ಕಂಡವರಿಗಷ್ಟೆ

Author : ಗೀತಾ ವಸಂತ

Pages 400

₹ 275.00




Year of Publication: 2021
Published by: ಬೇಂದ್ರೆ ಬದುಕು ಬರಹ
Address: ಬೆಂಗಳೂರು
Phone: 9886436020

Synopsys

ವರಕವಿ ಡಾ. ದ.ರಾ.ಬೇಂದ್ರೆ ಅವರ ಕುರಿತು ವಿವಿಧ ಲೇಖಕರು ಬರೆದ ಬರಹಗಳನ್ನು ಗೀತಾವಸಂತ ಹಾಗೂ ರಾಜಕುಮಾರ ಮಡಿವಾಳ ಅವರು ಸಂಪಾದಿಸಿದ ಕೃತಿ ’ಕಂಡವರಿಗಷ್ಟೆ’. ಬೇಂದ್ರೆ ಅವರ 125ನೇ ಜನ್ಮ ದಿನದ ಅಂಗವಾಗಿ ಈ ಕೃತಿ ಪ್ರಕಟಗೊಂಡಿದೆ. ಕೃತಿಯಲ್ಲಿ ಒಟ್ಟು 66 ಲೇಖನಗಳಿವೆ. ‘ಬೇಂದ್ರೆ ಕಂಡವರು, ಬೇಂದ್ರೆಯವರನ್ನ ಕವಿತೆಯಲ್ಲಿ ಕಂಡವರು, ಬೇಂದ್ರೆಯವರನ್ನ ಕಾಣುತ್ತಲೇ ಇರುವವರು, ಹೊಸ ಮನಸುಗಳ, ಹೊಸ ಕಣ್ಣಿಗೆ ಕಟ್ಟಿಕೊಡುವ ನೆನಪು, ಸ್ಮರಣೆಗಳ ಭಾವಗುಚ್ಛ ಇದು.’ ಎಂದು ಸಂಪಾದಕರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. 

 

About the Author

ಗೀತಾ ವಸಂತ
(20 April 1976)

ಗೀತಾ ವಸಂತ- ಕವಯತ್ರಿ, ಕಥೆಗಾರ್ತಿ ಮತ್ತು ವಿಮರ್ಶಕಿ. ಗೀತಾ ಅವರು ಹುಟ್ಟಿದ್ದು ಶಿರಸಿಯ ಎಕ್ಕಂಬಿ ಸಮೀಪದ ಕಾಡನಡುವಿನ ಒಂಟಿಮನೆ ಕಾಟೀಮನೆಯಲ್ಲಿ 1976 ಏಪ್ರಿಲ್ 20 ರಂದು  . ಈಗ ತುಮಕೂರು ವಿಶ್ವವಿದ್ಯಾನಿಲಯದ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ‘ಚೌಕಟ್ಟಿನಾಚೆಯವರು’ ಇವರ ಪ್ರಮುಖ ಕಥಾ ಸಂಕಲನ. ’ಹೊಸಿಲಾಚೆ ಹೊಸ ಬದುಕು , ಪರಿಮಳದ ಬೀಜ’ ಗೀತಾ ವಸಂತ ಅವರ ಕವನಸಂಕಲನಗಳು. ಬೆಳಕಿನ ಬೀಜ, ಬೇಂದ್ರೆ ಕಾವ್ಯ - ಅವಧೂತ ಪ್ರಜ್ಞೆ, ಹೊಸ ದಿಗಂತದ ಹೊಸದಾರಿ ಇವರ ಪ್ರಮುಖ ವಿಮರ್ಶಾ ಕೃತಿಗಳು, ಸ್ವಾತಂತ್ರ್ಯೋತ್ತರ ಕಥನ ಸಾಹಿತ್ಯದಲ್ಲಿ ಸ್ತ್ರೀವಾದಿ ಚಿಂತನೆಗಳು ...

