ಕೂಳಿನ ಕಾಳಗ

Author : ಮಾದು ಪ್ರಸಾದ ಹುಣಸೂರು

Pages 104

₹ 110.00
Year of Publication: 2020
Published by: ಶ್ರೀ ವಿಘ್ನೇಶ್ವರ ಪ್ರಕಾಶನ
Address: # 732/1, ನ್ಯೂ ಜನತಾ ಕಾಲೊನಿ, ಯಲವಾಳ, ಮೈಸೂರು-571 130

Synopsys

ಲೇಖಕ ಮಾದುಪ್ರಸಾದ್ ಹುಣಸೂರು ಅವರ ಕಥ ಸಂಕಲನ-ಕೂಳಿನ ಕಾಳಗ ಒಟ್ಟು 10 ಕಥೆಗಳಿವೆ. ಕಥಾವಸ್ತು, ನಿರೂಪಣಾ ಶೈಲಿ, ಸನ್ನಿವೇಶಗಳ ಜೋಡಣೆ, ಪಾತ್ರಗಳ ಸೃಷ್ಟಿ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಈ ಕಥಾ ಸಂಕಲನ ಓದುಗರ ಗಮನ ಸೆಳೆಯುತ್ತದೆ.

ಕೃತಿಯ ಕುರಿತು ತಮ್ಗೆಮ ಅಭಿಪ್ರಾಯ ಬರೆದ ಸಾಹಿತಿ ಕೆ.ಎಸ್. ರೇಣುಕಾರಾಧ್ಯ "ಇವರ ಕತೆಗಳೆಲ್ಲವೂ ಪ್ರಧಾನವಾಗಿ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿಯೇ ಮೂಡಿಬಂದರೂ ಸಮಕಾಲೀನ ಜಾಗತಿಕರಣದ ಸಂದರ್ಭದಲ್ಲಿಯೂ ಶೋಷಣೆ ಎಂಬುದು ಹೊಸ ವಿಕಾರಾಕಾರಗಳನ್ನು ತನ್ನೊಳಗೆ ಅಡಗಿಸಿಕೊಂಡು ನಜೂಕಿನಲ್ಲಿ ‘ಸರ್ವರಿಗೂ ಸಮಪಾಲು ಸಮಬಾಳು’ ಸೋಗು ಹಾಕುತ್ತಾ ಬಡವರನ್ನು, ಶ್ರಮಿಕರನ್ನು, ಮಹಿಳೆಯರನ್ನು ಮತ್ತು ನಿರ್ಬಲರನ್ನು ತನ್ನ ಸುಖದತೇರು ಎಳೆಯಲು ಬಳಸಿಕೊಂಡಿದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸುತ್ತಾ ಸಾಗಿವೆ. ಕತೆಯ ಭಾಷೆ ಸರಳ ಚುರುಕು ಮತ್ತು ಚುಟುಕಾದರೂ ಮಾರ್ಮಿಕತೆಯನ್ನು ಶೋಷಣೆಯ ಗೂಡಾರ್ಥವನ್ನು ಅದು ಸ್ಫುರಿಸುತ್ತದೆ. ಪ್ರತಿಹಂತದಲ್ಲೂ ಕುತೂಹಲವನ್ನು ಮೂಡಿಸುತ್ತಾ ತನ್ನ ಸುತ್ತಲಿನ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಗಟ್ಟಿತನವನ್ನು ಮತ್ತು ಮುಗ್ದತೆಯನ್ನು ಉಳಿಸಿಕೊಂಡಿವೆ. ಕತೆಗಳು ಕತೆಗಾರನು ವಾಸಿಸುವ ಪರಿಸರದ ಸಾಂದ್ರಾನುಭವಕ್ಕೆ ಸಾಕ್ಷಿಯಾಗುತ್ತವೆ ಹಾಗೂ ಸಮಕಾಲೀನ ಸಾಕ್ಷ್ಷಿಪ್ರಜ್ಞೆಯಾಗಿ ನಿಲ್ಲುತ್ತವೆ.’ ಎಂದು ಪ್ರಶಂಸಿಸಿದ್ದಾರೆ. 

