ಧರೆಗಿಳಿದ ನಾಟ್ಯತಾರೆ : ಬಾಲಾ

Author : ಟಿ.ಎಸ್. ವೇಣುಗೋಪಾಲ್

Pages 217

₹ 200.00




Year of Publication: 2018
Published by: ರಾಗಮಾಲ
Address: ಸಿ.ಹೆಚ್-73, 7ನೇ ಮುಖ್ಯರಸ್ತೆ, ಸರಸ್ವತೀಪುರಂ, ಮೈಸೂರು-570009

Synopsys

ನಾಟ್ಯತಾರೆ,‘ಬಾಲ ಸರಸ್ವತಿ’ ಎಂದೇ ಖ್ಯಾತರಾದ `ಬಾಲಾ’ ಅವರ ಜೀವನ-ಸಾಧನೆ-ನಡೆದು ಬಂದ ದಾರಿ-ಎದುರಿಸಿದ ಸವಾಲುಗಳ ಕುರಿತ ಸಂಕ್ಷಿಪ್ತ ಚಿತ್ರಣ ಈ ಕೃತಿಯಲ್ಲಿ ಸಿಗುತ್ತದೆ. ಕೇವಲ ಬಾಲಾರ ಜೀವನದ ವಿವರಗಳಲ್ಲದೇ, ಅವರ ಗುರುವೃಂದ, ಸಹೋದರರ, ಸ್ನೇಹ ವರ್ಗದ, ಮಗಳು- ಅವರೊಂದಿನ ಒಡನಾಟ, ಅವರ ವೈವಾಹಿಕ ಜೀವನ ಕುರಿತು ಇಲ್ಲಿ ಲೇಖಕರು ನವಿರಾಗಿ ದಾಖಲಿಸಿದ್ದಾರೆ.

About the Author

ಟಿ.ಎಸ್. ವೇಣುಗೋಪಾಲ್
(24 April 1955)

ಲೇಖಕ ಟಿ. ಎಸ್. ವೇಣುಗೋಪಾಲ್ ಅವರು ಮೈಸೂರಿನವರು. 1955 ಏಪ್ರಿಲ್ 24  ರಂದು ಜನನ. ಸಂಖ್ಯಾಶಾಸ್ತ್ರ ಪ್ರಾಧ್ಯಾಪಕ. ‘ವಾದಿ ಸಂವಾದಿ, ಧರೆಗಿಳಿದ ನಾಟ್ಯತಾರೆ, ಗಾನವಸಂತ, ಭಗವದ್ಗೀತೆ, ಸಾಮಾಜಿಕ ಆರ್ಥಿಕ ಸಂಗತಿಗಳ ಒಳನೋಟ, ಪುರಾಣ ಮತ್ತು ವಾಸ್ತವ’ ಮುಂತಾದ ಕೃತಿಗಳನ್ನು ಲೇಖಕಿ ಶೈಲಜಾ ಅವರೊಂದಿಗೆ ಸಂಪಾದಿಸಿದ್ದಾರೆ. ...

