ಲೋಕದಲ್ಲಿ ಜನಿಸಿದ ಬಳಿಕ

Author : ಬಿ.ಎಲ್.ವೇಣು

Pages 668

₹ 550.00
Year of Publication: 2012
Published by: ಗೀತಾಂಜಲಿ ಪುಸ್ತಕ ಪ್ರಕಾಶನ
Address: ಶಿವಮೊಗ್ಗ ಕರ್ನಾಟಕ

Synopsys

`ಲೋಕದಲ್ಲಿ ಜನಿಸಿದ ಬಳಿಕ' ಸೃಜನಶೀಲ, ಬಂಡಾಯ ಸಾಹಿತಿ ಹಾಗೂ ಚಲನಚಿತ್ರ ಸಂಭಾಷಣೆಕಾರ ಬಿ.ಎಲ್. ವೇಣು ಅವರ ಆತ್ಮಕಥನವಾಗಿದೆ. 12ನೇ ಶತಮಾನದ ಅಕ್ಕಮಹಾದೇವಿಯ ವಚನವೊಂದರ ಸಾಲನ್ನು ತಮ್ಮ ಆತ್ಮಕಥನಕ್ಕೆ ಬಳಸಿಕೊಂಡಿದ್ದಾರೆ. ‘ಲೋಕದೊಳಗೆ ಜನಿಸಿದ ಬಳಿಕ' ಆತ್ಮಕಥನ ಆರಂಭವಾಗುವುದೇ ಅಪಮಾನದ ಪ್ರಸಂಗದಿಂದ. ಅಪಮಾನಗಳ ಸಾಲುಗಳೇ ಇಲ್ಲಿ ತುಂಬಿಕೊಂಡಿರುವುದನ್ನು ಕಾಣಬಹುದು. ಅಪಮಾನ, ಅಮ್ಮ, ಅರೆ ಹೊಟ್ಟೆ, ಅನ್ನದ ಪ್ರಶ್ನೆ, ಆತ್ಮೀಯರು, ಅಸಹಾಯಕತೆ , ಆತಂಕ- ಅನಿಶ್ಚಿತತೆ, ಆರ್ಕೆಸ್ಟ್ರಾ, ಅನುರಾಗ, ಅಪಸ್ವರ, ಆಕಸ್ಮಿಕ, ಅಚ್ಚರಿ, ಅವಕಾಶ, ಅಪಘಾತ, ಅನಾರೋಗ್ಯ, ಆಮಿಷಗಳು, ಅದಮ್ಯ ಛಲ, ಆತ್ಮವಿಶ್ವಾಸಗಳೇ ಈ ಅತ್ಮಕಥನದ ಜೀವಾಳವಾಗಿದೆ. ಈ ಆತ್ಮಕಥನದ ಕೊನೆಯ ಪುಟಗಳಲ್ಲಿ  ವೇಣುರವರ ನೆನಪಿನಂಗಳದಿಂದ ಹೆಕ್ಕಿದ , ಅನೇಕ ಕಥೆಗಳನ್ನು ಹೇಳುವ ಚೆಂದದ ಚಿತ್ರಗಳಿವೆ! “ಯಾರು ಯಾರೋ ನೀರು,  ಗೊಬ್ಬರ ಹಾಕಿ ಬೆಳೆಸಿದ ಹೂಗಿಡ ನಾನಲ್ಲ; ಸುರಿದ ಮಳೆಯ ನೀರು ಕುಡಿದು, ಭೂಮಿಯ ಸಾರವನ್ನೇ ಹೀರಿ ಬೆಳೆದ ಕಾಡುಮರ! ಎಷ್ಟೋ ಏರುಪೇರುಗಳನ್ನು ವಿನೋದ ವಿರೋಧಗಳನ್ನು ಕಂಡಿದ್ದೇನೆ. ನಿಜವಾದ ಸಾಮರ್ಥ್ಯವಿದ್ದಲ್ಲಿ  ಯಾರೂ ನಮ್ಮನ್ನು ಅಲ್ಲಾಡಿಸಲಾರರು” ಆತ್ಮರತಿಯಿಲ್ಲದ ಮಾತುಗಳಿವು! “ಬದುಕಿರುವವರೆಗೆ ಬರೆಯುತ್ತೇನೆ, ಬರೆಯುವವರೆಗೆ ಬದುಕಿರುತ್ತೇನೆ” ಎನ್ನುವಂತಹ ಸಾಲುಗಳು ಇಲ್ಲಿ ಮುಖ್ಯವಾಗಿವೆ. ಒಟ್ಟಾರೆ, ಈ ಕೃತಿಯು  ಕಥೆ, ಕಾದಂಬರಿಯಂತೆ ಓದಿಸಿಕೊಂಡು ಹೋಗುತ್ತದೆ. 

About the Author

ಬಿ.ಎಲ್.ವೇಣು
(05 May 1945)

ಐತಿಹಾಸಿಕ ಕಾದಂಬರಿಗಳ ಮೂಲಕ ಜನಪ್ರಿಯರಾಗಿರುವ ಲೇಖಕ ಬಿ.ಎಲ್. ವೇಣು. ರಂಗಭೂಮಿ ಹಿನ್ನೆಲೆಯ ಅವರು ಇತಿಹಾಸ ಮತ್ತು ಸಂಶೋಧನೆಗಳಲ್ಲಿ ಪ್ರೀತಿ ಹೊಂದಿದ್ದಾರೆ. ಬಣ್ಣಗಳು, ದೊಡ್ಡ ಮನೆ, ಪ್ರೇಮ ಮದುವೆ ಮತ್ತು ಶೀಲ, ನೀಲವರ್ಣ, ದಲಿತಾವತಾರ, ಬಣ್ಣದ ಗೊಂಬಿ (ಕಥಾ ಸಂಕಲನಗಳು), ಪರಾಜಿತ, ಪ್ರೇಮಪರ್ವ, ಅಜೇಯ, ಬೆತ್ತಲೆ ಸೇವೆ, ಅತಂತ್ರರು, ಗಂಡುಗಲಿ ಮದಕರಿ ನಾಯಕ, ರಾಜಾ ಬಿಚ್ಚುಗತ್ತಿ ಭರಮಣ್ಣನಾಯಕ, ಕಲ್ಲರಳಿ ಹೂವಾಗಿ, ಕ್ರಾಂತಿಯೋಗಿ ಮರುಳಸಿದ್ದ, ಹೆಬ್ಬುಲಿ ಹಿರೇಮದಕರಿನಾಯಕ (ಮುಂತಾದ 26 ಕಾದಂಬರಿಗಳು), ಸಹೃದಯಿ, ಬೇರುಬಿಟ್ಟವರು, ಶೋಧನೆ, ವೀರವನಿತೆ ಓಬವ್ವ, ಕ್ರಾಂತಿ (ಮಿನಿ ಕಾದಂಬರಿಗಳು), ಯಮಲೋಕದಲ್ಲಿ ಮಾನವ, ಭೂಲೋಕಕ್ಕೆ ಬಂದ ಬಸವಣ್ಣ, ...

READ MORE

Reviews

‘ಲೋಕದಲ್ಲಿ ಜನಿಸಿದ ಬಳಿಕ’ ಕೃತಿಯ ವಿಮರ್ಶೆ

"ಭೂಮಿಯ ಸಾರವನ್ನು ಹೀರಿ ಬೆಳೆದ ಕಾಡು ಮರ" ಸಾಹಿತಿ  ಬಿ ಎಲ್ ವೇಣು.