About the Author

ಮಾದು ಪ್ರಸಾದ ಹುಣಸೂರು
(20 March 1982)

ಡಾ. ಮಾದುಪ್ರಸಾದ್ ಹುಣಸೂರು ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನ ರಂಗಯ್ಯನಕೊಪ್ಪಲು ಗ್ರಾಮದವರು. ತಂದೆ ಕುಂಡಯ್ಯ, ತಾಯಿ ಕಾಳಮ್ಮ. ಜನನ 1982ರ ಮಾರ್ಚ್ 20 ರಂದು. ಪ್ರಾಥಮಿಕ ಶಿಕ್ಷಣ-ಹುಟ್ಟೂರಿನಲ್ಲಿ, ಮಾಧ್ಯಮಿಕ ಶಿಕ್ಷಣ-ಬೋಳನಹಳ್ಳಿಯಲ್ಲಿ, ಪ್ರೌಢಶಾಲಾ ಶಿಕ್ಷಣ-ಅರಸಿ ಹುಣಸೂರಿನಲ್ಲಿ ನಡೆಯಿತು.  ಮೈಸೂರಿನ ವಸಂತ ಮಹಲ್ ನಲ್ಲಿ ಶಿಕ್ಷಕ ತರಬೇತಿ ಪಡೆದು, 2004 ರಲ್ಲಿ ಪಿರಿಯಾಪಟ್ಟಣದ ಭೂತನಹಳ್ಳಿಯಲ್ಲಿ ಪ್ರಾಥಮಿಕ ಶಾಲಾ ಶಿಕ್ಷಕರಾದರು.  ಕೃತಿಗಳು: ಹಂಪಿಯ ಕನ್ನಡ ವಿಶ್ವವಿದ್ಯಾಲಯದಲ್ಲಿ  'ಮಕ್ಕಳ ಕಥಾ ಸಾಹಿತ್ಯ ಸ್ವರೂಪ: ತಾತ್ವಿಕತೆ ' ವಿಷಯವಾಗಿ ಮಹಾಪ್ರಬಂಧ ಮಂಡಿಸಿ ಪಿ.ಎಚ್.ಡಿ,  ಎಂ.ಎಸ್. ಪುಟ್ಟಣ್ಣರ ಮಕ್ಕಳ ಸಾಹಿತ್ಯದ ಕೊಡುಗೆ ಎಂಬುದು ಸಂಶೋಧನಾ ಗ್ರಂಥ ಪ್ರಕಟಣೆ, ‘ಹಾಡೋಣ ಬಾರೋ ಕಿಶೋರ,   'ಬೆಂದವರ ಬೆವರು, ಹಕ್ಕಿಗಾನ ...

READ MORE

Reviews

ಕೂಳಿನ ಕಾಳಗದ ಒಳಸುಳಿಯಲ್ಲಿ.....
ಇಂದು ಕಥೆಗಳು ಕೇವಲ ಕಲ್ಪನೆಯ ಕೂಸಾಗಿ ಉಳಿದಿಲ್ಲ, ವಾಸ್ತವದ ಒಡಲಾಗಿದೆ. ಎದೆಯೊಳಗಿನ ಚೋಮ ದಣಿವರಿಯದೆ ‘ದುಡಿ’ಯುತ್ತಲೇ, ಬೆಳ್ಳಿ ಸವೆದುತಣ್ಣಗೆ ನರಳುತ್ತಲೇ ಇದ್ದಾಳೆ. ಶಬರಿಕಾಯುತ್ತಲೇ ಇದ್ದು, ಸೂರ್ಯಚಂದ್ರರು ಸುಮ್ಮನೇ ಹೊರಳುತ್ತಿದ್ದಾರೆ, ಟೊಣ್ಣಿಗೆ ಇನ್ನೊಂದು ದೇವರ ಹೆಣದ ಭಾಗ್ಯವಿಲ್ಲ’, ಒಡಲಾಳದ ಸಾಕವ್ವನ ಕೋಳಿ ಯಾವ ಕೇರಿಯಲ್ಲೂ ಕೂಗುತ್ತಿಲ್ಲ. ಉಳ್ಳವರ ದರ್ಪ ಇಲ್ಲದವರ ಬದುಕಿನ ಪ್ರೀತಿ ಮತ್ತು ನಂಬಿಕೆಗಳು ಯಾರ ಜಪ್ತಿಗೂ ಸಿಗುತ್ತಿಲ್ಲ ಇದು ಉತ್ತರವಿಲ್ಲದ ಪ್ರಶ್ನೆಗಳಾಗಿ ಉಳಿಯುತ್ತಿವೆ.