READ MORE

Reviews

ಸಾಟಿ ಇಲ್ಲದ ಪ್ರತಿಭೆಗೊಂದು ಸಣ್ಣ ಕನ್ನಡಿ

ಈ ಕೃತಿ ಅಪರೂಪದ ಕಲಾವಿದೆ ತಂಜಾವೂರು ಬಾಲಸರಸ್ವತಿ (1918- 1984) ಅವರನ್ನು ಚಿತ್ರಿಸುತ್ತದೆ; ಅವರ ಅಪ್ರತಿಮ ಪ್ರತಿಭೆ'ಯನ್ನು ಅನಾವರಣಗೊಳಿಸುತ್ತದೆ . ದೇವದಾಸಿ ಪದ್ಧತಿಯ ಪ್ರತಿಭಾವಂತರು ನೂರಾರು ವರ್ಷಗಳಿಂದ ಕಾಯ್ದುಕೊಂಡು ಬಂದ ವಿಶಿಷ್ಟ ನೃತ್ಯ ಸಾದಿರ್, ಭರತನಾಟ್ಯವಾಗಿ ರೂಪಾಂತರ ಹೊಂದಿದ್ದನ್ನು ಹೇಳುತ್ತದೆ. ತನ್ನ ಮತ್ತು ತನ್ನ ಪರಂಪರೆಯ ಬಗ್ಗೆ ಎಂದೂ ಆತ್ಮವಿಶ್ವಾಸ ಕಳೆದುಕೊಳ್ಳದ ಬಾಲಾ, ಭರತನಾಟ್ಯವನ್ನು ಜಾಗತಿಕ ಮಟ್ಟಕ್ಕೆ ಎತ್ತರಿಸಿದ ಚರಿತ್ರೆಯ ಗೆರೆಗಳೂ ಇಲ್ಲಿವೆ. ಸಾಂಸ್ಕೃತಿಕ ರಾಯಭಾರಿಗಳು ತಾವೆಂದು ಬೀಗುತ್ತ, ಸಾದಿರ್ ಕಲೆಯನ್ನು ಅನಾಮತ್ತಾಗಿ ದೇವದಾಸಿಯರಿಂದ ಕಸಿದುಕೊಂಡು, ಅದನ್ನು 'ಶುದ್ದೀಕರಿಸಿದ್ದಾಗಿ' ಬಡಾಯಿ ಕೊಚ್ಚಿಕೊಳ್ಳುವ ಮೇಲ್ಬಾತಿ ಮತ್ತು ಮೇಲ್ವರ್ಗ ತಮಿಳ್ಳಾಡಿನಲ್ಲಿ ನಡೆಸಿದ ಹುನ್ನಾರವನ್ನೂ ಈ ಕೃತಿ ಸೂಕ್ಷ್ಮವಾಗಿ ದಾಖಲಿಸುತ್ತದೆ.

ಬಾಲಾ ಎಂದೂ ಜಂಭದಿಂದ ಬೀಗಲಿಲ್ಲ. ವಿಶಾಲ ಹೃದಯದ, ಅಪಾರ ಕರುಣೆಯ, ತಾಯ ಕರುಳಿನ ಬಾಲಾ, ತನ್ನ ಶಿಷ್ಯರನ್ನು ಆಪ್ತ ಭಾವದಿಂದ ನೋಡಿದವರು. ಪರಂಪರೆಯ ಬೇರುಗಳಿಂದ ತಾನು ಹೀರಿಕೊಂಡ ವಿದ್ಯೆಯನ್ನು ಮುಚ್ಚು ಮರೆ ಇಲ್ಲದೆ ಎಲ್ಲರಿಗೂ ಹಂಚಿದವರು. ಭಾರತದಲ್ಲಿ ಮಾತ್ರವಲ್ಲ, ವಿದೇಶಿ ನೆಲದಲ್ಲೂ ತಮ್ಮ ಕಲೆಯನ್ನು, ಅದರ ಹಿರಿಮೆಯನ್ನು ಮೆರೆಸಿದವರು. ದೇಶ-ವಿದೇಶೀಯ ಎಂದು ಪರಿಗಣಿಸದೇ, ಕಲಿಯುವ ಉಮೇದು ಇದ್ದವರಿಗೆಲ್ಲ ಕಲಿಸಿ, ಕಲೆಯ ಬೇರುಗಳನ್ನು ಗಟ್ಟಿಗೊಳಿಸಿದವರು. ಶಿಷ್ಯರ ಗಾಢ ಪ್ರೀತಿ ಗೌರವಗಳನ್ನು ಪಡೆದವರು. ಸರಳತೆ ಬಾಲಾರ ಬಹುದೊಡ್ಡ ಗುಣವಾಗಿತ್ತು. ಸರಳತೆಯಿಂದಲೇ ಅವರು ಜಗತ್ತನ್ನು ಗೆದ್ದರು. ಭರತನಾಟ್ಯದಲ್ಲಿ ಈ ಅಪ್ಪಟ ಪ್ರತಿಭೆಗೆ ಎದುರಾಗಿ ನಿಲ್ಲುವವರೇ ಇರಲಿಲ್ಲ, ಮುಂದೆಯೂ ಬರಲಿಲ್ಲ.

