ಉಮಾ ರಾವ್‌ ಕತೆಗಳು

Author : ಉಮಾ ರಾವ್

Pages 364

₹ 300.00
Year of Publication: 2019
Published by: ರೂಪ ಪ್ರಕಾಶನ
Address: ನಂ.2407, 2407/ಕೆ-1, 1ನೇ ಕ್ರಾಸ್, ಹೊಸಬಂಡಿಕೇರಿ ಕೆ.ಆರ್.ಮೊಹಲ್ಲಾ, ಮೈಸೂರು -570004
Phone: 9342274331

Synopsys

ಉಮಾ ಅವರ ಸಣ್ಣ ಕತೆಗಳ ಕೃತಿ ’ಉಮಾ ರಾವ್ ಕತೆಗಳು’.  ಪುಸ್ತಕಕ್ಕೆ ಮುನ್ನುಡಿ ಬರೆದಿರುವ ಬಿ.ಎನ್.ಸುಮಿತ್ರಾಬಾಯಿ ಅವರು ಉಮಾ ರಾವ್‌ ಅವರ ಕತೆಗಳ ಬಗ್ಗೆ ಒಳಹೊಕ್ಕು ನೋಡಿದ್ದಾರೆ. ’ಚಿಕ್ಕ ಪುಟ್ಟ ಊರುಗಳಿಂದ ಮಹಾನಗರಕ್ಕೆ ವಲಸೆ ಹೋದವರಿಗೆ, ಅವರು ಸೂಕ್ಷ್ಮ ಸಂವೇದನೆಯವರಾಗಿದ್ದರೆ, ಕೆಲವು ಸಂಗತಿಗಳು ತಳಮಳಗಳನ್ನು ಹುಟ್ಟಿಸಬಹುದು. ಮಹಾನಗರಗಳು ಹುಟ್ಟಿಕೊಳ್ಳುವುದೇ ಕೈಗಾರಿಕಾ ಅಭಿವೃದ್ಧಿಗಳ ಮೂಲಕ. ಅತಿ ವ್ಯಾಪಕವಾದ, ವೇಗವಾದ ಪ್ರಗತಿಗಳೂ, ವಿಕೃತಿಗಳೂ, ಸಮೃದ್ಧಿ ಸವಲತ್ತುಗಳೂ, ಅವುಗಳ ತೀವ್ರ ಕೊರತೆಗಳೂ ಒಟ್ಟೊಟ್ಟಿಗೇ ಜನಜೀವನದ ಪ್ರವಾಹದಲ್ಲಿ ಹರಿಯುತ್ತಿರುತ್ತವೆ. ಈ ವಿಚಿತ್ರವೂ ವೈವಿಧ್ಯಮಯವೂ ಆದ ಜನರ ಬದುಕಿನಲ್ಲಿ ಸಂಪ್ರದಾಯಸ್ಥ ವರ್ಗೀಕೃತ ವಲಯಗಳಾದ ಜಾತಿ, ವರ್ಗ, ಲಿಂಗ, ಜನಾಂಗ, ಬುಡಕಟ್ಟುಗಳ ಚೌಕಟ್ಟುಗಳು ಮಸುಕಾಗುತ್ತವೆ. ಅದರೊಂದಿಗೆ ಎಲ್ಲರೂ ಒಟ್ಟಾರೆ ಮನುಕುಲದ ಸಹಪಯಣಿಗರೇ ಎನ್ನುವ ಕಾಸ್ಮೊಪಾಲಿಟನ್ ಮನೋಧರ್ಮ ವೊಂದು ಬೆಳೆಯುವುದು ಸಹಜ. ಈ ರೀತಿ ನಗರ ಪ್ರಜ್ಞೆಗೆ ಪ್ರಗತಿಪರತೆ, ಉದಾರಭಾವದ ಸಮಾನತಾದೃಷ್ಟಿ ಮತ್ತು ಸಾರ್ವತ್ರಿಕ ಮಾನವೀಯ ಲಕ್ಷಣವೊಂದು ಮೈಗೂಡಿಕೊಂಡಿರುತ್ತವೆ.

