ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ

Author : ಬಿ. ಜನಾರ್ದನ ಭಟ್

₹ 375.00




Year of Publication: 2021
Published by: ಶ್ರೀರಾಮ ಪ್ರಕಾಶನ
Address: ಮಂಡ್ಯ.

Synopsys

ಬಿ.ಜನಾರ್ದನ ಭಟ್ ಅವರ ‘ಸಾಹಿತ್ಯ ವಿಮರ್ಶೆ: ಒಂದು ಪ್ರವೇಶಿಕೆ’ ಒಂದು ಅಧ್ಯಯನ ಗ್ರಂಥವಾಗಿದೆ. ಜಗದಗಲದ ಸಾಹಿತ್ಯಕ ವಿದ್ಯಮಾನಗಳ ಬಗೆಗೆ, ಆಧುನಿಕ ಕನ್ನಡ ಸಾಹಿತ್ಯದ ಬೆಳವಣಿಗೆಯ ಕುರಿತು, ಪ್ರಯೋಗಗಳ ಹಾಗೂ ಅದರ ಆಶೋತ್ತರಗಳ ಕುರಿತು ವಿವರವಾಗಿ ಅಧಿಕೃತವಾಗಿ ಮಾತಾಡಬಲ್ಲ, ಸಮೃದ್ಧವಾದ ಓದು, ಅಧ್ಯಯನ ನಡೆಸಿದ ವಿರಳ ವಿದ್ವಾಂಸರಾಗಿಯೂ ಕೂಡ ಬಿ.ಜನಾರ್ದನ ಭಟ್ ಗುರುತಿಸಲ್ಪಡುತ್ತಾರೆ. ಸಾಹಿತ್ಯಾವಲೋಕನದ ರಸಜ್ಞತೆ, ಹೊಸದೃಷ್ಟಿ, ಒಳನೋಟ, ಸೂಕ್ಷ್ಮಚಿಂತನ, ತುಲನಾತ್ಮಕ ನೋಟ ಅವರ ವಿಮರ್ಶೆಯಲ್ಲಿ ಒಡೆದುಕಾಣುವ ಆಂಶಗಳು. ಪಾಶ್ಚಾತ್ಯ ಸಾಹಿತ್ಯ ವಿಮರ್ಶೆ ಹಾಗೂ ಭಾರತೀಯ ಕಾವ್ಯ ಮೀಮಾಂಸೆ ಇವೆರಡರ ಆಳವಾದ ಅಧ್ಯಯನ, ಜಿಜ್ಞಾಸೆ ಡಾ.ಭಟ್ ಅವರ ವಿಮರ್ಶೆಯ ವೈಶಿಷ್ಟ್ಯ. ಸಮಗ್ರತೆಯೇ ಅವರ ವಿಮರ್ಶೆಯ ಗುರಿ ಹಾಗೂ ಬಹುಮುಖ್ಯ ಕಾಣಿಕೆ. ಪ್ರಸ್ತುತ ಕೃತಿ, ‘ಸಾಹಿತ್ಯ ವಿಮರ್ಶೆ: ಒಂದು ಕೈಪಿಡಿ’ ಕನ್ನಡದ ವಿಮರ್ಶೆಯ ಕ್ಷೇತ್ರಕ್ಕೆ ಅವರು ನೀಡುತ್ತಿರುವ ಬಹು ಮೌಲಿಕವಾದ ಕೃತಿ.

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Reviews

‘ಸಾಹಿತ್ಯ ವಿಮರ್ಶೆ; ಒಂದು ಪ್ರವೇಶಿಕೆ’ ಕೃತಿಯ ವಿಮರ್ಶೆ

ಕನ್ನಡ ಸಾಹಿತ್ಯ ವಿಮರ್ಶೆಗೆ ಒಂದು ಮೌಲಿಕ ಕೊಡುಗೆ; 

