ಮಾಯಾಪಂಜರ

Author : ಪ್ರಸನ್ನ ಸಂತೇಕಡೂರು

Pages 168

₹ 130.00
Year of Publication: 2018
Published by: ಮಲೆನಾಡು ಪ್ರಕಾಶನ
Address: ಚಿಕ್ಕಮಗಳೂರು
Phone: 9108655013

Synopsys

ಮಾಯಾಪಂಜರ ಪ್ರಸನ್ನ ಸಂತೆಕಡೂರು ಅವರ ಕತಾಸಂಕಲನ. ಇದರಲ್ಲಿ ಹದಿಮೂರು ಕಥೆಗಳಿವೆ ೧) ಒಲವೇ ಜೀವನ ಸಾಕ್ಷಾತ್ಕಾರ ( ಈ ಕತೆ ವಿಧುರನೊಬ್ಬನ ಅಮರ ಪ್ರೇಮ ಕಥೆ). ಈ ಕಥೆಯ ಬಗ್ಗೆ ಖ್ಯಾತ ಕನ್ನಡ ಲೇಖಕ ಪ್ರಧಾನ ಗುರುದತ್ತ ಅವರು ತುಂಬಾ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ. ಈ ಕಥೆಗೆ ಅಮೆರಿಕಾದ ಸ್ವರ್ಣಸೇತು ಸಂಸ್ಥೆಯೂ ಮೊದಲ ಬಹುಮಾನ ನೀಡಿ ಗೌರವಿಸಿದೆ. ೨) ಮಾಯಾಪಂಜರ (ಇಲ್ಲಿ ಪ್ರೇಮಿಯನ್ನು ಕಳೆದುಕೊಂಡು ಪ್ರೀತಿಯನ್ನು ಹುಡುಕುತ್ತಾ ಹೋಗುವ ಪ್ರೇಯಸಿಯೊಬ್ಬಳ ಬದುಕಿನ ದುರಂತವನ್ನ ಕಾಣಬಹುದು. ಇದೊಂದು ಫ್ಯಾಂಟಸಿ, ಮಾಯಾ ವಾಸ್ತವತೆಯನ್ನ ಹೊಂದಿರುವ ಕಥೆ. ಇಲ್ಲಿ ಕಮೂವಿನ ಅಸಂಗತವಾದ ಮತ್ತು ಸಾರ್ತ್ರೆಯ ಅಸ್ತಿತ್ವವಾದದ ಪ್ರಭಾವ ಕೂಡ ಎದ್ದು ಕಾಣುತ್ತದೆ. ಇದು ಕನ್ನಡದ ಅತ್ಯದ್ಭುತ ಕತೆಗಳಲ್ಲಿ ಒಂದು ಎಂದು ಹೇಳಬಹುದಾದ ಎಲ್ಲಾ ಲಕ್ಷಣಗಳನ್ನು ಹೊಂದಿದೆ.). ೩) ಅಸ್ಥಿಪಂಜರದ ಬಾಲಕ (ಇದು ಅಮೆರಿಕಾದ ಪ್ರಖ್ಯಾತ ಟೆನ್ನಿಸ್ ಪಟ್ಟು ಅರ್ಥರ್ ಆಶ್ ದುರಂತ ಜೀವನ ಕತೆಯನ್ನ ತೀವ್ರ ಕುತೂಹಲಕಾರಿಯಾಗಿ ಹೇಳಿರುವ ವಸ್ತುವನ್ನ ಹೊಂದಿದೆ). ೪) ಅತಿಮಾನವನ ವಿಕಾಸ ಮತ್ತು