ದೃಷ್ಟಿಕೋನ -ರವಿಶಂಕರ ಪಾಟೀಲ ಅವರ ಕಥಾ ಸಂಕಲನ. ಒಟ್ಟು ಹತ್ತು ಕಥೆಗಳಿವೆ. ಇಲ್ಲಿಯ ಕಥೆಗಳ ಮುಖ್ಯ ಪ್ರಜ್ಞೆ ಇರುವುದು ವಸಾಹತುಶಾಹಿ ಆಡಳಿತದ ಬೆಳವಣಿಗೆಯ ಫಲವಾಗಿ ಭಾರತದಲ್ಲಿ ಎದುರಾದ ‘ಆಧುನಿಕತ’ಗೆ ನಮ್ಮ ಪರಂಪರೆಯು ಪ್ರತಿಸ್ಪಂದಿಸಿದ ರೀತಿ ಮತ್ತು ಅದರ ಮುಂದುವರಿಕೆಯಾದ ಇತರ ಸವಾಲುಗಳ ಚರ್ಚೆ. ಗ್ರಾಮ ಮತ್ತು ನಗರ ಬದುಕುಗಳ ನಡುವಿನ ಸಂಘರ್ಷ, ದ್ವಂದ್ವ, ಬಡತನ, ಕಾಮ, ಬಂಡವಾಳಶಾಹಿ ಸವಾಲು, ಯೌವ್ವನದ ಪ್ರಶ್ನೆಗಳು- ಹೀಗೆ ಹತ್ತು ಹಲವು ಪ್ರಶ್ನೆಗಳನ್ನು ಎತ್ತುವ ಪ್ರಯತ್ನ ಇಲ್ಲಿಯ ಕಥೆಗಳ ಉದ್ಧೇಶವಾಗಿದೆ. “ವಾಸ್ತವವಾದೀ ಕಥನದ ಜೊತೆ ಜೊತೆಗೆ ಅಸ್ತಿತ್ವವಾದೀ ಪ್ರಶ್ನೆಯೂ ಬದುಕಿನ ಮುಖ್ಯ ತುರ್ತು; ತರ್ಕ” ಎನ್ನುವುದು ಕೃತಿಯ ಲೇಖಕ ರವಿಶಂಕರ ಪಾಟೀಲರ ಅಭಿಪ್ರಾಯ.
ನನಗಿಂತಲೂ ದುಃಖಿತರು ಈ ಪ್ರಪಂಚದಲ್ಲಿ ಇರಬಹುದಲ್ಲಾ ಎಂದು ನನ್ನನ್ನು ತಾನೇ ಹುಂಬನಂತೆ ಸಂತೈಸಿಕೊಂಡೆ. ಎಲ್ಲೂ ನೆಲೆಕಾಣದೆ ನೆಮ್ಮದಿಯಂತೂ ಸತ್ತೇಹೋದ ಮೇಲೆ ಅದೇಕೋ ನನ್ನವರನ್ನು ನೋಡಬೇಕೆನ್ನಿಸಿ ಓಡೋಡಿ ಮನೆಗೆ ಬಂದೆ. ಮನೆಯವರು ನನ್ನನ್ನು ಕಂಡಿದ್ದೇ ತಬ್ಬಿ ತಬ್ಬಿ ಅತ್ತರು. ನನಗ್ಯಾಕೋ ಅಳುವೇ ಬರದಾಗಿ ಬಿಟ್ಟಕಣ್ಣು ಬಿಟ್ಟಂತಾಗಿ, ಅವರನ್ನೇ ದಿಟ್ಟಿಸಿದೆ. ಅದೇಕೋ ಅವರೆಲ್ಲಾ ನನಗೆ ನಿಜಕ್ಕೂ ‘ನನ್ನವರೇ’ ಎಂತೆನ್ನಿಸಿ ನಾನೂ ಅವರನ್ನು ತಬ್ಬಿ ಅಳಬೇಕೆನಿಸಿತಾದರೂ, ಅಳು ಬರದೇ ಸುಮ್ಮನಾದೆ- ಎಲ್ಲೋ ನೋಡುತ್ತಾ. ಊಟಕ್ಕೆ ಕೊಟ್ಟರು. ರುಚಿಸದಿದ್ದರೂ ಅವರಿಗೆ ನೋವಾಗದಿರಲೆಂದು ಒಂದೆರಡು ತುತ್ತು ನುಂಗಬೇಕೆನ್ನಿಸಿ ನುಂಗಿಕೊಂಡೆ. ‘ಉಪವಾಸ’ ಎಂಬ ಪದಕ್ಕೆ ಅರ್ಥ ಸಿಕ್ಕ ಖುಷಿಯಲ್ಲಿ ಮತ್ತೆರಡು ತುತ್ತು ನುಂಗಿದೆ. ಮತ್ತೂ ತಿನ್ನಬೇಕೆನ್ನಿಸಿ ಇನ್ನೂ ಎರಡು ತುತ್ತು ತಿಂದೆ. ತಪ್ಪಿಸಿಕೊಂಡ ಮಗು ಸಂತೆಯ ಇನ್ನಾವುದೋ ಮೂಲೆಯಲ್ಲಿ ಸಿಕ್ಕ ಖುಷಿಯಂತೆ, ಅಮ್ಮ ನನ್ನನ್ನು ಅಕ್ಕರೆಯಿಂದ ಎಂಬಂತೆ ದೃಷ್ಟಿಸುತ್ತಾ ಕೂತಳು. ಅವಳ ಕಣ್ಣಲ್ಲಿ ಉಕ್ಕಿಬರುತ್ತಿದ್ದ ಕಣ್ಣೀರು ಮತ್ತು ಮಮತೆಯನ್ನು ನಾನು ಹೇಳಲಾರೆ. ಅವಳ ಅಂದಿನ ಆ ನೋಟದಲ್ಲಿ ಪ್ರಪಂಚದ ಅಷ್ಟೂ ತಾಯಂದಿರನ್ನು ಕಂಡಂತೆನ್ನಿಸಿ, ಅವಳನ್ನೇ ದೃಷ್ಟಿಸಿದ್ದೆ. ಅವಳ ಕಣ್ಣುಗಳು ನನ್ನನ್ನು ಏನೋ ಕೇಳುವಂತಿದ್ದವು. ಕೇಳುವಂತಿದ್ದರೆ ಕೇಳಲಿ ಎಂಬಂತೆ ನಾನು ನೆಲನೋಡಿಕೊಂಡಿದ್ದೆ. (‘ಸ್ತಬ್ಧ’ ಕಥೆಯಿಂದ)
©2021 Bookbrahma.com, All Rights Reserved