ಪರಕೀಯವಾದ ಸಾಂಸ್ಕೃತಿಕ ಪರಿಸರದಲ್ಲಿ ಸಮಾಜವೆಲ್ಲ ತನ್ನನ್ನೇ ದುರುಗುಟ್ಟಿ ದಿಟ್ಟಿಸುವ ಭಾವನೆ, ವಿಶೇಷವಾಗಿ ಮಹಿಳೆಗೆ, ದೂರವಾಗುತ್ತದೆ. ಇದರಿಂದ ಸಲೀಸಾಗಿ, ಸರಾಗವಾಗಿ ಬದಲಾವಣೆಗಳಿಗೆ ಒಗ್ಗಿಕೊಳ್ಳುವ ಸಾಧ್ಯತೆ ಹೆಚ್ಚು. ಮಹಿಳೆಯರು ಕನ್ನಡದಲ್ಲಿ ಕಳೆದ ಒಂದು ಶತಮಾನವಿಡೀ ಇಂತಹ ಸಾಮಾಜಿಕ ನಿರ್ಬಂಧಗಳ ಒಳಗಿನ ತಮ್ಮ ಬವಣೆಗಳ ಬಗೆಗೇ ಒತ್ತು ಕೊಟ್ಟು ಬರೆಯುತ್ತಾ ಬಂದಿರುವುದನ್ನು ಸ್ಮರಿಸಬಹುದು. ತಾವು ಏಕೆ ಹೀಗೆ ಬದುಕುತ್ತಿದ್ದೇವೆ? ಈ ಬದುಕಿನ ದುರವಸ್ಥೆಗಳ ಮೂಲ ಎಲ್ಲಿದೆ? ಎನ್ನುವುದನ್ನು ಹುಡುಕಲಿಕ್ಕೆ ಒಂದು ನೂರು ವರ್ಷಗಳು ಬಹು ಚಿಕ್ಕ ಅವಧಿಯಾಗಿ ಅವರಿಗೆ ಅನ್ನಿಸಿದೆ. ತ್ರಿವೇಣಿಯ ಕಾಲಕ್ಕೆ ಹುಡುಗಿಯೊಬ್ಬಳು ವಾರೆ ಬೈತಲೆ ತೆಗೆದು ಎರಡು ಜಡೆ ಹೆಣೆದುಕೊಂಡು ಕಾಲೇಜಿಗೆ ಹೋಗುವುದೇ (ಇದು ತ್ರಿವೇಣಿಯವರ ಸ್ಟೈಲು ಕೂಡ!) ದೊಡ್ಡ ಫ್ಯಾಷನ್ ಅಥವಾ ಸಂಪ್ರದಾಯದ ಗಡಿ ಉಲ್ಲಂಘಿಸುವ ಕ್ರಿಯೆ ಯಾಗಿ ಬರಹದಲ್ಲೂ ಕಾಣಿಸಿಕೊಳ್ಳುವುದಿದೆ. ಮುಂಬಯಿಯಲ್ಲಾದರೋ ಐವತ್ತು ವರ್ಷಗಳ ಹಿಂದೆ ಕೂಡ ಯಾರಾದರೂ ಪ್ಯಾಂಟು ಷರ್ಟು, ಕ್ರಾಪು ಧರಿಸುವುದು ಹುಡುಗಿತನಕ್ಕೆ ಧಕ್ಕೆ ತಂದಿರಲಿಕ್ಕೆ ಸಾಧ್ಯವಿರಲಾರದು. ಆದುದರಿಂದಲೇ ಆ ಏಲಿಯನ್ ಸಮಾಜದಲ್ಲಿನ ಗೇ ಸಂಸ್ಕೃತಿ ಬಗೆಗೆ ಮೂರು ದಶಕಗಳಷ್ಟು ಹಿಂದೆಯೇ ಉಮಾ ಮುಂಬೈ ಡೈರಿಯಲ್ಲಿ ಸಹಜವಾಗಿ ಬರೆಯಲು ಸಾಧ್ಯವಾಯಿತು. ಆದರೆ ಅದೇ ವಿಷಯ ಇಲ್ಲಿ ಒಳನಾಡಿಗರನ್ನು ಹುಬ್ಬೇರಿಸುವಂತೆಯೂ ಮಾಡಿತ್ತು! ಇಂತಹ ನಗರ ಪ್ರಜ್ಞೆಯಿಂದಾಗಿಯೇ ಅಭಿವ್ಯಕ್ತಿ ಯೊಳಗಿನ ಆಧುನಿಕ ಮನೋಧರ್ಮ ಉಮಾ ಅವರ ಕಥನಲೋಕದಲ್ಲಿ ಗಿಡವೊಂದರಲ್ಲಿ ಹೂ ಅರಳುವಷ್ಟು ಸಹಜತೆಯಲ್ಲಿ ಮೂಡಿಬರುತ್ತದೆ. ಓದುವಿಕೆ ಸೂಕ್ಷ್ಮವಾಗಿರದೆ ಇದ್ದರೆ ಆ ಅಭಿವ್ಯಕ್ತಿಯಲ್ಲಿ ಹುದುಗಿದ ಪ್ರಗತಿಪರತೆ ಗಮನಕ್ಕೆ ಬರದೆ ಜಾರಿಹೋಗಬಹುದು. ಇಂತಹ ನವುರಾದ ಆಧುನಿಕ ಅಭಿವ್ಯಕ್ತಿಯ ಸ್ಪಷ್ಟ ನಿದರ್ಶನವೊಂದು ಉಮಾ ಅವರ ನೂರು ಸ್ವರ ಕಾದಂಬರಿಯೆನ್ನಬಹುದು’ ಎಂದಿದ್ದಾರೆ. 