ಅವನತಿ (ಇದು ನುರುವರ್ಷದ ನಂತರದ ಜನಜೀವನ ಹೇಗಿರುತ್ತದೆ ಎಂಬುದನ್ನ ಹೇಳುವ ವೈಜ್ಞಾನಿಕ ಕತೆ) ೫) ಸ್ಟ್ಯಾಟ್ಯೂ ಆಫ್ ಲಿಬರ್ಟಿ ( ಇದು ಅಮೆರಿಕಾದಲ್ಲಿ ಅತಿಯಾದ ಸ್ವಾತಂತ್ರ್ಯ ಮತ್ತು ಗನ್ ಸಂಸ್ಕೃತಿ ಹೇಗೆ ಅವನತಿಯತ್ತ ಕರೆದುಕೊಂಡು ಹೋಗುತ್ತದೆ ಎಂಬುದನ್ನ ಫ್ರಾಂಜ್ ಕಾಫ್ಕನ ಪ್ರಭಾವವಿರುವ ಕತೆ. ಈ ಕತೆ ಸ್ವಲ್ಪ ಮಟ್ಟಿಗೆ ಕಾಫ್ಕನ ದಿ ಟ್ರಯಲ್ ಮತ್ತು ದಿ ಕಾಸಲ್ ಕಾದಂಬರಿಗಳನ್ನ ನೆನಪಿಸುತ್ತದೆ). ೬) ಐಕ್ಯ ( ಇಲ್ಲಿಯ ನಾಯಕಿ ದೇವರನ್ನ ಹುಡುಕುತ್ತಾ ತನ್ನ ಪ್ರೇರಕ ಶಕ್ತಿಯಾಗಿದ್ದ ಅಕ್ಕಮಹಾದೇವಿಯನ್ನ ಹುಡುಕುತ್ತಾ ಹೋಗುವ ಕತೆ) ೭) ವ್ಯಂಗ್ಯ ( ಈ ಕಥೆ ಚಿಕ್ಕದಾದರೂ ಸಮಕಾಲೀನ ಸಮಾಜವನ್ನ ವಿಡಂಬನೆ ಮಾಡಿದೆ. ಇದನ್ನ ಪ್ರಸನ್ನ ಅವರ ತೂಕದ ಕತೆಗಳ ಸಾಲಿಗೆ ಸೇರಿಸಬಹುದು). ೮) ವಂಶವಾಹಿನಿ (ಇದು ಕನ್ನಡದ ಮಹತ್ತರವಾದ ಕಥೆಗಳಲ್ಲಿ ಒಂದು ಎಂದು ನಿರ್ವಿವಾದವಾಗಿ ಹೇಳಬಹುದು. ಈ ಕಥೆ ಸೃಷ್ಟಿ ರಹಸ್ಯ, ಮಶವಾಹಿನಿ, ವಂಶವೃಕ್ಷ ಎಲ್ಲವನ್ನು ತುಂಬಾ ಮನೋಜ್ಞವಾಗಿ ಮೂಡಿಬಂದಿದೆ ಎಂದು ಹೇಳಬಹುದು. ಇದು ಸ್ವಲ್ಪ ಮಟ್ಟಿಗೆ ಎಸ್. ಎಲ್. ಭೈರಪ್ಪನವರ ವಂಶವೃಕ್ಷದ ಪ್ರಭಾವದ ರೀತಿ ಕಂಡರೂ ಇದು ಬೇರೆ ರೀತಿಯ ಕಥೆ ). ಈ ಕಥೆಗೆ ಅಂತರ್ಜಾಲದ ಪ್ರತಿಲಿಪಿ ಕಥಾಸ್ಪರ್ಧೆಯಲ್ಲಿ ಮೊದಲ ಬಹುಮಾನ ಬಂದಿದೆ. ೯) ಎಬೋಲಾ ( ಈ ಕತೆ ಎಬೋಲಾ ವೈರಸ್ಸು ಮತ್ತು ಅದರಿಂದ ಬರುವ ರೋಗದ ಬಗ್ಗೆ ಇದ್ದರೂ ಇದು ಸಮಕಾಲೀನ ಅಮೆರಿಕಾದ ಅರೋಗ್ಯ ವೀಮೆಯನ್ನು ಅದರಿಂದ ಸಾಮಾನ್ಯ ಜನರಿಗೆ ಆಗುವ ಸಮಸ್ಯೆಗಳನ್ನ ವಿಡಂಬನಾತ್ಮಕವಾಗಿ ಟೀಕಿಸುತ್ತದೆ). ೧೦) ಸುಡುಗಾಡು ( ಸುಡುಗಾಡು ಕಥೆ ಆಧುನಿಕತೆಯ ನಾಗಾಲೋಟದಿಂದ ಹಳ್ಳಿಗಳು ಹೇಗೆ ನಾಶವಾಗುತ್ತಿವೆ ಎಂಬುದನ್ನ ತುಂಬಾ ಮನೋಜ್ಞವಾಗಿ ಚಿತ್ರಿಸಿರುವುದನ್ನ ಈ ಕಥೆಯಲ್ಲಿ ಕಾಣಬಹುದು. ಇಲ್ಲಿನ ನಾಯಕ ಆಲನಹಳ್ಳಿ ಶ್ರೀಕೃಷ್ಣರವರ ಪರಸಂಗದ ಗೆಂಡೆತಿಮ್ಮ ಮತ್ತು ಭುಜಂಗಯ್ಯನ್ನ ದಶಾವತಾರದ ಭುಜಂಗಾಯನನ್ನ ನೆನಪಿಸುತ್ತದೆ. ಈ ಕಥೆ ಆ ಕಾದಂಬರಿಗಳ ಮಟ್ಟಕ್ಕೆ ನಿಲ್ಲಬಹುದು ಹೇಳಬಹುದು). ೧೧) ಮಾಯಾಜಿಂಕೆ (ಮಾಯಾಜಿಂಕೆ ಹೆಣ್ಣೊಬ್ಬಳ ದೈಹಿಕ ಮತ್ತು ಮಾನಸಿಕ ತಳಮಳಗಳನ್ನ ಫ್ಯಾಂಟಸಿ ಮತ್ತು ಮಾಯಾ ವಾಸ್ತವತೆಯ ಮೂಲಕ ತೋರಿಸಿದೆ. ಈ ಕಥೆ ಓದುತ್ತಿದ್ದರೆ ವಿಶ್ವ ವಿಖ್ಯಾತ ಸಮಕಾಲೀನ ಜಪಾನಿ ಲೇಖಕ ಹಾರುಕಿ ಮುರಾಕಮಿಯ ಕೃತಿಗಳನ್ನ ಜ್ಞಾಪಕಕ್ಕೆ ತರುತ್ತದೆ). ೧೨) ಮಹಾನವಮಿ ( ಇಲ್ಲಿನ ನಾಯಕಿ ತನಗೆ ಸಾವು ಹತ್ತಿರ ಬರುತ್ತಿದೆ ಎಂದು ಮೊದಲೇ ತಿಳಿದಿದ್ದರೂ ನಗುನಗುತ್ತಾ ಎಲ್ಲರನ್ನು ಮುಗ್ದಗೊಳಿಸಿ ಸಾವನ್ನ ಪ್ರೀತಿಯಿಂದ ಅಪ್ಪಿಕೊಳ್ಳುವ ಘಟನೆಯನ್ನ ತೋರಿಸುತ್ತದೆ). ೧೩) ಎತ್ತಣ ಮಾಮರ ಎತ್ತಣ ಕೋಗಿಲೆ ( ಇದೊಂದು ಬದಲಾದ ಜಗತ್ತಿನ ಪಾತ್ರಗಳು ತಿರುಗು ಮುರುಗಾಗಿ ಅಸ್ತಿತ್ವ ಮತ್ತು ಪ್ರೀತಿಯನ್ನ ಹುಡುಕುತ್ತಾ ಒದ್ದಾಡುವ ಸ್ಥಿತಿಯನ್ನ ಅಮೆರಿಕಾ ಮತ್ತು ಭಾರತದ ಹಿನ್ನೆಲೆಯಲ್ಲಿ ಚಿತ್ರಿಸಿರುವ ಕಥೆ).

