ಹೆಜ್ಜೆ ಗುರುತುಗಳು (ಅತ್ಮಕಥನ )

Author : ಇಮ್ತಿಯಾಜ್‌ ಹುಸೇನ್‌

Pages 190

₹ 150.00




Year of Publication: 2020
Published by: ಸಹನಾ ಪ್ರಕಾಶನ
Address: ಮುಸ್ಲಿಂ ಹಾಸ್ಟೆಲ್‌ ಕಾಂಪ್ಲೆಕ್ಸ್‌, ದಾವಣಗೆರೆ

Synopsys

ʼಹೆಜ್ಜೆ ಗುರುತುಗಳುʼ ಇಮ್ತಿಯಾಜ್‌ ಹುಸೇನ್‌ ಅವರ ಆತ್ಮಕಥನ. ಅವರ ಬದುಕಿನಲ್ಲಿ ಕಂಡ ಕಷ್ಟ ಹಾಗೂ ನಿವೇದನೆಗಳನ್ನು ಆತ್ಮಕಥನ ರೂಪದಲ್ಲಿ ತೆರೆದಿಟ್ಟಿದ್ದಾರೆ. ಈ ಆತ್ಮಕಥನವು 44 ಅಧ್ಯಯನಗಳನ್ನು ಒಳಗೊಂಡಿದೆ. ಇದು ಕೇವಲ ಅವರ ವೈಯುಕ್ತಿಕ ಬದುಕಿನ ಘಟನಾವಳಿಯಾಗದೇ ಅವರ ಬದುಕಿನ ನಾಲ್ಕು ದಶಕಗಳ ಜನಪರ ಹೋರಾಟದ ಕತೆಯಾಗಿದೆ. ಚಳವಳಿ ಹಾಗೂ ಕಮ್ಯೂನಿಸ್ಟ್‌ ಪಕ್ಷದ ಸ್ಥಿತಿಗತಿ, ಕಾರ್ಮಿಕ ಚಳವಳಿಗಳ ಏಳುಬೀಳುಗಳ ಗಾಥೆಯನ್ನು ಈ ಕೃತಿ ಒಳಗೊಂಡಿದೆ. ಇಮ್ತಿಯಾಜ್‌ ಹುಸೇನ್‌ ಅವರ ಬದುಕು, ಬಾಲ್ಯ ಕಷ್ಟದಲ್ಲಿಯೇ ಕಳೆಯಿತು. ತೊಡಲು ಬಟ್ಟೆ ಇಲ್ಲ, ಚಪ್ಪಲಿ ಇಲ್ಲ, ಒಪ್ಪತ್ತಿನ ಊಟ ಮಾತ್ರ ಸಿಗುತ್ತಿತ್ತು ಎಂಬಂತಹ ಅವರ ಬದುಕಿನ ವಿವರಗಳು ಕಣ್ಣು ತೇವಗೊಳಿಸುತ್ತವೆ . ತಮ್ಮ ಕಾಲಘಟ್ಟದ ಘಟನಾವಳಿಗಳನ್ನು ವಸ್ತುನಿಷ್ಠರಾಗಿ ನಿರೂಪಿಸಿದ್ದಾರೆ. ಆಗಿನ ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳು, ಹದಗೆಡುತ್ತಿರುವ ಸೌಹಾರ್ದ ಬದುಕುಗಳು, ಬಂಡಾಯ ಮುಂತಾದ ವಿಚಾರಗಳನ್ನು ಯಥಾವತ್ತಾಗಿ ಲೇಖಕರು ಕಟ್ಟಿಕೊಟ್ಟಿದ್ದಾರೆ.