ಬಿ. ಜನಾರ್ದನ ಭಟ್ ಅವರು ನಾಡಿನ ಶ್ರೇಷ್ಠ ಲೇಖಕರಲ್ಲಿ ಒಬ್ಬರು. ಸೃಜನ ಸೃಜನೇತರ ಈ ಎರಡೂ ಪ್ರಕಾರಗಳಲ್ಲೂ ಸಮಾನ ಪ್ರತಿಭೆ, ಪ್ರಭುತ್ವವನ್ನು ಮೆರೆದ ಶ್ರೇಯಸ್ಸು ಅವರಿಗೆ ಸಲ್ಲುತ್ತದೆ. ಅವರು ಆಂಗ್ಲ ಸಾಹಿತ್ಯವನ್ನು ಓದಿ, ಬೋಧಿಸಿಯೂ ಕನ್ನಡದ ಹಿರಿಮೆ ಗರಿಮೆಯನ್ನು ಎತ್ತಿ ಹಿಡಿಯಲು ಅವಿರತವಾಗಿ ಪ್ರಯತ್ನಿಸುತ್ತಾ ಬಂದಿದ್ದಾರೆ. ಮಾತು ಮತ್ತು ಕೃತಿಗಳ ನಡುವೆ ವಿರೋಧಾಭಾಸ ಎದ್ದು ಕಾಣುವ ಇವತ್ತಿನ ಸಂದರ್ಭದಲ್ಲಿ ಅವರು ಒಬ್ಬ ಅಪರೂಪದ ವ್ಯಕ್ತಿಯಾಗಿ, ಲೇಖಕರಾಗಿ, ವಿಮರ್ಶಕರಾಗಿ ನಮ್ಮ ಗಮನ ಸೆಳೆಯುತ್ತಾರೆ. ಕತೆ, ಕಾದಂಬರಿ, ವಿಮರ್ಶೆ, ಅನುವಾದ, ಮಕ್ಕಳ ಸಾಹಿತ್ಯ, ಅಂಕಣ ಸಾಹಿತ್ಯ, ಗ್ರಂಥ ಸಂಪಾದನೆ, ಜೀವನ ಚರಿತ್ರೆ ಹೀಗೆ ವಿವಿಧ ಕ್ಷೇತ್ರಗಳಲ್ಲಿ ಕೃಷಿ ಮಾಡಿ 80ಕ್ಕೂ ಹೆಚ್ಚು ಕೃತಿಗಳನ್ನು ರಚಿಸಿರುವ ಡಾ. ಭಟ್ ಅವರದು ಸಾಂಪ್ರತ ಕನ್ನಡ ವಾಙ್ಮಯದಲ್ಲಿ ವಿಶಿಷ್ಟ ಛಾಪು. 

ಡಾ. ಜನಾರ್ದನ ಭಟ್ ಅವರದು ನಾನಾ ಬಗೆಯ ವ್ಯಕ್ತಿತ್ವ. ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಅವರದು ಬಿಡುವರಿಯದ ಓದು ಹಾಗೂ ಬರವಣಿಗೆ. ನಮ್ಮ ಹಿಂದಿನ ತಲೆಮಾರಿನ ವಿದ್ವಾಂಸ ಕವಿಗಳಲ್ಲಿರುವಂತೆ ಆಳವಾದ ಚಿಂತನೆ-ದರ್ಶನಗಳಿಂದ, ವಿಚಾರ ವಿಮರ್ಶೆಗಳಿಂದ ಅವರ ಕೃತಿಗಳು ಅನೇಕ ದೃಷ್ಟಿಯಿಂದ ನಮ್ಮ ಗಮನಸೆಳೆಯುತ್ತದೆ. ಇಂಗ್ಲಿಷ್ ಪ್ರಾಧ್ಯಾಪಕರಾಗಿ ಕೆಲಸ ಮಾಡಿದರೂ ಕನ್ನಡ ವಾಙ್ಮಯವನ್ನು ಶ್ರೀಮಂತಗೊಳಿಸಲು, ಸಮೃದ್ಧಗೊಳಿಸಲು ಅವರು ನಿರಂತರವಾಗಿ ಶ್ರಮಿಸುತ್ತಾ ಬಂದಿರುವುದು ಉಲ್ಲೇಖನೀಯ ಅಂಶ. ನಮ್ಮ ಸಾಹಿತ್ಯ ಶಕ್ತಿವತ್ತಾಗುವ ಪರಿಸರವನ್ನು ನಿರ್ಮಿಸಲು ಅವರು ಮಹತ್ವದ ಯೋಗದಾನವನ್ನು ನೀಡಿದ್ದಾರೆ. ಜಾಗತಿಕ ಸಾಹಿತ್ಯವನ್ನು ಓದಿ ಅನುಭವಿಸಿ ಅಲ್ಲಿನ ವೈವಿಧ್ಯಮಯ  ಅನುಭವವನ್ನು ಕನ್ನಡ ಸಹೃದಯರಿಗೆ ಭಾಷಾಂತರದ ಮೂಲಕ ಮೊಗೆ ಮೊಗೆದು ಕೊಟ್ಟ ಶ್ರೇಯಸ್ಸು ಡಾ. ಭಟ್ ಅವರಿಗೆ ಸಲ್ಲುತ್ತದೆ.

