ಸೂಲಾಡಿ ಬಂದೋ ತಿರುತಿರುಗೀ

Author : ಕೆ. ಸುಮಿತ್ರಾ ಬಾಯಿ

Pages 344

₹ 280.00
Year of Publication: 2018
Published by: ಅಭಿರುಚಿ ಪ್ರಕಾಶನ
Address: ನಂ. 386, 14ನೇ ಮುಖ್ಯರಸ್ತೆ, 3ನೇ ಅಡ್ಡರಸ್ತೆ, ಸರಸ್ವತಿಪುರ, ಮೈಸೂರು-9

Synopsys

`ಸೂಲಾಡಿ ಬಂದೋ ತಿರುತಿರುಗೀ- ಬಾಳ ಕಥನ' ಸುಮಿತ್ರಾಬಾಯಿ ಅವರ ಜೀವನ ಸಂಗತಿಗಳನ್ನು ಒಳಗೊಂಡಿದ್ದು ಆಪ್ತತೆಯಿಂದ ಓದಿಸಿಕೊಂಡು ಹೋಗುತ್ತವೆ.

ಈವರೆಗೂ ಎಲ್ಲಿಯೂ ಅಷ್ಟಾಗಿ ಪ್ರಸ್ತಾಪವಾಗದ ಕನ್ನಡ ಲೇಖಕ ದೇವನೂರ ಮಹಾದೇವ ಅವರ ವಿಶೇಷ, ವಿಸ್ಮಯ ಎನಿಸುವಂತಹ ಕಥನಗಳು ಕೃತಿಯಲ್ಲಿವೆ.

ದಲಿತ ಹೆಣ್ಣು ಮಗಳಾಗಿ ಹುಟ್ಟಿ ನಡೆದು ಬಂದ ದಾರಿ, ಪ್ರಾಂಶುಪಾಲರಾಗಿ ಎದುರಿಸಿದ ಸವಾಲುಗಳನ್ನು ಲೇಖಕಿ ಸುಮಿತ್ರಾ ಬಾಯಿ ತೆರೆದಿಟ್ಟಿದ್ದಾರೆ.

About the Author

ಕೆ. ಸುಮಿತ್ರಾ ಬಾಯಿ

ಲೇಖಕಿ ಕೆ. ಸುಮಿತ್ರಾ ಬಾಯಿ ಅವರು ಮಂಡ್ಯ ಬಳಿಯ ಲೋಕ ಪಾವನಿ ನದಿ ದಂಡೆಯ ಕುಗ್ರಾಮ ತಾಳಶಾಸನದಲ್ಲಿ ಜನಿಸಿದರು. ಕಾದಂಬರಿಕಾರ ದೇವನೂರು ಮಹಾದೇವ ಅವರ ಪತ್ನಿ. ಇಬ್ಬರು ಮಕ್ಕಳಿದ್ದಾರೆ. ತಮ್ಮ ಜೀವನದ ಕಥನವನ್ನು ‘ಸೊಲಾಡಿ ಬಂದೋ ತಿರುತಿರುಗೀ’ ಕೃತಿಯಲ್ಲಿ ದಾಖಲಿಸಿದ್ದಾರೆ. ...

READ MORE

Reviews

ಕೆಲ ದೃಷ್ಟಿದೋಷಗಳ ಒಂದು ಅದ್ಭುತ ನೆನಪಿನ ಚಿತ್ರ

ಮೈಸೂರು ವಿಶ್ವವಿದ್ಯಾನಿಲಯದಲ್ಲಿ ಸಮಾಜ ಶಾಸ್ತ್ರ ಪ್ರಾಧ್ಯಾಪಕಿಯಾಗಿ, ನಂತರ ತಮ್ಮ ಸೇವಾವಧಿಯ ಅಂತ್ಯದಲ್ಲಿ ಯುವರಾಜಾ ಕಾಲೇಜಿನ ಪ್ರಾಂಶುಪಾಲರಾಗಿ ನಿವೃತ್ತರಾದ ಸುಮಿತ್ರಾಬಾಯಿ ಅವರ ಬಾಳ ಕಥನ ಇದು.

