ಮೈ ಫಾದರ್ ಬಾಲಯ್ಯ ಇಂಗ್ಲೀಷ್ ಮತ್ತು ತೆಲುಗಿನಲ್ಲಿ ಬಂದ ಮೊದಲ ದಲಿತ ಆತ್ಮಕಥನ. ದಲಿತನೊಬ್ಬನ ಬದುಕನ್ನು ಸಶಕ್ತವಾಗಿ ಕಟ್ಟಿಕೊಡುವ ಈ ಕೃತಿ, ಅಸ್ಪೃಶ್ಯರ ಬದುಕಿಗೆ ಸ್ಫೂರ್ತಿದಾಯಕ ಮತ್ತು ಮಾರ್ಗದರ್ಶಿ ಕೂಡ. ಭಾರತೀಯ ಸಮಾಜದ ದಲಿತರ ಬದುಕಿನ ಅದ್ಭುತ ಚಿತ್ರಣವನ್ನು ಕಣ್ಣಿಗೆ ಕಟ್ಟುವಂತೆ ತೋರಿಸುವ ಒಂದು ಜಾತಿಯ ಗಾಥೆ. ಒಂದೊಂದೆ ಹನಿಯಾಗಿ, ಕಣ್ಣೀರು ಸುರಿಸಿ ವೇದನೆಗಳನ್ನು ಅನುಭವಿಸಿ, ಬಹುದೂರ ಗಮಿಸಿ, ಘನೀಭವಿಸಿ ತನ್ನ ಮೇಲೆ ಬಿದ್ದ ಬೆಳಕನ್ನು ಪ್ರತಿಫಲಿಸಿ ಸಪ್ತವರ್ಣವಾಗಿ ಬದಲಾದ ವೀರಗಾಥೆ ಇದು.
ಒಬ್ಬ ಸಾಮಾನ್ಯನ ಬದುಕಿನ ಚಿತ್ರಣವಾಗಿ, ಅವಮಾನ ಭಾರದೊಳಗಿಂದ ಆವಿರ್ಭವಿಸಿದ ಹೊಸ ಚಿಗುರು ಎನ್ನಬಹುದು. ಇನ್ನು ಈ ಕೃತಿಗೆ ಮುನ್ನುಡಿ ಬರೆದಿರುವ ತನಿಕೆಳ್ಳ ಭರಣಿಯರು ಮನುಷ್ಯ ಎನಿಸಿಕೊಂಡ ಪ್ರತಿಯೊಬ್ಬರೂ ಓದಲೇಬೇಕಾದ ಪುಸ್ತಕ ಇದು ಎನ್ನುತ್ತಾರೆ. ಓದುತ್ತಾ ಹೋದಂತೆ ಅರಿವಿಗೆ ಬರದೇ ಕಣ್ಣಂಚು ಒದ್ದೆಯಾಗುತ್ತದೆ. ಮನಸು ಮುದುಡುತ್ತದೆ ಹೃದಯನಡುಗಿ, ಮೈದುಳಿಗೆ ಜೋಮು ಹಿಡಿಸುತ್ತದೆ. ಅಷ್ಟು ಭಾವತೀವ್ರತೆಯ ಈ ಕೃತಿಯನ್ನು ಮೂಲ ಕೃತಿಯಷ್ಟೇ ಸೂಕ್ಷ್ಮವಾಗಿ ಟಿ.ಡಿ.ರಾಜಣ್ಣ ತಗ್ಗಿ ಅವರು ಕನ್ನಡಕ್ಕೆ ಅನುವಾದಿಸಿದ್ದಾರೆ.
©2023 Book Brahma Private Limited.