About the Author

ಇಮ್ತಿಯಾಜ್‌ ಹುಸೇನ್‌

ಇಮ್ತಿಯಾಜ್‌ ಹುಸೇನ್‌ ದಾವಣಗೆರೆಯ ಸಿ.ಪಿ.ಐ ಪಕ್ಷದ ಕಾರ್ಯಕರ್ತ. ಚಿತ್ರದುರ್ಗದ ಅತ್ಯಂತ ಬಡ ಕುಟುಂಬದಲ್ಲಿ ಜನಿಸುವ ಲೇಖಕರು ಚಿಕ್ಕಂದಿನಿಂದಲೇ ಹೋರಾಟಗಳಲ್ಲಿ ಸಕ್ರಿಯವಾಗಿದ್ದರು. ರಾಜಕೀಯ ಬದುಕಿನಲ್ಲಿ ಬಿ.ಎಸ್.ಪಿ ಹಾಗೂ ಕ್ರಾಂಗೆಸ್‌ ಪಕ್ಷಕ್ಕೆ ಬಂದರೂ ಕಮ್ಯೂನಿಸ್ಟ್‌ ಪಕ್ಷದ ವ್ಯಾಮೋಹ ಬಿಟ್ಟಿಲ್ಲ. 'ಹೆಜ್ಜೆ ಗುರುತುಗಳು' ಇವರ ಆತ್ಮಕಥನವಾಗಿದ್ದು, ಈ ಕೃತಿಯಲ್ಲಿ ತಮ್ಮ ಜೀವನದ ಕುರಿತ ಹಲವಾರು ವಿಚಾರಗಳನ್ನು ಹಾಗೂ ಧೋರಣೆಗಳನ್ನು ಪ್ರಸ್ತುತಪಡಿಸಿದ್ದಾರೆ. ...

READ MORE

Reviews

ಹೆಜ್ಜೆ ಗುರುತುಗಳು- ಆತ್ಮಕಥನ ಕೃತಿಯ ವಿಮರ್ಶೆ

ದಾವಣಗೆರೆಯ ಇಮ್ತಿಯಾಜ್ ಹುಸೇನ್‌ರವರ “ಹೆಜ್ಜೆ ಗುರುತುಗಳು' ಆತ್ಮಕಥನವನ್ನು ಸಹನಾ ಡಾ. ಕೆ. ಪ್ರಕಾಶನ ದಾವಣಗೆರೆಯವರು ಪ್ರಕಟಿಸಿರುತ್ತಾರೆ. ಸ್ನೇಹಿತರ ಒತ್ತಾಯದ ಮೇರೆಗೆ ತಮ್ಮ ಆತ್ಮಕಥನವೆಂಬ ಹೋರಾಟದ ಗಾಥೆಯನ್ನು ರಚಿಸಿದ್ದಾರೆ. ಇಮ್ತಿಯಾಜ್ ಎಂದರೆ ದಾವಣಗೆರೆಯ ಸಿ.ಪಿ.ಐ. ಪಕ್ಷದ ಕಾರ್ಯಕರ್ತ, ಕಾರ್ಮಿಕ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡವರು ಎಂದಷ್ಟೇ ಗೊತ್ತಿದ್ದ ನನಗೆ ಅವರು ಆತ್ಮಕಥನವನ್ನು ಬರೆದಿದ್ದಾರೆ ಎಂದರೆ ಆಶ್ಚರ್ಯದ ಜೊತೆಗೆ ಖುಷಿಯಾಯಿತು. ಏಕೆಂದರೆ ಒಬ್ಬ ಹೋರಾಟಗಾರ ತನ್ನ ಹೋರಾಟದೊಂದಿಗೆ ತನ್ನ ಕಾಲಘಟ್ಟದ ಘಟನಾವಳಿಗಳಿಗೆ ಸಾಕ್ಷಿಯಾಗಿರುತ್ತಾನೆ' ಎಂಬುದು ಬಹಳ ಮಹತ್ವದ ವಿಷಯ. ಇವರ ಆತ್ಮಕಥನ ಒಟ್ಟು ಮೂರು ಘಟ್ಟಗಳಲ್ಲಿ ವಿಂಗಡಿಸಲಾಗಿದೆ. ಸನತ್ ಕುಮಾರ ಬೆಳಗಲಿ ಮತ್ತು ರಂಜಾನ್ ದರ್ಗಾರವರ ಮುಂಮಾತು ಮತ್ತು ಸಿ. ಕೆ. ಮಹೇಶ್‌ರವರ ಬೆನ್ನುಡಿ ಈ ಕೃತಿಗೆ ದೊರೆತಿದೆ.

