ಮುಸ್ಸಂಜೆಯ ಮಿಂಚು

Author : ಶೈಲಜಾ ಹಾಸನ

Pages 160

₹ 80.00
Published by: ಸಿದ್ದಲಿಂಗೇಶ್ವರ ಪ್ರಕಾಶನ
Address: ಗುಲ್ಬರ್ಗ.

Synopsys

ಶೈಲಜಾ ಹಾಸನ ಅವರ ಕೃತಿ ಮುಸ್ಸಂಜೆಯ ಮಿಂಚು . ನೆರೆಕೆನ್ನೆಗೆ, ತೆರೆ ಗಲ್ಲಕೆ, ಶರೀರ ಗೂಡುವೋಗುವ ಮುಪ್ಪಿನ ಭಯಾನಕ ಚಿತ್ರ ಕೇವಲ ಬಸವಣ್ಣನ ಕಾಲದಲ್ಲಿ ಮಾತ್ರವಲ್ಲ. ನಿತ್ಯ ಶಾಶ್ವತವಾದದ್ದು. ಬಾಲ್ಯ, ಯೌವನ, ಮಧ್ಯವಯಸ್ಸುಗಳನ್ನು ದಾಟಿಕ ಮೇಲೂ ಉಸಿರಾಡುವವರು ಕ್ರಮೇಣ ಶಾರೀರಿಕವಾಗಿ ಮಾನಸಿಕವಾಗಿ ಕುಸಿಯಲೇಬೇಕಾಗುತ್ತದೆ. ದೃಷ್ಟಿ ಮುಂಜಾಗುವ, ಕಿವಿ ಸರಿಯಾಗಿ ಕೇಳಿಸದ, ಬೆನ್ನು ಬಾಗುವ, ಹಲ್ಲು ಹೋಗುವ, ತಲೆ ಬೆಳ್ಳಗಾಗಿ ಬೋಳಾಗುವ, ಊರೆಗೋಲು ಹಿಡಿಯುವ ಹೆಜ್ಜೆ ಹೆಜ್ಜೆಗೆ ಉಸ್ಸೆನ್ನುವ ಏಳಲಾಗದ, ಕೂರಲಾಗದ, ಸ್ನಾನ ಶೌಚಗಳನ್ನು ಮಾಡಲಾಗದ ಅಸಹಾಯಕ ಸ್ಥಿತಿಯಲ್ಲಿ ಪರಾವಲಂಬಿಯಾಗಿ ನಿಟ್ಟುಸಿರು ಬಿಡುತ್ತಾ ನರಳಬೇಕಾಗುತ್ತದೆ. ಇಂಥ ದಿನಗಳಲ್ಲಿ ಮಕ್ಕಳು, ಮೊಮ್ಮಕ್ಕಳು, ಸೊಸೆಯರು, ಅಳಿಯಂದಿರು ಮುಂದೆ ತಮಗೂ ಎದುರಾಗುವ ಅಂಥ ದಿನಗಳನ್ನು ಮನಸ್ಸಿನಲ್ಲಿರಿಸಿಕೊಂಡು ಹಿರಿಯ ಜೀವಗಳಿಗೆ ಉಪಚಾರ ಮಾಡುವುದಕ್ಕಿಂತ ತಮ್ಮ ಸುಖ ಸಂತೋಷಗಳಿಗೆ ಈ ಮುದುಕರು ಅಡ್ಡಿಯಾಗಿದ್ದಾರೆಂದು ಮೂದಲಿಸಿ ನಿರ್ಲಕ್ಷಿಸುವುದೇ ಹೆಚ್ಚು. ಆದ್ದರಿಂದಲೇ ಆಧುನಿಕ ಬದುಕಿನ ಅನಿವಾರ್ಯ ಸಂಗಾತಿಗಳಂತೆಯೋ, ಅನಿವಾರ್ಯ ಪೀಡೆಗಳಾಗಿಯೊ ವೃದ್ದಾಶ್ರಗಳು ಕಾಣಿಸಿಕೊಳ್ಳುತ್ತಿವೆ. ವೃದ್ದಾ ಶ್ರಮಗಳು ಸೇವಾ ಮನೋಭಾವದ ಪ್ರತಿರೂಪಗಳಾಗುವಂತೆಯೇ ವೃದ್ದರಿಗೆ ನೆರಳು ನೆಮ್ಮದಿ ಕಲ್ಲಿಸುವ ಹೆಸರಿನಲ್ಲಿ ಹಗಲು ದರೋಡೆ ಕೇಂದ್ರಗಳು ಆಗಿವೆ. ಕನ್ನಡದ ಪ್ರಮುಖ ಪತ್ರಿಕೆಗಳ ಕಥೆ, ಕವನ, ಕಾದಂಬರಿ, ಲೇಖನಗಳನ್ನು ಪ್ರಕಟಿಸಿ ಜನಪ್ರಿಯರಾಗಿರುವ ಶೈಲಜಾ ಹಾಸನ ಅವರ ಅತ್ಯಂತ ಪ್ರೀತಿಯ ಅತ್ತೆ ತಮ್ಮ ವೃದ್ದಾಪ್ಯದ ದಿನಗಳಲ್ಲಿ ಮಾನಸಿಕ ಅಸ್ತವ್ಯಸ್ತೆಯಿಂದ ಅನುಭವಿಸಿದ ಸಂಕಟಗಳು, ನೆರೆಹೊರೆ ಹಾಗೂ ಪರಿಚಿತರ ಮನೆಗಳಲ್ಲಿ ಕಂಡ ಹಿರಿಯ ಜೀವಗಳ ದಾರುಣ ಸ್ಥಿತಿ, ವೃದ್ದಾಶ್ರಗಳ್ಳಿನ ಹಿರಿಯರ ನೋವು ಇವೆಲ್ಲವೂ ಅವರನ್ನು ಕಲಕಿದ ಪರಿಣಾಮವಾಗಿ ‘ಮುಸ್ಸಂಜೆಯ ಮಿಂಚು’ ರೂಪುಗೊಂಡಿದೆ. ಇಲ್ಲಿ ಬರುವ ಬಹುಪಾಲು ಪಾತ್ರಗಳು ಅವರು ಪ್ರತ್ಯಕ್ಷ ದರ್ಶಿಸಿದ ವಾಸ್ತವ ಬದುಕಿನ ಚಿತ್ರಗಳಾಗಿವೆ. ಹಿರಿಯ ಚೇತನಗಳ ಕೊನೆಯ ದಿನಗಳು ನೆಮ್ಮದಿಯ ದಿನಗಳಾಗಿರಬೇಕೆಂಬ ಆಶಯಹೊಂದಿರುವ ಈ ಕಾದಂಬರಿಯನ್ನು ಸ್ತ್ರೀವಾದಿ, ಮನೋವೈಜ್ಞಾನಿಕ ಹಾಗೂ ವೈರಾಗ್ಯ ಎಂದು ಮೂರು ನೆಲೆಗಳಲ್ಲಿ ವಿವೇಚಿಸಲು ಸಾಧ್ಯವಿದೆ. ಕಾದಂಬರಿಯ ಮುಖ್ಯ ಪಾತ್ರವು ಇಂದಿನ ಹೆಣ್ಣು ಮಕ್ಕಳು ಹೇಗಿರಬೇಕೆನ್ನುವ ಮಾದರಿಯೊಂದನ್ನು ನಮ್ಮೆದುರಿಗಿರಿಸುತ್ತದೆ. ಅಮೆರಿಕಾದಲ್ಲಿ ಉದ್ಯೋಗಿಗಳಾಗಿರುವ ಗಂಡುಗಳಿಗೆ ಹಿಂದೆ ಮುಂದೆ ಅಲೋಚಿಸದೆ ಮುಗಿಬೀಳುವ ಮತ್ತು ಅದರಿಂದ ಅನಾಹುತ ಪರಂಪರೆಗಳನ್ನೇ ಆಹ್ವಾನಿಸಿಕೊಳ್ಳುವ ಹೆಣ್ಣುಗಳೇ, ಬಹುಸಂಖ್ಯಾತರಾಗಿರುವ ಸಂಧರ್ಬದಲ್ಲಿ ತನ್ನ ಭವಿಷ್ಯದ ಬದುಕಿಗೆ, ಆದರ್ಶಕ್ಕೆ ಅಡ್ಡಿಯಾಗಬಹುದಾದ ಅಂಥ ಗಂಡನ್ನು ನಿರಾಕರಿಸುತ್ತ ಅವಳು ಹೇಳುವ ಮಾತುಗಳು ಗಮನಾರ್ಹ, “ ವಿದೇಶದಲ್ಲಿರುವ ಗಂಡು ಸಿಕ್ತಾನೆ ಅಂದ್ರೆ ಕುಣಿದಾಡಿಕೊಂಡು ಬರೋ ಹೆಣ್ಣು ನಿನಗೆ ಹೆಂಡತಿಯಾಗಬೇಕು, ಹಣ, ಒಡವೆ, ಆಸ್ತೀನೇ ಹೆಚ್ಚು ಅನ್ನೋ ಹೆಣ್ಣು ನಿನಗೆ ಸಿಗಬೇಕು ನನ್ನ ಆದರ್ಶಗಳನ್ನು