ಹಿಂಡೆಕುಳ್ಳು

Author : ಅಮರೇಶ ಗಿಣಿವಾರ

Pages 78

₹ 80.00




Year of Publication: 2020
Published by: ವೈಷ್ಣವಿ ಪ್ರಕಾಶನ
Address: ಕೆ ಗುಡದಿನ್ನಿ, ಮಾನ್ವಿ ತಾಲ್ಲೂಕು, ರಾಯಚೂರು ಜಿಲ್ಲೆ
Phone: 9620170027

Synopsys

ಅಮರೇಶ ಗಿಣಿವಾರ ಅವರ ಎರಡನೇ ಕಥಾ ಸಂಕಲನ-`ಹಿಂಡೆಕುಳ್ಳು’, ತಮ್ಮ ಗ್ರಾಮೀಣ ಜನರ ಬಡತನ, ದಾರಿದ್ರ್ಯ, ಕಾಮ, ಮನುಷ್ಯ ದ್ವೇಷ, ಗಂಡು ಅಹಂಮಿಕೆ, ಹಗೆತನ ಇತ್ಯಾದಿ ಪರಿಕಲ್ಪನೆಯ ಚಿತ್ರಣಗಳನ್ನು ಸೂಕ್ಷ್ಮವಾಗಿ ಲೇಖಕರು ನಿರೂಪಿಸಿದ್ದಾರೆ. ಸಾವನ್ನು ರಂಜಿಸಲು ಇಚ್ಛಿಸದ ಕತೆಗಾರರು ಅದನ್ನು ವ್ಯಕ್ತಿಗತ ನೆಲೆಯಲ್ಲಿ ಗ್ರಹಿಸಿ ಕಥೆಗಳನ್ನು ಹೆಣೆದಿದ್ದಾರೆ.

About the Author

ಅಮರೇಶ ಗಿಣಿವಾರ
(01 June 1989)

ಸ್ಪಂದನೀಯ ಕಥೆಗಾರ, ಕವಿ ಅಮರೇಶ ಗಿಣಿವಾರ ಅವರು ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ಗಿಣಿವಾರ ಎಂಬ ಗ್ರಾಮದಲ್ಲಿ 1989 ಜೂನ್ 01 ರಂದು ಜನಿಸಿದರು. ಅವರ ಮೊದಲ ಕವನ ಸಂಕಲನ "ಬಯಲು" 2009 ರಲ್ಲಿ ಪ್ರಕಟಣೆ ಕಂಡಿದ್ದು ಮೊಟ್ಟಮೊದಲ ರಾಜ್ಯ ಮಟ್ಟದ ಯುವ ಕಥಾ ಸ್ಪರ್ಧೆಯಲ್ಲಿ ಬಹುಮಾನ ಹಾಗೂ "ಹಿಂಡೆಕುಳ್ಳು" ಕಥೆಗೆ ಸಂಗಾತ ಬಹುಮಾನಗಳು ಲಭಿಸಿದೆ.   ಕರ್ನಾಟಕ ವಿಶ್ವವಿದ್ಯಾಲಯದಿಂದ ಬಾಹ್ಯ ಶಿಕ್ಷಣ ಪದವಿ ಪಡೆದಿದ್ದಾರೆ. 2008ರಲ್ಲಿ ಅಂಚೆ ಇಲಾಖೆಯಲ್ಲಿ ಅಂಚೆ ಸಹಾಯಕನಾಗಿ ನೇಮಕಗೊಂಡು ಪ್ರಸ್ತುತ ತುರುವಿಹಾಳ ಅಂಚೆ ಕಛೇರಿಯಲಿ ಉಪ ಅಂಚೆ ಪಾಲಕನಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಅವರ ಮ್ತತಿತರ ಕತೆ ...

READ MORE

Conversation

Reviews

ಹಿಂಡೆಕುಳ್ಳು ಕೃತಿಯ ವಿಮರ್ಶೆ

ಇದು ಈ ಲೇಖಕನ ಮೊದಲ ಕಥಾಸಂಕಲನವಾಗಿದ್ದು, ಇದರಲ್ಲಿ ಒಟ್ಟು ಹತ್ತು ಕಥೆ ಗಳಿವೆ. ಲೇಖಕರು ರಾಯಚೂರು ಜಿಲ್ಲೆಯವರಾಗಿದ್ದು ಅಲ್ಲಿಯ ಗ್ರಾಮೀಣ ಭಾಗದ ಕಡುಬಡವರ ಜನಜೀವನವನ್ನು ಅಲ್ಲಿನ ಗ್ರಾಮೀಣರ ಆಡುಭಾಷೆಯಲ್ಲೇ ಕಥೆಗಳಲ್ಲಿ ತೆರೆದಿಟ್ಟಿದ್ದಾರೆ.. ಸಂಕಲನದ ಶೀರ್ಷಿಕೆಯೇ ಸೂಚಿಸುವಂತೆ ಈ ಕಥೆಗಳು ನಾವು ಕಾಣದ ಬೇರಯೇ ಜಗತ್ತಿನ ಚಿತ್ರಣವನ್ನು ನೀಡುತ್ತದೆ. 

