ಎಚ್ಚೆ ಹೋಮೋ: ನೋಡಿ ಈ ಮನುಷ್ಯನನ್ನು

Author : ಬಿ. ಜನಾರ್ದನ ಭಟ್

Pages 172

₹ 150.00
Year of Publication: 2020
Published by: ರೂಪ ಪ್ರಕಾಶನ
Address: ನಂ.2406, 2407/ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ, ಕೆ.ಆರ್.ಮೊಹಲ್ಲಾ, ಮೈಸೂರು-570004,
Phone: 9342274331

Synopsys

ಎಚ್ಚೆ ಹೋಮೋ: ಈ ಮನುಷ್ಯನನ್ನು ನೋಡಿ - ಕವಿ ಬಿ. ಜನಾರ್ದನ ಭಟ್ ಅವರ ಕಥಾ ಸಂಕಲನ. ಈ ಶೀರ್ಷಿಕೆಗೆ ಕೆ. ವಿ. ತಿರುಮಲೇಶ್ ಅವರ ಕವಿತೆಯೊಂದರ ಪ್ರೇರಣೆಯಿದೆ. ಎಚ್ಚೆ ಹೋಮೋ: ಈ ಮನುಷ್ಯನನ್ನು ನೋಡಿ ಎನ್ನುವ ಈ ಕವಿತೆ ಅವರ ಅರಬಿ ಸಂಕಲನದಲ್ಲಿದೆ. ಮೂಲತಃ ಎಚ್ಚೆ ಹೋಮೋ ಎನ್ನುವ ನುಡಿಯನ್ನು ನುಡಿದವನು, ರೋಮನ್ ಗವರ್ನರ್ ಪಿಲಾತ; ಏಸುವಿನ ವಿಚಾರಣೆಯ ಸಂದರ್ಭದಲ್ಲಿ ಅವನನ್ನು ತೋರಿಸುತ್ತಾ ಹೀಗಂದಿದ್ದನಂತೆ. Ecce Homo ಎನ್ನುವ ನುಡಿಗಟ್ಟನ್ನು ಫ್ರೆಡರಿಕ್ ನೀಟ್ಷೆ ತನ್ನ ಆತ್ಮಚರಿತ್ರೆಯ ಶೀರ್ಷಿಕೆಯಾಗಿ ಬಳಸಿದ. ತಿರುಮಲೇಶರ ಕವಿತೆಯ ಶೀರ್ಷಿಕೆಯ ಪ್ರೇರಣೆಯಿಂದ ನಾನು ಒಂದು ಕತೆಗೆ ನೋಡಿ ಈ ಮನುಷ್ಯನನ್ನು ಎಂಬ ಶೀರ್ಷಿಕೆ ಇರಿಸಿದ್ದೆ. ಈ ಸಂಕಲನದಲ್ಲಿಯೂ ಆ ಕತೆ ಇದೆ. ಕಥಾಸಂಕಲನಕ್ಕೆ ಶೀರ್ಷಿಕೆ ಕೊಡುವಾಗ ಎಚ್ಚೆ ಹೋಮೋ ಎನ್ನುವ ಮೂಲ ನುಡಿಗಟ್ಟನ್ನು ಕೂಡ ಅದರ ಕನ್ನಡ ಅನುವಾದಕ್ಕೆ ಸೇರಿಸಿಕೊಂಡಿದ್ದೇನೆ. ಕತೆಗಳ ಬರವಣಿಗೆಯಲ್ಲಿ ನಾನು ಹಿಂದಿನಿಂದಲೂ ನನ್ನದೇ ಆದ ದಾರಿಯನ್ನು ಹಿಡಿಯಲು ಪ್ರಯತ್ನಿಸುತ್ತಾ ಬಂದಿದ್ದೇನೆ. ಅಗತ್ಯವಿರುವಲ್ಲಿ ಫ್ಯಾಂಟಸಿಯನ್ನು ಬಳಸಲು ನನಗೆ ಹಿಂಜರಿಕೆಯಿಲ್ಲ, ಆದರೆ ಪ್ರತಿ ಬಾರಿಯೂ ಅದನ್ನೇ ಬಳಸಲು ಕೂಡ ನಾನು ಪ್ರಯತ್ನಿಸುವುದಿಲ್ಲ. ಭಾರತೀಯ ಕಥನ ಪರಂಪರೆಯಲ್ಲಿ ಫ್ಯಾಂಟಸಿ ಆಗಾಗ ಬಳಸಲ್ಪಡುತ್ತಿದ್ದ ತಂತ್ರ. ಸುಲಭವಾಗಿ ಈಗ ನಾವು ಬಳಸಲಾಗದು ಎನ್ನುವುದೂ ನಿಜವೇ.