ದೇವದಾಸಿ ಪದ್ಧತಿಯಲ್ಲಿ ಬಹುಪಾಲು ಕಲಾವಿದರು ಬಡತನ-ಸಿರಿತನಗಳ ತೂಗುಯ್ಯಾಲೆಯಲ್ಲಿ ಸದಾ ತೂಗುತ್ತಲೇ ಇದ್ದವರು. ಬಾಲಾ, ಶ್ರೀಮಂತ ಕೈಗಾರಿಕೋದ್ಯಮಿಯೂ ದಿವಾನರೂ ಆಗಿದ್ದ ವ್ಯಕ್ತಿಯನ್ನು ಮದುವೆಯಾದರೂ ಬಡತನದಿಂದ ಮುಕ್ತರಾಗಲಿಲ್ಲ. ತೀವ್ರ ಬಡತನದಲ್ಲಿಯೇ ಅಜ್ಜಿ, ತಾಯಿ, ತಮ್ಮಂದಿರು, ಮಗಳು ಎಲ್ಲರಿದ್ದ ತುಂಬು ಕುಟುಂಬವನ್ನು ನಿಭಾಯಿಸಿ, ಆತ್ಮಗೌರವವನ್ನು ಉಳಿಸಿಕೊಂಡವರು. ಹಲವು ರೋಗಗಳು ಕಾಡುತ್ತಿದ್ದ ಹೊತ್ತಿನಲ್ಲಿಯೂ, ಏಳು ತಲೆಮಾರುಗಳಿಂದ ಬಹುದೊಡ್ಡ ಆಸ್ತಿಯಾಗಿ ಉಳಿದುಬಂದಿದ್ದ ಕಲೆಯನ್ನು, ಅದರ ಸಾಂಪ್ರದಾಯಿಕ ಸತ್ವ-ಮೌಲ್ಯಗಳನ್ನು ಮೆರೆದವರು; ತಮ್ಮ ಪ್ರತಿಭಾ ಸಾಮರ್ಥ್ಯದಿಂದ ಈ ಪರಂಪರಾಗತ ಕಲೆಯ ಗಡಿರೇಖೆಗಳನ್ನು ವಿಸ್ತರಿಸಿದವರು.

ಮೇಲ್ಬಾತಿ ಮತ್ತು ವರ್ಗಗಳ ಅಹಂಕಾರವನ್ನು ಬಾಲಾ ವಿನಯದಿಂದ ಗೆದ್ದರು; 1940ರ ದಶಕದಲ್ಲಿ ಮದ್ರಾಸ್ ಪ್ರಾಂತ್ಯದಲ್ಲಿ ನಡೆದ ದೇವದಾಸಿ ಪದ್ಧತಿ ವಿರುದ್ಧದ ಹೋರಾಟದಲ್ಲಿ ಬಾಲ ವಿಚಲಿತರಾಗದೇ ನಿಂತು, ದೇವದಾಸಿ ಪದ್ಧತಿಗೆ ಬಲ ತುಂಬಿದರು. ಕಡುಬಡತನ ಮತ್ತು ಏಕಾಂಗಿತನಗಳಲ್ಲಿ ಈ ಪದ್ಧತಿಯ ಕಲಾವಿದರು ಎದೆಗುಂದದೇ, ಅಪಾರ ಪ್ರೀತಿಯಿಂದ ತಮ್ಮ ಕಲೆಯನ್ನು ಉಳಿಸಿಕೊಂಡು ಬಂದ ಬಗ್ಗೆ ಬಾಲಾರಿಗೆ ವಿಶೇಷ ಹೆಮ್ಮೆ ಇತ್ತು. ತನ್ನ ಗುರುಗಳಾದ ಕಂದಪ್ಪ ಪಿಳ್ಳಿ ಮತ್ತು ಗೌರಿ ಅಮ್ಮಾಳ್, ತಾಯಿ ಜಯಮ್ಮಾಳ, ಅಜ್ಜಿ ವೀಣಾ ಧನಾಳ (ಸಂಗೀತ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು) ಹೀಗೆ ಶ್ರೇಷ್ಠ ಪರಂಪರೆಯ ಪ್ರತಿನಿಧಿ ತಾನು ಎಂಬ ನಿಚ್ಚಳ ತಿಳಿವಳಿಕೆ ಬಾಲಾರಲ್ಲಿ ಇತ್ತು. ಎಂಥ ಸನ್ನಿವೇಶದಲ್ಲಿಯೂ ಈ ಕಲೆ, ಇದರ ಮೌಲ್ಯ ಮುಕ್ಕಾಗದಂತೆ ನೋಡಿಕೊಂಡರು; ಎತ್ತರೆತ್ತರಕ್ಕೆ ಬೆಳಸಿದರು.

