ಕಿಡಿ

Author : ಎಂ. ಜವರಾಜ್



Year of Publication: 2013

Synopsys

ಎಂ.ಜವರಾಜ್ ಅವರ ಕಾದಂಬರಿ ‘ಕಿಡಿ’. ಈ ಕಾದಂಬರಿಗೆ ಚಿಂತಕ ಜಿ.ರಾಜಶೇಖರ ಅವರು ಮುನ್ನುಡಿ ಬರೆದಿದ್ದಾರೆ.ಅವರ ಮಾತಿನಂತೆ ’'ಏನೂ ಕಾಣದ ಕಗ್ಗತ್ತಲ ರಾತ್ರಿ...' ಎಂದು ಪ್ರಾರಂಭವಾಗುವ ಜವರಾಜ್ ಅವರ ಚೊಚ್ಚಲ ಕಾದಂಬರಿ 'ಕಿಡಿ' ಶಿವರಾಮ ಕಾರಂತರ ' ಚೋಮನ ದುಡಿ' ಯ ಮೊದಲ ವಾಕ್ಯವನ್ನು ನೆನಪಿಸುತ್ತದೆ. ಆ ಹೋಲಿಕೆ ಕೇವಲ ಆಕಸ್ಮಿಕವಿರಬಹುದು. ಆದರೆ ಅದು ಹಾಗಲ್ಲ ‌ಎಂದು ವಾದ ಹಾಕುವುದಕ್ಕು ಅವಕಾಶವಿದೆ.‌ಅಂತರಂಗದ ಕತ್ತಲು, ಹೊರಗಿನ ಸಂಬಂಧಗಳನ್ನೂ ಆವರಿಸಿಕೊಂಡಿರುವುದು, ಎರಡೂ ಕಾದಂಬರಿಗಳಲ್ಲಿ ಒಂದು ಸಮಾನ ಎಳೆಯಾಗಿದೆ. 'ಚೋಮನ ದುಡಿ'ಯಲ್ಲಿ ಒಂದು ದಲಿತ ಕುಟುಂಬದ ಕತೆಯಿದ್ದರೆ 'ಕಿಡಿ' ಯಲ್ಲಿ ತಾವು ಸಮಾಜದ ಮುಖ್ಯಧಾರೆ ಎಂದು ಭ್ರಮಿಸುವವರ ಕಣ್ಣಿನಲ್ಲಿ ಸಮಾಜದ ಅಂಚಿನಲ್ಲಿರುವ ಹಲವು ಸಮುದಾಯಗಳ ಹತ್ತಾರು ಕುಟುಂಬಗಳ ಕತೆಗಳು ಪರಸ್ಪರ ಹೆಣೆದುಕೊಂಡಿವೆ. 'ಚೋಮನ ದುಡಿ' ಚೋಮನ ಕುಟುಂಬ , ಆ ಹಳ್ಳಿಯ ಒಂದು ಭೂಮಾಲೀಕ ಬ್ರಾಹ್ಮಣ ಕುಟುಂಬ ಮತ್ತು ವಸಾಹತುಶಾಹಿಯೊಡನೆ ನಾಡಿಗೆ ಪ್ರವೇಶಿಸುವ ಕಾಫಿ ತೋಟದ ಕಿರಿಸ್ತಾನ ದೊರೆಗಳ ಯಜಮಾನಿಕೆಯ ಜೊತೆ ಹೊಂದಿದ್ದ ವಿಷಮ ಸಂಬಂಧವನ್ನು ನಿರೂಪಿಸಿದರೆ ' ಕಿಡಿ' ಯಲ್ಲಿ‌ ಬ್ರಾಹ್ಮಣರು ಇಲ್ಲವೇ ಇಲ್ಲ. ಕಾದಂಬರಿಯ ಕಥಾನಕ ನಡೆಯುವ ಹಳ್ಳಿಯಲ್ಲಿ ಹಲವು ಕೆಳ ರೈತಾಪಿ ಮತ್ತು ಕಸುಬುಗಾರ ಜಾತಿಗಳ ನಡುವೆಯೇ ಯಜಮಾನಿಕೆ ಮತ್ತು ಶೋಷಣೆಯ ಅಧಿಕಾರ ವ್ಯವಸ್ಥೆಯೊಂದು ರೂಪುಗೊಂಡಿದೆ. ಏಣಿಯ ಪ್ರತಿಯೊಂದು ಮೆಟ್ಟಿಲಿನಲ್ಲಿ ಇರುವವರು, ತಮಗಿಂತ ಕೆಳಗಿನ ಮೆಟ್ಟಿಲಿನಲ್ಲಿ ಇರುವವರನ್ನು ಕೀಳಾಗಿ ಕಾಣುವ ಈ ಸಾಮಾಜಿಕ ಶ್ರೇಣೀಕೃತ ವ್ಯವಸ್ಥೆ ಹಳ್ಳಿಯ ಆರ್ಥಿಕತೆಯೊಡನೆ ಅವಿನಾಸಂಬಂಧವನ್ನು ಹೊಂದಿದೆ. ಪ್ರಸ್ತುತ ಕಾದಂಬರಿ, ಕರ್ನಾಟಕದ ಹಳೆಯ ಮೈಸೂರು ಪ್ರಾಂತ್ಯದ ಟಿ.ನರಸೀಪುರದ ಶದುಪಾಸಿನ ಹಳ್ಳಿಯೊಂದರ ಸಂಕೀರ್ಣ ಸಾಮಸಜಿಕ ವ್ಯವಸ್ಥೆಯನ್ನು ಚಿತ್ರಿಸುತ್ತದೆ. ಆದರೆ ಈ ಚಿತ್ರಣ‌ ಕಾದಂಬರಿಯಲ್ಲಿ ವಾಚ್ಯವಾಗಿ ಬರದೆ ಕಥಾನಕದ ವಿವರಗಳು, ಘಟನೆಗಳು, ಪಾತ್ರಗಳ ಮಾತಿನ ರೀತಿ, ಅವುಗಳ ನಡುವಿನ ಸ್ನೇಹ, ಜಗಳ, ಪ್ರೇಮಕಾಮ ಮತ್ತು ಇತರೆ ಲೌಕಿಕ ವ್ಯವಹಾರದ ನೂರಾರು ಹೆಣಿಗೆಗಳ ದಟ್ಟವಾದ ನಿರೂಪಣೆಯಲ್ಲಿ ಮೂಡಿ ಬಂದಿದೆ’ ಎಂದಿದ್ದಾರೆ..

