ಮಲೆಗಳಲ್ಲಿ ಮದುಮಗಳು -೫೦

Author : ಡಿ.ಎಸ್.ನಾಗಭೂಷಣ

Pages 98

₹ 90.00




Year of Publication: 2018
Published by: ಮೂನಿಸ್ವಾಮಿ ಅಂಡ್ ಸನ್ಸ್
Address: ಮೂನಿಸ್ವಾಮಿ ಅಂಡ್ ಸನ್ಸ್ ಬೆಂಗಳೂರು

Synopsys

ಲೇಖಕ ವಿಮರ್ಶಕರಾದ ಡಿ.ಎಸ್. ನಾಗಭೂಷಣ ಅವರ ವಿಮರ್ಶಾ ಕೃತಿ ’ ಮಲೆಗಳಲ್ಲಿ ಮದುಮಗಳು-೫೦’.

ರಾಷ್ಟ್ರಕವಿ ಕುವೆಂಪು ಅವರ ಕಾದಂಬರಿ ’ಮಲೆಗಳಲ್ಲಿ ಮದುಮಗಳು’ 1967 ರಲ್ಲಿ ಮೊದಲು ರಚನೆಯಾಯಿತು.

ಮಲೆನಾಡಿನ ನೈಜಚಿತ್ರಣ, ಸ್ವಾಭಾವಿಕವಾದ ವರ್ಣನೆಗಳು ಮಲೆನಾಡಿನ ಒಂದು ಕಾಲಘಟ್ಟದ ಅದರಲ್ಲೂ 20ನೇ ಶತಮಾನದ ಆರಂಭದ ದಿನಗಳ ಬದುಕನ್ನು ಸೊಗಸಾದ ರೀತಿಯಲ್ಲಿ ಹಿಡಿದಿಡುವ ಕೃತಿ ’ಮಲೆಗಳಲ್ಲಿ ಮದುಮಗಳು’.

ಈ ಕೃತಿ ರಚನೆಯಾಗಿ  ಐವತ್ತು ವರ್ಷಗಳೇ ಸಂದಿವೆ. ಈ ಹೊತ್ತಿನಲ್ಲಿ ಕನ್ನಡ ಸಾಹಿತ್ಯದ ಹಲವಾರು ವಿಮರ್ಶಕರು, ಲೇಖಕರು, ವಿದ್ವಾಂಸರು, ತಮ್ಮ ಓದಿನ ಗ್ರಹಿಕೆಯನ್ನು ನಡೆದ ವಿಚಾರ ಸಂಕಿರಣವೊಂದರಲ್ಲಿ ತಮ್ಮ ವಿಷಯ ಮಂಡನೆಯ ಮೂಲಕ ಚರ್ಚಿಸಿದ್ದಾರೆ.  ವಿಷಯ ಮಂಡನೆ, ಸಂವಾದ, ವಿಚಾರ ಚರ್ಚೆಗಳನ್ನು ವಿಮರ್ಶಕರಾದ ಡಿ.ಎಸ್. ನಾಗಭೂಷಣ ಅವರ ಸಂಪಾದಕತ್ವದಲ್ಲಿ ಹೊರತಂದಿರುವ ವಿಮರ್ಶಾ ಕೃತಿಯೇ ’ಮಲೆಗಳಲ್ಲಿ ಮದುಮಗಳು -೫೦’.

About the Author

ಡಿ.ಎಸ್.ನಾಗಭೂಷಣ
(01 February 1952 - 19 May 2022)

ಗಣಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪಡೆದ ಡಿ.ಎಸ್.ನಾಗಭೂಷಣ ಅವರು 1952 ಫೆಬ್ರವರಿ 1 ರಂದು ಬೆಂಗಳೂರು ಗ್ರಾಮಾಂತರ ಜಿಲ್ಲೆ, ಹೊಸಕೋಟೆ ತಾಲ್ಲೂಕಿನ ತಿಮ್ಮಸಂದ್ರದಲ್ಲಿ ಜನಿಸಿದರು. ದೆಹಲಿ ಆಕಾಶವಾಣಿಯಲ್ಲಿ ಕನ್ನಡ ವಾರ್ತಾ ವಾಚಕರಾಗಿ1975ರಿಂದ 1981ರವರೆ ಸೇವೆ ಸಲ್ಲಿಸಿದ್ದ ಅವರು ಆನಂತರದಲ್ಲಿ ಸಹಾಯಕ ನಿಲಯ ನಿರ್ದೇಶಕರಾಗಿ 7 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದರು. 2005ರಲ್ಲಿ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದರು. ಓದು, ಬರವಣಿಗೆಯನ್ನು ಹವ್ಯಾಸವಾಗಿಸಿಕೊಂಡಿರುವ ಅವರು ‘ಇಂದಿಗೆ ಬೇಕಾದ ಗಾಂಧಿ’, ‘ಲೋಹಿಯಾ ಜೊತೆಯಲ್ಲಿ’, ‘ರೂಪ ರೂಪಗಳನು ಧಾಟಿ’, ‘ಕುವೆಂಪು ಒಂದು ಪುನರನ್ವೇಷಣೆ’, ‘ಕುವೆಂಪು ಸಾಹಿತ್ಯ ದರ್ಶನ’, ‘ಜಯ ಪ್ರಕಾಶ ನಾರಾಯಣ ...

READ MORE

Reviews

“ಮದುಮಗಳು” : ಸಮಕಾಲೀನ ಸ್ಪಂದನ

ಐವತ್ತು ವರ್ಷಗಳ ನಂತರ ಕುವೆಂಪು ಅವರ ಕೃತಿ ಮಲೆಗಳಲ್ಲಿ ಮದುಮಗಳನ್ನು ಮತ್ತೆ ನೋಡುವ ಪ್ರಯತ್ನವೇ ಮಲೆಗಳಲ್ಲಿ ಮದುಮಗಳು-೫೦' ವಿಮರ್ಶಾ ಕೃತಿ. ಇಲ್ಲಿ ಹನ್ನೊಂದು ಸಮಕಾಲೀನ ಸ್ಪಂದನಗಳಿವೆ. ವಿಭಿನ್ನ ಸಾಂಸ್ಕೃತಿಕ ಹಿನ್ನೆಲೆಯ, ತಾತ್ವಿಕ ಧೋರಣೆಯ, ರುಚಿ-ಅಭಿರುಚಿಯ ಮನಸ್ಸುಗಳು ಬೇರೆಬೇರೆಯ ದಿಕ್ಕಿನಿಂದ ಈ ಕೃತಿಗೆ ಮುಖಾಮುಖಿಯಾಗಿವೆ. ಈ ಎಲ್ಲ ನೋಟಗಳೂ ಕೃತಿಯ 'ಒಟ್ಟಂದವನ್ನು, ಸೊಬಗು ಸೌಂದರ್ಯಗಳನ್ನು, ತಾತ್ವಿಕ ನಿಲುವನ್ನು, ಧ್ವನಿಶಕ್ತಿಯ ಆಳ-ಅಗಲಗಳನ್ನು ಗ್ರಹಿಸಲು ಅಗತ್ಯವಾದ ಒಳನೋಟಗಳನ್ನು ಒದಗಿಸಿವೆ. ಹಾಗೆಯೇ ಐವತ್ತು ವರ್ಷಗಳ ಸುದೀರ್ಘ ಕಾಲಾವಧಿಯಲ್ಲಿ ಮದುಮಗಳಿಗೆ ಸಿಕ್ಕದೇ ಹೋದ ವಿಮರ್ಶೆ ನ್ಯಾಯದ ಬಗ್ಗೆ, ಅದಕ್ಕಿರಬಹುದಾದ ಕಾರಣಗಳ ಬಗ್ಗೆ ಇಲ್ಲಿ ವಿಶ್ಲೇಷಣೆಗಳಿವೆ. ದೇವನೂರು, ಡಿ.ಎಸ್.ನಾಗಭೂಷಣ ಮತ್ತು ರಾಜೇಂದ್ರ ಚೆನ್ನಿ ಅವರ ನೋಟಗಳು ಅರ್ಥಪೂರ್ಣವಾಗಿ ಈ ದಿಕ್ಕಿನಲ್ಲಿ ಚಿಂತಿಸಿವೆ. ಕನ್ನಡ ಮಾತ್ರವಲ್ಲ, ಭಾರತೀಯ ಕಾದಂಬರಿಗಳ ಗಡಿರೇಖೆಗಳನ್ನು ವಿಸ್ತರಿಸಿದ ಈ ಕಾದಂಬರಿ ಜಾಗತಿಕ ಮಟ್ಟದಲ್ಲಿ ಹೇಗೆ ನಿಲ್ಲಬಲ್ಲದೆಂಬುದನ್ನೂ ಈ ನೋಟಗಳು ಕಾಣಿಸಿವೆ.

