ಕಾಮೋಲ

Author : ಅಜಿತ್ ಹರೀಶಿ

Pages 128

₹ 100.00
Year of Publication: 2019
Published by: ಮಂಗಳ ಪ್ರಕಾಶನ
Address: ಪಟ್ಟಣಗೆರೆ, ರಾಜರಾಜೇಶ್ವರಿ ನಗರ, ಬೆಂಗಳೂರು-98
Phone: 9632587426

Synopsys

ತಮ್ಮ ಕಥೆಗಳಿಗೆ ವಿಸ್ತಾರವಾದ ಒಳನೋಟವನ್ನು ಕಥೆಗಾರ ಅಜಿತ್‌ ಹೆಗಡೆ ನೀಡಿದ್ದಾರೆ. ’ಕಾಮೋಲ’ದ ಪಾತ್ರಗಳು ಮಾನವನ ನೋವು, ನಲಿವು, ದುಃಖದ ನೈಜತೆಯನ್ನು ತೆರೆದಿಡುವ ಪರಿ ವಿಭಿನ್ನ ಮತ್ತು ಕುತೂಹಲಕಾರಿಯಾಗಿದೆ.

’ಜೇಡ ತನ್ನೊಳಗಿನಿಂದ ಅಂಟನ್ನು ಸ್ರವಿಸುತ್ತಾ ಬಲೆಯನೇಯುತ್ತಾ ಇರುವ ಹಾಗೆ, ಬೆಳಕು ಅವರ ಮೇಲೆ ಬಿದ್ದು ಬಣ್ಣದೋಕುಳಿ ಕಾಣುವ ಹಾಗೆ’ ಇಂತಹ ನವಿರಾದ ಭಾಷೆಯ ಮೂಲಕ ಲೇಖಕರು ಕಥೆಗಳನ್ನು ಹೆಣೆಯುತ್ತಾರೆ. ಇಲ್ಲಿಯ ಹಲವು ಕತೆಗಳು ಬಹುಮಾನಗಳಿಗೂ ಪಾತ್ರವಾಗಿವೆ. ಕರ್ಕಿ ಕೃಷ್ಣಮೂರ್ತಿ ಅವರು ಮುನ್ನುಡಿ ಬರೆದಿದ್ದಾರೆ.

About the Author

ಅಜಿತ್ ಹರೀಶಿ
(24 August 1978)

ಲೇಖಕ ಡಾ. ಅಜಿತ್  ಹರೀಶಿ ಮೂಲತಃ ಶಿವಮೊಗ್ಗ ಜಿಲ್ಲೆಯ ಸೊರಬ ತಾಲ್ಲೂಕಿನ ಹರೀಶಿ ಗ್ರಾಮದವರು. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಹುಟ್ಟೂರಿನ ಸರ್ಕಾರಿ ಶಾಲೆಗಳಲ್ಲಿ, ಪದವಿಪೂರ್ವ ಶಿಕ್ಷಣವನ್ನು ಶಿರಸಿಯಲ್ಲಿ ಮುಗಿಸಿರುತ್ತಾರೆ. ಆಯುರ್ವೇದ ಮಹಾವಿದ್ಯಾಲಯ, ಹುಬ್ಬಳ್ಳಿಯಲ್ಲಿ ವೈದ್ಯಕೀಯ ಪದವೀಧರರಾದ  ಇವರು, ಆಕ್ಯುಪಂಕ್ಚರ್ ಚಿಕಿತ್ಸೆ , ಹಿಪ್ನೋಥೆರಪಿಯಲ್ಲಿಯೂ ಪರಿಣಿತರು.  ಪ್ರಸ್ತುತ ಹರೀಶಿಯಲ್ಲಿ ಖಾಸಗಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿರುವ ಇವರು, ಬರವಣಿಗೆಯನ್ನು ತಮ್ಮ ಪ್ರವೃತ್ತಿಯನ್ನಾಗಿಸಿಕೊಂಡಿದ್ದಾರೆ. ಬಿಳಿಮಲ್ಲಿಗೆಯ ಬಾವುಟ, ಸೂರು ಸೆರೆಹಿಡಿಯದ ಹನಿಗಳು, ಕನಸಿನ ದನಿ ಪ್ರಕಟಿತ ಕವನ ಸಂಕಲನಗಳು.  ಪರಿಧಾವಿ, ಕಾಮೋಲ ಮತ್ತು ಮೂಚಿಮ್ಮ ಪ್ರಕಟಿತ ಕಥಾಸಂಕಲನಗಳು.  ಕಥಾಭರಣ ಸಂಪಾದಿತ ಕೃತಿಯಾಗಿದೆ. ಆರೋಗ್ಯದ ಅರಿವು ...

READ MORE

Conversation

Excerpt / E-Books

ಮುನ್ನುಡಿ

ಮನೋಖನನದ ಕಥೆಗಳು. 

