‘ದಡ ಸೇರಿಸು ತಂದೆ’ ಅಮರೇಶ ನುಗಡೋಣಿ ಅವರ 6ನೇ ಕತಾಸಂಕಲನ. ಇಲ್ಲಿಯ ಕತೆಗಳು ಪ್ರಸ್ತುತ ಗ್ರಾಮದಲ್ಲಿ ಉರಿಯುತ್ತಿರುವ ನೈಜ ಸಮಸ್ಯೆಗಳನ್ನು ಜ್ವಲಿಸುತ್ತದೆ. ಲೇಖಕರ ಗಮನಕ್ಕೆ ಬಂದು ಕಾಡಿದ ಮರ್ಯಾದಾ ಹತ್ಯೆಗಳು, ಗುಂಪುಗಳ ಮೂಲಕ ಹಿಂಸಿಸುವ ನಡೆ, ವೈವಿಧ್ಯಮಯ ಬದುಕಿನ ಚಿತ್ರಗಳು ಈ ಸಂಕಲನದ ಪ್ರಧಾನ ಆಕರ್ಷಣೆ. ಒಟ್ಟು ಎಂಟು ಕತೆಗಳು ಸಮಕಾಲೀನರ ಚಿತ್ರಣಗಳನ್ನು ತೆರೆದಿಡುವಲ್ಲಿ ಸಫಲವಾಗಿದೆ.
ಡಾ. ಅಮರೇಶ ನುಗಡೋಣಿ ಅವರ ‘ದಡ ಸೇರಿಸು ತಂದೆ’ಯ ಸಾಂಸ್ಕೃತಿಕತ್ವದ ಆಯಾಮ
ಡಾ. ಅಮರೇಶ ನುಗಡೋಣಿಯವರು ಈಗಾಗಲೇ ತಮ್ಮದೇ ವಿಶೇಷ ಕತೆ ಕಟ್ಟುವ ರಚನಾ ಕ್ರಮದ ಮೂಲಕ ಎಲ್ಲರ ಗಮನ ಸೆಳೆದಿದ್ದು, ಖ್ಯಾತ ಕಥೆಗಾರರೆಂದೇ ಕನ್ನಡ ಸಾಹಿತ್ಯ ಜಗತ್ತಿನಲ್ಲಿ ಚಿರಪರಿಚಿತರು. ತಮ್ಮದೇ ಕಥನ ಕ್ರಮದ ಮೂಲಕ ಪ್ರತಿ ಕಥಾ ಸಂಕಲನದಿಂದ ಸಂಕಲನಕ್ಕೆ ಚಲನಶೀಲತೆಯ ಗುಣವನ್ನು ಕಾಪಾಡಿಕೊಂಡು ಬಂದಿದ್ದಾರೆ. ಮೂಲತಃ ರಾಯಚೂರು ಜಿಲ್ಲೆಯ ಸಿರಿವಾರದ ಬಳಿಯ ನುಗುಡೋಣಿ ಕಥೆಗಾರರ ಸ್ವಂತ ಊರಾಗಿದ್ದು ಅಲ್ಲಿನ ದೇಸಿಯತೆಯ ಅಂಶಗಳನ್ನು ತಮ್ಮ ಕಥೆಗಳಲ್ಲಿ ತೆಗೆದುಕೊಂಡು ಬರುವುದರ ಜೊತೆಗೆ ತಾವು ಪಾಠ ಮಾಡುವ ಕನ್ನಡ ವಿಶ್ವವಿದ್ಯಾಲಯದ ಸುತ್ತಲಿನ ಪರಿಸರದ ಬಗ್ಗೆಯೂ 'ದಡ ಸೇರಿಸು ತಂದೆ' ಕಥಾ ಸಂಕಲನದಲ್ಲಿ ಪ್ರಸ್ತಾಪಿಸಿದ್ದಾರೆ.
