ಅಜ್ಜ ನೆಟ್ಟ ಹಲಸಿನ ಮರ

Author : ಸತೀಶ್ ಶೆಟ್ಟಿ ವಕ್ವಾಡಿ

Pages 112

₹ 120.00




Year of Publication: 2021
Published by: ಪಂಚಮಿ ಮೀಡಿಯಾ ಪಬ್ಲಿಕೇಷನ್ಸ್
Address: #99, ಶ್ರೀರಕ್ಷಾ, ಕೆಇಬಿ ಎದುರು, ಇಟ್ಟಮಡು ಮುಖ್ಯ ರಸ್ತೆ, ಬನಶಂಕರಿ ಮೂರನೇ ಹಂತ, ಬೆಂಗಳೂರು-560 085

Synopsys

ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಅವರ ಕಥಾ ಸಂಕಲನ-ಅಜ್ಜ ತಮ್ಮ ಪ್ರಸ್ತಾವನೆಯ ಮಾತುಗಳಲ್ಲಿ ಲೇಖಕರು ‘ಬರವಣಿಗೆ ಅದ್ಯಾಕೆ ನನ್ನನ್ನು ಕಾಡಿತ್ತು ಅನ್ನೋ ಪ್ರಶ್ನೆಗೆ ಉತ್ತರ ಇಲ್ಲವಾದರೂ , ಕಾಡಿದ ಬರವಣಿಗೆ ನನ್ನನ್ನು ಹೇಗೆ ದುಡಿಸಿಕೊಂಡಿತು ಅನ್ನೋದು ನನಗೆ ಸದಾ ಖುಷಿ ಕೊಡೊ ವಿಷಯ . ಕಾಲೇಜು ದಿನಗಳಲ್ಲಿ ಸೀರಿಯಸ್ ಆಗಿ ಬರೆಯಲು ಆರಂಭಿಸಿದ ನನ್ನನು ಮುಂದೆ ವೈಯಕ್ತಿಕ ಮತ್ತು ವೃತ್ತಿಪರ ಬದುಕಿನ ಜಂಜಾಟಗಳು ಸುಮಾರು ಒಂದುವರೆ ದಶಕಗಳ ಕಾಲ ಬರವಣಿಗೆಯಿಂದ ದೂರ ಮಾಡಿದ್ದರೂ, ಕಳೆದ ನಾಲ್ಕು ವರುಷಗಳಿಂದ ಆ ಎಲ್ಲ ಜಂಜಾಟಗಳ ನಡುವೆಯೂ ಮತ್ತೆ ಬರಹ ಕೈ ಹಿಡಿದಿತ್ತು . ಅದರ ಫಲವೇ ಅಜ್ಜ ನೆಟ್ಟ ಹಲಸಿನ ಮರ ’ ಎಂದು ಹೇಳಿದ್ದಾರೆ.

ಅಜ್ಜ ನೆಟ್ಟ ಹಲಸಿನ ಮರ. ಕೃತಿಗೆ ಬೆನ್ನುಡಿ ಬರೆದ ಕವಯತ್ರಿ ಡಾ. ಕವಿತಾ ರೈ ‘ಕಥೆಗಳು ಕಥೆಗಾರರನ್ನು ಹುಟ್ಟಿಸುತ್ತವೆ ಎಂಬ ಮಾತು ನೆನಪಾಗುವುದು ಇಲ್ಲಿಯ 10 ಕಥೆಗಳನ್ನು ಓದಿದ ಮೇಲೆ. ಕಥೆಗಳ ರಚನೆ ಮತ್ತು ಪ್ರಾದೇಶಿಕ ನಿರೂಪಣೆ ಆಂತರಿಕ ಸಾಂಗತ್ಯ ಪ್ರತಿ ಕಥೆಗಳನ್ನು ಓದುವಾಗ ಅನುಭವಕ್ಕೆ ಬರುವ ಅಂಶಗಳಾಗಿವೆ. ಪ್ರತಿ ಕಥೆಯು ತನ್ನ ವಸ್ತು ನಿಷ್ಠ ನೆಲೆಯಿಂದ ಮುಖ್ಯವಾಗುತ್ತದೆ. ಪ್ರಕೃತಿ ಮತ್ತು ವ್ಯಕ್ತಿಗಳ ಸಂಬಂಧ, ನಗರ-ಹಳ್ಳಿಗಳ ಸ್ವರೂಪ, ಗಂಡು-ಹೆಣ್ಣಿನ ಸಂಬಂಧಗಳ ಪರಿಭಾವನೆಗಳನ್ನು ಇಲ್ಲಿಯ ಕಥೆಗಳು ವಿಭಿನ್ನವಾದ ಆಯಾಮಗಳಿಂದ ಕಟ್ಟಿಕೊಡುತ್ತವೆ. ಬರೆಯುವ ಭಾಷೆಗೆ ಕುಂದಾಪುರದ ಆಡುಮಾತಿನ ಸತ್ವವು ಬೆಸೆದು ಕಥೆಗಳ ಅನುಭವವನ್ನು  ಓದುಗರಲ್ಲಿ ಸಾಂದ್ರಗೊಳ್ಳುತ್ತವೆ’ ಎಂದು ಪ್ರಶಂಸಿಸಿದ್ದಾರೆ. 

