ಹೊಸ ಕಥೆಗಳು

Author : ಗಾಯತ್ರಿ ರಾಜ್

Pages 104

₹ 50.00
Year of Publication: 2021
Published by: ರಾಜ್ ಪಬ್ಲಿಕೇಷನ್ಸ್
Address: #297, 10ನೇ ಮುಖ್ಯ ರಸ್ತೆ, 2ನೇ ಕ್ರಾಸ್, ಬಿಇಎಂ.ಎಲ್ ಲೇಔಟ್, 5ನೇ ಹಂತ, ಆರ್. ಆರ್ ನಗರ ಬೆಂಗಳೂರು-560098
Phone: 9900988839

Synopsys

‘ಹೊಸ ಕಥೆಗಳು’ ಕೃತಿಯು ಗಾಯತ್ರಿ ರಾಜ್ ಅವರ ಕತಾ ಸಂಕಲನವಾಗಿದೆ. ಕೃತಿಗೆ ಪ್ರಸ್ತಾವನೆ ಬರೆದಿರುವ ಲೇಖಕಿ ಗಾಯತ್ರಿರಾಜ್, `ಬದುಕೇ ಅವನ ಭಿಕ್ಷೆ! ‘ಬಂದದ್ದೆಲ್ಲಾ ಬರಲಿ, ಗೋವಿಂದನ ದಯೆವೊಂದಿರಲಿ...’ ಎನ್ನುತ್ತಾ ಇಲ್ಲಿ ಇರುವಷ್ಟೂ ದಿನ ನೀಡಿ-ಬೇಡಿ ಜೀವಿಸಲೇ ಬೇಕು. ಘಳಿಗೆ ಘಳಿಗೆಗೂ ಬದಲಾಗುವ ಬದುಕಿಗಾದರೂ ಅದೆಷ್ಟು ಭಾವ! ಎಷ್ಟೊಂದು ಬಗೆ! ಮನಸ್ಸಿಗೆ ಮುದಕೊಡುವ ಭಾವಗಳು ಒಂದಿಷ್ಟಾದರೆ, ಮನಸ್ಸಿಗೆ ಮಂಕು ಕವಿದು, ಗಾಢಾಂಧಕಾರಕ್ಕೆ ದೂಡುವ ವಿಷಾದದ ಭಾವಗಳು ಹಲವು. ನೋವು- ನಲಿವಿನ ಹೂರಣ ನಮ್ಮೆಲ್ಲರ ಜೀವನ ಅಂತಾರೆ. ನಡೆವ ಹೆಜ್ಜೆಗಳಲ್ಲಿ ಪ್ರೀತಿಯ ಕಸುವು ತುಂಬಿರುವವರೆಗೂ, ಬದುಕಿನ ಹರಿವಿನ ಅಗಾಧತೆಯಲ್ಲೂ ನಮ್ಮೆಲ್ಲಾ ಸಮಸ್ಯೆಗಳು, ಬೇಸರಗಳೂ ಸಹ್ಯವೇ. ಪ್ರೀತಿಯ ಬೇರು ಗಟ್ಟಿಯಾಗಿರುವವರೆಗೂ ಎಂತಹ ಬಿರುಗಾಳಿಗೂ ಅಲುಗಾಡದ ನಾವು, ಅದೇ ಪ್ರೀತಿಯ ವಿಯೋಗದಲ್ಲಿ ಬದುಕಿನ ಅತಿ ಸಣ್ಣ ಕದಲಿಕೆಗೂ ನೆಲ ಕಚ್ಚಿಕೊಂಡು ಬಿಡುತ್ತೇವೆ. ಆದರೆ ಅದೂ ಒಂದು ಘಟ್ಟ ಮಾತ್ರ. ಕೊನೆಗೆ ಅದೂ ಒಂದು ನೆನಪಾಗೋ… ಪಾಠವಾಗೋ ಬದಲಾಗುತ್ತಲೇ ಮತ್ತೆ ಎದ್ದು ನಡೆಯಲಾರಂಭಿಸುತ್ತೀವಿ. ಭೇಟಿ ಮಾಡಿದವರು, ಜೊತೆಯಾದವರು, ಇದ್ದಕ್ಕಿದ್ದಂತೆ ಅಗಲಿದವರು, ನೋವ ಕೊಟ್ಟವರು ಎಲ್ಲರೂ ಒಂದು ನೆನಪಾಗಿ ಉಳಿದುಬಿಡುತ್ತಾರೆ. ಆದರೆ ಜೀವನದಲ್ಲಿ ಯಾವುದು ಆಕಸ್ಮಿಕವಲ್ಲ, ಪ್ರತಿಯೊಂದರಲ್ಲೂ ಒಂದು ಅಜ್ಞಾತ ಕಾರಣವಿದ್ದೇ ಇರುತ್ತದೆ. ಅದು ಪ್ರಕೃತಿ ನಿಯಮ. ಎಲ್ಲವೂ ಪೂರ್ವ ನಿರ್ಧಾರಿತ ಮಜಲುಗಳು. ನಿಲ್ಲದ ಪಯಣದ ಜೀವನದಲ್ಲಿ ಎದಿರಾಗುವ ಭಾವಗಳನ್ನೆಲ್ಲಾ ಮನಸ್ಸಿನ ನೆನಪಿನ ಪೆಟ್ಟಿಗೆಯಲ್ಲಿ ತುಂಬುತ್ತಾ ಸಾಗುವುದಷ್ಟೇ ನಮ್ಮ ಕೆಲಸ. ಎಲ್ಲಾ ಥರದ ಜನರು ಸೇರಿಯೇ ಬದುಕು ತಾನೇ? ಇಲ್ಲಿ ಒಳ್ಳೆಯವರೂ ಇದ್ದಂತೆ ಕೆಟ್ಟವರೂ ಇದ್ದಾರೆ, ಅಥವಾ ಒಳ್ಳೆಯವರು ಕೆಟ್ಟವರು ಎಂಬುವ ವರ್ಗೀಕರಣವೂ ಎಲ್ಲಾ ನಮ್ಮ ಮೂಗಿನ ನೇರಕ್ಕಾದ್ದರಿಂದ ಅಸಲಿಗೆ ಒಳ್ಳೆಯವರು-ಕೆಟ್ಟವರು ಎಂಬುದು ಯಾರು, ಯಾವ ಸಂದರ್ಭದಲ್ಲಿ ಮತ್ತು ಯಾರಿಗೆ ಎಂಬುದರ ಮೇಲೆ ಅವಲಂಭಿಸಿರುತ್ತದೆಯೇನೋ? ಒಬ್ಬ ಮೈ ಮಾರಿಕೊಂಡು ಜೀವನ ಸಾಗಿಸುವ ವೇಶ್ಯೆ, ಗರತಿಯ ಕಣ್ಣಲ್ಲಿ ಕೀಳಾಗಿ ಹೋದರೆ, ಅದೇ ವೇಶ್ಯೆಯ ಮಕ್ಕಳ ಪಾಲಿಗೆ ಅವಳು ಅವರನ್ನು ಪೊರೆಯುವ ದೇವತೆ. ಇತರರ ಕಣ್ಣಿಗೆ ದೇವರಂತೆ ಕಾಣುವವ ಒಳಗೊಳಗೆ ಒಬ್ಬ ವ್ಯಭಿಚಾರಿಯಾಗಿರಲೂ ಸಾಧ್ಯ. ನಮ್ಮ ಕಣ್ಣಿಗೆ ಕಾಣುವ ನಮ್ಮ ಸುತ್ತ ಮುತ್ತಲಿನ ಅಂತಹ ಪಾತ್ರಗಳೇ ಕತೆಯನ್ನು ಸೃಷ್ಟಿಸೋದು. ಅವುಗಳೇ ಕಥೆಯಾಗಿ ಇಲ್ಲಿ ಮಾತಾಡುತ್ತಿರುವುದು. ಹಾಗಿದ್ರೆ ಏನಿದೆ ಈ “ಹೊಸ ಕಥೆಗಳು” ಕಥಾ ಸಂಕಲನದಲ್ಲಿ? ನಿಮ್ಮ ಆಫೀಸಿನಲ್ಲೋ… ನಿಮ್ಮ ಸ್ನೇಹವಲಯದಲ್ಲೋ ಫ್ಲರ್ಟ್‌ ಅಂತಾನೇ ಗುರುತಿಸಿಕೊಂಡವರನ್ನು ನೋಡಿರುತ್ತೀರಿ. ಅವರ ಕಥೆಯಿದೆ. ಪ್ರಪಂಚದಲ್ಲಿ ಅತ್ಯಂತ ನಿಷ್ಕೃಷ್ಠವಾಗಿ ಕಾಣುವ ಸಮುದಾಯದವರ ವ್ಯಥೆಯಿದೆ… ಅಪ್ಪಟ ಪ್ರೀತಿಯ ಕಥೆಯಿದೆ… ಪ್ರೀತಿಯ ಹೆಸರಲಿ ಕತ್ತು ಕೊಯ್ಯುವ ವಂಚನೆಯಿದೆ… ಕರುಣೆಯಿದೆ… ಪ್ರಥಮ ಬಾರಿಗೆ ಒಂದು ಪತ್ತೆದಾರಿ ಮಾದರಿಯ ಕಥೆಯೊಂದು ಬರೆಯುವ ಪ್ರಯತ್ನವಿದೆ… ರೋಚಕತೆಯಿದೆ… ಹುನ್ನಾರವಿದೆ… ಅಹಂಕಾರವಿದೆ… ಸ್ವಾರ್ಥವಿದೆ… ತ್ಯಾಗವಿದೆ… ಖುಷಿಯಿದೆ… ನ್ಯಾಯವಿದೆ… ಈ ಎಲ್ಲಾ ಭಾವಗಳ ಒಡಗೂಡಿದ ನಂಟಿನ ಅಂಟಿದೆ. ಆಧುನಿಕತೆಯ ಸೋಗಿನಲ್ಲಿ, ಸಂಬಂಧಗಳ ಸುಳಿಯಲ್ಲಿ ಸಿಲುಕಿದ್ದರೂ, ನಗುವ ಮುಖವಾಡ ಧರಿಸಿ ನಲುಗುತ್ತಿರುವ, ಭಾವ ಸರಪಳಿಗಳಲ್ಲಿ ಬಂಧಿಯಾದ ನಮ್ಮನಿಮ್ಮೆಲ್ಲರ ಕಥೆಗಳಿವೆ. ನನ್ನ ಕಥೆಯಿದೆ… ನಿಮ್ಮ ಕಥೆಯೂ ಇರಬಹುದು’ ಎಂದಿದ್ದಾರೆ

