ಬೆಳ್ಳಿಮೈ ಹುಳ

Author : ಜ.ನಾ. ತೇಜಶ್ರೀ

Pages 115

₹ 120.00




Year of Publication: 2020
Published by: ವೈಷ್ಣವಿ ಪ್ರಕಾಶನ
Address: ಕೆ. ಗುಡದಿನ್ನಿ, ಮಾನ್ವಿ ತಾಲೂಕು, ರಾಯಚೂರು ಜಿಲ್ಲೆ
Phone: 9620170027

Synopsys

‘ಬೆಳ್ಳಿಮೈ ಹುಳ’ ಲೇಖಕಿ ಜ.ನಾ. ತೇಜಶ್ರೀ ಅವರ ಕತಾಸಂಕಲನ. ಪತ್ರಕರ್ತ, ಲೇಖಕ ಚ.ಹ. ರಘುನಾಥ್ ಮುನ್ನುಡಿ ಬರೆದು ‘ತೇಜಶ್ರೀ ನನ್ನ ಓರಗೆಯ ಬರಹಗಾರ್ತಿ, ನಾನು ಮೆಚ್ಚುಗೆಯಿಂದ ಅಸೂಯೆಯಿಂದ ನೋಡುವ ಕವಯತ್ರಿ, ಈಗ ಕಥೆಗಳ ಮೂಲಕ ಓದುಗರೆದುರು ಹೊಸ ಪೋಷಾಕಿನಲ್ಲಿ ಪ್ರಕಟಗೊಳ್ಳುತ್ತಿರುವ ಅವರು, `ಬೆಳ್ಳಿಮೈ ಹುಳ' ದ ಮೂಲಕ ಹೊಸ ಪ್ರಭೆಗಾಗಿ ಹಂಬಲಿಸುತ್ತಿರುವ ಕನ್ನಡ ಕಥಾಲೋಕಕ್ಕೆ ಹೊಸ ರಂಗೊಂದನ್ನು ಕೂಡಿಸಿದ್ದಾರೆ’ ಎನ್ನುತ್ತಾರೆ ಚ.ಹ.ರಘುನಾಥ್.

ಓದುಗರಿಗಿಂತಲೂ ಬರೆಯುವವರೇ ಹೆಚ್ಚಿನ ಸಂಖ್ಯೆಯಲ್ಲಿರುವಂತೆ ಮೇಲ್ನೋಟಕ್ಕೆ ಕಾಣಿಸುವ ಕನ್ನಡ ಸಾಹಿತ್ಯ ಸಂದರ್ಭ ಸಂಖ್ಯಾದೃಷ್ಟಿಯಿಂದ ಸಮೃದ್ಧವಾಗಿದ್ದರೂ, ಆ ಉತ್ಸಾಹ ಬರವಣಿಗೆಯ ಅಸಲು ಕಸುಬುದಾರಿಕೆಯಲ್ಲಿ ಕಾಣಿಸದಿರುವುದು ಸಾಹಿತ್ಯದ ಉತ್ತಮಿಕೆಯ ಬಗ್ಗೆ ಕಾಳಜಿಯುಳ್ಳವರನ್ನು ಆತಂಕ್ಕೀಡು ಮಾಡುವಂತಹದ್ದು, ಇಂಥ ಸಂಕ್ರಮಣ ಸಂದರ್ಭದಲ್ಲಿ ಪ್ರಕಟಗೊಂಡಿರುವ ತೇಜಶ್ರೀ ಅವರ ಕಥೆಗಳ ಶಿಲ್ಪದ ಅಚ್ಚುಕಟ್ಟುತನ ಮತ್ತು ಭಾಷೆಯ ಕುಸುರಿತನ, ಸೂಕ್ಷ್ಮ ಭಾವಲೋಕದೊಂದಿಗೆ ಮಿಳಿತಗೊಂಡಿರುವುದು ನನ್ನಂಥ ಓದುಗರಲ್ಲಿ ಸಂಭ್ರಮ ಹುಟ್ಟಿಸುವಂತಹದ್ದು ಎಂದೂ ಅವರು ಪ್ರಶಂಸಿಸಿದ್ದಾರೆ. 

