
‘ಜನ್ನತ್ ಮತ್ತು ಇತರ ಕಥೆಗಳು’ ಲೇಖಕ ಅಶ್ಫಾಕ್ ಪೀರಜಾದೆ ಅವರ ಕಥಾ ಸಂಕಲನ. ಇಲ್ಲಿ 9 ಕಥೆಗಳಿವೆ. ಸಾಹಿತಿ ಲಕ್ಷ್ಮಣ ಕಾಪಸೆ ಅವರು ಕೃತಿಗೆ ಬೆನ್ನುಡಿ ಬರೆದು ‘ ಪ್ರತಿಯೊಬ್ಬನು ಸತ್ತ ನಂತರ ಜನ್ನತ್ (ಸ್ವರ್ಗ) ಸಿಗಬೇಕೆಂದು ಬಯಸುವುದು ಸಹಜ, ಆದರೆ ತನ್ನ ಹೆತ್ತವರನ್ನು ಒಂದು ಸಾಸಿವೆ ಕಾಳಿನಷ್ಟು ಮನಸ್ಸು ನೋಯಿಸಿದರೂ ಸ್ವರ್ಗಕ್ಕೆ ಹೋಗುವುದು ಅಸಾಧ್ಯ ಅಂಥವರಿಗೆ ನರಕವೇ ಗತಿ, ಬದುಕಿದ್ದಾಗ ತಮ್ಮ ತಂದೆ-ತಾಯಿಯನ್ನು ನೋಡದವರು ತಮ್ಮ ಜೀವನ ಪರ್ಯಂತ ನಮಾಜ, ರೋಜಾ, ದಾನ, ಧರ್ಮ ಏನೇ ಮಾಡಿದರೂ ವ್ಯರ್ಥ ಎನ್ನುವ ಸಂದೇಶವನ್ನು "ಜನ್ನತ್' ಕಥೆಯಲ್ಲಿ ಒಬ್ಬ ಮೌಲಾನಾ ಪ್ರವಚನಕಾರರಿಂದ ಬಹಳ ಕಲಾತ್ಮಕವಾಗಿ ಸಮಾಜಕ್ಕೆ ಬೋಧಿಸುತ್ತಾರೆ. ಹಳ್ಳಿಯ ಭಾಷೆ, ಜನಪದ ಸೊಗಡು ತಮ್ಮ ಕಥೆಗಳಲ್ಲಿ ಹಿಡಿದಿಟ್ಟಿದ್ದಾರೆ. ಹೀಗಾಗಿ, ಅಷ್ಫಾಕರ ಎಲ್ಲ ಕಥೆಗಳು ಯಶಸ್ಸು ಕಂಡಿವೆ. ಮೇಲಿಂದ ಮೇಲೆ ಓದಬೇಕೆನ್ನುವ ಕಥಾ ಸಂಕಲನ’ ಎಂದು ಪ್ರಶಂಸಿಸಿದ್ದಾರೆ.

ಕವಿ ಅಶ್ಫಾಕ್ ಪೀರಜಾದೆ ಅವರು ಮೂಲತಃ ಬೆಳಗಾವಿ ಜಿಲ್ಲೆಯವರು. ಸದ್ಯ, ಧಾರವಾಡದಲ್ಲಿ ನೆಲೆಸಿದ್ದು, ವೃತ್ತಿಯಿಂದ, ಪಶು ಸಂಗೋಪನಾ ಇಲಾಖೆಯಲ್ಲಿ ಹಿರಿಯ ಪಶು ವೈದ್ಯಕೀಯ ಪರೀಕ್ಷಕರು. ಕೃತಿಗಳು: ಪ್ರೇಮವೆಂದರೆ, ಜನ್ನತ್ ಮತ್ತು ಇತರ ಕಥೆಗಳು (ಕಥಾಸಂಕಲನಗಳು), ಮನೋಲೋಕ, ಒಂದು ಜೋಡಿ ಕಣ್ಣು, ನನ್ನೊಳಗಿನ ಕವಿತೆ (ಕವನ ಸಂಕಲನಗಳು) ...
