ಶತಮಾನದ ಸಣ್ಣ ಕಥೆಗಳು

Author : ಎಸ್. ದಿವಾಕರ್‌

Pages 679

₹ 569.00




Year of Publication: 2019
Published by: ಪ್ರಿಸಮ್ ಬುಕ್ಸ್ ಪ್ರೈ. ಲಿ
Address: ನಂ.1865, 32ನೇ ಅಡ್ಡರಸ್ತೆ, 10ನೇ ಮುಖ್ಯರಸ್ತೆ, ಬನಶಂಕರಿ 2ನೇ ಹಂತ, ಬೆಂಗಳೂರು-70

Synopsys

ಲೇಖಕ ಎಸ್. ದಿವಾಕರ ಅವರ ಕೃತಿ-ಶತಮಾನದ ಸಣ್ಣ ಕಥೆಗಳು. ಕನ್ನಡದ ಶ್ರೇಷ್ಠ ಸಣ್ಣ ಕಥೆಗಳನ್ನು ಸಂಗ್ರಹಿಸಿ ಸಂಕಲನಗೊಳೀಸಿದ ಕೃತಿ ಇದು.

About the Author

ಎಸ್. ದಿವಾಕರ್‌
(28 November 1944)

ಎಸ್. ದಿವಾಕರ್ ಅವರು 28 ನವೆಂಬರ್ 1944 ರಲ್ಲಿ ಜನಿಸಿದರು.  ಹುಟ್ಟಿದ್ದು ಬೆಂಗಳೂರು ಜಿಲ್ಲೆಯ ಸೋಮತ್ತನಹಳ್ಳಿಯಲ್ಲಿ. ಸಣ್ಣಕಥೆ, ಕಾವ್ಯ, ಪ್ರಬಂಧ, ವಿಮರ್ಶೆ, ಅಂಕಣ ಬರಹ, ಭಾಷಾಂತರ, ಸಂಪಾದನೆ ಇವೆಲ್ಲದರಲ್ಲಿ ಸ್ವೋಪಜ್ಞತೆ ಮತ್ತು ವಿಶಿಷ್ಟತೆ ಮೆರೆದಿರುವ ಎಸ್. ದಿವಾಕರ್‌, ಸವಿಸ್ತಾರ ಓದಿನ ಜಾಗೃತ ಮನಸ್ಸಿನ ಲೇಖಕರು. ಸುಧಾ, ಪ್ರಜಾವಾಣಿ ಪತ್ರಿಕೆಗಳಲ್ಲಿ ಕೆಲಸ ಮಾಡಿ, ನಂತರ ಅಮೆರಿಕನ್ ಕಾನ್ಸುಲೇಟ್ ಕಚೇರಿಯಲ್ಲಿ ಕನ್ನಡ ಸಂಪಾದಕರಾಗಿ ಕಾರ್ಯನಿರ್ವಹಿಸಿದ್ದಾರೆ. ಇವರ ಪ್ರಕಟಿತ ಕೃತಿಗಳಾದ  ಇತಿಹಾಸ, ಎಲ್ಲ ಬಲ್ಲವರಿಲ್ಲ ಈ ಊರಿನಲ್ಲಿ ಆಯ್ದ ಕತೆಗಳು (ಕಥಾ ಸಂಕಲನಗಳು), ಆತ್ಮಚರಿತ್ರೆಯ ಕೊನೆಯ ಪುಟ (ಕವನ ಸಂಕಲನ), ನಾಪತ್ತೆಯಾದ ಗ್ರಾಮಾಫೋನು, ಕೃಷ್ಣಲೀಲೆಯಿಂದ ರಾಮರಾಜ್ಯಕ್ಕೆ ...