ಮೆಚ್ಚುವ ಗೌರವಿಸುವ ಗಂಡ ತನ್ನ ಗಂಡನಾಗಬೇಕು. ಹಣ ಆಸ್ತಿ, ಅಂದ್ರೆ ಆಲಕ್ಷಿಸುವ, ಮನುಷ್ಯತ್ವಕ್ಕೆ ಸ್ಪಂದಿಸುವ ಕರುಣೆ ಅನುಕಂಪ ತುಂಬಿರೋ ಆದರ್ಶ ವ್ಯಕ್ತಿ ನನಗೆ ಸಿಗಬೇಕು”. ಕೊನೆಯ ಪಕ್ಷ ನಮ್ಮ ವಿದ್ಯಾವಂತ ಹೆಣ್ಣುಮಕ್ಕಳಾದರೂ ಇಂಥಾ ದಿಟ್ಟತನ ಸಂಕಲ್ಪಗಳು ಬಂದರೆ ಅವನತಿಯತ್ತ ಸಾಗುತ್ತಿರುವ ನಮ್ಮ ಕೌಟುಂಬಿಕ ಬದುಕು ಹಸನಾಗಲು ಸಾಧ್ಯವಾದೀತು. ಹೊರಗೆ ದುಡಿಯುವ ಗಂಡ- ಹೆಂಡತಿ ಮುದಿ ಜೀವಗಳನ್ನು ಪೋಷಿಸಲು ಸಾಧ್ಯವಾಗದಾಗ, ಹಿರಿಯ ಜೀವಗಳು ಕುಟುಂಬದ ಸದಸ್ಯರೊಂದಿಗೆ ಹೊಂದಿಕೊಳ್ಳಲಾಗದಾಗ, ಕೊನೆಯ ದಿನಗಳನ್ನು ಯಾರ ಹಂಗಿನಲ್ಲೂ ಇರದೆ ಸ್ವತಂತ್ರವಾಗಿ ಕಳೆಯಬೇಕೆನಿಸಿದಾಗ, ಮಾನಸಿಕ ಅಸ್ವಸ್ಥರಾದಾಗ, ಅನಾಥರಾದಾಗ, ತಪ್ಪು ತಿಳುವಳಿಕೆಯಿಂದ ಹೀಗೆ ನಾನಾ ಕಾರಣಗಳ ಹಿನ್ನೆಲೆಯಲ್ಲಿ ವೃದ್ದಾಶ್ರಮ ಸೇರುವ ಅಥವಾ ವೃದ್ದಾಶ್ರಮಕ್ಕೆ ತಳ್ಳುವ ಸಂದರ್ಭಗಳು ಅನಿವಾರ್ಯವಾಗುತ್ತಿರುವುದನ್ನು ಹೇಳುತ್ತಲೇ ಈ ಕಾದಂಬರಿ ವೃದ್ದಾಶ್ರಮ ಸೇರಿದವರು ತಮ್ಮ ಇಳಿವಯಸ್ಸಿನಲ್ಲಿ ಎದುರಾದ ದೀನಾವಸ್ಥೆಯ ಬಗೆಗೆ ಕೊರಗುತ್ತ ಕೊನೆಯ ಕ್ಷಣಗಳಿಗಾಗಿ ಕಾಯುತ್ತ ಉಸಿರು ಬಿಗಿಹಿಡಿದು ಬದುಕುತ್ತಿರುವ ಸಂಧ್ಯಾಕಾಲದ ದಾರುಣ ಕಥೆಯನ್ನೂ ಮಂಡಿಸುತ್ತದೆ. ವೃದ್ಧರ ಕೊನೆಯ ದಿನಗಳು ನೆಮ್ಮದಿಯಿಂದ ಕೂಡಿರುವಂತೆ ನೋಡಿಕೊಳ್ಳುವುದು ಸಮಾಜದ ನೈತಿಕ ಹೊಣೆಗಾರಿಗೆಯೆಂದು ಎಚ್ಚರಿಸುತ್ತದೆ. ಇಂದಿನ ಸಾಮಾಜಿಕ ಬದುಕಿನ ಜ್ವಲಂತ ಸಮಸ್ಯೆಯೊಂದನ್ನು ಕಠೋರ ವಾಸ್ತವವನ್ನು ಚಿಂತನೆಗೆ ಹಚ್ಚುವಂತೆ, ಆತ್ಮಾವಲೋಕನಕ್ಕೆ ಅವಕಾಶವಾಗುವಂತೆ ಕಥನ ರೂಪದಲ್ಲಿ ಮಂಡಿಸುರುವುದಕ್ಕೆ ಶೈಲಜಾ ಅಭಿನಂದನೀಯರಾಗಿದ್ದಾರೆ.