‘ಲೋಕದಲ್ಲಿ ಜನಿಸಿದ ಬಳಿಕ'  ಇದು ಪ್ರಖ್ಯಾತ  ಸೃಜನಶೀಲ, ಬಂಡಾಯ ಸಾಹಿತಿ ಹಾಗೂ ಚಲನಚಿತ್ರ ಸಂಭಾಷಣೆಕಾರರಾದ ಬಿ ಎಲ್ ವೇಣು ಅವರ ಆತ್ಮ ಕಥನವನ್ನು ಚೆಂದಾಗಿ ಧ್ವನಿಸುವ ಶೀರ್ಷಿಕೆ!
ಹನ್ನೆರಡನೆಯ ಶತಮಾನದ ವಚನಕಾರ್ತಿ ಅಕ್ಕಮಹಾದೇವಿಯ ವಚನವೊಂದರ ಸಾಲನ್ನು ತಮ್ಮ ಆತ್ಮಕಥನಕ್ಕೆ  ಬಳಸಿರುವುದರ ಔಚಿತ್ಯ,  ಪುಸ್ತಕದ ಪುಟಗಳನ್ನು ಓದಿದಂತೆ ಓದುಗರ ಗಮನಕ್ಕೂ ಬರುತ್ತದೆ.
2012ರಲ್ಲಿ ಪ್ರಥಮ ಮುದ್ರಣವನ್ನು ಕಂಡ, ಸುಮಾರು 680 ಪುಟಗಳ, ಹೆಗ್ಗಾತ್ರದ ಈ ಪುಸ್ತಕವನ್ನು ಈಗ್ಗೆ ಎಂಟು ವರ್ಷಗಳ ಹಿಂದೆಯೇ ಓದಿದ್ದೆನಾದರೂ , ಜಾಲತಾಣದ ಪುಸ್ತಕ ಅವಲೋಕನ  ಬಳಗಕ್ಕೆ ನಮ್ಮ ಚಿತ್ರದುರ್ಗದ ಹೆಮ್ಮೆಯ ಸಾಹಿತಿ ವೇಣು ಅವರ ಆತ್ಮಚರಿತ್ರೆಯನ್ನು ಪರಿಚಯಿಸಲು  ಮತ್ತೊಮ್ಮೆ ಓದುವ ಅವಕಾಶ ಕಲ್ಪಿಸಿಕೊಂಡೆ! 

ಕಥೆ, ಕಾದಂಬರಿಯಂತೆ ಓದಿಸಿಕೊಂಡು ಹೋಗುವ ಈ ಕೃತಿಯ ಓದು  ರಾಷ್ಟ್ರೀಯ ಹೆದ್ದಾರಿಯಲ್ಲಿ  ಬಿ ಎಂ ಡಬ್ಲೂ ಎಸ್ ಕಾರಿನಲ್ಲಿ ಪ್ರಯಾಣಿಸಿದಂತಹ ಖುಷಿ ಕೊಡುತ್ತದೆ. ಹಾಗಾಗಿ ಪುಸ್ತಕದ ಗಾತ್ರ ನಮ್ಮನ್ನು ಕಂಗೆಡಿಸುವುದಿಲ್ಲ! ಬಿ. ಎಲ್. ವೇಣು ತಮ್ಮ ಅರವತೈದನೆಯ ವಯಸ್ಸಿನಲ್ಲಿ , ಸಾವಧಾನ ಚಿತ್ತದಿಂದ ಭೂತಕಾಲವನ್ನು , ನಡೆದು ಬಂದ ದಾರಿಯನ್ನು ಅವಲೋಕಿಸಿದ್ದಾರೆ! ಬರೆಯುವ ಮೊದಲು ಹಿರಿಯರ ಆತ್ಮಚರಿತ್ರೆಗಳ ಮೇಲೆ ಕಣ್ಣಾಡಿಸಿ ತಾವು ಬರೆಯಬೇಕಾದ ವಸ್ತುವಿನ ಪೂರ್ವ ಸಿದ್ದತೆಯನ್ನು ಮಾಡಿಕೊಂಡಿದ್ದಾರೆ! ಸುಗಮ ಸಂಗೀತದ ಸರಾಗ ರಾಗದಲ್ಲಿ ಓದುಗರನ್ನು ತಮ್ಮ ಬದುಕಿನೊಂದಿಗೆ  ಕರೆದೊಯ್ಯುತ್ತಾರೆ! ಈಗ ನನ್ನ ಮುಂದೊಂದು ಸವಾಲು! 680 ಪುಟಗಳ  ಈ ಪುಸ್ತಕದ ಅನುಭವವನ್ನು  ಚಿಕ್ಕದಾಗಿ, ಆಸಕ್ತಿಯುತವಾಗಿ ಓದುಗರಿಗೆ  ಉಣ ಬಡಿಸುವ ಪರಿ ಎಂತು?ಪ್ರಯತ್ನವಷ್ಟೇ ನನ್ನದು! ಅಪಮಾನ, ಅಮ್ಮ, ಅರೆ ಹೊಟ್ಟೆ, ಅನ್ನದ ಪ್ರಶ್ನೆ,  ಆತ್ಮೀಯರು, ಅಸಹಾಯಕತೆ , ಆತಂಕ- ಅನಿಶ್ಚಿತತೆ, ಆರ್ಕೆಸ್ಟ್ರಾ, ಅನುರಾಗ, ಅಪಸ್ವರ, ಆಕಸ್ಮಿಕ, ಅಚ್ಚರಿ,  ಅವಕಾಶ, ಅಪಘಾತ, ಅನಾರೋಗ್ಯ, ಆಮಿಷಗಳು, ಅದಮ್ಯ ಛಲ, ಆತ್ಮವಿಶ್ವಾಸಗಳೇ  ಈ ಅತ್ಮಕಥನದ ಜೀವಾಳ!