ಈ ಕೃತಿ ಬಾಲಾರ ಚಿತ್ರಣಕ್ಕೆ ಮಾತ್ರ ಸೀಮಿತವಾಗಿಲ್ಲ. ಬಾಲಾರ ಕರುಳುಬಳ್ಳಿಯೊಂದಿಗೆ ಬೆಸೆದುಕೊಂಡಿದ್ದ ತಲೆಮಾರುಗಳು, ಗುರುವೃಂದ, ತಾಯಿ, ಅಜ್ಜಿ, ಪ್ರತಿಭಾವಂತ ಸೋದರರು, ಪರಂಪರೆಯ ಕೊಂಡಿಯಾದ ಮಗಳು, ಅಳಿಯ, ಮೊಮ್ಮಗ ಹೀಗೆ ಹಬ್ಬುತ್ತ ಹೋಗಿ, ಸಮಗ್ರ ಚಿತ್ರಕ್ಕೆ ಕೈಚಾಚುತ್ತದೆ.

ಈ ಕೃತಿ ಬಹುಮಟ್ಟಿಗೆ ಆಧರಿಸಿರುವುದು ಸಂದರ್ಶನಗಳನ್ನು ಮತ್ತು ಲೇಖನಗಳನ್ನು, ಮಗಳು, ಅಳಿಯ, ಮೊಮ್ಮಗ, ಶಿಷ್ಯರ ಸಂದರ್ಶನಗಳು; ಬಾಲಾರ ಸಾಕ್ಷ್ಯಚಿತ್ರ ತಯಾರಿಸಿದ ಸತ್ಯಜಿತ್ ರಾಯ್ ಲೇಖನ; ತಮಿಳು ಇಸ್ಯೆ ಹಾಗೂ ಮದ್ರಾಸ್ ಮ್ಯೂಸಿಕ್ ಅಕಾಡೆಮಿಯಲ್ಲಿ ಬಾಲಾ ಮಾಡಿದ ವಿದ್ವತ್ಪೂರ್ಣ ಭಾಷಣಗಳು- ಹೀಗೆ ವಿವಿಧ ಆಕರಗಳಿಂದ ಎತ್ತಿ, ಅನುವಾದಿಸಿ, ಸಂಪಾದಿಸಿ, ಕೊಟ್ಟಿರುವಲ್ಲಿ ಶೈಲಜಾ ಮತ್ತು ವೇಣುಗೋಪಾಲರ ಪರಿಶ್ರಮ, ಪ್ರೀತಿ ಎದ್ದು ಕಾಣಿಸುತ್ತವೆ.