ಈ ಸಂಕಲನದ ಕತೆಗಳ ವಸ್ತುಗಳ ಬಗ್ಗೆ ಹೇಳುವುದಿದ್ದರೆ, ಇತಿಹಾಸ ಮತ್ತು ವರ್ತಮಾನಗಳ ಮುಖಾಮುಖಿ ಆಗುವುದು ಮತ್ತು ಆಗದಿರುವುದು ಎರಡೂ ನನಗೆ ಮುಖ್ಯ ಅನಿಸುತ್ತದೆ. ಎಂದು ಸ್ವತಃ ಲೇಖಕ ಬಿ. ಜನಾರ್ದನ ಭಟ್ ಅಭಿಪ್ರಾಯಪಡುತ್ತಾರೆ. 

 

About the Author

ಬಿ. ಜನಾರ್ದನ ಭಟ್

ಸಾಹಿತಿ ಡಾ. ಬಿ.ಜನಾರ್ದನ ಭಟ್ ಅವರದು ಬಹುಮುಖ ಪ್ರತಿಭೆ. ಅವರು ಕಾದಂಬರಿಕಾರರಾಗಿ, ಕಥೆಗಾರರಾಗಿ, ವಿಮರ್ಶಕರಾಗಿ, ಅಂಕಣಕಾರರಾಗಿ ತಮ್ಮ ಛಾಪನ್ನು ಮೂಡಿಸಿದ್ದಾರೆ. ಅವರ ಸಾಹಿತ್ಯಾನುಸಂಧಾನ ಬಹುಸೂಕ್ಷ್ಮವಾದುದು. ಬಹುಭಾಷಿಕ, ಬಹುಶ್ರುತ ವಿದ್ವಾಂಸರೂ ಸೃಜನಶೀಲ ಲೇಖಕರೂ ಆಗಿರುವ ಭಟ್ ಅವರದು ಸ್ಪೋಪಜ್ಞತೆಯ ಹಾದಿ. ತಮ್ಮ ಕೃತಿಗಳಲ್ಲಿ ಹೆಚ್ಚಿನ ಸ್ವಂತಿಕೆಯ ಛಾಪನ್ನು ಒತ್ತುತ್ತಾ ಬಂದಿರುವ ಡಾ. ಜನಾರ್ದನ ಭಟ್ ಅವರು ಸಮಕಾಲೀನ ಕನ್ನಡದ ಹೆಸರಾಂತ ಲೇಖಕರಲ್ಲಿ ಒಬ್ಬರು. ಭಟ್ ಅವರ ಹೆಚ್ಚಿನ ಕೃತಿಗಳು ಆಳ ಮತ್ತು ಸಂಕೀರ್ಣತೆಯನ್ನು ಹೊಂದಿರುವುದು ವಿಶೇಷ. ವಿದ್ವತ್ತು ಮತ್ತು ಸೃಜನಶೀಲತೆ ಎರಡನ್ನೂ ಮೈಗೂಡಿಸಿಕೊಂಡಿರುವ ಬೆಳ್ಮಣ ನ ಡಾ. ಬಿ.ಜನಾರ್ದನ ...