ಖ್ಯಾತ ಲೇಖಕ ದೇವನೂರ ಮಹಾದೇವ ಅವರ ಪತ್ನಿ-ಸುಮಿತ್ರಾ ಬಾಯಿ. ಹೀಗಾಗಿ, ಬಾಳ ಕಥನದಲ್ಲಿ ಮಹಾದೇವರ 'ಕಥನ'ವೂ ಒಳಗೊಂಡಿದೆ. ಈ ಪುಸ್ತಕವನ್ನು ಓದಿ ಮುಗಿಸಿದಾಗ ಇದನ್ನು ಮುಖ್ಯವಾಗಿ ಮೂರು ಭಾಗಗಳನ್ನಾಗಿ ವಿಂಗಡಿಸಬಹುದೆನ್ನಿಸಿತು. ಸುಮಿತ್ರಾಬಾಯಿಯವರ ಬೆರಗುಗೊಳಿಸುವ ನೆನಪಿನ ಚಿತ್ರಗಳ ಸರಮಾಲೆಯಂತಿರುವ ಅವರ ಬಾಲ್ಯ ಮತ್ತು ಸ್ನಾತಕೋತ್ತರ ಶಿಕ್ಷಣ ಪಡೆದು ಉಪನ್ಯಾಸಕಿಯಾಗುವ ತನಕದ ಬದುಕು ಮೊದಲ ಭಾಗವಾದರೆ, ದೇವನೂರ ಮಹಾದೇವ ಅವರೊಡನೆಯ ದಾಂಪತ್ಯದ ಸ್ವಾರಸ್ಯಕರ ವಿವರಗಳನ್ನು ಎರಡನೇ ಭಾಗ. ಮೂರನೇ ಭಾಗ ಅವರ ಮೊಮ್ಮೊಕ್ಕಳೊಡನೆಯ ವಿಶ್ರಾಂತ ಜೀವನದ-ಅವರ ವಿಶಿಷ್ಟ ಆಸಕ್ತಿ ಮತ್ತು ಕುತೂಹಲಗಳನ್ನು ಹೇಳುವ-ಹಲವು ಬಿಡಿ ಚಿತ್ರಗಳು,

ಮಂಡ್ಯ ಬಳಿಯ ಲೋಕ ಪಾವನಿ ನದಿ ದಂಡೆಯ ಒಂದು ಕುಗ್ರಾಮವಾದ ತಾಳಶಾಸನದ ಒಂದು ದಲಿತ ಕುಟುಂಬದ ಮಗಳಾಗಿ ಹುಟ್ಟಿದ ಸುಮಿತ್ರಾ ಅವರು ಅಷ್ಟಾಗಿ ಜಾತಿ ಪದ್ಧತಿಯ ಸೋಂಕಿಲ್ಲದೆ ಬೆಳೆದ ಅದೃಷ್ಟವಂತೆ. ಇದಕ್ಕೆ ಒಂದು ಕಾರಣ, ಇವರ ತಂದೆ ಮತ್ತು ತಾಯಿಯ ವಂಶಗಳೆರಡೂ ಒಂದೆರಡು ತಲೆಮಾರುಗಳ ಹಿಂದಿನಿಂದಲೂ ಉನ್ನತ ಶಿಕ್ಷಣ ಪಡೆದು, ಸರ್ಕಾರಿ ಅಧಿಕಾರಿಗಳು, ವೈದ್ಯರು ಇತ್ಯಾದಿಯಾಗಿ ಸಮಾಜದಲ್ಲಿ ಪ್ರಭಾವಿ ವ್ಯಕ್ತಿಗಳಾಗಿದ್ದು ಇವರ ಕುಟುಂಬದಲ್ಲಿ ಆತ್ಮವಿಶ್ವಾಸವನ್ನು ನೆಲೆಗೊಳಿಸಿದ್ದುದು. ಹಾಗಾಗಿ, ಇವರ ಕುಟುಂಬದ ಸದಸ್ಯರು ಸಮಾಜದ ಇತರ ಸಮುದಾಯಗಳೊಂದಿಗೆ ಬದುಕಿನ ಎಲ್ಲ ಕ್ಷೇತ್ರಗಳಲ್ಲೂ ಸರಿಸಾಟಿಯಾಗಿ ನಿಂತು ಬೆಳೆದು ಬಾಳಿದ್ದು ಸಹಜವೇ ಆಗಿದೆ. ಇವರ ಕುಟುಂಬದ ಕಥೆಯನ್ನು ಕೇಳಿದರೆ ನಮ್ಮಂಥವರಲ್ಲಿ ದಲಿತ ಸಮುದಾಯದ ಬಗ್ಗೆ ಇರುವ ಒಂದು ಸಾರಾಸಗಟಾದ ಮರುಕದ ಚಿತ್ರ ಬದಲಾಗುವಂತಿದೆ. ಇದಕ್ಕೆ ತಕ್ಕನಾಗಿ ಸುಮಿತ್ರಾ ಅವರು ತಮ್ಮ ಕುಟುಂಬದ ಒಂದು ಟಿಸಿಲನ್ನು ನಂಜನಗೂಡು ಕಡೆಯ ನೇರಳೆ ಗ್ರಾಮದ ಮೇಲ್ಜಾತಿ ಹೆಣ್ಣುಮಗಳ ಸಂಬಂಧದೊಂದಿಗೆ ಗುರುತಿಸಿದರೆ, ಇನ್ನೊಂದು ಟಿಸಿಲನ್ನು ಶ್ರವಣಬೆಳಗೊಳದ ಕಡೆಯ ಜೈನ ಮುನಿಯೊಬ್ಬರ ಸಂಬಂಧದೊಂದಿಗೆ ಗುರುತಿಸುತ್ತಾರೆ. ಲೇಖಕಿಯ ಈ ವಂಶಾವಳಿಗಳ ಸಂಶೋಧನೆ ಬೆರಗುಗೊಳಿಸುವ ವಿವರಗಳಿಂದ ಕೂಡಿದ್ದು ಅವರ ಸಮಾಜಶಾಸ್ತ್ರದ ಅಧ್ಯಯನ ಕೃತಿಗೆ ಒಪ್ಪುವಂಥದೇ ಆಗಿದೆ. ಇದೇ ಪ್ರತಿಭೆ ಮತ್ತು ಕುತೂಹಲ ಇವರು ಮಹಾದೇವ ಅವರ ವಂಶಾವಳಿ ಮತ್ತು ಅವರೊಂದಿಗೆ ದಾಂಪತ್ಯ ಆರಂಭಿಸುವ ಮೈಸೂರಿನ ಅಶೋಕಪುರಂನ ಐತಿಹಾಸಿಕ ಮತ್ತು ಸಾಮಾಜಿಕ ಹಿನ್ನೆಲೆಗಳನ್ನು ಶೋಧಿಸುವಲ್ಲಿಯೂ ಎದ್ದು ಕಾಣುತ್ತದೆ. ಇವರ ಈ ವಂಶಾವಳಿ ಅಧ್ಯಯನವನ್ನು ನೋಡಿದಾಗ ಎಲ್ಲ ಕುಟುಂಬಗಳ ವಂಶಾವಳಿಗಳನ್ನೂ ಹೀಗೆ ಅಧ್ಯಯನಕ್ಕೆ ಒಳಪಡಿಸಿದರೆ ಜಾತಿ ಶುದ್ಧಿ ಎಂಬುದು ಎಷ್ಟು ಹುಸಿ ಎಂಬುದು ಸಾಬೀತಾಗಿ ನಮ್ಮ ಜಾತಿ ಪದ್ಧತಿಯ ನಿಜ "ಬಂಡವಾಳ' ಬಯಲಾದೀತೇನೋ! ಅದೇನೇ ಇರಲಿ, ಸುಮಿತ್ರಾಬಾಯಿಯವರು ತಮ್ಮ ಕುಟುಂಬದ ಬಾಳು ಬದುಕಿನೊಂದಿಗೆ ಅದರ ಸದಸ್ಯರು ಮತ್ತು ಬಂಧುಬಾಂಧವರ ಸೂಕ್ಷ್ಮ ಸ್ವಭಾವಗಳ ಹಾಗೂ ಈ ತಮ್ಮ ಹಳ್ಳಿಯ ಹಬ್ಬ ಹರಿದಿನಗಳ ಆಚರಣೆಗಳ ಮತ್ತು ತಮ್ಮ ಶಾಲಾದಿನಗಳ ಹಲವು ಕುತೂಹಲಕರ ಘಟನಾವಳಿಗಳ ವಿವರಗಳನ್ನು ಹೇಗೆ ಚಿತ್ರಿಸುತ್ತಾರೆಂದರೆ ಅವರ ಅದ್ಭುತ ನೆನಪಿನ ಶಕ್ತಿ ಮಾತ್ರವಲ್ಲದೆ, ಅವರ ಸುಂದರ ನಿರೂಪಣಾ ಶೈಲಿಗೂ ನಾವು ಒಂದು ದೊಡ್ಡ ಸಲಾಂ ಹೇಳಲೇಬೇಕಾಗುತ್ತದೆ.