‘ಲೋಕದೊಳಗೆ ಜನಿಸಿದ ಬಳಿಕ' ಆತ್ಮಕಥನ ಆರಂಭವಾಗುವುದೇ ಅಪಮಾನದ  ಪ್ರಸಂಗದಿಂದ! ನಂತರವೂ ಅಪಮಾನಗಳ ಸಾಲು ಸಾಲು! ಬಿ ಎಲ್  ವೇಣುರವರು ಬರೆದ ‘ಅಪರಂಜಿ’ ಚಲನಚಿತ್ರದ ಸಂಭಾಷಣೆಗೆ ರಾಜ್ಯಪ್ರಶಸ್ತಿ ದೊರಕಿದಾಗ ಹಿರಿಯ ವಿದ್ವಾಂಸರೊಬ್ಬರು, ವೇಣುರವರ ಸಂತೋಷದ ಬೆಲೂನಿಗೆ,  ”ನಾಲ್ಕಾಣೆ ಸಾಹಿತ್ಯ ; ಎಂಟಾಣೆ ಅದೃಷ್ಟ!” ಎಂದು ಸೂಜಿ ಚುಚ್ಚಿದರು! ಪ್ರಜಾವಾಣಿಯ ಆಗಿನ ಸಂಪಾದಕರಂತೂ “ಪ್ರಜಾವಾಣಿಯಲ್ಲಿ  ಕಥೆ ಪ್ರಕಟವಾಗುವ ಕನಸೂ ಕಾಣ್ಬೇಡಿ” ಎಂದಿದ್ದರಂತೆ! “ಕರಿಯ ನೀನು ಹೇಳೋ” ಎಂದು ಪ್ರಶ್ನೆ ಕೇಳಿ ಹೊಡೆಯುತ್ತಿದ್ದ ಹೈಸ್ಕೂಲಿನ ಪಕ್ಷಪಾತಿ  ಮೇಸ್ಟ್ರು! ಕೃಷ್ಣ ವರ್ಣದವನೆಂದು ಅಪ್ಪ ಕೂಡ ತನ್ನ ಮಗನೆಂದು ಬೇರೆಯವರೆದುರು ಹೇಳಲು  ಬಯಸಲಿಲ್ಲ! ಕಾಲೇಜ್ ಮ್ಯಾಗಜೀನ್ ನಲ್ಲಿ ಕಥೆ ಪ್ರಕಟವಾದಾಗ ಪ್ರೊಫ಼ೆಸರ್,  “ನಿನ್ನ ಕಥೆ ನಿನ್ನ ಮುಖದ ಹಾಗೆ ಇದೆ, ಬೇರೆ ಯಾರೂ ಕೊಟ್ಟಿರಲಿಲ್ಲವೆಂದು ನಿನ್ನ ಕಥೆ ಹಾಕಿದೆವು” ಅಂದಿದ್ದರು.
ದೊಡ್ಡವರ ಸಣ್ಣ ಮಾತುಗಳೋ,
ಅಪಮಾನಗಳೋ ಪೆಟ್ಟುಗಳೋ! 
ಶಿಲೆಯೊಂದು ಶಿಲ್ಪವಾಗಲು ಕಸುಬುದಾರನ ಕೌಶಲ್ಯದ ಪೆಟ್ಟುಗಳು ಬೀಳಬೇಕು. ನಿಜ!  ಆದರೆ ಕಸುಬು ಗೊತ್ತಿಲ್ಲದವನ ಕರುಬುವಿಕೆಯ ಪೆಟ್ಟುಗಳು ಜೀವನೋಲ್ಲಾಸವನ್ನು ಕುಂದಿಸುವಂತಹವೇ ಹೆಚ್ಚಾದರೆ ಸಹಿಸುವುದೆಂತು? 
ಆದರೂ ಅಪಮಾನಗಳನ್ನು,  ವಾಮನ ಮೂರ್ತಿ ಬಲೀಂದ್ರನನ್ನು ಮೆಟ್ಟಿದಂತೆ ಹತ್ತಿಕ್ಕಿ , ಅಪಮಾನಿಸಿದವರೆದುರೇ  ಬೆಳೆದೇ ಬೆಳೆದರು ವೇಣು! ವೇಣು ಅವರ ತಾಯಿ ಸುಶೀಲಮ್ಮ  (ದೇವದಾಸಿ ಹಿನ್ನೆಲೆಯ ಮಾಚಮ್ಮನ ಪುತ್ರಿ) ರಾಘವೇಂದ್ರ ಗುರುಗಳ ಅಪಾರ ಭಕ್ತೆ! ಹಾಡುಗಾರ್ತಿ ಹಾಗೂ ಹಾರ್ಮೋನಿಯಂ ವಾದಕಿ! ಬಡತನದ ಅತಂತ್ರ ಬದುಕನ್ನೂ ಬಂದಂತೆ ಸ್ವೀಕರಿಸಿದ ಗಟ್ಟಿಗಿತ್ತಿ! ರಂಗ ಕಲಾವಿದ ತಂದೆ ಬಿ ಲಕ್ಷ್ಮಯ್ಯ ಬೇಜವಾಬ್ದಾರಿತನದ ಪ್ರತಿರೂಪ!
ಎಲ್ಲಾ ಅಶಿಸ್ತುಗಳನ್ನೂ ಮೈಗೂಡಿಸಿಕೊಂಡ ಸೊಗಸುಗಾರ! ಖಂಡ, ಹೆಂಡ, ಹೆಣ್ಣು, ವಿಲನ್ ಪಾತ್ರಗಳಿಂದಾಚೆ  ಬೆಳೆಯದಿದ್ದರೂ ಹೆಂಡತಿ ಮಕ್ಕಳ ಬಗ್ಗೆ ತಿರಸ್ಕಾರ, ಅಸಡ್ಡೆ, ಉದಾಸೀನವನ್ನಷ್ಟೇ ಬೆಳೆಸಿಕೊಂಡವರು! 
ಲಕ್ಷ್ಮಯ್ಯ ಮತ್ತು ಸುಶೀಲಮ್ಮನವರ ದಾಂಪತ್ಯಕ್ಕೆ  ಒಂಭತ್ತು  ಸಂವತ್ಸರಗಳಾದ ಮೇಲೆಯೇ ಗುರು ರಾಘವೇಂದ್ರರ ಕೃಪೆಯಿಂದ  ಮಗ ವೇಣುಗೋಪಾಲ, 1945ರ ಮೇ 27ರಂದು ಚಿತ್ರದುರ್ಗದಲ್ಲಿ ಹುಟ್ಟಿದ್ದು!
ಅಪ್ಪನ ಕಲೆ ಮಗನಲ್ಲೂ ರಕ್ತಗತವಾಗಿತ್ತೇನೋ! ಚಿತ್ರದುರ್ಗಕ್ಕೆ ಬಂದು ಮೊಕ್ಕಾಂ ಮಾಡುತ್ತಿದ್ದ ಕಂಪನಿ ನಾಟಕಗಳನ್ನು ನೋಡಿ ಬಂದು ಸ್ನೇಹಿತರನ್ನು ಒಗ್ಗೂಡಿಸಿಕೊಂಡು ಹಿತ್ತಲ ಜಗಲಿಯನ್ನೇ ವೇದಿಕೆಯಾಗಿಸಿಕೊಂಡು, ಹಿಂಭಾಗದಲ್ಲಿ  ಬೆಡ್ ಶೀಟು, ಸೀರೆಯ ಪರದೆ ಕಟ್ಟಿ,  ಕೇರಿಯ ಹುಡುಗರಿಗೆಲ್ಲಾ ಪಾತ್ರ ಕೊಟ್ಟು, ಸೀರೆ, ಪಂಚೆ, ಟವಲ್ ಸುತ್ತಿ ಬಣ್ಣದ ಬಳಪಗಳನ್ನು ಕುಟ್ಟಿ ಪುಡಿ ಮಾಡಿ, ಮುಖಕ್ಕೆ ಹಚ್ಚಿಕೊಂಡು, ಇದ್ದಿಲಿನಿಂದ ಮೀಸೆ

ಬರೆದುಕೊಂಡು, ಚುಚ್ಚುಗ, ಸೌಟು, ಕಡಗೋಲು ತಟ್ಟೆಗಳನ್ನು ಕತ್ತಿ, ಗದೆ, ಗುರಾಣಿಗಳನ್ನಾಗಿಸಿ  ಆಗಲೇ   ಡೈಲಾಗ್ ಹೇಳುತ್ತಿದ್ದರು ವೇಣು! ಬಾಲ ನಟನಾಗಿಯೂ ವೇಣು ಹಿರಣ್ಣಯ್ಯನವರ ಕಂಪನಿ ನಾಟಕಗಳಲ್ಲಿ ಅಭಿನಯಿಸಿದರು! ಆದರೆ ತಾಯಿಗೆ ಮಗ ಚೆನ್ನಾಗಿ ಓದಿ ಆಫ಼ೀಸರ್ ಆಗಬೇಕೆಂಬ ಹಂಬಲ! ಹಾಗಾಗಿ  ರಂಗಭೂಮಿಯಲ್ಲಿ ಮುಂದುವರೆಯಲು ಆಕೆ ಬಿಡಲಿಲ್ಲ! ಉಪವಾಸ, ಅರೆ ಹೊಟ್ಟೆ  ವೇಣು ಅವರನ್ನು  ಕಾನೂನು ಕಾಲೇಜಿನ ಅರೆಕಾಲಿಕ ಗುಮಾಸ್ತನನ್ನಾಗಿಸಿತು! 
ಕುಂಚ ಕಲಾವಿದನನ್ನಾಗಿಸಿತು! 
ಲಲಿತ ಕಲೆಗಳಲ್ಲಿ ಆಸಕ್ತಿಯಿದ್ದುದರಿಂದ  ನಟ, ನಾಟಕಕಾರ, ನಿರ್ದೇಶಕ, ಗಾಯಕ, ಕೊಳಲು, ಹಾರ್ಮೋನಿಯಮ್ ವಾದಕನನ್ನಾಗಿಸಿತು! 
ಉದರ ಪೋಷಣೆಗೆ ಹರ ಸಾಹಸ!
ಬೇಜವಾಬ್ದಾರಿ ತಂದೆ, ಮತ್ತೆಲ್ಲೂ ಸಾಲ ಹುಟ್ಟದೆ ಪರಿತಪಿಸುತ್ತಿದ್ದ ಗಟ್ಟಿಗಿತ್ತಿ ತಾಯಿ, ಬೆಳೆಯುತ್ತಿದ್ದ ತಂಗಿ, ಅನಾರೋಗ್ಯದ ತಮ್ಮ, ಪದವಿಯನ್ನೂ ಪೂರ್ಣ ಮುಗಿಸಲಾಗದ ಹಿರಿಯ ಮಗ ವೇಣುವಿನ ಅಲೆದಾಟ, ತಿರುಗಾಟ, ತುತ್ತಿನ ಚೀಲ ತುಂಬಿಸಲು ಪರದಾಟ! 
ಬಡತನದ ಕರಾಳ ಸ್ವರೂಪ! 
ನಿಜಕ್ಕೂ ಓದುವಾಗ ಕಣ್ಣಾಲಿ ತುಂಬಿ ಬರುತ್ತವೆ!

ಆತ್ಮೀಯ ಗೆಳೆಯರಾದ ಶಾಂತಕುಮಾರ್, ಶರಭಣ್ಣ, ಶಿವರಾಮು, ಸುಬ್ಬಣ್ಣ, ಇಸ್ಮಾಯಿಲ್  ಹಾಗೂ ಇತರೆ ಗೆಳೆಯರ ಸಾಂಗತ್ಯ ವೇಣುರವರ ಬದುಕನ್ನು ಸಹ್ಯವಾಗಿಸಿದ್ದು! ವೇಣು ಅವರಿಗೆ ಶಾಸ್ತ್ರೀಯ ಸಂಗೀತ ಜ್ಞಾನ ಇಲ್ಲದಿದ್ದರೂ , ಒಂದೇ ಒಂದು ಸಲ ಹಾಡು ಕೇಳಿದರೂ ಟ್ಯೂನ್ ಹಿಡಿದು ಬಿಡುವ ಗ್ರಹಣ  ಶಕ್ತಿ ಇತ್ತು!  ಉಮಾ ವಾದ್ಯ ಗೋಷ್ಠಿಯಲ್ಲಿ ಹಾಡಲು, ರಿಲೀಸ್ ಆದ ಹಾಡು ಕಲಿಯಲು ಅವರ ಪಡಿಪಾಟಲು ಕಡಿಮೆಯೇನಾಗಿರಲಿಲ್ಲ! ಟೇಪ್  ರೆಕಾರ್ಡರ್ ಇಲ್ಲದ ಕಾಲದಲ್ಲಿ ರೇಡಿಯೋದ ಬಿನಾಕ ಗೀತ್ ಮಾಲಾ ಕೇಳಲೂ ಬೇರೆಯವರ ಮನೆಗೆ ಹೋಗಬೇಕಿತ್ತು!  ಪದೇ ಪದೇ ಸಿನಿಮಾ ನೋಡಿ ಕಲಿಯಲಾಗದ ಆರ್ಥಿಕ ಪರಿಸ್ಥಿತಿ! ಇಷ್ಟವಾದ ಹಾಡುಗಳು ಬರುವ ಸಮಯ ನಿಗದಿಪಡಿಸಿಕೊಂಡು, ಥಿಯೇಟರ್ ಹಿಂದಿನ ಕೊಚ್ಚೆಯಲ್ಲಿ, ಮಲಮೂತ್ರಗಳ ವಾಸನೆಯನ್ನು ಆಘ್ರಾಣಿಸುತ್ತಲೇ ಹಾಡುಗಳನ್ನು ಕೇಳುತ್ತಲೇ ಸುಖಿಸುವ ಹಾಗೂ  ಕಲಿಯುವ  ದುಸ್ಥಿತಿ! ವೇಣು ಬದುಕಿನಲ್ಲಿ ಪ್ರೇಮಪರ್ವದ ಅಧ್ಯಾಯ! ವಾದ್ಯಗೋಷ್ಟಿಯ ಹಾಡುಗಾರ್ತಿ ಉಷಾ, ಬೇರೊಬ್ಬರ ಜೊತೆ ಯುಗಳ ಗೀತೆಯನ್ನೂ ಹಾಡಲೂ ಸಹ್ಯವಾಗದೆ ವೇಣುವಿಗಾಗಿಯೇ ಕಾಯುತ್ತಿದ್ದಾಕೆ! ಗೆಳೆಯ ಶರಭಣ್ಣನ ಬಲವಂತಕ್ಕೆ ಎಂದೋ ಕೆಪಿಎಸ್ಸಿ ಎಕ್ಸಾಮ್ ಬರೆದಿದ್ದು, ದ್ವಿತೀಯ ದರ್ಜೆ ಗುಮಾಸ್ತನ ಕೆಲಸಕ್ಕೆ ಆದೇಶ ಬಂದಾಗ ದೇವರು ಕಣ್ಣು ಬಿಟ್ಟು ವರ ಕೊಟ್ಟಂತಹ ಸಂಭ್ರಮ! ಆದರೆ ದೂರದ ಅಪರಿಚಿತ , ಬಿಸಿಲೂರು ಗುಲ್ಬರ್ಗಕ್ಕೆ ಕೆಲಸದ ನಿಮಿತ್ತ ಹೋಗುವುದೆಂದರೆ ದಿಕ್ಕು ತೋಚದಂತಹ ಪರಿಸ್ಥಿತಿ! 
ಆದರೆ ಐದು ಹೊಟ್ಟೆಗಳ ಕರೆ ಏನು ಸಾಮಾನ್ಯವೇ?

