ಅನಂತ ಅವರ ಚೊಚ್ಚಲ ಕೃತಿ "ಋಣಭಾರ" ಕಥಾಸಂಕಲನದಲ್ಲಿ 15 ಕಥೆಗಳಿದ್ದು, ಸಂಬಂಧಗಳನ್ನು ಹುಡುಕಾಡುವ ಪರಿ, ಹಳ್ಳಿ ಚಿತ್ರಣಗಳು ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಸಂಬಂಧಿತ ಕಥೆಗಳನ್ನು ಹೆಣೆಯಲಾಗಿದೆ. ಈ ಕೃತಿಯು 2019ನೇ ಸಾಲಿನ 'ಕನ್ನಡ ಪುಸ್ತಕ ಪ್ರಾಧಿಕಾರ, ಯುವಬರಹಗಾರರ ಚೊಚ್ಚಲ ಕೃತಿ' ಬಹುಮಾನ ಪಡೆದಿದೆ. ಸಂಕಲನಕ್ಕೆ, ಕಥೆಗಾರ ಹನುಮಂತ ಹಾಲಿಗೇರಿ ಮುನ್ನುಡಿ ಬರೆದಿದ್ದಾರೆ. ಕಥಾ ವಸ್ತು, ನಿರೂಪಣಾ ಶೈಲಿ, ಪಾತ್ರಗಳ ಸೃಷ್ಟಿ, ಸನ್ನಿವೇಶಗಳ ಜೋಡಣೆ, ಪರಿಣಾಮಕಾರಿ ಸಂಭಾಷಣೆ ಇತ್ಯಾದಿ ಸಾಹಿತ್ಯಕ ಅಂಶಗಳಿಂದ ಇಲ್ಲಿಯ ಕಥೆಗಳು ಓದುಗರ ಗಮನ ಸೆಳೆಯುತ್ತವೆ.
ಇಕ್ಕಟ್ಟಿನಲ್ಲಿ ಬದುಕಿದರೂ, ನೆಮ್ಮದಿಯಿಂದ ದಿನ ಕಳೆಯುವವರಲ್ಲಿ ಮಿಡಲ್ ಕ್ಲಾಸ್ ಫ್ಯಾಮಿಲಿಯರದ್ದೇ ಎತ್ತಿದ ಕೈ. ಬೆರಳೆಣಿಕೆಯಷ್ಟೇ ಮನೆ ಜನ. ಎಲ್ಲರಿಗೂ ಒಂದೇ ಟಿ.ವಿ, ಒಂದೇ ಬಾತ್ರೂಮ್, ಹಾಗೂ ಒಂದೇ ಕಿಚನ್. ಇವರು ಆಚಾರ-ವಿಚಾರ, ಸಂಸ್ಕೃತಿ-ಸಂಪ್ರದಾಯ, ಗೌರವ-ಮರ್ಯಾದೆಗಳಿಗಾಗಿಯೇ ಉಸಿರಾಡುತ್ತಾರೆ. ದೊಡ್ಡ ದೊಡ್ಡ ಕನಸುಗಳು ಈಡೇರದಿದ್ದರೂ ಚಿಕ್ಕ ಪುಟ್ಟ ಆಸೆಗಳಲ್ಲಿಯೇ ತೃಪ್ತಿಪಡುತ್ತಾರೆ. "ಹಾಸಿಗೆ ಇದ್ದಷ್ಟು ಕಾಲು ಚಾಚು, ಆಸೆಯೇ ದುಃಖಕ್ಕೆ ಮೂಲ, ಅತಿ ಆಸೆ ಗತಿ ಕೇಡು, ನಿಧಾನವೇ ಪ್ರದಾನ" ಇವುಗಳು ಗಾದೆಗಳಾಗಿರದೆ, ಮಿಡಲ್ ಕ್ಲಾಸ್ ಫ್ಯಾಮಿಲಿಯ ಧ್ಯೇಯೋದ್ಧೇಶಗಳಾಗಿರಬೇಕಾಗಿತ್ತು. ಯಾಕೆಂದರೆ ಅವುಗಳಂತೆ ನಡೆಯುವವರು ಇವರು ಮಾತ್ರವೇ.. ಸಣ್ಣ ಸೂಜಿಯಿಂದ ಸಾವಿನವರೆಗೂ ಅಚ್ಚುಕಟ್ಟಿನ ಬದುಕಿಗಾಗಿ ಹೋರಾಡುವ ಹಲವಾರು ವೈವಿಧ್ಯಮಯ ಪಾತ್ರಗಳನ್ನು ಅನಂತ ಅವರು ಈ ಸಂಕಲನದಲ್ಲಿ ಪರಿಚಯಿಸಿದ್ದಾರೆ. ಕಥೆಗಳಲ್ಲಿ ಒಂದೊಂದು ಪಾತ್ರಗಳು ತಮ್ಮನ್ನು ತಾವೇ ಸುತ್ತಿಕೊಂಡಿರುವ ರೀತಿಯಲ್ಲಿ ಕಂಡುಬಂದಿವೆ. ಸುಖ-ದುಃಖ, ನೋವು-ನಲಿವು, ಆಸೆ-ಆಯಾಸಗಳನ್ನು ಸಮಾನವಾಗಿ ಸ್ವೀಕರಿಸುವ ಎಲ್ಲರಿಗೂ ಈ ಕಥೆಗಳು ಊಟದೆಲೆಯ ಮೇಲಿನ ಪಾಯಸ ಹಾಗೂ ಲಡ್ಡುವಿನಂತೆ ರುಚಿಸುತ್ತವೆ. ನಮ್ಮ ಪ್ರಕಾಶನದ ಪ್ರಕಟಣೆಯ ಮೊದಲ ಕೃತಿಯಾಗಿ ಅನಂತ ಅವರ "ಋಣಭಾರ" ಕಥಾ ಸಂಕಲನ ಸಿಕ್ಕಿದ್ದು ನಮಗೆ ಖುಷಿ ತಂದಿದೆ.
-ನಾರಾಯಣ್ ಕೆ ಎನ್
ಪ್ರಕಾಶಕರು, ಅವ್ವ ಪುಸ್ತಕಾಲಯ
©2021 Bookbrahma.com, All Rights Reserved