'ದಡ ಸೇರಿಸು ತಂದೆ' ಕಥಾ ಸಂಕಲದಲ್ಲಿ ಒಟ್ಟು 8 ಕಥೆಗಳಿವೆ. ಇಲ್ಲಿ ಮಹಮದ್ ದರವೇಶಿ ಅವರ ಮಾತೊಂದು ನೆನಪಾಗುತ್ತದೆ. “ಕವಿ ನೆನ್ನೆಗೆ ಮುಖಾಮುಖಿಯಾಗುತ್ತಾನೋ ಇಲ್ಲವೋ, ನಾಳೆಗೆ ಮುಖಾಮುಖಿಯಾಗುತ್ತಾನೋ ಇಲ್ಲವೋ ವರ್ತಮಾನಕ್ಕೆ ಮಾತ್ರ ಮುಖಾಮುಖಿಯಾಗಬೇಕು.” ಇಲ್ಲಿನ ಎಂಟು ಕಥೆಗಳು ವರ್ತಮಾನಕ್ಕೆ ಮುಖಾಮುಖಿಯಾಗಿವೆ. ಈ ಸಂಕಲನದಲ್ಲಿನ ಪ್ರತಿಯೊಂದು ಕಥೆಯು ಜೀವದ್ರವ್ಯದ ಗುಣವನ್ನು ಹೊಂದಿವೆ. ವಸಾಹತ್ತೋತರ ಕಾಲಘಟ್ಟದ ನಂತರ ಸಾಮಾನ್ಯ ಜನರ ಬದುಕಿನ ಮೇಲೆ ಉಂಟಾದ ಪರಿಣಾಮಗಳ ಕುರಿತು ಇಲ್ಲಿನ ಕಥೆಗಳು ಪ್ರಸ್ತಾಪಿಸುತ್ತಾ ಹೋಗುತ್ತವೆ. ಕಥೆ ಕಟ್ಟುವುದೆಂದರೆ ಅಸಲಿಗೂ ಕಥೆ ಕಟ್ಟುವುದೇ ಆಗಿದೆ ಎಂಬುದನ್ನು ಇಲ್ಲಿಯ ಕಥೆಗಳು ಸಾಬೀತು ಮಾಡುತ್ತವೆ.
ಈ ಕಥಾ ಸಂಕಲನದಲ್ಲಿ ನಾಲ್ಕು ಅಂಶಗಳು ಚಾರ್ ಮೀನಾರ್ ನಂತೆ ಮುಖ್ಯ ಆಧಾರ ಸ್ತಂಭಗಳಾಗಿವೆ. ಅವುಗಳೆಂದರೆ, ಕಾಲ, ಸಂದರ್ಭ, ತತ್ವ, ಬದುಕು, ಈ ಅಂಶಗಳು ಕಥೆಗಳನ್ನು ಬೆಳೆಸುವಲ್ಲಿ ಕಥೆಯನ್ನು ಓದಿದಂತೆ ಕಥನ ಕುತೂಹಲವನ್ನು ಉಳಿಸುವಲ್ಲಿ, ಹಾಗೇ ಕಥೆಯನ್ನು ಕಾಲಕ್ಕನುಗುಣವಾಗಿ ಅರ್ಥಮಾಡಿಕೊಳ್ಳುವಲ್ಲಿ ಸಹಾಯಕವಾಗಿವೆ.
ಪ್ರಸ್ತುತ ಕಥಾ ಸಂಕಲನದಲ್ಲಿ ಕಥೆಗಾರರೇ ಹೇಳಿಕೊಂಡಂತೆ ಜಾಗತೀಕರಣ, ಮರ್ಯಾದಾ ಹತ್ಯೆ, ಕೋಮುವಾದ, ಹಿಂಸೆ-ಕ್ರೌರ್ಯ, ಧರ್ಮ-ರಾಜಕಾರಣ, ಶಕ್ತಿ ರಾಜಕಾರಣ ಈ ತರಹದ ಪರಿಕಲ್ಪನೆಗಳ ಮೂಲಕವೇ ಕಥೆ ಹೆಣೆದು ಈ ಅಂಶಗಳ ಮೂಲಕವೇ ತಾತ್ವಿಕರಿಸುತ್ತಾರೆ. ಪ್ರತಿ ಕಥೆಯಲ್ಲೂ ಗಟ್ಟಿಯಾದ ವಸ್ತು ವಿಷಯದಿಂದ ಬದುಕಿನ ವಿಭಿನ್ನ ಆಯಾಮಗಳನ್ನು ಚಿತ್ರಿಸಿ, ಪರಿಚಯಿಸಿದ್ದಾರೆ. 'ಈ ದಾರಿ ಕೈಲಾಸಕೆ' ಎಂಬ ಕತೆಯಲ್ಲಿ ಹಣದ ಆಸೆಯನ್ನು ಜೊತೆಗೆ ಬದುಕಿನ ಕರಾಳತೆಯನ್ನು ಪ್ರದರ್ಶಿಸಿ ಮನುಷ್ಯನ ನೈತಿಕತೆಗೆ ಆಧ್ಯಾತ್ಮಿಕತೆಗೆ ಪರೋಪಕಾರಿ ಗುಣಕ್ಕೆ ಮನುಷ್ಯತ್ವದ ಗುಣವೇ ಒಂದು ರೂಪವನ್ನು ಒದಗಿಸಿಕೊಡುತ್ತದೆ ಎಂಬುದನ್ನು ಈ ಕಥೆ ಪ್ರಸ್ತಾಪಿಸಿದೆ. 