ಗುಲ್ಬರ್ಗಾದ ಒಂಟಿ ಬದುಕಿಗೆ ಅಲ್ಲಿನ ಗೆಳೆಯರು ಸಾತ್ ನೀಡಿದರು!  ದುರ್ಗದ ಗೆಳೆಯರ, ತಾಯಿಯ, ಉಷಾಳ ಪತ್ರಗಳು ಜೀವಕ್ಕೆ ಇಂಧನ ಒದಗಿಸುತ್ತಿದ್ದವು! ಉಷಾಳಿಗೆ ಪತ್ರ ಬರೆದಾಗಲೆಲ್ಲಾ , “ಆಕೆ   ನಿಮ್ಮ ಭಾಷೆ ಚೆಂದಿದೆ. ನಿಮಗೆ  ಫ಼್ಯೂಚರ್  ಇದೆ. ಕತೆ ಬರೆಯಿರಿ “ ಎಂದೆಲ್ಲಾ ದುಂಬಾಲು ಬೀಳುತ್ತಿದ್ದಳು.ಪತ್ರಗಳಲ್ಲಿ ಪ್ರೇಮ ನಿವೇದನೆ, ಭಾಷಾ ಶುದ್ದಿಗಾಗಿ ಪೂರ್ವ ಸೂರಿಗಳ ಕೃತಿ ವಾಚನ ಗುಲ್ಬರ್ಗಾದ ವಾಚನಾಲಯದಲ್ಲಿ!
ಭಾವನೆಗಳ ತುಡಿತಕ್ಕೆ ಅಕ್ಷರ ರೂಪ! ಜೂನಿಯರ್ ಕಿಶೋರ್ ಕುಮಾರ್ ಎಂದೇ ಹೆಸರಾಗಿದ್ದ ವೇಣು ಮನಸ್ಸು ನಿಧಾನವಾಗಿ ಸಂಗೀತದಿಂದ ಸಾಹಿತ್ಯದತ್ತ ವಾಲಿತು! ಜಾತಿ, ವರ್ಣ, ವರ್ಗಗಳು ನಿರ್ಮಲವಾದ ಪ್ರೀತಿಗೆ ಅಡ್ಡವಾದವು! ನಡುರಸ್ತೆಯಲ್ಲಿ ನಡು ಮಧ್ಯಾಹ್ನ , ಕುಡಿತದ ಅಮಲಿನಲ್ಲಿದ್ದ ತುಂಡು ರೌಡಿಗಳು ವೇಣು ಅವರನ್ನು ಅರೆ ಬೆತ್ತಲೆ ಮಾಡಿ , ಪ್ರೀತಿಸಿದವಳನ್ನೇ ತಂಗಿ ಎನ್ನುವಂತಹ  ರಾಮಾಚಾರಿಯ ಪರಿಸ್ಥಿತಿ  ತಂದಿಟ್ಟರು!
ಅನುರಾಗದಲ್ಲೂ ಅಪಜಯ! ಗೆಳೆಯನ ಮಾತಿನಿಂದ ಭಗ್ನ ಪ್ರೇಮವೂ ಸಾಹಿತ್ಯ ರಚನೆಗೆ ಪ್ರೇರೇಪಿಸಿತು !
ಬಡತನ, ಜಾತಿ, ಪ್ರೀತಿಗಳೇ ಬಹಳಷ್ಟು ಕೃತಿಗಳ ಮೂಲದ್ರವ್ಯಗಳಾದವು!
ಬರವಣಿಗೆಗೆ ಸಾಣೆ ಹಿಡಿದಂತೆಲ್ಲಾ, ಬವಣೆಗಳು ಕೈ ಹಿಡಿದು ಬರೆಸಿದವು! 
ಕೈಕೊಟ್ಟವಳು ನೋಡಲಿ ಎಂಬ ಹುಕಿ ಬೇರೆ!

ಬಹುತೇಕ ಎಲ್ಲಾ ದಿನಪತ್ರಿಕೆ ಹಾಗೂ ವಾರಪತ್ರಿಕೆಗಳಲ್ಲಿ ಅವರ ಸಣ್ಣಕತೆಗಳು ಜೊತೆ ಜೊತೆಗೆ ಇಪ್ಪತೈದಕ್ಕೂ ಹೆಚ್ಚು ಸಾಮಾಜಿಕ ಕಾದಂಬರಿಗಳೂ ಪ್ರಕಟಣೆಯ ಭಾಗ್ಯ ಕಂಡವು! ಗಾಡ್ ಫಾದರ್ ಗಳ ಬೆಂಬಲವಿಲ್ಲದೆ ಸಿನಿಪ್ರಪಂಚದ ಪರಿಚಯವೂ ಇಲ್ಲದ ವೇಣು ಚಲನಚಿತ್ರ ಲೋಕದಲ್ಲಿ  ಗಟ್ಟಿ ಹೆಜ್ಜೆ ಗುರುತುಗಳನ್ನು  ಮೂಡಿಸಿದರು! ವಿಷ್ಣುವರ್ಧನ್, ಉಪೇಂದ್ರ, ವಿಜಯ ರಾಘವೇಂದ್ರ…ಹೀಗೆ ಮೂರು ತಲೆಮಾರಿನವರಿಗೂ  ಚಿತ್ರ ಸಂಭಾಷಣೆ ರಚಿಸಿದರು! ಸಾಹಿತ್ಯ ಹಾಗೂ ಚಿತ್ರರಂಗದ ಸುವರ್ಣ ಸೇತುವೆಯಾದರು! ವೇಣುರವರ  ಹತ್ತು ಕಾದಂಬರಿಗಳು ಚಲನಚಿತ್ರಗಳಿಗೆ ವಸ್ತುವಾದವು! ಸುಮಾರು ಐವತ್ತೊಂಭತ್ತು ಸಿನಿಮಾಗಳಿಗೆ  ವೇಣು ಸಂಭಾಷಣೆ ಬರೆದರು!
ಸಿದ್ದಲಿಂಗಯ್ಯ, ಪುಟ್ಟಣ್ಣ ಕಣಗಾಲ್, ನಾಗಾಭರಣ,  ಕೆ ವಿ ಜಯರಾಂ, ಭಾರ್ಗವ, ದೊರೆ- ಭಗವಾನ್, ಎಸ್. ನಾರಾಯಣ್, ಸಾಯಿಪ್ರಕಾಶ್, ಶಿವಮಣಿ ಮುಂತಾದ ಸಿನಿ ನಿರ್ದೇಶಕರೊಡನೆ ಕೆಲಸ ಮಾಡಿ ಹೆಸರು , ಹಣ ಸಂಪಾದಿಸಿದರೂ ದುರ್ಗದ ಮೇಲಿನ ಅಭಿಮಾನ , ಬೆಂಗಳೂರಿನಲ್ಲಿಯೇ ಇರಲು ಒಪ್ಪದಾಯಿತು!  