About the Author

ಪ್ರಸನ್ನ ಸಂತೇಕಡೂರು

ಪ್ರಸನ್ನ ಸಂತೇಕಡೂರು, ಮೂಲತಃ ಶಿವಮೊಗ್ಗ ಸಮೀಪದ ಸಂತೇಕಡೂರಿನವರು. ಶಿವಮೊಗ್ಗದ ಸಹ್ಯಾದ್ರಿ ವಿಜ್ಞಾನ ಕಾಲೇಜಿನಲ್ಲಿ ಬಿಎಸ್ಸಿ ಪದವಿ, ಮೈಸೂರು ವಿಶ್ವವಿದ್ಯಾಲಯದಿಂದ ಜೈವಿಕ ತಂತ್ರಜ್ಞಾನದಲ್ಲಿ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿ ಪಡೆದು, ಸುಮಾರು ಹತ್ತು ವರ್ಷಗಳ ಕಾಲ ಅಮೇರಿಕಾದಲ್ಲಿ ನೆಲೆಸಿದ್ದರು. ಮೊದಲು ವರ್ಜಿನೀಯಾ ಸಂಸ್ಥಾನದ ರಿಚ್ಮಂಡ್ ನಗರದ ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾಲಯದಲ್ಲಿ ಪೋಸ್ಟ್ ಡಾಕ್ಟೋರಲ್ ಫೆಲೋ ಆಗಿ ನಂತರ ಅಲ್ಲಿಯೇ ಹಂಟರ್ ಹೊಲ್ಮ್ ಮ್ಯಾಕ್ವಾಯಿರ್ ಸಂಶೋಧನಾ ಕೇಂದ್ರ ಮತ್ತು ವರ್ಜಿನೀಯಾ ಕಾಮನ್ ವೆಲ್ತ್ ವಿಶ್ವವಿದ್ಯಾಲಯದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಭಾರತ ಸರ್ಕಾರದ ಜೈವಿಕ ತಂತ್ರಜ್ಞಾನ ಇಲಾಖೆಯಿಂದ ವಿದೇಶಗಳಲ್ಲಿರುವ ಭಾರತೀಯ ಪ್ರತಿಭಾವಂತ ...

READ MORE

Reviews

ಮಾಯಾಪಂಜರದೊಳಗೆ....

ಪ್ರಸನ್ನ ಅವರು ನಾನು ಮೈಸೂರಿನಲ್ಲಿದ್ದಾಗ ದೂರದಿಂದ ನನ್ನನ್ನು ಹುಡುಕಿಕೊಂಡು ಬಂದರು. ತಮ್ಮ ಕೃತಿಗಳನ್ನು ಕೊಟ್ಟರು. ಅವರ ಪ್ರೀತಿಗೆ ನನ್ನ ಲಾಲ್ ಸಲಾಂ.
ನನ್ನದೇ ಕೆಲವು ಕಾರಣಗಳಿಂದ ಓದಲು ತಡವಾಯಿತು. ಕ್ಷಮೆ ಇರಲಿ ಪ್ರಸನ್ನ ಅವರೇ.

ವಿಜ್ಞಾನಿಯಾದ ಪ್ರಸನ್ನ ಸಂತೇಕಡೂರು, ಅವರ ವೈವಿಧ್ಯಮಯ ಸಾಂಸ್ಕೃತಿಕ ಆಸಕ್ತಿಗಳನ್ನು ನೋಡಿದರೆ ಆಶ್ಚರ್ಯವಾಗುತ್ತದೆ. ವಿಜ್ಞಾನದ ವಿದ್ಯಾರ್ಥಿಗಳೆಂದ ಕೂಡಲೇ ಕನ್ನಡ ಭಾಷೆಗೆ ಅಪರಿಚಿತರಾಗಿಬಿಡುವುದೇ ಹೆಚ್ಚು. ಅದೂ ಭಾರತದಿಂದ ದೂರ ಅಮೇರಿಕಾದಲ್ಲಿ ಹತ್ತು ವರುಷ ನೆಲೆಸಿದವರೆಂದರೆ ತವರಿನ ಮಣ್ಣಿನ ವಾಸನೆಯಿಂದ ದೂರವೇ ಎಂದು ಹೇಳಬಹುದು. ಆದರೆ ಪ್ರಸನ್ನ ಅವರು ಮಣ್ಣಿನ ಘಮಲಿಗೆ ಆಕರ್ಷಿತರಾಗಿ ತವರಿಗೆ ನೆಲೆಸಲು ಬಂದಿದ್ದಾರೆ. ಅಮೇರಿಕಾವಾಸಿಗಳಲ್ಲಿ ಇದು ಅಪರೂಪ. ನಾಡು ನುಡಿಯ ಬಗೆಗಿನ ಅವರ ಪ್ರೀತಿಯ ದ್ಯೋತಕವಿದು. ಆದುದರಿಂದಲೇ ಪ್ರಸನ್ನ ಅವರ ಈ ಕತೆಗಳು ಅಮೇರಿಕಾದಲ್ಲಿದ್ದರೂ ಭಾರತದತ್ತ ಮುಖ ಮಾಡಿವೆ.