'ಜೂಜು' ಕತೆಯಲ್ಲಿ ಬರುವ ನಿಜಾಮ್ ಸಾಬ್, ಅವನ ಅಂತರ್ ಧರ್ಮೀಯ ಪತ್ನಿ, ಸಹಧರ್ಮದ ಪತ್ನಿ, ಇಬ್ಬರು ಮಕ್ಕಳು, ಅಧಿಕಾರಶಾಹಿ ವರ್ಗ ಬಡವರನ್ನು ನಡೆಸಿಕೊಳ್ಳುವ ರೀತಿ ಓದುಗರಲ್ಲಿ ಮತ್ತೆ ಮತ್ತೆ ಓದಬೇಕೆನ್ನುವ ಇಚ್ಛೆಯನ್ನು ಮೂಡಿಸುತ್ತದೆ. ಹೀಗೊಂದು ಮಂದಿರ' ಕತೆ, ಕಥನ ಶೈಲಿಯಿಂದ ಓದುಗರನ್ನು ಹಿಡಿದಿಡುತ್ತದೆ. 'ಯಾತ್ರೆ' ಕಥೆಯು ಕಥನ ಕುತೂಹಲ ಗುಣವನ್ನು ಹೊಂದಿದೆ. ಸಮಯ-ಸಂದರ್ಭವನ್ನು ಯಾವಾಗಲೂ ತಮ್ಮ ಅನುಕೂಲಕ್ಕೆ ಬಳಸಿಕೊಳ್ಳುವ ಜನರು ಎಂದಿಗೂ ನಮ್ಮ ನಡುವೆ ಇರುತ್ತಾರೆ ಎಂಬುದನ್ನು ಕಥಾ ಪಾತ್ರಧಾರಿ ಗೌಡನಿಂದ ಕಂಡುಕೊಳ್ಳಲಾಗಿದೆ. ಹಾಗೆ 'ದಡ ಸೇರಿಸು ತಂದೆ' ಕಥೆ ವಿಭಿನ್ನ ದೃಷ್ಟಿಕೋನದ ಮೂಲಕ ವಿಶಿಷ್ಟ ಕಥಾ ಪ್ರಪಂಚವನ್ನು ಓದುಗರ ಮುಂದೆ ಅನಾವರಣ ಮಾಡುತ್ತದೆ. 'ತಮಂಧದ ಅವಸಾನ' ಕತೆಯು ಮನುಷ್ಯನ ನಿಜ ಬದುಕಿಗೆ ಬೇಕಿರುವ ಬೆಳಕಿನ ಕುರಿತಾಗಿ ಸವಿಸ್ತಾರವಾಗಿ ವಿವರಿಸುತ್ತದೆ. ಆಧ್ಯಾತ್ಮಿಕತೆಯ ಟಚ್ ಈ ಕಥೆಯ ಅಥೆಂಟಿಸಿಟಿಯನ್ನು ಕಾಪಿಟ್ಟಿದೆ. 'ಕರುಳ ಬಂದ' ಕಥೆಯು 'ದಡ ಸೇರಿಸು ತಂದೆ' ಕಥಾ ಸಂಕಲನದಲ್ಲಿನ ಕೊನೆಯ ಕಥೆಯಾಗಿದ್ದು, ಈ ಕಥೆಯು ನುಗಡೋಣಿಯವರ ಬಹುತ್ವದ ಆಯಾಮದ ಪ್ರಜ್ಞೆಯನ್ನು ತನ್ನೊಡಲಲ್ಲಿ ಇಟ್ಟುಕೊಂಡಂತಿದೆ. ಒಟ್ಟಾರೆ ನುಗಡೋಣಿಯವರು ಓದುಗರಿಗೆ ತಮ್ಮ ಕಥೆಗಳ ಮೂಲಕವೇ ಓದುವ ರುಚಿಯನ್ನು ಹತ್ತಿಸಿದವರು, ಅದಕ್ಕೆ ಕಾರಣ ಮುಖ್ಯವಾಗಿ ತಮ್ಮ ಕಥೆಗಳಲ್ಲಿ ತರುವ ತಂತ್ರಗಾರಿಕೆ, ನಿರೂಪಣಾ ಶೈಲಿ, ರಚನಾಕಮಗಳೆಂಬ ಚೌಕಟ್ಟಿನ ಅಂಶಗಳೇ ಆಗಿವೆ. ಹೊಸ ತಲೆಮಾರಿನ ಕಥೆಗಾರರನ್ನು ಒಳಗೊಂಡು ಕಥೆ ಬರೆಯಲು ತೊಡಗುವ ಎಲ್ಲರೂ 'ದಡ ಸೇರಿಸು ತಂದೆ' ಪುಸ್ತಕವನ್ನು ಗಮನಿಸಬಹುದು.
(ಕೃಪೆ : ಪುಸ್ತಕಲೋಕ, ಬರಹ : ಮಂಜುಳ ಗೋನಾಳ)
©2023 Book Brahma Private Limited.