ಮೊದಲ ಕಥೆ 'ಶಿವನ ಕುದುರೆ' ಯಲ್ಲಿ ನಿರೂಪಕನಾದ ಮಗ ತನ್ನ ಅಪ್ಪ ಎಷ್ಟು ದುಡೀತಿದ್ದನೋ ಅಷ್ಟೇ ಬಡೀತಿದ್ದ ಎಂದನ್ನುತ್ತಾನೆ. ಅಪ್ಪ ಕಾಮ, ದರ್ಪ, ದುಡಿಮೆ ಎಲ್ಲವನ್ನುಮಿತಿಮೀರಿ ಅನುಭವಿಸಿ, ಕೊನೆಗೆ ಲಕ್ವ ಹೊಡೆದು ಪರಾಧೀನನಾಗುತ್ತಾನೆ. ಇಂತಹ ಅಪ್ಪ ಶೌಚಕ್ಕೆ ಹೋಗಬೇಕಾದಾಗ ಕೂಗಿಕೊಂಡು ರಾಮ ಎಂಬುವವನ ಹೆಗಲೇರುತ್ತಾನೆ. ಆಗ ಅಪ್ಪ 'ಮಿಡತೆ' ಕಂಡಂಗ ಕಾಣಾನ, ಆಗ ಅಮ್ಮ ಹಿಂದಿನಿಂದ ಬಂದು ನೀರು ತೆಗೊಂಡು ಹೋಗ್ತಾಳ' ಎಂದು ಮಗ ಹೇಳ್ತಾನೆ.

ಮಿಡತೆಗೆ 'ಶಿವನ ಕುದುರೆ' ಎಂದು ಹೇಳುವುದರಿಂದ ಈ ಕಥೆಗೆ ಆ ಶೀರ್ಷಿಕೆ ನೀಡಿರುವುದು ಅರ್ಥಪೂರ್ಣ. 

 'ಹಿಂಡೆಕುಳ್ಳು ಕಥೆಯಲ್ಲಿ 'ಗಂಡ ಅಂದ್ರ ಅವ ಏನಂತ ಪೂರ್ತಿ ತೋರಿಸಿಕೊಟ್ಟಾನ? ಎಂಬಂತೆ ಬದುಕಿದ ಅಪ್ಪ ಸತ್ತಾಗ, ಮಗಳು “ಅಪ್ಪ ಸತ್ತಿದ್ದು ಬೇಸಾಯ್ತು ಅಲಮಾ” ಎಂದು ಕೇಳುತ್ತಾಳೆ. ಅವನನ್ನು ಮಣ್ಣುಮಾಡಿದ ಮೂರುದಿವಸಕ್ಕೆ ಆ ಜಾಗದಲ್ಲಿ ಅವನಿಗೆ ಇಷ್ಟವಾದದ್ದನ್ನು ಇಡಬೇಕೆಂದು ಫಕೀರಪ್ಪ ಮಾವ ಬಡಿಗಿ ಹಿಡಕೊಂಡು ಬಂದು ಹೇಳಿದಾಗ, ಸತ್ತುಹೋದ ಗಂಡ ಸಂದಿಯಲ್ಲಿ ತುರುಕಿಟ್ಟಿದ್ದ 'ಸೂಪರ್ ಪಾಕೀಟ'ನ್ನೇ ಅಲ್ಲಿಡುವುದು ಮತ್ತು “ಇವನು ಮ್ಯಾಕ ಹೋಗ್ಯಾನ, ಅಲ್ಲಿಯೂ ಯಾರಿಗೂ ರೋಗ ಹಚ್ಚಬಾರದು” ಎಂದು ಹೇಳುವುದು ಮಾತ್ರ ಮಾರ್ಮಿಕವಾಗಿದೆ. 