ಸಾಹಿತಿ ಡಾ. ಎಸ್. ಎಂ. ನಟರಾಜ್ ಅವರು ಕೃತಿಯ ಕುರಿತು ಅಭಿಪ್ರಾಯ ವ್ಯಕ್ತಪಡಿಸಿ ‘ಇಲ್ಲಿಯ ಕತೆಗಳನ್ನು ಓದುತ್ತಾ ಹೋದಂತೆ ಕಥಾ ಹಂದರ, ಕತೆಯೊಳಗಿನ ಪಾತ್ರಗಳು, ಅವುಗಳ ಮಾತುಗಳು ಮತ್ತು ಸನ್ನಿವೇಶಗಳು ನಿಮ್ಮನ್ನು ಬೇರೊಂದು ಪ್ರಪಂಚಕ್ಕೆ ಕರೆದೊಯ್ಯುತ್ತವೆ.  ಈ ಕತೆಗಳು ನಮ್ಮ ಸುತ್ತ ಮುತ್ತ ಈಗಾಗಲೇ ನಡೆದಿವೆಯೋ ಅಥವಾ ನಡೆಯುತ್ತಿವೆಯೋ ಏನೋ ಅನಿಸಿಬಿಡುತ್ತದೆ. ಜೊತೆಗೆ ಕತೆಯೊಳಗಿನ ಪಾತ್ರಗಳು ನಮ್ಮ ಕಣ್ಣೆದುರಿಗೆ ನಿಂತು ತಮ್ಮ ತಮ್ಮ ಕತೆಗಳನ್ನು ನಮ್ಮ ಮುಂದೆ ಅಭಿನಯಿಸುತ್ತಿವೆಯೋ ಏನೋ ಎನ್ನುವಷ್ಟು ಗಾಢವಾಗಿ ಕತೆಗಳು ಕಾಡತೊಡಗುತ್ತವೆ. ಹೀಗೆ ಕಾಡುವ ಕತೆಗಳನ್ನು ಬರೆಯುವ ಬರಹದ ಶೈಲಿ ಎಲ್ಲರಿಗೂ ದಕ್ಕುವುದಿಲ್ಲ’ ಎಂದು ಶ್ಲಾಘಿಸಿದ್ದಾರೆ.

ಸಾಹಿತಿ ಟಿ.ಎಸ್. ಗೊರವರ ಅವರು ‘ಕಥೆಗಳ ವಸ್ತು, ವಿಷಯ, ನಿರೂಪಣಾ ಕ್ರಮ ಭಿನ್ನವಾಗಿವೆ.  ಭಾಷೆ ಎಲ್ಲೂ ತೊಡಕೆನಿಸದಂತೆ ಒಂದು ಲಯದಲ್ಲಿ ಹರಿದು ಬಂದಂತಿದೆ. ಇದು ಇಲ್ಲಿನ ಕತೆಗಳ ಹೆಚ್ಚುಗಾರಿಕೆ. ತಾವು ಕಂಡಿದ್ದು, ಕನಸಿದ್ದು, ತಲ್ಲಣಕ್ಕೆ ಕಾರಣವಾದ ಸಂಗತಿಗಳೇ ಇಲ್ಲಿ ಪಾತ್ರಗಳಾಗಿ ಮಾತಾಡಿವೆ’ ಎಂದು ಅಭಿಪ್ರಾಯಪಟ್ಟರೆ ಸಾಹಿತಿ ಶ್ರೀಧರ ಬನವಾಸಿ ಅವರು ‘ ಲೇಖಕರ ಅನುಭವಗಳು ಒಂದು ವಿಶಿಷ್ಟ ರೂಪಕಗಳಾಗಿ ಈ ಸಂಕಲನದಲ್ಲಿ ಕೇಂದ್ರಿಕೃತವಾದಂತೆ ಅನಿಸುತ್ತದೆ’ ಎಂದು ಪ್ರಶಂಸಿಸಿದ್ದಾರೆ. 
 