READ MORE

Reviews

ಎಚ್ಚೆ ಹೋಮೋ: ನೋಡಿ ಈ ಮನುಷ್ಯನನ್ನು ಕೃತಿಯ ವಿಮರ್ಶೆ

ಈಚೆಗೆ ಮಾಸ್ತಿ ಪ್ರಶಸ್ತಿಗೆ ಪಾತ್ರರಾದ ಡಾ. ಬಿ. ಜನಾರ್ದನ ಭಟ್ಟರು ತಾವು ಸವ್ಯಸಾಚಿ ಬರಹಗಾರರೆಂದು ಅವರ ಕಥಾ ಸಂಕಲನ, ಕಾದಂಬರಿ, ವಿಮರ್ಶೆ, ಸಂಪಾದನೆಗಳ ಮೂಲಕ ಸ್ಥಾಪಿಸಿದ್ದಾರೆ. ಇದೀಗ ಅವರ ಹೊಸ ಕಥಾ ಸಂಕಲನ ಪ್ರಕಟಗೊಂಡಿದ್ದು, ಅದರಲ್ಲಿ ಹಲವು ಕಥೆಗಳು ಆಸಕ್ತಿ ಹುಟ್ಟಿಸುತ್ತವೆ. ಹೆಣ್ಣು, ಹೊನ್ನು ಮತ್ತು ಮಣ್ಣುಗಳು ಅನಾದಿ ಕಾಲದಿಂದಲೂ ಮನುಷ್ಯರನ್ನು ನಿರಂತರವಾಗಿ ವಿವಿಧ ರೂಪಗಳಲ್ಲಿ ಕಾಡುತ್ತಲೆ ಬಂದಿವೆ. ವಚನಕಾರರೇನೋ ಅವು ಮಾಯೆಯಲ್ಲಿ ಮನದ ಮುಂದಣ ಆಶೆಯೇ ಮಾಯೆ ಎಂದರು. ಅವರು ಸಂತರಾದ್ದರಿಂದ ಅವರ ನಿಲುವು ಅವರಿಗೆ ಮಾತ್ರ ಅನ್ವಯಿಸುತ್ತದೆ ನಮ್ಮಂತಹ ಸಾಮಾನ್ಯರಿಗಲ್ಲ, ಅವುಗಳ ಆಶ ಪ್ರಪಂಚದಲ್ಲಿ ಇತಿಹಾಸವನ್ನೇ ನಿರ್ಮಿಸಿದೆ. ಅಂದ ಮೇಲೆ ಕತೆಗಾರನಿಗೆ ಅವುಗಳಿಗಿಂತ ದೊಡ್ಡ ವಸ್ತು ಯಾವುದು, ಅವಕ್ಕೆ ಸಿಕ್ಕಿ ನರಳುವ ಸಾಮಾನ್ಯ ಮನುಷ್ಯನ ಪಾಡು ಕತೆಗಾರರಂತೆ ಈ ಲೇಖಕರನ್ನೂ ಕಾಡಿದೆ. ಆದರೆ ಅವರು ఎల్లా ಅದನ್ನು ಅಭಿವ್ಯಕ್ತಿಸಲು ಬಳಸಿದ ವಿಧಾನ ಅವರನ್ನು ಉಳಿದ ಲೇಖಕರಿಗಿಂತ ಭಿನ್ನರನ್ನಾಗಿಸುತ್ತದೆ. ಅನನ್ಯತೆಯನ್ನು ಸಾರುತ್ತದೆ.

ಅದಕ್ಕೆ ಈ ಕಥೆಗಾರರು ವಿವಿಧ ವಿನ್ಯಾಸಗಳನ್ನು ಬಳಸುತ್ತಾರೆ. ಅವುಗಳು ನಾಲ್ಕು, ಅವು: ಪರಂಪರೆ ಮತ್ತು ಮನುಷ್ಯ, ಇತಿ ಹಾಸ ಮತ್ತು ಮನುಷ್ಯ, ತಲೆಮಾರುಗಳ ಅಂತರ ಹಾಗೂ ಪ್ರಾದೇಶಿಕ ಸೊಗಡು ನೆಲೆಯಿಂದ ಇವುಗಳ ವ್ಯಾಖ್ಯಾನ ಮೊದಲನೆಯದಕ್ಕೆ ಉದಾಹರಣೆ ಮೊದಲ ಕತೆ 'ದೂರು ದುರ್ಬಲ ಕುಮಾರ... ಇದರಲ್ಲಿ ಅವನ ತಂದೆ ಪರಂಪರೆ ಯಿಂದ ಶಾನುಭೋಗರು. ಆದರೆ ಆಧುನಿಕ ಕಾಲದಲ್ಲಿ ಆದ ಬದಲಾವಣೆ ಅದನ್ನು ಬದಲಿಸಿದೆ. ಅದು ಯೋಗ್ಯರಿಗೆ ಮಾತ್ರ ದಕ್ಕುತ್ತದೆಯ ವಿನಾ ಕೇವಲ ಪರಂಪರೆಯ ವಾರಸುದಾರರಿಗೆ ಅಲ್ಲ, ಗಿಳಿಪಾಠ ಕಲಿತ ದೂರು ದುರ್ಬಲ ಕುಮಾರನಿಗೆ ಇದು ವ್ಯವಸ್ಥೆ ಸರಿ ಇಲ್ಲದ ಪರಿಣಾಮ ಅನಿಸುತ್ತದೆ. ಅದಕ್ಕಾಗಿ ಅವನು ನಕ್ಸಲೈಟ್ ಆಗಲು ಹೋಗಿ ವಿಫಲನಾದ. ಅದು ಅವನನ್ನು ರೋಗಿಯನ್ನಾಗಿಸುತ್ತದೆ. ಅದಕ್ಕೆ ಚಿಕಿತ್ಸೆ ನೀಡಲು ಬಂದ ಡಾಕ್ಟರ್ ಅವನ ಕಾಯಿಲೆ ಸ್ಪಷ್ಟವಾಗದೆ ಅವರು ಬೆವರುವುದು ಇವನದು. ವಾಸಿಯಾಗದ ಕಾಯಿಲೆ' ಎನ್ನುವುದಕ್ಕೆ ನಿದರ್ಶನ.

