ಲೇಖಕ, ಕತೆಗಾರ ಕೆ. ಸತ್ಯನಾರಾಯಣ ಅವರ ಕಿರು ಕತೆಗಳ ಸಂಗ್ರಹ ’ ಚಿತ್ರಗುಪ್ತನ ಕತೆಗಳು’. ಇವರ ಹೊಸ ಕತೆಗಳ ಸಂಕಲನದಲ್ಲಿ ಒಟ್ಟು ಮೂವತ್ತು ಕತೆಗಳಿವೆ. ಭಾಷೆಯನ್ನು ಹಲವು ಸ್ತರಗಳಲ್ಲಿ ವಿಭಿನ್ನ ಅರ್ಥ ಪಡೆದುಕೊಳ್ಳುವಲ್ಲಿ ಇಲ್ಲಿನ ಕತೆಗಳು ತೆರೆದುಕೊಳ್ಳುತ್ತದೆ. ಇಲ್ಲಿ ಅರ್ಥಕ್ಕಿಂತ, ಕತೆಗಿಂತ, ಕಾರ್ಯಕಾರಣ ತರ್ಕಕ್ಕಿಂತ ಭಾವವೇ ಹೆಚ್ಚು ಮುಖ್ಯವಾಗುತ್ತದೆ, ಆ ಭಾವ ಓದುಗನಲ್ಲಿ ಹುಟ್ಟಿಸುವ ಸಂವೇದನೆಗಳು ಬಹಳ ಮುಖ್ಯವಾಗುತ್ತವೆ, ಒಟ್ಟು ಸಂವಹನ ಈ ಲಯದಲ್ಲಿ ಸಫಲಗೊಳ್ಳುವುದೇ ಕಥನ ಶೈಲಿಯ ವಿಶೇಷವಾಗಿ ಹೆಚ್ಚಿನ ಕತೆಗಳು ಹೊಸತನವನ್ನು ಪಡೆದುಕೊಳ್ಳುತ್ತವೆ.
ವಿಭಿನ್ನ ಕತೆಗಳಿಗೆ ತೆರೆದುಕೊಂಡ ಲೇಖಕರ ಪ್ರಯೋಗಶೀಲ ಸಾಹಸ ಮತ್ತು ಅದರ ಸಾಫಲ್ಯದ ಬಗ್ಗೆ ಮೆಚ್ಚುಗೆಯನ್ನು ಮೂಡಿಸುವ, ತೆಗೆದುಕೊಂಡ ಅವರ ದಿಟ್ಟತನದ ಬಗ್ಗೆ ಅಭಿಮಾನ ಹುಟ್ಟಿಸುವ ಅನೇಕ ಸಂಗತಿಗಳ ಕಥಾ ವಸ್ತುಗಳು ಇಲ್ಲಿನ ಕತೆಗಳು ಪಡೆದುಕೊಂಡಿವೆ.
ಇವರ ಕೃತಿಗೆ ಲೇಖಕ, ಚಿಂತಕ ಕೆ ಪಿ ಸುರೇಶ್ ಅವರು ಬಹಳ ಆಳವಾದ ಗ್ರಹಿಕೆಯಿಂದ ಕೂಡಿದ, ವಿಶಿಷ್ಟ ವಿಶ್ಲೇಷಣೆಯ ಮುನ್ನುಡಿಯನ್ನು ಬರೆದಿದ್ದಾರೆ. ಈ ಕೃತಿಯ ಬಗ್ಗೆ ಹೇಳುತ್ತಾ ”ಸತ್ಯನಾರಾಯಣ ಅವರ ಕಿರುಕಥೆಗಳು,ಲೇಖಕನೊಬ್ಬ ತನ್ನ ಹೆಗಲೇರಿರುವ ಕಥನ ಶೈಲಿ ಮತ್ತು ಕಾಣುವ ಬಗೆಯನ್ನು ಕೊಡವಿ ಹೊಸ ರೀತಿಯಲ್ಲಿ ನೋಡುವ/ಕಾಣುವ ಬಗೆಯನ್ನು ಅನ್ವೇಷಿಸುವ ಧೀರ ಪ್ರಯತ್ನ ಕನ್ನಡಕ್ಕೂ ಇದು ಹೊಸ ರೀತಿಯ ಸುಳುಹು. ಈ ಮಾತುಗಳು ವರಸೆಯ ಮಾತುಗಳಂತೆ ಕೇಳಬಾರದು. ಸತ್ಯನಾರಾಯಣ ತಮ್ಮ ಕಥೆಗಳಲ್ಲಿ ಮಾಸ್ತಿಯವರ ಒಂದು ಮಟ್ಟಿನಲ್ಲಿ ಕಥೆ ಕಟ್ಟುತ್ತಾ ಹೋಗುತ್ತಾರೆ. ಮಾಸ್ತಿಯವರ ವಿವರಗಳ ಹೃಸ್ವತನ ಸತ್ಯನಾರಾಯಣ ಅವರಲ್ಲಿಲ್ಲ, ಅವರ ಕಥೆಗಳಿಗೆ ನಿರೂಪಣೆಯ ವಿಸ್ತಾರವಿದೆ. ಆದರೆ ಅದು ವಿವರಗಳ ದುಂದುವಲ್ಲ ಪಾರಂಪರಿಕವಾಗಿ ನಮ್ಮಲ್ಲಿ ನೆಂಟರಿಷ್ಟರು ಲೋಕಾಭಿರಾಮದಲ್ಲಿ ಬಿಚ್ಚಿಡುತ್ತ ಹೋಗುವ ತಂತ್ರ ಇದು” ಎನ್ನುವ ಮುಕ್ತ ಅನಿಸಿಕೆಗಳನ್ನು ಮುನ್ನುಡಿಯಲ್ಲಿ ವ್ಯಕ್ತಪಡಿಸಿದ್ದಾರೆ.
©2021 Bookbrahma.com, All Rights Reserved