READ MORE

Reviews

ಬೇಂದ್ರೆ ಯವರ ಕಂಡವರಿಗಷ್ಟೆ ಕೃತಿಯ ವಿಮರ್ಶೆ- ಹೊಸ ಮನುಷ್ಯ

ಬಗೆದಷ್ಟೂ ದಕ್ಕುತ್ತಲೇ ಇರುವ ಬೇಂದ್ರೆ ಕಾವ್ಯ ತನ್ನ ನಿತ್ಯ ನೂತನ ಗುಣದಿಂದಾಗಿ ಸಾರ್ವಕಾಲಿಕ ತೆ ಮನ್ನಣೆ ಯನ್ನು ಪಡೆದುಕೊಂಡಿದೆ. ಹಾಗಾಗಿ, ಕಾಲಕಾಲಕ್ಕೆ ಬೇಂದ್ರೆ ಕಾವ್ಯಪ್ರಪಂಚವು ಅರ್ಥಪೂರ್ಣವಾದ ಮರು ಓದನ್ನು, ಮರು ಶೋಧನೆಯನ್ನು ಬಯಸುತ್ತದೆ. ಬದಲಾದ ಕಾಲಘಟ್ಟದಲ್ಲಿ ಒಬ್ಬ ಲೇಖಕನನ್ನು ಮರು ಶೋಧ ಮಾಡುವುದು ಎಂದರೆ ಅವರ ಪಠ್ಯಗಳಿಗಿರುವ ಆಳ-ವಿಸ್ತಾರವನ್ನು ಅರಿಯುವುದು ಎಂದರ್ಥ. ಈ ಹಿನ್ನಲೆಯಲ್ಲಿ ಬೇಂದ್ರೆ ಕಾವ್ಯದ ಕುರಿತಾಗಿ ವಿಮರ್ಶಕರಾದ ಗೀತಾ ವಸಂತ ಮತ್ತು ರಾಜಕುಮಾರ ಮಡಿವಾಳರ- ಇವರುಗಳು ಸಂಪಾದಿಸಿರುವ ವಿಮರ್ಶಾ ಸಂಕಲನ “ಕಂಡವರಿಗಷ್ಟೆ' ಇದೀಗೆ ಪ್ರಕಟಗೊಂಡಿದ್ದು, ಬೇಂದ್ರೆ `ಕಾಲಾತೀತ' ಗುಣವನ್ನು ಶೋಧಿಸುವ ಮಹದಾಸೆಯನ್ನು ಇಟ್ಟುಕೊಂಡಿದೆ.

ಒಟ್ಟು ೬೬ ಲೇಖನಗಳಿರುವ ಈ ಸಂಕಲನವನ್ನು ಎರಡು ಭಾಗಗಳಾಗಿ ವಿಂಗಡಿಸಲಾಗಿದೆ. ಮೊದಲ ಭಾಗವನ್ನು 'ಬೇಂದ್ರೆ : ಪರಂಪರೆಯ ಬನಿ' ಎಂದು ಅರ್ಥಪೂರ್ಣವಾಗಿ ವಿಂಗಡಿಸಿ ಬೇಂದ್ರೆಯವರ ವ್ಯಕ್ತಿತ್ವ ಮತ್ತು ಅವರ fiಕಾವ್ಯಪರಂಪರೆಯನ್ನು ಒರೆಹಚ್ಚುವ ಲೇಖನಗಳನ್ನು ಜೋಡಿಸಲಾಗಿದೆ. ಎರಡನೆಯ ಭಾಗ “ಬೇಂದ್ರೆ: ಎದೆಯ ದನಿ” ಯಲ್ಲಿ ಬೇಂದ್ರೆಯವರ ಬಿಡಿ ಬಿಡಿ ಕಾವ್ಯಗಳ ವ್ಯಾಖ್ಯಾನ ಹಾಗೂ ಅವರೊಂದಿಗಿನ ಒಡನಾಟದ ಅನುಭವಗಳನ್ನು ದಾಖಲಿಸಲಾಗಿದೆ. ಈ ಎರಡೂ ಭಾಗಗಳನ್ನು ಒಟ್ಟೊಟಾಗಿ ನೋಡಿದಾಗ ಬೇಂದ್ರೆ ಕಾವ್ಯ ಪ್ರಪಂಚಕ್ಕಿರುವ ಸಂಕೀರ್ಣತೆ, ವಿಭಿನ್ನ ಆಯಾಮಗಳು ಮತ್ತು ಅರ್ಥ ವಿಸ್ತರಣೆಯ ಸಾಧ್ಯತೆಗಳು ಗೋಚರಿಸುತ್ತದೆ.

