ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ

Author : ಬಿ.ಟಿ.ಜಾಹ್ನವಿ

Pages 336

₹ 350.00
Year of Publication: 2023
Published by: ಕೌದಿ ಪ್ರಕಾಶನ
Address: ಚರ್ಚ್ ರಸ್ತೆ, ಆನೇಕಲ್ - 562 106
Phone: 93806 97082

Synopsys

‘ಒಬ್ರು ಸುದ್ಯಾಕೆ ಒಬ್ರು ಗದ್ಲ್ಯಾಕೆ’ ಬಿ.ಟಿ. ಜಾಹ್ನವಿ ಅವರ ಕಥಾಸಂಕಲನ. ಈ ಕೃತಿಗೆ ಸಬಿಹಾ ಭೂಮೀಗೌಡ ಅವರ ಬೆನ್ನುಡಿ ಬರಹವಿದೆ. ಪುಸ್ತಕದ ಕುರಿತು ಬರೆಯುತ್ತಾ ‘ಬಿ.ಟಿ. ಜಾಹ್ನವಿ ಅವರು ತಮ್ಮ ಕಳೆದುಕೊಂಡವಳು ಮತ್ತು ಇತರ ಕಥೆಗಳು ಸಂಕಲನದ ಮೂಲಕ ಕನ್ನಡ ಸಾಹಿತ್ಯ ಲೋಕದಲ್ಲಿ ವಿಶಿಷ್ಟ ಸ್ಥಾನವನ್ನು ಗಳಿಸಿದವರು. ಈ ಸಂಕಲನದ ವ್ಯಭಿಚಾರ', 'ವಿಮುಖ'ದಂತಹ ಕತೆಗಳನ್ನು ಓದಿದ ಹಲವರು ಬೆಚ್ಚಿಬಿದ್ದರೆ, ಕೆಲವರು ಅವುಗಳಲ್ಲಿ ಪ್ರಕಟವಾದ ಪ್ರಾಮಾಣಿಕತೆಗೆ ತಲೆಬಾಗಿದ್ದೂ ನಿಜ.

ಈ ಸಂಕಲನದ ಪ್ರತಿಯೊಂದು ಕತೆಯೊಳಗೂ ಒಂದೊಂದು ಬಗೆಯ ಹುಡುಕಾಟವಿದೆ. ಈ ಹುಡುಕಾಟ ಜೀವಂತಿಕೆಯ ಲಕ್ಷಣವಾದಂತೆ ಬೆಳವಣಿಗೆಯ ಲಕ್ಷಣವೂ, ತಮ್ಮ ಹುಡುಕಾಟದ ಫಲವಾಗಿ ಪರಿಹಾರವನ್ನು ಕೆಲವರು ಕತೆಯ ಕೊನೆಯಲ್ಲಿ ಕಂಡುಕೊಂಡರೆ, ಇನ್ನು ಕೆಲವರು ಕಾಣಲಾಗದೆ ಹತಾಶರಾಗುವುದಿದೆ. ಇನ್ನೊಬ್ಬರ ಉತ್ತರದ ಹುಡುಕಾಟಕ್ಕೆ ನಿಮಿತ್ತವಾಗುವವರು ಕೆಲವರಾದರೆ, ಇನ್ನೊಬ್ಬರಿಂದ ಉತ್ತರ ಕಂಡುಕೊಳ್ಳುವವರು ಕೆಲವರು. ಜಾಹ್ನವಿಯವರ ಕತೆಗಳನ್ನು ಓದುವಾಗ ನಮ್ಮ ಗಮನಸೆಳೆಯುವ ಅಂಶಗಳು ಹಲವು. ಅವರು ಕಥನಕ್ಕೆ ಎತ್ತಿಕೊಳ್ಳುವ ವಿಷಯದಲ್ಲಿ ತೋರುವ ದಿಟ್ಟತನ, ಅದರ ನಿರ್ವಹಣೆಯಲ್ಲಿ ಇರಿಸಿಕೊಳ್ಳುವ ಪ್ರಾಮಾಣಿಕತೆ ಮತ್ತು ಅವುಗಳನ್ನು ಕಥನವಾಗಿಸುವಲ್ಲಿ ಉಳಿಸಿಕೊಳ್ಳುವ ತನ್ಮಯತೆ - ಇವು ಓದುಗರನ್ನು ತಟ್ಟುತ್ತವೆ. ಭಾಷೆಯ ಸಾಂಪ್ರದಾಯಿಕ ನಿಯಮಗಳನ್ನು ನಿಸ್ಸಂಕೋಚವಾಗಿ ಗುಡಿಸಿ ಮೂಲೆಗಟ್ಟಿ, ವಾಕ್ಯವನ್ನು ಮುರಿದು ಕಟ್ಟುವ ಅವರ ಭಾಷಾಪ್ರಯೋಗವೂ ವಿಶಿಷ್ಟ.