ಬಾಲಾರ ಕಲೆ ಪರಂಪರೆಯ ಬೇರುಗಳಲ್ಲಿ ಅರಳಿದ್ದು; ಸಂಗೀತವನ್ನು ಪ್ರಧಾನವಾಗಿ ಆಧರಿಸಿದ್ದು. ಎಷ್ಟೋ ಸಲ ಬಾಲಾ ತಮ್ಮ ಪ್ರಸ್ತುತಿಯಲ್ಲಿ ನೃತ್ಯ ನಿಲ್ಲಿಸಿ ಹಾಡುತ್ತಿದ್ದುದೂ ಉಂಟು. ಬಾಲಾರ ಹೆಜ್ಜೆಗಳು, ಅಭಿನಯ, ಹೃದಯದ ಭಾವವನ್ನು ಬಿಂಬಿಸುವ ಮುಖಭಾವ, ಕಣ್ಣುಗಳ ಮತ್ತು ಕೈಗಳ ಚಲನೆ, ಮುದ್ರೆಗಳು, ಮನೋಧರ್ಮ, ರಾಗ, ಲಯ, ನೃತ್ಯಸಂಗೀತ ಎಲ್ಲವೂ ಸಂಪ್ರದಾಯದ ಚೌಕಟ್ಟಿನಲ್ಲಿಯೇ ಇವೆ. ಅವರ ಸೃಜನಶೀಲತೆ ಸಮೃದ್ಧವಾಗಿ ಹೊಮ್ಮುವುದೂ ಈ ನೆಲೆಯಿಂದಲೇ. ಸಂಪ್ರದಾಯದ ಬಗ್ಗೆ ಅಚಲ ನಿಷ್ಠೆ ಇದ್ದರೂ, ಕೆಲವು ಸಣ್ಣ ಪುಟ್ಟ ಬದಲಾವಣೆಗಳನ್ನು ಬಾಲಾ ಮತ್ತು ಅವರ ಗುರು ಕಂದಪ್ಪ ಪಿಳ್ಳೆ ಮಾಡಿಕೊಂಡರು. ಹಿಮ್ಮೇಳದವರು ಬಳಸುತ್ತಿದ್ದ ಉಡುಗೆಗಳಲ್ಲಿ ಕಂದಪ್ಪ ಮಾರ್ಪಾಟು ಮಾಡಿದರು. ಪ್ರವೇಶ ಮತ್ತು ನಿರ್ಗಮನಗಳಿಗೆ ಸಂಬಂಧಿಸಿದಂತೆ ಬಾಲಾ ಸಾಂಪ್ರದಾಯಿಕ ಕಟ್ಟುಪಾಡುಗಳನ್ನು ಮುರಿದರು. ಆದರೆ, ಸಂಪ್ರದಾಯದಲ್ಲಿದ್ದ ಗುಣಾತ್ಮಕ ಅಂಶಗಳ ಬಗ್ಗೆ ಇಬ್ಬರೂ ಎಂದೂ ಉಪೇಕ್ಷೆ ತೋರಿಸಲಿಲ್ಲ. ಬಾಲಾ ಹೆಚ್ಚು ಓದಿದವರಲ್ಲ. ಆದರೆ, ಕಲೆಯ ಬಗ್ಗೆ ಅವರಿಗೆ ಅಗಾಧವಾದ ಅರಿವು, ವಿದ್ವತ್ತು ಇತ್ತು. ಅವರಿಗೆ ಕಾಳಿದಾಸನ ಬಗ್ಗೆ, ಶಿಲಪ್ಪದಿಕಾರಂ, ಮಣಿಮೇಖಲೈ ಮಹಾಕಾವ್ಯಗಳ ಬಗ್ಗೆ ತಿಳಿದಿತ್ತು. ಶೃಂಗಾರವನ್ನು ಅಶ್ಲೀಲ ಎಂದು ಜರಿದು ಭರತನಾಟ್ಯದಿಂದ ತೆಗೆದುಹಾಕಲು ಕೆಲವರು ಪ್ರಯತ್ನಿಸಿದಾಗ ಬಾಲಾ ಶೃಂಗಾರವನ್ನು ಸಮರ್ಥಿಸಿಕೊಂಡ ರೀತಿ ಪ್ರಬುದ್ಧವಾಗಿದೆ; ಪಾಂಡಿತ್ಯಪೂರ್ಣವಾಗಿದೆ. 'ನೃತ್ಯವೆನ್ನುವುದು ಕೆಡುಕನ್ನು ನಾಶಮಾಡುವ, ಆತ್ಮವನ್ನು ಪರಿಶುದ್ದಗೊಳಿಸುವ ದೈವಿಕ ಕಲೆ' ಎಂಬ ಗಾಢ ನಂಬಿಕೆ ಬಾಲಾರಿಗಿತ್ತು. 'ಶರೀರದ ಮೂಲಕ ಅಧ್ಯಾತ್ಮವನ್ನು ಪ್ರಕಟಿಸುವ ನೃತ್ಯ ಒಂದು ಕಲಾಯೋಗ' ಎನ್ನುತ್ತಿದ್ದರು ಬಾಲಾ, ಮಾನವ ಮತ್ತು ದೈವದ ನಡುವಿನ ಮಿಲನದ ಅನುಭಾವವನ್ನು ಶೃಂಗಾರದಷ್ಟು ಸೊಗಸಾಗಿ ಅಭಿವ್ಯಕ್ತಿಸಲು ಇನ್ನಾವುದೇ ರಸಕ್ಕೂ ಸಾಧ್ಯವಿಲ್ಲ' ಎಂದೂ ಸಮರ್ಥಿಸುತ್ತಿದ್ದರು. ಅವರ ಬದುಕು-ಕಲೆ-ನಂಬಿಕೆಯಲ್ಲಿ ಬಿರುಕು ಎಂಬುದು ಇರಲಿಲ್ಲ.