ಅಣ್ಣತಮ್ಮಂದಿರ ಹಗೆತನ, ದಿನನಿತ್ಯ ಕಿಟಕಿಯಿಂದ ತೂರಿ ಬರುವ ಜಗಳದ ಮಾತುಗಳು, ಅಣ್ಣನ ಮಗಳ ಮದುವೆಯನ್ನು ತಮ್ಮನ ಹೆಂಡತಿ ಉಪಾಯವಾಗಿ ತಪ್ಪಿಸುವುದು ಇವೆಲ್ಲವನ್ನೂ 'ಗೋಡೆಗಳ ಸೇಡು'ವಿನಲ್ಲಿ ಕಥೆಯಾಗಿಸಿದ್ದಾರೆ. 'ಪಾತ್ರಧಾರಿ' ಕಥೆ ಸಂಕಟ, ವಿಷಾದದ ಕಥೆಗಳನ್ನು ಓದಿದ ನಂತರ ಹಾಸ್ಯದ ಮೂಲಕ ಓದುಗರ ಮನಸ್ಸನ್ನು ಹಗುರ ಮಾಡುವ (ಕಾಮಿಕ್ ರಿಲೀಫ್ ನೀಡುವ) ಕಥೆ, ಪಾತ್ರಧಾರಿಯೊಬ್ಬ ಸಂಭಾಷಣೆಯನ್ನು ತನ್ನ ಬದುಕಿಗೆ ಮತ್ತು ತನ್ನ ಸುತ್ತಮುತ್ತಲಿನವರ ಬದುಕಿಗೆ ಅನ್ವಯಿಸಿಕೊಂಡು ಹೇಳುವ ಮಾತುಗಳು ಸ್ವಾರಸ್ಯಕರವಾಗಿವೆ. ಜಾಗತೀಕರಣ, ಆಧುನಿಕತೆಗೆ ಆ ಸೀಮೆಯ ಗ್ರಾಮೀಣ ಜನರು ಹೇಗೆ ಒಗ್ಗಿಕೊಳ್ಳುತ್ತಿದ್ದಾರೆ ಎಂಬುದನ್ನು 'ಮನೆ ನಂ.೮೪', 'ನಶೀಪುಡಿ', 'ವಾಪಸ್ಸು ಬಂದ ಪತ್ರ', 'ಹಳ್ಳ ತೋರಿಸಿದರು? ಕಥೆಗಳಲ್ಲಿ ನೋಡಬಹುದು. ನೀರಾವರಿ ಸೌಲಭ್ಯ ಕೊಡ್ತೀವಿ ಎಂದು ಜಮೀನು ಕಿತ್ತುಕೊಳ್ಳುವಂತಹ ಕ್ರೌರ್ಯ, ದಲ್ಲಾಳಿಗಳಿಂದ ಶೋಷಣೆಗೊಳಗಾಗುವ ಉಣ್ಣೆ ನೇಯುವ ಹೆಂಗಸರ ಕಷ್ಟ, ನಕ್ಸಲೈಟ್ ಆಗಿ ಕಾಣದಾಗುವ ಯುವಕನ ಕಥೆ, ಪ್ರೀತಿ ಪ್ರೇಮ ಇವೆಲ್ಲಾ ಇಲ್ಲಿನ ಪ್ರಾದೇಶಿಕ ಭಾಷೆಯಲ್ಲಿ ಸಶಕ್ತವಾಗಿ, ಸಹಜವಾಗಿ ಮೂಡಿಬಂದಿವೆ. ಪಿತೃಪ್ರಧಾನ ವ್ಯವಸ್ಥೆ ನಮ್ಮ ಸಮಾಜದಲ್ಲಿ ಎಷ್ಟು ಆಳವಾಗಿ ಬೇರುಬಿಟ್ಟಿದೆ ಎಂಬುದು ಬಹುತೇಕ ಎಲ್ಲಾ ಕಥೆಗಳಲ್ಲಿ ಅನಾವರಣಗೊಂಡಿದೆ. 

 ಈ ಕಥೆಗಳನ್ನು ಹೆಣೆದಿರುವ ಆಡುಭಾಷೆಯ ಪದಗಳು, ನುಡಿಗಟ್ಟುಗಳು ಎಷ್ಟು ದಟ್ಟವಾಗಿವೆಯೆಂದರೆ ಅವು ಆ ನೆಲದ್ದೇ ಕಥೆಗಳೆನ್ನುವಷ್ಟು ಕನ್ನಡದ ಬೇರೆ ಪ್ರದೇಶಗಳ ಓದುಗರಿಗೆ ಈ ಪದಗಳ ಅರ್ಥ ತಿಳಿಯಲಾರದು, ಸರಿಯಾಗಿ ಅರ್ಥಮಾಡಿಕೊಳ್ಳಬೇಕೆಂದರೆ ಅವರು ಮತ್ತೊಮ್ಮೆ ಓದಬೇಕಾಗಬಹುದು. ಸಂಕಲನದಲ್ಲಿ ಆ ಪದಗಳಿಗೆ ಅರ್ಥವನ್ನು ಕೊನೆಯಲ್ಲಿ ಕೊಡಬಹುದಿತ್ತು. ಪ್ರಾದೇಶಿಕ ಭಾಷೆಯೇ ಈ ಕಥೆಗಳ ಜೀವಾಳವಾದರೆ, ಇದೇ ಅಂಶ ಈ ಕಥೆಗಳ ಮಿತಿಯೂ ಆಗಬಹುದು. ಹಾಗಾಗಿ ಕನ್ನಡದ ಎಲ್ಲಾ ಓದುಗರನ್ನು ಸುಲಭವಾಗಿ ಸೆಳೆಯಲಾರದು. ನಮಗೆ ತಿಳಿಯದ ಭಾಷೆಯನ್ನು ಅರ್ಥಮಾಡಿಕೊಳ್ಳುವ ಹುಡುಕಾಟದ ಮನಸ್ಸುಗಳಿಗೆ ಈ ಕಥೆಗಳು ರುಚಿಸುವುದರಲ್ಲಿ ಸಂಶಯವಿಲ್ಲ.

(ಕೃಪೆ: ಹೊಸ ಮನುಷ್ಯ ಫೆಬ್ರವರಿ 2021, ಬರಹ- ಕೆ. ಪದ್ಮಾಕ್ಷಿ)

Related Books