`ಶರ್ಮಿಷ್ಠೆ’ ಬೇಲೂರು ರಘುನಂದನ್ ಅವರ ರಂಗಕೇಂದ್ರಿತ ನಾಟಕವಾಗಿದೆ. ಈ ಕೃತಿಯು ಸ್ತ್ರೀಯರ ಅಂತರಂಗದ ಅನನ್ಯ ಜಗತ್ತನ್ನು ಒಂದು ವಿಶಿಷ್ಟ ವಿನ್ಯಾಸದೊಳಗೆ ‘ಶರ್ಮಿಷ್ಠೆ’ ಎನ್ನುವ ರಂಗಕಾವ್ಯದಲ್ಲಿ ರೂಪಿಸಿದ್ದಾರೆ. ಈ ಹಿಂದೆ ಗಿರೀಶ್ ಕಾರ್ನಾಡರು ಪೌರಾಣಿಕ ಚೌಕಟ್ಟಿನಲ್ಲಿ ಮನುಷ್ಯ ಲೋಕದ ಅತಿರೇಕಗಳು, ಸುಖಲೋಲುಪತೆ ಮತ್ತು ಲಾಲಸೆಯನ್ನು ವಿವರಿಸಲು ‘ಯಯಾತಿ’ ನಾಟಕ ಕಟ್ಟಿಕೊಟ್ಟಿದ್ದರು. ಕಾದಂಬರಿ ಪ್ರಕಾರದಲ್ಲಿಯೂ ‘ಯಯಾತಿ’ ಪಾತ್ರಕಥನ ರೋಚಕವೂ ಕುತೂಹಲಕಾರಿಯೂ ಹೌದು. ಮಹಾಭಾರತದ ಪಾಂಡವರ ಪೂರ್ವಜರುಗಳ ಪೈಕಿ ಯಯಾತಿ ಒಂದು ವಿಶಿಷ್ಟ ಪುರಾಣ ಪಾತ್ರ. ಆತನಿಗೆ ಶರ್ಮಿಷ್ಠೆ ಮತ್ತು ದೇವಯಾನಿ ಎಂಬ ಇಬ್ಬರು ಹೆಂಡತಿಯರು. ಒಬ್ಬಳು ಶೂದ್ರಳು ಮತ್ತೊಬ್ಬಳು “ಶ್ರೇಷ್ಠ” ಕುಲದ ಪುರೋಹಿತ ಶುಕ್ರಾಚಾರ್ಯರ ಮಗಳು. ಮಾವನ ಶಾಪದಿಂದ ಅಳಿಯ ಯಯಾತಿಗೆ ಮುಪ್ಪು ಅಡರಿದಾಗ ಶರ್ಮಿಷ್ಠೆಯ ಮಗ ಪುರು ತನ್ನ ತಂದೆಯ ಮುಪ್ಪನ್ನು ಸ್ವೀಕರಿಸುತ್ತಾನೆ. ಹೀಗೆ ಸಾಗುವ ಪುರಾಣದ ಕಥಾನಕದಲ್ಲಿ ಯೌವನದ ಮತ್ತು ಮುಪ್ಪಿನ ಅಹಮಿಕೆ, ಭ್ರಮೆಗಳ ಪುಟ್ಟ ದರ್ಶನವಾಗುತ್ತದೆ. ಮಾನವ ಬದುಕಿನ ಮಜವಾದ ಸಂಕೀರ್ಣ ವಸ್ತುವಿನ ಮೂಲಕ ಗಿರೀಶ್ ಕಾರ್ನಾಡ್ “ಯಯಾತಿ” ಎಂಬ ಕಾಡುವಂಥ ನಾಟಕ ಕಟ್ಟಿಕೊಟ್ಟಿದ್ದನ್ನು ನಾವು ಬಲ್ಲೆವು. ನನಗೆ ಯಯಾತಿ ಕಥೆ ಪರಿಚಯವಾಗಿದ್ದು ಕಾರ್ನಾಡರ ನಾಟಕದಿಂದಲೇ. ಆದರೆ ಡಾ. ಬೇಲೂರು ರಘುನಂದನ್ ಅವರು ತುಂಬ ಕಾಡುವ ಅದೇ ಪುರಾಣದ ಸ್ತ್ರೀ ಪಾತ್ರವೊಂದರ ಮನೋರಂಗವನ್ನು ‘ಶರ್ಮಿಷ್ಠೆ’ ರಂಗಕಾವ್ಯದಲ್ಲಿ ಆಧುನಿಕ ಅಥವಾ ಸಮಕಾಲೀನ ಸೂಕ್ಷ್ಮ ಸಂವೇದನೆಗಳ ಜೊತೆ ಮುಖಾಮುಖಿಯಾಗಿಸಿದ್ದಾರೆ. ತುಂಬ ವಿದ್ವತ್‌ಪೂರ್ಣವಾಗಿ ಮತ್ತು ಸಮಕಾಲೀನ ಸಂವೇದನೆಗಳ ಜೊತೆ ಸಂವಾದಿಯಾಗಿ ಮೂಡಿಬಂದಿರುವ ಈ ರಂಗಕಾವ್ಯ ಕನ್ನಡದ ಅತ್ಯಂತ ಮಹತ್ವದ ರಂಗಕೃತಿ.
©2025 Book Brahma Private Limited.