ಇಂಥ ಸೂಕ್ಷ್ಮ ವಿಚಾರಗಳನ್ನು ಈ ಕೃತಿ ಕಟ್ಟಿಕೊಡುತ್ತದೆ. ಬಾಲಾರ ಕಲೆ, ಸದರ ವಿಶೇಷತೆ, ಮಹತ್ವಗಳ ಬಗ್ಗೆ ಈ ಕೃತಿ ನಿಖರವಾಗಿ ಮಾತನಾಡುತ್ತದೆ. ಆದರೆ, ಬಾಲಾರ ಬದುಕಿನ ವಿವರಗಳು ಸಾಕಷ್ಟು ಇಲ್ಲದಿರುವ ಕೊರತೆಯನ್ನು ಉಳಿಸುತ್ತದೆ. *ದಕ್ಷಿಣ ಭಾರತದಲ್ಲಿ ದೇವದಾಸಿ ಪದ್ಧತಿ ಸಂಗೀತ-ನೃತ್ಯ ಕಲೆಗಳನ್ನು ಪೋಷಿಸಿಕೊಂಡು ಬಂದಿದ್ದ ರೀತಿ-ನೀತಿ, ಅದರ ಕಲಾನಿಷ್ಠೆ, ಸಾಮಾಜಿಕ, ರಾಜಕೀಯ, ಸಾಂಸ್ಕೃತಿಕ ಪಲ್ಲಟಗಳಿಗೆ ಎದೆಕೊಟ್ಟು ನಿಂತ ಈ ಸಮುದಾಯದ ಉದಾತ್ತ ನಿಲುವು ಇತ್ಯಾದಿ ಸಂಗತಿಗಳ ಚರಿತ್ರೆ ಬಹಳ ಮುಖ್ಯವಾದದ್ದು. ಈ ಚರಿತ್ರೆಯನ್ನು ಇಲ್ಲಿ ಅಷ್ಟಾಗಿ ಪರಿಗಣಿಸಿಲ್ಲ, ಜಗದೀಶ್ ಕೊಪ್ಪ, ಈ ದಿಕ್ಕಿನಲ್ಲಿ ನಡೆಸಿರುವ ಶೋಧ ಮತ್ತು ಎಂ.ಎಸ್.ಸುಬ್ಬುಲಕ್ಷ್ಮಿ, ಬೆಂಗಳೂರು ನಾಗರತ್ನಮ್ಮ ಮೊದಲಾದವರನ್ನು ಕುರಿತು ಅವರು ಪ್ರಕಟಿಸಿರುವ ಕೃತಿಗಳು ಈ ಕೊರತೆಯನ್ನು ತುಂಬುವಂತಿವೆ.

-ಜಿ.ಪಿ.ಬಸವರಾಜು

ಲೇಖನ ಕೃಪೆ : ಹೊಸ ಮನುಷ್ಯ ಸಮಾಜವಾದೀ ಮಾಸಿಕ ದಿನಪತ್ರಿಕೆ (ಮೇ 2018)

Related Books