 

About the Author

ಜ.ನಾ. ತೇಜಶ್ರೀ

ಎಂ.ಎ. (ಇಂಗ್ಲಿಷ್) ಮತ್ತು ಭಾಷಾಂತರ ಡಿಪ್ಲೊಮಾ ಪದವೀಧರೆ ಆಗಿರುವ ತೇಜಶ್ರೀ ಅವರು ಉಪನ್ಯಾಸಕಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಒಂದು ವರ್ಷ ಇಂದಿರಾಗಾಂಧಿ ರಾಷ್ಟ್ರೀಯ ಮುಕ್ತ ವಿಶ್ವವಿದ್ಯಾಲಯದ 'ಟ್ಯಾಗೋರ್ ಪೀಠ'ದಲ್ಲಿ ಸಂಶೋಧನಾ ಸಹಾಯಕಿಯಾಗಿ ಕಾರ್ಯ ನಿರ್ವಹಿಸಿ‌ದ್ದಾರೆ. ಲಯ, ತಿಳಿಗೊಳ, ಕತ್ತಲೆಯ ಬೆಳಗು, ಅವನರಿವಲ್ಲಿ, ಉಸುಬುಂಡೆ, ಮಾಗಿಕಾಲದ ಸಾಲುಗಳು (ಕವನ ಸಂಕಲನಗಳು) ಭಾರತ ರಾಷ್ಟ್ರೀಯ ಚಳುವಳಿ, ಚೀನಿ ತತ್ವಶಾಸ್ತ್ರದ ಕತೆ, ಕಡಲ ತಡಿಯ ಗುಡಾರ, ಬೆತ್ತಲೆ ಫಕೀರ, ಇರುವೆ ಮತ್ತು ಪಾರಿವಾಳ (ಅನುವಾದಿತ ಕೃತಿಗಳು) ’ನೀನಾಸಂ'ಗಾಗಿ ವೋಲೆ ಸೋಯಿಂಕಾನ ಸಾವು ಮತ್ತು ರಾಜನ ಕುದುರೆ ಸವಾರ' ನಾಟಕದ ಅನುವಾದ. ಕವಿ ರವೀಂದ್ರ, ...

READ MORE

Reviews

ಪುಸ್ತಕ ವಿಮರ್ಶೆ: ಮುಕ್ತತೆ ಮತ್ತು ಮುಗ್ದತೆಗಳ ನಡುವೆ..

--

(ಹೊಸ ಮನುಷ್ಯ, ಮಾರ್ಚ್ 2021)

ಕವಿ-ಅನುವಾದಕಿ ಜ.ನಾ. ತೇಜಶ್ರೀ ಅವರ ಎಂಟು ಕತೆಗಳ ಹೊಸ ಸಂಕಲನ 'ಬೆಳ್ಳಿಮೈ ಹುಳ'. ಸಂಕಲನದ ಕತೆಗಳು ಗಾತ್ರದ ದೃಷ್ಟಿಯಿಂದ ಮಾತ್ರ ಭಿನ್ನವಾಗಿರದೆ ವಸ್ತು, ಕಟ್ಟುವ ಕ್ರಮ ಹಾಗೂ ಭಾಷೆಯ ಬಳಕೆಯಲ್ಲಿಯೂ ವೈವಿಧ್ಯ ಕಾಣಿಸುತ್ತದೆ. ಅತೀ ಸಣ್ಣಕತೆಯಿಂದ ನೀಳ್ಗತೆಯವರೆಗೆ ಈ ಹರಹು ಚಾಚಿಕೊಂಡಿದೆ. 'ಬಂಧನ' ಮತ್ತು 'ಬಿಡುಗಡೆ'ಗಳ ಸುತ್ತ ಇರುವ ಈ ಸಂಕಲನದ ಕತೆಗಳನ್ನು ವಿವಿಧ ರೂಪದಲ್ಲಿ ಹಿಡಿದಿಡುವ ಪ್ರಯತ್ನ ಮಾಡಲಾಗಿದೆ. ಕತೆ ಕಟ್ಟಲು ರೂಪಕಗಳ ನೆರವು ಪಡೆದಿರುವುದು ಹಾಗೂ ಮನುಷ್ಯ ಮಾತ್ರವಲ್ಲದೆ, ಪ್ರಾಣಿಗಳೂ ಪ್ರಮುಖ ಪಾತ್ರಗಳಾಗಿ ಕಾಣಿಸಿಕೊಳ್ಳುವುದು ಇಲ್ಲಿನ ಕತೆಗಳ ವಿಶೇಷ ಹಾಗೆಯೇ. ಇಲ್ಲಿನ ಕತೆಗಳಲ್ಲಿ ಬರುವ ಸ್ತ್ರೀಯರು 'ಸ್ವಂತ' ಅಸ್ತಿತ್ವ ಉಳ್ಳವರು. ತಮ್ಮಷ್ಟಕ್ಕೆ ತಾವೇ ನಿರ್ಣಯಗಳನ್ನು ತೆಗೆದುಕೊಳ್ಳಬಲ್ಲವರು. ಈ ಅನನ್ಯ ಸ್ತ್ರೀ ಪಾತ್ರಗಳ ಸೃಷ್ಟಿ ಹಾಗೂ ನಿರ್ವಹಣೆ ಗಮನ ಸೆಳೆಯದೇ ಇರದು.