ವಿಜ್ಞಾನ ಮತ್ತು ಸಾಹಿತ್ಯ ಇವುಗಳ ಸಮತೋಲ ದೃಷ್ಟಿಯನ್ನು ಇಲ್ಲಿ ಕಾಣಬಹುದು. ಈ ಸಮನ್ವಯ ಸಾಧನೆಯ ಪ್ರತೀಕವಾಗಿ ಅವರ ಮಾಯಾಪಂಜರ ಸಂಕಲನದ ಕತೆಗಳು ಮುಖ್ಯವಾಗುತ್ತವೆ.

ಇಲ್ಲಿನ ಕಥಾವಸ್ತು ಗಳ ವೈವಿಧ್ಯತೆಗೆ ಅವರ ವೈವಿಧ್ಯಮಯ ಆಸಕ್ತಿಗಳೇ ಕಾರಣ. ಅವರಿಗೆ ವಚನ ಸಾಹಿತ್ಯದ ಬಗ್ಗೆ ವಿಶೇಷವಾದ ಒಲವಿದೆ ಎಂದು ಹೇಳಲು ಅನೇಕ ಕಡೆ ಅವರು ಅಲ್ಲಮ ಪ್ರಭು ಮತ್ತು ಅಕ್ಕನ ವಚನಗಳನ್ನು ಉಲ್ಲೇಖಿಸುವುದೇ ಸಾಕ್ಷಿ. ಇದೂ ಕೂಡ ಒಬ್ಬ ವಿಜ್ಞಾನದ ವಿದ್ಯಾರ್ಥಿಗೆ ಒಲಿದ ಗುಣಗಳೇ. ಮನುಷ್ಯ ಸಂಬಂಧಗಳ ವಿಭಿನ್ನ ಸ್ವರೂಪಗಳನ್ನು ಇಲ್ಲಿನ ಕತೆಗಳು ಅಭಿವ್ಯಕ್ತಿಸುತ್ತವೆ. ಕೌಟುಂಬಿಕ, ಪ್ರೇಮ, ಅಧ್ಯಾತ್ಮ, ವೃತ್ತಿ ಜಗತ್ತು, ಬಾಲ್ಯದ ನೆನಪಿನ ಪ್ರಪಂಚ, ಅಮೇರಿಕಾ ಮತ್ತು ಭಾರತದ ಭೌಗೋಳಿಕ ಪರಿಸರ ಇವೆಲ್ಲವನ್ನೂ ಒಳಗೊಂಡಿರುವ ಅನೇಕ ಗಟ್ಟಿ ಕತೆಗಳು ಇಲ್ಲಿವೆ. ಕೆಲವು ದುಃಖಾಂತದ ಕತೆಗಳು,ಕೆಲವು ಫ್ಯಾಂಟಸಿಯ ಲೋಕವನ್ನು, ಇನ್ನೂ ಕೆಲವು ಮಾಂತ್ರಿಕ ಪರಿಣಾಮ ವನ್ನುಂಟುಮಾಡುವ, ನಿಗೂಢ ಕತೆಗಳು, ರಮ್ಯಲೋಕದ ಕತೆಗಳಿವೆ.
ಪ್ರಸನ್ನ ಅವರಿಗೆ ಕಥೆ ಹೇಳುವ ಕಲೆ ಸಿದ್ಧಿಸಿದೆ"ಅಸ್ತಿಪಂಜರ ಮತ್ತು ಮಾಯಾಜಿಂಕೆ" ಬದುಕಿನ ಮಹತ್ವಾಕಾಂಕ್ಷೆಯನ್ನು ಈಡೇರಿಸಿಕೊಳ್ಳುವ ಪ್ರಯತ್ನದಲ್ಲಿ ಒಂದು ರೀತಿಯ ಫ್ಯಾಂಟಸಿಯ ಲೋಕವನ್ನು ನಿರ್ಮಿಸಿ ಓದುಗರನ್ನು ಹಿಡಿದಿಡುವ ಮಹತ್ವದ ಕತೆ. ಕತೆಯ ಉದ್ದೇಶಕ್ಕೆ ಸಹಾಯವಾಗುವಂತೆ ಸೃಷ್ಟಿಸುವ ಭೌಗೋಳಿಕ ಸನ್ನಿವೇಶಗಳು ಅನನ್ಯವಾದವು. ಹಾಗೆಯೇ "ಒಲವೇ ಜೀವನ ಸಾಕ್ಷಾತ್ಕಾರ" ಮತ್ತು "ಮಹಾನವಮಿ" ಕತೆಗಳು ಬದುಕಿನ ವಾಸ್ತವ ಸಂಗತಿಗಳನ್ನು ಪ್ರಬುದ್ಧ ರೀತಿಯಿಂದ ಗ್ರಹಿಸುವ, ಸಾವನ್ನೂ ಕೂಡ ಬದುಕಿನ ಒಂದು ಅನಿವಾರ್ಯ ಘಾಟಕವಾಗಿ ನೋಡುವ ಸಮಚಿತ್ತದ ನಿರೂಪಣೆ ಇರುವ ಇವು ಈ ಸಂಕಲನದ ಬಹಳ ಮಹತ್ವದ ಕತೆಗಳು.