ಬದುಕಿನ ವಿಭಿನ್ನ ವೃತ್ತಿಗಳಲ್ಲಿ ತೊಡಗಿಸಿಕೊಂಡ ಜನ ತಮ್ಮ ಅನುಭವವನ್ನು ಬರವಣಿಗೆಗಿಳಿಸಿದಾಗ ಆ ಸಾಹಿತ್ಯ ಲೋಕ ಇನ್ನೂ ಸಮೃದ್ಧವಾಗುತ್ತದೆ ಎನ್ನುವ ಮಾತಿದೆ. ಪೋಲೀಸ, ವಕೀಲ, ವೈದ್ಯ, ವಿಜ್ಞಾನಿ, ಸೈನಿಕ ಇಂತಹ ವೃತ್ತಿ ಜೀವನದ ಆಗುಹೋಗುಗಳ ಬಗ್ಗೆ ಎಲ್ಲರಿಗೂ ಕುತೂಹಲವಿರುವುದು ಸಹಜ. ಆದರೆ ಅವು 'ಸೃಜನಾತ್ಮಕ' ಬರಹ ರೂಪದಲ್ಲಿ ಓದುಗನಿಗೆ ದಕ್ಕಿರುವುದು ಕನ್ನಡದಲ್ಲಿ ವಿರಳ. ಬ್ರಿಟೀಷ್ ಸರಕಾರದಲ್ಲಿ ಅಮಲ್ದಾರರಾಗಿದ್ದ ನವರತ್ನ ರಾಮರಾವರ 'ಕೆಲವು ನೆನಪುಗಳು' ರಿಂದ ಹಿಡಿದು, ಇತ್ತೀಚಿನ ಸಿ.ಎಚ್.ಹನುಮಂತರಾಯರ 'ವಕೀಲರೊಬ್ಬರ ವಗೈರೆಗಳು' ನಡುವೆ ಸಾಹಿತ್ಯೇತರ ಕ್ಷೇತ್ರ ವೈವಿಧ್ಯದ ಕೃತಿಗಳು ಅಲ್ಲಲ್ಲಿ ನಮಗೆ ದೊರಕಿವೆ. ಹಾಗೇ, ಡಾ. ಟಿ.ಎಸ್. ರಮಾನಂದ, ರಾಶಿ, ಬೆಸಗರಹಳ್ಳಿ ರಾಮಣ್ಣ, ಅಮೇರಿಕಾದಲ್ಲಿರುವ ಗುರುಪ್ರಸಾದ ಕಾಗಿನೆಲೆ ಇವರೆಲ್ಲ ವೈದ್ಯಲೋಕದ ವಿಸ್ಮಯಗಳಿಂದ ಕನ್ನಡ ಅಕ್ಷರ ಜಗತ್ತನ್ನು ಶ್ರೀಮಂತಗೊಳಿಸಿದವರೇ. ಈ ಮಧ್ಯೆ 'ಚಿತ್ರಾನ್ನ'ವೆನ್ನುವ ದಂತ ವೈದ್ಯರ ಕತೆಗಳೂ, 'ಡೇರಿ ಡಾಕ್ಟರ್ ಹೋರಿ ಮಾಸ್ಟರ್'ರಂತ ಪಶು ವೈದ್ಯರ ಹರಟೆಗಳೂ ಅಪರೂಪವೆಂಬಂತೆ ನಮಗೆ ಕಾಣಸಿಗುತ್ತವೆ. ಈ ಸಾಲಿಗೆ ಡಾ. ಅಜಿತ ಹೆಗಡೆಯವರೂ ಸೇರಿಕೊಳ್ಳುತ್ತಿರುವುದು ಸಂತಸದ ವಿಷಯ. ಆಯುರ್ವೇದದ ವೈದ್ಯರಾದ ಅವರಿಗೆ ಇದು ಎರಡನೇ ಕಥಾ ಸಂಕಲನ. ಅದರ ಮೊದಲ ಓದಿನ ಕೆಲ ಅಭಿಪ್ರಾಯಗಳನ್ನು ಹಂಚಿಕೊಳ್ಳುವಂತೆ ನನ್ನಲ್ಲಿ ಕೋರಿದ ಅವರ ವಿಶ್ವಾಸಕ್ಕೆ ನಾನು ಕೃತಜ್ಞ. 

ಇನ್ನು, ಕನ್ನಡ ಕಥಾ ಲೋಕಕ್ಕೆ ಉತ್ತರಕನ್ನಡ ಜಿಲ್ಲೆಯ ಸಾಹಿತಿಗಳ ಕೊಡುಗೆ ಗಣನೀಯವಾದು ಎಂಬುದು ನಮಗೆಲ್ಲ ಗೊತ್ತಿರುವುದೇ. ಆಯಾ ಪ್ರದೇಶದ ಲೇಖಕರು ತಮ್ಮ ಸುತ್ತಲಿನ ಪರಿಸರವನ್ನು ತಮ್ಮ ಬರವಣಿಗೆಗಳ ಮೂಲಕ ಕಾಣಿಸಿ ಕೊಡುವುದು ಸಹಜ. ಆದರಿಲ್ಲಿ; ವೈದ್ಯರೂ, ಉತ್ತರಕನ್ನಡದ ಗಡಿಯ  ಊರಿನವರೂ ಆದ ಅಜಿತ ಹೆಗಡೆಯವರು ತಮ್ಮ ಕಥೆಗಳನ್ನು ವೃತ್ತಿ ಹಾಗೂ ಭೂಪ್ರದೇಶದ ಪರಿಧಿಯಿಂದ ಹೊರಕ್ಕೇ ಕಟ್ಟಿಕೊಡುವ ಪ್ರಯತ್ನ ಮಾಡಿಡ್ದಾರೆ. 'ವಿಮೋಚನೆ' ಹಾಗೂ 'ಗುಪ್ತಗಾಮಿನಿ' ಎನ್ನುವ ಕತೆಗಳಲ್ಲಿ ತುಸು ವೈದ್ಯ ಲೋಕದ ಛಾಯೆ, 'ಮುಗ್ದಷ್ಟೇ ಬದುಕು'ವಿನಲ್ಲಿ ಮಲೆನಾಡಿನ ತುಣುಕು ಬಿಟ್ಟರೆ ಅವರ ಕತೆಗಳೆಲ್ಲಾ ಸಾರ್ವತ್ರಿಕವಾದುದು. ವೈದ್ಯನಲ್ಲೂ ಒಬ್ಬ ಸಹಜ ಮನುಷ್ಯನಿದ್ದಾನೆ; ಎಲ್ಲೂ ಇರಬಹುದಾದ ಆ ಮನುಷ್ಯ ಉತ್ತರ ಕನ್ನಡದ ಆಸುಪಾಸಿನಲ್ಲೂ  ಇದ್ದಾನೆ ಎನ್ನುವ ನಿಲುವಿನೊಂದಿಗೆ ಅವರು ಬರೆಯುತ್ತಾರೆ ಅನ್ನಿಸುತ್ತದೆ. ಬದುಕಿನ ಸಂಕೀರ್ಣತೆ, ಮನುಷ್ಯ ಸಂಬಂಧ, ವಿಚಾರಗಳ ಸಂಘರ್ಷ, ಮನೋ ವ್ಯಾಪಾರಗಳನ್ನೇ ಅವರ ಕಥೆಗಳ ಮೂಲ ದ್ರವ್ಯವಾಗಿ ಅವರು ಬಳಸಿಕೊಂಡಿದ್ದಾರೆ. 

