ಕಣ್ಮಣಿ

Author : ಪ್ರಭಾಕರ್‌ ನೀರ್‌ಮಾರ್ಗ

Pages 154

₹ 158.00
Year of Publication: 2021
Published by: ಮಲೆನಾಡು ಪ್ರಕಾಶನ

Synopsys

ಲೇಖಕ ಡಾ. ಪ್ರಭಾಕರ್‌ ನೀರ್‌ಮಾರ್ಗ ಅವರ ಕಾದಂಬರಿ ಕೃತಿ ʻಕಣ್ಮಣಿʼ. ಪುಸ್ತಕದ ಕುರಿತು ಸ್ವತಃ ಲೇಖಕರೇ ಹೇಳುವಂತೆ, “ಕರಾವಳಿಯ ಜನಜೀವನ, ಬದುಕು, ಕಥೆ, ವ್ಯಥೆಗಳು ಇಲ್ಲಿನ ಜನಪದೀಯ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಕಲಾ ಮಾದ್ಯಮಗಳಾಗಿವೆ. ನಮ್ಮ ತುಳುನಾಡಿನಲ್ಲಿನ ಸಾಂಸ್ಕೃತಿಕ ಹಾಗೂ ಜನಪದೀಯ ಶ್ರೀಮಂತಿಕೆಯನ್ನು ನೆನಪಿಸಿಕೊಳ್ಳುವುದರೊಂದಿಗೆ ಸಮಾಜದಲ್ಲಿ ಸಮನ್ವಯದ ಹಾದಿಯನ್ನು ಕಂಡುಕೊಳ್ಳುವುದಾಗಿದೆ. ಹಳ್ಳಿಗಳ ಸೊಗಡು ಮತ್ತುಆಧುನಿಕ ಬದುಕಿನ ಅಸಮಾನತೆಯ ಬಗೆಗಿನ ನೋವನ್ನು ಬಿಂಬಿಸುವುದು ನನ್ನ ಪರಮ ಕರ್ತವ್ಯವೆಂದು ಬಗೆದವನು ನಾನು. ಪರಾಂಪರಾನುಗತವಾಗಿ ಉಳಿಸಿ ಬೆಳೆಸಿಕೊಂಡು ಬರುವ ನಮ್ಮ ಸಾಂಸ್ಕೃತಿಕ ಮೌಲ್ಯಗಳು, ಸಾಮಾಜಿಕ ಬದ್ಯತೆಗಳು ಅದಕ್ಕೆ ಎದುರಾಗಿ ಕಾಡುವ ಆಧುನಿಕ ಜೀವನ ಮತ್ತು ಧೋರಣೆಗಳನ್ನು ಒಂದು ರೀತಿಯ ಸಂಘರ್ಷವೆಂದು ಬಗೆದವನು. ಸಮಾಜದ ಸ್ವಾಸ್ಥತೆ ಒಳ್ಳೆಯದಾಗಿರಬೇಕಾದರೆ ಎಲ್ಲಾ ರೀತಿಗಳಲ್ಲೂ ಸಮಾನತೆ ಹಾಗೂ ಸಮನ್ವಯತೆ ಇರಬೇಕೆಂಬ ತುಂಬು ಹಂಬಲ ನನ್ನದು. ಕಳೆದು ಹೋಗುತ್ತದೆ ಎಂಬ ನೋವಿನ ನಡುವೆ ತುಳುವ ಸಂಸ್ಕೃತಿಯ ಸಾಮಾಜಿಕ ಸಿರಿವಂತಿಕೆಯನ್ನು ಬಿಂಬಿಸುವ ಪ್ರಯತ್ನ ಮಾಡಲಾಗಿದೆ. ಕರಾವಳಿಯ ಜನತೆಯ ವಿವಿಧ ಬದುಕಿನ ಸ್ತರವನ್ನು ಮನದಾಳದಲ್ಲಿ ಅನುಭವಿಸುವ ಭಾವಪ್ರಪಂಚದಲ್ಲಿ ಈ ಕೃತಿಯಲ್ಲಿ ಹೆಣೆದಿದ್ದೇನೆ. ಇಂದಿನ ಕಾಲದ ಜಾಗತೀಕರಣ, ಖಾಸಗೀಕರಣ, ಉದಾರೀಕರಣಗಳ ಬಿಗಿ ಹಿಡಿತದಲ್ಲಿ ನಮ್ಮ ಸಾಮಾಜಿಕ ಶ್ರದ್ದೆ, ನಂಬಿಕೆಗಳು, ಮೌಲ್ಯಗಳು ಹೇಗೆ ಅಪಮೌಲ್ಯವಾಗುತ್ತಿರುವ ಸಂದರ್ಭದಲ್ಲಿ ತುಳುನಾಡಿನ ಪಾರಂಪರಿಕ ಜನಜೀವನ, ವ್ಯವಸಾಯ ಮುಂತಾದವುಗಳನ್ನು ಓದುಗರ ಮುಂದೆ ತೆರೆದಿಡಲು ಹೆಮ್ಮೆಯಾಗುತ್ತದೆ. ತುಳುನಾಡಿನ ಯಕ್ಷಗಾನ, ತಾಳಮದ್ದಲೆ, ಹರಿಕಥೆ, ಕೋಲ, ನೇಮ, ನಾಗಾರಾಧನೆ ಇತ್ಯಾದಿ ನಮ್ಮ ಬದುಕಿನಲ್ಲಿ ಹೇಗೆ ಆವರಿಸಿವೆ ಹಾಗೂ ಕರಾವಳಿಯ ಮಣ್ಣಿನ ಸಾಮಾಜಿಕ ಮತ್ತು ಸಾಂಸ್ಕೃತಿಕ ಪಲ್ಲಟಗಳ ಕಡೆಗೆ ಬೆಳಕು ಚೆಲ್ಲುವ ಪ್ರಯತ್ನವನ್ನು ಈ ಕೃತಿಯಲ್ಲಿ ವಿವರಿಸುವ ಕಿರು ಪ್ರಯತ್ನ ಮಾಡಲಾಗಿದೆ. ಹಳ್ಳಿಗಳಲ್ಲಿ ಇನ್ನೂ ಜೀವಂತವಾಗಿರುವ ಕುಂಟುಂಬ ಜೀವನ, ಅವರ ಅನುಕೂಲಗಳು ಹಾಗೂ ಕಾಲ ಕಳೆದಂತೆಲ್ಲಾ ಅದು ಎದುರುಗೊಳ್ಳುತ್ತಿರುವ ಸವಾಲುಗಳ ಕುರಿತಂತೆ ಈ ಕೃತಿ ಒಂದಿಷ್ಟು ಒಳನೋಟ ಬೀರುತ್ತದೆ. ಮನುಷ್ಯನ ಬದುಕಿನ ದಿನನಿತ್ಯದ ತಲ್ಲಣಗಳು, ಜಾತೀಯತೆ, ತುಂಡು ರಾಜಕಾರಣ ಇವುಗಳ ಪೊಳ್ಳುತನವನ್ನು ಎಳೆ ಎಳೆಯಾಗಿ ಬಿಡಿಸುವ ಗಂಭೀರ ಪ್ರಯತ್ನ ಮಾಡಿದ್ದೇನೆ. ತುಳು ಸಾಂಸ್ಕೃತಿಕ ಜಗತ್ತಿನ ಚಿತ್ರಣ, ಮನುಷ್ಯನ ತೊಳಲಾಟ, ಪರಿಸರದ ಜತೆಗೆ ಆಧುನಿಕ ಮನುಷ್ಯನ ಮುಖಾಮುಖಿಯನ್ನು ಸಂಘರ್ಷಯುತವಾಗಿ ಚಿತ್ರಿಸಲು ಪ್ರಯತ್ನಿಸಲಾಗಿದೆ”.

