ಬಾ ಕುವೆಂಪು ದರ್ಶನಕೆ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

Pages 688

₹ 750.00




Year of Publication: 2019
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು
Phone: 9448804905

Synopsys

ಕುವೆಂಪು ಅವರ ವ್ಯಕ್ತಿತ್ವದಂತೆಯೇ ಅವರ ಸಾಹಿತ್ಯ ಕೂಡ ಬಹುಮುಖಿಯಾದುದು. ದಿನನಿತ್ಯ ಎದುರಾಗುವ ಸಮಸ್ಯೆಗಳು, ಗೊಂದಲಗಳು, ಸಂದಿಗ್ಧಗಳು, ಸವಾಲುಗಳು, ಸಂಭ್ರಮ, ಸರಳತೆ, ಆದರ್ಶ, ಉತ್ಕಟತೆ, ಉಲ್ಲಾಸ, ಹೀಗೆ ಬದುಕಿನ ಎಲ್ಲಾ ಆಯಾಮಗಳು ಕುವೆಂಪು ಅವರ ಸೃಜನಶೀಲತೆಯನ್ನು ರೂಪಿಸಿವೆ. ಚರಿತ್ರೆಯಂತೆ ಸಮಕಾಲೀನತೆಯೂ, ಸಾಮಾಜಿಕತೆಯಂತೆ ಆಧ್ಯಾತ್ಮಿಕತೆಯೂ, ಆದರ್ಶದಂತೆ  ವಾಸ್ತವವೂ, ಅವರ ಸಾಹಿತ್ಯವನ್ನು ಪೊರೆದಿದೆ. ಕುವೆಂಪು ಅವರಿಗೆ ಸಾಹಿತ್ಯ ಬಿಡುಗಡೆಯ ಹಾದಿಯಾಗಿರುವಂತೆ ಭರವಸೆಯ ಬೆಳಕೂ ಆಗಿದೆ.  

ಕುವೆಂಪು ಅವರ ವಿಪುಲ ಸಾಹಿತ್ಯ ರಾಶಿಯನ್ನು ಗಮನಿಸುವ, ಪ್ರವೇಶಿಸುವ, ಪರಿಶೀಲಿಸುವ, ವಿಶ್ಲೇಷಿಸುವ, ಗುರುತಿಸುವ, ವಿಮರ್ಶಿಸುವ, ಕೆಲಸ ಸುಲಭವಲ್ಲ, ಹೀಗಿರುವಾಗ ಅವರ ನಾಲ್ಕು ದಶಕಗಳ ನಿರಂತರ ಓದು, ಗ್ರಹಿಕೆಯನ್ನು ವಿಮರ್ಶಕ, ಲೇಖಕ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ’ ಕುವೆಂಪು ಸಮಸ್ತ ಸಾಹಿತ್ಯ ಶೋಧದ ಮಾರ್ಗದಲ್ಲಿ ’ಬಾ  ಕುವೆಂಪು ದರ್ಶನಕೆ’ ಕೃತಿಯಲ್ಲಿ ಓದುಗರಿಗೆ ನೀಡಿದ್ದಾರೆ.

 

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Reviews

ಹೊಸ ಪುಸ್ತಕ- ಬಾ ಕುವೆಂಪು ದರ್ಶನಕೆ -ಪ್ರಜಾವಾಣಿ

ಕುವೆಂಪು ಸಾಹಿತ್ಯ ದರ್ಶನ

ಕುವೆಂಪು ಅವರ ಸಮಗ್ರ ಸಾಹಿತ್ಯದ ಬಗೆಗಿನ ಈ ಕೃತಿ ಒಂದು ಪಿಎಚ್.ಡಿ. ಅಧ್ಯಯನದಂತಿದೆ. ಆದರೆ ಅತಿಯಾದ ಅಡಿಟಿಪ್ಪಣಿಗಳ ಹಾವಳಿಯಿಲ್ಲದೆ ನೇರವಾದ  ವಿವರಣೆಗಳಿಂದ, ವಿಮರ್ಶೆಯ ಮಾತುಗಳಿಂದ, ಇತರರು ಈ ಹಿಂದೆ ಹೇಳಿದ ಅಭಿಪ್ರಾಯಗಳನ್ನು ಅನುಲಕ್ಷಿಸಿ ವಾದವನ್ನು ಮುಂದುವರಿಸುತ್ತಾ ಕುವೆಂಪು ಅವರ ಒಟ್ಟು ಸಾಹಿತ್ಯದ ನೆಲೆಯೇನು ಎನ್ನುವುದನ್ನು ನರಹಳ್ಳಿಯವರು ಪರಿಚಯಿಸುತ್ತಾ ಹೋಗುವುದರಿಂದ ಈ ಗ್ರಂಥ ವಾಚನೀಯವೂ ಆಗಿದೆ, ಅಧ್ಯಯನಕಾರರು ಮತ್ತೆ ಮತ್ತೆ ಓದಿ ತಮ್ಮ ಕುವೆಂಪು ಚಿಂತನೆಗೆ ಬಳಸಿಕೊಳ್ಳಬೇಕಾದ ರೆಫರೆನ್ಸ್ ಪುಸ್ತಕವೂ ಆಗಿದೆ.