ಇವರ ಆತ್ಮಕಥನವು ಕೇವಲ ವೈಯಕ್ತಿಕ ಬದುಕಿನ ಘಟನಾವಳಿಯಾಗದೇ, ಅವರ ಬದುಕಿನ ನಾಲ್ಕು ದಶಕಗಳ ಜನಪರ ಹೋರಾಟ, ಚಳುವಳಿ, ಕಮ್ಯುನಿಸ್ಟ್ ಪಕ್ಷದ ಸ್ಥಿತಿಗತಿ, ಕಾರ್ಮಿಕ ಚಳುವಳಿಗಳ ಏಳುಬೀಳುಗಳ ಗಾಥೆಯಾಗಿದೆ. ನನಗೆ ಅವರ ಆತ್ಮಕಥನದ ಬಗ್ಗೆ ವಿಮರ್ಶೆ ಬರೆಯಲು ಸಿದ್ದನಗೌಡ ಪಾಟೀಲರು ಕೇಳಿದಾಗ ಖುಷಿಯಿಂದ ಒಪ್ಪಿಕೊಂಡೆ. ಇಮ್ಮಿಯಾಜ್‌ರವರು ನಮ್ಮ ಮನೆಗೆ ಬಂದಾಗ ಈ ಪುಸ್ತಕವನ್ನು ಕೊಟ್ಟಿದ್ದರು. ಇವರ ಹೆಜ್ಜೆಗುರುತುಗಳನ್ನು ಓದುತ್ತಾ ಹೋದಂತೆ ಪುಸಕ ಕೆಳಗಿಡುವ ಮನಸಾಗಲೇ ಇಲ್ಲ. ಬದುಕಿನ ದಟ್ಟವಾದ ಅನುಭವ, ಕಷ್ಟ ಕಾರ್ಪಣ್ಯ ಹೋರಾಟದ ಬದುಕು, ಬಡತನ, ಅಪ್ಪನ ಹೊಲಿಗೆ ಮಶೀನು, ಅದರ ಮೇಲೆ ಅವಲಂಬಿತರಾದ 13 ಹೊಟ್ಟೆಗಳನ್ನು ತುಂಬಿಸುವ ಜವಾಬ್ದಾರಿ ಇವೆಲ್ಲವು ಓದಿಸಿಕೊಂಡು ಹೋದವು. ಅವರ ಬದುಕಿಗೆ ತಂದೆಯವರ ಬಟ್ಟೆ ಹೊಲಿಯುವ ಕಾಯಕವೇ ಆಸರೆಯಾಗಿತ್ತು. ಇಮ್ತಿಯಾಜರ ಆತ್ಮಕಥನವನ್ನು ಓದುತ್ತಿದ್ದರೆ ನನಗೆ ಕವಿ ಸಿದ್ದಲಿಂಗಯ್ಯನವರ “ಊರು ಕೇರಿ” ಆತ್ಮಕಥನ ನೆನಪಿಗೆ ಬಂತು. ಅವರು ತಮ್ಮ ಬಡತನದ ಸಂಕಷ್ಟಗಳನ್ನು ಹಾಸ್ಯಭರಿತ ಶೈಲಿಯಲ್ಲಿ ಹೇಳುವಂತೆ ಇವರೂ ಸಹ ಬದುಕಿನ ಪಡಿಪಾಟಲುಗಳ ಆಚೆ ನಿಂತು ಘಟನೆಗಳನ್ನು ನಿರೂಪಿಸಿರುವುದರಿಂದ ಅವು ನಮಗೆ ಆಪ್ಯಾಯಮಾನವಾಗುತ್ತವೆ. ಇಮ್ತಿಯಾಜ್ ರವರು ಚಿತ್ರದುರ್ಗದ ಅತ್ಯಂತ ಬಡ ಮತ್ತು ಅಲಕ್ಷಿತ ಪಿಂಜಾರ ಕುಟುಂಬದಲ್ಲಿ ಜನಿಸಿದ್ದು ತಮ್ಮ ಬಡತನದ ಬದುಕಿನ ಬಾಲ್ಯದ ಕುರಿತೂ ದಾಖಲಿಸಿದ್ದಾರೆ. ಇವರ ಬದುಕಿನ ಅನುಭವಗಳು ಆತ್ಮಕಥನವಾಗಿರದೇ ಅದೊಂದು ಆತ್ಮನಿವೇದನೆಯಾಗಿದೆ. ಅವರ ಬದುಕು ಕೇವಲ ವೈಯಕ್ತಿಕ ಬದುಕಾಗಿರದೇ ಅದೊಂದು ಕಾಲಘಟ್ಟದ ಹೋರಾಟದ ದಾಖಲೆಯಾಗಿದೆ. ಸನತ್‌  ಕುಮಾರ ಬೆಳಗಲಿಯವರು ಮುನ್ನುಡಿಯಲ್ಲಿ ಹೇಳಿದಂತೆ ಇದು ಆತ್ಮಕಥೆಯಾಗಿ ಮಾತ್ರ ಉಳಿದಿಲ್ಲ. ಇದು ಆ ವೈಯಕ್ತಿಕ ಬದುಕನ್ನು ದಾಟಿ, ಆಚೆಗೆ ವಿಸ್ತಾರ ಪಡೆದುಕೊಂಡಿದೆ. ವೈಯಕ್ತಿಕದಿಂದ ಸಾರ್ವತ್ರಿಕ ಸ್ವರೂಪ ಪಡೆದಿದೆ.' ಅವರು ವೈಯಕ್ತಿಕ ಬದುಕಿಗಾಗಿ ಸೆಣಸುತ್ತಲೇ ಬದುಕನ್ನು ಗ್ರಹಿಸುವ ಶಕ್ತಿಯನ್ನು ಕಮ್ಯುನಿಸ್ಟ್ ಪಕ್ಷದಿಂದ ಪಡೆದುಕೊಂಡದ್ದು. ಎಂಭತ್ತರ ದಶಕದ ದಾವಣಗೆರೆಯ ಕಾರ್ಮಿಕ ಚಳುವಳಿಯೊಂದಿಗೆ ಪಕ್ಷ ರಾಜಕೀಯ, ಬಾಬ್ರಿ ಮಸೀದಿ, ರಾಮಜ್ಯೋತಿ, ರಾಮಮಂದಿರದ ಹೆಸರಿನಲ್ಲಿ ದಾವಣಗೆರೆಯಲ್ಲಿ ನಡೆದ ಕೋಮು ಗಲಭೆಗಳು, ಈ ಗಲಭೆಗಳು ದೇಶದ ಮುಖ್ಯವಾಹಿನಿಯಲ್ಲಿದ್ದ ಮುಸಲ್ಮಾನರನ್ನು ಹೇಗೆ ಪ್ರತ್ಯೇಕಗೊಳಿಸಿತು ಎಂಬುದನ್ನು ವಿವರವಾಗಿ ದಾಖಲಿಸಿದ್ದಾರೆ. ಇಮ್ತಿಯಾಜ್ ಹುಸೇನರು ತಮ್ಮ ರಾಜಕೀಯ ಬದುಕಿನಲ್ಲಿ ಅವರು ಬಿ.ಎಸ್.ಪಿ.ಗೂ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಸಹ ಮೂಲದ ಕಮ್ಯುನಿಸ್ಟ್ ಸಿದ್ದಾಂತದ ಒಲವನ್ನು ಮಾತ್ರ ಬಿಟ್ಟುಕೊಟ್ಟಿಲ್ಲ. ಅವರು ಯಾವುದೇ ಪಕ್ಷದಲ್ಲಿರಲಿ ಕಮ್ಯುನಿಸ್ಟತನವನ್ನುಮಾತ್ರ ಯಾವುದೇ ಕಾರಣಕ್ಕೂ ಬಿಟ್ಟುಕೊಟ್ಟವರಲ್ಲ. ಇದರಿಂದಾಗಿಯೇ ಅವರು ನಮಗೆ ಇಂದಿಗೂ ಕಾಮೇಡ್ ಆಗಿಯೇ ಕಾಣುತ್ತಾರೆ.