ಮೇಲಿನವುಗಳೇ ಅಲ್ಲದೆ,ಇಲ್ಲಿ ಗಂಡು ಹೆಣ್ಣುಗಳ ನಡುವಿನ ಉತ್ಕಟ ಪ್ರೇಮ, ಅದರಿಂದ ಉಂಟಾಗುವ ನಿರಾಶೆ, ಆತ್ಮಹತ್ಯೆಯಂತಹ ಬದುಕನ್ನು ನಿರಾಕರಿಸುವ ಕತೆಗಳಿವೆ (ಮಾಯಾಪಂಜರ, ಎತ್ತಣ ಮಾಮರ), ವೈಜ್ಞಾನಿಕ ಸಾಧನೆ, ಮಹತ್ವಾಕಾಂಕ್ಷೆ, ನಿಗೂಢತೆ, ವಿಸ್ಮಯ ಹಾಗೂ ಅದರ ಅಪಾಯಗಳನ್ನು ಸಾರುವ ಕುತೂಹಲ ಹುಟ್ಟಿಸುವ ಕತೆಗಳಿವೆ(ಅತಿ ಮಾನವ ವಿಕಾಸ ಮತ್ತು ವಂಶವಾಹಿನಿ), ಆನುಭಾವಿಕ ತಲ್ಲಣಗಳನ್ನು ಮಾರ್ಮಿಕವಾಗಿ ಎತ್ತಿಹಿಡಿಯುವ ಕತೆ (ಐಕ್ಯ), ಮನುಷ್ಯನ ಕಾರಣವಿಲ್ಲದ ಭಯ, ತುಮುಲಗಳನ್ನು ಜೀವ ಭಯವನ್ನು ಸಾರುವ ಕತೆ (ಎಬೋಲಾ), ಸಂಪೂರ್ಣ ವಿನಾಶವನ್ನೇ ಗುರಿಯಾಗಿಟ್ಟುಕೊಂಡ ದೊಡ್ಡ ಕ್ಯಾನ್ವಾಸುಳ್ಳ ಕತೆ (ಸುಡುಗಾಡು) ಹೀಗೆ ಅನೇಕ ಕತೆಗಳು ವೈವಿಧ್ಯಮಯ ಲೋಕವನ್ನು ಪರಿಚಯಿಸುತ್ತವೆ.
ಅಮೇರಿಕಾ ಮತ್ತು ಭಾರತದ ಎರಡೂ ಸಂಸ್ಕೃತಿಗಳ ಬಗ್ಗೆ ಒಂದು ಸಮನ್ವಯ ನೋಟ ಈ ಕತೆಗಳಿಗೆ ಸಿಕ್ಕಿದೆ. ಈ ಕತೆಗಳ ಅನುಭವ ಪ್ರಪಂಚ ವಿಸ್ತಾರವಾದುದು. ಅವುಗಳನ್ನು ಸಮಗ್ರವಾಗಿ ಹಿಡಿಯುವ ಇನ್ನೂ ಹೆಚ್ಚಿನ ಕತೆಗಳನ್ನು ಪ್ರಸನ್ನ ಅವರು ಬರೆಯಲಿ ಎಂದು ಆಶಿಸುತ್ತೇನೆ. ಅವರನ್ನು ಅಭಿನಂದಿಸುತ್ತೇನೆ.