READ MORE

Reviews

‘ಶತಮಾನದ ಸಣ್ಣ ಕತೆಗಳು’ ಕೃತಿಯ ವಿಮರ್ಶೆ

ಅವಸ್ಥಾಂತರವನ್ನು ದಾಖಲಿಸುವ ಪ್ರಯತ್ನ

ಈಗಿನ ಅರ್ಥದಲ್ಲಿ ಯಾವುದನ್ನು ನಾವು ಸಣ್ಣ ಕತೆ ಎನ್ನುತ್ತೇವೆಯೋ ಅದು ಹುಟ್ಟಿದ್ದು ಮತ್ತು ವಿಕಾಸವಾದದ್ದು ಈ ಶತಮಾನದಲ್ಲಿಯೇ. ಸ್ವತಃ ಕತೆಗಾರರಾದ ದಿವಾಕರ್ ಸಂಪಾದಿಸಿರುವ ಈ ಶತಮಾನವು ಅಷ್ಟೇ ಹೊರತು ಯಾವ ಅರ್ಥದಲ್ಲಿಯೂ ಪ್ರಾತಿನಿಧಿಕವಲ್ಲ. ಏಕೆಂದರೆ ಪ್ರಾತಿನಿಧಿಕವಲ್ಲ. ಏಕೆಂದರೆ ಪ್ರಾತಿನಿಧಿಕ ಅಂಥಾಲಜಿಯೊಂದಕ್ಕೆ ನಿರ್ದಿಷ್ಟವಾದ ಸ್ವರೂಪ ಇಲ್ಲವೆಗೊತ್ತುಗುರಿ ಇರಬೇಕು. ತೀರ ಮೇಲುನೋಟದ ಅರ್ಥದಲ್ಲಿ ಕೂಡ ಈ ಕತೆಗಳು ಶತಮಾನದ ಪ್ರಾತಿನಿಧಿಕವಲ್ಲ; ಇನ್ನೂ ಮೂರು ವರ್ಷ ಬಾಕಿ ಇರುವುದರಿಂದ ಅದು ಪೂರ್ತಿ ಆಗಿಲ್ಲ. ಇನ್ನೂ ಚೆನ್ನಾಗಿರುವ ಕತೆಗಳು ಈ ಅವಧಿಯಲ್ಲಿ ಬರಬಹುದು, ಅಥವಾ ಇದರಲ್ಲಿರುವ ಕೆಲವು ಆಮೇಲೆ (ಕಟ್ಟೀಮನಿಯವರು ಬೇಡ ಅನ್ನಿಸಿದ ಹಾಗೆ) ಬೇಡವಾಗಬಹುದು. ಪ್ರಾತಿನಿಧಿಕ ಎನ್ನುವುದು ಬೃಹತ್ತನ್ನು ಬಿಟ್ಟರೆ ಉಳಿದಂತೆ ಧಾರ್ಷ್ಟ್ಯದ ಮಾತು. 

ಕನ್ನಡ ಸಣ್ಣ ಕತೆಗಳ ಬೇರೆ ಬೇರೆ ಆಂಥಾಲಜಿಗಳು ಬಂದಿವೆ. ಅವುಗಳಲ್ಲಿ ಎರಡು ಉದಾಹರಣೆ ನೋಡಬಹುದು : 1965 ರಲ್ಲಿ ಕೀರ್ತಿನಾಥ ಕುರ್ತಕೋಟಿಯವರು ಮನೋಹರ ಗ್ರಂಥಮಾಲೆಗೆ ಆರಿಸಿ ಕೊಟ್ಟ ‘ಹೊಸ ಕ್ಷಿತಿಜ’ ಇದರಲ್ಲಿ ಹೊಸ ಸಂವೇದನೆಯ ಕತೆಗಳಿವೆಯೇ ಹೊರತು ಪ್ರಾತಿನಿಧಿಕ ಸಂಗ್ರಹವಲ್ಲ ಎಂದು ಕುರ್ತಕೋಟಿಯವರು ಸ್ಪಷ್ಟಪಡಿಸಿದ್ದಾರೆ. ಹೊಸ ಸಂವೇದನೆಯನ್ನು ಕುರಿತು ಕತೆಗಳ ಹಿನ್ನೆಲೆಯಲ್ಲಿ ವಿವೇಚಿಸಿದ್ದಾರೆ. 1978ರಲ್ಲಿ ಜಿ.ಎಚ್. ನಾಯಕರು ಎನ್.ಬಿ.ಟಿ ಗೆ ಸಂಪಾದಿಸಿಕೊಟ್ಟ ‘ಕನ್ನಡ ಸಣ್ಣ ಕಥೆಗಳು’ ಎರಡನೆಯ ಉದಾಹರಣೆ. ಚಾರಿತ್ರಿಕ ಮತ್ತು ಸಾಹಿತ್ಯಿಕ ಮಹತ್ವವುಳ್ಳು ಗಮನಿಸಿದರೆ ಅಂಥಾಲಜಿಯಲ್ಲಿ ವೈಯುಕ್ತಿಕ ಅಭಿರುಚಿಗೆ ಸ್ಥಾನ ಇಲ್ಲ ಎಂದು ಗೊತ್ತಾಗುತ್ತದೆ. 