ಇಮ್ತಿಯಾಜ್ ಹುಸೇನರವರ ಬದುಕು, ಬಾಲ್ಯ ಕಷ್ಟದಲ್ಲಿಯೇ ಕಳೆಯಿತು. ತೊಡಲು ಬಟ್ಟೆ ಇಲ್ಲ, ಚಪ್ಪಲಿ ಇಲ್ಲ, ಒಪ್ಪತ್ತಿನ ಊಟ ಮಾತ್ರ ಸಿಗುತ್ತಿತ್ತು. ಹಬ್ಬಗಳಲ್ಲಿ ಮಾತ್ರ ಹೊಟ್ಟೆತುಂಬ ಊಟ ಸಿಗುತ್ತಿತ್ತು ಎಂಬಂತಹ ಅವರ ಬದುಕಿನ ವಿವರಗಳು ಕಣ್ಣು ತೇವಗೊಳಿಸುತ್ತವೆ.

ಆದರೆ ಇಮ್ತಿಯಾಜ್ ರವರ ಆತ್ಮಕಥನ ಎಲ್ಲಿಯೂ ಬೋರ್ ಎನಿಸುವುದಿಲ್ಲ. ಅತ್ಯಂತ ಲವಲವಿಕೆಯಿಂದ ಓದಿಸಿಕೊಳ್ಳುತ್ತದೆ. ನಾವೆಲ್ಲ ಅದೇ ಪ್ರದೇಶ ಮತ್ತು ಅದೇ ಕಾಲಘಟ್ಟದವರಾಗಿದ್ದರಿಂದಲೂ ಇರಬಹುದು. ಭಾರತ ಚೀನಾ ಯುದ್ಧ, ಆಗಿನ ಸೊಸೈಟಿಯ ಅಕ್ಕಿ, ಗೋದಿ, ಸಕ್ಕರೆಗಳು ಬಡವರ ಬದುಕಿಗೆ ಆಸರೆ ಯಾಗಿದ್ದ ಕಾಲ. ಅಮ್ಮ ಮಕ್ಕಳು ಓದಿ ಜಾಣರಾಗಲಿ ಎಂದು ದನಕ್ಕೆ ಬಡಿದಂತೆ ಬಡಿದು ಶಾಲೆಗೆ ಕಳಿಸು ತ್ತಿದ್ದುದು. ಅಪ್ಪನ ದುಡಿಮೆ ಸಾಕಾಗದೇ ಅಮ್ಮ ಬೀಡಿ ಕಟ್ಟುವ ಕೆಲಸಕ್ಕೆ ಕೈಹಾಕಿದ್ದು, 11 ಜನ ಮಕ್ಕಳಿಗೆ ಹೊಸ ಬಟ್ಟೆ ಹೊಲಿಸಲಾಗದ ತಂದೆ ಅವರಿವರ ಉಳಿದ ಬಟ್ಟೆಯಲ್ಲಿಯೇ ಮಕ್ಕಳಿಗೆ ಬಟ್ಟೆ ಸಿದ್ದಪಡಿಸು ತ್ತಿದ್ದುದು. ಎಲ್ಲವನ್ನೂ ಕಣ್ಣಿಗೆ ಕಟ್ಟುವಂತೆ ನವಿರಾದ ಹಾಸ್ಯದೊಂದಿಗೆ‌ ಇಮ್ತಿಯಾಜ್ ಬರೆದಿದ್ದಾರೆ. ಈ ನಡುವೆ ದುರ್ಗದಲ್ಲಿ ನಡೆಯುತ್ತಿದ್ದ “ನಾಗರಹಾವು” ಚಿತ್ರದ ಚಿತ್ರೀಕರಣಕ್ಕೆ ದಿನವೂ ಹಾಜರಿರುತ್ತಿದ್ದರು. ಆಗ ವಿಷ್ಣುವರ್ಧನ ಇವರ ನೆಚ್ಚಿನ ನಾಯಕರಾಗಿ ಬಿಟ್ಟರು. ಪ್ರಸನ್ನ ಥಿಯೇಟರಿನಿಂದಲೇ ಸಿನಿಮಾ ಗೀಳು ಹಚ್ಚಿಕೊಂಡಿದ್ದರು. ಹಲವಾರು ಬಾರಿ ಅವರು ನಾಗರಹಾವು ಸಿನಿಮಾ ನೋಡುತ್ತಾರೆ.