About the Author

ಎಂ. ಜವರಾಜ್

ಲೇಖಕ ಎಂ. ಜವರಾಜ್ ಅವರು ಮೂಲತಃ ಟಿ.ನರಸೀಪುರದವರು.  ತಂದೆ ಮಾದಯ್ಯ ತಾಯಿ ತಾಯಮ್ಮ. ಪ್ರಾಥಮಿಕ ಹಂತದಿಂದ ಹಿಡಿದು ಪದವಿ ಹಂತದವರೆಗೂ ಶಿಕ್ಷಣ ಪೂರೈಸಿದ್ದು ಹುಟ್ಟೂರಿನಲ್ಲೇ. ಮೈಸೂರಿನ ಮುಕ್ತ ವಿವಿ ಯಿಂದ ಇತಿಹಾಸದಲ್ಲಿ ಎಂ.ಎ.ಪದವೀಧರರು. ಪ್ರಸ್ತುತ ಮೈಸೂರಿನ ಖಾಸಗಿ  ಕಂಪನಿಯೊಂದರಲ್ಲಿ ಸಮಾರು 15 ವರ್ಷದಿಂದ ಕೆಲಸ ನಿರ್ವಹಿಸುತ್ತಿದ್ದಾರೆ. ಕೃತಿಗಳು: ನವೂಲೂರಮ್ಮನ ಕಥೆ (ಕತಾ ಸಂಕಲನ), ಕಿಡಿ (ಕಾದಂಬರಿ) ...

READ MORE

Related Books