ಅಂಗುಲ ಹುಳುವಿನ ಇಂಚು ಪಟ್ಟಿ

Author : ತಾರಿಣಿ ಶುಭದಾಯಿನಿ .ಆರ್

Pages 168

₹ 150.00




Year of Publication: 2021
Published by: ಬಂಡಾರ ಪ್ರಕಾಶನ
Address: ಮಸ್ಕಿ-584124, ರಾಯಚೂರು ಜಿಲ್ಲೆ
Phone: 9886407011

Synopsys

"ಅಂಗುಲ ಹುಳುವಿನ ಇಂಚು ಪಟ್ಟಿ" ವಿಮರ್ಶಕಿ, ಲೇಖಕಿ ಆರ್,ತಾರಿಣಿ ಶುಭದಾಯಿನಿ ಅವರ ವಿಮರ್ಶಾ ಸಂಕಲನ. ಬಂಡಾರ ಪ್ರಕಾಶನದ 43ನೇ ಮುದ್ರಣದ ವಿಮರ್ಶಾ ಲೇಖನಗಳ ಪುಸ್ತಕ ಇದಾಗಿದ್ದು, ಸಂಶೋಧನಾ ವಿದ್ಯಾರ್ಥಿಗಳು, ಉಪನ್ಯಾಸಕರ ಮೆಚ್ಚುಗೆಯಲ್ಲಿ ಓದುಗರ ಗಮನ ಸೆಳೆಯುತ್ತಿರುವ ಕೃತಿಯಾಗಿದೆ ಅಲ್ಲದೇ ಈ ಕೃತಿಯು ಕನ್ನಡದ ವಿಮರ್ಶೆಗೆ ಇರುವ ಚಹರೆಯಲ್ಲಿ ಅದನ್ನು ಶುದ್ದಾಂಗವಾದ ತಾತ್ವಿಕತೆಗಳ ಸ್ವರೂಪ ದಲ್ಲಿರುವುದಕ್ಕಿಂತ ಹೆಚ್ಚಾಗಿ ಸಾಹಿತ್ಯದ ಮುಖೇನ ಹೊರಹೊಮ್ಮುವ ಒಳನೋಟಗಳ ಮೀಮಾಂಸೆಯನ್ನು ಒಳಗೊಂಡಿದೆ. ಅಂದರೆ ಕನ್ನಡ ವಿಮರ್ಶೆಯು ಸಾಹಿತ್ಯದ ಮೂಲಕ ನಡೆಸುವ ಶೋಧಕಾರ್ಯವೂ ಆಗಿದೆ. ಅಲ್ಲದೇ ಇಪ್ಪತ್ತೊಂದನೆಯ ಶತಮಾನದ ಶುರುವಿನಲ್ಲಿಯೇ ಆರಂಭವಾದ ಸಂಸ್ಕೃತಿ ಪಚನದ ಪ್ರಕ್ರಿಯೆಯು ಸಾಹಿತ್ಯವನ್ನು ಅರ್ಥೈಸುವುದನ್ನೂ ತನ್ನ ಜೀರ್ಣಾಗ್ನಿಯಲ್ಲಿ ಒಳಗೊಂಡಿದೆ. ಶುದ್ಧ ಸಾಹಿತ್ಯ ಎನ್ನುವುದರ ಕಲ್ಪನೆಯು ಕಲೆಯ ಮೀಮಾಂಸೆಯನ್ನು ದಾಟಿ ಬಂದು ಬಹಳ ಕಾಲವಾಗಿದೆ.

About the Author

ತಾರಿಣಿ ಶುಭದಾಯಿನಿ .ಆರ್
(09 January 1971)

