ಒಂದು ಮಹಾಮಳೆಯ ಕಥೆ

Author : ನಾಗರಾಜ ಕೂವೆ

Pages 200

₹ 200.00
Year of Publication: 2021
Published by: ಕಾನ್ಕೇವ್ ಮೀಡಿಯಾ
Phone: 099025 90303

Synopsys

ನಾಗರಾಜ ಕೂವೆ ಅವರ ಕಥಾಸಂಕಲನ ‘ಒಂದು 'ಮಹಾಮಳೆಯ ಕಥೆ’. 2019 ರ ಆಗಸ್ಟ್ ನಲ್ಲಿ ಒಂದು ವಾರಗಳ ಕಾಲ ಪಶ್ಚಿಮ ಘಟ್ಟಗಳಲ್ಲಿ ವಿಪರೀತ ಮಳೆ ಸುರಿಯಿತು. ಆಗಸ್ಟ್ 9 ರಂದು ಅಲ್ಲಿನ ಹಲವೆಡೆ ಅವಘಡಗಳು ಜರುಗಿಬಿಟ್ಟವು. ಎಲ್ಲೆಲ್ಲೂ ಪ್ರಕೃತಿ ತನ್ನ ಏಕಪಾತ್ರಾಭಿನಯದಲ್ಲಿ ಮಾನವ ನಿರ್ಮಿತ ಸಕಲವೂ ಕ್ಷುಲ್ಲಕ ಎನ್ನುವಂತೆ ನಿರ್ನಾಮ ಮಾಡುತ್ತಾ, ಎಲ್ಲವನ್ನೂ ಕಬಳಿಸುತ್ತಾ ಮನ್ನಡೆಯಿತು. ಜಲಪ್ರಳಯ ಎಲ್ಲೆಲ್ಲೂ ನಡುಕ ಹುಟ್ಟಿಸಿತು. ಏಕಾಏಕಿ ಪ್ರಾಕೃತಿಕ ವಿಕೋಪದಿಂದ ಜನ ಬೆಚ್ಚಿಬಿದ್ದರು. ಹಳ್ಳಿ ಹಳ್ಳಿಗಳ ಬದುಕಿನ ಸಂಕೋಲೆಯೇ ಕಳಚಿತು. ಗ್ರಾಮ ಗ್ರಾಮಗಳ ವ್ಯವಸ್ಥೆಯೇ ಕುಸಿಯಿತು. ಕೂಡಿಟ್ಟ ಕನಸುಗಳೆಲ್ಲಾ ನೆರೆಯಲ್ಲಿ ಚಿಂದಿಯಾದವು. ಮೂಡಿಗೆರೆ ತಾಲೂಕಿನ ಮಲೆಮನೆ, ಮಧುಗುಂಡಿ, ಹಲಗಡಕ, ಚನ್ನಡ್ಲು, ದುರ್ಗದಹಳ್ಳಿ, ಆಲೇಖಾನ್ ಹೊರಟ್ಟಿ ಮೊದಲಾದ ಪಶ್ಚಿಮ ಘಟ್ಟದ ತಪ್ಪಲಿನ ಹಲವು ಊರುಗಳ ಸಾವಿರಾರು ಜನ ಮನೆ-ಮಠ, ತೋಟ-ಗದ್ದೆ, ಬದುಕುಗಳನ್ನೇ ಕಳೆದುಕೊಂಡು ಸಂತ್ರಸ್ಥರಾದರು. "'ಒಂದು 'ಮಹಾಮಳೆ'ಯ ಕಥೆ" ಪುಸ್ತಕ ಈ ಎಲ್ಲಾ ಅತಿವೃಷ್ಟಿ ಸಂತ್ರಸ್ಥರ ಬಗ್ಗೆ ಮಾತನಾಡುತ್ತದೆ. 2019 ರ ಆಗಸ್ಟ್ ನಿಂದ 2020 ರ ಆಗಸ್ಟ್ ನ ಆಶ್ಲೇಷಾ ಮಳೆಯವರೆಗಿನ ಕಥೆಯೊಂದು ಇಲ್ಲಿ ತೆರೆದುಕೊಳ್ಳುತ್ತಾ ಹೋಗುತ್ತದೆ.