ಗಿರಿಜಾ ಶಾಸ್ತ್ರೀ

 

ಮಾಯಾಪಂಜರ

ಕಥೆ ಶುರುವಾಗುವ ಮೊದಲ ಮುನ್ನುಡಿ-ಮನದ ಮುಂದಣ ಆಶೆಯೇ ಮಾಯೆ- ಓದುಗರನ್ನು- ಕಥೆ ಯಾವ ದಿಕ್ಕಿನತ್ತ ಓಡಬಹುದೆಂಬುದನ್ನು ಸೂಕ್ಷ್ಮವಾಗಿ ತಿಳಿಸುತ್ತದೆ. ನಮ್ಮಲ್ಲಿರುವ ಅರಿಷಡ್ವರ್ಗಗಳೆಲ್ಲವೂ ಸ್ವಾಭಾವಿಕವಾದವುಗಳು. ಇವುಗಳನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಯಾವ ತೊಂದರೆಯೂ ಇಲ್ಲ. ಯಾವಾಗ ಅವು ನಮ್ಮನ್ನು ನಿಯಂತ್ರಿಸ ತೊಡಗುತ್ತವೋ,ಆಗ ಆ ವ್ಯಕ್ತಿ ಹಾಗೂ ಅವರಿಗೆ ಸಂಬಂಧ ಪಟ್ಟವರಿಗೆ ಆಗುವ ಆಘಾತ ತೀವ್ರವಾದದ್ದು. ಕಥಾನಾಯಕಿಯ ಪಾತ್ರ, ಕಥೆಯೊಂದಿಗೆ ಬೆಳೆಯುತ್ತಾ ಹೋದಂತೆ-ಅವಳ ಹಿಂದಿನ ನೆನಪುಗಳು ಕಾಡಲಾರಂಭಿಸುತ್ತವೆ. ಆ ನೆನಪುಗಳಿಗೆ ಸಂಬಂಧಿಸಿದ ಜಾಗಗಳಿಗೆ ಭೇಟಿ ಕೊಟ್ಟಾಗ, ಒಳಗೊಳಗೇ ಒಣಗಿದ್ದ ಹುಲ್ಲು ಮೆದೆಗೆ ಸಣ್ಣ ಕಿಡಿ ಬಿದ್ದು, ಜ್ವಾಲಾಮುಖಿಯಾಗಿ ಉರಿಯತೊಡಗುತ್ತದೆ.ನಾಟ್ಯ ರಾಣಿ ಶಾಂತಲೆಯ ಕಥೆಯೊಂದಿಗೆ ತನ್ನ ಕಥೆಯನ್ನೂ ಮಿಳಿತ ಗೊಳಿಸಿ , ತಾನೇ ಶಾಂತಲೆ ಎಂಬ ಭ್ರಮಾಲೋಕಕ್ಕೆ ತೆರಳಿ, ಅವಳಂತೆಯೇ ದುರಂತ ಕಾಣುತ್ತಾಳೆ. ನಮ್ಮ ಮನದಾಸೆಗೆ ನಾವೇ ಕಡಿವಾಣ ಹಾಕಿಕೊಂಡು, ಧೃಡ ಮನೋಬಲದೊಂದಿಗೆ,ಜೀವನವನ್ನೆದುರಿಸದಿದ್ದರೆ ದುರಂತ ಕಟ್ಟಿಟ್ಟ ಬುತ್ತಿ. ಒಬ್ಬ ಲೇಖಕ- ತನ್ನ ಬರಹಾ ಸ್ವಾತಂತ್ರ್ಯದೊಂದಿಗೆ, ಯಾವ ವಿಷಯದ ಬಗ್ಗೆಯೂ ಕಥೆ ಬರೆಯುವ ಸಾಮರ್ಥ್ಯ ಹೊಂದಿರುತ್ತಾನೆ. ಓದುಗರೂ ಕೂಡ ಅವರದೇ ರೀತಿಯಲ್ಲಿ ಆ ಕಥೆಗೆ ಸ್ಪಂದಿಸುತ್ತಾರೆ. ಈ ಕಥೆ- ನಮ್ಮದೇ ಸಮಾಜದ ಕೆಲವರ ಕಥೆಯೂ ಆಗಿರುತ್ತದೆ. ಅವರ ವ್ಯಥೆ, ದುರಂತಕ್ಕೆ ಅವರನ್ನು ನೂಕುವ ಪೂರಕ ಸನ್ನಿವೇಶಗಳು -ಎಲ್ಲವೂ ಎಲ್ಲೋ ಒಂದು ಕಡೆ, ನಾವ್ಯಾರು ಇವರನ್ನು judge ಮಾಡಲು? ಎಂದು ಸಣ್ಣ ದನಿಯಲ್ಲಿ ನಮಗೆ ಹೇಳುತ್ತಿರುತ್ತವೆ. ಲೇಖಕರು " ಎಡಕಲ್ಲು ಗುಡ್ಡದ ಮೇಲೆ "ಕಾದಂಬರಿಯನ್ನು, ನಾಯಕಿ ಅನೇಕ ಬಾರಿ ಓದಿರುವುದನ್ನು ನಮ್ಮ ಗಮನಕ್ಕೆ ತಂದು- ಸೂಚ್ಯವಾಗಿ, ಅವಳ ಮನೋಕಾಮನೆಗಳು- ಎತ್ತ ಜಾರುತ್ತಿವೆ- ಎಂಬುದರ ಸುಳಿವು ಓದುಗರಿಗೆ ಕೊಡುತ್ತಾರೆ. ಲೇಖಕರ ಇತಿಹಾಸದ ಬಗೆಗಿನ ಅರಿವು ಕೂಡ ಸೊಗಸಾಗಿದೆ. ದಾಂಪತ್ಯದಲ್ಲಿ- ಗಂಡು ಹೆಣ್ಣು ಇಬ್ಬರೂ- ಎಮೋಷನಲ್ ಸಪೋರ್ಟ್ ನಿಂದ ವಂಚಿತರಾದರೆ- ಏನೇನು ಘಟಿಸಬಹುದು- ಎಂಬ ಎಚ್ಚರಿಕೆಯ ಘಂಟೆಯೂ ಕಥೆಯಲ್ಲಿ ಮೊಳಗುತ್ತದೆ. ಶಾಂತಲೆಯ ದಿನಗಳೇ ಆಗಲಿ, ಆಧುನಿಕ ದಿನಗಳೇ ಆಗಲಿ, ಮಾನವನ ಮೂಲಭೂತ ಭಾವಗಳು ಎಲ್ಲಾ ಕಾಲಕ್ಕೂ ಪ್ರಸ್ತುತ- ಎಂದು ಈ ಕಥೆ ತಿಳಿಸುತ್ತದೆ. ಕೊನೆಯಲ್ಲಿ ಬಳಸಿಕೊಂಡಿರುವ ಅಲ್ಲಮ ಪ್ರಭುವಿನ ಸಾಲುಗಳು-ನಿರ್ಣಯವನರಿಯದ ಮನವೇ,.. ಕಥೆ ಈ ರೀತಿ ದುರಂತದಲ್ಲಿ ಅಂತ್ಯಗೊಂಡಿದ್ದಕ್ಕೆ ಕಾರಣವನ್ನೂ ನೀಡುತ್ತದೆ. [ಸೊಗಸಾಗಿ ಬರೆದಿದ್ದೀರಿ. ನಿಮ್ಮ ಮುಂದಿನ ಕತೆಗಳಿಗೆ ನನ್ನ ಶುಭಕಾಮನೆಗಳು.]

ಮಂಗಳ ಗುಂಡಪ್ಪ

 

 

Related Books