"ಕೇತಕಿ" ಸಿದ್ಧಾಂತಗಳ ದ್ವಂದ್ವದ ಸುತ್ತ ಸುಳಿಯುವ ಕತೆ. ಪ್ರತಾಪ ಹಾಗೂ ಕೇತನ ಬಾಲ್ಯದ ಗೆಳೆಯರು. ಪ್ರಬುದ್ಧರಾಗುತ್ತಿರುವಂತೆ ವಿರುದ್ಧದ ಸೈದ್ಧಾಂತಿಕ ನಿಲುವುಗಳನ್ನು ಬೆಳೆಸಿಕೊಂಡು ಬೇರಾಗಿದ್ದಾರೆ. ಆದರೆ ಅಂತರಂಗದ ನಂಟನ್ನು ಕಳೆದುಕೊಳ್ಳುವುದು ಇಬ್ಬರಿಗೂ ಸಾಧ್ಯವಾಗಿಲ್ಲ. ಅನೇಕ ವರ್ಷದ ನಂತರ ಇಬ್ಬರೂ ಭೇಟಿಯಾಗುವ ಸನ್ನಿವೇಶವನ್ನು ಅಜಿತ ಹೆಗಡೆ ಇಲ್ಲಿ ಆಸಕ್ತಿದಾಯಕವಾಗಿ ಕಟ್ಟಿಕೊಡುತ್ತಾರೆ. ಸಂಭಾಷಣೆಗಳಲ್ಲೇ ಹಲವು ಸಂಗತಿಗಳನ್ನು ಅರುಹುವುದು ಅವರ ಉದ್ದೇಶ. ಪ್ರತಾಪ ಕೇತನನ್ನು ಭೇಟಿಯಾಗ ಬಂದ ಕಾರಣ ಓದುಗನಿಗೆ ಆಘಾತಕಾರಿಯಾಗಿ ತಟ್ಟುತ್ತದೆ. ಕತೆಯಲ್ಲಿ ಪ್ರತಾಪ ಹೆಣೆಯುವ ತಂತ್ರ ಹಾಗೂ ಅದನ್ನು ಓದುಗನಿಗೆ ಅಷ್ಟೇ ಕುತೂಹಲಕಾರಿಯಾಗಿ ವರ್ಗಾಯಿಸುವಲ್ಲಿ ಕತೆಗಾರ ಬಳಸಿದ ತಂತ್ರಗಳೆರಡೂ ಇಲ್ಲಿ ಸಕಾರಾತ್ಮಕ ಪರಿಣಾಮ ನೀಡಿದೆ. ವೃತ್ತ ಪತ್ರಿಕೆಯನ್ನು ಕೈಗೆತ್ತಿಕೊಂಡಾಗ, ತನ್ನ ಕೈಗೂ ರಕ್ತವಂಟಿದಂತಾಯ್ತು ಎನ್ನುವ ಸಾಲಿನಲ್ಲಿ ಲೇಖಕರ ಸಂವೇದನೆಯನ್ನು ಗ್ರಹಿಸಬಹುದು ನಾವು. ನಮ್ಮ ಸಿದ್ಧಾಂತ, ನಂಬಿಕೆಗಳನ್ನೆಲ್ಲ ಮೀರಿ ಉಳಿಯಬೇಕಾದುದು ಮಾನವೀಯ ಮೌಲ್ಯವೊಂದೇ ಎಂಬುದನ್ನು ಸಾರುವಲ್ಲಿ ಈ ಕತೆ ಸಫಲವಾಗಿದೆ. 