ಪ್ರಸ್ತುತ ದಿವಾಕರರ ಸಂಗ್ರಹದಲ್ಲಿ ಚಾರಿತ್ರಿಕವಾಗಿಯೂ ಸಾಹಿತ್ಯಿಕವಾಗಿಯೂ ಮಹತ್ವವುಳ್ಳ ಕತೆಗಳಿರುವುದು ನಿಜ. ಆದರೆ ಆಯ್ಕೆಯ ಸ್ವಾತಂತ್ಯ್ರವು ಈ ಲಕ್ಷಣಗಳನ್ನು ನಿರ್ದೇಶಿಸಿರುವುದರಿಂದ ವೈಯುಕ್ತಿಕ ರುಚಿ ಅರುಚಿಯ ಮಿತಿಯು ಸಂಗ್ರಹದ ವ್ಯಾಪ್ತಿಯನ್ನು ಹಿಡಿದಿಟ್ಟಿದೆ. ಉದಾಹರಣೆಗೆ, ಆನಂದರ ಕತೆಯೇ ಇದರಲ್ಲಿಲ್ಲ. ಅದರ ಮುದ್ರಣಕ್ಕೆ ಅನುಮತಿ ದೊರೆಯಲಿಲ್ಲವಂತೆ. ಹಾಗೆಯೇ ಎಂ.ಎನ್ ಕಾಮತ್, ಆನಂದಕಂದ ಮತ್ತು ಎಸ್.ಜಿ.ಶಾಸ್ತ್ರೀ, ಬಸವರಾಜ ಕಟ್ಟೀಮನಿಯವರ ಕತೆಗಳು ಇಲ್ಲಿ ಸೇರಿಲ್ಲ. ಸಾಮಾಜಿಕ ತುರ್ತು, ಕಲಾತ್ಮಕ ಪರಿಣತಿ ಮತ್ತು ವಿಶಿಷ್ಟ ಜೀವನದರ್ಶನ ಇವರ ಕತೆಗಳಲ್ಲಿ ಕಂಡು ಬರುತ್ತಿಲ್ಲವಾದ್ದರಿಂದ ಅವನನ್ನು ಕೈ ಬಿಟ್ಟಿದ್ದಾರೆ. ಬಹುಶಃ ಯರ್ಮುಂಜೆ ರಾಮಚಂದ್ರ ಚಿಕ್ಕ ವಯಸ್ಸಿನಲ್ಲಿ ತೀರಿಕೊಳ್ಳದೆ, ಉಳಿದು, ಬರೆಯುವುದನ್ನು ಮುಂದುವರಿಸಿದ್ದರೆ ಅವರ ಕತೆಯೂ ಸೇರುತ್ತಿರಲಿಲ್ಲವೇನೋ. ಏಕೆಂದರೆ ಮಹಾಬಲಮೂರ್ತಿ, ಕಾಳೇಗೌಡ ನಾಗವಾರ ಇಲ್ಲಿ ಪ್ರಾತಿನಿಧ್ಯ ಪಡೆದಿಲ್ಲ. ಅಷ್ಟೇಕೆ, ಸ್ವತಃ ದಿವಾಕರರ ಕತೆಯೇ ಇಲ್ಲ (ಕೌರ್ಯ ಎಂಬ ಕತೆ ಸೇರಿಸಬಹುದಾಗಿತ್ತು).

