ಕಾಲದೊಂದೊಂದೇ ಹನಿ

Author : ಸುಬ್ರಾಯ ಚೊಕ್ಕಾಡಿ

Pages 400

₹ 350.00




Year of Publication: 2021
Published by: ವಿಕಾಸ ಪ್ರಕಾಶನ
Address: # 1541, 16 ನೇ ಮುಖ್ಯ ರಸ್ತೆ , ಎಂ.ಸಿ. ಲೇಔಟ್, ವಿಜಯನಗರ ಬೆಂಗಳೂರು -560040
Phone: 9900095204

Synopsys

‘ಕಾಲದೊಂದೊಂದೇ ಹನಿ’ ಹಿರಿಯ ಸಾಹಿತಿ ಸುಬ್ರಾಯ ಚೊಕ್ಕಾಡಿ ಅವರ ಅನುಭವ ಕಥನ. ಈ ಕಥನವನ್ನು ಅಂಜನಾ ಹೆಗಡೆ ನಿರೂಪಣೆ ಮಾಡಿದ್ದಾರೆ. ಈ ಕೃತಿಗೆ ಹಿರಿಯ ಲೇಖಕ, ಭಾಷಾ ವಿಜ್ಞಾನಿ ಕೆ.ವಿ. ತಿರುಮಲೇಶ್ ಅವರು ಬೆನ್ನುಡಿ ಬರೆದಿದ್ದಾರೆ. ಸಾಹಿತಿ, ಅಧ್ಯಾಪಕ, ಕೃಷಿಕ, ಗೃಹಸ್ಥ ಎಂಬೀ ಬಹುಮುಖಿ ವ್ಯಕ್ತಿ ನಮಗೆ ಸಾಹಿತಿಯೆಂದೇ ಪರಿಚಿತರು. ಕವಿತೆ, ನಾಟಕ, ಲೇಖನ ಪ್ರಕಾರಗಳಲ್ಲಿ ಸರಿಸಮಾನ ಸಾಧನೆಗಳನ್ನು ಅವರು ಮಾಡಿದ್ದರೂ, ಅವರ ಮುಖ್ಯ ಕೊಡುಗೆಯಿರುವುದು ಕವಿಯಾಗಿ ಎನ್ನುತ್ತಾರೆ ತಿರುಮಲೇಶ್. ಜೊತೆಗೆ ಅರುವತ್ತರ ದಶಕದಲ್ಲಿ ನವ್ಯ ಚಳುವಳಿಯ ಪ್ರಾದುರ್ಭಾವದ ಕಾಲದಲ್ಲಿ ಸಾಹಿತ್ಯ ಕ್ಷೇತ್ರವನ್ನು ಪ್ರವೇಶಿಸಿದ ಹಳ್ಳಿಗಾಡಿನ ಕವಿ ಚೊಕ್ಕಾಡಿ. ನನ್ನಂಥವರು ಹಳ್ಳಿ ಬಿಟ್ಟು ಪಟ್ಟಣ ಸೇರಿದರೆ ಚೊಕ್ಕಾಡಿ ತನ್ನ ಹುಟ್ಟೂರನ್ನು ಬಿಡಲಿಲ್ಲ. ಆದರೆ ಕಾಸರಗೋಡಿನ(ಈಗಿಲ್ಲದ) ಎಂ.ವ್ಯಾಸ(ಈಗಿಲ್ಲದ), ಎಂ.ಗಂಗಾಧರ ಭಟ್ಟ, ನಾನು ಹಾಗೂ ನೆರೆಯ ಸುಳ್ಯದ ಚೊಕ್ಕಾಡಿ ನಮ್ಮ ಕೋಶಾವಸ್ಥೆಯಲ್ಲಿ ಆಗಾಗ ಬೆರೆಯುವುದಿತ್ತು. ಆಗ ಬಹಳ ಮುಂಚೂಣಿಯಲ್ಲಿದ್ದವರು ಚೊಕ್ಕಾಡಿ. ಗೋಕುಲ ಪತ್ರಿಕೆಯಲ್ಲಿ ಅವರ ಅಸಮ ಸಾಲುಗಳ ಉದ್ದುದ್ದ ಕವಿತೆಗಳು ಪ್ರಕಟವಾಗಿ ನಮ್ಮನ್ನು ಬೆರಗುಗೊಳಿಸುತ್ತಿದ್ದವು ಎಂದು ನೆನಪಿಸಿಕೊಳ್ಳುತ್ತಾರೆ. ಈ ಇಡೀ ಕೃತಿಯಲ್ಲಿ ಸುಬ್ರಾಯ ಚೊಕ್ಕಾಡಿ ಅವರ ಸಾಹಿತ್ಯಿಕ ಕಥನವೂ ಬೆರಗುಗೊಳಿಸುವಂತೆ ಅನಾವರಣಗೊಂಡಿದೆ.

About the Author

ಸುಬ್ರಾಯ ಚೊಕ್ಕಾಡಿ
(29 June 1940)

ಕವಿ, ವಿಮರ್ಶಕ, ನಾಟಕಕಾರರಾದ ಸುಬ್ರಾಯ ಚೊಕ್ಕಾಡಿಯವರು  ಹುಟ್ಟಿದ್ದು 29-06-1940 ರಂದು ಸುಳ್ಯ ತಾಲ್ಲೂಕಿನ ಚೊಕ್ಕಾಡಿಯಲ್ಲಿ. ತಂದೆ ಯಕ್ಷಗಾನ ಭಾಗವತರಾದ ಗಣಪಯ್ಯ, ತಾಯಿ ಸುಬ್ಬಮ್ಮ. ಪ್ರಾಥಮಿಕ ಶಿಕ್ಷಣ ಚೊಕ್ಕಾಡಿ. ಹೈಸ್ಕೂಲು ಓದಿದ್ದು ಪಂಜದಲ್ಲಿ  ಮೈಸೂರು ವಿಶ್ವವಿದ್ಯಾಲಯದ ಅಂಚೆ ಮತ್ತು ತೆರಪಿನ ಶಿಕ್ಷಣ ಸಂಸ್ಥೆಯಿಂದ ಎಂ.ಎ. (ಕನ್ನಡ) ಪದವಿ. ತಂದೆ ಯಕ್ಷಗಾನ ಕವಿ, ಭಾಗವತರಾದುದರಿಂದ ಕಿವಿಗೆ ಬೀಳುತ್ತಿದ್ದ ಲಯಬದ್ಧ ಹಾಡುಗಳು, ಹೈಸ್ಕೂಲಿಗೆ ನಡೆದು ಹೋಗುವಾಗ ಕಾಡಿನ ಮಧ್ಯೆ ಕೇಳುತ್ತಿದ್ದ ನೀರಿನ ಝುಳು ಝುಳು ನಾದ, ಹಕ್ಕಿಗಳ ಕೂಗು, ಮರಗಳ ಮರ್ಮರತೆಯಿಂದ ಪ್ರಭಾವಿತರಾಗಿ ಹೈಸ್ಕೂಲು ವಿದ್ಯಾರ್ಥಿಯಾಗಿದ್ದಾಗಲೇ ಕವನ ಕಟ್ಟುವ ಕಾಯಕ ಪ್ರಾರಂಭ. ಉದ್ಯೋಗಕ್ಕಾಗಿ ...