'ತನ್ನದೆಂಬ ಒಂದು ಸಣ್ಣ ವಸ್ತುವನ್ನೂ ಕಳೆದುಕೊಳ್ಳಲಿಚ್ಛಿಸದ ಮನುಷ್ಯ ತನ್ನಂತಹದೇ ಇನ್ನೊಂದು ಜೀವಿಯ ನೆಲೆಯನ್ನೇ ಧ್ವಂಸ ಮಾಡುವುದು ಎಂಥ ನ್ಯಾಯ?' ಎನ್ನುವ ಪ್ರಶ್ನೆಯನ್ನು ಇನ್ನಷ್ಟು ಗಟ್ಟಿಯಾಗಿ ಕೇಳಿಕೊಳ್ಳುವಂತೆ ಮಾಡುವ ಕತೆ "ಗೂಡು". ಇಲ್ಲಿ ತನ್ನ ಮನೆಯಲ್ಲೇ ದುಡ್ಡು ಕೊಟ್ಟು ಊಟ ಖರೀದಿಸಬೇಕಾದ ಅಜ್ಜನಿದ್ದಾನೆ. ಹಾಗೇ ತನ್ನ ಮನೆಯಲ್ಲಿ ಕಟ್ಟಿದ ಗುಬ್ಬಿ ಗೂಡನ್ನು ತನ್ನವರಿಂದಲೇ ರಕ್ಷಿಸಲು ಹೋರಾಡುವ ಮಹಿಳೆಯಿದ್ದಾಳೆ. ಇವೆಲ್ಲವುದರ ನಡುವೆ 'ಬದುಕು ಮತ್ತು ಬದುಕಲು ಬಿಡು' ಹಾಗೂ 'ಉಳಿವಿಗಾಗಿ ಹೋರಾಟ' ಎನ್ನುವ ಎರಡು ಮಾತುಗಳ ವೈರುಧ್ಯ ಹಾಗೂ ಸತ್ಯಾಸತ್ಯತೆಯ ತುಲನೆಯನ್ನು ಓದುಗನಿಗೆ ಬಿಡುತ್ತದೆ ಕತೆ. ರಸ್ತೆ ಬದಿಯ ಮುದುಕನ ತೂಕದ ತಂತ್ರ ಮುಗುಳು ನಗುತ್ತದೆ. 

ಧಾರವಾಡ ಸೀಮೆಯ ಕತೆಯನ್ನು ಅದೇ ಸೊಗಡಿನಲ್ಲಿ ಹಿಡಿದುಕೊಡುವ ಪ್ರಯತ್ನ ಹೆಗಡೆಯವರದು. ಹೀಗಾಗಿ "ಸಾಬೀತು" ಅನ್ನುವ ಕತೆಯನ್ನು ಅವರು ಧಾರವಾಡ ಭಾಷೆಯಲ್ಲೇ ನಿರೂಪಿಸುತ್ತಾರೆ. 'ಸರಿ ತಪ್ಪುಗಳೆಂಬ ಅಳತೀಗೋಲು ಅಂತಿಮವಾಗಿ ಅಳೆಯುವವರ ಕೈಲಿರೋ ಇಂಚು ಪಟ್ಟಿಯ ಮೇಲೆ ನಿರ್ಭರ' ಎನ್ನುತ್ತಾ ಈ ಕತೆ ರುಜುವಾತು ಪಡಿಸುವ ಅಂಶಗಳು ಹಲವು. ಮೇಲ್ನೋಟಕ್ಕೆ ಕಥಾನಾಯಕಿ ಉಮಾಳ ತಾಯ್ತನದ ಸಾಬೀತಿನ ಕತೆ ಅನ್ನಿಸುತ್ತದಾದರೂ; ಮಾನವ ಸಂಬಂಧಗಳ ಹಲವು ಆಯಾಮಗಳು ಇಲ್ಲಿ ಸಾಬೀತಾಗುತ್ತಾ ಹೋಗುತ್ತವೆ. 'ಉಬ್ಬು ಹಲ್ಲಿನ ಉಮಾಳು ಮದುವೆಯಾಗಿ ಹೋದ ಮನೆಯ ಪಕ್ಕದಲ್ಲೇ ದಂತ ಚಿಕಿತ್ಸಾಲಯವಿತ್ತು' ಎನ್ನುವ ಸಾಲು ಆರಂಭದಲ್ಲಿ ತೆಳು ಹಾಸ್ಯದಂತೆ ಅನ್ನಿಸಿದರೂ, ಕತೆ ಮುಂದರಿದಂತೆ ಬೇರೆಯದೇ ಭಾವ ನೀಡುವುದು ಸುಳ್ಳಲ್ಲ. ಕಳೆದು ಹೋದ ಅಥವಾ ವ್ಯಯವಾದ ಪ್ರತಿ ಹಣವೂ ಉಮಾಳ ಹಲ್ಲು ರಿಪೇರಿಗೆಂದೇ ತೆಗೆದಿಟ್ಟ ಮೊತ್ತವಾಗಿರುವುದು ಆದ್ಯತೆಗಳ ಅಳತೆಗೋಲಿಗೆ ಸಾಕ್ಷಿಯಾಗಿ ನಿಲ್ಲುತ್ತದೆ. ಹೊಟೇಲಿನಲ್ಲಿ ಗಂಡನೊಡನೆ ಸಿಕ್ಕಿಬಿದ್ದು ಪೋಲೀಸರಿಗೆ ರೇಷನ್ ಕಾರ್ಡ್ ತೋರಿಸುವ ಹಮ್ಮಿನಲ್ಲಿ, ಅಂಗಡಿಯವನಿಗೆ 'ಬಂಗಾರ ಗಿರವಿ ಇಡಲು ಬಂದಿಲ್ಲ ಮಾರಲು ಬಂದಿದ್ದೇನೆ' ಎನ್ನುವ ಗಟ್ಟಿತನದಲ್ಲಿ ಉಮಾ ಇಷ್ಟವಾಗುತ್ತಾಳೆ. ಕತೆಯಲ್ಲಿ ಹೇಗೂ ಅಂತರ್ಗತವಾಗಿರುವ ಸಂವೇದನೆಯನ್ನು ಇನ್ನಷ್ಟು ಸೂಕ್ಷ್ಮವಾಗಿ ಕಟ್ಟಿಕೊಟ್ಟಿದ್ದಿದ್ದರೆ ಇದು ಅತ್ಯುತ್ತಮ ಕತೆಯಾಗುತ್ತಿದ್ದುದರಲ್ಲಿ ಸಂಶಯವಿಲ್ಲ. 

