ವಿಜಯಾ ಶ್ರೀಧರ್ ಸಮಗ್ರ ಕಥೆಗಳು

Author : ವಿಜಯಾ ಶ್ರೀಧರ್

Pages 500

₹ 400.00




Year of Publication: 2019
Published by: ಸ್ನೇಹ ಬುಕ್ ಹೌಸ್
Address: ಪ್ರಕಾಶನ #118, ಹೊಂಬೆಳಕು, ಎಚ್.ಎಂ.ಟಿ. ಲೇಔಟ್, ನಾಗಸಂದ್ರ ಅಂಚೆ, ಬೆಂಗಳೂರು-560073
Phone: 9449655053

Synopsys

ಮಾನಸಿಕ ಆರೋಗ್ಯ ಮತ್ತು ಸಮಾಜ ಕರ್ತವ್ಯದಲ್ಲಿ ಸದಾ ನಿರತರಾಗಿ ಸೇವೆ ಸಲ್ಲಿಸುತ್ತಿರುವ ಲೇಖಕಿ ವಿಜಯಾ ಶ್ರೀಧರ್‍. ಇವರು ಬರೆದ ಕತೆಗಳ  ಸಮಗ್ರ ರೂಪವೇ ಈ  ಪುಸ್ತಕ.

ಕಳೆದ ಇಪ್ಪತ್ತು ದಶಕಗಳಿಂದ ಕತೆಗಳನ್ನು ಬರೆದಿರುವ ವಿಜಯಾ ಅವರ ಅನೇಕ ಕತೆಗಳು ಈಗಾಗಲೇ ಪ್ರಕಟಗೊಂಡಿವೆ. ಅವುಗಳನ್ನು ಒಂದೆಡೆ ಸಂಕಲಿಸಿ ಹೊರತಂದಿರುವ ಈ ಪುಸ್ತಕ ಅವರ ಸಮಗ್ರ ಕತೆಗಳನ್ನು ಓದುಗರಿಗೆ ನೀಡಿದೆ. ಲೇಖಕಿ ತಮ್ಮ ಅನುಭವಗಳನ್ನು ಸರಳವಾಗಿ ತಮ್ಮ ಕತೆಯಲ್ಲಿ ಹೆಣೆದಿದ್ದಾರೆ. ಇವರ ಕತೆಗಳಲ್ಲಿ ಹೆಣ್ಣಿನ ಜೀವನಕ್ಕೆ ಸಂಬಂಧಿಸಿದ ಅನೇಕ ಕಥಾವಸ್ತುಗಳು ಪ್ರಧಾನವಾಗಿವೆ ಎನ್ನಬಹುದು. ಬದುಕಿನ ಸಣ್ಣಪುಟ್ಟ ಸಂಗತಿಗಳತ್ತ ಹೊರಳುತ್ತಾ ಸೂಕ್ಷ್ಮವಾದ ಗ್ರಹಿಕೆಯೊಂದರ ನಿಲುವನ್ನು ತಮ್ಮ ಕತೆಗಳಲ್ಲಿ ಪ್ರಸ್ತುತಪಡಿಸುತ್ತಾರೆ. ಹೆಣ್ಣಿನ ನಿಲುವು, ಧೋರಣೆಗಳನ್ನು ತಮ್ಮ ಕತೆಗಳಲ್ಲಿ ಎಳೆ ಎಳೆಯಾಗಿ ಬಿಚ್ಚಿಡುತ್ತಾ ಹೆಣ್ಣಿನ ಮನಃಸ್ಥಿತಿಯನ್ನು ಅವಲೋಕಿಸುವ, ಗ್ರಹಿಸುವ ಕೌಟುಂಬಿಕ ಕಥಾ ಹಂದರ ಈ ಕೃತಿಯಲ್ಲಿದೆ.