ಶೋಷಣೆಯು ಸಾವಿರಾರು ಅವತಾರಗಳನ್ನು ತಾಳಿದೆ. ಗ್ರಾಮೀಣ ಪ್ರದೇಶಗಳು ನಗರದ ನಾಜೂಕಿನ ಬಟ್ಟೆತೊಟ್ಟಿವೆ ಅಷ್ಟೆ. ಗೌಡಿಕೆ, ಯಜಮಾನಿಕೆ, ಶಾನುಭೋಗತ್ವಗಳು ವರಸೆ ಬದಲಿಸಿ ತಿರುತಿರುಗಿ ಗದ್ದುಗೆ ಏರಿವೆ.
ಜಾಗತೀಕರಣದ ಹಿನ್ನೆಲೆಯಲ್ಲಿ ಜಗತ್ತು ನವನಾಗರಿಕತೆಯ ಕಡೆಗೆ ಸಾಗುತ್ತಿದೆ. ಈ ಮಾತು ಕೇವಲ ಉಳ್ಳವರ ಸೌಕರ್ಯವನ್ನು ನೋಡಿ ಹೇಳಿದ್ದಾಗಿದೆ. ಜಾತಿ ಧರ್ಮಗಳಿಂದ ಅಧಿಕಾರ ಗಿಟ್ಟಿಸಿ ಕೊಂಡರೋ; ಅಧಿಕಾರ ಗಿಟ್ಟಿಸಿಕೊಳ್ಳಲು ಜಾತಿಧರ್ಮ ಸೃಷ್ಠಿ ಮಾಡಿಕೊಂಡರೋ ಗೊತ್ತಿಲ್ಲ. ಈ ಹೊತ್ತಿಗೂ ಇದು ಕತ್ತಲೊಳಗಿನ ಕನ್ನಡಿ ನೋಡಿದಂತಾಗಿದೆ.

ಜಾಗತೀಕ ಸಾಹಿತ್ಯ ಲೋಕದಲ್ಲಿ ವಿವಿಧ ಅವಸ್ಥೆಗಳು ಜರುಗಿಹೋದವಷ್ಟೇ. ಸಾಹಿತ್ಯ ಸಮಾಜದ ಗತಿಬಿಂಬವಾಗದೇ ಮತಿಬಿಂಬವಾಗಿಯೇ ಉಳಿಯಿತು. ನೂರಾರು ಚಿಂತಕರು ತಮ್ಮ ಸಾವಿರಾರು ಕತೆಗಳ ಮೂಲಕ ಶೋಷಣೆಯ ವಿರುದ್ಧ ಮಿತ್ರಸಂಹಿತೆ, ಕಾಂತಸಂಹಿತೆಯ ಮೂಲಕ ದನಿಯೆತ್ತಿದರೂ ಇದಾವುದರ ಅರಿವು ಇದ್ದೂ ಇಲ್ಲದಂತೆ ಸಮಾಜವಿದೆ. ಇನ್ನೂ ಸಮಾಜದಲ್ಲಿಯ ಧರ್ಮ, ಜಾತಿ, ಅಧಿಕಾರ ರಾಜಕಾರಣದ ಮೂಲಕ  ವರ್ಗವರ್ಗಗಳ ನಡುವಿನ ಸಂಘರ್ಷ, ಲಿಂಗ ತಾರತಮ್ಯ ಮಹಿಳಾ ಶೋಷಣೆ ಆಧುನಿಕತೆಯ ಸೋಗಿನಲ್ಲಿ ವೇಷ ಮರೆಸಿ ಕುಳಿತಿವೆ. ನವನಾಗರಿಕರಿಗೆ ಶೋಷಣೆ ಶೋಷಣೆಯಾಗಿಯೇ ಕಾಣಲಿಲ್ಲ ಬದಲಿಗೆ ಅವರವರ ಯೋಗ್ಯತೆ ಎನ್ನುವ ಮಟ್ಟಿಗೆ ಕಲಿತ ವಿದ್ಯೆ ಜಡ್ಡು ಹಿಡಿದಿದೆ. 

ಒಂದು ಕಡೆ ಕುವೆಂಪು, ಶಿವರಾಮಕಾರಂತ, ಸಿದ್ದಲಿಂಗಯ್ಯ, ಕೃಷ್ಣ ಆಲನಹಳ್ಳಿ, ಕುಂ.ವೀರಭದ್ರಪ್ಪ, ಬರಗೂರು ರಾಮಚಂದ್ರಪ್ಪ, ದೇವನೂರು ಮಹದೇವ, ಮೊಗಳ್ಳಿ ಗಣೇಶ್, ಅಮರೇಶ್ ನುಗಡೋಣಿ, ರಹಮತ್ ತರೀಕೆರೆ ಮುಂತಾದವರ ಮಾನವೀಯ ಚಿಂತನೆಯ ಬರಹಗಳು ಸಮಾಜದ ಬೆಳವಣಿಗೆಗಾಗಿ ತುಡಿಯುತ್ತಿದ್ದರೂ ಇನ್ನೊಂದು ಕಡೆ ಬಲಿತವರ ಧನದಾಹಿ ಅಧಿಕಾರದಾಹಿ ರಾಜಕಾರಣಗಳು ಸಾಮಾಜಿಕ ಧಾರ್ಮಿಕ ಅಧಃಪತನದ ಕಡೆಗೆ ಧಾವಂತದ ಹೆಜ್ಜೆ ಇಡುತ್ತಿರುವುದು ಕಳವಳವನ್ನು ಹುಟ್ಟುಹಾಕುತ್ತದೆ. ಇಂತಹ ಸಂದರ್ಭಗಳಲ್ಲಿ ಸಾಹಿತ್ಯದ ಪಾತ್ರ ಪ್ರಮುಖವಾದುದು.

ಈ ಹಿನ್ನೆಲೆಯಲ್ಲಿ ಹುಣಸೂರು ಮಾದುಪ್ರಸಾದರವರ ‘ಕೂಳಿನ ಕಾಳಗ’ ಕಥಾಸಂಕಲನ ತನ್ನ ಒಡಲಾಳದಲ್ಲಿ ಶೋಷಣೆಯ ವಿರುದ್ಧದ ತಣ್ಣನೆಯ ಹೋರಾಟವನ್ನು ಕಥಾಪ್ರಸಂಗಗಳ ಮೂಲಕ ಮುಂದುವರೆಸಿಕೊಂಡು ಸಾಗಿದೆ. ಕಥೆಯೋದುವಾಗ ಬೇಂದ್ರೆಯ ಅನ್ನಯಜ್ಞದಲ್ಲಿ ಮನಸ್ಸು ಬೇಯುತ್ತದೆ ಕುರುಡು ಕಾಂಚಣ ತಲೆಯೇರಿ ಕುಣಿಯುತ್ತದೆ. ಹಣ ಮತ್ತು ಅಧಿಕಾರ ಮನುಷ್ಯನನ್ನು ಎಷ್ಟೊಂದು ವಿಕಾರಿಯನ್ನಾಗಿ ಮಾಡಿವೆ ಎನಿಸುತ್ತದೆ. ಸಮಾಜವನ್ನು ಕಾಪಾಡುತ್ತವೆ ಎಂದು ನಂಬಿರುವ ದೇವರು ಮತ್ತು ಧರ್ಮ ಕನಸಿನಲ್ಲೂ ಕಾಡುವ ಕೊಳ್ಳಿದೆವ್ವಗಳಾಗಿ ಕಾಣಿಸುತ್ತವೆ. 

ಇವರ ಕತೆಗಳೆಲ್ಲವೂ ಪ್ರಧಾನವಾಗಿ ಗ್ರಾಮೀಣ ಪರಿಸರದ ಹಿನ್ನೆಲೆಯಲ್ಲಿಯೇ ಮೂಡಿಬಂದರೂ ಸಮಕಾಲೀನ ಜಾಗತಿಕರಣದ ಸಂದರ್ಭದಲ್ಲಿಯೂ ಶೋಷಣೆ ಎಂಬುದು ಹೊಸ ವಿಕಾರಾಕಾರಗಳನ್ನು ತನ್ನೊಳಗೆ ಅಡಗಿಸಿಕೊಂಡು ನಜೂಕಿನಲ್ಲಿ ‘ಸರ್ವರಿಗೂ ಸಮಪಾಲು ಸಮಬಾಳು’ ಸೋಗು ಹಾಕುತ್ತಾ ಬಡವರನ್ನು, ಶ್ರಮಿಕರನ್ನು, ಮಹಿಳೆಯರನ್ನು ಮತ್ತು ನಿರ್ಬಲರನ್ನು ತನ್ನ ಸುಖದತೇರು ಎಳೆಯಲು ಬಳಸಿಕೊಂಡಿದೆ ಎಂಬುದನ್ನು ಮನಮುಟ್ಟುವಂತೆ ಚಿತ್ರಿಸುತ್ತಾ ಸಾಗಿವೆ.

ಕತೆಯ ಭಾಷೆ ಸರಳ ಚುರುಕು ಮತ್ತು ಚುಟುಕಾದರೂ ಮಾರ್ಮಿಕತೆಯನ್ನು ಶೋಷಣೆಯ ಗೂಡಾರ್ಥವನ್ನು ಅದು ಸ್ಫುರಿಸುತ್ತದೆ. ಪ್ರತಿಹಂತದಲ್ಲೂ ಕುತೂಹಲವನ್ನು ಮೂಡಿಸುತ್ತಾ ತನ್ನ ಸುತ್ತಲಿನ ವ್ಯವಸ್ಥೆಯ ತಪ್ಪುಗಳನ್ನು ಪ್ರಶ್ನಿಸುವ ಗಟ್ಟಿತನವನ್ನು ಮತ್ತು ಮುಗ್ದತೆಯನ್ನು ಉಳಿಸಿಕೊಂಡಿವೆ. ಕತೆಗಳು ಕತೆಗಾರನು ವಾಸಿಸುವ ಪರಿಸರದ ಸಾಂದ್ರಾನುಭವಕ್ಕೆ ಸಾಕ್ಷಿಯಾಗುತ್ತವೆ ಹಾಗೂ ಸಮಕಾಲೀನ ಸಾಕ್ಷ್ಷಿಪ್ರಜ್ಞೆಯಾಗಿ ನಿಲ್ಲುತ್ತವೆ.