ಕತೆಗಾರ ತನ್ನ ಕತೆಯ ಪಾತ್ರಗಳೊಂದಿಗೆ ಹೆಚ್ಚು ಜೀವಿಸಿದಷ್ಟು ಕಥೆ ಹೆಚ್ಚು ದಟ್ಟವಾಗಿ ಬರಲು ಸಾಧ್ಯ ಅನ್ನುವುದು ನಂಬಿಕೆ. ಆತ್ಮಹತ್ಯೆ ಮಾಡಿಕೊಳ್ಳಲು ಸಿದ್ಧನಾಗಿರುವ ಪಾತ್ರವನ್ನು ಸೃಜಿಸ ಹೊರಟ ಕಥೆಗಾರ ಆ ವ್ಯಕ್ತಿಯ ಮನಸ್ಸಿನ ಖನನ ನಡೆಸಲೇ ಬೇಕು. "ಹುತ" ಕತೆಯ ಮುಖ್ಯ ಪಾತ್ರಧಾರಿ ಸಾಯಲು ಹೊರಟಿರುವ ವ್ಯಕ್ತಿ. ಮನೆಯಿಂದ ಹೊರಡುವಾಗ ಮುಂದಿಟ್ಟ ಬಲಗಾಲನ್ನು ಸರಕ್ಕನೆ ಹಿಂದಕ್ಕೆಳೆದುಕೊಂಡು ಎಡಗಾಲನ್ನು ಎದುರಿಟ್ಟು ಹೊಸ್ತಿಲು ದಾಟುತ್ತಾನೆ. ಅಜಿತ್ ಹೆಗಡೆ ತನ್ನ ಪಾತ್ರಗಳೊಂದಿಗೆ ಸಾಕಷ್ಟು ಮುತುವರ್ಜಿಯಿಂದಲೇ ಸಂವಹಿಸುತ್ತಾರೆ ಎಂಬುದಕ್ಕೆ ಈ ಸಣ್ಣ ವಿವರ ನಿದರ್ಶನವಾಗಬಲ್ಲದು. ಹೆಂಡತಿಯಮೇಲೆ ಸೇಡು ತೀರಿಸಿಕೊಳ್ಳಲು ಆಕೆಯ ಕೊಲೆ ಮಾಡಬೇಕು ಎಂದುಕೊಳ್ಳುವ ವ್ಯಕ್ತಿ, ಆನಂತರ- ಅವಳನ್ನು ಕೊಲ್ಲುವ ಬದಲು ತನ್ನನ್ನೇ ತಾನು ಕೊಂದುಕೊಂಡರೆ, ಆಕೆಯನ್ನು ಬದುಕಿರುವಂತೆಯೇ ಸಾಯಿಸಿದಂತಾಗುತ್ತದೆ ಎನ್ನುವ ನಿರ್ಧಾರಕ್ಕೆ ಬರುವ ವಿಲಕ್ಷಣ ವಿಚಾರದ ಕಥಾ ಹಂದರವಿದೆ ಇಲ್ಲಿ. ಆತ್ಮಹತ್ಯೆ ಮಾಡಿಕೊಳ್ಳುವ ವಿಧಾನಗಳಾವವು ಎಂಬುದನ್ನು ಗೂಗಲ್ಲಿನಲ್ಲಿ ನೋಡಿ ತಿಳಿದುಕೊಳ್ಳುವ ಸಂಗತಿ ಪ್ರಸ್ತುತ ಸ್ಥಿತಿಯ ಚೋದ್ಯದಂತೆಯೇ ಗೋಚರಿಸುತ್ತದೆ. ತಾನು ಸತ್ತು ಹೆಂಡತಿಯನ್ನು ಶಿಕ್ಷಿಸಬೇಕು ಎಂಬುದನ್ನೇ ಮೂಲ ಉದ್ದೇಶವಾಗಿಸಿಕೊಂಡಿರುವ ವ್ಯಕ್ತಿ; ಮರಣಾನಂತರ ತನ್ನ ಇನ್ಸುರೆನ್ಸುಗಳೆಲ್ಲ ಸಿಗಬೇಕು ಎಂದು ಏಕೆ ಕಾಳಜಿ ವಹಿಸುತ್ತಾನೆ? ತಾನು ಎಲ್ಲೆಲ್ಲಿ ಹಣ ಹೂಡಿಕೆ ಮಾಡಿದ್ದೇನೆ ಎಂದು ಯಾಕೆ ಬರೆದಿಡುತ್ತಾನೆ ಎನ್ನುವ ಪ್ರಶ್ನೆ ಏಳುತ್ತದಾದರೂ; ಕತೆ ತನ್ನ ಒಟ್ಟಾರೆ ವಿನ್ಯಾಸದಲ್ಲಿ ಗಮನಸೆಳೆಯುತ್ತದೆ. ಹಾಗೂ, ಉತ್ತರ ಪುರುಷ ನಿರೂಪಣೆಯ ಈ ಪ್ರಕಾರದ ಸಾಧ್ಯತೆಯ ಬಗ್ಗೆಯೂ ಯೋಚಿಸುವಂತೆ ಮಾಡುತ್ತದೆ. 

