‘ತಮ’ ಲೇಖಕ ಬಸವರಾಜ ಡೋಣೂರರ ಮೊದಲ ಕಥಾಸಂಕಲನ. ಕಳೆದ ಹತ್ತು ವರ್ಷಗಳಲ್ಲಿ ಅವರು ಬರೆದ ಹತ್ತು ಕಥೆಗಳು ಈ ಸಂಕಲನದಲ್ಲಿವೆ. ಇಲ್ಲಿನ ಬಹುತೇಕ ಕಥೆಗಳು ಶಾಂತನಾಳದ ಕಥೆಗಳು, ವಿಜಾಪುರ ಜಿಲ್ಲೆಯ ಈ ಹಳ್ಳಿಯ ಜೀವನ ಈ ಕಥೆಗಳನ್ನು ರೂಪಿಸಿದೆ ಎನ್ನಬಹುದು. ತನ್ನ ರಕ್ತ ಮಾಂಸಗಳನ್ನು, ಭಾವನೆಗಳನ್ನು, ಅಷ್ಟೇ ಅಲ್ಲ; ತನ್ನ ನೈತಿಕತೆಯನ್ನು ಈ ಕತೆಗಳಿಗೆ ದಾನ ಮಾಡಿದೆ. ಕಥೆಗಾರ ಮತ್ತು ಕಥೆಗಳ ನಡುವೆ ಅಗತ್ಯವಾದ ದೂರವೂ ಇಲ್ಲಿದೆ. ಈ ಕಥೆಗಳ ಜೀವನ ಕಥೆಗಾರನ ಸ್ವಂತ ಜೀವನವೇ ಆಗಿರಬಹುದಾದರೂ, ಈಗ ಅದೆಲ್ಲ ಅವರ ಗತಕಾಲದ ನೆನಪುಗಳಾಗಿ ಮೂಡಿವೆ. ನೆನಪು ಕಥೆಯಾಗಿ ಮೂಡಿದಾಗ ಅದರಲ್ಲಿ ಮತ್ತೇನೋ ಸೇರಿಕೊಳ್ಳುತ್ತದೆ. ‘ಶಿಥಿಲತೆ’ ಕಥೆಯಲ್ಲಿಯ ಮಲ್ಲನಗೌಡನ ಅಂತರಂಗದ ತುಮುಲದೊಂದಿಗೆ ಸಹಾನುಭೂತಿ ತೋರಿಸುತ್ತಲೇ, ಧರ್ಮಸೂಕ್ಷ್ಮದ ಮೌಲ್ಯಮಾಪನ ಮಾಡುತ್ತದೆ. ಅವನ ಬಹಿರಂಗದ ಲೋಕಪ್ರಿಯತೆಗೂ, ಅವರ ಅಂತರಂಗದಲ್ಲಿ ರಹಸ್ಯವಾಗಿರುವ ಪ್ರಣಯ ಸಾಹಸಕ್ಕೂ ಇರುವ ಅಂತರವನ್ನು ತೆರೆದು ತೋರಿಸುತ್ತದೆ. ಇಂತಹ ಸೂಕ್ಷ್ಮಾತಿಸೂಕ್ಷ್ಮ ಸಂಬಂಧಗಳನ್ನು ಇಲ್ಲಿನ ಕಥೆಗಳು ತೆರೆದಿಡುತ್ತವೆ.
ಡಾ ಬಸವರಾಜ್ ಪಿ. ಡೋಣೂರು 1969ರ ಜುಲೈ 26 ರಂದು ಜನಿಸಿದರು. ಇಂಗ್ಲಿಷ್ ಪ್ರಾಧ್ಯಾಪಕ ಮತ್ತು ಮುಖ್ಯಸ್ಥರಾಗಿ ಕೇಂದ್ರೀಯ ವಿಶ್ವವಿದ್ಯಾಲಯ, ಕಲಬುರಗಿಯಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಕರ್ನಾಟಕ ವಿಶ್ವವಿದ್ಯಾಲಯದಲ್ಲಿ ’ಹಾಪ್‌ಕಿನ್ಸ್ ಮತ್ತು ಬಸವಣ್ಣ’ ವಿಷಯದ ಬಗ್ಗೆ ತುಲನಾತ್ಮಕ ಅಧ್ಯಯನ ನಡೆಸಿದ್ದಾರೆ. ಕರ್ನಾಟಕ ರಾಜ್ಯ ಮಹಿಳಾ ವಿಶ್ವವಿದ್ಯಾಲಯದಲ್ಲಿ ಉಪನ್ಯಾಸಕರಾಗಿ, ಸ್ಕೂಲ್ ಆಫ್ ಹ್ಯುಮ್ಯಾನಿಟೀಸ್ ಅಂಡ್ ಲ್ಯಾಂಗ್ವೇಜಸ್ ವಿಭಾಗದ ಡೀನ್ ಆಗಿ ಸೇವೆ ಸಲ್ಲಿಸಿದ್ದಾರೆ. ಯುಜಿಸಿ ಸಂಶೋಧನಾ ಯೋಜನೆಯಡಿ ಜಾಗತೀಕರಣದ ಸನ್ನಿವೇಶದಲ್ಲಿ ಕರ್ನಾಟಕದ ಜಾನಪದ ನಾಟಕಗಳ ಸಂಗ್ರಹ, ಅನುವಾದ ಮತ್ತು ವಿಶ್ಲೇಷಣೆ ಮಾಡಿದ್ದು, ಹತ್ತು ಹಲವು ಕೃತಿಗಳನ್ನು ಬರೆದಿದ್ದಾರೆ. “ಕನ್ನಡ ನಾಟಕ ಮತ್ತು ವಾಸ್ತವಿಕತೆ” ಎಂಬ ಪ್ರಬಂಧಕ್ಕೆ ಇವರಿಗೆ 2000 ...
READ MORE