`ಸಾಹಿತ್ಯ ವಿಮರ್ಶೆ; ಒಂದು ಪ್ರವೇಶಿಕೆ' ಇದು ಡಾ. ಜನಾರ್ದನ ಭಟ್ ಅವರ ಇತ್ತೀಚಿನ ಮಹತ್ವದ ಕೃತಿ. ಹೆಸರೇ ಸೂಚಿಸುವಂತೆ ಈ ಗ್ರಂಥ ವಿಮರ್ಶೆ ಎಂದರೇನು? ಅದು ನಡೆದು ಬಂದದಾರಿ, ಅದರ ಆಳ ಅಗಲ ವೈಭವ, ಕನ್ನಡದಲ್ಲಿ ವಿಮರ್ಶೆ ಇಟ್ಟ ಹೆಜ್ಜೆ, ತೊಟ್ಟ ರೂಪದ ಸಮಗ್ರ ದರ್ಶನವನ್ನು ಅನಾವರಣಗೊಳಿಸುವಲ್ಲಿ ಯಶಸ್ವಿಯಾಗಿದೆ. ವಿಮರ್ಶೆಯ ವೈಧಾನಿಕತೆಯನ್ನು ಕರಾರುವಕ್ಕಾಗಿ, ಖಚಿತವಾಗಿ, ನೇರವಾಗಿ, ಸ್ಪಷ್ಟವಾಗಿ ವಿಶ್ಲೇಷಿಸಿರುವುದು ಈ ಕೃತಿಯ ಧನಾತ್ಮಕ ಅಂಶ. ಬಹುಭಾಷಿಕ ಸಂವೇದನೆಯನ್ನು ಮೈಗೂಡಿಸಿಕೊಂಡಿರುವ ಡಾ. ಭಟ್ ಅವರು ಭಾರತೀಯ ಕಾವ್ಯ ಮೀಮಾಂಸೆಯ ತತ್ವಗಳನ್ನು ಗಮನಿಸಿ ಇಂಗ್ಲಿಷ್ ಸಾಹಿತ್ಯ ವಿಮರ್ಶೆಯ ಕ್ರಮವನ್ನು ಮಾಡುವ ಪರಿ ಬಲು ಸೊಗಸಾಗಿದೆ. ಹಾಗೆಯೇ ಪಾಶ್ಚಾತ್ಯ, ಸಾಹಿತ್ಯ ಸಿದ್ಧಾಂತಗಳನ್ನು ಅಳವಡಿಸಿಕೊಂಡು ಕನ್ನಡ ಸಾಹಿತ್ಯದ ವಿಮರ್ಶೆ ಮಾಡುವ ಕ್ರಮದಲ್ಲೂ ವಿನೂತನ ಮಾರ್ಗವನ್ನು ತೆರೆದು ತೋರಿಸಿದ್ದಾರೆ. ಸ್ವತಃ ಒಳ್ಳೆಯ ಕತೆಗಾರ, ಕಾದಂಬರಿಕಾರರಾಗಿರುವ ಅವರ ವಿಮರ್ಶಾಕ್ರಮದಲ್ಲಿ ಹೊಸ ಹೊಸ ಒಳನೋಟ, ಮೌಲ್ಯ ಮಾಪನ ಗುಣ, ವಿಮರ್ಶೆಯ ವಿವೇಕ ಸೂಕ್ಷ್ಮ ಸಾಹಿತ್ಯಾನುಸಂಧಾನ, ಅನ್ವೇಷಣಾ ಪ್ರವೃತ್ತಿ ಎದ್ದು ಕಾಣುತ್ತದೆ. ಪ್ರಸ್ತುತ ಕೃತಿಯಲ್ಲಿಯೂ ಒಟ್ಟು ವಿಮರ್ಶೆಯ ಸ್ವರೂಪವನ್ನು ಅರ್ಥಪೂರ್ಣವಾಗಿ ಪ್ರತಿಪಾದಿಸಿದ್ದಾರೆ. ಅಪಾರವಾದ ವಿದ್ವತ್ತು, ವ್ಯಾಪಕ ಅಧ್ಯಯನ, ಸೃಜನಶೀಲ ಪ್ರತಿಭೆಯಿಂದ ಅನನ್ಯವಾದ ವ್ಯಕ್ತಿತ್ವವನ್ನು ಪಡೆದಿರುವ ಡಾ. ಭಟ್ ಅವರು ರಚಿಸಿರುವ ಈ ಗ್ರಂಥ ವಿಮರ್ಶಾ ಪ್ರಸ್ಥಾನಗಳ ಚರಿತ್ರೆಯೂ ಆಗಿರುವುದು ವಿಶೇಷ. 