About the Author

ಗಾಯತ್ರಿ ರಾಜ್

ಲೇಖಕಿ, ಕತೆಗಾರ್ತಿ ಗಾಯತ್ರಿ ರಾಜ್ ಮೂಲತಃ ದಾವಣಗೆರೆಯವರು. ವಿಜ್ಞಾನ ವಿದ್ಯಾರ್ಥಿಯಾದರು ಅವರು ಸಾಹಿತ್ಯದಲ್ಲಿ ಅಪಾರ ಆಸಕ್ತಿ. ಅವರ ಕತೆಗಳು ಸುಧಾ, ತರಂಗ, ಕರ್ಮವೀರದಲ್ಲಿ ಪ್ರಕಟಗೊಂಡಿದ್ದು ವಿಜಯಕರ್ನಾಟಕ, ಪ್ರಜಾವಾಣಿ, ಉದಯವಾಣಿಯಲ್ಲಿ ನಿಯಮಿತವಾಗಿ ಲೇಖನ ಪ್ರಕಟಣೆ ಕಾಣುತ್ತಿವೆ. ಸಂಪದ ಸಾಲು ಎಂಬ ಪತ್ರಿಕೆಯಲ್ಲಿ ಒಂದು ವರ್ಷದಿಂದ "ಹೆಣ್ಣೆ ಬದುಕು ಸುಂದರ ಕಣೆ" ಎಂಬ ಅಂಕಣವನ್ನು ಬರೆಯುತ್ತಿದ್ದಾರೆ. ಅವರ ಕತಾ ಸಂಕಲನ ‘ಬಣ್ಣದ ಜೋಳಿಗೆ’ ಇತ್ತಿಚೆಗೆ ಪ್ರಕಟವಾಗಿದೆ. ...

READ MORE

Related Books