ಸಂಕಲನದ ಪ್ರಮುಖ ಹಾಗೂ ಅತಿದೊಡ್ಡ ಕತೆ “ಬೆಳ್ಳಿಮೈ ಹುಳ', ವೆಂಕಟರಮಣನ ಬದುಕಲ್ಲಿ ಬರುವ ಮೂವರು ಸ್ತ್ರೀಯರು, ಜಮೀಲ ಮೊದಲ ಹೆಂಡತಿಯಾದರೆ, ಸರಸಳದು ಎರಡನೇ ಸಂಬಂಧ, ಮಗಳು ಜಾನಕಿ.

ನಾಲ್ಕು ದಶಕಗಳ ಹಿಂದೆ ಕಂಡ ಜಮೀಲಳ ಮುಖ ವೆಂಕರಮಣ ಮನಸ್ಸಿನಲ್ಲಿ ಈಗಲೂ ಅಚೊತ್ತಿದಂತೆ ಉಳಿದಿದೆ. ಜಮೀಲಳ ಬಗೆಗೆ ಒಲವು- ಮದುವೆಯ ವರೆಗೂ ವಿಸ್ತರಿಸಿತ್ತು. ಈ ಸಂಬಂಧ ಅಸ್ತಿರ, ಬ್ಯಾಡ ಕನಪ್ಪ' ಎಂಬ ದೊಡ್ಡಣ್ಣನ ಮಾತುಗಳಿಗೂ ವೆಂಕಟರಮಣ ಸೊಪ್ಪು ಹಾಕಿರಲಿಲ್ಲ. ಮದುವೆಯ ನಂತರ ನಾಲ್ಕು ವರ್ಷಗಳ ದಾಂಪತ್ಯದ ಫಲವಾಗಿ ಎರಡು ಮಕ್ಕಳು ಹುಟ್ಟಿದವು. ವೆಂಕಟರಮಣನ ಜೊತೆಗೆ ಬದುಕು ನಡೆಸಲು ಹೆಣಗಾಡುವ ಜಮೀಲ ಆಡುವ 'ಬದುಕೋಕೆ ದುಡ್ಡು ಬೇಕು ನಿನ್ನ ಆದರ್ಶ ಗೀದರ್ಶ ಎಲ್ಲ ಆಮೇಲೆ, ನಾನು ಕೇಳೋ ಪ್ರಶ್ನೆಗೆ ಉತ್ತರ ಹೇಳಲಿಕ್ಕಾಗದೆ ನೀನು ಹತಾಶ ಹೊರ ಹಾಕುತ್ತೀಯ, ತಾಕತ್ತಿಲ್ಲದ ಗಂಡಸು ನೀನು.. ಗಂಡ ಅನ್ನೋ ಅಹಂಕಾರ ನಿಂಗೆ.. ನನಗೂ ಸ್ವಾತಂತ್ರ ಇದೆ, ಅದನ್ನ ನೀಡು ಕೊಡಬೇಕಾಗಿಲ್ಲ. ನನಗೂ ನನ್ನದೇ ಬದುಕಿದೆ, ಆಸೆಗಳಿವೆ. ಇದೆಲ್ಲ ಸಾಕು ಅನ್ನಿಸಿದೆ ನಂಗೆ ನಿನ್ನ ಮಕ್ಕಳನ್ನ ನೀನೇ ಸಾಕ್ಕೋ' ಎನ್ನುವ ಮಾತುಗಳು ಕೇವಲ ಅವಳ ವ್ಯಕ್ತಿತ್ವದ ಅನಾವರಣಕ್ಕೆ ಮಾತ್ರ ಸೀಮಿತವಾಗಿಲ್ಲ . ಮನೆಯಿಂದ ಹೊರ ನಡೆದ ಜಮೀಲ ಡೈವೋರ್ಸ್ ಪೇಪರ್ ಕಳಿಸಿ 'ಬಿಡುಗಡೆ' ಪಡೆಯುತ್ತಾಳೆ.