READ MORE
ಮೌಲ್ವಿಗಳು ಮಾರ್ಮಿಕವಾಗಿ ಹೇಳುತ್ತಲೇ ಇದ್ದರು. ಹೆತ್ತವರ ಬಾಯಿಂದ ಹೊರಟ ಒಂದು ಸಣ್ಣ ನೋವಿನ ನರಳಿಕೆ ಕೂಡ ಮಕ್ಕಳ ಜೀವನಕ್ಕೆ ಹಾನಿಯಾಗಬಲ್ಲದು, ಏಕೆಂದರೆ ಅವರ ಆ ನೋವಿನಲ್ಲಿ ಇಡೀ ಅರ್ಶ್‌ವನ್ನು ಅಂದರೆ ಸೃಷ್ಠಿಯನ್ನೇ ನಡುಗಿಸುವ ಶಕ್ತಿ ಇರುತ್ತದೆ. ತಂದೆ ತಾಯಿ ತನ್ನ ಸಂತಾನದ ವಿರುದ್ಧ ಒಂದೇ ಒಂದು ಉಸಿರೆತ್ತಿದ್ದರೆ ಸಾಕು ಭೂಲೋಕವಷ್ಟೆಯಲ್ಲ ಇಡೀ ದೇವಲೋಕ ಕೂಡ ಭೂಕಂಪವಾದಂತೆ ಕಂಪಿಸುತ್ತದೆ. ಆದರೆ ಮಾತೃ-ಹೃದಯ ಮಾತ್ರ ಅಷ್ಟು ಸುಲಭಕ್ಕೆ ಶಾಪ ನೀಡುವಂಥದಲ್ಲ, ಅದು ತುಂಬ ಮೃದುವಾದದ್ದು, ಪ್ರೀತಿ ಪೂರಿತವಾದದ್ದು ಎನ್ನುವುದಕ್ಕೆ ಉದಾಹರಣೆ ನೀಡಿದರು- “ಒಬ್ಬಳು ತನ್ನ ಗಂಡನ ಪ್ರೀತಿ ಪರೀಕ್ಷಿಸಿಸಬೇಕು ಎನ್ನುವ ಉದ್ದೇಶದಿಂದ ನೀವು ನಿಜವಾಗಿಯೂ ನನ್ನನ್ನು ಪ್ರೀತಿಸುತ್ತಿದ್ದರೆ, ನಿಮ್ಮ ತಾಯಿಯ ಎದೆ ಬಗೆದು ಅವಳ ಹೃದಯ ತಂದು ಕೊಡಿ” ಎಂದು ಸವಾಲು ಹಾಕಿದಳು. ಹೆಂಡ್ತಿ ಪ್ರೀತಿಯಲಿ ಹುಚ್ಚನಾದ ಗಂಡ ತಾಯಿಯ ಎದೆ ಚಾಕುವಿನಿಂದ ಇರಿದು ಹೃದಯವನ್ನು ಅಂಗೈಯಲ್ಲಿ ಇಟ್ಟುಕೊಂಡು ಪತ್ನಿಗೆ ಕಾಣಿಕೆ ಕೊಡಲೆಂದು ಅವಸರದಿಂದ ಓಡುತ್ತಿರಬೇಕಾದರೆ ಕಲ್ಲು ಕಾಲಿಗೆ ತಾಗಿ ಎಡವಿದನಂತೆ. ಆಗ ಅಂಗೈಯಲ್ಲಿರುವ ಮಾತೃ-ಹೃದಯ ನುಡಿದಿದ್ದೇನೆಂದರೆ..... " ಮಗನೇ ಜೋಪಾನ.. ಎಡವಿ ಬಿದ್ದೆಯಾ.. ನೋವಾಯಿತೇ!" ಎಂದು ಮರಗಿತಂತೆ.