ಇಷ್ಟು ಹೇಳಿದ ನಂತರ ಆಂಥಾಲಜಿಯನ್ನು ರೂಪಿಸುವ ಕಷ್ಟವನ್ನು ಒಪ್ಪಿಕೊಳ್ಳಬೇಕು. ಆದರೆ ಪ್ರಸ್ತಾವನೆಯಲ್ಲಿ ಪ್ರತಿ ಕತೆಯ ಬಗೆಗೂ ಎರಡೆರಡು ಮಾತು ಬರೆಯುವ ಬದಲು ಆಂಥಾಲಜಿಯೊಂದು ನೀಡುವ ಅವಕಾಶ ವ್ಯಾಪ್ತಿಯನ್ನು ಹಿಗ್ಗಿಸಬಹುದಾಗಿತ್ತಲ್ಲ! ಮಾಸ್ತಿಯವರ ‘ಜೋಗ್ಯೋರ ಅಂಜಪ್ಪನ ಕೋಳಿ’ ಕತೆಗೆ ಬದಲು ‘ವೆಂಕಟಿಗನ ಹೆಂಡತಿ’ ಯನ್ನೂ ಭಾರತೀಪ್ರಿಯರ ‘ಮೋಚಿ’ ಗೆ ಬದಲು ‘ಹಾಲೆರೆದ ಹಾವ’ನ್ನೂ ಸೇರಿಸಿದ್ದರೆ, ಕತೆಗಾರರು ಎರಡಕ್ಕೂ ಸಮಾನವಾದ ವಿವಾಹಬಾಹಿರ ಸಂಬಂಧದ ವಸ್ತುವನ್ನು ಹೇಗೆ ನಿರ್ವಹಿಸಿದ್ದಾರೆ ಎಂಬುದನ್ನು ತುಲನೆ ಮಾಡಬಹುದಾಗಿತ್ತು. ಅನಕೃ ಮಂತಾಂತರದ ಬಗೆಗೆ ಎಷ್ಟೋ ಒಳ್ಳೆಯ ಕತೆಗಳನ್ನು ಬರೆದಿದ್ದರು. ‘ಮುಗಿಯದ ಕಥೆಗೆ’ ಬದಲು ಅವುಗಳಲ್ಲಿ ಒಂದನ್ನು ಸೇರಿಸಬಹುದಾಗಿತ್ತು.

ಸಂಗ್ರಹ ಪ್ರಾತಿನಿಧಿಕ ಅಲ್ಲ. ಆಗಬೇಕಾದ ಹಾಗೆ ಆಗಿಲ್ಲ ಅನ್ನುವುದಕ್ಕೆ ಇಷ್ಟೆಲ್ಲ ಹೇಳಬೇಕಾಯಿತು. ಆದರೆ ಬೃಹತ್ತಿನಲ್ಲಿ ವಿವಿಧತೆಯಲ್ಲಿ ಇದು ಅನನ್ಯವಾದ ಪುಸ್ತಕ. ಕೆರೂರರಿಂದ ಹಿಡಿದು ಅಬ್ದುಲ್ ರಶೀದವರೆಗೂ ಸಾಗಿರುವ ಕಥಾಯಾತ್ರೆ ಅಚ್ಚರಿ ಆಗುವಷ್ಟು ವೈವಿಧ್ಯಮಯವಾದುದು. ಕತೆಗಳ ಇಂಥದೊಂದು  ನೋಟ ಈಗಿನ ಓದುಗರಿಗೆ ಸಿಕ್ಕಿರುವುದೇ ಈ ಸಂಗ್ರಹದ ಮುಖ್ಯ ಪ್ರಯೋಜನವಾಗಿದೆ. ಇದಕ್ಕಾಗಿ, ದಿವಾಕರಿಗೆ ಅಭಿನಂದನೆ ಸಲ್ಲಲೇಬೇಕು.