ಹೆಣ್ಣನ್ನು ಕುರಿತ ಸಾಂಪ್ರದಾಯಿಕ ನಿಲುವುಗಳನ್ನು ಈ ಮದುಮಗಳು ಹೇಗೆ ಪ್ರಶ್ನಿಸುತ್ತದೆ ಮತ್ತು ಉಲ್ಲಂಘಿಸುತ್ತದೆ ಎಂಬುದನ್ನು ವಿನಯಾ ಒಕ್ಕುಂದ ಅವರ ಲೇಖನ ತೋರಿಸಿಕೊಟ್ಟರೆ, ಸಬಿತಾ ಬನ್ನಾಡಿ ಅವರ ನೋಟದಲ್ಲಿ, 'ಕುವೆಂಪು ಅವರಿಗೆ ಹೆಣ್ಣುಗಂಡಿನ ಸಂಬಂಧ ಎನ್ನುವುದು ಸಹಜೀವನ, ಸಹಭಾಗಿತ್ವ ಸಮನ್ವಯ, ಸಮ್ಮಿಲನ ಮತ್ತು ಆ ಮೂಲಕ ಒಂದು ಪೂರ್ಣದೃಷ್ಟಿ. ಈ ಎರಡು ನೋಟಗಳಿಗೆ ಪೂರಕವೆನ್ನುವಂತೆ ಚೆನ್ನಿ, ಅತ್ಯಂತ ಗಂಭೀರವೂ, ಮುಖ್ಯವೂ ಆದ ನೈತಿಕ ತೀರ್ಮಾನಗಳನ್ನು ಈ ಕಾದಂಬರಿಯಲ್ಲಿ ಹೆಂಗಸರೇ ಮಾಡುವುದನ್ನು ಗುರುತಿಸುತ್ತಾರೆ. ಜಿ.ರಾಜಶೇಖರ ಅವರ ಲೇಖನ ಕುವೆಂಪು ಶೈಲಿಯ ಹೊರಮೈ ಲಕ್ಷಣವನ್ನು ಮತ್ತು ಕಾದಂಬರಿಯ ಶಕ್ತಿಮೂಲವನ್ನು ತೋರಿಸುತ್ತದೆ. ೧೯ನೇ ಶತಮಾನದ ಕೊನೆಯಲ್ಲಿ ಮಲೆನಾಡಿನಲ್ಲಿ ನಡೆದ ಮತಾಂತರ ಯತ್ನಗಳ ಬಗ್ಗೆ ಮದುಮಗಳಲ್ಲಿ ಅಪೂರ್ವ ಒಳನೋಟಗಳಿವೆ ಎನ್ನುತ್ತಾರೆ ರಾಜಶೇಖರ, ನಿಸರ್ಗದ ಪರಿಪೂರ್ಣತೆಯನ್ನು ಅರಿಯಲು ಅಡ್ಡಿಯಾಗುವ ಎಲ್ಲ ಉಪಾಧಿಗಳನ್ನು ಮೀರಲು ಯತ್ನಿಸುವ, ಅನಿಕೇತನವಾಗುವ ದಿಕ್ಕಿನತ್ತ ಚಲಿಸುವ ಈ ಕಾದಂಬರಿಯಲ್ಲಿ ಕುವೆಂಪು ಹೇಗೆ ರಾಮಕೃಷ್ಣರಿಗೆ ಹತ್ತಿರವಾಗಿದ್ದಾರೆ ಎಂಬುದನ್ನು ಲಕ್ಷ್ಮೀಶ ತೋಳ್ವಾಡಿ ವಿಶ್ಲೇಷಿಸುತ್ತಾರೆ.