About the Author

ಉಮಾ ರಾವ್
(01 September 1948)

1948 ಸೆಪ್ಟಂಬರ್ 1ರಂದು ಜನಿಸಿದ ಇವರು ಜಾಹೀರಾತು ಉದ್ಯಮದಲ್ಲಿ ಕಾಪಿರೈಟರ್, ಪತ್ರಕರ್ತೆಯಾಗಿ ಬೆಂಗಳೂರಿನಲ್ಲಿ ಕೆಲಸ ನಿರ್ವಹಿಸಿದ್ದಾರೆ. ಸೃಜನಶೀಲ, ಪ್ರಗತಿಪರ ವಿಚಾರಧಾರೆಗಳನ್ನು ಪ್ರತಿಪಾದಿಸುವ, ಸೂಕ್ಷ್ಮ ಸಂವೇದನೆಯುಳ್ಳ ಲೇಖಕಿಯಾಗಿ ಮುಖ್ಯವೆನಿಸುತ್ತಾರೆ. 80ರ ದಶಕದಲ್ಲಿ, ಉಮಾರಾವ್ ರವರು 'ಫ್ರೀಲಾನ್ಸ್ ಕಾಪಿರೈಟರ್' ಹಾಗೂ 'ಜರ್ನಲಿಸ್ಟ್' ಆಗಿ ಕೆಲಸ ಮಾಡಲು ಪ್ರಾರಂಭಿಸಿದರು. ಉಮಾರವರ ಬರಹ, ಕಥೆಗಳು ಕನ್ನಡದ ಹಲವಾರು ದಿನಪತ್ರಿಕೆಗಳಲ್ಲಿ, ನಿಯತಕಾಲಿಕೆಗಳಲ್ಲಿ ಪ್ರಕಟವಾಗಿವೆ. ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಬಹುಮಾನ, ಮಹಿಳಾ ವರ್ಷ ದತ್ತಿ ನಿಧಿ ಪ್ರಶಸ್ತಿ, ಗೊರುರು ಪ್ರಶಸ್ತಿ, ಕರ್ನಾಟಕ ಲೇಖಕಿಯರ ಸಂಘದ ಎಚ್.ವಿ ಸಾವಿತ್ರಮ್ಮ ಪ್ರಶಸ್ತಿ, ಮುಂಬೈ ಡೈರಿಗೆ ಬಹುಮಾನ ಲಭಿಸಿದೆ. ಅಗಸ್ತ್ಯ, ಕಾಡು ಹಾದಿ, ...