ಚಿತ್ರದುರ್ಗದಲ್ಲಿ ದಿ. ಅಬ್ದುಲ್ ರಹಮಾನ್ ರವರು ಮತ್ತು ದಿ. ಶ್ರೀಮತಿ ಬುಡೇನ್‌ಬಿಯವರ ಮಗನಾಗಿ ಹುಟ್ಟಿದವರು ಇಮ್ತಿಯಾಜ್ ಹುಸೇನ್. ಹನ್ನೊಂದು ಜನ ಮಕ್ಕಳಲ್ಲಿ ಹಿರಿಯರಿಬ್ಬರೂ ಹೆಣ್ಣುಮಕ್ಕಳು, ಉಳಿದಂತೆ 9 ಜನ ಗಂಡು ಮಕ್ಕಳ ದಂಡು ಅವರದು. ಹೊಟ್ಟೆ 1976 ರಲ್ಲಿ ನಗರಸಭೆಯಲ್ಲಿ ಕೆಲಸ ದಾವಣಗೆರೆಗೆ ಮನೆ ಬದಲಿಸಿದ್ದು, ಮುಂದೆ ತನ್ನ ದ್ವಿಚಕ್ರವಾಹನವನ್ನು ಮಾರಿ ಸ್ವಂತಕ್ಕೊಂದು ಕಟ್ಟಿಸಿದ್ದು ಸಾಹಸವೇ ಸರಿ, ನಿಜಲಿಂಗ ಸಂಸ್ಥಾ ಕಾಂಗ್ರೆಸ್ಸು, ಇಂದಿರಾಗಾಂಧಿಯವರ ಆಡ ಕಾಂಗ್ರೆಸ್ಸು, ಬಂಗಾರಪ್ಪನವರ ಕೆಸಿಪಿ ಪಳ ಜಯಪ್ರಕಾಶ್ ನಾರಾಯಣರವರ ಚಳುವಳಿಗಳು ಇಂದಿರಾಗಾಂಧಿಯವರ ತುರ್ತುಪರಿಸ್ಥಿತಿ, ಜನತಾ ಪಕ, ಸಿ.ಪಿ.ಐ.ನ ಪಂಪಾಪತಿಯವರ ಸಾಮೀಪ್ಯ, ಕಮ್ಯುನಿಸ್ಟ್ ಸಿದ್ದಾಂತದ ಅಪ್ಪ ಅಮ್ಮಗೆ, ಸಂಬಂಧಿಗಳೇ ದಾಯಾದಿಗಳಾದ ಸಂದರ್ಭ, ಪಂಪಣ್ಣ, ಹೆಚ್. ಕೆ. ರಾಮಚಂದ್ರಪ್ಪನವರೊಂದಿಗೆ ಜೈಲುವಾಸ, ಕಾರ್ಮಿಕ ಸಂಘ ಸಂಸ್ಥೆಗಳನ್ನು ಕಟ್ಟಿದ್ದು, ಕಾಂಗ್ರೆಸ್ ಕುತಂತ್ರಕ್ಕೆ ಬಲಿಯಾದ ಭಾರತದ ಮ್ಯಾಂಚೆಸ್ಟರ್ ಆಗಿದ್ದ ದಾವಣಗೆರೆಯ ಕಾಟನ್ ಮಿಲ್ಲುಗಳನ್ನು ಮೂಲೆಗುಂಪು ಮಾಡಿ ಕಮ್ಯುನಿಸ್ಟ್ ಬೇರುಗಳನ್ನು ಸಡಿಲಗೊಳಿಸಿದ್ದು, ಬಂಡಾಯ, ಸಮುದಾಯ, ವೃತ್ತಪತ್ರಿಕೆ, ದೇವರಾಜ ಅರಸರ ಸಾವು, ಗುಂಡುರಾವ್, ರಾಮಕೃಷ್ಣ ಹೆಗಡೆ ರಾಜಕಾರಣ, ಪಂಪಾಪತಿ ಸೋಲು, ಗೋಕಾಕ್ - ವರದಿ, 1983ರಲ್ಲಿ ಮದುವೆಯಾದದ್ದು, 1984ರಲ್ಲಿ ಪ್ರಧಾನಿ ಇಂದಿರಾ ಗಾಂಧಿಯವರ ಕಗ್ಗೂಲೆ, ಶಾಬಾನು ಪ್ರಕರಣ, ಸ್ವತಂತ್ರ ಭಾರತದಲ್ಲಿ ಹೆಚ್ಚುತ್ತಿರುವ ಕೋಮುವಾದ, ಇವೆಲ್ಲ ಘಟನಾವಳಿ - ಗಳನ್ನು ಮನಮುಟ್ಟುವಂತೆ ಬರೆದಿದ್ದಾರೆ ಇಮ್ತಿಯಾಜರವರು.

