ಡಂಕಲ್ ಪೇಟೆ

Author : ವೀರೇಂದ್ರ ರಾವಿಹಾಳ್

Pages 148

₹ 180.00




Year of Publication: 2023
Published by: ವಿಜಯ ಬುಕ್ಸ್
Address: ಬಳ್ಳಾರಿ

Synopsys

‘ಡಂಕಲ್ ಪೇಟೆ’ ಲೇಖಕ ವೀರೇಂದ್ರ ರಾವಿಹಾಳ್ ಅವರ ಕಥಾ ಸಂಕಲನ. ಈ ಸಂಕಲನಕ್ಕೆ ಕವಿ ಆರಿಫ್ ರಾಜಾ ಅವರ ಬೆನ್ನುಡಿ ಬರಹವಿದೆ. ಕೃತಿಯ ಕುರಿತು ಬರೆಯುತ್ತಾ ‘ತೊಂಬತ್ತರ ದಶಕದಿಂದೀಚೆಗೆ ಕನ್ನಡ ಕಥನ ಪರಂಪರೆಯಲ್ಲುಂಟಾದ ಸ್ಥಿತ್ಯಂತರಗಳನ್ನು ಹೊಸ ತಲೆಮಾರಿನ ಕಥೆಗಾರರು ಮೆಟ್ಟಿ ನಿಲ್ಲುವ ಸೂಚನೆಯನ್ನು ಈಗಾಗಲೇ ಒಬ್ಬೊಬ್ಬರಾಗಿ ನೀಡಲಾರಂಭಿಸಿದ್ದಾರೆ. ವಸ್ತುವಿನ ಆಯ್ಕೆ ಮತ್ತು ನಿರ್ವಹಣೆಯಲ್ಲಿ ಇದನ್ನು ವಿಶೇಷವಾಗಿ ಗುರುತಿಸಬಹುದು. ಸಬರ್ಬನ್ ಸಮುದಾಯದ ಮುಂದೆ ಇರಬಹುದುದಾದ ಸವಾಲು ಹಾಗೂ ಸಾಧ್ಯತೆಗಳನ್ನು ಈ ಹೊಸ ತಲೆಮಾರು ವಿಶೇಷ ಬಗೆಯಲ್ಲಿ ಮುಟ್ಟಿ ತಟ್ಟಿ ಮಾತನಾಡಿಸುತ್ತಿದೆ. ಮೇಲಿನ ನನ್ನ ಮಾತಿಗೆ ಪೂರಕವಾಗಿ ವೀರೇಂದ್ರ ರಾವಿಹಾಳರ ಈ 'ಡಂಕಲ್ ಪೇಟೆ' ಸಂಕಲನದ ಕಥೆಗಳಿವೆ.

ಮುಖ್ಯವಾಹಿನಿ ಸಮಾಜದಿಂದ ನೂಕಲ್ಪಟ್ಟು ನೆಲೆಕಳೆದುಕೊಂಡ ಇಲ್ಲಿನ ಪಾತ್ರಗಳು ವ್ಯಕ್ತಿನಾಮ ಸ್ಥಳನಾಮಗಳ ನಡುವೆ ತೊಳಲಾಡುತ್ತಿವೆ. ಇಲ್ಲಿನ ಎಲ್ಲಾ ಕಥೆಗಳಲ್ಲಿ ಮೇಲಿಂದ ಮೇಲೆ ಪ್ರಸ್ತಾಪವಾಗುವ 'ಡಂಕಲ್ ಪೇಟೆ' ಎಂಬ ಕಾಲ್ಪನಿಕ ಪಟ್ಟಣವೇ ಇದಕ್ಕೆ ಸಾಕ್ಷಿ. ಈ ಭಾಗದ ಬಹುತೇಕ ಕತೆಗಾರರ ಸಾಂಸ್ಕೃತಿಕ ಚಹರೆಯೆಂದರೆ ಬೇಡ ಬೇಡವೆಂದರೂ ಮೂಡಿ ಬರುವ ಹಾದಿ ಬೀದಿಯ ಕಥನ. ಇದು ಎಷ್ಟೊಂದು ಸಹಜವಾಗಿ, ಇಲ್ಲಿನ ಒಳಬಾಳಿನ ಕಟ್ಟು-ಬಿಕ್ಕಟ್ಟುಳೊಂದಿಗೆ ಕಸಿಗೊಂಡು ಕವಲೊಡೆಯುತ್ತದೆಯೆಂದರೆ, ನೆಲೆಯಿಲ್ಲದವರ ಈ ಬಗೆಯ ನಿರೂಪಣೆಗಳನ್ನು ಅರ್ಥಮಾಡಿಕೊಳ್ಳಲು ಸೂಫಿ-ಶರಣ-ತತ್ವಪದಕಾರರ ಮೌಖಿಕ ಚರಿತ್ರೆಯೊಂದಿಗೆ ಇವನ್ನು ಇಟ್ಟು ನೋಡಬೇಕು.