ಸಮಕಾಲಿನ ಮಾನವಜಗತ್ತಿನ ಆಗು ಹೋಗುಗಳಿಗೆ ಸ್ಪಂದಿಸುವುದು ಬರಹಗಾರನ ಕರ್ತವ್ಯ. ಅದರಲ್ಲೂ ಹೃದಯವಂತನಾಗದವನು ಕಥೆಗಾರನಾಗಲಾರ ಅಂತಹ ಕಥೆಗಾರನು ತನ್ನ ಸುತ್ತಲಿನ ಸಾಮಾಜಿಕ ಪರಿಸರ ಕೌಟುಂಬಿಕ ಹಿನ್ನೆಲೆಯಲ್ಲೇ ವಸ್ತು ಆಯ್ಕೆ ಮಾಡಿಕೊಂಡು, ಅದಕ್ಕನುಗುಣವಾಗಿ ಸನಿವೇಶವನ್ನು ಸೃಷ್ಟಿಸಿ ಕೊಂಡಿರುತ್ತಾನೆ. ತನಗೆ ದಕ್ಕಿದ ಅನುಭವಗಳನ್ನೇ ದಾಖಲಿಸುತ್ತಾ ಕಥೆಗಳನ್ನಾಗಿಸುತ್ತಾನೆ. ತನ್ನ ಬದುಕಿನ ಪಯಣದಲ್ಲಿ ಜೀವನ ಮತ್ತು ಸಂಬಂಧಗಳನ್ನು ಸೂಕ್ಷ್ಮಗ್ರಾಹಿಯಾಗಿಯೇ ಪ್ರತಿಯೊಂದು ಅಂಶವನ್ನು ಗಮನಿಸಿ, ಅದಕ್ಕೆ ತನ್ನದೇ ವ್ಯಾಖ್ಯಾನ ಸ್ವರೂಪಗಳನ್ನು ನೀಡುತ್ತಿರುತ್ತಾನೆ. ಹೀಗೆ ತಾನು ಕಂಡುಂಡ ಲೋಕಾನುಭವಗಳನ್ನು ಸಾವಿರಾರು ಕಥೆಗಳನ್ನಾಗಿ ಮಾರ್ಪಡಿಸಿಕೊಳ್ಳುವ ಸಾಮಥ್ರ್ಯವನ್ನು ಅಭ್ಯಾಸದಿಂದ, ಅಧ್ಯಯನದಿಂದ, ಸಹವಾಸದಿಂದ, ಅಲೋಚನಾ ವಿಧಾನಗಳಿಂದ ಲೋಕವನ್ನು ಅರ್ಥೈಸಿಕೊಳ್ಳಲು ತಾನು ಬಳಸಿಕೊಂಡ ಮಾಪನಗಳ ಮೂಲಕ ಧಾರಣೆ ಮಾಡಿಕೊಂಡಿರುತ್ತಾನೆ.

‘ಮಂಟಿಮಾಳ’ ಕಥೆಯಲ್ಲಿ ದೇವರು ಕೊಟ್ಟರೂ ಪೂಜಾರಿ ಕೊಡುವುದಿಲ್ಲ ಎಂಬುದು ಅಕ್ಷರಶಃ ನಿರೂಪಿತವಾಗಿದೆ. ಜೊತೆಗೆ ಸಹ ಮಾನವನನ್ನು  ಜಾತಿಯ ನೆಪ ಮಾಡಿಕೊಂಡು ಬೆಳೆದ ಬೆಳೆಗೆ ಬೆಂಕಿ ಹಾಕುವ ಕ್ರೌರ್ಯ ಮನಮಿಡಿಯುವಂತೆ ಮಾಡುತ್ತದೆ. ನಮ್ಮನ್ನು ಕಾಯಬೇಕಾದ ದೇವರು ಪೂಜಾರಿಯ ಮತ್ತು ಗ್ರಾಮಸ್ಥರ ಮೌಡ್ಯದ ಬೆಂಕಿಯಲ್ಲಿ ದಹಿಸುತ್ತದೆ. ಅಂತೆಯೇ ರಕ್ತದಾನವೂ-ಕುಲದ ಮಾನವೂ ಕಥೆಯಲ್ಲಿಯೂ ಮನುಷ್ಯನ ಜಾತಿಯ ಅಂದಾಭಿಮಾನ ಹಾಗೂ ಮನುಷ್ಯನ ಮನದಲ್ಲಿ ರುದ್ರನರ್ತನ ಮಾಡುವಕ್ರೌರ್ಯವು ಪ್ರಸ್ತುತ ಮರ್ಯಾದ ಹತ್ಯೆಯನ್ನು ಪ್ರತಿನಿಧಿಸುತ್ತದೆ. ಹೀಗೆ ಧಾರ್ಮಿಕ ಮತ್ತು ಸಾಮಾಜಿಕ ಮೌಡ್ಯಗಳು ಓದುಗ ಸಹೃದಯಿಯ ಮನಕಲಕದೆ ಇರದು. ಇದು ಕೇವಲ ಭಾವ ಸ್ಪಂದನೆಯಾಗಿ ಉಳಿಯದೆ ಸಾಮಾಜಿಕ ಬದುಕಿನಲ್ಲಿ ವಾಸ್ತವ ಪ್ರಯೋಗವಾಗಬೇಕಾದ ಆಶಯವನ್ನು ಹೊಂದಿದೆ.