ಎರಡನೆಯ ಇತಿಹಾಸ ಆಧರಿಸಿದ ಕತೆಯಲ್ಲಿ ಆಳುಪರ ವಂಶಕ್ಕೆ ಸೇರಿದ ಕೊನೆಯ ಕೊಂಡಿ ಎನಿಸಿಕೊಂಡ ಗಿರಿಯಪ್ಪನ ಸ್ಥಿತಿ ಹೇಗಿದೆ ಎಂದರೆ ಅವನಿಗೆ ಊಟಕ್ಕೆ ಗತಿ ಇಲ್ಲದೆ ಅವನನ್ನು ನೋಡಲು ಬಂದವರು ಅವನಿಗೆ ಇನ್ನೂರು ರೂ ಕೊಟ್ಟು ಊಟ ಮಾಡಲು ಹೇಳಿ ಹೋಗುವ ವೈಪರೀತ್ಯ.

 ಚಪಡೇನ ಲಿಖಿತೆ: ಈ ಕಥೆಯು ನಮ್ಮ ಶಿಕ್ಷಣ ಕ್ಷೇತ್ರಕ್ಕೆ ಹಿಡಿದ ರೋಗಗ್ರಸ್ತ ಸ್ಥಿತಿಗೆ ಕನ್ನಡಿಹಿಡಿಯುತ್ತದೆ. ಅದನ್ನು ಇತಿಹಾಸ ಮತ್ತು ಸಂಶೋಧನೆಗಳ ಪರಿಪ್ರೇಕ್ಷ್ಯದಲ್ಲಿಟ್ಟು ಚಿತ್ರಿಸಿದ್ದಾರೆ. ಇಲ್ಲಿ ಬರುವ ಶಿಷ್ಯ ಸಂಶೋಧನೆಯ ಹೆಸರಿನಲ್ಲಿ ಅವೈಜ್ಞಾನಿಕ ವಿಧಾನಗಳನ್ನು ಅನುಸರಿಸಿದರೆ, ಅವನ ಗುರು ತಾನೇ ಶಾಸನಗಳನ್ನು ಬರೆದು ವಿ.ವಿ. ಧನಸಹಾಯ ಆಯೋಗದ ಕಣ್ಣಿಗೆ ಮಣ್ಣೆರಚಿ ಅವರಿಂದ ಹಣ ವಸೂಲಿ ಮಾಡುವುದರಲ್ಲಿ ನಿಮ. ಒಂದೇ ಮಾತಿನಲ್ಲಿ ಹೇಳುವುದಾದರೆ 'ಚೋರ ಗುರುವಿಗೆ ತಕ್ಕ ಚಂಡಾಳ ಶಿಷ್ಯ'. ಹೆಣ್ಣಿನ ಹುಚ್ಚು ಹಿಡಿದು ಅವರನ್ನು ದಾಳಗಳನ್ನಾಗಿ ಮಾಡಿಕೊಂಡವರ ಹಲವು ಕತೆಗಳು ಇಲ್ಲಿ ಇವೆ. ಜಿ.ಪೆ.ಜಿ. ಎನ್ನುವ ಮಾಜಿ ಸೈನಿಕ ಶತ್ರುಗಳ ವಿರುದ್ಧ ಹೋರಾಡಿ ಗೆದ್ದರೂ, ಪಂಚೇಂದ್ರಿಯಗಳ ವಿರುದ್ಧ ಗೆಲ್ಲಲಾರದ ತನ್ನ ಚಾಳಿಯಿಂದಾಗಿ ಸಾರ್ವಜನಿಕರ ಅಪಹಾಸ್ಯಕ್ಕೆ ತುತ್ತಾಗಿ ಪ್ರಾಣ ಕಳೆದುಕೊಂಡ ವನ ದಾರುಣ ಕತೆ. ಇದೆ ರೀತಿಯಲ್ಲಿ ಮನೆಗೆ ಬಂದ ಹೆಣ್ಣಿಗೆ ಅಶ್ಲೀಲ ಸಂದೇಶಗಳನ್ನು ಕಳಿಸುವ ಅರವತ್ತರ ಹರೆಯದ ವ್ಯಕ್ತಿ, ಅವರಿಂದ ಪಾರಾಗಲು ಪೋಲಿಸರ ಮೊರೆಹೋಗಬೇಕಾದ ಕುರಿತು ವಿಡಂಬನೆ ಇದೆ.

