ಸಾಮಾಜಿಕ, ರಾಜಕೀಯ, ಗ್ರಾಮೀಣ ಬದುಕು, ತಾರುಣ್ಯ, ಸಾಮಾಜಿಕ ನಿಬಂರ್ಧ, ದೇವರು ಇವೇ ಕಥನ ವಸ್ತುಗಳಾಗಿ ಮೂಡಿ ಬಂದಿರುವ ಕತೆಗಳ ಗುಚ್ಛವೇ ತನುಬಿಂದಿಗೆ. ಕೃತಿಯ ತನುಬಿಂದಿಗೆ ಶೀರ್ಷಿಕೆಯು ದೈವಾರಾಧನೆಯ ಭಾಗವಾಗಿ ಬಂದಿರುವ ಒಂದು ಪದ್ಧತಿಯ ಹೆಸರಾಗಿದೆ. ಸಂಶೋಧನಾ ವಿದ್ಯಾರ್ಥಿಯಾಗಿರುವ ನಾಗರಾಜ ಕೋರಿ ಅವರು ತಮಗನ್ನಿಸಿದ್ದನ್ನು ಸಮಾಜದಲ್ಲಿ ನಡೆಯುತ್ತಿರುವುದನ್ನು ಸರಳವಾಗಿ ಕಟ್ಟಿಕೊಟ್ಟಿದ್ದಾರೆ.
ದೇಶದ ಯಾವುದೇ ಭಾಗದಲ್ಲಿ ಎದುರಾಗಬಹುದಾದ ಪಾತ್ರಗಳು ಮತ್ತು ಅವರ ವರ್ತಮಾನದ ಇತಿಹಾಸ ಈ ಕಥೆಗಳಿಗೆ ಚೆಲುವನ್ನು ತಂದಿವೆ. ದಟ್ಟ ವಿವರಗಳು ಕಥೆಗಾರನ ಶಕ್ತಿ ಸಾಮರ್ಥ್ಯದ ಅರಿವನ್ನು ಮೂಡಿಸುವಂತಿವೆ. ಬಯಲುಸೀಮೆಯ ಕಥೆಗಾರರಿಗೆ ಅನಾಯಾಸವಾಗಿ ಒಲಿದು ಬರುವ ಅನುಭವವಂತೂ ಬುತ್ತಿಯಾಗಿದೆ ಎಂದು ಕೇಶವ ಮಳಗಿಯವರು ಹಿನ್ನುಡಿಯಲ್ಲಿ ಕಥೆಗಾರನ ಕಥನ ಶೈಲಿಯನ್ನು ಮೆಚ್ಚಿ ಬರೆದಿದ್ದಾರೆ. ’ಕಂಡ ಬದುಕನ್ನು ಅದರ ಒಡಲಿಗತ್ತಿದ ನುಡಿಯಿಂದಲೇ ಕತೆ ಮಾಡಿ ಹೇಳಿದ್ದಾನೆ. ಮಳೆಬಿದ್ದ ತಿಂಗಳಲ್ಲಿ ಅಲ್ಲಲ್ಲಿ ನೆಲದ ಮೇಲೆ ಚಿಗುರುವ ಗಿಡ. ಬಳ್ಳಿಗಳಿಗೆ ಹೂ ಮೂಡುತ್ತವೆ. ಅವು ಭೂಮಿಗಿಂತ ಚೆಂದ. ಗಮನಿಸಿದರೆ, ಅವುಗಳಿಗೆ ಗೊತ್ತಾದರೆ ಮುದ ನೀಡುವಷ್ಟು ಸುಂದರವಾಗಿ ಮುಖ ತೋರಿಸುತ್ತವೆ, ಹೀಗಿವೆ ನಾಗರಾಜ ಕೋರಿಯ ಕತೆಗಳು’ ಎನ್ನುತ್ತಾರೆ ಅಮರೇಶ ನುಗಡೋಣಿ ಅವರು. ಇಂದಿನ ಪ್ರಸ್ತುತ ಸಮಾಜದ ಓರೆಕೋರೆಗಳ ಬಗ್ಗೆ ಎಚ್ಚರಿಸಬಲ್ಲಂತಹ ಕತೆಗಳು ಈ ಕೃತಿಯಲ್ಲಿವೆ.