 

About the Author

ಸತೀಶ್ ಶೆಟ್ಟಿ ವಕ್ವಾಡಿ

ಲೇಖಕ ಸತೀಶ್ ಶೆಟ್ಟಿ ವಕ್ವಾಡಿ ಅವರು ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ವಕ್ವಾಡಿ ಗ್ರಾಮದವರು. ಸದ್ಯ ಅವರು ಬೆಂಗಳೂರಿನ ಖಾಸಗಿ ಕಂಪನಿಯೊಂದರ ಹಣಕಾಸು ವಿಭಾಗದ ಪ್ರಧಾನ ವ್ಯವಸ್ಥಾಪಕರು. ಸಾಹಿತ್ಯ ಕಥೆ , ಪ್ರಬಂಧ ಮತ್ತು ಕ್ರೀಡಾ ಬರಹದಲ್ಲಿ ಆಸಕ್ತಿ. ಮಂಗಳೂರು ಆಕಾಶವಾಣಿಯಲ್ಲಿ ಅನೇಕ ಕ್ರೀಡಾ ಕಾರ್ಯಕ್ರಮಗಳ ನಿರ್ವಹಣೆ. ಸ್ಥಳೀಯ ಪತ್ರಿಕೆಗಳಲ್ಲಿ ಕ್ರೀಡಾ ಅಂಕಣಗಳನ್ನೂ ಬರೆದಿದ್ದಾರೆ. ಇವರ ಸಣ್ಣ ಕತೆಗಳು, ಪ್ರಬಂಧಗಳು ಮಂಗಳೂರು ಆಕಾಶವಾಣಿಯಲ್ಲಿ ಪ್ರಸಾರ ಹಾಗೂ ವಿಜಯ ಕರ್ನಾಟಕ, ಪಂಜು ಆನ್ಲೈನ್ ಪತ್ರಿಕೆ, ಸಂಗಾತ ಮತ್ತು ಕುಂದಾಪುರದ ಸ್ಥಳೀಯ ಪತ್ರಿಕೆಗಳ ವಿಶೇಷಾಂಕದಲ್ಲಿ ಪ್ರಕಟವಾಗಿವೆ. ಕೆನರಾ ಟೈಮ್ಸ್ ದಿನ ಪತ್ರಿಕೆಯಲ್ಲಿ ಕೆಲ ಕಾಲ ವರದಿಗಾರರಾಗಿ,  ಕುಂದಾಪುರ ದಲ್ಲಿ (2000) `ಚಿಗುರು' ಮಾಸ ...