'ಈ ಕಾದಂಬರಿಗೆ ಕೇಂದ್ರವೇ ಇಲ್ಲ’ ’ವಿವರಗಳಲ್ಲಿ ಸೊಕ್ಕಿದೆ' ಇತ್ಯಾದಿ ನವ್ಯರ ಟೀಕೆಗೆ ಪರೋಕ್ಷ ಉತ್ತರಗಳೂ ಇಲ್ಲಿವೆ. ಮಹಾದೇವ ಸೂಕ್ಷ್ಮವಾಗಿ ಹೇಳುವ ಮಾತೊಂದಿದೆ: 'ನನ್ನ ಭಾವಕೋಶದೊಳಗೆ ಇರುವ ರಾಮಾಯಣದ ಅರಣ್ಯವನ್ನು ಬಿಟ್ಟರೆ ಬಹುಶಃ ಮಲೆಗಳಲ್ಲಿ ಮದುಮಗಳುವಿನಲ್ಲೆ ಅರಣ್ಯ ಬೃಹತ್ ಆಗಿ ಮೈತಾಳಿರುವುದು.' ನಿತ್ಯಾನಂದ ಬಿ.ಶೆಟ್ಟಿ, 'ಅರಣ್ಯವಿಲ್ಲದಿದ್ದರೆ ಈ ಕಾದಂಬರಿಯೇ ಇಲ್ಲವೇನೋ ಎನ್ನುವಷ್ಟು ತೀವ್ರವಾಗಿ ಈ ಕಾದಂಬರಿಯಲ್ಲಿ ಅರಣ್ಯದ ಉಪಸ್ಥಿತಿ ಇದೆ' ಎನ್ನುತ್ತಾರೆ.

ಈ ಕಾದಂಬರಿಯ ಸಾಮಾಜಿಕ ವಿನ್ಯಾಸದ ಬಗ್ಗೆ ಚಿಂತಿಸಿರುವ ಕೆ.ವೈ.ನಾರಾಯಣ ಸ್ವಾಮಿ, ಈ ಕಾದಂಬರಿಯನ್ನು 'ಜೀವಯಾನ ಮತ್ತು ಕಾಲಯಾನ ಪ್ರಯಾಣಗಳ ಮಹಾಕಥನ' ಎಂದು ಭಾವಿಸುತ್ತಾರೆ. ಈ ಕಾದಂಬರಿಯ ರಚನಾ ವಿನ್ಯಾಸ “ವಿಶಿಷ್ಟವಾದದ್ದು. ಇದರ ರಚನೆಯಲ್ಲಿಯೇ ಈ ಕೃತಿಯಲ್ಲಿ ಬರುವ ಸಾಮಾಜಿಕ ವಿದ್ಯಮಾನಗಳನ್ನು ಕುರಿತ ವಿಮರ್ಶೆಯೂ ಜೊತೆಜೊತೆಗೇ ನಡೆದಿದೆ' ಎನ್ನುವ ಅಭಿಪ್ರಾಯವನ್ನು ತಳೆಯುತ್ತಾರೆ.

’ಶೂದ್ರತ್ವದ ನಿರ್ವಚನವಾಗಿ’ ಮದುಮಗಳನ್ನು ಓದುವ ವಾಸುದೇವ ಬೆಳ್ಳೆ ಈ ಕೃತಿಯಲ್ಲಿ ಕುವೆಂಪು ಜಾತೀಯತೆಗೆ ಪ್ರಬಲ ಪ್ರತಿರೋಧ ಒಡ್ಡಿರುವುದನ್ನು, ಶೂದ್ರ ಮತ್ತು ದಲಿತ ಲೋಕವನ್ನು ಚಿತ್ರಿಸುವುದರ ಮೂಲಕ ಕನ್ನಡದಲ್ಲಿ ಶೂದ್ರ ಚಿಂತನೆಯ ದಾರಿಯನ್ನು ತೆರೆದರೆಂಬುದನ್ನು ಹೇಳುತ್ತಾರೆ. ಹಿಂದೂ ರಾಷ್ಟ್ರೀಯತೆ, ಬ್ರಾಹ್ಮಣ್ಯದ ಪ್ರಾಬಲ್ಯ, ಪುರಾಣ, ನಂಬಿಕೆಗಳನ್ನು ಸಂಪೂರ್ಣವಾಗಿ ತಿರಸ್ಕರಿಸದೆ ಎವೆಂಪು ಅವುಗಳ ಒಳಗಡೆಯೇ ಬದಲಾವಣೆ ಮಾಡಿಕೊಳ್ಳುವುದು ಇತ್ಯಾದಿ ಈಗಾಗಲೇ ಚರ್ಚಿತವಾಗಿರುವ ವಿಚಾರಗಳನ್ನು ಇಲ್ಲಿ ಮತ್ತೆ ವಿವರಿಸಲಾಗಿದೆ.

-ಜಿ.ಪಿ. ಬಸವರಾಜು

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ಪತ್ರಿಕೆ (ಜುಲೈ- 2019)

 

Related Books