READ MORE

Reviews

ʼಕಾಲದೊಂದೊಂದೇ ಹನಿʼ ಆತ್ಮಚರಿತ್ರೆಯ ವಿಮರ್ಶೆ

“ಕಾಲದೊಂದೊಂದೇ ಹನಿ' ಕವಿ ಸುಬ್ರಾಯ ಚೊಕ್ಕಾಡಿಯವರ ಅನುಭವ ಕಥನ. ತಮ್ಮ 'ಇರುಳ ಸದ್ದುಗಳು' ಎಂಬ ಕವನದ ಸಾಲೊಂದನ್ನು ಶೀರ್ಷಿಕೆಯಾಗಿ ಇರಿಸಿರುವ ಈ ಕೃತಿಯನ್ನು ಚೊಕ್ಕಾಡಿಯವರು ಆತ್ಮಕಥನವೆಂದು ಕರೆಯದೆ “ಅನುಭವ ಕಥನ' ಎನ್ನಲು ಮುಖ್ಯ ಕಾರಣ, ಇವುಗಳೆಲ್ಲ ಬದುಕಿನ ಪಯಣದಲ್ಲಿ ಪಡೆದ ವೈಯಕ್ತಿಕ, ಸಾಮಾಜಿಕ ಅನುಭವಗಳ ದಾಖಲೆ ಎಂಬ ತಾತ್ವಿಕ ನಿಲುವು. ಆತ್ಮಕಥೆ ಬರೆಯುವಷ್ಟು ದೊಡ್ಡ ವ್ಯಕ್ತಿಯಾಗಲಿ ಅಥವಾ ಅಂತಹ ದೊಡ್ಡ ಜೀವನದರ್ಶನವಾಗಲಿ ತನ್ನದಲ್ಲ ಎನ್ನುವುದು ಅವರ ವಿನಯ. ಆದರೆ ತಾನು ಹುಟ್ಟಿ, ಬೆಳೆದು, ಬಾಳಿ, ಬದುಕುತ್ತಿರುವ ತನ್ನ ಊರಾದ ಚೊಕ್ಕಾಡಿ ಎಂಬ ಸ್ಥಳ ಕೇಂದ್ರವಾಗಿ ತನ್ನ ಬಾಳಿನಲ್ಲಿ ಕಂಡ ಒಂದು ಕಾಲಘಟ್ಟವನ್ನು (1950-2020), ಅದರ ಸಾಂಸ್ಕೃತಿಕ, ಆರ್ಥಿಕ, ರಾಜಕೀಯ ನೆಲೆಗಳಲ್ಲಿ ಈ ಕೃತಿ ದಾಖಲಿಸುತ್ತದೆ. ಆ ಮೂಲಕ ಸ್ವಾತಂತ್ರ್ಯೋತ್ತರದ ಕನ್ನಡ ಪರಿಸರದಲ್ಲಿ ಏಳು ದಶಕಗಳ ಸಾಂಸ್ಕೃತಿಕ ಚರಿತ್ರೆ ವಿಕಾಸಗೊಂಡ ಕ್ರಮವನ್ನೂ ಸೂಚಿಸುತ್ತದೆ.

ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲ್ಲೂಕಿನ ಕುಗ್ರಾಮವಾಗಿದ್ದ ಊರು ಚೊಕ್ಕಾಡಿ, ಶಿವರಾಮ ಕಾರಂತರ 'ಬೆಟ್ಟದ ಜೀವ'ದ ಪರಿಸರ, ಬಂಟಮಲೆ ಶ್ರೇಣಿಯ ಸುತ್ತಲಿನ ಗುಡ್ಡಕಣಿವೆಗಳ ನಡುವೆ ಹಬ್ಬಿರುವ ಭತ್ತ, ಕಂಗು, ತೆಂಗುಗಳ ಈ ಕೃಷಿಪ್ರದೇಶ ಯಕ್ಷಗಾನದ ಮೂಲಕ ಕಲಾಭಿರುಚಿಯನ್ನು ಬೆಳೆಸಿಕೊಂಡ ಊರು. ಅಲ್ಲಿ ಅಜ್ಜನಗಡ್ಡೆ ಗಣಪಯ್ಯ ಭಾಗವತರ ಹಿರಿಯ ಮಗನಾಗಿ ಜನಿಸಿದ ಸುಬ್ರಾಯರು ಬಡತನದಲ್ಲಿ ಓದಿ, ಶಾಲಾ ಮಾಸ್ತರರಾಗಿ ಸ್ವಾಧ್ಯಾಯದಿಂದ ಪದವಿಗಳನ್ನು ಪಡೆದವರು. ಸಾಹಿತ್ಯಾಭಿರುಚಿಯನ್ನೂ ಬೆಳೆಸಿಕೊಂಡವರು. ತಂದೆ ಉಪವೃತ್ತಿಯಾಗಿ ಮಾಡುತ್ತಿದ್ದ ಪುಸ್ತಕ ವ್ಯಾಪಾರ ಅವರ ಸಾಹಿತ್ಯ ಓದಿನ ಮೊದಲ ಪ್ರೇರಣೆ. ಮುಂದೆ ಗೋಪಾಲಕೃಷ್ಣ ಅಡಿಗರ ಕಾವ್ಯದಿಂದ ಪ್ರಭಾವಿತರಾದ ಅವರು ಸುಳ್ಳದ ನಡುವಿರುವ ನವಸಾಹಿತಿಗಳ 'ಸುಮನಸಾ' ವಿಚಾರವೇದಿಕೆ ಕಟ್ಟಿ ತಮ್ಮ ಸುತ್ತಮುತ್ತಲಿನ ಊರುಗಳಲ್ಲಿ ಹೊಸ ಸಾಹಿತ್ಯಾಭಿರುಚಿಯನ್ನು ಬೆಳೆಸಿದರು.