ಇವುಗಳಲ್ಲಿ 'ಪುರುಷಾಮೃಗ' ಕತೆ ಅತ್ಯಂತ ವಿಶಿಷ್ಟ. ತನ್ನ ನಡತೆಯ ಮೂಲಕ ಹೆಣ್ಣುಮಕ್ಕಳನ್ನು ಆಕರ್ಷಿಸಿ ಅವರನ್ನು ಕ್ರೂರವಾಗಿ ಶೋಷಿಸುವ ಪುರುಷಾಹಂಕಾರಕ್ಕೆ ಹಿಡಿದ ಕನ್ನಡಿ, ಅದರಲ್ಲಿ ಅವನ ಬಲೆಗೆ ಒಳಗಾಗುವ ಹೆಣ್ಣುಗಳ ದೌರ್ಬಲ್ಯ ವನ್ನು ಚಿತ್ರಿಸುವ ಮೂಲಕ ಲೇಖಕರ ವಸ್ತುನಿಷ್ಠತೆಯನ್ನು ಗುರು ತಿಸಬಹುದು. ಪಂಜಣ್ಣನ ಕುಕ್ಕಿನ ಚರಿತ್ರೆ, ಕಾಟಕಾಯಿಗಳು ಹೊನ್ನು, ಮಣ್ಣು ಅಥವಾ ಆಸ್ತಿಗಾಗಿ ನಡೆದ ಜಗಳಗಳ ಅನಾವರಣ ಮಾಡುತ್ತದೆ. ಅದರಲ್ಲೂ ಪಂಜಣ್ಣನ ಕತೆ ಚೆಕೊವ್ ನ ಚೆರಿ ಅಂಡ್ ಆರ್ಚಡ್್ರ ನಾಟಕದ ವಸ್ತುವನ್ನು ನೆನಪಿಗೆ ತರುವಷ್ಟು ಸಶಕ್ತವಾಗಿದೆ. ತಲೆಮಾರುಗಳ ಅಂತರವನ್ನು ಅದರ ಕತೆ ಹೇಳುವ ಮೂಲಕ ಚಂದ್ರಕ್ಕೆ ದಾಟುವುದು ಹೊಸ ಸಂಬಂಧಗಳ ಬೆಸೆಯುವ ಸಾಧನವಾಗಿ ಪರಿಣಮಿಸುವಷ್ಟು ಪರಿಣಾಮಕಾರಿಯಾಗಿದೆ.

ಇದೆಲ್ಲವನ್ನೂ ಲೇಖಕ ಅಧಿಕೃತಗೊಳಿಸುವುದು ಅವರು ಬಳಸುವ ಪ್ರಾದೇಶಿಕ ಸೊಗಡಿನ ಮೂಲಕ ಅದನ್ನು ಊರುಗಳ ಹೆಸರುಗಳ ಬಳಕೆ (ನಡುಕಣಿ, ಉಡುಪಿ, ಮಂಗಳೂರು) ತುಳು ಮಿಶ್ರಿತ ಕನ್ನಡದ ಬಳಕೆಯ ಮೂಲಕ (ಮಾರಾಯರೆ, ಬಿಂಗರಿ) ಅಲ್ಲಿನ ಜನಪದ ನಂಬಿಕೆಗಳ ಮೂಲಕ (ಕುಲೆ, ಭೂತ, ಕೋಲ, ಬೆರ್ಮರ್, ದೈವ, ಆಂಜನ ಹಾಕುವುದು) ಹೀಗೆ ಪ್ರಾದೇಶಿಕವಾಗುತ್ತಲೇ ಸಾರ್ವತ್ರಿಕ ವಾಗಿಸುವುದು ಜನಾರ್ದನ ಭಟ್‌ರ ಕತೆಗಳ ಅನನ್ಯತೆ.

Related Books