ಚಿತ್ರದುರ್ಗದ ಕರ್ಮಭೂಮಿಯಿಂದಲೇ ಬೆಂಗಳೂರಿನ ಗಾಂಧೀ ನಗರವನ್ನು ಸ್ವಲ್ಪ ಮಟ್ಟಿಗೆ ಆಳಿದರು ವೇಣು ಎಂದರೆ ನಿಜಕ್ಕೂ ಉತ್ಪ್ರೇಕ್ಷೆ ಯಲ್ಲ! ಮದರಾಸು, ಬೆಂಗಳೂರು, ಚಿತ್ರದುರ್ಗ ಎಂದೆಲ್ಲಾ ಓಡಾಡುತ್ತ, ಸರ್ಕಾರಿ ಕೆಲಸವನ್ನೂ ಬಿಡದೆ ಒಪ್ಪಿಕೊಂಡ ಸಿನಿಮಾಗಳಿಗೂ ಬರೆಯುತ್ತ ಸೆಕೆಂಡ್ ಸ್ಯಾಟರ್ಡೇ, ಸಂಡೇ ಚಿತ್ರಸಾಹಿತಿ ಎಂದೇ ಖ್ಯಾತರಾದರು. ವೇಣು ತುಂಬಾ ಬರಿತಾರೆ, ಅವರು ‘ಕಾದಂಬರಿಗಳ ಕಾರ್ಖಾನೆ' ಎಂಬ ಬಿರುದೂ ದಕ್ಕಿತು!
ಆದರೆ ಲೇಖಕ ಉಳಿಯೋದು ವಿಮರ್ಶಕರಿಂದಲ್ಲ; ಓದುಗರಿಂದ ಎಂಬ ನಂಬಿಕೆ ವೇಣು ಅವರದು! ಚಿತ್ರದುರ್ಗದ ಇತಿಹಾಸಕ್ಕೆ ಸಂಬಂಧಪಟ್ಟಂತೆ  ಕಾದಂಬರಿಗಳನ್ನು ಬರೆಯಲು ಗೆಳೆಯ ಸಿದ್ಧಾನಾಯಕರ ಸವಾಲು! 
ಕಾಲೆಳೆಯುವವರು ಇದ್ದಂತೆ ಆತ್ಮಸ್ಥೈರ್ಯ ತುಂಬಿದವರೂ ಇದ್ದರು! ಈಗಾಗಲೇ ಹೆಸರಾಗಿರುವ ತರಾಸು ಬರೆಯುವಾಗ ನೀನ್ಯಾಕೆ ಬರೆಯುವೆ? ಎಂದು ಪ್ರಶ್ನಿಸಿದವರೂ ಇದ್ದರು! ’ಗಂಡುಗಲಿ ಮದಕರಿನಾಯಕ'  ಪುಸ್ತಕ ಚಿತ್ರದುರ್ಗದ ಕೋಟೆಯ ಸಂಪಿಗೆ ಸಿದ್ದೇಶ್ವರ ದೇವಸ್ಥಾನದಲ್ಲಿ ಬಿಡುಗಡೆಯಾದಾಗ ಸೇರಿದವರು ಇಪ್ಪತ್ತು ಸಾವಿರಕ್ಕೂ ಹೆಚ್ಚು! ನಂತರದಲ್ಲಿ ವಿವಾದಗಳೂ ಕಡಿಮೆಯೇನಿರಲಿಲ್ಲ! ಅವುಗಳನ್ನೆಲ್ಲಾ ಸಂಭಾಳಿಸಿದರೂ, ವೇಣು ಮತ್ತೆಂದೂ ಚಾರಿತ್ರಿಕ  ಕಾದಂಬರಿ ಬರೆಯಬಾರದೆಂದು ಮನದಲ್ಲೇ ತೀರ್ಮಾನಿಸಿದರು! ಆದರೆ ಮತ್ತೊಂದು ಐತಿಹಾಸಿಕ ಕಾದಂಬರಿಗೆ ಭೂಮಿಕೆ ಆಗಲೇ ಸಿದ್ದವಾಗುತ್ತಿತ್ತು! ಹದಿನೈದು ವರ್ಷಗಳ ನಂತರ,  ಶ್ರೀ ಮಲ್ಲಿಕಾರ್ಜುನ ಮುರುಘಾರಾಜೆಂದ್ರ ಸ್ವಾಮಿಯವರ ಒತ್ತಾಸೆಯಿಂದ, ಐತಿಹಾಸಿಕ ಚೌಕಟ್ಟನ್ನು ಮೀರದೆ, ಕಡಿವಾಣ ಹಿಡಿದೇ ಕಲ್ಪನೆಯ ಕುದುರೆ ಸವಾರಿಯಿಂದ ಮೂಡಿದ ಕಾದಂಬರಿ , ‘ಬಿಚ್ಚುಗತ್ತಿ ಭರಮಣ್ಣ ನಾಯಕ'! ರಕ್ತ ಕ್ಯಾನ್ಸರಿಗೆ  ಪ್ರೀತಿಯ ತಮ್ಮ ಶಿವರಾಜ ಬಲಿಯಾದಾಗ ವೇಣು ತೀರಾ ಹತಾಶ! ದೈಹಿಕ ಹಾಗೂ ಮಾನಸಿಕವಾಗಿಯೂ ನರಳಿದ್ದು! ಆಗಲೇ ಆತ್ಮ ಬಲದಿಂದ, ತೀರಾ ಅನಾರೋಗ್ಯದಲ್ಲೂ ಮತ್ತೆರಡು ಕಾದಂಬರಿಗಳು ವಾರಪತ್ರಿಕೆಗಳಲ್ಲಿ ಧಾರಾವಾಹಿಗಳಾಗಿ ಪ್ರಕಟವಾದವು! ಬದುಕೊಂದು ಘಟ್ಟಕ್ಕೆ ಬಂದಿತ್ತು! ತಂಗಿಯ ಮದುವೆಯಾಗಿ ಆಕೆ ನೆಮ್ಮದಿಯಾಗಿದ್ದಳು. 

ಅಮ್ಮನ ಬಲವಂತಕ್ಕೆ ತಾವೂ ಮದುವೆಯಾಗಿ, ಉದ್ಯೋಗ, ಸಾಹಿತ್ಯ , ಸಂಸಾರ ಮತ್ತು ಚಲನಚಿತ್ರ ಸಂಭಾಷಣೆ… ಹೀಗೆ ನಾಲ್ಕು ದೋಣಿಗಳಲ್ಲಿ ಕಾಲಿಟ್ಟು , ಯಶಸ್ಸಿನ  ಸಮತೋಲನ ಕಾಯ್ದುಕೊಂಡು ಮತ್ತೊಂದು ಐತಿಹಾಸಿಕ ಕಾದಂಬರಿ ‘ಕ್ರಾಂತಿಯೋಗಿ ಮರುಳಸಿದ್ದ' ಸಾಣೇಹಳ್ಳಿ  ಸ್ವಾಮಿಜಿಯವರ ಪ್ರೇರಣೆಯಿಂದ ಮನದಲ್ಲಿ ರೂಪುಗೊಳ್ಳುತ್ತಿದ್ದಾಗಲೇ ಅಪಘಾತ! ಬಲಗೈಗೆ  ಬಲವಾದ ಪೆಟ್ಟು! ಜಾಯಿಂಟ್ ಮುರಿದಿತ್ತು! ಮೂರು ವರ್ಷಗಳಲ್ಲಿ ಮೂರು ಆಪರೇಷನ್ನುಗಳು! ಬರವಣಿಗೆ ಇಲ್ಲದೆ ಬದುಕುವುದೆಂತು?  ಬರೆಯುವುದೆಂತು? ಎಡಗೈ ಇಲ್ಲವೇ  ಎಂಬ ಹುಚ್ಚು ಧೈರ್ಯ! ಕಚೇರಿಯಲ್ಲಿ ಸಹಿ ಹಾಕಿ ಪುಗಸಟ್ಟೆ ಸಂಬಳ ಪಡೆಯಲು ಮನಸ್ಸಾಗದೆ ಎಡಗೈಯಲ್ಲಿ ಬರವಣಿಗೆ ರೂಢಿಸಿಕೊಂಡರು! ಕುಸಿಯದ ಆತ್ಮಸ್ಥೈರ್ಯ ಕೈ ಹಿಡಿದು ನಡೆಸಿತು! ಇಲ್ಲೊಂದು ಕಾಕತಾಳಿಯ ಘಟನೆಯನ್ನು ಪ್ರಸ್ತಾಪಿಸಲೇಬೇಕು! ಶರಣರ ಬಗ್ಗೆ ಆಳವಾಗಿ ಅಧ್ಯಯನ ಮಾಡಿದ್ದ  ಡಾ ತಿಪ್ಪೇರುದ್ರಸ್ವಾಮಿಯವರು ಮತ್ತು ಬಸವರಾಜ ಕಟ್ಟೀಮನಿಯವರು ಮರುಳಸಿದ್ದರ ಬಗ್ಗೆ ಬರೆಯಲು ಸನ್ನದ್ದರಾದಾಗಲೇ ತೀರಿಕೊಂಡರು! ನಂತರದಲ್ಲಿ ವೇಣು ಮರುಳಸಿದ್ದರ ಕುರಿತಾಗಿ ಬರೆಯಬೇಕೆಂದಿರುವಾಗಲೇ ಆಘಾತಕಾರಿ ಅಪಘಾತ! ಹಿಡಿಯಿಲ್ಲದ ವ್ಯರ್ಥ ಕತ್ತಿಯಂತಾದೆನೇ ಎಂಬ ಕೊರಗು ಕಾಡಿದ್ದು ಕೆಲವು ಕ್ಷಣಗಳಷ್ಟೇ. ಮನೋಸ್ಥೈರ್ಯಕ್ಕೆ ಕೊರತೆಯಿರಲಿಲ್ಲ! ಮನದಲ್ಲೇ ಮರುಳ ಸಿದ್ದನ ನರ್ತನ! ಆತನ ಬಗ್ಗೆಯೇ ಚಿಂತಿಸುತ್ತ ಸಾಂದರ್ಭಿಕ ವಚನಗಳ ತಾವೇ ರಚನೆ ಮಾಡಿ ಮರೆತು ಹೋದೀತೆಂದು ಎಡಗೈಯಲ್ಲಿ ಟಿಪ್ಪಣಿ ಮಾಡಿಕೊಂಡಿದ್ದು ಭಂಡ ಧೈರ್ಯವೇ ಸರಿ!