ಜಾಗತೀಕರಣದ ನಂತರ ಮಲೆನಾಡೆಂಬ ಮಲೆನಾಡು ಹೇಗೆ ಬದಲಾಯಿತು? ಪಶ್ಚಿಮ ಘಟ್ಟದ ತಪ್ಪಲಿನ ಹಳ್ಳಿಗಳಲ್ಲಿ ಏನೆಲ್ಲಾ ಹೊಸ ಸಂಚಲನಗಳು ಹುಟ್ಟಿಕೊಂಡವು? ಅಭಿವೃದ್ಧಿಯ ಬರದಲ್ಲಿ ಪರಿಸರ, ಕೃಷಿ, ಜನಜೀವನ, ಆಹಾರ ಪದ್ಧತಿ, ಆಚರಣೆ, ಸಂಸ್ಕೃತಿ ಇತ್ಯಾದಿ ಇತ್ಯಾದಿಗಳಲ್ಲಿ ಏನೆಲ್ಲಾ ಪಲ್ಲಟಗಳಾಯಿತು? ರಾಜಕಾರಣದ ಪರಿಭಾಷೆ ಹೇಗೆಲ್ಲಾ ಬದಲಾಯಿತು? ಇಲ್ಲಿನ ಯುವ ಸಮುದಾಯದ ಇಕ್ಕಟ್ಟುಗಳೇನು? ಕಳೆದ ಎರಡ್ಮೂರು ವರ್ಷಗಳಿಂದ ಅದೇಕೆ ಘಟ್ಟದುದ್ದಕ್ಕೂ ಭೂಕುಸಿತಗಳು ಸಂಭವಿಸುತ್ತಿವೆ? ಮಹಾಮಳೆಯಿಂದ ಎಲ್ಲವನ್ನೂ ಕಳೆದುಕೊಂಡವರ ಪುನರ್ವಸತಿಯ ಕಥೆಗಳು ಇಂದಿಗೆ ಏನಾಗಿದೆ? ಪ್ರಕೃತಿಯ ಮುನಿಸಿನಿಂದ ಹಳ್ಳಿ ಹಳ್ಳಿಗಳ ನಡುವಿನ ಬದುಕಿನ ಸಂಕೋಲೆಗಳೇ ತುಂಡರಿದಾಗ ಸರ್ಕಾರಗಳು ಹೇಗೆ ಪ್ರತಿಸ್ಪಂದಿಸಿದವು? ರಾಜ್ಯಾದ್ಯಂತ ಸಹೃದಯರು ದಾನವೆಂದು ಕಳುಹಿಸಿದ್ದ ಅಗತ್ಯ ವಸ್ತುಗಳು ಸಂತ್ರಸ್ಥರನ್ನು ತಲುಪಿದವೇ? ಅರಣ್ಯ ಇಲಾಖೆ, ಕೃಷಿ ಇಲಾಖೆ, ತೋಟಗಾರಿಕಾ ಇಲಾಖೆ, ಲೋಕೋಪಯೋಗಿ ಇಲಾಖೆ ಮೊದಲಾದ ಸರ್ಕಾರದ ಹತ್ತು ಹಲವು ಇಲಾಖೆಗಳು ತಳಮಟ್ಟದಲ್ಲಿ ಹೇಗೆ ಕಾರ್ಯನಿರ್ವಹಿಸುತ್ತವೆ? ಕರೆಂಟು ನಿರ್ವಹಿಸುವ ಮೆಸ್ಕಾಂ ಅದೇಕೆ ಗಬ್ಬೆದ್ದು ಹೋಗಿದೆ? ಕಾಫಿ ಕಣಿವೆಗಳಿಗೆ ಹೊರ ರಾಜ್ಯದ ಕಾರ್ಮಿಕರೇ ಏಕೆ ಬೇಕಾಗಿದ್ದಾರೆ? ಕಾಡು, ನದಿ, ಸಸ್ಯ ಸಂಪತ್ತು, ಪ್ರಾಣಿ ವೈವಿಧ್ಯ, ಕಾಡಂಚಿನ ನಿರುಪದ್ರವಿ ಬದುಕಿನ ಒಡಲ ಸಂಕಟಗಳೇನು? ಮಲೆನಾಡಿನ ಭೂವಿವಾದದ ಕಗ್ಗಂಟುಗಳು, ಸ್ಥಳೀಯ ರಾಜಕಾರಣ, ಜಿಲ್ಲಾಡಳಿತ, ಪ್ಲಾಂಟರ್ಗಳು, ಕೂಲಿ ಕಾರ್ಮಿಕರು, ಅತೀ ಸಣ್ಣ ಹಿಡುವಳಿದಾರರು ಸೇರಿದಂತೆ ಇಡೀ ಪಶ್ಚಿಮ ಘಟ್ಟದ ತಪ್ಪಲಿನ ಸಣ್ಣದೊಂದು ಝಲಕ್ ಇಲ್ಲಿದೆ. ಇಲ್ಲಿ ಕಾದಂಬರಿಯ ಸ್ವರೂಪದಲ್ಲಿ ಎಲ್ಲವನ್ನೂ ಹೆಣೆಯಲಾಗಿದೆ.