‘ಸೀರೆ’ ಯಲ್ಲಿ ಮನುಷ್ಯ ಸಮಾಜದಲ್ಲಿ ಅನಿಷ್ಠಗಳಾಗಿ ಕಾಡುವ ಸ್ತ್ರೀ-ಪುರುಷ ಅಕ್ರಮ ಸಂಬಂಧವೆಂಬ ಅನುಮಾನಗಳು ಇಡೀಜೀವನವನ್ನು ವಿಷಮ ಸ್ಥಿತಿಯಲ್ಲಿಡುವುದು. ಮಾನಸಿಕ ಬದಲಾವಣೆಯ ಮೇಲಾಟಗಳು ತೀವ್ರತರವಾಗಿ ಕುಟುಂಬದ ಮೇಲೆ ಹಾಗೂ ಸಾಮಾಜಿಕ ಚಲನೆಗಳ ಮೇಲೆ ಕ್ಷಿಪ್ರದಾಳಿ ನಡೆದು ಕುಟುಂಬ ಹಾಗೂ ಸಮಾಜದ ಸ್ವಾಸ್ಥ್ಯ ದುರಂತಕ್ಕೆ ನೂಕಲು ಕಾರಣವಾಗುತ್ತವೆ. ಅಕ್ರಮ ಸಂಬಂಧದ ಅನುಮಾನದ ಬೆಂಕಿ ಮನೆಮನಗಳನ್ನು  ದಹಿಸಬಲ್ಲದು. ಅದರಲ್ಲೂ ಕೌಟುಂಬಿಕ ಜವಾಬ್ಧಾರಿಗಳು ತಂದೆಯಾದವನಿಂದ ಇತರರಿಗೆ ಆದರ್ಶದ ಪಾಠವಾಗುತ್ತದೆ. ಮನೆಯ ಮುಖ್ಯಸ್ಥ ವ್ಯಸನಿಯಾದರೆ, ಮಕ್ಕಳ ಮುಂದೆ ಹೆಂಡತಿಯನ್ನು ಹೀನವಾಗಿ ನಡೆಸಿಕೊಂಡರೆ ಅದರ ಪರಿಣಾಮವೂ ಭಿನ್ನವಾಗಿರುತ್ತದೆ. ಗಂಡನಾದವನಿಗೆ ಹೆಂಡತಿ ಹೊರಗಿನಾವಳಾಗಿ ಕಾಣಬಹುದು ಆದರೆ ಹಡೆದ ಮಕ್ಕಳಿಗಳಲ್ಲ. ತಾಯಿ ಮಕ್ಕಳಿಗೆ ಅದು ಕರುಳಬಳ್ಳಿಯ ಸಂಬಂಧ, ತಾಯಿ ಮಕ್ಕಳ ಸಂಬಂಧ ಅನನ್ಯವಾದುದು. ಆದ್ದರಿಂದ ಮಕ್ಕಳ ಮುಂದೆ ಹೆಂಡತಿಯನ್ನು ಕೀಳಾಗಿ ನೋಡುವುದು ಸಾಧುವಲ್ಲವೆಂಬುದು ‘ಸೀರೆ’ಯಲ್ಲಿ ಭಾವಮಿಡಿಯುವಂತೆ ಮೂಡುತ್ತದೆ. ಗಂಡ-ಹೆಂಡತಿ ಮತ್ತು ಮಕ್ಕಳ ಸಂಬಂಧದ ಸೂಕ್ಷ್ಮಗಳನ್ನು ಮನಃಶಾಸ್ತ್ರೀಯ ಹಿನ್ನೆಲೆಯಲ್ಲಿಯೇ ಗಮನಿಸಬೇಕಾಗುತ್ತದೆ. 