'ಪ್ರೀತಿಯ ಬಗ್ಗೆ ಹೇಳಿಬಿಡಬೇಕು ಎನ್ನುವ ತೀವ್ರತೆ ಬರುವ ಸ್ಥಿತಿಯೇ ಒಂದು ಉತ್ಕಟ ಸುಖ' ಎನ್ನುವಂಥ ಗಟ್ಟಿಸಾಲುಗಳಿದ್ದರೂ ಎಲ್ಲೋ ಹಳೆಯ ಜಾಡಿನ ಭಗ್ನ ಪ್ರೇಮ, ವಿರಹಗಳ ಇನ್ನೊಂದಿಷ್ಟು ಮುಖಗಳನ್ನು ತೋರಿಸುತ್ತಿದೆ ಅನ್ನಿಸುವ "ಸೆಲೆಕ್ಟ್ ಆಲ್ ಡಿಲೀಟ್"; ಊರ ಮರ್ಲನ ಜೊತೆಯ ಇಸ್ಪೀಟ್ ಆಟವನ್ನು ಪಾಕಿಸ್ತಾನದೊಡೆಗಿನ ಯುಧ್ಧಕ್ಕೆ ಹೋಲಿಸುತ್ತ, ತೆಳು ಹಾಸ್ಯದ ಧಾಟಿಯಲ್ಲಷ್ಟೇ ಗ್ರಹಿಸಬಹುದಾದ "ಗುದ್ದಾಟ"; ಅಮ್ಮನ ಅಮೃತ ಕಲಶಗಳಿಗೆ ಕ್ಯಾನ್ಸರ್ ಬರುವಂಥ ಗಂಭೀರ, ಭಾವನಾತ್ಮಕ ವಸ್ತುವಿದ್ದರೂ ಯಾಕೋ ಕತೆಯಾಗಲೇ ಇಲ್ಲ ಅನ್ನಿಸುವ "ಆಯಿ" ಈ ಕತೆಗಳೆಲ್ಲಾ ಉಳಿದ ಕತೆಗಳನ್ನು ಹೋಲಿಸಿದರೆ ತುಸು ಹಿನ್ನೆಲೆಗೆ ಸರಿಯುತ್ತವೆ ಎಂದೇ ಹೇಳಬಹುದು. 

ಈ ಸಂಕಲನದ ಮುಖ್ಯ ಕಥೆಯೂ ಆಗಿರುವ "ಕನ್ನಡಿಗಂಟದ ಬಿಂದಿ" ಬಹಳೇ ವಿಶಿಷ್ಟ ಕಥಾ ವಸ್ತುವುಳ್ಳದ್ದು. ಹಾಗೆ ನೋಡಿದರೆ, ಈ ವಿಷಯ ಪ್ರಸ್ತಾಪಿಸಿದ ಕನ್ನಡದ ಕಥೆಗಳು ನನ್ನ ಓದಿನ ಮಿತಿಯಲ್ಲಿ ಎಲ್ಲೂ ಬಂದಿಲ್ಲ. (ವಸುಧೇಂದ್ರರ 'ಮೋಹನ ಸ್ವಾಮಿ'ಯಲ್ಲಿಯ ಕಥಾ ಜಗತ್ತೇ ಬೇರೆಯಾಗಿರುವುದರಿಂದ ಅಲ್ಲಿಯ ಪಾತ್ರದ ಯಾವುದೇ ಹೋಲಿಕೆ ಈ ಕತೆಯ ವಸ್ತುವಿಗೆ ಪ್ರಸ್ತುತವೆನಿಸಲಾರದು). ದೈಹಿಕ ಕಾಮನೆಯನ್ನು ಮನೋ ಕೌಶಲ್ಯದ ಮೂಲಕ ತಣಿಸಿಕೊಳ್ಳುವ ಈ ಪರಿಕಲ್ಪನೆಯೇ ಭಿನ್ನ. ಶಶಿಕಲಾಳ ಬಾಲ್ಯ, ಯವ್ವನದಲ್ಲೂ ಎದೆಯಲ್ಲೇ ಹೆಪ್ಪುಗಟ್ಟಿದ ಬಾಲ್ಯದ ನೋವು, ಅದರ ಮೇಲೇ ಆಸಿಡ್ ಸುರಿವ ಕಾಲೇಜು ಗೆಳೆಯ, ದೂರದಲ್ಲಿರುವ ಗೆಳತಿ ಸುಮಾ, ಎಲ್ಲರನ್ನೂ ಹತ್ತಿರ ಮಾಡುವ ವಾಟ್ಸಾಪ್, ಫೇಸ್‌ಬುಕ್ಕು...ಹೀಗೇ ಹಲವನ್ನು ಕಥೆಯ ಹಂದರಕ್ಕೆ ಪೂರಕವಾಗಿ ಅಜಿತ್ ಹೆಗಡೆ ನಿರ್ವಹಿಸಿದ ಪರಿ ಅನನ್ಯ. ಇಡೀ ಕತೆಯಲ್ಲಿ ರೂಪಕವಾಗಿ ಹರಿದಾಡುವ ಹಾವು, ಓದುಗನ ಮೈಮನಗಳನ್ನೂ ಅವರಿಸುತ್ತದೆ. 

'ನಂಬಿಕೆ ಜ್ಞಾನದ ಜೊತೆ ಲಿಂಕ್ ಆಗ್ಬೇಕು, ಸಿಂಕ್ ಆಗಬೇಕು. ಅಂಕಿ ಅಂಶ ವಿಜ್ಞಾನದ ಜೊತೆ ಮಿಲನವಾಗಬೇಕು. ಅದು ನಿಜವಾದ ಫೇತ್. ಇವತ್ತು ಬರೆದಿಟ್ಟ ಫೈಲ್ ಸುಳ್ಳಾದರೆ ಸುಟ್ಟುಬಿಡಬೇಕು. ಜೋತು ಬೀಳಬಾರದು' ಎನ್ನುತ್ತ, ನಂಬಿಕೆಯ ಚಿಕಿತ್ಸೆಯನ್ನು ನೀಡುವ ಕತೆ "ಗುಪ್ತ ಗಮನ" ಇಲ್ಲಿಯ ನಾಯಕಿ ಮನೋರೋಗಿ. ನಾಯಕ ಅದಕ್ಕೆ ಸಂಬಂಧಪಟ್ಟ ವೈದ್ಯನೇನೂ ಅಲ್ಲ. ಚಿಕಿತ್ಸೆ ನೀಡಲಾರ; ಆದರೆ ತೋರಿಸಬಲ್ಲ. ಚಿಕಿತ್ಸೆಯ ಪರಿಣಾಮವನ್ನು ಅನುಭವಕ್ಕೆ ತಾಕಿಸಬಲ್ಲ. 'ಗಮನ'ದ ವಿವಿಧತೆ ಈ ಕತೆಯ ಗಮನಾರ್ಹ ಅಂಶವೂ ಹೌದು. ರೈಲಿನ ಜನರಲ್ ಬೋಗಿಯ ಪಯಣವೋ, ಗೆಳೆಯನೊಡನೆಯ ಅನುಗಮನವೋ, ಗುಪ್ತಗಾಮಿನಿಯಂತೆ ನಾಯಕಿಯ ಮನವನ್ನು ಪರಿವರ್ತಿಸುವ ಪರಿಯನ್ನು ನಾವಿಲ್ಲಿ ಕಾಣಬಹುದು.