READ MORE

Reviews

ಉಮಾರಾವ್ ಕತೆಗಳು

ಮುಂಬೈನಲ್ಲಿ ಮೂರು ದಶಕಗಳಿಗೂ ಮಿಕ್ಕು ಕ್ರಿಯಾಶೀಲರಾಗಿದ್ದ ಉಮಾರಾವ್ ಅವರು ಬರೆದ ಕಥೆಗಳಿಗೆ ವಿಭಿನ್ನ ಆಯಾಮವಿದೆ, ತಾಯ್ತಾಡಿನ ಬೇರುಗಳೊಂದಿಗೆ ಸಂಬಂಧ ಉಳಿಸಿಕೊಳ್ಳುವ ತುಡಿತವಿದೆ. ಜಾಹೀರಾತು ಕ್ಷೇತ್ರ, ಐವತ್ತಕ್ಕೂ ಹೆಚ್ಚು ನಾಟಕಗಳಲ್ಲಿ ಪಾಲ್ಗೊಂಡ ಅನುಭವ, ವಿದೇಶಗಳಲ್ಲಿ ಸುತ್ತಾಡಿದ ಅನುಭವದ್ರವ್ಯ - ಇವೆಲ್ಲವೂ ಪಾಕಗೊಂಡು, ಉಮಾರಾವ್ ಅವರ ಕಥೆಗಳಲ್ಲಿ ಮೂಡಿಬಂದಿವೆ. ಕನ್ನಡ ನಾಲ್ಕು ದಶಕಗಳಿಂದ ಕಥೆಗಳನ್ನು, ಬರಹಗಳನ್ನು ಬರೆಯುತ್ತಲೇ ಇರುವ ಉಮಾ ರಾವ್ ಅವರದ್ದು ವಿಶಾಲ ಕಾರ್ಯಕ್ಷೇತ್ರ ಸಿನಿಮಾ ಛಾಯಾಗ್ರಾಹಕ ವಿ.ಕೆ.ಮೂರ್ತಿ ಯವರ ಜೀವನಚರಿತ್ರೆ ಅವರ ಇನ್ನೊಂದು ಮಹತ್ವದ ಕೊಡುಗೆ. ಮುಂಬಯಿಯ ಇದ್ದಾಗಲೇ ಲಂಕೇಶ್ ಪತ್ರಿಕೆಯಲ್ಲಿ ಬರೆಯುತ್ತಿದ್ದ 'ಮುಂಬೈ ಡೈರಿ'ಯು ಅವರಿಗೆ ಗಳಿಸಿಕೊಟ್ಟ ಜನಪ್ರಿಯತೆಯನ್ನು ಕಂಡು ಪತ್ರಿಕೆಯ ಸಂಪಾದಕರೇ ಕರುಬಿದ್ದುಂಟು ಎಂದು ತಮಾಶೆಯಾಗಿ ಹೇಳಲಾಗಿದ್ದರೂ, ಅದು ಅವರ ಬರಹಗಳಲ್ಲಿದ್ದ ಸಮಕಾ ಲೀನ ಮೌಲ್ಯಕ್ಕೆ ನೀಡಿದ ಗೌರವ ಎಂದೇ ಹೇಳಬೇಕು. 

ಶಶಿಧರ ಹಾಲಾಡಿ 01 ಡಿಸೆಂಬರ್‌ 2019

ಕೃಪೆ : ವಿಶ್ವವಾಣಿ

 

ಎದೆಯಾಳ ಮೀಟುವ ಉಮಾ ಕಥಾಲೋಕ-ವಿಜಯಕರ್ನಾಟಕ

Related Books