READ MORE

Reviews

‘ಅಜ್ಜ ನೆಟ್ಟ ಹಲಸಿನ ಮರ’ ಕೃತಿಯ ವಿಮರ್ಶೆ  

ಕಥೆಗಾರರಾದ ಸತೀಶ್ ಶೆಟ್ಟಿ ವಕ್ವಾಡಿಯವರ ಮೊದಲ ಕಥಾ ಸಂಕಲನ ಓದಿದಾಗ ಹಲುನ ರುಚಿಯನ್ನು ಪ್ರತಿ ಕಥೆಯೂ ತನ್ನ ಒಡಲೊಳಗೆ ಇಟ್ಟುಕೊಂಡಿದೆ, ಈ ಸಂಕಲನದ ಪ್ರತಿ ಕಥೆಯಲ್ಲೂ ಕರಾವಳಿ, ಕುಂದಾಪುರ ನಾಡಿನ ಜೀವನಕ್ರಮ ಅನುರಣಿತಗೊಂಡಿದೆ. ಬದುಕಿನ ಆಳದಲ್ಲಿರುವ ಜೀವಧಾತುಗಳ ಎಲ್ಲ ಮಿಸುಕಾಟಗಳು ಮುಂದಿನ ಕಥೆಗಳಲ್ಲಿ ಇವರಿಗೆ ದಕ್ಕುವುದರಲ್ಲಿ ಸಂಶಯವಿಲ್ಲ. ಪಾದೇಶಿಕಯ ಹಿನ್ನೆಲೆಯಿಂದಲೂ ಈ ಕಥಾಸಂಕಲನಕ್ಕೆ ತನ್ನದೇ ಆದ ವೈಶಿಷ್ಟ್ಯತೆ ಇದೆ, ಇಲ್ಲಿ ಬಳಸುವ ಕುಂದಾಪುರ ಕನ್ನಡ ಕಥೆಯ ಸಾಂಗತ್ಯಕ್ಕೆ ಬೆಸುಗೆಯಾಗಿದೆ, ಸತೀಶ್ ಶೆಟ್ಟಿಯವರು ಕಥೆಕಟ್ಟುವ ಎಲ್ಲಾ ಸೂಕ್ಷ್ಮತೆಗಳನ್ನು ಚೆನ್ನಾಗಿ ಗ್ರಹಿಸಿಕೊಂಡಿದ್ದಾರೆ. ಅವರ ಕಥಾಕೃಷಿಯಲ್ಲಿ ಇದು ಎದ್ದು ಕಾಣುತ್ತದೆ.

ಈ ಕಥಾಸಂಕಲನ ಒಟ್ಟು ಹತ್ತು ಕಥೆಗಳನ್ನು ಒಳಗೊಂಡಿದೆ. ಕಥಾ ನಿರೂಪಣೆ, ಶೈಲಿ ಮತ್ತು ತಂತ್ರಗಳಿಂದ ಪ್ರತಿ ಕಥೆಯಲ್ಲಿ ಒಂದು ವಿಶೇಷವಾದ ಹಲಸಿನ ಘಮಲು ಸರಿಮಳ ಸೂಸುತ್ತದೆ, ಇಡಿಯಾಗಿ ನೋಡಿದಾಗ ಎಲ್ಲಾ ಕಥೆಗಳು ಒಂದೇ ಹಲಸಿನ ಹಣ್ಣಿನಂತೆ ಕಾಣುತ್ತವೆ. ಈ ಕಥೆಗಳನ್ನು ಬಿಡಿಯಾಗಿ ಓದಿಕೊಂಡಾಗ ಹಣ್ಣಿನೊಳಗಿನ ಬಿಡಿಸಿದ ತೊಳೆಯಂತೆ ಭಾಸವಾಗುತ್ತದೆ. ಸಾವಧಾನದ, ಸಂಯಮದ ಭಾವಲಹರಿ ಪ್ರತಿ ಕಥೆಯ ಹೆಣಿಗೆಯಲ್ಲಿ ಆವರಿಸಿದೆ. ಈ ಸಂಕಲನದ ಎಲ್ಲಾ ಕಥೆಗಳು ಒಂದು ಮುಷ್ಟಿಯ ಹಿಡಿಯಂತೆ ಒಂದಕ್ಕೊಂದು ಹೊಂದಿಕೊಂಡು ಬರುತ್ತವೆ. ಇಲ್ಲಿ ಚಿತ್ರಿಸಲ್ಪಟ್ಟಿರುವ ಎಲ್ಲಾ ಪಾತ್ರಗಳು ಹಿಂದಿನ ಕಥೆಯಲ್ಲಿ ಬೆಳೆದು ಮುಂದುವರೆದಂತೆ ಭಾಸವಾಗುತ್ತವೆ.