1970ರ ದಶಕದಲ್ಲಿ ಜಿ.ಎಸ್.ಉಬರಡ್ಕ, ಬಾಲಸುಬ್ರಹ್ಮಣ್ಯ ಕಂಜರ್ಪಣೆ, ಕಿರಣ, ಪ್ರಸಾದ್ ರಕ್ಷಿದಿ, ಪುರುಷೋತ್ತಮ ಬಿಳಿಮಲೆ, ಕೆ.ಪಿ.ಸುರೇಶ, ಅರವಿಂದ ಚೊಕ್ಕಾಡಿ, ಸಂತೋಷ ಚೊಕ್ಕಾಡಿ ಮೊದಲಾದ ಇಂದಿನ ಹಲವು ಬರಹಗಾರರು ಚೊಕ್ಕಾಡಿಯವರ ಒಡನಾಟದಲ್ಲಿ ಇದ್ದವರು. ಪಿ.ಲಂಕೇಶರ ಮೊದಲ ನಾಟಕ 'ನನ್ನ ತಂಗಿಗೊಂದು ಗಂಡು ಕೊಡಿ' ಚೊಕ್ಕಾಡಿಯಿಂದ ಪ್ರಕಟವಾಯಿತು ಎಂಬುದು ಆ ಕಾಲದಲ್ಲಿ ಕನ್ನಡ ಸಾಹಿತ್ಯದ ಹೊಸ ಚಿಂತನೆಯ ಜೊತೆ ಚೊಕ್ಕಾಡಿಯಂತಹ ಒಂದು ಟಾರು ರಸ್ತೆಯೂ ಇಲ್ಲದ ಪುಟ್ಟಹಳ್ಳಿಗೆ ಇದ್ದ ಸಾಂಸ್ಕೃತಿಕ ಸಂಪರ್ಕಗಳನ್ನು ಸೂಚಿಸುತ್ತದೆ. ಕಾರಂತ, ಮಾಸ್ತಿ, ಅಡಿಗ, ತಿರುಮಲೇಶ್ ಹೀಗೆ ಹಲವು ಲೇಖಕರ - ಪರಿಚಯ, ಭೇಟಿ ಇತ್ಯಾದಿ ವಿವರಗಳು ಅಗಿನ ಸಾಹಿತ್ಯಸಂಸ್ಕೃತಿಗಳ ಚರಿತ್ರೆ, ಚಿಂತನಾ ಕ್ರಮಗಳಿಗೊಂದು ದಿಕ್ಕೂಚಿ..

“ಚೋಮನ ದುಡಿ' ಕಾದಂಬರಿಯ ನಾಟಕ ಅವತರಣಿಕೆಯಲ್ಲಿ 'ಚೋಮ'ನಾಗಿ ಸುಳ್ಯದಲ್ಲಿ ಹೇಗೆ ಬದಲಾಯಿಸಿಕೊಳ್ಳಬಹುದು ಎಂಬುದು ಅವುಗಳಲ್ಲಿ ಒಂದು. ಈ ಕೃತಿಯಲ್ಲಿರುವ ಇಂತಹ ಹಲವು ಒಳನೋಟಗಳನ್ನು ಶಿಕ್ಷಣ ಇಲಾಖೆ ಮುಂದಿನ ಶೈಕ್ಷಣಿಕ ಕ್ಷೇತ್ರದ ಬದಲಾವಣೆಗಳ ಸಂದರ್ಭದಲ್ಲಿ ಚರ್ಚಿಸಿ, ಪರಿಶೀಲಿಸಿ ಬಳಸಿಕೊಂಡರೆ ಎಷ್ಟು ಉತ್ತಮ ಎಂಬ ಭಾವನೆ ಓದುಗರಿಗೆ ಬಾರದಿರದು.