ಇವರ ಕತೆಗಳು ಒಂದು ಗುಂಪಿನ ಕಥನಗಳಲ್ಲ: ಹಳವಂಡಗಳಲ್ಲ. ಇವು ಎಲ್ಲ ವಯೋಮಾನ, ವರ್ಗ, ವರ್ಣ, ಲಿಂಗದ ವ್ಯಕ್ತಿಗಳ ಸೋಗಲಾಡಿತನ, ಇಬ್ಬಂದಿ ನಿಲುವು, ಅಂತಃಶಕ್ತಿ, ನಿರ್ವಿಯತ ಮತ್ತು ಹೊಸ ಛಳಕುಗಳನ್ನು ಗುರುತಿಸಿ ತೋರಿಸುವಲ್ಲಿ ಆಸಕ್ತವಾಗಿವೆ. ಅಂತೆಯೇ ನಮ್ಮೊಳಗನ್ನು ತುಂಬುತ್ತವೆ. ಬಿ.ಟಿ. ಜಾಹ್ನವಿಯವರು ಇನ್ನಿಷ್ಟು ಬರೆಯಲಿ ಎಂದು ಆಶಿಸಿದ್ದಾರೆ.

About the Author

ಬಿ.ಟಿ.ಜಾಹ್ನವಿ

ಜಾಹ್ನವಿಯವರು ಬೆಂಗಳೂರಿನಲ್ಲಿ 1963ರಲ್ಲಿ ಜನಿಸಿದರು. ತಂದೆ ಡಾ.ಬಿ.ಎಂ.ತಿಪ್ಪೇಸ್ವಾಮಿ ಪ್ರಖ್ಯಾತ ನೇತ್ರತಜ್ಞರು. ದಾವಣಗೆರೆಯಲ್ಲಿ ವಿದ್ಯಾಭ್ಯಾಸ ಪೂರ್ಣಗೊಳಿಸಿದ ಜಾಹ್ನವಿ ಹಲವು ಕೃತಿಗಳನ್ನ ರಚಿಸಿದ್ದಾರೆ.  ಅವರ ಕಳೆದು ಕೊಂಡವಳು ಮತ್ತು ಇತರ ಕತೆಗಳು ಎಂಬ ಕಥಾಸಂಕಲನ ಹೆಚ್ಚು ಜನಪ್ರಿಯವಾಗಿದೆ. ತಂದೆಯ ರಾಜಕೀಯ ಜೀವನದ ಪ್ರೇರಣೆಯಿಂದಾಗಿ ರಾಜಕೀಯದಲ್ಲೂ ತೊಡಗಿರುವ ಜಾಹ್ನವಿ ಸೂಕ್ಷ್ಮವಾಗಿ ಬರೆವ ಲೇಖಕಿ. ಕತೆಗಾರ್ತಿಯಾಗಿ ಗುರುತಿಸಿಕೊಂಡಿರುವ ಅವರು ದಲಿತಹೋರಾಟಗಳಲ್ಲೂ ತೊಡಗಿಕೊಳ್ಳುತ್ತಾರೆ. ಅವರ ಕಥೆಗಳಲ್ಲಿ ಹೆಣ್ಣಿನ ಲೈಂಗಿಕ ಸ್ವತಂತ್ರ್ಯದ ಕುರಿತಾದ ವಿಷಯಗಳು ಚರ್ಚೆಯಾಗುತ್ತವೆ. ಸಂಬಂಧಗಳ ಬಗ್ಗೆ ಸೂಕ್ಷ್ಮವಾಗಿ ಬರೆವ ಜಾಹ್ನವಿ ಸಮಾಜದ ಸಮಸ್ಯೆಗಳಿಗೂ ಮಿಡಿಯುತ್ತಾರೆ.  ...

READ MORE

Related Books