ಮೊದಲನೆಯ ಭಾಗದಲ್ಲಿ ಪ್ರಕಟವಾಗಿರುವ 'ಕವಿ ಗುರುಗಳು' ಶೀರ್ಷಿಕೆಯ ಲೇಖನದಲ್ಲಿ ರಹಮತ್ ತರೀಕೆರೆಯವರು ಕೆಲವೊಂದು ಆಸಕ್ತಿಕರ ಭಿನ್ನಾಭಿಪ್ರಾಯವನ್ನು ದಾಖಲಿಸುತ್ತಾರೆ. ಅವರ ಪ್ರಕಾರ “ಲೋಕದ ಅನುಭಾವಿ ಸಂತ ಕವಿಗಳ ಕುರಿತು ಒಲವು ತೋರುವ ಬೇಂದ್ರೆ, ಸ್ಥಳೀಯ ಸಂತರ ಬಗ್ಗೆ ಅನಾಸಕ್ತರಾಗಿದ್ದರು” (ಪು. ೭೪). ಇದಕ್ಕೆ ಅವರೇ ಉತ್ತರಿಸುತ್ತಾ “ಸ್ಥಳೀಯ ಸಂತರ ಹೆಸರಲ್ಲಿ ರೂಢವಾಗಿರುವ ಆಚರಣೆಗಳು ಮತ ಮೌಢಕ್ಕೆ ಕಾರಣವಾಗುತ್ತಿದೆ ಎಂದು ಕಳವಳಿಸಲಾಗುತ್ತಿದೆ” ಎಂದು ದಾಖಲಿಸುತ್ತಾರೆ. ಆದರೆ, ಮೌಢಗಳ ಕಾರಣದಿಂದಾಗಿ ಬೇಂದ್ರೆಯವರು ಸ್ಥಳೀಯ ಸಂತರನ್ನು ಅನುಸಂಧಾನ ಮಾಡಲಿಲ್ಲ ಎಂಬುದು ಚರ್ಚಾರ್ಹ ವಿಚಾರವೇ ಸರಿ.

ಇನ್ನೊಂದು ಲೇಖನದಲ್ಲಿ ಪರಮಾರ್ಥ ಮತ್ತು ಇಹ ಎರಡನ್ನು ಒಟ್ಟೋಟ್ಟಿಗೆ ನೋಡುವ ನೋಟಕ್ರಮ ಬೇಂದ್ರೆ ಕಾವ್ಯಕ್ಕಿದೆ ಎಂದು ದಾಖಲಿಸುವ ಬಸವರಾಜ ಕಲ್ಲುಡಿಯವರು ಬೇಂದ್ರೆಯವರ ಆಧ್ಯಾತ್ಮವು ಏಕಕಾಲಕ್ಕೆ “ವೈಯಕ್ತಿಕವೂ, ನಿಗೂಢವೂ ಮತ್ತು ಬೌದ್ಧಿಕವೂ” ಆಗಿದೆ ಎಂದು ವಾದಿಸುತ್ತಾರೆ. ಹಾಗೆಯೇ ಮತ್ತೊಂದು ಲೇಖನದಲ್ಲಿ | ಎನ್. ಜಗದೀಶ ಕೊಪ್ಪ ಇವರು ಬೇಂದ್ರೆಯವರು ಬೆಳೆದ ಪರಿಸರ ವೈದಿಕ ಪರಂಪರೆಗೆ ಸೇರಿದರೂ ಸಹ ಜಡ್ಡುಗಟ್ಟಿದ ಆಸ್ತಿಕತೆಯನ್ನು ಮೀರುವ ಅನುಭಾವ ಪ್ರಜ್ಞೆ ಮತ್ತು ಅಲೌಕಿಕತೆಯ ದೃಷ್ಟಿಕೋನ ಅದರಲ್ಲಿತ್ತು ಎಂದು ಅಭಿಪ್ರಾಯ ಪಡುತ್ತಾರೆ.