ದಿನದಿಂದ ದಿನಕ್ಕೆ ಹಸಿರುಮನೆ ಅನಿಲಗಳು ವಾತಾವರಣಕ್ಕೆ ಬಿಡುಗಡೆಯಾಗುವುದು ಜಾಸ್ತಿಯಾಗುತ್ತಾ ಜಾಗತಿಕ ತಾಪಮಾನ ಏರಿಕೆಯು ಮತ್ತಷ್ಟು ಸಂಕಷ್ಟಗಳನ್ನು ತಂದೊಡ್ಡುತ್ತಿರುವ ಈ ದಿನಮಾನಗಳಲ್ಲಿ, ಇದರ ಮೊದಲ ಫಲಾನುಭವಿಯಾಗಿರುವ ಮಳೆಕಾಡುಗಳಲ್ಲಿ ಓಡಾಡಿ ಮಾಡಿದ ಬರಿಗಾಲ ಸಂಶೋಧನೆ (Barefoot Research)ಯ ವಾಸ್ತವ ಚಿತ್ರಣವೊಂದು ಈ ಪುಸ್ತಕದಲ್ಲಿದೆ.

About the Author

ನಾಗರಾಜ ಕೂವೆ

ನಾಗರಾಜ ಕೂವೆ, ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಕೂವೆಯವರು. ಕುವೆಂಪು ವಿಶ್ವವಿದ್ಯಾಲಯದಿಂದ ಗಣಿತಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. ಇವರ 'ಪ್ರಾರ್ಥನೆ' ಕವನಕ್ಕೆ ಕ್ರೈಸ್ಟ್ ಯೂನಿವರ್ಸಿಟಿ ಕನ್ನಡ ಸಂಘದ ಬಹುಮಾನ ಲಭಿಸಿದೆ. ಪರಿಸರ ಇವರ ಆಸಕ್ತಿಯ ವಿಷಯ. ಪಶ್ಚಿಮ ಘಟ್ಟ ಮತ್ತದರ ತಪ್ಪಲಿನ ಜನರ ಬದುಕು, ಜೀವವೈವಿಧ್ಯದ ಅಧ್ಯಯನ, ಪುಸ್ತಕಗಳ ಓದು, ಬರವಣಿಗೆ, ತಿರುಗಾಟ ಇವರ ಇತರ ಹವ್ಯಾಸಗಳು. ...

READ MORE

Related Books