ಅಸ್ತಿತ್ವವಾದಿ ತೀವ್ರತೆಯೊಂದಿಗೆ ಬರೆದ ರಾಜಶೇಖರ ನೀರಮಾನ್ವಿ, ಕೇಶವ ಮಳಗಿಯವರಿಂದ ಹಿಡಿದು ಕುಂವೀ, ಗೀತಾ ನಾಗಭೂಷಣ, ಅಮರೇಶ ನುಗಡೋಣಿಯವರ ಸಾಮುದಾಯಿಕ ಕಥನಗಳ ಮಾದರಿಯವರೆಗೂ ಇದರ ಹರಹು ಇದೆ. ಇದೇ ಇವರನ್ನು ಕನ್ನಡದ ಇತರ ಪ್ರದೇಶದ ಕತೆಗಾರರಿಗಿಂತ ಭಿನ್ನವಾಗಿಸುವ ಹಾಗೂ ಅನನ್ಯಗೊಳಿಸುವ ಅಂಶವಾಗಿದೆ. ತಮ್ಮದೇ ಕಥನ ಭಾಷೆಯನ್ನು ಕಂಡುಕೊಳ್ಳಲು ಗೆಳೆಯ ರಾವಿಹಾಳ್ ಈ ಎರಡೂ ಬಗೆಯ ಪರಂಪರೆಗಳಿಂದ ಹೀರಿಕೊಳ್ಳುವ ಪ್ರಯತ್ನ ಮಾಡಿದ್ದಾರೆ ಎಂದಿದ್ದಾರೆ.

About the Author

ವೀರೇಂದ್ರ ರಾವಿಹಾಳ್

ಬಳ್ಳಾರಿ ಜಿಲ್ಲೆಯ ಸಿರುಗುಪ್ಪ ತಾಲ್ಲೂಕಿನವರಾದ ವೀರೇಂದ್ರ ರಾವಿಹಾಳ್ ಇವರು ಮೂಲತಃ ವ್ಯಾಪಾರಿಗಳಾಗಿದ್ದು ವ್ಯಾಸಾಂಗದ ದಿನಗಳಿಂದಲೂ ತೀವ್ರವಾಗಿ ಸಾಹಿತ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 'ಕಲ್ಲುಗಳು ಬೇಕು ಗೆಳೆಯ' ಇವರ ಮೊದಲ ಕವನಸಂಕಲನವಾಗಿದೆ. 1996 ರಲ್ಲಿ ಚಿತ್ರ ಸಾಹಿತಿ ಚಿ.ಉದಯಶಂಕರ್ ಸ್ಮರಣಾರ್ಥ ಪ್ರೇಮಕಾವ್ಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ, 2012 ರ ಸಕ್ರಮಣ ಸಣ್ಣ ಕಥಾ ಪುರಸ್ಕಾರ,‌ ಸಾಹಿತ್ಯ ಪರಿಷತ್ತಿನ ಕೆ. ವಿ. ರತ್ನಮ್ಮ ದತ್ತಿ ಪ್ರಶಸ್ತಿ,‌ 2021ರ ಸಾಲಿನ ಉತ್ಥಾನ ಕಥಾ ಪ್ರಶಸ್ತಿ ಆರೂಢಜ್ಯೋತಿ ಪ್ರಶಸ್ತಿಗಳನ್ನು ಪಡೆದುಕೊಂಡು ತಮ್ಮ ಸಾಹಿತ್ಯಿಕ ಕಾರ್ಯಕ್ರಮಗಳನ್ನು ಮುಂದುವರೆಸಿದ್ದಾರೆ. ಪ್ರಸ್ತುತ ಬಳ್ಳಾರಿಯಲ್ಲಿ ವಾಸವಿದ್ದಾರೆ. ...

READ MORE

Related Books