"ಸೆಲೆ" ಎನ್ನುವ ಕತೆ ಜೀವನ ಹಾಗೂ ಕವನದ ನಡುವಿನ ಸಂಬಂಧ ಹಾಗೂ ವೈರುಧ್ಯವನ್ನು ಮಾರ್ಮಿಕವಾಗಿ ಹೇಳಲು ಪ್ರಯತ್ನಿಸುತ್ತದೆ. ತೆಂಗಿನಕಾಯಿ, ಭೂ ವಿಜ್ಞಾನಿ ಹೀಗೇ ನೂರಾರು ರೀತಿಯಿಂದ ಗುರುತಿಸಲ್ಪಟ್ಟ ಜಾಗದಲ್ಲಿ ಬೋರ್‌ವೆಲ್ ತೆಗೆದರೂ ಬರೀ ಹುಡಿ ಮಣ್ಣನ್ನು ಪಡೆದ ನಂತರ; ಚಪ್ಪಲಿ ಎಸೆದು ಬಿದ್ದ ಜಾಗದಲ್ಲಿ ಬೋರು ಕೊರೆದು ನೀರಿನ ಹೊಳೆಯನ್ನೇ ಹರಿಸುವ ಘಟನೆಯೊಂದು ಇಲ್ಲಿ ನಮ್ಮೆಲ್ಲರ ಕಣ್ಣು ತೆರೆಸುತ್ತದೆ. 

"ವಿಮೋಚನೆ"ಯಿಲ್ಲಿ ಯಾರಿಂದ ಯಾರಿಗೆ? ಎನ್ನುವ ಪ್ರಶ್ನೆಯನ್ನು ಹುಟ್ಟುಹಾಕುವುದೇ ಈ ಕತೆಯ ಉದ್ದೇಶ. ಸೊಂಟದ ಕೆಳಗಿನ ಸ್ವಾಧೀನ ಕಳೆದುಕೊಂಡು ಆಸ್ಪೆಅತ್ರೆಯಲ್ಲಿ ಬಿದ್ದಿರುವ ರಘುಪತಿ ಅಲ್ಲಿಯ ನರ್ಸೊಬ್ಬಳನ್ನು ಪ್ರೀತಿಸುತ್ತಾನೆ. ಆದರೆ ಅವನಿಗೆ ಮದುವೆಯಾಗಿದೆ, ಮಗನಿದ್ದಾನೆ. ಇನ್ನೊಂದೆಡೆ, ಡೈವರ್ಸ್ ಕೇಸನ್ನು ಆತನ ಗೆಳೆಯನೇ ನಿರ್ವಹಿಸುತ್ತಿದ್ದಾನೆ. ಹೀಗೆ ನಾಲ್ಕೈದು ಪಾತ್ರಗಳ ನಡುವೆ ಹೆಣೆದ ಈ ಕಥೆ ಕುತೂಹಲದ ಹಂತ ತಲುಪುವಷ್ಟರಲ್ಲಿ - ಒಂದೆಡೆ ಬಂಧದ ಸರಪಳಿ ಕಳಚಿದರೆ ಇನ್ನೊಂದೆಡೆ ಸಂಬಂಧ ಸಾಯುತ್ತದೆ. ಜೀವನದ ಪ್ರತಿ ಮುಖ್ಯ ಘಟನೆಗೂ ವ್ಯಯವಾಗುತ್ತಾ, ಪುರಾವೆಯಾಗಿ ನಿಂತ ವಜ್ರದ ಹರಳುಗಳಲ್ಲಿ ಕೊನೆಯ ಹರಳು ಅಂತ್ಯ ಸಂಸ್ಕಾರದ ಲೆಕ್ಕಕ್ಕೆ ಚುಕ್ತಾ ಆಗುವುದು ಕತೆಯ ಅರ್ಥಸಾಧ್ಯತೆಯನ್ನು ಹೆಚ್ಚಿಸಿದೆ. 