“ಮಹಾತ್ಮರ ಬಗ್ಗೆ ಬರೆದರೆ ಕೇಡಾಗುತ್ತೇನೋ  ಹುಚ್ಚಾ , ಬರೆಯೋ” ಎಂದು ಪ್ರೇರೇಪಿಸಿದ ಅಮ್ಮ , ನಾಲ್ಕು ಅಧ್ಯಾಯ ಬರೆವುದರೊಳಗಾಗಿ ಗುರು ರಾಘವೇಂದ್ರರ ಪಾದ ಸೇರಿದ್ದಳು! ಮಗನ ಪ್ರಾಣವನ್ನು ಉಳಿಸಿದ ಮಹಾ ತಾಯಿ! ಸಿರಿಗೆರೆಯ ತರಳಬಾಳು ಮಠದ ಮೂಲಪುರುಷರ ಬಗ್ಗೆ ಬರೆದ ಐತಿಹಾಸಿಕ ಕಾದಂಬರಿ ‘ಕ್ರಾಂತಿಯೋಗಿ ಮರುಳಸಿದ್ದ'  ಜನಮನ್ನಣೆ ಗಳಿಸಿತು! ಸೋತೆನೆನ್ನದೆ,  ಸತ್ತೆನೆನ್ನದೆ , ಬತ್ತಿತು ಎನ್ನೊಳು ಸತ್ವದ ಊಟೆಯೆನ್ನದೆ , ಸಡ್ಡು ಹೊಡೆದು ಮತ್ತೆ ಮತ್ತೆ ಫ಼ೀನಿಕ್ಸ್ನಂತೆ ಎದ್ದು ಬಂದ ಆಶಾವಾದಿ ವೇಣು! ಮಠಗಳಿಂದ ಸನ್ಮಾನ, ರಾಜ್ಯೋತ್ಸವ ಪ್ರಶಸ್ತಿಯೂ ಸೇರಿದಂತೆ ಲೆಕ್ಕವಿಲ್ಲದಷ್ಟು ಪ್ರಶಸ್ತಿಗಳು! ಜನಪ್ರಿಯತೆಯೂ ಕಡಿಮೆಯಿರಲಿಲ್ಲ! ಚಿತ್ರದುರ್ಗ ಹಾಗೂ ಚನ್ನಗಿರಿ ತಾಲ್ಲೂಕುಗಳ ಸಾಹಿತ್ಯ ಸಮ್ಮೇಳನದ ಅಧ್ಯಕ್ಷತೆ! ಕತೆಗಾರ ವೇಣು ಪಿಎಚ್ ಡಿ ಅಧ್ಯಯನಕ್ಕೂ ವಸ್ತುವಾದರು! ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ ವೇಣು ಅದೆಷ್ಟೋ ವೇಷ ತೊಡಬೇಕಾಯಿತು!  ಕಾಮಧೇನುವಿನಂತಹ ಇಲಾಖೆಯಲ್ಲಿದ್ದೂ ಹೊಟ್ಟೆಗಾದ್ರೆ, ಬಟ್ಟೆಗಿಲ್ಲ ಎನ್ನುವವಂತ ಕುಚೇಲನ ಪರಿಸ್ಥಿತಿ! ಲಂಚ, ರುಷುವತ್ತುಗಳ ಆಸೆ-ಆಮಿಷಗಳಿಗೆ ಬಲಿಯಾಗದೆ ತಾವು ನಂಬಿದ ಸತ್ಯಗಳಿಗೆ ಬದ್ದರಾಗಿ ಸತ್ವಯುತವಾಗಿ ನಡೆದುಕೊಂಡರು!

ತಮ್ಮ ಜೀವನ ಚರಿತ್ರೆಯೊಂದಿಗೆ ನಾಟಕ ಕಂಪನಿ, ಕಂಪನಿ ಕಲಾವಿದರ ಬದುಕು, ಅವರ ಕೌಟುಂಬಿಕ ಚಿತ್ರಣದ ಅನಾವರಣವೂ ಈ ಕೃತಿಯಲ್ಲಿದೆ! ಚಿತ್ರದುರ್ಗದ ಸಾಂಸ್ಕೃತಿಕ ಇತಿಹಾಸವೂ ಇಲ್ಲಿ ಬಿಚ್ಚಿಕೊಳ್ಳುತ್ತದೆ. ಕರುವಿನಕಟ್ಟೆಯ ಸಮೃದ್ದ ಬಾಲ್ಯದ ಚಿತ್ರಣ, ಜಾನಪದ ‘ಭೇಟಿ ಉತ್ಸವ’ದ ಬಗ್ಗೆ ಸವಿವರ ಚಿತ್ರಣವಿದೆ. ಮೊಹರಂ ಹಬ್ಬದ ಪೀರಲು ದೇವರ ಉತ್ಸವದ ಬಗ್ಗೆ, ಕೆಂಡ ತುಳಿವ ಬಗ್ಗೆಯೂ ದಾಖಲು ಮಾಡುತ್ತಾರೆ.
ಗೋಕಾಕ್ ಚಳವಳಿ ನಡೆದಾಗ  ಡಾ.ರಾಜ್ ಭಾಷಣ ಮಾಡಿದ, ಡಾ. ವಿಷ್ಣುವರ್ಧನ್ ಸಿನಿಮಾ ಜೀವನದ ರಜತ ಸಂಭ್ರಮವನ್ನು ಆಚರಿಸಿಕೊಂಡ, ರಾಜಕೀಯ ನಾಯಕರುಗಳ ಭಾಷಣ ನಡೆವ ಸ್ಥಳದ ಬಗ್ಗೆಯೂ ಬರೆಯುತ್ತಾರೆ!
ವೇಣು ತಮ್ಮ  ಬದುಕಿನ ಬಹಳಷ್ಟು ಅಪಮಾನದ, ಅಸಾಮಾನ್ಯ ಸಾಹಸ ಪ್ರಸಂಗಗಳನ್ನು ತಮ್ಮ  ಕಾದಂಬರಿ  ಮತ್ತು ಸಿನಿಮಾಗಳಲ್ಲಿ ಚಿತ್ರಿಸಿದ್ದಾರೆ! ಉಪಮೆ, ರೂಪಕಗಳಿಂದ ಅಲಂಕರಿಸಿದ್ದಾರೆ! ತಮ್ಮನ್ನು ತಾವೇ ಸಾರ್ವಜನಿಕವಾಗಿ ಅವಲೋಕಿಸಿದ್ದಾರೆ! 
ಬರವಣಿಗೆಯಲ್ಲಿ ಪ್ರಾಮಾಣಿಕತೆ ಇದೆ!