ವೆಂಕಟರಮಣನಿಗೆ ಎರಡನೆಯ ಪತ್ನಿಯಾಗಿ ಬಂದ ಸರಸ ಸೌಮ್ಯ ಸ್ವಭಾವದವಳು. ವೆಂಕಟರಮಣನ ಶೌರ್ಯ-ಹಿಂಸೆ-ದಾಳಿಗೆ ತುತ್ತಾಗುವವಳು. ಹಾಗೆಯೇ 'ನಿನ್ನೆ ಜಾನಕಿ ಹೇಳಿದ್ದರಲ್ಲಿ ಯಾವ ತಪ್ಪ ಇಲ್ಲ. ಯಾವ ಸತ್ಯದಿಂದ ಯಾರಿಗೂ ಸುಖವಿಲ್ಲವೋ ಆ ಸತ್ಯಗಳು ಕತ್ತಲೆಯಲ್ಲಿದ್ದರೆ ಒಳ್ಳೇದು' ಎಂದು ಹೇಳುವ ಧೈರ್ಯ ಹೊಂದಿದವಳು, ಹೀಗೆ 'ಆಸಹಾಯಕ' ವೆಂಕಟರಮಣ ಜಮೀಲ-ಸರಳ ಮೇಲೆ 'ಗಂಡ'ಸುತನ ತೋರಿಸುತ್ತಾನೆ. ಮಗಳು ಜಾನಕಿಯ ಮೂಲಕ ಅನಾವರಣಗೊಳ್ಳುತ್ತ ಹೋಗುವ ಈ ಕತೆಯ ಮತ್ತೊಂದು ಪ್ರಮುಖ ಪಾತ್ರ 'ಸಿಲ್ಕಿ' ಕತೆಯುದ್ದಕ್ಕೂ ತನ್ನ ಅಸ್ತಿತ್ವ' ದಾಖಲಿಸುವ ಸಿಲ್ಕಿ ಕುರಿತ ಈ ವಾಕ್ಯಗಳು ಗಮನ ಸೆಳೆಯದೇ ಇರಲಾರವು.

'ಬಾವಿಕಟ್ಟೆಗೆ ಒರಗಿ ಸಿಲ್ಕಿ ಮಲಗಿದಲ್ಲೇ ಒರಗಿ ಪ್ರಾಣ ಬಿಟ್ಟಿತ್ತು. ಅದರ ನಿಶ್ಚಲ ಕಣ್ಣುಗಳಲ್ಲಿ ತುಂಬಿದ್ದ ಆತ್ಮಗೌರವವು ಜಾನಕಿಯನ್ನು ಇನ್ನಿಲ್ಲದಂತೆ ಕಲಕಿತು. ಸಿಲ್ಕಿಯನ್ನು ಕಳೆದುಕೊಂಡ ಸರಸ ಅಕ್ಷರಶಃ ದಂಗು ಬಡಿದು ಹೋದಳು, ಅದರ ಮುಖವನ್ನೇ ದಿಟ್ಟಿಸುತ್ತ ಕುಳಿತ ಸರಸಳಿಗೆ ಎಲ್ಲೊ ಹುಟ್ಟಿ ಇಲ್ಲಿಗೆ ಬಂದು ಸೇರಿ, ಸ್ವತಂತ್ರವಾಗಿ ತನ್ನ ಅಸ್ತಿತ್ವವನ್ನು ರೂಪಿಸಿಕೊಂಡ ಸಿಲ್ಕಿಯನ್ನು ನೆನೆದು ಗೌರವ ಉಕ್ಕಿಬಂತು. ಸ್ಫೂರ್ತಿಯ ಲವಲವಿಕೆ ಮೈಯೊಳಗೆಲ್ಲ ಹುದಾಡಿದಂತಾಗಿ ಸಿಲ್ಕಿ ತನ್ನೊಳಗೇ ಇರುವುದನ್ನು ಸರಸ ಅನುಭವಿಸಿದಳು.'