About the Author

ವಿಜಯಾ ಶ್ರೀಧರ್
(21 September 1949)

ವಿಜಯಾ ಶ್ರೀಧರ ಅವರು ಗಣಿತ ಹಾಗೂ ಕನ್ನಡದಲ್ಲಿ ಸ್ನಾತಕೋತ್ತರ ಪದವೀಧರೆ. ಉತ್ತರ ಕನ್ನಡ ಜಿಲ್ಲೆಯ ಶಿರ್ಶಿಯಲ್ಲಿ 21-09-1949 ರಂದು ಜನಿಸಿದರು. ತಂದೆ ಸದಾಶಿವ ಶಿರೂರ, ತಾಯಿ ಸರೋಜಿನಿ ಶಿರೂರ . ಪ್ರಕಟಿತ ಕೃತಿಗಳು: ಪುಟಾಣಿ ಕಥಾ ಕುಸುಮ (ಮಕ್ಕಳ ಕತೆಗಳು), ಕಳೆದು ಕೊಂಡದ್ದು (ಕಥಾ ಸಂಕಲನ), ಕನ್ನಡಿಯಲ್ಲಿ ಕಂಡಾಗ (ಕಥಾ ಸಂಕಲನ), ನವನೀತ, ಪಯಣ (ಪ್ರವಾಸ ಕಥನ), ಅಜ್ಜನ ಮನೆ ಅಂಗಳದಲ್ಲಿ (ಲಲಿತ ಪ್ರಬಂಧ), ದಶರೂಪ(ಕ)ದ ಸುಬ್ಬಣ್ಣ (ವ್ಯಕ್ತಿ ಚಿತ್ರ), ಹನಿ-ಧ್ವನಿ (ಕವನ ಸಂಕಲನ), ಸುಹಾಸ (ನಗೆ ಲೇಖನಗಳು) ಹಾಸ್ಯ - ಅನುಭವದ ಅಡಿಗೆಯ ಮಾಡಿ (ಲಲಿತ ಪ್ರಬಂಧ) ಅವರ ಸಾಹಿತ್ಯ ಸೇವೆಗೆ ...

READ MORE

Reviews

ಸರಳತೆಯೇ ಶಕ್ತಿ ಮತ್ತು ಮಿತಿಗಳು

ತೊಂಬತ್ತರ ದಶಕದಲ್ಲಿ ಕಥೆಗಳನ್ನು ಬರೆಯಲಾರಂಭಿಸಿದ ಶ್ರೀಮತಿ ವಿಜಯಾ ಶ್ರೀಧರ್ ಅವರ ಕತೆಗಳು ಇಲ್ಲಿ ಒಂದೆಡೆಗೆ ಸಂಕಲಿತಗೊಂಡಿವೆ. ಬಹುತೇಕ ಇವು ನಿಯತಕಾಲಿಕೆಗಳಿಗಾಗಿ ಬರೆದುವಾದವುಗಳಾದ್ದರಿಂದ ಸಹಜವಾಗಿಯೇ ಪುಟ ಮಿತಿಯನ್ನೂ ಸೀಮಿತ ಚೌಕಟ್ಟನ್ನೂ ತಮಗೆ ತಾವೇ ಹಾಕಿಕೊಂಡುಬಿಟ್ಟಿವೆ. ಹೀಗಾಗಿ ಕಥೆಗಳು  ತುಂಬ ಮಹತ್ವಾಕಾಂಕ್ಷಿಯಾದ ಕಥೆಗಳಲ್ಲ. ಕಥೆಗಳನ್ನು ಕಲಾತ್ಮಕವಾಗಿ ಕಟ್ಟಬೇಕೆನ್ನುವ ಪ್ರಜ್ಞಾಪೂರ್ವಕತೆಯಿಲ್ಲದೆ ತಮಗನ್ನಿಸಿದ, ತಾವು ನೋಡಿದ ಜೀವನದ ಅನುಭವಗಳನ್ನು ಸರಳವಾಗಿ ನಿರೂಪಿಸದ್ದಾರೆ. ಹೀಗಾಗಿ ಸರಳತೆಯೇ ಕಥೆಗಳ ಶಕ್ತಿ ಮತ್ತು ಮಿತಿ ಎಂದು ಹೇಳಬಹುದು.