ತಾರಿಣಿ ಶುಭದಾಯಿನಿ ಆರ್. ಅವರು 1971 ಜನವರಿ 09ರಂದು ಮೈಸೂರಿನಲ್ಲಿ ಹುಟ್ಟಿದರು.  ಕನ್ನಡ ಮತ್ತು ಇಂಗ್ಲಿಷ್ ಸಾಹಿತ್ಯದಲ್ಲಿ ಅಧ್ಯಯನ ಮಾಡಿದವರು. ’ತೋಡಿರಾಗ, ಚಿತ್ತಗ್ಲಾನಿಯ ಮಾತು, ಒಂದು ತುಂಡು ಬೆಲ್ಲ’ ಎಂಬ ಕವನ ಸಂಕಲನ ಹೊರತಂದಿದ್ಧಾರೆ.  ಉಪನ್ಯಾಸಕಿಯಾಗಿದ್ದು, ಕನ್ನಡ ಸಾಹಿತ್ಯದ ಬಗ್ಗೆ ಹಲವಾರು ಉಪನ್ಯಾಸ ನೀಡಿದ್ದಾರೆ. ‘ಹೆಡೆಯಂತಾಡುವ ಸೊಡರು’ ಅವರ ವಿಮರ್ಶಾ ಕೃತಿ. ಸ್ತ್ರೀಶಿಕ್ಷಣ ಚರಿತ್ರೆಯ ಹೆಜ್ಜೆಗಳು ಅವರ ಮಾನವಿಕ ಕೃತಿಯಾಗಿದೆ. ಕರ್ನಾಟಕ ಲೇಖಕಿಯರ ಸಂಘದಿಂದ ಗುಡಿಬಂಡೆ ಪೂರ್ಣಿಮಾ ದತ್ತಿಪ್ರಶಸ್ತಿ, ಕಥಾರಂಗಂ ಪ್ರಶಸ್ತಿ, ಪ್ರೊ. ಡಿ.ಸಿ. ಅನಂತಸ್ವಾಮಿ ಸಂಸ್ಕರಣ ದತ್ತಿನಿಧಿ ಪ್ರಶಸ್ತಿ ಬೇಂದ್ರೆ ಗ್ರಂಥ ಬಹುಮಾನ ಮುಂತಾದ ಪ್ರಶಸ್ತಿಗಳು ಲಭಿಸಿವೆ. ಸ್ತ್ರೀವಾದಕ್ಕೆ ಹೊಸ ...

READ MORE

Reviews

‘ಅಂಗುಲ ಹುಳುವಿನ ಇಂಚುಪಟ್ಟಿ’ ಕೃತಿಯ ವಿಮರ್ಶೆ

ಮಂದ್ರ ಸ್ವರದ ಮೀಮಾಂಸೆ
ಸಾಹಿತ್ಯ ಪರಂಪರೆಯ ಸೂಕ್ಷ್ಮ ಓದಿನ ಮೂಲಕವೇ ಹೊಮ್ಮಿಸಬಹುದಾದ ಒಳನೋಟಗಳಿಗೆ ತಾರಿಣಿ ಶುಭದಾಯಿನಿಯವರ 'ಅಂಗುಲ ಹುಳುವಿನ ಇಂಚುಪಟ್ಟಿ ಕನ್ನಡ ಹಿಡಿದಿದೆ, ಸಾಹಿತ್ಯದ ಸಂವೇದನೆಯನ್ನು ಅದರ ಬೀಸು ಹಾಗೂ ವಿಸ್ತಾರಗಳಿಂದ ನೋಡುವುದು ಒಂದು ಕ್ರಮವಾದರೆ, ಅದನ್ನು ನಿರ್ಮಿಸುವ ಚಿಕ್ಕಚಿಕ್ಕ ಸಂಗತಿಗಳ ಮೂಲಕ ನೋಡುವುದು ಇನ್ನೊಂದು ಕ್ರಮ, ಇವೆರಡೂ ಪ್ರಕ್ರಿಯೆಗಳು ಸಂಧಿಸುವ ಬಿಂದುವಿನಲ್ಲಿ 'ಅಂಗುಲ ಹುಳುವಿನ ಇಂಚುಪಟ್ಟಿಯಿದೆ.