ಪ್ರಾರಂಭದಲ್ಲಿಯೇ ನರಹಳ್ಳಿಯವರು ಕುವೆಂಪು ಅವರ ನಾಟಕ ಸಾಹಿತ್ಯ ಇದುವರೆಗೆ ಗಮನಿಸಿದ್ದಕ್ಕಿಂತ ಹೆಚ್ಚು ಮುಖ್ಯವಾದದ್ದು ಎಂದು ಆ ನಿಟ್ಟಿನ ಚರ್ಚೆಯಿಂದ ತಮ್ಮ ಗ್ರಂಥವನ್ನು ಪ್ರಾರಂಭಿಸಿದ್ದಾರೆ. ಆ ಮೇಲೆ 'ಕಾವ್ಯ', ಮೂರನೆಯ ಭಾಗದಲ್ಲಿ 'ಕಥನ' (ಕತೆ, ಕಾದಂಬರಿಗಳ ಅವಲೋಕನ), ನಾಲ್ಕನೆಯ ಭಾಗದಲ್ಲಿ 'ದರ್ಶನ' - ಹೀಗೆ ಕುವೆಂಪು ಸಾಹಿತ್ಯ ಶಿಖರಕ್ಕೆ ನಮ್ಮನ್ನು ಕರೆದೊಯ್ಯುತ್ತಾರೆ. ಕುವೆಂಪು ಅವರ ನಾಟಕ ಸಾಹಿತ್ಯವನ್ನು ಮೂರು ಘಟ್ಟಗಳಲ್ಲಿ ನರಹಳ್ಳಿಯವರು ಗುರುತಿಸುತ್ತಾರೆ. 1926ರಿಂದ 1932ರವರೆಗಿನ ಮೊದಲನೆಯ ಹಂತದಲ್ಲಿ 'ಜಲಗಾರ', 'ಸ್ಟಶಾನ ಕುರುಕ್ಷೇತ್ರಂ' ಮತ್ತು 'ರಕ್ತಾಕ್ಷಿ' ಇತ್ಯಾದಿ ಒಂಬತ್ತು ನಾಟಕಗಳು ಬಂದಿವೆ. 1944 ರಿಂದ 1948 ರ ಎರಡನೆಯ ಘಟ್ಟದಲ್ಲಿ 'ಶೂದ್ರ ತಪಸ್ವಿ', 'ಬೆರಳ್ಗೆ ಕೊರಳ್' ಮತ್ತು 'ಬಲಿದಾನ'ಗಳು ಅವರ ಮುಖ್ಯ ರಚನೆಗಳು. ಎರಡು ಹಂತಗಳ ನಡುವಿನ ಹನ್ನೆರಡು ವರ್ಷಗಳ ಆವಧಿ 'ಕಾನೂರು ಹೆಗ್ಗಡಿತಿ'ಯಂತಹ ಕಥನಗಳು ಮತ್ತು ಕವಿತೆಗಳ ಕಾಲ. ಕುವೆಂಪು ಅವರು ಕೊನೆಯದಾಗಿ ನಾಟಕ ಬರೆದದ್ದು 1974ರಲ್ಲಿ ('ಕಾನೀನೆ' ನಾಟಕ). ಕುವೆಂಪು ಅವರ ಪ್ರಗತಿಪರ ವೈಚಾರಿಕ ಪ್ರಜ್ಞೆ ದಟ್ಟವಾಗಿ ರೂಪುಗೊಂಡಿರುವುದು ಅವರ ನಾಟಕ ಸಾಹಿತ್ಯದಲ್ಲಿ ಎನ್ನುವಂತಹ ಮುಖ್ಯ ವಿಚಾರಗಳನ್ನು ನರಹಳ್ಳಿಯವರು - ಚರ್ಚಿಸಿದ್ದಾರೆ. ಈ ಭಾಗದಲ್ಲಿ ಸಾಂಸ್ಕೃತಿಕ ಸವಾಲುಗಳು' ಎನ್ನುವ ಅಧ್ಯಾಯವಿದೆ. ಅದು ಮೈಸೂರಿನ ಅವೈದಿಕ - ಶೂದ್ರ ಚಳುವಳಿಯನ್ನು; ಕುವೆಂಪು ಅವರು ರಾಷ್ಟ್ರೀಯತೆಯ ಪ್ರಭಾವ ಮತ್ತದರ ನಿಯಂತ್ರಣವನ್ನು ಒಂದು ಕಡೆ ಮತ್ತು ಪ್ರಧಾನ ಸಂಸ್ಕೃತಿಯ ವಿರುದ್ಧದ ಸಂಘರ್ಷ ಮತ್ತು ಜಾಗೃತಿಯನ್ನು ಇನ್ನೊಂದು ಕಡೆ ನಿರ್ವಹಿಸಿದ ರೀತಿಯನ್ನು ಗಮನಿಸುತ್ತದೆ. ಹೀಗೆ ಕುವೆಂಪು ಸಾಹಿತ್ಯದ ರಾಜಕೀಯ - ಸಾಮಾಜಿಕ ಆಯಾಮಗಳನ್ನು ಗಮನಿಸಿ ಕುವೆಂಪು ಅವರು ಈ ಸವಾಲುಗಳನ್ನು ಸ್ವೀಕರಿಸಿ ಎದುರಿಸಿದ ಕ್ರಮವೆ ಅವರ - ಸಾಹಿತ್ಯದ ಸ್ವರೂಪವನ್ನು ರೂಪಿಸಿದೆ ಎಂದು ನರಹಳ್ಳಿ ಹೇಳುತ್ತಾರೆ. ಎಲ್ಲಾ ನಾಟಕಗಳನ್ನು ವಿವರವಾಗಿ ಚರ್ಚಿಸುವ ಮೂಲಕ ಬಾ ಕುವೆಂಪು ಕುವೆಂಪು ಅವರ ನಾಟಕಗಳನ್ನು ಹೊಸಬೆಳಕಿನಲ್ಲಿ ಕಾಣಿಸಿದ್ದಾರೆ. ಅವರ ಪ್ರಕಾರ, ಜಲಗಾರ, ಶೂದ್ರ ತಪಸ್ವಿ ಹಾಗೂ ಬೆರಳ್‌ಗೆ ಕೊರಳ್ ಈ ಮೂರು ನಾಟಕಗಳು ಸಾಮಾಜಿಕ ಶ್ರೇಣೀಕರಣ ವ್ಯವಸ್ಥೆಯ ವರ್ಣಭೇದ ನೀತಿಯನ್ನು ಕುವೆಂಪು ಸೃಜನಶೀಲ ನೆಲೆಯಲ್ಲಿ ಎದುರಿಸಿದ ರೂಪಕಗಳಾಗಿವೆ' (ಪುಟ 100).  ಕುವೆಂಪು ಅವರ ಮೊದಲನೆಯ ಕವನ ಸಂಕಲನ 'ಕೊಳಲು' ಪ್ರಕಟವಾದದ್ದು 1930ರಲ್ಲಿ, ಅಷ್ಟರೊಳಗೆ - 'ಬೊಮ್ಮನಹಳ್ಳಿಯ ಕಿಂದರಿ ಜೋಗಿ' ಪ್ರಕಟವಾಗಿತ್ತು. ಮುಂದೆ ಜೋಗಿ ಮತ್ತು ಕಿಂದರಿ ಕುವೆಂಪು ಕಾವ್ಯದಲ್ಲಿ ಮುಖ್ಯ ರೂಪಕಗಳಾಗಿ ಪರಿವರ್ತಿತವಾಗಿವೆ. ಅವು ಗೊಲ್ಲ ಮತ್ತು ಕೊಳಲುಗಳಾಗಿವೆ ಎನ್ನುವ ನರಹಳ್ಳಿಯವರ ಒಳನೋಟ ಇಷ್ಟವಾಗುತ್ತದೆ. ಅವರು ಹೇಳುವ ಇನ್ನೊಂದು ಮಾತು ಕನ್ನಡದ ಇಬ್ಬರು ಮುಖ್ಯ ಕವಿಗಳಾದ ಬೇಂದ್ರೆ ಮತ್ತು ಕುವೆಂಪು ಅವರಲ್ಲಿ ಬೇಂದ್ರೆಯವರದು ಭಾವಗೀಶಾತ್ಮಕ ಪ್ರತಿಭೆಯಾದರೆ ಕುವೆಂಪು ಅವರದು ಕಥನ ಪ್ರತಿಭೆ - ಎನ್ನುವುದು. ಪ್ರಧಾನ ಸಂಸ್ಕೃತಿಗೆ ಪರ್ಯಾಯವೊಂದನ್ನು ರೂಪಿಸುವ ಕಾಳಜಿ ಕುವೆಂಪು ಕವಿತೆಗಳಲ್ಲಿ ಕಾಣಸಿಗುತ್ತದೆ ಎನ್ನುವುದು ಇಂತಹ ಇನ್ನೊಂದು ಒಳನೋಟ. ಹೀಗೆ ಕುವೆಂಪು ಕವನ ಸಂಕಲನಗಳನ್ನು ಪರಿಚಯಿಸುತ್ತಾ ಅವರ ಕಾವ್ಯದ ಬಗ್ಗೆ ಹೊಸಹೊಸ ವಿಚಾರಗಳನ್ನು ಮಂಡಿಸುತ್ತಾ ಹೋಗುವ ಈ ಪರಿ ಕಾವ್ಯಾಧ್ಯಯನದ ಒಂದು ಒಳ್ಳೆಯ ಮಾದರಿಯನ್ನು ಪರಿಚಯಿಸುತ್ತದೆ. ಕುವೆಂಪು ಅವರ ಕತೆಗಳು ಮತ್ತು ಕಾದಂಬರಿಗಳ ಬಗ್ಗೆಯೂ ನರಹಳ್ಳಿಯವರು ತೀರಾ ಹೊಸದಾದ ಮತ್ತು ಸಮಗ್ರವಾದ ನೋಟಗಳನ್ನು ಕೊಡುತ್ತಾರೆ. ಕಾನೂರು ಹೆಗ್ಗಡಿತಿಯಂತಹ ಕಾದಂಬರಿಗಳ ವೈಚಾರಿಕ ಆಕೃತಿ, ಪಾತ್ರಗಳ ವಿಶ್ಲೇಷಣೆ ಇತ್ಯಾದಿಗಳು ಆ ಅಧ್ಯಾಯಗಳನ್ನು ಆ ಕೃತಿಗಳ ಬಗ್ಗೆ ಬಂದ ಅತ್ಯುತ್ತಮ ವಿಮರ್ಶೆಯ ಪ್ರಬಂಧಗಳೆನಿಸುವಂತೆ ಮಾಡಿವೆ. ಅವುಗಳನ್ನು ವಿವರವಾಗಿ ಉದಾಹರಿಸುವ ಅವಕಾಶವಿಲ್ಲದ ಕಾರಣ ಇಲ್ಲಿ ಒಂದು ಒಳನೋಟವನ್ನು ಕೊಡುವ ಮೂಲಕ ನರಹಳ್ಳಿಯವರ ವಿಶ್ಲೇಷಣೆಯ ಸೊಗಸನ್ನು ತೋರಿಸಬಹುದು:

“ಜಿ. ಎಸ್. ಶಿವರುದ್ರಪ್ಪನವರಿಗೆ ನೀಡಿದ ಸಂದರ್ಶನದಲ್ಲಿ ಕುವೆಂಪು ಹೇಳುತ್ತಾರೆ; ಮಲೆಗಳಲ್ಲಿ ಮದುಮಗಳು ಬರೆಯೋ ಹೊತ್ತಿಗೆ ನನ್ನ ದೃಷ್ಟಿಯಲ್ಲಿ ಬದಲಾವಣೆ ಆಗಿತ್ತು. ಜೀವ - ಜಗತ್ತು - ಬ್ರಹ್ಮ ಈ ವಿಚಾರಗಳಲ್ಲಿ ಒಂದು ಅತ್ಯಂತ ಪರಿಣತ ಸ್ಥಿತಿಗೆ ಬಂದ ಮೇಲೆ ನಾನು ಅದನ್ನು ಬರೆದದ್ದು. ಈ ಕಾದಂಬರಿಯ ಮೊದಲಲ್ಲೇ ಹೇಳಿದೀನಲ್ಲ ಇಲ್ಲಿ ಯಾವುದೂ ಸಣ್ಣದಲ್ಲ ಸಾಹಿತ್ಯ ಇಲ್ಲಿ ಯಾರೂ ಮುಖ್ಯರಲ್ಲ ಇತ್ಯಾದಿ..... ಅದು ಕೇವಲ ಕಾದಂಬರಿಯ ಮಾತಲ್ಲ, ಸುಬ್ರಹ್ಮಣ್ಯ ಪರಿಪೂರ್ಣ ದೃಷ್ಟಿಯಿಂದ ನೋಡಿದಾಗ ಜೀವನದಲ್ಲೂ ನನಗೆ ಮೇಲು - ಕೀಳು ಎಂಬುದಕ್ಕೆ ಅರ್ಥವಿಲ್ಲ ಅನ್ನಿಸಿತ್ತು....” 'ರಾಮಾಯಣ ದರ್ಶನಂ ರಚನೆಯ ನಂತರವೂ ಕುವೆಂಪು ಅವರ ಅನುಭವ ಜಗತ್ತು, ದರ್ಶನ ಮತ್ತೊಂದು ಅಂಥದೇ ಮಹಾಕಾವ್ಯದ ಸ್ವರೂಪದ ಕೃತಿಯನ್ನು ಬೇಡಿದೆ, 'ಕಾನೂರು ಹೆಗ್ಗಡಿತಿ' ರಚನೆಯಲ್ಲಿ ಕುವೆಂಪು ಅವರಿಗೆ ಹೇಳಲು ಒಂದು ವಿಚಾರವಿತ್ತು. ಆ ವೈಚಾರಿಕ ಆಕೃತಿಯೇ ಹೊವಯ್ಯ. ಆದರೆ ಮಲೆಗಳಲ್ಲಿ ಮದುಮಗಳು ರಚನೆಯ ವೇಳೆಗೆ ಕುವೆಂಪು ಅವರಿಗೆ ಕಾದಂಬರಿ ವಿಚಾರ ಪ್ರತಿಪಾದನೆಯ ಸಾಧನವಲ್ಲ ಅನ್ನಿಸಿದೆ. ಅದು ಜೀವನಾನುಭವದ ದರ್ಶನ ಎಂಬ ಅರಿವು ಮೂಡಿದೆ'. ಹೀಗೆ (ಇಲ್ಲಿ ಜಿ.ಎಸ್.ಎಸ್. ಪುಸ್ತಕವನ್ನು ಉಲ್ಲೇಖಿಸಿದಂತೆ) ಲಭ್ಯ ಎಲ್ಲ ಮಾಹಿತಿಗಳನ್ನೂ, ಬರಹಗಳನ್ನೂ ಅವಲೋಕಿಸಿ ನರಹಳ್ಳಿಯವರು ಈ ಗ್ರಂಥವನ್ನು ಗ್ರಥಿಸಿದ್ದಾರೆ. ಕೊನೆಯ ಭಾಗದಲ್ಲಿ ಕುವೆಂಪು ಅವರ ಸಾಹಿತ್ಯ ಮೀಮಾಂಸೆ ಮತ್ತು ವೈಚಾರಿಕತೆಯನ್ನು, ಒಟ್ಟಿನಲ್ಲಿ ಅವರ ದರ್ಶನವನ್ನು ನರಹಳ್ಳಿಯವರು ಚರ್ಚಿಸಿದ್ದಾರೆ. ಅನುಬಂಧಗಳಲ್ಲಿ ಕುವೆಂಪು ಜೀವನ ವಿವರಗಳು ಮತ್ತು ಕೃತಿಗಳ ಮಾಹಿತಿಯಿದೆ. ಈ ಬಗೆಯ ವಿಮರ್ಶೆಯ ಕೃತಿಗಳು ಜನ ಸಾಮಾನ್ಯರಿಗೂ, ವಿದ್ಯಾರ್ಥಿಗಳಿಗೂ ಪ್ರಯೋಜನವಾಗುವಂತಹ ಕೃತಿಗಳು. ವಿಮರ್ಶೆಯ ಆಗತ್ಯ ಏನು ಎಂದು ತಿಳಿಯಬೇಕಾದರೆ ಇಂತಹ ಪುಸ್ತಕಗಳನ್ನು ನೋಡಬೇಕು.

ಡಾ. ಬಿ. ಜನಾರ್ದನ ಭಟ್ 01 ಡಿಸೆಂಬರ್‌ 2019

ಕೃಪೆ : ಹೊಸ ದಿಗಂತ

Related Books