ತುಂಬಿಸುತ್ತಿದ್ದ ಹೊಲಿಗೆ ಮಶೀನನ್ನೇ ಅಪ್ಪ ಹಿರಿಯ ಅಕ್ಕನ ಮದುವೆಗಾಗಿ ಮಾರಿ ಬಂದಾಗ ಮನೆ ಮಸಣದಂತಾಗಿತ್ತು. ಮುಂದೆ ಮೇಷ್ಟು ಶ್ರೀರಾಮರೆಡ್ಡಿಯವರು ಒಂದು ಹೊಲಿಗೆಯ ಮೆರಿಟ್ ಮಶೀನನ್ನು ಕೊಡಿಸಿದ್ದನ್ನು ಇಮ್ತಿಯಾಜ್ ಧನ್ಯತಾಭಾವದಿಂದ ನೆನೆಯುತ್ತಾರೆ. ಚಿತ್ರದುರ್ಗದ ಪ್ರಸನ್ನ ಚಿತ್ರ ಮಂದಿರದ ಕಸ ಗುಡಿಸುವುದರಿಂದ ಹಿಡಿದು, ಆಶ್ರಯ ಯೋಜನೆಯ ಅಧ್ಯಕ್ಷಗಿರಿಯವರೆಗಿನ ಅವರ ಬದುಕಿನ ಪಯಣ ಒಂದು ದಿಟ್ಟ ಹೋರಾಟ ವಾಗಿತ್ತು. ಕಾರ್ಮಿಕ ಬಂಧುಗಳ ಕಷ್ಟಗಳನ್ನು ಪರಿಹರಿಸುತ್ತಲೇ ತನ್ನ ಕಷ್ಟಗಳನ್ನು ಮರೆತಿದ್ದ ಲೇಖಕರಲ್ಲಿ ಒಬ್ಬ ದಿಟ್ಟ ಹೋರಾಟಗಾರ ಎಂದಿಗೂ ಜೀವಂತವಾಗಿದ್ದ. ಬದುಕಿನ ಧಾವಂತಗಳಲ್ಲಿ ಬೆಟ್ಟದಂತಹ ಭಂಡ ಧೈರ್ಯವೇ ಇವರಿಗೆ ಸಾಥ ನೀಡಿತ್ತು. ಇವರ ಪಾಲಿಗೆ ಅಮ್ಮ ದೇವತೆಯೇ ಆಗಿದ್ದಳು. ಅಂತಹ ಅಮ್ಮ ಕೂಡಿಟ್ಟ 30ರೂ. ತೆಗೆದುಕೊಂಡು ಬೆಂಗಳೂರಿನಲ್ಲಿ ದುಡಿದು ಅಮ್ಮನಿಗೆ ಹಣಕಾಸಿನ ಸಹಾಯ ಮಾಡಬೇಕೆಂದಿದ್ದ ಅವರಿಗೆ ಅದೂ ಕೂಡ ಮಾಡಲಾಗದೇ, ಬಳಿಯಲ್ಲಿದ್ದ ಹಣವೂ ಖರ್ಚಾಗಿದ್ದರಿಂದ ಉಪವಾಸವೇ. ತುಮಕೂರಿನವರೆಗೂ ನಡೆಯುತ್ತ ಬಂದು ಕುಸಿದು ಕುಳಿತಾಗ, ಯಾರೋ ಪುಣ್ಯಾತ್ಮರು ಬಸ್ಸಿಗೆ ಹತ್ತಿಸಿ ಕಳಿಸಿದ್ದನ್ನು ನೆನೆಯುತ್ತಾರೆ.

