು ಕಾಣಿಸುತ್ತಾನೆ. ಮನುಷ್ಯನೊಬ್ಬ ಪುರಾಣಪುರುಷನಾಗುವ - ಸಮಾಜದ ಕ್ರಾಂತಿಕಾರಿ ಪ್ರಜ್ಞೆಯನ್ನು ಒಬ್ಬ ವ್ಯಕ್ತಿಯ ಆಳ್ವಿಕೆಗೆ ಪೂರ್ಣವಾಗಿ ಅಡಿಯಾಳಾಗಿಸುವ ದುರಂತವನ್ನು ಕಂಡು ಮರುಗುತ್ತಾನೆ.

ತೀವ್ರ ಕಮ್ಯುನಿಸ್ಟ್ ಸಿದ್ದಾಂತಿಯಾದ ನೆರೂಡ ಹಲವು ದೇಶಗಳ ರಾಯಭಾರಿಯಾಗಲು ನಡೆಸಿದ ವಶೀಲಿಬಾಜಿ, ಖಾಸಗಿ ಆಸ್ತಿಯನ್ನು ವಿರೋಧಿಸುವ ಚಿಂತಕನಾಗಿ ತನ್ನ ಮನೆಯಲ್ಲಿ ಅಪಾರವಾಗಿ ಸಂಗ್ರಹಿಸಿಕೊಂಡಿದ್ದ, ಕಪ್ಪೆ ಚಿಪ್ಪುಗಳು, ಬೊಂಬೆಗಳು, ಪ್ರಪಂಚದ ಅತ್ಯುತ್ತಮ ಪುಸ್ತಕಗಳು; ಬರ್ಮಾದ ಮುಗ್ಗ ಹೆಂಗಸು, ಕೊಲಂಬೋದ ದಲಿತ ಹೆಣ್ಣೂಬ್ಬಳನ್ನು ಒಳಗೊಂಡಂತೆ ಹಲವರ ಹೆಣ್ಣುಗಳ ಜೊತೆಗಿನ ಒಡನಾಟಗಳ ಕಾರಣದಿಂದ ಅವನು ಬದುಕಿರುವಾಗಲೇ ತೀಕವಾದ ವಿಮರ್ಶೆ ವಿವಾದಗಳಿಗೆ ಗುರಿಯಾಗಿದ್ದ. ಅದೇನೇ ಇದ್ದರೂ ಕವಿಯೊಬ್ಬ ಪಟ್ಟ ದೇವರಲ್ಲ. ಯಾವ ದೇವರ ಅವತಾರವೂ ಅಲ್ಲ ಎಂಬ ತನ್ನ ಬಲವಾದ ನಂಬಿಕೆಗೆ ಅನುಗುಣವಾಗಿ ತಾನು ಅನುಭವಿಸಿದ್ದನ್ನು ಸಂವೇದಿಸಿದ್ದನ್ನು ಬಹಳ ಮುಕ್ತವಾಗಿ- ಅಷ್ಟೇ ತೀವ್ರವಾಗಿ ನಿರೂಪಿಸುವ ಕಾರಣದಿಂದ ನೆರೂಡನ ಆತ್ಮಕಥಾನಕ ಆಪ್ತವಾಗುತ್ತದೆ.

ತೇಜಸ್ವಿನಿ ನಿರಂಜನ, ನಿಸಾರ್ ಅಹಮದ್, ಲಂಕೇಶ್, ನಟರಾಜ್ ಹುಳಿಯಾರ್, ದಲಿತ ಬಂಡಾಯದ ಹಲವು ಲೇಖಕರು, ನಯನಾ ಕಾಶ್ಯಪ್, ಜ.ನಾ. ತೇಜಶ್ರೀ ಮೊದಲಾದವರು ನೆರೂಡನ ಬದುಕು ಹಾಗೂ ಕಾವ್ಯದ ಅನುವಾದ, ಸೈದ್ಧಾಂತಿಕತೆ, ಜೀವಪರತೆಗಳನ್ನು ಚರ್ಚಿಸುತ್ತ ಬರೆಯುತ್ತ ಬಂದ ಕಾರಣದಿಂದ ಕನ್ನಡದಲ್ಲಿ ನೆರೂಡ ಸಂವೇದನೆಯೊಂದು ಅಂತರ್ಜಲದ ಬುಗ್ಗೆಗಳಂತೆ ಅಲ್ಲಲ್ಲಿ ಏಳುತ್ತಲೇ ಇದೆ. ಓಎಲ್‌ನಾಗಭೂಷಣ ಸ್ವಾಮಿಯವರು ತಮ್ಮ ಅನುವಾದದ ಮೂಲಕ ಇಂಥ ಅಂತರ್ಜಲದ ಹರಿವಿಗೆ ಇನ್ನಷ್ಟು ವೇಗವನ್ನು ತುಂಬಿದ್ದಾರೆ. ನಮ್ಮನ್ನು, ನಮ್ಮ ಭಾವಗಳನ್ನು ಆವಾಹಿಸಿಕೊಳ್ಳುವ ಶಕ್ತಿ ನೆರೂಡನೆ ಕಾವ್ಯಕ್ಕೆ ಮಾತ್ರವಲ್ಲ ಅವನ ಗದ್ಯಕ್ಕೂ ಇದೆ. ಇಂಥ ಆವಾಹನೆಯ ಗುಣವನನ್ನು ಅದರ ಎಲ್ಲ ತೀವ್ರತೆಯೊಂದಿಗೆ ಓಎಲ್ಲೆನ್ ತಂದಿದ್ದಾರೆ. ಅನುವಾದವೆಂದರೆ ಕೇವಲ ಪದಬದಲಿನ ಕೆಲಸವಲ್ಲ. ಅದೊಂದು ಸಹ ಸೃಜನತೆ ಎಂಬುದನ್ನು ತಿಳಿಸಿದ ಓಎಲ್ಲೆನ್ ಅವರಿಗೆ ಕನ್ನಡದ ಓದುಗರ ಪರವಾಗಿ ಕೃತಜ್ಞತೆಗಳು.

- ಡಾ.ಎಸ್.  ಸಿರಾಜ್ ಅಹಮದ್

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಏಪ್ರಿಲ್ 2018)

 

Related Books