About the Author

ಪ್ರಭಾಕರ್‌ ನೀರ್‌ಮಾರ್ಗ

ಕರಾವಳಿಯ ಸೃಜನಶೀಲ ಬರಹಗಾರ ಡಾ. ಪ್ರಭಾಕರ್‌ ನೀರ್‌ಮಾರ್ಗ ಅವರು ಕನ್ನಡದ ಕಾದಂಬರಿಕಾರ. ಜೊತೆಗೆ, ನೂರಾರು ಕತೆ, ಕವನ, ನಾಟಕಗಳನ್ನೂ ಬರೆದಿದ್ದಾರೆ. ಇವರು ತುಳು ಜಾನಪದ ಲೋಕವನ್ನು ತಮ್ಮ ಕೃತಿಗಳ ಮೂಲಕ ಕನ್ನಡ ಸಾರಸ್ವತ ಲೋಕಕ್ಕೆ ಅನಾವರಣ ಮಾಡಿದವರು. ಹಾಗಾಗಿ ತುಳುನಾಡಿನ, ಸಾಂಸ್ಕೃತಿಕ, ಸಾಮಾಜಿಕ, ಧಾರ್ಮಿಕ, ಆರಾಧನಾ ಆಯಾಮಗಳು ಇವರ ಬರವಣಿಗೆಗಳಲ್ಲಿ ಕಾಣಸಿಗುತ್ತವೆ. ಇವರು ಕನ್ನಡ ಸಾಹಿತ್ಯ ಲೋಕಕ್ಕೆ 27 ಕೃತಿಗಳನ್ನು ನೀಡಿದ್ದಾರೆ. ವೃತ್ತಿಯಲ್ಲಿ ಶಿಕ್ಷಕರಾಗಿ, ಮಂಗಳೂರು ವಿಶ್ವವಿದ್ಯಾಲಯದ ಉಪಕುಲಸಚಿವರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ, ಮಂಗಳೂರಿನ ಮ್ಯಾಪ್ಸ್ ಕಾಲೇಜಿನ ಪ್ರಾಂಶುಪಾಲರಾಗಿದ್ದಾರೆ. ಕೃತಿಗಳು: ಧರ್ಮಚಾವಡಿ, ಕಾಲಚಕ್ರ, ಕಣ್ಮಣಿ, ದಾಯಿತ್ವ, ಕಾರ್ಣಿಕ, ಮದಿಪು, ವೇಷ, ...

READ MORE

Related Books