"ಕಾಮೋಲ"ದಲ್ಲಿ ವಿಶಿಷ್ಟ ತಂತ್ರಗಾರಿಕೆಯಿದೆ. ತ್ರಿವೇದಿ ಹಾಗೂ ಗೋಪಣ್ಣ ಅನ್ನುವ ಎರಡು ಪಾತ್ರಗಳ ಮುಖೇನ ಕಾಮದ 'ಒಳ'-'ಹೊರ'ಗನ್ನು ಓರೆಗೆ ಹಚ್ಚುತ್ತಾರೆ ಅಜಿತ್ ಹೆಗಡೆ. ಮಳೆ, ನದಿ, ಮಿಂಚು ಇತ್ಯಾದಿಗಳೆಲ್ಲ ಕತೆಗೆ ಪೂರಕವೆನಿಸುತ್ತಾ, ಹೊಸ ಅರ್ಥಗಳನ್ನು ಹೊಮ್ಮಿಸುತ್ತಾ ಪ್ರವಹಿಸುತ್ತವೆ. 'ಅಲ್ಲಿ ಗೋಪಣ್ಣ ಒಂದೊಂದೇ ಬಟ್ಟೆ ಬಿಚ್ಚುತ್ತಾ ಹೋದಂತೆ, ದಡದಲ್ಲಿದ್ದ ತ್ರಿವೇದಿಗಳು ನಗ್ನರಾಗತೊಡಗಿದರು' ಎನ್ನುವ ಸಾಲು, ಕತೆ ಇಷ್ಟಿಷ್ಟೇ ತನ್ನ ಗುಟ್ಟು ಬಿಟ್ಟುಕೊಡುತ್ತಾ ಹೋಗುವ ಕಲಾತ್ಮಕತೆಗೆ ಸಾಕ್ಷಿ. ಕೊನೆಯಲ್ಲಿ- ಕ್ಷಮೆ ಕೇಳುವುದು ಕಷ್ಟವೋ, ಕ್ಷಮಿಸುವುದು ಕಷ್ಟವೋ? ಎನ್ನುವ ಗಂಭೀರ ಪ್ರಶ್ನೆಯ ಸವಾಲನ್ನು ಓದುಗನೆದುರಿಡುವುದು ಈ ಕತೆಯ ಹೆಗ್ಗಳಿಕೆ. 

ಕುತೂಹಲಕಾರಿಯಾಗಿ ಕಥೆಯನ್ನು ಹೆಣೆಯುವುದು ಒಂದು ಕಲೆ. ಅದು ಹೆಗಡೆಯವರಿಗೆ ಒಲಿದಿದೆ. ಅದಕ್ಕಿಂತಲೂ ಒಂದು ಹೆಜ್ಜೆ ಮುಂದೆ ಹೋಗಿ, ಕತೆಯ ಕಟ್ಟೋಣದ ಜೊತೆ ಜೊತೆಗೇ ಇನ್ನಷ್ಟು ಸೂಕ್ಷ್ಮಗಳನ್ನೂ ಸಂವೇದನೆಯನ್ನೂ ಹಿಡಿದುಕೊಡುವ; ಆ ಮೂಲಕ ಬದುಕನ್ನು ತೋರಿಸುವ ವಿಧಾನ ಇನ್ನೂ ಹೆಚ್ಚು ತೃಪ್ತಿದಾಯಕ ಕಥೆಗಳ ಸೃಷ್ಟಿಗೆ ಕಾರಣವಾಗಬಲ್ಲದು. ಹಸಿ ಬಾಣಂತಿಯ ಕೋಣೆ, ನವಜಾತ ಶಿಶುವಿಗಿರುವ ವಿಶಿಷ್ಟ ಘಮವನ್ನು ಆಘ್ರಾಣಿಸಬಲ್ಲ ಅಜಿತ ಹೆಗಡೆಯವರಿಗೆ ಅದು ಕಷ್ಟವಾಗದು ಎಂದು ನಂಬಿದ್ದೇನೆ. ಹಾಗೇ, ಕತೆಯಲ್ಲಿ ವಾಚ್ಯ ಹಾಗೂ ಸೂಕ್ಷ್ಮಗಳ ನಡುವಿನ ಗೆರೆ ತುಂಬಾ ತೆಳುವಾದುದು. ಅದೆರಡರ ನಡುವಿನ ಸಮತೋಲನ ನುರಿತ ಕತೆಗಾರರಿಗೂ ಕೆಲವೊಮ್ಮೆ ಕಷ್ಟದ ಬಾಬ್ತೇ. ಅಯಾಚಿತವಾಗಿ ಒಂದೆಡೆ ವಾಲಿದಾಗ ನಮ್ಮರಿವಿಗೆ ಬಾರದಂತೆಯೇ ಕತೆ ತಮ್ಮ ಅಪೇಕ್ಷಿತ ಮಟ್ಟ ತಲುಪದಿರಬಹುದು. ಇದು ಅಜಿತರಿಗೆ ತಿಳಿಯದ ಗುಟ್ಟೇನೂ ಅಲ್ಲ. 

ವಸ್ತು ಹಾಗೂ ವಿನ್ಯಾಸದಲ್ಲಿ ತಮ್ಮ ಮೊದಲ ಸಂಕಲನಕ್ಕಿಂತಲೂ ವಿಭಿನ್ನವಾದ ಕತೆಗಳನ್ನು ನೀಡಲು ಡಾ. ಅಜಿತ ಹೆಗಡೆ ಪ್ರಯತ್ನಿಸಿರುವುದು ಇಲ್ಲಿ ದಿಟವಾಗಿದೆ. ಸಣ್ಣ ಕತೆಗಳ ಪ್ರಕಾರ ಹಾಗೂ ಸಾಧ್ಯತೆಗಳಲ್ಲಿ ಹೊಸತನದ ಅನ್ವೇಷಣೆಯ ಅವರ ತುಡಿತ  ಇಷ್ಟವಾಗುವಂಥದ್ದು. ಅವರಿಂದ ಇನ್ನೂ ಉತ್ತಮ ಕಥೆಗಳೂ, ಸಂಕಲನಗಳೂ ಬರಲಿ ಎಂದು ಆಶಿಸುವೆ. 

-ಕರ್ಕಿ ಕೃಷ್ಣಮೂರ್ತಿ

೦೬.೦೯.೨೦೧೯

ಬೆಂಗಳೂರು

Related Books