ಪುಸ್ತಕದ ಮಧ್ಯೆ ಅಪ್ಪಚ್ಚಿಯಾಗುವ ಬೆಳ್ಳಿಮೈ ಹುಳ ಮತ್ತು ಸಿಲ್ಕಿಯ ಪಾತ್ರಗಳು ಕತೆಯ ಅರ್ಥದ ಸಾಧ್ಯತೆಗಳು ವಿಸ್ತಾರವಾಗುವುದಕ್ಕೆ ಕಾರಣವಾಗುತ್ತವೆ.

ಈ ಸಂಕಲನದ ಮತ್ತೊಂದು ಪ್ರಮುಖ ಕತೆ 'ಕರ್ಫ್ಯೂ' ಆಸ್ಪತ್ರೆಯಲ್ಲಿ ನಡೆಯುವ ಕತೆಯಲ್ಲಿ ಪಾತ್ರಗಳ ನೋವು-ಅಸಹಾಯಕತೆಗಳ ಚಿತ್ರಣ ಇದೆ. ಕೋಮುಗಲಭೆಯ ಕ್ರೌರ್ಯವನ್ನು ತಣ್ಣನೆಯ ಮಾತುಗಳಲ್ಲಿ ದಾಖಲಿಸುತ್ತ ಹೋಗುತ್ತದೆ. ಈ ಕತೆಯಲ್ಲಿನ 'ಈ ರಸ್ತೆ ನಮ್ಮ ಲೈಫ್ ತರ ಅಂತ. ಜನರಲ್ ಆಗಿ ಎಲ್ಲ ಆಂದ್ಕೊಳ್ಳೋ ಹಾಗೆ ಹುಟ್ಟು ಒಂದು ಕಡೆಯಿಂದ, ಸಾವು ಇನ್ನೊಂದು ಕೊನೆಯಿಂದ ಅಲ್ಲ. ಎಲ್ಲಿ ಹುಟ್ಟಿರುತ್ತೊ ಅಲ್ಲೇ ಅದರ ಕೊನೆನೂ ಇರುತ್ತೆ ಅಂತ? ಮಧ್ಯದ ಸಣ್ಣ ಸೇಸ್ ಈ ಓಣಿ ಥರ. ಅದೇ ನಮ್ಮ ಲೈಫ್.' ಎಂಬ ವಾಕ್ಯಗಳು ಕತೆಯ ಒಟ್ಟು ಆಶಯ ಬಿಂಬಿಸುವಂತಿವೆ.

ಚಿಟ್ಟೆಗಳನ್ನು ಮುಕ್ತವಾಗಿ ಹಾರಿ ಬಿಡುವ 'ಏರೋಪ್ಲೇನ್ ಚಿಟ್ಟೆ' ಗಮನ ಸೆಳೆಯುತ್ತದೆ. ಈ ಸಂಕಲನದಲ್ಲಿ ಅತಿಸಣ್ಣಕತೆಗಳಾಗಿರುವ 'ಕಾಣುವ ಕಣ್ಯಟ್ಟಿಲ್ಲ'. ನಿರ್ಧಾರ', 'ಬೇಟೆ', ಗಿಲ್ಡ್‌ ಚೌಕ, ಕುದಿಬಂದು ಕತೆಗಳು ಕವಿತೆಗಳನ್ನು ವಿಸ್ತರಿಸಿ ಬರೆದ ಗದ್ಯದ ತುಣುಕುಗಳಂತಿವೆ. ಭಾವಗೀತೆಯ ಓದಿನ ಅನುಭವ ಒದಗಿಸುವ ಕತೆಗಳಿವು.

-ದೇವು ಪತ್ತಾರ

Related Books