'ಕನ್ನಡಿಯಲ್ಲಿ ಕಂಡಾಗ', 'ನವನೀತ', 'ಆತಂತಾತನ ಹಸ್ತಾರಿಂಭ' ಹೀಗೆ ನಾಲ್ಕು ಸಂಕಲನಗಳಲ್ಲದೆ, ಬಿಡಿ ಕತೆಗಳು ಸಹ ಪ್ರಸ್ತುತ ಸಂಕಲನದಲ್ಲಿ ಅಡಕಗೊಂಡಿವೆ. ಮೂರು ದಶಕಗಳ ಒಟ್ಟು ಕಥೆಗಳ ಗತಿಯನ್ನು ಗಮನಿಸಿದರೆ ಕೆಲವು ಸಾಮಾನ್ಯ ಚಹರೆಗಳು ಕಾಣುತ್ತವೆ. ವಿಜಯಾ ಅವರ ಕಥೆಗಳಲ್ಲಿ ಪಧಾನವಾಗಿರುವುದು ಹೆಣ್ಣುಗಳು, ಅವರ ಕಥಾವಸ್ತುಗಳು ಹೆಣ್ಣಿನ ಜೀವನಕ್ಕೆ ಸಂಬಂಧಪಟ್ಟವೇ ಆಗಿರುತ್ತವೆ. ಇದೇನೂ ವಿಶೇಷವಲ, ಕಥೆಗಳಲಿ ಬರುವ ತಾಯಂದಿರು, ಹೆಂಡತಿಯರು ಜೀವನದಲ್ಲಿ ನುರಿತವರು, ಅನುಭವ ಪಡೆದವರು. ಆದರೆ ಹೆಣ್ಣಿನ ಅನುಭವಗಳು ಸಂಘರ್ಷದ ಅನುಭವಗಳನ್ನು ಒಳಗೊಂಡರೂ ಸಹ ಕೊನೆಗೆ ಕುಟುಂಬ ಸಾಮರಸ್ಯದ ನೆಲೆಗೆ ಬಂದು ಸಂಘರ್ಷದ ಭಾವಗಳನ್ನುತಣಿಸಿಬಿಡುತ್ತವೆ. ಹೀಗಾಗಿ ವಿಜಯಾ ಅವರು ತಮ್ಮ ಕಥೆಗಳ ಮೂಲಕ ಹೇಳುವ ಮೌಲ್ಯಗಳು ಪುನಾ ಒಂದು ಗತಿ ಹಿಂದಕ್ಕೆ ಬಂದು ನಿಂತುಬಿಟ್ಟಂತೆ ಅನಿಸುತ್ತವೆ.  ಉದಾಹರಣೆಗೆ 'ನವನೀತ' ಕಥೆಯಲ್ಲಿ ಮೂರು ಮಕ್ಕಳ ತಾಯಿ ಹೊರಗೆ ಸ್ತ್ರೀಸ್ವಾತಂತ್ರ್ಯದ ಬಗೆಗೆ ಭಾಷಣ ಮಾಡುತ್ತಾ ಇರುತ್ತಿದ್ದವಳು ಇದ್ದಕ್ಕಿದ್ದಂತೆ ತನ್ನ ಹೆಣ್ಣು ಮಕ್ಕಳ ಬಗೆಗೆ ವ್ಯವಸ್ಥೆಯ ರೂಢಿಗತ ಧೋರಣೆಯಲ್ಲಿಯೇ ಯೋಚಿಸತೊಡಗುವುದನ್ನು ಕಾಣಬಹುದು. ಆದರೆ ’ವಿಶ್ವಾಮಿತ್ರಾ ಗೋತ್ರ ಸಮಾಗತಾ’ ಎನ್ನುವ ಕಥೆಯ ನಾಯಕಿ ಪ್ರಜ್ಞಾ ಪಿತೃಪ್ರಧಾನ ವ್ಯವಸ್ಥೆಯ ಭಾಗವಾಗಲು ಮನಸೊಪ್ಪದೆ ಇದ್ದರೂ ಅದೇ ವ್ಯವಸ್ಥೆಯ ಜೊತೆಗೆ ರಾಜಿಯಾಗಬೇಕಾಗುತ್ತದೆ. ಅವಳ ನಿಲುವು ಧೋರಣೆಗಳನ್ನು ನುಂಗಿ ನೊಣೆಯುವಂತೆ ಅವಳ ಗಂಡನ ಮನೆಯವರು ತಮ್ಮ ಗೋತ್ರದವಳನ್ನಾಗಿ ಮಾಡಿಕೊಳ್ಳುವ ವಿಷಾದದ ಚಿತ್ರಣವಿದೆ. ಅಂದರೆ ಪಿತೃಪ್ರಧಾನವ್ಯವಸ್ಥೆಯನ್ನು ಗುರುತಿಸಿಕೊಂಡರೂ ಅದಕ್ಕೆ ಸರಿಯಾಗಿ ಮುಖಾಮುಖಿಯಾಗಲು ಬೇಕಾಗುವ ಪೂರ್ವಸಿದ್ಧತೆ ಕಾಣುವುದಿಲ್ಲ. ಆದರೆ ಅವರ 'ಸರ್ವಮಂಗಳೆ' ಕಥೆ ಮಾತ್ರ ಸಾಧಾರಣ ಜಾಡಿನಲ್ಲೇ ನಡೆದರೂ  ಹೆಂಗಸಿನ ತಾಯ್ತನದ ಘನತೆಯನ್ನುಎತ್ತಿಹಿಡಿಯುವಲ್ಲಿ ಯಶಸ್ವಿಯಾಗಿದೆ. ಹೀಗೆ ಅನೇಕ ಸುಂದರ ಅನುಭವಗಳ ನಿರೂಪಣೆಯಲ್ಲಿ ವಿಜಯಾ ಅವರಿಗೆ ಆಸಕ್ತಿ, ಜೊತೆಗೆ ಸಣ್ಣದಾಗಿ ಶೃತಿಗೂಡುವ ವಿಷಾದವನ್ನು ಅವರ ಕತೆಗಳು ಹೊಂದಿವೆ. ಇವು ಪಿಸುಮಾತಿನ ಮಟ್ಟಿಗೆ ಸಣ್ಣದಾಗಿ ಹುಟ್ಟಿ ಅಲ್ಲಿಯೇ ಅಡಗುವಂತವು. ತೃಪ್ತಿ ಕಂಡುಕೊಳ್ಳದೇ ವಿಜಯಾ ಅವರ ಕಥೆಗಳ ಒಟ್ಟಾರೆ ನಿಲುವು.

