‘ಕಂಗಳು ತುಂಬಿದ ಬಳಿಕ’ ಲೇಖಕ ಬಾಳಾಸಾಹೇಬ ಲೋಕಾಪುರ ಅವರ ಕತಾಸಂಕಲನ. ಲೋಕಾಪುರ ದೇಶೀಯತೆಯ ಗಾಢ ಅನುಭವಗಳನ್ನು ಅವುಗಳ ಪ್ರಾದೇಶಿಕ ನೆಲೆಯಲ್ಲಿಯ ಭಾಷೆಯ ಬಿಗಿತದಲ್ಲಿ ಹಿಡಿದು ಕಟ್ಟುವ ಕೆಲಸವನ್ನು ಇಲ್ಲಿಯ ಕಥೆಗಳಲ್ಲಿ ಸಮರ್ಥವಾಗಿ ಮಾಡಿದ್ದಾರೆ. ಗ್ರಾಮೀಣ ಮನಸ್ಸಿಗೆ ಮಾತ್ರ ಹೊಳೆಯಬಲ್ಲ ಪರಿಸರದ ಜೈವಿಕ ನೆಲೆಯ ತಿರುವುಗಳು ಕತೆಗಳ ಜೀವ ದ್ರವ್ಯಗಳಾಗಿವೆ. ಇಲ್ಲಿಯ ಕಥೆಗಳಲ್ಲಿಯ ನಗರ ಬದುಕು ಕೂಡಾ ಗ್ರಾಮ ಬದುಕಿನ ಕನವರಿಕೆಯಾಗಿಯೇ ಮೈದಾಳುತ್ತದೆ. ಮುಗ್ಧತೆ, ತಿಳಿವಳಿಕೆ ಹಾಗೂ ಪ್ರೀತಿ ಅನುಕಂಪಗಳ ಬರಹದ ಮೂಲ ದ್ರವ್ಯವಾಗಿರುವುದರಿಂದ ಇಲ್ಲಿಯ ಕಥನ ಕ್ರಮ ಸಾಂಪ್ರದಾಯಕ ಮೃದು ಶೈಲಿಗೆ ಹೊರಳಿದೆ. ಕತೆಗಳಲ್ಲಿಯ ಪಾತ್ರಗಳು ಜೀವಮುಖಿಯಾಗಿ ಓದುಗರ ಹೃದಯ ತಟ್ಟುತ್ತವೆ.
ಲೇಖಕ ಬಾಳಾಸಾಹೇಬ ಲೋಕಾಪುರ ಅವರು ನವ್ಯೊತ್ತರ ಸಾಹಿತಿಗಳು. ಬಾಗಲಕೋಟೆಯ ಸಕ್ರಿ ಕಾಲೇಜಿನಲ್ಲಿ ಭೂಗೋಳ ಶಾಸ್ತ್ರದ ಉಪನ್ಯಾಸಕರು. ಸಾಹಿತ್ಯ ಕ್ಷೇತ್ರದ ಹಲವು ಪ್ರಕಾರಗಳಲ್ಲಿ ಕೃತಿಗಳನ್ನು ರಚಿಸಿದ್ದಾರೆ. ಕವಣಿಗಲ್ಲು, ಹಾರುವ ಹಕ್ಕಿ ಮತ್ತು ಆಕಾಶ, ತನು ಕರಗದವರಲ್ಲಿ, ಮತ್ತು ಕಂಗಳು ತುಂಬಿದ ಬಳಿಕ ಎಂಬ ಕತಾಸಂಕಲನಗಳು, ಉಧೊ ಉಧೊ, ಹುತ್ತ, ಬಿಸಿಲುಪುರ, ನೀಲಗಂಗಾ ಎಂಬ ಕಾದಂಬರಿಗಳು, ಭ್ರಮರಂಗೆ ಎಂಬ ಕವನ ಸಂಕಲನ ಪ್ರಕಟಿಸಿದ್ದಾರೆ. ಬಾಳಾ ಸಾಹೇಬರ ಸಾಹಿತ್ಯ ಕೃಷಿಗಾಗಿ ಕನ್ನಡ ಸಾಹಿತ್ಯ ಅಕಾಡಮಿ ಪ್ರಶಸ್ತಿ, ಚದುರಂಗ ಪ್ರಶಸ್ತಿ, 2019ನೇ ಸಾಲಿನ ವರ್ಧಮಾನ ಸಾಹಿತ್ಯ ಪ್ರಶಸ್ತಿ ಸೇರಿದಂತೆ ಹಲವು ಗೌರವ ಪ್ರಶಸ್ತಿಗಳು ಸಂದಿವೆ. ...
READ MORE