ಭಾಗ ಒಂದರಲ್ಲಿ ಸಾಹಿತ್ಯ ವಿಮರ್ಶೆಯ ಒಟ್ಟು ನೋಟ ದಾಖಲಾಗಿದೆ. ಇಂಗ್ಲಿಷ್‌ನಲ್ಲಿ `ಕ್ರಿಟಿಸಿಸಮ್' ಈ  ಪದವನ್ನು ಜಾನ್ ಡ್ರೆಂಡೆನ್ 1668ರಲ್ಲಿ ಬಳಸಿದ. ಆಧುನಿಕ ಸಾಹಿತ್ಯ ವಿಮರ್ಶೆಯ ಒಂದು ಒಳ್ಳೆಯ ವ್ಯಾಖ್ಯಾನ ಅಂದರೆ `ಸಾಹಿತ್ಯ ವಿಮರ್ಶೆ' ಅನ್ನುವುದು ಸಾಹಿತ್ಯ ಕೃತಿಗಳ ಲಕ್ಷಣವನ್ನು ವಿವರಿಸುವ, ವರ್ಗೀಕರಿಸುವ, ವಿಶ್ಲೇಷಿಸುವ, ವ್ಯಾಖ್ಯಾನಿಸುವ ಮತ್ತು ಮೌಲ್ಯಮಾಪನ ಮಾಡುವ ಅಧ್ಯಯನ ಕ್ರಮದ ಹೆಸರು' ಎಂ. ಎಚ್. ಅಬ್ರಾಮ್ಸ್ನದು. ಅನಂತರ ಸಾಹಿತ್ಯ ವಿಮರ್ಶೆಯ ಉಪಯೋಗದ ಬಗೆಗೆ ಬೇರೆ ಬೇರೆ ರೀತಿಯ ಅಪೇಕ್ಷೆಗಳು ಆಧುನಿಕ ಸಮಾಜಗಳಲ್ಲಿ ಗುರುತಿಸಲ್ಪಟ್ಟವು ಎಂಬುದನ್ನು ನಿಖರವಾಗಿ ವಿಶ್ಲೇಷಿಸಿರುವುದು ಈ ಕೃತಿಯ ಅನನ್ಯತೆ. ವಿಮರ್ಶೆ ಎಂದರೇನು? ಅದರ ಮೂರು ಆಯಾಮಗಳು, ಶಿಕ್ಷಣದಲ್ಲಿ ಸಾಹಿತ್ಯ, ಸಾಹಿತ್ಯ ಶಿಕ್ಷಣ  ಮತ್ತು ವಿಮರ್ಶೆ, ವಿಮರ್ಶೆಯ ವಿವಿಧ ಪ್ರಸ್ಥಾನಗಳು, ಪ್ರಾಯೋಗಿಕ ವಿಮರ್ಶೆ, ಕನ್ನಡದಲ್ಲಿ ಕಾಣಿಸಿಕೊಂಡ ಕೃತಿ ವಿಮರ್ಶೆ ಹೀಗೆ ಸಾಹಿತ್ಯ ವಿಮರ್ಶೆಯ ಕ್ಷೇತ್ರದಲ್ಲಿ ಕಾಲ ಕಾಲಕ್ಕೆ ನಡೆದ ಸಾಂಸ್ಕೃತಿಕ ಪಲ್ಲಟ, ವಿದ್ಯಮಾನಗಳನ್ನು ಯಾವುದೇ ಗೊಂದಲವಿಲ್ಲದೆ ವಿವಿಧ ಸಾಕ್ಷ್ಯಾಧಾರಗಳೊಂದಿಗೆ ನಿರೂಪಿಸಿರುವುದು ಮೆಚ್ಚತಕ್ಕ ಸಂಗತಿ.