ಪುರುಷಪ್ರಧಾನ ಸಮಾಜದಲ್ಲಿ ಪುರುಷನು ಸ್ತ್ರೀಯಿಂದ ಪಡೆಯಬಹುದಾದ ಸುಖಗಳಿಗೆ ಪ್ರತಿಯಾಗಿ ಸಂಪತ್ತನ್ನು ನೀಡಿದರೆ, ಅದಕ್ಕೆ ಸ್ತ್ರೀ ತೃಪ್ತಳಾಗುವುದಿಲ್ಲ, ಅವಳ ಅಪೇಕ್ಷೆಯೂ ಅದಾಗಿರುವುದಿಲ್ಲ. ಲೈಂಗಿಕಾಂಕ್ಷೆಗಳ ಅನುಭವ ಹೆಣ್ಣು-ಗಂಡುಗಳ ಸಮಾನ ಅಪೇಕ್ಷೆ ಉಪೇಕ್ಷೆಗಳ ಮೇಲೆ ನಿಂತಿರುತ್ತದೆ. ಪುರುಷನಾದವನು ಸ್ತ್ರೀಯ ಮುಂದಿನ ಆಗುಹೋಗುಗಳಿಗೆ ಸ್ಪಂದಿಸುವ ಭರವಸೆ ನೀಡಿದಾಗ ಮಾತ್ರ ಕುಟುಂಬದ ಚಲನೆ ಸರಿಯಾದ ಅರ್ಥ ಪಡೆದು ಕೊಳ್ಳುತ್ತದೆ ಹಾಗೂ ಸಾಮಾಜಿಕ ವ್ಯವಸ್ಥೆಯ ಬೇರು ಗಟ್ಟಿಗೊಳ್ಳುವುದು. ಇದಲ್ಲದೆ ಗಂಡು ಹೆಣ್ಣಿನಲ್ಲಿ ಲೈಂಗಿಕ ಅಪೇಕ್ಷೆಯನ್ನಷ್ಟೆ ಬಯಸಿದರೆ ಸಮಾಜದಲ್ಲಿ ವಿಕೃತ ಪರಿಸ್ಥಿತಿ ನಿರ್ಮಾಣವಾಗುತ್ತದೆ. ಒಪ್ಪಿತ ಸುರತಿ ಅಥವಾ ಲೈಂಗಿಕ ಆಕ್ರಮಣ ಇವೆರಡರ ಪರಿಣಾಮ ಸ್ತ್ರೀಯ ಮೇಲೆ ಆಗುತ್ತದೆ. ಸಮಾಜ ಒಪ್ಪಿತ ಸುರತಿಯ ಜವಾಬ್ದಾರಿಯಾದರೆ, ಆಕ್ರಮಣವು ತೆವಲಿನಪಿಂಡವಾಗಿ ನಾಯಿಪಾಲಾಗುತ್ತದೆ. ಇದು ಅನಾಥಸಮಾಜವನ್ನು ನಿರ್ಮಿಸುತ್ತದೆ. ಇದಕ್ಕೆ ‘ತೆವಲು’ ಸಾಕ್ಷಿಯಾಗಿ ಪ್ರಕಟಗೊಂಡಿದೆ.

ಭರವಸೆ ಹಾಗೂ ಮುರಿದ ಕನಸು ಕಥೆಗಳಲ್ಲಿ ಗ್ರಾಮೀಣ ಪ್ರದೇಶಗಳಲ್ಲಿ ವಿದ್ಯಾಭ್ಯಾಸ ಪಡೆದು ಸರ್ಕಾರಿ ನೌಕರಿ ಅಥವಾ ಇತರ ಉದ್ಯೋಗಗಳನ್ನರಸಿ ಪಟ್ಟಣ ಸೇರಿದ ಕುಟುಂಬಗಳ ಅನುಭವಿಸುವ ಮಾನಸಿಕ ಹಿಂಸೆ ಮತ್ತು ತೊಳಲಾಟಗಳು ಇಂದಿಗೂ ನಮ್ಮನ್ನು ಬೆಚ್ಚಿ ಬೀಳಿಸುತ್ತವೆ. ಶಿಕ್ಷಣ ಮತ್ತು ಉದ್ಯೋಗಗಳು ನಮ್ಮ ಸಂಬಂಧಗಳನ್ನು ಗಟ್ಟಿಗೊಳಿಸಿಕೊಳ್ಳಲೋ ಅಥವಾ ಶಿಥಿಲಗೊಳಿಸಿಕೊಳ್ಳಲೋ ತಿಳಿಯದೆ ಒದ್ದಾಡುವ ಮನಸ್ಥಿತಿಯನ್ನು ಸಮಾಜದಲ್ಲಿ ಕಾಣಬಹುದು ಇಲ್ಲಿ ಮೂರು ತಲೆಮಾರುಗಳ ವಿಭಿನ್ನ ಅಲೋಚನೆಗಳು ಪರಿಸ್ಥಿತಿಯ ಒತ್ತಡದಿಂದ ಮೌನವಾಗಿ ನರಳುತ್ತವೆ.