ಈ ವಿಮರ್ಶಾ ಸಂಕಲನದಲ್ಲಿ ಬೇಂದ್ರೆ ಕಾವ್ಯಪ್ರಪಂಚಕ್ಕಿರುವ ನಿಗೂಢತೆ, ವಿಶ್ವಾತ್ಮಕತೆ, ಅನುಭಾವಿ ನೆಲೆ, ಆಧ್ಯಾತ್ಮಿಕತೆ, ಮನುಷ್ಯ ಸಂಬಂಧದಲ್ಲಿರುವ ಸಂಕೀರ್ಣತೆಗಳು ಮೊದಲಾದವುಗಳನ್ನು ವಿಮರ್ಶಿಸುವ ಹಲವಾರು ಲೇಖನಗಳಿವೆ. ಅಂತೆಯೇ ಅವರ ಕಾವ್ಯಕ್ಕಿರುವ ಸಮಕಾಲೀನತೆಯ ಗುಣವನ್ನು ಕೆಲ ಲೇಖನಗಳು ಪ್ರಸ್ತಾಪಿಸುತ್ತವೆ. ಉದಾಹರಣೆಯಾಗಿ ಅಪ್ಪಗೆರೆ ಸೋಮಶೇಖರ ಅವರು ಬೇಂದ್ರೆ ಕಾವ್ಯಕ್ಕೆ “ರಾಷ್ಟ್ರೀಯತೆಯನ್ನು ವಿಶ್ವಾತ್ಮಕತೆಯನ್ನಾಗಿ ನೋಡುವ ಮತ್ತು ವಿಶ್ವಾತ್ಮಕತೆಯನ್ನು ರೂಪಾಂತರಿಸುವ ಶಕ್ತಿಯಿದೆ” ಎಂದು ವ್ಯಾಖ್ಯಾನಿಸುತ್ತಾ, ಅವರ ಕಾವ್ಯಪ್ರಪಂಚವು ಆಗ ತಾನೆ ರೂಪುಗೊಳ್ಳುತ್ತಿರುವ ರಾಷ್ಟ್ರೀಯತೆಯ ಪರಿಕಲ್ಪನೆಗೆ ಮುಖಾಮುಖಿಯಾಗಿದೆ.” ಎಂದು ಅಭಿಪ್ರಾಯಪಡುತ್ತಾರೆ. ಭಾರತೀಯ ರಾಷ್ಟ್ರೀಯತಾವಾದವನ್ನು ಬೇಂದ್ರೆ ಕಾವ್ಯ ಸಂಕುಚಿತಗೊಳಿಸಿ ನೋಡಿಲ್ಲ ಎಂದು ವಾದಿಸುವ ಈ ಲೇಖನವು ಕನ್ನಡ ರಾಷ್ಟ್ರೀಯತೆಯನ್ನುಸಹ ಬೇಂದ್ರೆಯವರು ಭಾರತೀಯ ರಾಷ್ಟ್ರೀಯತೆಯ ಪ್ರಜ್ಞೆಯ ಜೊತೆಗೆ ಹೋಲಿಸಿದ್ದಾರೆ ಎಂದು ವಾದಿಸುತ್ತಾರೆ. ಉಗ್ರ ರಾಷ್ಟ್ರೀಯತೆಯ ಈ ಹಿಂಸಾತ್ಮಕ ದಿನಗಳಲ್ಲಿ ಬೇಂದ್ರೆಯವರ ಕಾವ್ಯಪ್ರಪಂಚಕ್ಕಿರುವ ಈ ಬಗೆಯ ಉದಾರವಾದಿ ನೆಲೆಯನ್ನು ಲೇಖಕರು ಚರ್ಚಿಸಿರುವುದು ಹೆಚ್ಚು ಅರ್ಥಪೂರ್ಣವಾಗಿದೆ.