ಚಿತ್ರದುರ್ಗದಲ್ಲಿ ತರಾಸು ಕೃತಿಯಾಧಾರಿತ ನಾಗರಹಾವು ಚಿತ್ರದ ಶೂಟಿಂಗ್ ,ಪುಟ್ಟಣ್ಣ ಕಣಗಾಲರ ಅಹಂ, ಸ್ಪುರದ್ರೂಪಿ ವಿಷ್ಣುವರ್ಧನ್,  ನಿರ್ಮಾಪಕ ಶಿವರಾಂ  ಅಲ್ಲದೆ  ವರದಣ್ಣ, ಚಿ ಉದಯಶಂಕರ್, ದೊಡ್ಡಣ್ಣ, ಉಪೇಂದ್ರ, ನಾಗಾಭರಣ, ನಾಗ್ ಸೋದರರು,  ಹಂಸಲೇಖ,  ಮತ್ತಿತರರ ಬಗ್ಗೆಯೂ ಗಾಸಿಪ್ಪುಗಳಿಗೆ ಜೋತು ಬೀಳದೆ  ತಾವು ಕಂಡದ್ದನ್ನು ಕಂಡಂತೆಯೇ ‘ಸಿನಿಮಾದವರ ಸ್ವಾರಸ್ಯ' ಎಂಬ ಅಂಕಣವನ್ನು ತರಂಗಕ್ಕಾಗಿ ಬರೆದರು.
ಪತ್ರಿಕಾ ಸಂದರ್ಶನದಲ್ಲೊಮ್ಮೆ , “ಸಾಹಿತ್ಯ ನನ್ನ ತಾಯಿ, ಸಿನಿಮಾ ಸಾಹಿತ್ಯ ನನ್ನ ಪ್ರೇಯಸಿ” ಎಂದದ್ದು ಗುಲ್ಲೆಬ್ಬಿಸಿತು! “ಸರ್ಕಾರಿ ನೌಕರಿ ಊಟ, ಸಿನಿಮಾ ಉಪ್ಪಿನಕಾಯಿ” ಎಂದದ್ದು ಸಿನಿಮಾ ಮಂದಿಯಲ್ಲಿ ಅಸಹನೆ ಮೂಡಿಸಿದ್ದು ಸತ್ಯವೇ ಆದರೂ ವೇಣು ಗಾಂಧೀ ನಗರಿಗರಿಗೆ ಅನಿವಾರ್ಯವೇ ಆಗಿಬಿಟ್ಟಿದ್ದರು! ಆಗ ವಿಷ್ಣುವರ್ಧನ್ ತಿಳಿ ಹೇಳಿದ್ದನ್ನು ವೇಣು ಸ್ಮರಿಸುತ್ತಾರೆ. “ ಪ್ರಚಾರ ಸಿಗುತ್ತೆ ಅಂತ ಪೇಪರಿನವರ ಜೊತೆ ದುಡುಕಿ ಮಾತನಾಡಬೇಡಿ! ಕಡ್ಡಿನಾ ಗುಡ್ಡ ಮಾಡೊ ಜನರಿದಾರೆ! ಅವರಿಗೆ controversy ಬೇಕು!ನಮಗೆ ಅದೆಲ್ಲಾ ಬೇಕಾ?” ಇವು ಸಾರ್ವಕಾಲಿಕ ಮಾತುಗಳಲ್ಲವೇ! 

ಈ ಆತ್ಮಕಥನದ ಕೊನೆಯ ಪುಟಗಳಲ್ಲಿ  ವೇಣುರವರ ನೆನಪಿನಂಗಳದಿಂದ ಹೆಕ್ಕಿದ , ಅನೇಕ ಕಥೆಗಳನ್ನು ಹೇಳುವ ಚೆಂದದ ಚಿತ್ರಗಳಿವೆ! “ಯಾರು ಯಾರೋ ನೀರು,  ಗೊಬ್ಬರ ಹಾಕಿ ಬೆಳೆಸಿದ ಹೂಗಿಡ ನಾನಲ್ಲ; ಸುರಿದ ಮಳೆಯ ನೀರು ಕುಡಿದು, ಭೂಮಿಯ ಸಾರವನ್ನೇ ಹೀರಿ ಬೆಳೆದ ಕಾಡುಮರ! ಎಷ್ಟೋ ಏರುಪೇರುಗಳನ್ನು ವಿನೋದ ವಿರೋಧಗಳನ್ನು ಕಂಡಿದ್ದೇನೆ. ನಿಜವಾದ ಸಾಮರ್ಥ್ಯವಿದ್ದಲ್ಲಿ  ಯಾರೂ ನಮ್ಮನ್ನು ಅಲ್ಲಾಡಿಸಲಾರರು” ಆತ್ಮರತಿಯಿಲ್ಲದ ಮಾತುಗಳಿವು! “ಬದುಕಿರುವವರೆಗೆ ಬರೆಯುತ್ತೇನೆ, ಬರೆಯುವವರೆಗೆ ಬದುಕಿರುತ್ತೇನೆ” ಸಾಹಿತ್ಯ ರಚನೆ, ಸಹಜ  ಎದೆಯ ಮಿಡಿತದಂತಹ  ಒಂದು ತುಡಿತ,  ಪ್ಯಾಶನ್ (passion) ಎಂದು ಭಾವಿಸುವವರಿಂದ ಮಾತ್ರ ಇಂತಹ ಮಾತುಗಳು ಬರುತ್ತವೆಯಲ್ಲವೇ! ವೇಣು ಎಪ್ಪತ್ತೇಳರ ಹರಯದಲ್ಲೂ ತಮ್ಮ ಅನುಭವಗಳನ್ನು ದುಡಿಸಿಕೊಂಡು, ಲೇಖನಿಗೆ ವಿರಾಮ ಕೊಡಲಿಚ್ಚಿಸದೆ, ದಣಿವಿಲ್ಲದೆ,  ಶ್ರಮ ಬೇಡುವ ಐತಿಹಾಸಿಕ ಕಾದಂಬರಿ ಬರೆಯುತ್ತಿದ್ದಾರೆ! ಬಂಡಾಯಕ್ಕೆ ಈಗಲೂ ದನಿಗೂಡಿಸುತ್ತಾರೆ! ಯಶಸ್ಸಿನ ರುಚಿ ಕಂಡ ಮೇಲೆಯೂ   ಗಗನಕ್ಕೆ ಹಾರದೆ ನೆಲದ ನಂಟನ್ನು ಉಳಿಸಿಕೊಂಡಿದ್ದಾರೆ! “ನನ್ನ ತನುವಿಗಷ್ಟೇ ವೃದ್ದಾಪ್ಯ, ನನ್ನ ಮನಕಿನ್ನೂ ಶೈಶವಯ್ಯಾ “ಎನ್ನುವ ವೇಣು ಅವರ ಆತ್ಮಚರಿತ್ರೆ ಸಾಕಷ್ಟು ಜನರಿಗೆ ಸ್ಪೂರ್ತಿ, ಪ್ರೇರಣೆ ಕೊಟ್ಟಿದೆ ! 

ನೀವೂ  ಓದಿ ನೋಡಿ!
( ಚಿತ್ರದುರ್ಗ : ಸಿ ಬಿ ಶೈಲಾ ಜಯಕುಮಾರ್.ಚಿತ್ರದುರ್ಗ)

 

Related Books