ಚೊಕ್ಕಾಡಿಯವರ ಕೃಷಿಲೋಕದ ಅನುಭವ ಸ್ವಾತಂತ್ರ್ಯೋತ್ತರ ಭಾರತದಲ್ಲಿ ಬದಲಾಗುತ್ತಾ ಹೋದ ಗ್ರಾಮೀಣ ಕೃಷಿ ಆರ್ಥಿಕತೆಯ ಸಂಕೇತದಂತಿದೆ. ಕುಟುಂಬದ ಹಿರಿಯ ಮಗನಾಗಿ ಸಿಕ್ಕಿದ ಸಿಹಿಕಹಿಗಳ ವಿವರಗಳು ಅವರ ಮನಸ್ಸಿನೊಳಗೆ ಹಲವು ವರುಷಗಳ ಕಾಲ ಮನುಷ್ಯ ಸ್ವಭಾವದ ಬಗೆಗಿನ ಹೊಯ್ದಾಟಗಳಿಂದ ಹುಟ್ಟಿದ ಒತ್ತಡದ ಬಿಡುಗಡೆ, ಕರ್ತವ್ಯ ಮತ್ತು ಹಕ್ಕುಗಳ ಪರಸ್ಪರ ಸಂಬಂಧಗಳ ನೈತಿಕ ನೆಲೆಗಳಿಗೆ ಉತ್ತರ ಯಾವುದು ಎಂಬುದು ಈ ಇಳಿವಯಸ್ಸಿನಲ್ಲೂ ಅವರಿಗೆ ಬಗೆಹರಿಯದ ಚಿಂತನೆ.

'ಕವಿತೆ ಎನ್ನುವುದೊಂದು ಕಾಮರೂಪಿ'ಎನ್ನುವುದು ಇಲ್ಲಿ ಚೊಕ್ಕಾಡಿಯವರ ಮಾತು.ಅಡಿಗರ ಕಾವ್ಯಮಾರ್ಗದ ಸಂಕೀರ್ಣ ಶೋಧನೆಗಳನ್ನು ಬಿಟ್ಟು ತಮ್ಮ ಪುಟ್ಟ ಪ್ರಪಂಚದಲ್ಲಿ ಬದುಕು ಹೇಗೆ ಬಂತೋ ಹಾಗೆ ಸ್ವೀಕರಿಸುತ್ತಾ, ಅವರ ಧ್ಯಾನಸ್ಥ ಕವನದ 'ಪಾರಿಜಾತ' ಗಿಡದಂತೆ ಇದ್ದಲ್ಲೇ ಆಕಾಶಕ್ಕೆ ಲಗ್ಗೆ ಇಟ್ಟು ಸುತ್ತಲೂ ಪರಿಮಳ, ಸುಂದರ ಹೂವುಗಳ ನೆರಳಿನ ಪುಟ್ಟ ನೆಲೆ ನಿರ್ಮಿಸಿಕೊಳ್ಳಬೇಕೆಂದು ಹೊರಟವರು ಚೊಕ್ಕಾಡಿ, ಸುಗಮಸಂಗೀತದ ಕಾವ್ಯ ಕವಲು ಅವರಿಗೆ ಹೆಚ್ಚಿನ ಕೀರ್ತಿ ತಂದಿದೆ. ಉತ್ತಮ ಭಾವಗೀತೆಗೆ ಸಂಗೀತವನ್ನು ಅಳವಡಿಸುವುದಕ್ಕೆ ಮತ್ತು ನಿರ್ಮಿಸಿದ ಸಂಗೀತಕ್ಕೆ ಗೀತೆ ಬರೆಯುವುದಕ್ಕೆ ಗುಣಮಟ್ಟದಲ್ಲಿ ವ್ಯತ್ಯಾಸವಿರುತ್ತದೆ ಎಂಬುದನ್ನು ಸ್ವತಃ ವಿಮರ್ಶೆಗಳನ್ನು ಬರೆಯುವ ಚೊಕ್ಕಾಡಿ ಅರಿತಿದ್ದಾರೆ. ಚೊಕ್ಕಾಡಿಯವರ ಕಾವ್ಯ ಪಯಣದ ಅನುಭವ ಕಥನವು ಅವರ ಕಾವ್ಯ ರಚನೆ ಮತ್ತು ಸುಗಮಸಂಗೀತ ಲೋಕ ಎರಡನ್ನೂ ಸಮಾನಾಂತರ ರೇಖೆಗಳಂತೆ ಕಾಣಿಸುತ್ತದೆ. ನಮ್ಮ ಸಾಹಿತ್ಯ-ಸಂಸ್ಕೃತಿ ಚರಿತ್ರೆಯ ದಾಖಲೆಯಾಗಿ ಕವಿಯೊಬ್ಬನ ಅ ವಿವರಣೆಗಳೂ ಮುಖ್ಯವಾಗುತ್ತವೆ.

(ಕೃಪೆ; ಪ್ರಜಾವಾಣಿ, ಬರಹ- ಎಸ್.‌ ಆರ್‌ ವಿಜಯಶಂಕರ)

Related Books