'ಬೇಂದ್ರೆ : ಎದೆಯ ದನಿ' ಶೀರ್ಷಿಕೆಯಲ್ಲಿ ಇವರ ಕಾವ್ಯದ ಕುರಿತು ಜಯಂತ ಕಾಯ್ಕಿಣಿ, ಡಿ.ಎಸ್. ನಾಗಾಭೂಷಣರಂತಹ ಪ್ರಸಿದ್ಧ ಲೇಖಕರ ಜೊತೆಗೆ ಹೊಸ ತಲೆಮಾರಿನ ಯುವ ಲೇಖಕರ ಧ್ವನಿಯನ್ನು ಇಲ್ಲಿ ಸಂಕಲಿಸಲಾಗಿದೆ. ಯುವ ಲೇಖಕ/ಕಿಯರು ಬೇಂದ್ರೆಯಂತಹ ಮೇರು ಲೇಖಕರನ್ನು ಓದಿಕೊಂಡು ಬೆಳೆಯುತ್ತಿರುವುದು ಸಂತಸದ ಸಂಗತಿಯೇ ಸರಿ. ಆದರೆ, ಕೆಲ ಲೇಖನಗಳು ವೈಯಕ್ತಿಕ ನೆಲೆಯಲ್ಲಿವೆ ಮತ್ತು ಕೆಲ ಲೇಖನಗಳು ಬೇಂದ್ರೆ ಕಾವ್ಯ ಪ್ರಪಂಚವನ್ನು ತೆಳುವಾಗಿ ನೋಡಿವೆ. ಈ ಭಾಗವು ಬೇಂದ್ರೆಯವರೊಂದಿಗಿನ ಒಡನಾಟದ ಆಪ್ತ ಚಿತ್ರಣವನ್ನು ಸಹ ನೀಡುತ್ತದೆ. ಡಿ ಎಸ್ ನಾಗಭೂಷಣ ಅವರು ಕಳೆದುಹೋದ ಬೇಂದ್ರೆಯವರ ಧಾರವಾಡದ ಅನುಭವವನ್ನು ವಿಷಾದದಿಂದ ದಾಖಲಿಸಿದರೆ, ನಾಗರಾಜ ವಸ್ತಾರೆಯವರು ಗಂಗಾವತರಣದ ಕೆಲ ಸಾಲುಗಳನ್ನು ಉಲ್ಲೇಖಿಸುತ್ತಾ, 'ಧ್ವನಿ' ಪ್ರಪಂಚವು ಸೃಷ್ಟಿಸುವ ಅದ್ಭುತ ಲೋಕವನ್ನು ಎತ್ತಿ ತೋರಿಸಿದ್ದಾರೆ. ಆದರೆ ಕೇವಲ ಕೆಲ ಸಾಲುಗಳು ಸೃಷ್ಟಿಸುವ ಮಾಯಾಲೋಕದ ಮೂಲಕ ಬೇಂದ್ರೆ ಕಾವ್ಯಪ್ರಪಂಚವನ್ನು ಅನಾವರಣ ಮಾಡುವುದು ಅಷ್ಟು ಪರಿಣಾಮಕಾರಿಯಲ್ಲ ಎಂಬುದು ನನ್ನ ಅಭಿಪ್ರಾಯ.

ಒಟ್ಟಾರೆಯಾಗಿ, ಬೇಂದ್ರೆ ಕಾವ್ಯಕ್ಕಿರುವ ವಿಭಿನ್ನ ನೆಲೆಗಳನ್ನು ದಾಖಲಿಸುವ ಈ ವಿಮರ್ಶಾ ಸಂಕಲನ 'ಕಂಡವರಿಗಷ್ಟೇ ಅಲ್ಲ 'ಕಾಣದವರಿಗೂ' ಬೇಂದ್ರೆ ಕಾವ್ಯದ ಓದಿಗೆ ಪ್ರೇರೇಪಿಸಬಲ್ಲದು. ಹೊಸ ಬಗೆಯ ಸಿದ್ದಾಂತಗಳ ಮೂಲಕ ನಮ್ಮ ಲೇಖಕರನ್ನು ಮರುಶೋಧ ಮಾಡುತ್ತಿರುವ ದಿನಗಳಲ್ಲಿ ಈ ಪುಸ್ತಕವು ಕನ್ನಡ ವಿಮರ್ಶಾ ಲೋಕಕ್ಕೆ ಇನ್ನೊಂದು ಅರ್ಥಪೂರ್ಣ ಸೇರ್ಪಡೆಯಾಗಿದೆ. ಆದರೆ ಲೇಖನಗಳ ವಿಂಗಡಣೆಗೆ ಇನ್ನೂ ಹೆಚ್ಚಿನ ಸೈದ್ಧಾಂತಿಕ ವಿಸ್ತಾರ ಇರಬೇಕಾಗಿತ್ತು ಎಂದೆನಿಸುತ್ತದೆ.


(ಕೃಪೆ: ಪುಸ್ತಕಾವಲೋಕನ, ಬರಹ: ಟಿ. ಅವಿನಾಶ)

Related Books