ಈ ಕೃತಿಯ ಭಾಗ ಎರಡರಲ್ಲಿ ಸಾಹಿತ್ಯ ವಿಮರ್ಶೆಯ ವಿವಿಧ ಪ್ರಸ್ಥಾನಗಳ ವಿವರಣೆ, ವಿಶ್ಲೇಷಣೆ ಸೊಗಸಾಗಿ ಮೂಡಿಬಂದಿದೆ. ಕರ್ತೃ ಕೇಂದ್ರಿತ, ಕೃತಿನಿಷ್ಠ, ಸಮಾಜ ನಿಷ್ಠ, ತೌಲನಿಕ ಸಾಹಿತ್ಯ ವಿಮರ್ಶೆ, ವಾಚಕ ಸ್ಪಂದನ ಮತ್ತು ಸ್ವೀಕಾರ ಸಿದ್ಧಾಂತಗಳನ್ನು ಅಲ್ಲಿನ ಕಾಲಕಾಲದ ಬೆಳವಣಿಗೆ, ಬದಲಾವಣೆಗಳನ್ನು ಮನಮುಟ್ಟುವಂತೆ ವಿವರಿಸುವಲ್ಲಿ ಡಾ. ಭಟ್ ಅವರು ಯಶಸ್ವಿಯಾಗಿದ್ದಾರೆ.