ಈ ಕೃತಿಯಲ್ಲಿ ಇಪ್ತಿಯಾಜರವರು ಆ ಕಾಲಘಟ್ಟದ ಘಟನಾವಳಿಗಳನ್ನು ವಸ್ತುನಿಷ್ಠರಾಗಿ ನಿರೂಪಿಸಿದ್ದಾರೆ. ಆಗಿನ ಸಾಂಸ್ಕೃತಿಕ, ರಾಜಕೀಯ, ಸಾಮಾಜಿಕ ಸ್ಥಿತ್ಯಂತರಗಳು, ಹದಗೆಡುತ್ತಿರುವ ಸೌಹಾರ್ದ ಬದುಕುಗಳು, ಬಂಡಾಯ, ಸಮುದಾಯ ಮುಂತಾದ ಚಳುವಳಿಗಳೊಂದಿಗೆ ನನ್ನೊಡನಿದ್ದ ಸೋದರ ಇಮ್ಮಿಯಾಜರವರು. ಒಂದು ಕಾಲಕ್ಕೆ ಕೆಂಪು ಕೆಂಪಾಗಿದ್ದ ಪಂಪಣ್ಣನವರ ದಾವಣಗೆರೆ ಕೇಸರಿಮಯ ವಾಗಲು ಬಹಳ ಕಾಲ ತೆಗೆದುಕೊಳ್ಳಲಿಲ್ಲ. ಎಂದೂ ಕಾಣದ ಕೋಮುಗಲಭೆಗಳಿಗೆ ರಾಮನಾಮದ ಇಟ್ಟಂಗಿ ಹೊತ್ತ ಅದ್ವಾನಿಯ ರಥಯಾತ್ರೆ ದಾವಣಗೆರೆಗೆ ಕೇಸರಿ ಬಣ್ಣ ಬಳಿದು ಮುಸ್ಲಿಮರ ಅಂಗಡಿಗಳನ್ನು ಸುಟ್ಟು ಹಾಕಿದ್ದನ್ನು ಕಣ್ಣು ಮುಂದೆ ಹಾದುಹೋದಂತೆ ಇಮ್ಮಿಯಾಜ್ ನಿರೂಪಿಸಿದ್ದಾರೆ. ಕೊನೆಗೆ ಅಮ್ಮನ ಕೊನೆಯ ಬಯಕೆ ಹಜ್ ಯಾತ್ರೆ ಮಾಡಿಸಿ ಧನ್ಯರಾಗುತ್ತಾರೆ. ಬೇಸರವಾಗದೇ ಓದಿಸಿಕೊಳ್ಳುವ ಗುಣ ಈ ಕೃತಿಗಿದೆ. ಇದಕ್ಕೆ ಇಮ್ಮಿಯಾಜ ಹುಸೇನ್‌ರವರು ಕೃತಜ್ಞತೆಗೆ ಪಾತ್ರರಾಗಿದ್ದಾರೆ. ಉಳಿದ ಬದುಕಿನ ಅನುಭವಗಳ ದಾಖಲೆ ಆತ್ಮಕಥನದ 2ನೇ ಸಂಪುಟವು ರಚನೆಯಾಗಲಿ ಎಂದು ಹಾರೈಸುತ್ತೇನೆ.

(ಕೃಪೆ: ಹೊಸತು ಏಪ್ರಿಲ್‌ 2021, ಬರಹ- ಡಾ.ಕೆ ಷರೀಫಾ)

--

ಹೆಜ್ಜೆ ಗುರುತುಗಳು ಕೃತಿಯ ಕುರಿತು ವಿಮರ್ಶೆ- ಕಾರುಣ್ಯ-ವಾರ್ತಾಭಾರತಿ

--

 

 

Related Books