ತಮ್ಮ ತಾಯಿಯೂ ಸೇರಿದಂತೆ ಜಾತಿ ಬಾಂಧವರ ವಿರೋಧವನ್ನು ಹಿಮ್ಮೆಟ್ಟಿಸಿ ಮೈಸೂರಿನಲ್ಲಿ ಸಮಾಜಶಾಸದಲ್ಲಿ ಸ್ನಾತಕೋತರ ಪದವಿ ಪಡೆದು ಅಧ್ಯಾಪಕಿಯ ನಂತರ ಮದುವೆಯಾದ ಕೆಲವೇ ತಿಂಗಳುಗಳಲ್ಲಿ ಗಂಡನನ್ನು ಕಳೆದುಕೊಳ್ಳುವ ದುರಂತಕ್ಕೀಡಾಗುವ ಸುಮಿತ್ರಾ ಅವರ ಬದುಕಿಗೆ ಎರಡನೆಯ ಗಂಡನಾಗಿ ಮತ್ತು ಉಜ್ವಲಾ ಎಂಬ ಅವರ ಮೊದಲ ಮಗಳಿಗೆ ತಂದೆಯಾಗಿ ಪ್ರವೇಶಿಸುವವರು ನಮ್ಮ ದೇವನೂರ ಮಹಾದೇವ, ನಂತರ, ಇಡೀ ಪುಸ್ತಕ ವರ್ಣಮಯ ವಿವರ ಮತ್ತು ವಿವರಣೆಗಳೊಂದಿಗೆ 'ಮಹಾದೇವ ವಿಜಯ'ವಾಗಿ ವಿಜೃಂಭಿಸುತ್ತದೆ ಎಂದರೆ ತಪ್ಪಾಗಲಾರದು. (ಮಹಾದೇವ ಅವರ ಬದುಕು-ಬರಹ'ಗಳನ್ನು ಆಧರಿಸಿ ಈ ಹಿಂದೆ ಸಿ. ಬಸವಲಿಂಗಯ್ಯನವರು ರಚಿಸಿ ನಿರ್ದೇಶಿಸಿದ್ದ ನಾಟಕವನ್ನು ನಾನು ‘ದೇವನೂರ ಮಹಾತ್ಮೆ' ಎಂದು ವರ್ಣಿಸಿದೆ ಎಂಬುದನ್ನು ಇಲ್ಲಿ ನೆನಪಿಸಿಕೊಳ್ಳಬಹುದು!) ತಾವೇ 'ಕರಿಯ', 'ಕರಿ ನಾಗರ' 'ಏಣಿ' ಎಂದೆಲ್ಲ ಸಂದರ್ಭಕ್ಕೆ ತಕ್ಕಂತೆ ಮುದ್ದುಗರೆಯುವ ತಮ್ಮ ಗಂಡನ ಅಡ್ಡಾದಿಡ್ಡಿ ಉಡುಪು, ನಿದ್ದೆಗೇಡಿತನ, ಸೋಮಾರಿತನ ಮತ್ತು ಇವುಗಳಿಂದ ಸಂಭವಿಸುವ ಹಲವಾರು ಎಡವಟ್ಟುಗಳೊಂದಿಗೆ ಅವರು ಒಬ್ಬ ವ್ಯಕ್ತಿಯಾಗಿ ಮತ್ತು ಲೇಖಕರಾಗಿ ಹೊಂದಿರುವರೆಂದು ಹೇಳಲಾಗುವ ವಿಶಿಷ್ಟ ಶಕ್ತಿ-ಪ್ರತಿಭೆಗಳು ಲೇಖಕಿಯಿಂದ ಈ ಭಾಗದಲ್ಲಿ ಸಾಕಷ್ಟು ವೈಭವೀಕೃತ ಶೈಲಿಯಲ್ಲಿ ನಿರೂಪಿತವಾಗಿದ್ದು ಇವು ಓದುಗರ ಹುಬ್ಬೇರಿಸುವಂತಿವೆ.