ಸಾಹಿತ್ಯ ವಿಮರ್ಶೆಯ ಅಧ್ಯಯನದ ಸಂದರ್ಭದಲ್ಲಿ ಲಾಕ್ಷಣಿಕರ ಚಿಂತನೆಗಳನ್ನು ಅವಲೋಕನ ಮಾಡುವುದು ತೀರಾ ಅಗತ್ಯ. ಇದರ ಔಚಿತ್ಯವನ್ನು ಅರಿತು ಭಾಗ ಮೂರರಲ್ಲಿ ಅರಿಸ್ಟಾಟಲ್, ಲಾಂಜೆನಸ್, ನಾರ್ಥ್ರಪ್ ಫ್ರೆಂಚ್, ಭರತ,ಆನಂದವರ್ಧನ, ಧನಂಜಯ, ಅಭಿನವ ಗುಪ್ತ ಇವರ ಕುರಿತಾದ ಲೇಖನ ಸೇರ್ಪಡೆಗೊಳಿಸಿರುವುದು ಈ ಕೃತಿಯ ಸಮಗ್ರತೆಯನ್ನು ಮತ್ತಷ್ಟು ಹೆಚ್ಚಿಸಿದೆ. ಸಾಹಿತ್ಯ ವಿಮರ್ಶೆಗೆ ನೂತನ ಆಯಾಮ ಜೋಡಿಸಿದ ಮ್ಯಾಥ್ಯೂ ಆರ್ನಾಲ್ಡ್, ಎಲಿಯಟ್, ಲೀವಿಸ್, ಐ. ಎ. ರಿಚರ್ಡ್ಸ್ ಮೊದಲಾದವರ ವಿಚಾರಧಾರೆಯನ್ನು ಮುಖ್ಯ ಪರಿಕಲ್ಪನೆಯ ಭಾಗವಾಗಿಯೇ ತಂದಿರುವುದು ಪುನರಾವರ್ತನೆಯನ್ನು ತಪ್ಪಿಸಿದಂತೆಯೂ ಆಗಿದೆ. ಸಾಹಿತ್ಯ ವಿಮರ್ಶೆಯನ್ನು ಕುರಿತಂತೆ ಸಿ. ಎನ್. ರಾಮಚಂದ್ರನ್, ಓಎಲ್‌ಎನ್, ಇನಾಂದಾರ್, ಶೇಷಗಿರಿರಾವ್ ಮೊದಲಾದವರು ಕೃತಿ  ರಚಿಸಿರುವ ಕೃತಿಗಿಂತ ಪ್ರಸ್ತುತ ಕೃತಿ ಸಾಕಷ್ಟು ಭಿನ್ನವಾಗಿರುವುದು,  ಸಾಹಿತ್ಯದ ವಿದ್ಯಾರ್ಥಿಗಳಿಗೆ, ಆಸಕ್ತರಿಗೆ ಒಳ್ಳೆಯ ಕೈಪಿಡಿಯಂತಿರುವುದು ವಿಶೇಷ. ಅನುಬಂಧದಲ್ಲಿ ಡಾ. ಭಟ್ ಅವರೇ ಬರೆದಿರುವ ಕೆಲವು ಮಾದರಿ ವಿಮರ್ಶೆಗಳಿದ್ದು ಕನ್ನಡದಲ್ಲಿ ಬಂದ ಯಾವ ಕೃತಿಗಳಲ್ಲೂ ಈ ನಮೂನೆ ಕಾಣಸಿಗದು. ಪ್ರಾಯೋಗಿಕ ವಿಮರ್ಶೆಯ ಹಿನ್ನೆಲೆಯಲ್ಲಿ ಕವಿತೆ, ರೂಪನಿಷ್ಠ ವಿಧಾನ, ಕಾದಂಬರಿ ರಾಚನಿಕ ವಿಧಾನ ಎಂದು ವರ್ಗೀಕರಿಸಿ ಒಳ್ಳೆಯ ಕೆಲವು ಮಾದರಿಗಳನ್ನು ನೀಡಿರುವುದು ಈ ಕೃತಿಯ ವೈಶಿಷ್ಟ್ಯ. ಸಾಹಿತ್ಯದ ಅಂಗೋಪಾಂಗಗಳಲ್ಲಿ ಒಂದಾದ ವಿಮರ್ಶೆಯ ವೈಧಾನಿಕತೆಯ ವಿಭಿನ್ನ ನೆಲೆಗಳನ್ನು ಇಲ್ಲಿ ಆಮೂಲಾಗ್ರವಾಗಿ ಬಿಜ್ಞಾಸೆಗೆ ಗುರಿಪಡಿಸಲಾಗಿದೆ. ಸಾಹಿತ್ಯವನ್ನು ಕಲಿಯುವುದು ಅಂತ ಇಲ್ಲ. ಈಗಾಗಲೇ ಬರೆದಿರುವ ಸಾಹಿತ್ಯವನ್ನು ವಿಮರ್ಶಿಸುವುದು ಸಾಹಿತ್ಯ ಶಿಕ್ಷಣದ ಮುಖ್ಯ ಪ್ರಕ್ರಿಯೆ. ಸಾಹಿತ್ಯವನ್ನು ಕಲಿಸುವುದು ಅಸಾಧ್ಯ ಎಂಬ ಮಿತಿಯ ಮಾತು ಇಲ್ಲಿದೆ.

