ನೆಲ ಸಂಸ್ಕೃತಿ

Author : ನರಹಳ್ಳಿ ಬಾಲಸುಬ್ರಹ್ಮಣ್ಯ

Pages 280

₹ 300.00




Year of Publication: 2021
Published by: ಅಭಿನವ ಪ್ರಕಾಶನ
Address: 17/18-2, ಮೊದಲನೆಯ ಮುಖ್ಯರಸ್ತೆ, ಮಾರೇನಹಳ್ಳಿ, ವಿಜಯನಗರ, ಬೆಂಗಳೂರು-560040
Phone: 9448004905

Synopsys

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರ ‘ನೆಲ ಸಂಸ್ಕೃತಿ’ ಕೃತಿಯು ವಿಮರ್ಶಾತ್ಮಕ ಕೃತಿಯಾಗಿದೆ. 2006ರಲ್ಲಿ ಮೊದಲ ಮುದ್ರಣ ಕಂಡಿರುವ ಈ ಕೃತಿಯು, 2010ರಲ್ಲಿ ಎರಡನೇಯ ಮುದ್ರಣ ಹಾಗೂ 2021ರಲ್ಲಿ ಮೂರನೇ ಮುದ್ರಣವನ್ನು ಕಂಡಿದೆ. 

ಪ್ರಕಾಶಕ ನ.ರವಿಕುಮಾರ್ ಅವರು ‘ ನರಹಳ್ಳಿ ಕೇವಲ ವಿಮರ್ಶಕರಾಗಿ ಮಾತ್ರವಲ್ಲ; ಸಮಕಾಲೀನ ಸಮಜದ ತವಕ ತಲ್ಲಣಗಳನ್ನು ಸೂಕ್ಷ್ಮವಾಗಿ ಮತ್ತು ಅಷ್ಟೇ ಗಂಭೀರವಾಗಿ ಗಮನಿಸುವ ಮನಸ್ಸುಳ್ಳವರು. ಸಂವೇದನಾಶೀಲ ಭಾಷೆ, ಸೃಜನಶೀಲತೆಯೆಡೆಗಿನ ಕುತೂಹಲ ಮತ್ತು ಸಾಮಾಜಿಕ ಬದ್ಧತೆಯ ಕಾರಣಗಳಿಂದ ಅವರ ಬರವಣಿಗೆಗೆ ಸಹಜವಾಗಿಯೇ ಸಾಂಸ್ಕೃತಿಕ ಮಹತ್ವ ಲಭಿಸಿದೆ. ನಮ್ಮ ಕಾಲದ ಎಲ್ಲ ಆಗುಹೋಗುಗಳನ್ನು ಸಾಹಿತ್ಯಕ ನುಡಿಗಟ್ಟುಗಳಲ್ಲಿ ಗ್ರಹಿಸುವ, ಪರಿಭಾವಿಸುವ, ಅಭಿವ್ಯಕ್ತಿಸುವ ಕ್ರಮ ಅವರದು. ಸಾಹಿತ್ಯವೆಂದರೆ ಕೇವಲ ಕಥೆ, ಕಾದಂಬರಿಗಳು ಮಾತ್ರವಲ್ಲ, ಜ್ಞಾನದ ಎಲ್ಲ ಶಾಖೆಗಳಾದ ಕಲೆ, ವಿಜ್ಞಾನ ತತ್ವಶಾಸ್ತ್ರ, ಸಮಾಜಶಾಸ್ತ್ರಗಳೂ ಕೂಡ ಸಾಹಿತ್ಯವೇ ಎಂದು ಸಂಬಿದವರು ನರಹಳ್ಳಿಯವರು. ಅವರ ಬರಹಗಳು ನಮ್ಮ ಕಾಲದ ‘ಮಾತು’ಗಳೂ ಹೌದು, ಎಲ್ಲ ಗತ್ತುಗಳ ‘ಅಕ್ಷರ’ಗಳೂ ಹೌದು ಎಂದಿದ್ದಾರೆ.

ಖುದ್ದು ಈ ವಿಮರ್ಶಾ ಕೃತಿಯ ಲೇಖಕ ನರಹಳ್ಳಿಯವರು ‘ ಇಲ್ಲಿನ ಲೇಖನಗಳು ಈ ಶತಮಾನದ ಆರಂಭದ ಕಾಲಘಟ್ಟದ ಕನ್ನಡ ಮನಸ್ಸಿನ ಚಿಂತನಾ ಕ್ರಮವನ್ನು, ಸೃಜನಶೀಲತೆಯ ಸ್ವರೂಪವನ್ನು ಸೂಚಿಸುತ್ತಿರುವಂತೆ ತೋರುತ್ತದೆ. ಸಮಗ್ರದ ಪರಿಕಲ್ಪನೆ, ವಸಾಹತೋತ್ತರ ಚಿಂತನೆ, ರೂಢಿಯ ಜಾಡು ಮೀರಿದ ಹೊಸ ಆಲೋಚನೆ, ಅನುಸೃಷ್ಟಿಯ ಮೂಲಕ ಅನ್ಯವನ್ನು ಒಳಗೊಳ್ಳುವ ಆವಾಹನೆ, ಕನ್ನಡ ಕಾವ್ಯ ಚಿಂತನೆಯ ಸ್ವರೂಪ, ಹಿಂಸೆಯ ಹೊಸ ರೂಪ - ಹೀಗೆ ಹಲವು ನೆಲೆಗಳಲ್ಲಿ ಕನ್ನಡ ಮನಸ್ಸು, ತನ್ನನ್ನು ತೊಡಗಿಸಿಕೊಂಡಿರುವುದನ್ನು ವಿಮರ್ಶಾತ್ಮವಾಗಿ ನೋಡಲು ಇಲ್ಲಿ ಪ್ರಯತ್ನಿಸುತ್ತಿದ್ದೇನೆ ಎಂದಿದ್ದಾರೆ.

ಈ ವಿಮರ್ಶಾತ್ಮಕ ಕೃತಿಯು ಮೂರು ಭಾಗಗಳನ್ನು ಹೊಂದಿದ್ದು, ಮೊದಲ ಭಾಗವು, ಸೇಡಿಯಾಪು ಕಾವ್ಯ: ಈ ನೆಲದ ಸಂವೇದನೆ, ಎ.ಎಸ್ ಮೂರ್ತಿಯವರ ಪ್ರಬಂಧ ಜಗತ್ತು: ಅನುಭವ ವಿಚಾರಗಳ ಮುಖಾಮುಖಿ, ಪುತಿನ ಅವರ ಸಮಗ್ರ ಗದ್ಯ: ಭಾವಪ್ರಪಂಚಕ್ಕೆ ಚಿಂತನೆಯ ಧಾತು ಸೇರಿದಂತೆ 10 ವಿಚಾರಗಳನ್ನು ಆಧಾರವಾಗಿಟ್ಟುಕೊಂಡಿದೆ. ಎರಡನೆಯ ಭಾಗವು ಜಿಡ್ಡು ಕೃಷ್ಣಮೂರ್ತಿ;ಅಂತರಂಗದ ಕ್ರಾಂತಿ, ಲೋಹಿಯಾ: ರಾಜಕೀಯ ಸಂಸ್ಕೃತಿ, ಅಲ್ಲಮಪ್ರಭು: ದೇಸಿ ಆತ್ಮವಿಶ್ವಾಸ ಸೇರಿದಂತೆ 7 ಶೀರ್ಷಿಕೆಗಳನ್ನು ಹೊಂದಿದೆ. ಮೂರನೆಯ ಭಾಗದಲ್ಲಿ ಜಿ.ಎಸ್ ಅಮೂರ ಅವರ ‘ಕನ್ನಡ ಕಥನ ಸಾಹಿತ್ಯ:ಸಣ್ಣಕತೆ’, ಗೋಪಾಲಕೃಷ್ಣ ಅಡಿಗರ ‘ನೆನಪಿನ ಗಣಿಯಿಂದ’, ಜಿ.ಎಸ್ ಶಿವರುದ್ರಪ್ಪನವರ ‘ಸೌಂದರ್‍ಯ ಸಮೀಕ್ಷೆ’ ಸೇರಿದಂತೆ 15 ಶೀರ್ಷಿಕೆಗಳನ್ನು ಹೊಂದಿದೆ. 

 

About the Author

ನರಹಳ್ಳಿ ಬಾಲಸುಬ್ರಹ್ಮಣ್ಯ
(05 September 1953)