‘ಉರಿ’ ಮತ್ತು ‘ಕುಳವಾಡಿಕೆ ಕೋಳಿ’ ‘ಸವಣಗುಡ್ಡ’ ಕಥೆಗಳನ್ನು ಸಮಾಜೋ ಮನಃಶಾಸ್ತ್ರೀಯ ಮಾನದಂಡದ ಹಿನ್ನೆಲೆಯಲ್ಲಿಯೇ ಗಮನಿಸಬೇಕು. ಇಲ್ಲಿಯ ನಿರೂಪಣೆಯಲ್ಲಿ ಕಥೆಗಾರ ಗೆಲ್ಲುತ್ತಾ ಹೋಗುತ್ತಾನೆ. ತಾನುತನ್ನ ಸಮಾಜಕ್ಕೆ ಸ್ಪಂದಿಸಿರುವ ಬಗೆ ಅತ್ಯಂತ ಮುಖ್ಯವಾದುದು. ಆಸ್ತಿ ಗಳಿಕೆಗಾಗಿ ಅನೈತಿಕ ಹಾದಿ ಹಿಡಿಯುವುದು, ಮಡಿಲ ಬೆಂಕಿಗೆ ಒಡಲನ್ನು ಸುಟ್ಟಿಕೊಳ್ಳುವುದು, ಸರ್ಕಾರಿ ವ್ಯವಸ್ಥೆ, ಸಾಮಾಜಿಕ ಬದುಕು, ಅಧಿಕಾರ ರಾಜಕಾರಣದ ತಂತ್ರಗಳು, ಮುಕ್ತ ಲೈಂಗಿಕತೆ, ನಯವಾದ ಶೋಷಣೆ ಮತ್ತು ಉಳ್ಳವರ ದೌರ್ಜನ್ಯಗಳ ಶತಶತಮಾನದ ವಾಸನೆ ಹಸಿಹಸಿಯಾಗಿಯೇ ಓದುಗನ ಮೂಗಿಗೆ ಬಡಿಯುತ್ತಾ ಮನಸ್ಸಿಗಿಳಿಯುತ್ತದೆ. ಇವೆಲ್ಲವೂ ವಾಸ್ತವ ಸಮಾಜಕ್ಕೆ ಹಿಡಿದ ಕೈಗನ್ನಡಿಯೇ ಆಗಿದೆ.

‘ಕೂಳಿನ ಕಾಳಗ’ ದಲ್ಲಿ ಮನುಷ್ಯ ಸಮಾಜದೊಳಗಿನ ಸ್ತಿತ್ಯಂತರ ಮತ್ತು ಮನ್ವಂತರಗಳನ್ನು  ಜಾಗತೀಕರಣದ ಹಿನ್ನೆಲೆಯಲ್ಲಿ ಗ್ರಾಮೀಣ ಪರಿಸರದಮೂಲಕ ಪ್ರಸ್ತುತಿ ಪಡಿಸಲಾಗಿದೆ. ಆಧುನಿಕ ಶಿಕ್ಷಣಕೈಗಾರಿಕೀಕರಣ ಹಾಗೂ ನಗರೀಕರಣದ ಪ್ರಭಾವದಿಂದ ಮನುಷ್ಯನ ಭೌತಿಕ ಬದುಕು ಮಾತ್ರ ಬದಲಾಗಿದೆ ಹೊರತು ಆತನ ಮನೋದೋರಣೆಗಳಲ್ಲ ಎಂಬುದರ ವಾಸ್ತವಿಕ ನೆಲೆಯ ಹಿನ್ನೆಲೆಯಲ್ಲಿಯೇ ಕಥೆಗಳು ತಮ್ಮನ್ನು ತಾವು ಅರಳಿಸಿಕೊಂಡಿವೆ. ಉಳ್ಳವರು ಮತ್ತು ಇಲ್ಲದವರ ನಡುವಿನ ಹೋರಾಟ, ದಮನಿತರ ನೋವು, ಸ್ತ್ರೀ ಶೋಷಣೆ, ಜಾಗತೀಕರಣದಿಂದ ಮನಷ್ಯ ಬದುಕಿನಲ್ಲಾದ ಪಲ್ಲಟಗಳ ಪ್ರತಿನಿಧಿಯಾಗಿ ಕಥೆಗಳು ಸಹೃದಯ ಓದುಗರನ್ನು ಹೊಸದೊಂದು ಚಿಂತನೆಗೆ ಹಚ್ಚುತ್ತವೆ. ಇವೆಲ್ಲವೂ ಕಥೆಗಾರನ ಸೂಕ್ಷ್ಮ ಗ್ರಹಿಕೆಗೆ ಸಿಕ್ಕ ಗೆಲುವಾಗಿಯೂ ಸಮಾಜಕ್ಕೆ ತೆರೆದಿಟ್ಟ ಅಲೋಚನೆಗಳಾಗಿಯೂ ಕಂಡು ಬರುತ್ತದೆ.

-ರೇಣುಕ ಪ್ರಸಾದ್ ಕೆ.ಎಸ್., ಸಂಶೋಧಕರು, ಹುಣಸೂರು

Related Books