• ಕೃತಿ ವಿಮರ್ಶೆಗೆ ಎಲ್ಲರೂ ಒಪ್ಪಬಹುದಾದ ಒಂದು ಮಾನದಂಡವನ್ನು, ಒಂದು ಸೂಕ್ತ ವಿಧಾನವನ್ನು ಕಂಡು ಹುಡುಕಲು ಸಾಹಿತ್ಯ ಚಿಂತಕರು ಪ್ರಯತ್ನಿಸುತ್ತಲೇ ಬಂದಿದ್ದಾರೆ. ಇಂತಹ ಪ್ರಯತ್ನಗಳು ಕಾಲಕಾಲಕ್ಕೆ ನಡೆಯುತ್ತಲೇ ಇರುತ್ತವೆ. ಅಲ್ಲದೆ ಒಂದು ಪಂಥವು ಸಾಹಿತ್ಯದ ಅಧ್ಯಯನಕ್ಕೆ ಬೇಕಾದ ಎಲ್ಲ ಉಪಕರಣಗಳನ್ನು ಒದಗಿಸಲು ಸಾಧ್ಯವಿಲ್ಲ. ಉದಾಹರಣೆಗೆ ನವ್ಯ ವಿಮರ್ಶೆಯ `ಸೂಕ್ಷö್ಮ ಓದುವಿಕೆ' ಕವಿತೆಗಳು ಮತ್ತು ಸಣ್ಣಕತೆಗಳನ್ನು ಅಧ್ಯಯನ ಮಾಡಲು ಉಪಯುಕ್ತವಾಗಿದೆ ; ಆದರೆ ಕಾದಂಬರಿಗೆ ಉಪಯುಕ್ತವಲ್ಲ. ಕಾದಂಬರಿಗೆ ಮಾರ್ಕ್ಸ್ವಾದಿ ವಿಮರ್ಶೆಯನ್ನೋ, ಸ್ತ್ರೀ ವಾದಿ ವಿಮರ್ಶೆಯನ್ನೋ ಬಳಸಿದ ಹಾಗೆ ಕವಿತೆಗಳಿಗೆ ಇವುಗಳನ್ನು ಬಳಸಿದರೆ ಪ್ರಯೋಜನವಾಗದು. ಅರಿಸ್ಟಾಟಲ್‌ನ ಅಥವಾ ಭರತನ ಪರಿಕಲ್ಪನೆಗಳು ನಾಟಕಕ್ಕೆ ಸೂಕ್ತವಾಗಿವೆ ; ಆದರೆ ಸಣ್ಣ ಕವಿತೆಗಳಿಗೆ ಉಪಯುಕ್ತವಲ್ಲ. ಹಾಗಾಗಿ ಹಲವು ಸಿದ್ಧಾಂತಗಳು ಮತ್ತು ಪಂಥಗಳು ಸಾಹಿತ್ಯದ ಅಧ್ಯಯನದಲ್ಲಿ ಹುಟ್ಟಿಕೊಳ್ಳುತ್ತಲೇ ಇವೆ. ಅದರ ಚರಿತ್ರೆಯೇ ಇಂತಹ ವಿಮರ್ಶೆಯ ಕೈಪಿಡಿಗಳ ವಸ್ತುವಿಷಯವಾಗಿರುತ್ತದೆ.

• ಸಾಹಿತ್ಯ ವಿಮರ್ಶೆಯನ್ನು ಒಂದು ಮರದ ರೂಪಕದಲ್ಲಿ ಹೇಳುವುದಾದರೆ ಆ ಮರದ ಬೇರು ಅಂದರೆ ಸಾಹಿತ್ಯ ಮೀಮಾಂಸೆ. ಈ ಭಾಗದಲ್ಲಿರುವುದು ಸಾಹಿತ್ಯ ತತ್ವಗಳ ಚಿಂತನೆ. ಯಾವ ನಿರ್ದಿಷ್ಟ ಕೃತಿಯ ವಿಮರ್ಶೆ ಆಗಿರದೆ, ಉತ್ಕೃಷ್ಟ ಅಭಿಜಾತ ಕೃತಿಗಳನ್ನು  ಉದಾಹರಣೆಗೆ ಬಳಸಿಕೊಂಡು, ಸಾಹಿತ್ಯದ ತತ್ವಗಳನ್ನು ಚಿಂತಿಸುವುದರಿಂದ ಈ ಹೆಸರು ಬಂದಿದೆ. ಈ ಮರದ ಕಾಂಡ ಮತ್ತು ದೊಡ್ಡ ಶಾಖೆಗಳು ಅಂದರೆ ವಿವಿಧ ಆಧುನಿಕ ವಿಮರ್ಶಾ ಪ್ರಸ್ಥಾನಗಳು, ಈ ಮರದ ಸಣ್ಣ ಕೊಂಬೆ ರೆಂಬೆಗಳು, ಹೂವು, ಹಣ್ಣುಗಳು ಅಂದರೆ ಸಾಹಿತ್ಯ ವಿಮರ್ಶೆ- ಕೃತಿ ವಿಮರ್ಶೆಗಳು. 