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಕನ್ನಡದ ಪ್ರಮುಖ ವಿಮರ್ಶಕರಲ್ಲಿ ಒಬ್ಬರು. ಮಂಡ್ಯ ಜಿಲ್ಲೆಯ ನರಹಳ್ಳಿಯಲ್ಲಿ1953 ಸೆಪ್ಟೆಂಬರ್ 5ರಂದು ಜನಿಸಿದರು. 1973ರಲ್ಲಿ ಬಿ.ಎ. (ಆನರ್), 1975ರಲ್ಲಿ ಎಂ.ಎ. ಪದವಿಗಳನ್ನು ಪ್ರಥಮ ಬ್ಯಾಂಕ್, ಚಿನ್ನದ ಪದಕಗಳೊಂದಿಗೆ ಪಡೆದ ಅವರು ವಿದ್ಯಾರ್ಥಿ ದೆಸೆಯಲ್ಲಿಯೇ ರಾಜ್ಯಪ್ರಶಸ್ತಿ ಮನ್ನಣೆ ಗಳಿಸಿದ್ದರು. ಭಾರತ ಸರ್ಕಾರದ ಪ್ರತಿಭಾ ವಿದ್ಯಾರ್ಥಿವೇತನ ಪಡೆದವರು. 1992ರಲ್ಲಿ ಬೆಂಗಳೂರು ವಿಶ್ವವಿದ್ಯಾಲಯದಿಂದ ಪಿಎಚ್.ಡಿ.  ಪಡೆದಿರುವ ನರಹಳ್ಳಿಯವರು ಶೇಷಾದ್ರಿಪುರಂ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ, ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕರಾಗಿ, ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸಿ ನಿವೃತ್ತರಾಗಿದ್ದಾರೆ. 'ಅನುಸಂಧಾನ', 'ನವ್ಯತೆ', 'ಇಹದ ಪರಿಮಳದ ಹಾದಿ', 'ಸಾಹಿತ್ಯ ಸಂಸ್ಕೃತಿ', “ಕುವೆಂಪು ನಾಟಕಗಳ ಅಧ್ಯಯನ', ...

READ MORE

Reviews

‘ನೆಲದ ಸಂಸ್ಕೃತಿ’ ಕೃತಿಯ ವಿಮರ್ಶೆ

ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ವಿವಿಧ ಸಂದರ್ಭಗಳಲ್ಲಿ ಬರೆದ ವಿಮರ್ಶಾ ಲೇಖನಗಳ ಸಂಗ್ರಹವಿದು. 2006ರಲ್ಲಿ ಪ್ರಕಟಗೊಂಡಿದ್ದ ಈ ಪುಸ್ತಕವು ಈಗ ಮೂರನೆಯ ಮುದ್ರಣ ಕಂಡಿದೆ. ಕನ್ನಡದ ಸಂದರ್ಭದಲ್ಲಿ ವಿಮರ್ಶಾ ಲೇಖನಗಳ ಸಂಗ್ರಹವೊಂದು ಮೂರನೆಯ ಮುದ್ರಣ ಕಾಣುತ್ತಿದೆ ಎಂಬುದು ಬಹು ವಿಶೇಷ. ಈ ಪುಸ್ತಕದಲ್ಲಿ 3 ಭಾಗಗಳಿವೆ. ಇಲ್ಲಿನ ಲೇಖನ ಗಳು ಈ ಶತಮಾನದ ಆರಂಭದ ಕಾಲಘಟ್ಟದ ಕನ್ನಡ ಮನಸ್ಸಿನ ಚಿಂತನಾ ಕ್ರಮವನ್ನು, ಸೃಜನಶೀಲತೆಯ ಸ್ವರೂಪವನ್ನು ಸೂಚಿಸುತ್ತಿರುವಂತೆ ತೋರುತ್ತದೆ. ಸಮಗ್ರದ ಪರಿಕಲ್ಪನೆ, ವಸಹತೋತ್ತರ ಚಿಂತನೆ, ರೂಢಿಯ ಜಾಡು ಮೀರಿದ ಹೊಸ ಆಲೋಚನೆ, ಅನು ಸೃಷ್ಟಿಯ ಮೂಲಕ ಅನ್ಯವನ್ನು ಒಳಗೊಳ್ಳುವ ಆವಾಹನೆ, ಕನ್ನಡ ಕಾವ್ಯ ಚಿಂತನೆಯ ಸ್ವರೂಪ, ಹಿಂಸೆಯ ಹೊಸ ರೂಪ ಹೀಗೆ ಹಲವು ನೆಲೆಗಳಲ್ಲಿ ಕನ್ನಡ ಮನಸ್ಸು ತನ್ನನ್ನು ತೊಡಗಿ ಸಿಕೊಂಡಿರುವುದನ್ನು ವಿಮರ್ಶಾತ್ಮಕವಾಗಿ ನೋಡಲು ಇಲ್ಲಿ ಪ್ರಯತ್ನಿಸಿದ್ದೇನೆ ಎಂದು ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಈ ಕೃತಿಯ ಕುರಿತು ಅರಿಕೆ ಮಾಡಿಕೊಂಡಿದ್ದಾರೆ. ಕನ್ನಡ ಸಾಹಿತ್ಯ, ಸಂಸ್ಕೃತಿಯಲ್ಲಿ ಆಸಕ್ತಿ ಹೊಂದಿದವ ರೆಲ್ಲರೂ ಒಮ್ಮೆ ಒದಬಹುದಾದ ಹೊತ್ತಗೆ ಇದು.

(ಕೃಪೆ : ವಿಶ್ವವಾಣಿ)

Related Books