ದೇವುಡು ಅವರ ‘ಮೂರು ಕನಸು’ ಆಗಲಿ, ಅಶ್ವತ್ಥಪುರ ‘ವ್ಯಭಿಚಾರ’ ಆಗಲಿ, ಚದುರಂಗದ ‘ನಾಲ್ಕು ಮೊಳ ಭೂಮಿ’ ಆಗಲಿ, ಅನಂತ ಮೂರ್ತಿಯವರ ‘ಸೂರ್ಯನ ಕುದುರೆ’ ಆಗಲಿ, (ಇದು ಕೇವಲ ನಿದರ್ಶನಗಳು) ಜಗತ್ತಿನ ಉತ್ತಮ ಕತೆಗಾರರಾದ ಮೊಪಾಸ, ಚೆಕಾಫ್, ಸಾಮರ್ಸೆಟ್ ಮೋಮ್, ಓ ಹೆನ್ರಿ, ಮಾಲಮೂಡ್, ಮಾರ್ಕ್ವೆಜ್ ಮತ್ತು ಸಿಂಗರ್ ಮುಂತಾದವರ ಕತೆಗಳಿಗಿಂತ ಯಾವ ರೀತಿಯಲ್ಲಿಯೂ ಕಡಿಮೆಯೇನಿಲ್ಲ. ಸಣ್ಣಕತೆಯೇ ಒಂದು ತರಹ ಆದರೆ ಕುಂವೀ ತೀರ ಬೇರೆ ತರಹ(ಹಾಗೆ ಬರೆಯಬಹುದೇ ಎಂಬಷ್ಟು)ಬರೆಯುತ್ತಾರೆ. ಅಶ್ಥತ್ಥರ ನೇರವ್ಯಂಗ್ಯ ಸಾತ್ವಿಕತೆಯ ಮಟ್ಟದಲ್ಲಿ ಗಂಭೀರವಾಗಿ ಕೈ ಕೊಟ್ಟರೆ(ಮೋಸ) ಅನಂತಮೂರ್ತಿಯವರ ಪಾತ್ರಗಳು ವಿಸಂಗತಿಗಳು ಹೇಗೆ ಜೀವನವನ್ನು ರೂಪಿಸುತ್ತವೆ ಎಂದು ಮನೋಜ್ಞವಾಗಿ ನಿರೂಪಿಸುತ್ತವೆ. ಚದುರಂಗದ ಕತೆಯಲ್ಲೇ ಕತೆ ಇದೆ. ದೇವುಡು ತೋರುವ ಫ್ಯಾಂಟಸಿ ಲಕ್ಷಣ ನಿಜಕ್ಕೂ ಆ ಕಾಲದ್ದಲ್ಲ!

ದಿವಾಕರ್ ಆಯ್ಕೆಯಲ್ಲಿ ತಪ್ಪಿದ್ದಾರೆ; ಆದರೆ ಕತೆಗಳ ಚರಿತ್ರೆಯನ್ನು ಪ್ರತ್ಯಕ್ಷವಾಗಿ ದಾಖಲಿಸುತ್ತವುದರಲ್ಲಿ ತಪ್ಪಿಲ್ಲ. ಕತೆ ಮುಂಚಿನಿಂದ ಈಗಿನವರೆಗೆ ಏನೇಲ್ಲ ಅವಸ್ಥಾಂತರವನ್ನು ಪಡೆದುಕೊಳ್ಳುತ್ತ ಸಾಗುತ್ತಿದೆ ಎಂಬುದಕ್ಕೆ ಈ ಸಂಗ್ರಹದಲ್ಲಿ ಬೇಕಾದಷ್ಟು ದಾಖಲೆಗಳು ಸಿಕ್ಕುತ್ತವೆ. ಕಥಾ ಪ್ರತಿಭೆಯಲ್ಲಿ ಕನ್ನಡ ಯಾವುದಕ್ಕೂ ಸಮ ಎಂಬುದನ್ನು ತಿಳಿಯಬೇಕಾದರೆ ಈ ಸಂಗ್ರಹವನ್ನು ಅಗತ್ಯವಾಗಿ ಗಮನಿಸಬೇಕಾಗಿದೆ. ಶತಮಾನದ(?) ಸಮೃದ್ದಿ ನಾವು ಬಾಳಿದ ಬದುಕಿನ ಸಮೃದ್ದಿಯೂ ಹೌದು.

(ಬರಹ -ದೇಶಕುಲಕರ್ಣಿ, ಸುಧಾ ಮಾರ್ಚ್ 1998)

Related Books