ಲೇಖಕರ ಮೇಲೆ ತಮ್ಮ ಸುತ್ತಲಿನ ಪ್ರಕೃತಿಯ ಮತ್ತು ಪರಿಸರದ ಗಾಢ ಪ್ರಭಾವ ಬೀರಿರುವುದು ಎದ್ದು ಕಾಣುತ್ತದೆ. ಯಾಕೆಂದರೆ, ಇಲ್ಲಿಯ ಎಲ್ಲಾ ಕಥೆಗಳು ಆರಂಭವಾಗುವುದೇ ಪ್ರಕೃತಿಯ ಸುಂದರ ವರ್ಣನೆಯನ್ನು ಹೊತ್ತಿರುವ ರೂಪಕಗಳ ಮುಖಾಂತರ, ಕಥೆಯನ್ನು ಕಾವ್ಯಭಾಷೆಯಲ್ಲಿ ಕಟ್ಟುವ ಕ್ರಮ ಇವರ ಕಥೆಗಳಲ್ಲಿ ವಿಶಿಷ್ಟವಾಗಿ ಕಂಗೊಳಿಸುತ್ತದೆ. ಕಥೆಗಳಲ್ಲಿ ಬರುವ ಪಾತ್ರಗಳು ಕೂಡ ಎಲ್ಲಿಯೂ ಅವಸರಿಸದೆ ಕೇಂದ್ರ ಪಾತ್ರದ ಸುತ್ತ ಸಹಜ ಲಯದಲ್ಲಿ ದುಡಿಯುತ್ತವೆ. ಕೆಲವು ಕಥೆಗಳಲ್ಲಿ ನಿರೂಪಕ ಕಥೆಯ ಹೊರಗಿದ್ದರೆ, ಮತ್ತೆ ಕೆಲವು ಕಥೆಗಳಲ್ಲಿ 'ನಾನು' ಆಗಿ ಕಾಣಿಸಿಕೊಳ್ಳುತ್ತಾನೆ. ಕಥೆಯ ಹಂದರ ತೀರಾ ಬಿಗುವೂ ಆಗದೆ ಎಲ್ಲಿಯೂ ಸಡಿಲಗೊಳ್ಳದೆ ಒಂದು ಸಮಸ್ಥಿತಿಯನ್ನು ಕಾಯ್ದುಕೊಂಡಿದೆ.

'ಅಜ್ಜ ನೆಟ್ಟ ಹಲಸಿನ ಮರ' ಇಡೀ ಕಥೆಗಳ ಆಶಯವನ್ನು ಧ್ವನಿಸುತ್ತದೆ. ಹಲಸಿನ ಮರ ಬರೀ ಮರವಾಗದೆ, ನಮ್ಮ ಬದುಕಿನ ಅಸ್ತಿತ್ವದ ಕುರುಹಾಗಿಯೂ ಕಾಣಿಸುತ್ತದೆ. ಅಭಿವೃದ್ಧಿಯ ಪರಮೋಚ್ಛ ಸಂಕೇತವಾದ ನಗರೀಕರಣದ ಆತ್ಮವಿಲ್ಲದ ಬದುಕಿನ ಹಿನ್ನೆಲೆಯಲ್ಲಿ ತಂದೊಡ್ಡುವ ಧಾವಂತಗಳು ನಮ್ಮ ಭಾವನಾತ್ಮಕ ಮತ್ತು ಭೌತಿಕ ಅಸ್ತಿತ್ವವನ್ನು ಹೇಗೆ ನಾಶಗೊಳಿಸುತ್ತವೆ ಎಂಬುದಕ್ಕೆ ಇಡೀ ಕಥೆ ಒಂದು ರೂಪಕವಾಗುತ್ತದೆ. ಹಲಸಿನ ಮರವನ್ನು ಉಳಿಸಿಕೊಳ್ಳುವ ಪ್ರಯತ್ನದಲ್ಲಿ ನಡೆಸುವ ಹೋರಾಟ 'ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂಬ ಪರ್ಯಾಯ ಉತ್ತರದೊಂದಿಗೆ ಕೊನೆಗೊಳ್ಳುತ್ತದೆ. ಭಾವನಾತ್ಮಕತೆ ಮತ್ತು ವಾಸ್ತವಗಳು ಒಂದಕ್ಕೊಂದು ಡಿಕ್ಕಿ ಹೊಡೆದು ವಾಸ್ತವದ ಪ್ರಖರತೆಯಲ್ಲಿ ಭಾವನಾತ್ಮಕ ಸಂಬಂಧಗಳು ಸೊರಗುವ, ಇಲ್ಲವಾಗುವ ರೂಪಾಂತರಗೊಳ್ಳುವ ಪ್ರಕ್ರಿಯೆ ಇಲ್ಲಿಯ ಕತೆಗಳಲ್ಲಿ ಕಾಣುತ್ತೇವೆ.