ವಸುಮತಿ ಉಡುಪ, ಪ್ರೇಮಾಭಟ್, ಮುಂತಾದವರಂತೆ ಸಣ್ಣಕತೆಗಳನ್ನುವಿಫುಲವಾಗಿ ಬರೆದಿರುವ ವಿಜಯಾ ಶ್ರೀಧರ್ ಅವರು ಪ್ರಬಂಧದ ಲಘುಧಾಟಿಯಲ್ಲಿ ಸ್ವಾರಸ್ಯಕರವಾಗಿ ಕಥೆ ಹೇಳಬಲ್ಲರು. ಆದರೆ ಕನ್ನಡ ಕಥಾಪರಂಪರೆಯಲ್ಲಿ ನಡೆದ ಪ್ರಯೋಗಗಳು, ಕಥಾತಂತ್ರದ ಬಳಕೆ ಇವುಗಳು ಅವರ ಕಥೆಗಳಲ್ಲಿ ಗೈರುಹಾಜರಾಗಿವೆ. ತಾವು ಕಂಡದ್ದನ್ನು ಮನಮುಟ್ಟುವಂತೆ ಹೇಳುವುದಕ್ಕೆ ಅವರು ತಮ್ಮ ಕತೆಗಾರಿಕೆಯನ್ನುಮಿತಿಗೊಳಿಸಿಕೊಂಡಿದ್ದಾರೆ. ಆದಕಾರಣವೇ ಅವರ ಮೂರು ದಶಕಗಳ ಕತೆಗಳು ಅಲ್ಲಿಂದ ಇಲ್ಲಿಯವರೆಗು ಒಂದೇ ಧಾಟಿಯಲ್ಲಿ ನಿರೂಪಿತವಾಗಿವೆ.

-ಆರ್ತಾರಿಣಿ ಶುಭದಾಯಿನಿ 

ಕೃಪೆ: ಹೊಸ ಮನುಷ್ಯ (ಸೆಪ್ಟೆಂಬರ್‌ 2019)

Related Books