ಎ.ಕೆ ರಾಮಾನುಜನ್ ಸಾಹಿತ್ಯ ಮತ್ತು ಹೆಣೋಟ ಎಂಬ ಆರಂಭದ ಲೇಖನದಲ್ಲಿಯೇ ಳಲ್ಲಿ ತಾರಿಣಿಯವರು ಕಟ್ಟಲು ಹೊರಟಿರುವ ತಾತ್ವಿಕತೆಯ ಸುಳಿವು ಸಿಗುತ್ತದೆ. ದೊಡ್ಡ ದನಿಯಲ್ಲಿ ಬಿಚ್ಚಿ ಮಾತಾಡದ ರಾಮಾನುಜನ್ ಅವರ ಕಾವ್ಯವನ್ನು ವಿಮರ್ಶೆಯು ಮೈನರ್ ಕವಿಗಳ ಸಾಲಿಗೆ ಸೇರಿಸುತ್ತದೆ ಎಂಬಲ್ಲಿಯೇ ವಿಮರ್ಶೆಯ ಮಿತಿಯನ್ನು ಅವರು ಕಾಣಿಸುತ್ತಾರೆ. ಅಂಚು ಕೇಂದ್ರಗಳನ್ನು ಪಲ್ಲಟಿಸುವ ಮೂಲಕ ಈ ದ್ವಂದ್ವಗಳನ್ನು ನಿರಚನಗೊಳಿಸುವ ದಾರಿಯೊಂದನ್ನು ಇಂದಿನ ವಿಮರ್ಶೆಯು ಸೃಷ್ಟಿಸಿಕೊಳ್ಳಬೇಕಾಗಿದೆಯೆಂಬ ಸೂಚನೆ ಇಲ್ಲಿ ಸುಪ್ತವಾಗಿದೆಯೆನಿಸುತ್ತದೆ. ಇನ್ನೂ ಮುಂದುವರೆದು ಮೈನರ್‌ ಮೂಲಕವೇ ಮೇಜರ್‌ ಅನ್ನು ನಿರಚನಗೊಳಿಸುವ ಸನ್ನೆಗೋಲುಗಳನ್ನು ರಾಮಾನುಜನ್ ಅವರು ಹುಡುಕುತ್ತಿದ್ದರೇನೋ ಎಂಬ ಸಾಧ್ಯತೆಯೆಡೆಗೂ ಇಲ್ಲಿ ಸೂಚನೆಯಿದೆ. ಏರುದನಿಯ ಅಹಮಿಕೆಯ ಗುಣವನ್ನು ಬಿಟ್ಟು ಸೀತ್ವದ ಸೃಜನಶೀಲ ಗುಣವನ್ನು ಆತುಕೊಂಡ ರಾಮಾನುಜನ್ ಕಾವ್ಯವು ಅಳತೆಯ ಸಾಮರ್ಥ್ಯವನ್ನೇ ನಿರಚನಗೊಳಿಸುವ ಶಕ್ತಿಯನ್ನು ಪಡೆದುಕೊಂಡ ಬಗೆ ಇಲ್ಲಿ ಗೋಚರಿಸುತ್ತದೆ. ಅಡಗಿಸಿದ ಮೌನವನ್ನು ಮೀಟುವಂತಿರುವ ಈ ಸಣ್ಣ ಕೀಚಲು ಧ್ವನಿಗೆ ಇರುವ ಒಳಬಂಡಾಯದ ಸಾಧ್ಯತೆಯನ್ನು ಈ ಲೇಖನವು ತೋರಿಸುತ್ತದೆ.

ಹೆಣ್ಣಾಗುವ ಮೂಲಕ ಲೋಕವನ್ನು ನೋಡುವ ಇನ್ನೊಂದು ಸ್ಥಳವನ್ನು ನಿರ್ಮಿಸಿಕೊಳ್ಳುವ  ಸಾಧ್ಯತೆಯನ್ನು ಈ ಸಂಕಲನದ ಬಹುತೇಕ ಲೇಖನಗಳು ಒಳಗೊಂಡಿವೆ. ವೈದೇಹಿಯಿಂದ ಷೇಕ್ಸಪಿಯರ್‌ವರೆಗೂ ಈ ನೋಟದ ವಿಸ್ತಾರವಿದೆ. ಸ್ತ್ರೀಲೋಕದ ವಿದ್ರೋಹಾತ್ಮಕ ಪ್ರತಿರೋಧದ ಮಾದರಿಗಳನ್ನು ಈ ಇಬ್ಬರೂ ಲೇಖಕರು ರೂಪಿಸಿದ ಪಾತ್ರಗಳ ಮೂಲಕ ತಾರಿಣಿಯವರು ತೋರಿಸುತ್ತಾರೆ. ಹೆಣ್ಣು ಜಗತ್ತಿನ ಮೇಲೆ ಎರಗುವ ನಾಜೂಕು ಕ್ರೌರ್ಯವನ್ನು ಎದುರಿಸಲು ಬೇಕಾದ ಪ್ರತಿತಂತ್ರಗಳ ಹೆಣಿಗೆ ಸ್ತ್ರೀವಿಶಿಷ್ಟವಾದ ಜ್ಞಾನವೂ ಹೌದು. ವೈದೇಹಿಯವರ ಕಥಾನಾಯಕಿ ಅಕ್ಕು ತನ್ನ 'ಪಿರ್ಕಿತನ'ದ ಮೂಲಕವೇ ಕಾಣಿಸುವ ಲೋಕಸತ್ಯಗಳು, ತಮ್ಮ ಅನೂಹ್ಯ ವರ್ತನೆಗಳಿಂದ ಗಂಡಸರ ಅಧಿಕಾರವನ್ನೇ ನಿರಚನಗೊಳಿಸುವ ಅವರ ಹಲವು ಕಥೆಗಳ ನಾಯಕಿಯರ ತಂತ್ರಗಳು ನಮ್ಮ ನೋಟದಿಂದ ೩ ತಪ್ಪಿಸಿಕೊಂಡಿದ್ದ ಶಕ್ತಿಶಾಲೀ ಸ್ಥಳಗಳನ್ನೇ ದರ್ಶನ ಮಾಡಿಸುತ್ತವೆ. ತೀವ್ರವಾಗಿ ಬದುಕುವ ಮೂಲಕವೇ ವಿರೋಧಿ ನೆಲೆಗಳನ್ನು ಧ್ವಂಸಗೊಳಿಸುವ ರೀತಿಯನ್ನು ಶಿವರಾಮ ಕಾರಂತರ - ಸ್ತ್ರೀಪಾತ್ರಗಳಲ್ಲೂ ಲೇಖಕಿ ಕಾಣುತ್ತಾರೆ. ಷೇಕ್ಸಪಿಯರನ ಸಾಹಿತ್ಯದಲ್ಲಿಯೂ ಇಂಥ ಹೆಣ್ಣುಪಾತ್ರಗಳಿವೆ. 'ಹೆಣ್ಣಿನ ವಿದ್ರೋಹಾತ್ಮಕ ಚೈತನ್ಯವನ್ನು ಆತ ಜಾಣೆಯಿಂದ ನಿರ್ವಹಿಸುತ್ತಾನೆ' ಎಂದು ಗ್ರಹಿಸುವ ಮೂಲಕ ತಾರಿಣಿಯವರು ದೇಶ ಕಾಲಾತೀತವಾಗಿ ಹರಡಿರುವ ಈ ಬಿಂಬವನ್ನು ಏಕತ್ರಗೊಳಿಸುತ್ತಾರೆ.

ಸ್ತ್ರೀವಿಶಿಷ್ಟ ನೋಟಕ್ರಮಗಳಲ್ಲಿ ಮೂಡುವ ಹೊಸ ಮೀಮಾಂಸೆಯನ್ನು ಕಟ್ಟಿಕೊಳ್ಳುವ ಪ್ರಯತ್ನ ಇಲ್ಲಿ ಸಫಲವಾಗಿದೆ. ವೈದೇಹಿಯವರ 'ತಿಳಿಸಾರು', ನೋಡಬಾರದು ಚೀಲದೊಳಗನು' ಮುಂತಾದ ಕವಿತೆಗಳಲ್ಲೂ ಈ ಮೀಮಾಂಸೆಯ ಎಳೆಗಳಿವೆ. ಹೆಣ್ಣು ಅನುಭವದ ಈ ಒಳಕೋಣೆಗಳು ನಿರ್ಮಿಸುವ ವಿಮರ್ಶಾ ಮಾನದಂಡಗಳು ಸ್ಕೂಲದಿಂದ ಸೂಕ್ಷ್ಮಕ್ಕೆ ಚಲಿಸುವ ಸೂಚನೆಗಳಾಗಿವೆ. ತಮ್ಮ ಕಾಲವನ್ನು ಸದಾ ನಿರಚನೆ ಮಾಡಿಕೊಳ್ಳಬಲ್ಲ ಲೇಖಕರಷ್ಟೇ ಈ ನೋಟಗಳಿಗೆ ಬೆಳಕಾಗಬಲ್ಲರು. ಕಾಲವು ನಿರ್ಮಿಸುವ ಸ್ಕೂಲ ಅಭಿಪ್ರಾಯಗಳು ಹಾಗೂ ವ್ಯಕ್ತಿಗತ ಸಂಕೀರ್ಣತೆ ಎರಡನ್ನೂ ಗ್ರಹಿಸುವ ಮೂಲಕವೇ ವಿಮರ್ಶೆಯು ಸಮಗ್ರಗೊಳ್ಳುವುದು ಸಾಧ್ಯ ಲೇಖಕಿಯ ಇಂಟುಪಟ್ಟಿ ಅಂಥ ಹುಡುಕಾಟವನ್ನು ನಡೆಸಿದೆ.

ಮೀಮಾಂಸೆಯನ್ನು ಶೋಧಿಸಿಕೊಡುವ ಸವಾಲನ್ನು ಕನ್ನಡ ವಿಮರ್ಶೆ ಎತ್ತಿಕೊಂಡಿಲ್ಲ ಎಂಬ ಮಾತಿಗುತ್ತರವಾಗಿ ಇಂದು ಸಂಸ್ಕೃತಿಯೊಳಗಿನ ಬಹುಧ್ವನಿಗಳನ್ನು, ಅಂಚಿನಲ್ಲಿದ್ದ ಸ್ವರಗಳನ್ನು ಆಲಿಸುವ ಮೂಲಕ ಕಟ್ಟಿಕೊಳ್ಳಲಾಗುತ್ತಿರುವ ಹೊಸ ಮೀಮಾಂಸೆಗಳೊಂದಿಗೆ ಸಹಮತ ವ್ಯಕ್ತಪಡಿಸುತ್ತಲೇ ತಾರಿಣಿಯವರು ತಮ್ಮದೇ ಧ್ವನಿಯೊಂದನ್ನು ಇಲ್ಲಿ ದಾಕಲಿಸಿದ್ದಾರೆ. 

(ಕೃಪೆ: ಹೊಸಮನುಷ್ಯ, ಬರಹ : ಗೀತಾ ವಸಂತ)

Related Books