ಮಹಾದೇವ ಅವರನ್ನು ದೈವೀಕರಿಸುವ ಕೆಲವು ಸಂದರ್ಭಗಳೂ ಇಲ್ಲಿದ್ದು, ಇವು ಸುಮಿತ್ರಾ ಅವರು ನಂಬುವಂತೆ ತೋರುವ-ಈ ಪುಸ್ತಕದಲ್ಲೇ ಬೇರೆಡೆ ನಿರೂಪಿತವಾಗಿರುವ-ದೆವ್ವಗಳ ಕತೆಗಳಂತೆಯೇ ನಮ್ಮಲ್ಲಿ ತುಟಿಯಂಚಿನ ನಗೆಯನ್ನು ಮಾತ್ರ ಹುಟ್ಟಿಸಬಲ್ಲವಾಗಿವೆ. ಇಂತಹ ವಿಷಯಗಳು ಸುಮಿತ್ರಾರಿಗೆ ನಿಜವೆನ್ನಿಸಿದರೂ ಪತ್ನಿಯಾಗಿ ಅವನ್ನು ಹೀಗೆ ದಾಖಲಿಸುವ ಅಗತ್ಯವಿರಲಿಲ್ಲ.

ಹಾಗೇ ದಲಿತ ಚಳವಳಿಯ ತಮ್ಮ ಆವೃತ್ತಿಯ ಕಥೆ (ಇದರ ಹಲವು ಆವೃತ್ತಿಗಳಿವೆಯಲ್ಲ!) ಹೇಳುವ ಸಂದರ್ಭದಲ್ಲಿ ಮಹಾದೇವ ಅವರ ಬಗ್ಗೆ ಕೇಳಿ ಬಂದ ಟೀಕೆ-ಆರೋಪಗಳನ್ನು ಅವರ ಪತ್ನಿಯಾಗಿ ಇವರು ನಿರಾಕರಿಸುವ/ತಳ್ಳಿ ಹಾಕುವ ಅಥವಾ ಸ್ಪಷ್ಟನೆ ನೀಡುವ ಪ್ರಯತ್ನಗಳು ಗಂಡನ ರಕ್ಷಣೆಯ ಸಹಜ ಪ್ರಯತ್ನಗಳಂತೆ ಕಾಣುತ್ತವೆಯೇ ಹೊರತು ಅಷ್ಟು ಉಚಿತವಾಗಿ ತೋರುವುದಿಲ್ಲ. ಉದಾಹರಣೆಗೆ, ಈ ಸಂಬಂಧವಾಗಿ ಈಗ ನಮ್ಮೊಂದಿಗಿಲ್ಲದ ಕೆ.ಎಂ. ಶಂಕರಪ್ಪನವರ ಮೇಲೆ ಮಾಡಲಾಗಿರುವ 'ಸಣ್ಣತನ'ದ ಆರೋಪವನ್ನೇ, ಅವರನ್ನು ಬಲ್ಲವರು ಲೇಖಕಿಯ 'ಸಣ್ಣತನ' ಎಂದು ತಿರುಗಿಸಿ ಹೇಳಿದರೆ ಸುಮಿತ್ರಾ ಬಾಯಿಯವರು ಏನು ಹೇಳುವರು? ಜೊತೆಗೆ, ಈ ತಮ್ಮೆಲ್ಲ ಸಮರ್ಥನೆಗಳಿಗೆ ಬೆಂಬಲವಾಗಿ ಉಲ್ಲೇಖಿಸುವ 'ಸಾಕ್ಷ್ಯಗಳು’ ಈಗ ತಮ್ಮ ಬಳಿ ಇಲ್ಲವೆಂದೂ ಅವರು ಹೇಳುತ್ತಾರೆ. ಮಹಾದೇವ ಅವರು ತಮ್ಮ ವಿಶಿಷ್ಟ ಸಾಹಿತ್ಯ ಮತ್ತು ವಿಭಿನ್ನ ಚಿಂತನ ಶೈಲಿಗಳ ಮೂಲಕವೇ ಕರ್ನಾಟಕದ ಓರ್ವ ಅಸಾಧಾರಣ ವ್ಯಕ್ತಿ-ಶಕ್ತಿಯೆಂದು