About the Author

ಶೈಲಜಾ ಹಾಸನ
(15 May 1964)

ಕನ್ನಡದ ಪ್ರಮುಖ ಕಾದಂಬರಿಗಾರ್ತಿ ಎನ್. ಶೈಲಜಾ ಮೂಲತಃ ಹಾಸನದವರು. ಅವರ ಅನೇಕ ಕಾದಂಬರಿಗಳು ಸುಧಾ, ತರಂಗ ವಾರ  ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಪ್ರಸಾರವಾಗಿ ಓದುಗರನ್ನು ತಲುಪಿ ಅಪಾರ ಮೆಚ್ಚುಗೆ ಪಡೆದಿವೆ. ಎಂ.ಎ. ಬಿಎಡ್.ಪದವಿ ಪಡೆದ ಇವರು ಶಾಂತಿಗ್ರಾಮ ಸರ್ಕಾರಿ ಪ್ರೌಢಶಾಲೆ ಶಿಕ್ಷಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಕಥಾ ಸಂಕಲನ,ಕಾದಂಬರಿ,ಲೇಖನಗಳ ಸಂಕಲನ,ಕವನ ಸಂಕಲನ ,ಪ್ರಬಂಧ ಸಂಕಲನ ಹೀಗೆ ಒಟ್ಟು 20 ಕೃತಿಗಳು ಪುಸ್ತಕ ರೂಪದಲ್ಲಿ ಹೊರಬಂದಿದೆ.ಅನೇಕ ಪ್ರಶಸ್ತಿ ಪುರಸ್ಕಾರಗಳು ಈ ಕೃತಿಗಳಿಗೆ ಲಭಿಸಿದೆ.ಇವರ ಸಾಹಿತ್ಯ ಸಮಾಜಮುಖಿಯಾಗಿದ್ದು, ಸಾಮಾಜಿಕ ಸಮಸ್ಯೆಗಳಾದ ವೃದ್ಯಾಪ್ಯ, ವೃದ್ಧಾಶ್ರಮ, ರೈತರ ಆತ್ಮಹತ್ಯೆ, ಅದಕ್ಕೆ ಪರಿಹಾರ,ಸಾವಯುವ ಕೃಷಿ ,ಅದರ ಮಹತ್ವ,ಶಿಕ್ಷಣದ ಜೊತೆಗೆ ವೃತ್ತಿ ಕೌಶಲ ಹದಿಹರೆಯದ ಮಕ್ಕಳ ...

READ MORE

Related Books