ಮನುಷ್ಯ ಪ್ರೀತಿಯನ್ನು, ಜೀವನ ಪ್ರೀತಿಯನ್ನು ಬದುಕಿನ ಎಂಥಾ ಸಂದಿಗ್ಧತೆಯಲ್ಲಿಯೂ ಉಳಿಸಿಕೊಳ್ಳುವ ಪ್ರಯತ್ನ ಮತ್ತು ಕಾಳಜಿ ಸತೀಶ್ ಅವರ ಕಥೆಗಳಲ್ಲಿ ಎದ್ದು ಕಾಣುವ ಸ್ಥಾಯಿಭಾವ, ಬದುಕಿನ ನಿತ್ಯ ವರ್ತಮಾನವನ್ನು ಕಲಾಪ್ರಜ್ಞೆಯ ಹಿನ್ನೆಲೆಯಲ್ಲಿ ಭಾಷಿಕ ರೂಪದಲ್ಲಿ ಕಥೆಗಳು ಮೈದುಂಬಿಕೊಂಡಿವೆ. ಸಮಕಾಲೀನ ಬದುಕಿನ ಶೈಲಿ, ಪರಿಸರ, ಮನುಷ್ಯನ ಸಣ್ಣತನ, ದೊಡ್ಡತನ, ಮತ್ತು ದಡ್ಡತನಗಳು, ಮೋಸ-ವಂಚನೆ, ಜಾತಿ-ವರ್ಗ ತಾರತಮ್ಯಗಳು, ಕಲಿತವರ ಸ್ವಾರ್ಥಗಳು, ಕಲಿಯದವರ ಉದಾರತೆಗಳು, ಹಠ, ಕಾಳಜಿಗಳು ಹೀಗೆ ಎಲ್ಲವೂ ಇಲ್ಲಿಯ ಕಥೆಗಳು ಕೈ ಮೈಯಾಗಿಸಿಕೊಂಡಿವೆ. ಹುಟ್ಟು ಸಾವಿನ ಮಧ್ಯದ ಬದುಕಿನ ಪ್ರಕ್ರಿಯೆಯಲ್ಲಿ ಮನುಷ್ಯನ ಎಲ್ಲಾ ಮುಖಗಳು ಬಣ್ಣ ಹಚ್ಚಿಕೊಳ್ಳುವ ಮತ್ತು ಕಳಚುವ ಸಾಂದರ್ಭಿಕ ಸಂದಿಗ್ಧತೆಗಳು ಕಥೆಗಳಿಗೆ ವಿಶಿಷ್ಟ ತಿರುವನ್ನು ತಂದುಕೊಡುತ್ತವೆ. ಅಜ್ಜ ನೆಟ್ಟ ಹಲಸಿನಮರದ ನವೀನ, ಬಣ್ಣದ ನೆರಳಿನ ನರಸಿಂಹ, ದೇವರ ಕೆಲಸದ ರಾಮಣ್ಣಜ್ಜಯ್ಯ, ನೇಣುಗಂಬದ ಆರುಣ - ಪ್ರಗತಿ ಮತ್ತು ಅಲ್ಲಿಯ ಕನಸು, ಪುನೀತಭಾವ ಕತೆಯ ಪನೀತ, ಶಾಪದ ಪ್ರತಾಪ, ಎಲ್ಲರೂ ನೆನಪಲ್ಲಿ ಉಳಿಯುತ್ತಾರೆ.

ಮೊದಲ ಸಂಕಲನದಲ್ಲಿಯೇ ಭಾಷೆ, ವಸ್ತು, ಶೈಲಿ, ನಿರೂಪಣಾ ಕ್ರಮದಿಂದ ಮತ್ತು ಕಥೆಯನ್ನು ಧ್ಯಾನಿಸಿ ಕಟ್ಟುವ ತಮ್ಮತನವನ್ನು ಕಾಯ್ದುಕೊಂಡಿರುವ ಸತೀಶ್ ಶೆಟ್ಟಿ ವಕ್ವಾಡಿ ಅವರಿಂದ ಕನ್ನಡ ಓದುಗ ವರ್ಗ ಮುಂದಿನ ದಿನಗಳಲ್ಲಿ ಮತ್ತಷ್ಟು ಜೀವನ ಸಾಂದ್ರತೆಯುಳ್ಳ ಕಥೆಗಳನ್ನು ನಿರ್ಲಕ್ಷಿಸುವುದರಲ್ಲಿ ಎರಡು ಮಾತಿಲ್ಲ.

(ಕೃಪೆ : ಅಕ್ಷರ ಸಂಗಾತ, ಬರಹ : ಪದ್ಮಶ್ರೀ ಎಂ)

--

 

Related Books