ಗುರುತಿಸಲ್ಪಟ್ಟಿದ್ದಾರೆ. ಆದರೆ ಅದು ಸಾಕಾಗದೆಂಬಂತೆ ಕೆಲವೊಮ್ಮೆ ಸ್ವತಃ ಮಹಾದೇವ ಅವರೇ ಮತ್ತು ಇಲ್ಲಿ ಅವರ ಪತ್ನಿ, ಅವರ ವ್ಯಕ್ತಿತ್ವದ ಮಾನವ ಸಹಜ ಓರೆ-ಕೋರೆಗಳನ್ನು ಮತ್ತು ದೌರ್ಬಲ್ಯಗಳನ್ನು ಮರೆಮಾಚಿ ಅವರನ್ನು ಓರ್ವ 'ಅಕಳಂಕ ಮಹಿಮ'ರನಾಗಿ. ಬಿಂಬಿಸುವ-ಇಂತಹ-ಪ್ರಯತ್ನಗಳು ಏಕೋ, ತಿಳಿಯದಾಗಿದೆ. ಮುಂದೆ, ಈ ತಮ್ಮ ಮತ್ತು ತಮ್ಮ ಪತಿ ಪರಮೇಶ್ವರರ ಕತೆಗಳ ಮಧ್ಯೆ ಸುಮಿತ್ರಾಬಾಯಿಯವರು ತಮ್ಮ ನೆನಪಿನಲ್ಲಿ ಮಕ್ಕಳಾದ ಉಜ್ವಲಾ ಮತ್ತು ಮಿತಾರ ಕತೆಗಳೇ ಇಲ್ಲವೆಂಬಂತೆ ಅವನ್ನು ಹಿನ್ನೆಲೆಗೆ ಸರಿಸಿರುವುದು ಅವು ಆನುಷಂಗಿಕವೆಂಬಂತೆ ಒಂದೆರೆಡು ಕಡೆ ಮಾತ್ರ ಮಿಂಚಿ ಮಾಯುವಾಗುವುದು ಆಶ್ವರ್ಯವನ್ನುಂಟು ಮಾಡುತ್ತದೆ. ಆದರೆ ಹೀಗೆ ತಾಯಿಯಾಗಿ ಅಷ್ಟಾಗಿ ಕಾಣಿಸಿಕೊಳ್ಳದ ಸುಮಿತ್ರಾ ಅವರು ಮೊಮ್ಮಕ್ಕಳಾದ ಅರವಿಂದ ಮತ್ತು ರುಹಾನಿಯ ಬಾಲ್ಯಚೇಷ್ಟೆಗಳನ್ನು ಮತ್ತು ಮಾತುಗಾರಿಕೆಗಳನ್ನು ಬಹು ಹೆಮ್ಮೆ ಮತ್ತು ಮುದ್ದಿನಿಂದ ವಿವರವಾಗಿ ಚರ್ಚಿಸುವ ಮೂಲಕ ಅಜ್ಜಿಯಾಗಿ ಮಾತ್ರ ಎದ್ದು ಕಾಣುತ್ತಾರೆ. ಇನ್ನು ಲೇಖಕಿ ಒಂದೆರಡು ಕಾಲೇಜುಗಳ ಪ್ರಾಂಶುಪಾಲೆಯಾಗಿ ಎದುರಿಸಿದ ಸವಾಲುಗಳು ಮತ್ತು ಪಕ್ಷಿ-ಪ್ರಾಣಿಗಳನ್ನು ಕುರಿತ ಅವರ ಪ್ರೀತಿ ಮತ್ತು ಆಸಕ್ತಿಗಳನ್ನು ಹೇಳುವ ಪ್ರಸಂಗಗಳು ಅವರ ವೃತ್ತಿಶೀಲತೆಯಲ್ಲಿನ ಜಾಣೆ ಮತ್ತು ವ್ಯಕ್ತಿತ್ವದಲ್ಲಿನ ಮಾರ್ದವತೆಯ ಆಯಾಮಗಳನ್ನು ತೆರೆದಿಟ್ಟು ಅವರ ಬಗ್ಗೆ ವಿಶೇಷ ಗೌರವ ಮೂಡಿಸುವಂತಿದೆ.