ಕಳೆದ ನೂರು ವರ್ಷಗಳಲ್ಲಿ ಕನ್ನಡ ವಿಮರ್ಶೆ ಎದುರಿಸಿದ ಸಾಂಸ್ಕೃತಿಕ ಬಿಕ್ಕಟ್ಟು, ಇಕ್ಕಟ್ಟುಗಳ ವಿಚಾರ ವಿಮರ್ಶೆಯೂ ಇಲ್ಲಿ ಮುನ್ನೆಲೆಗೆ ಬಂದು ಮೌಲ್ಯಮಾಪನಕ್ಕೆ ಒಳಗಾಗಿದೆ. ಸಾಹಿತ್ಯ ಸಂಸ್ಕೃತಿಯನ್ನು ಇಡಿಯಾಗಿ ನೋಡುವ, ವಿಶ್ಲೇಷಿಸುವ ಒಂದು ದಿಟ್ಟ ಹೆಜ್ಜೆಯಾಗಿ ಈ ಕೃತಿ ಪಡಿಮೂಡಿದೆ. ಉಚ್ಚಮಟ್ಟದ ವಿಮರ್ಶನ ಶಕ್ತಿ ಈ ಕೃತಿಯಲ್ಲಿ ವಿಜೃಂಭಿಸಿದೆ. ಹಲವು ಆಕರಗಳಿಂದ ಮಾಹಿತಿ ಸಂಗ್ರಹ, ಬಹುಶಿಸ್ತೀಯ ಅಧ್ಯಯನ, ಚಿಂತನೆ, ವ್ಯಾಖ್ಯಾನ, ಮೌಲ್ಯಮಾಪನ, ಚೇತೋಹಾರಿಯಾದ ನಿರೂಪಣೆಗಳಿಂದ ಈ ಕೃತಿ ವಾಚನೀಯವೂ ಆಗಿದೆ. ಪಾಶ್ಚಾತ್ಯ ಸಂಸ್ಕೃತಿಯನ್ನು ನಿಷ್ಠೆಯಿಂದ ಅವಿರತವಾಗಿ ಓದಿಕೊಂಡು ಕನ್ನಡ ಸಂಸ್ಕೃತಿಯೊAದಿಗೆ ಸಂವಾದ ನಡೆಸುತ್ತಾ ಬಂದ ಡಾ. ಜನಾರ್ದನ ಭಟ್ ಅವರ ಪ್ರಸ್ತುತ ಕೃತಿ ಕನ್ನಡ ವಿಮರ್ಶಾ ಜಗತ್ತಿಗೆ ಒಂದು ಮೌಲಿಕ ಕೊಡುಗೆ. ಬಹುಕಾಲ ನಿಲ್ಲಬಲ್ಲ ಕನ್ನಡ ಓದುಗರ ತಿಳುವಳಿಕೆಯನ್ನು ವಿಸ್ತರಿಸಬಲ್ಲ ತಾಕತ್ತು  ಈ ಕೃತಿಗೆ ಇದೆ ಎಂಬುದರಲ್ಲಿ ಎರಡು ಮಾತಿಲ್ಲ. ೨೧ನೆಯ ಶತಮಾನದಲ್ಲಿ ಬಂದ ಒಂದು ಅಪೂರ್ವ ಕೃತಿ ಇದೆಂಬ ಹೆಮ್ಮೆ, ಅಭಿಮಾನ ಸಾಹಿತ್ಯಾಸಕ್ತರಲ್ಲಿ ಮೂಡಿಸಬಲ್ಲದು.  ಇಂಥ ಮಹತ್ವದ, ವರ್ತಮಾನದ ಜರೂರಿನ ಕೃತಿಯನ್ನು ನೀಡಿದ ಡಾ. ಜನಾರ್ದನ ಭಟ್ ಅವರಿಗೆ ಕನ್ನಡಿಗರು ಕೃತಜ್ಞರಾಗಿದ್ದಾರೆ. 

(ಬರಹ; ಡಾ. ಜಿ. ಎನ್. ಉಪಾಧ್ಯ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು)

Related Books