ಈ ಪುಸ್ತಕದಲ್ಲಿ ಅಂಬೇಡ್ಕರರನ್ನು ವೈಯಕ್ತಿಕವಾಗಿ ಭೇಟಿಯಾಗಿ ಮುಖದ ಮೇಲೆ ಬೆಳಕು ಪ್ರತಿಫಲಿಸಿಕೊಂಡು ಬಂದ ಇಬ್ಬರು ಮುವ್ವರು ಮಹನೀಯರ ಪ್ರಸ್ತಾಪ ಬರುತ್ತದೆ. ಅವರಿಬ್ಬರಾದ ಪ್ರೊ, ಬಿಸಿಲಯ್ಯನವರು. ತಾವು ಹೆಸರಾಂತ ಸಮಾಜಶಾಸ್ತ್ರ ಪ್ರಾಧ್ಯಾಪಕಿ ಡಾ. ಸಿ. ಪಾರ್ವತಮ್ಮನವರನ್ನು ಕಂಡ ಬಗ್ಗೆ ಹೇಳುವ ಈ ಇಂಗ್ಲಿಷ್ ಮಾತು ಡಾ. ಪಾರ್ವತಮ್ಮನವರನು, ರೇಗಿಸಿತಂತೆ: I crossed her today morning near Maharani's College.' ರೇಗದಿದ್ದೀತೆ?

ಸುಮಿತ್ರಾ ಬಾಯಿಯವರನ್ನು ನಾನು 40 ವರ್ಷಗಳಿಂದಲೂ ಬಲ್ಲೆ. ಹತ್ತಾರು ಬಾರಿ ಅವರೊಂದಿಗೆ ಮಾತಾಡಿದ್ದೇನೆ. ಒಂದೆರೆಡು ಬಾರಿ ಅವರು ಬಡಿಸಿದ ಊಟವನ್ನೂ ಮಾಡಿದ್ದೇನೆ. ಆದರೆ ಈ ಪುಸ್ತಕದಲ್ಲಿ ಅನಾವರಣಗೊಂಡಿರುವ ಅವರ ಜೀವನ ಪ್ರೀತಿ-ಕುತೂಹಲ, ಲವಲವಿಕೆ ಮತ್ತು ಮಾರ್ದವತೆಗಳು ನನಗೆ ಹೊಸದು. ಅವರಿಗೆ ಅಭಿನಂದನೆಗಳು.

-ಡಿ.ಎಸ್. ನಾಗಭೂಷಣ

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಸೆಪ್ಟಂಬರ್‌ 2018)

Related Books