‘ಹವೇಲಿ ದೊರೆಸಾನಿ’ ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರ ಕಥಾ ಸಂಕಲನವಾಗಿದೆ. ಕೃತಿಯ ಬಗ್ಗೆ ಕುಂ.ವೀರಭದ್ರಪ್ಪ ಅವರು ಹೀಗೆ ಹೇಳಿದ್ದಾರೆ; ಪ್ರತಿ ಕಥೆಯಲ್ಲಿನ ನಿಮ್ಮ ನಿಲುವು ಸುಶಿಕ್ಷಿತರ ಪರವಿಲ್ಲ. ಆದರೆ ನೀವಿರುವುದು ಅನಕ್ಷರಸ್ಥರ, ನಿರ್ಲಕ್ಷಿತರ ಪರ, ಸಮಾಜದ ಕೆಳಸ್ತರದ ವ್ಯಕ್ತಿಗಳ ಅಂತಃಕರಣವನ್ನು ಪ್ರತಿ ಕತೆಯಲ್ಲಿ ಅನಾವರಣಗೊಳಿಸಿದ್ದೀರಿ. ರುದ್ರಾಪುರ ನಿಮ್ಮ ಬಹುತೇಕ ಕಥೆಗಳಲ್ಲಿನ ಗ್ರಾಮೀಣ ಭಾರತದ ರೂಪಕ. ಇದು ಸ್ವಾತಂತ್ರೋತ್ತರ ಭಾರತದ ಕಲುಷಿತ ಗ್ರಾಮೀಣ ಭಾರತದ ಎಲ್ಲಾ ಅಪಸವ್ಯಗಳ ಕಾರಸ್ಥಾನವೂ ಹೌದು. 'ಅನ್ನಡ ಕಂಟೆವ್ವ' ಕಥೆಯಲ್ಲಿನ ಕಂಟೆವ್ವ ತನ್ನೆದೆಯಲ್ಲಿ ಒಂದು ಹಿಡಿ ಅಕ್ಷರಗಳಿಲ್ಲ, ನಿಜ, ಆದರೆ ಆಕೆ ಒಳಿತು-ಕೆಡುಕುಗಳ ತರತಮದ ತಿಳವಳಿಕೆಯುಳ್ಳವಳು, ಆದರೆ ಭೂಮಿಯ ಹಂಗು ಇಲ್ಲದೆ ಬದುಕುವ ಛಲಗಾರ್ತಿ. ಆದರೆ ಸುಶಿಕ್ಷಿತ ಸಮಾಜದ ಕನಸು ಕಾಣುತ್ತಾಳೆ. ಈ ಕಥೆಯಲ್ಲಿ ಸರ್ಕಾರಿ ಶಾಲೆ ವಿರೋಧಿಸುವವರು ಅಕ್ಷರಸ್ಥರು, ಸಮಾಜದ ಮೇಲ್‌ಸ್ತರದವರು. ಸ್ಥಳೀಯರ ವಿರೋಧಕ್ಕೆ ಸೊಪ್ಪು ಹಾಕದೆ ಕಂಟೆವ್ವ ತನ್ನ ಮೂರಾಲ್ಕು ಎಕರೆ ಜಮೀನನ್ನು ಶಾಲಾ ಕಟ್ಟಡಕ್ಕೆ ದಾನದ ರೂಪದಲ್ಲಿ ನೀಡಿ ತಾನು ಭೂಹೀನಳಾಗುತ್ತಾಳೆ. ಅಂತಃಕರಣ ಕಲಕುವ ವಸ್ತುವಿನ "ಆ ಹನ್ನೆರಡು ಗಂಟೆಗಳು' ಕಥೆಗಾರನ ಸ್ವಾನುಭವದ ಕಥೆ. ಆ ಕತೆಯನ್ನು ಅದಾವ ಪರಿಯಲ್ಲಿ ಕಟ್ಟಿಕೊಟ್ಟಿದ್ದಿರೆಂದರೆ ನಿಜಕ್ಕೂ ವಿಸ್ಮಯ. ವೃತ್ತಿ ರಂಗಭೂಮಿಗೆ ಸಂಬಂಧಿಸಿದ ಎಡರು ತೊಡರುಗಳನ್ನು ನವಿರಾಗಿ ಹೇಳುವ ಕಥೆ 'ಗ್ರೀನ್‌ರೂಮ್' ಮಾರಣಾಂತಿಕ ವ್ಯಾಧಿ ಕೇವಲ ಜೀವಂತ ಸಮಾಜವನ್ನು ಮಾತ್ರ ನಿಷ್ಕ್ರಿಯಗೊಳಿಸಲಿಲ್ಲ. ಅದು ನಾಟಕ ಕಂಪನಿ ಕುರುಕ್ಷೇತ್ರದ ಪ್ರದರ್ಶನಕ್ಕೂ ಮಾರಣಾಂತಿಕ ಏಟು ನೀಡುತ್ತದೆ. ಮಲ್ಲಣ್ಣ, ನೀವು ಎಷ್ಟು ಜಾಣತನದಿಂದ ಭಿನ್ನ ರೀತಿಯಲ್ಲಿ ಕಥೆ ಹೇಳಬಲ್ಲಿರಿ ಎಂಬುದಕ್ಕೆ ನಿದರ್ಶನ ಸಂಕಲನದಲ್ಲಿರುವ '@ಕ್ಯಾ, ಪ್ರತಾಪಮೋಹನ್ ಸರ್ಕಲ್' ಕತೆ. ಈ ಹೆಸರಿನ ಹುತಾತ್ಮ ಅಸ್ವಸ್ಥ ಸಮಾಜದ ಪ್ರತ್ಯಕ್ಷ ಸಾಕ್ಷಿ, ವೀರಯೋಧನ ವಿಗ್ರಹ ಕೇವಲ ವಿಗ್ರಹವಲ್ಲ, ಅದಿರುವುದು ಜನನಿಬಿಡ ಸರ್ಕಲ್‌ನಲ್ಲಿ. ಅದು ತನ್ನ ಕಣ್ಣಳತೆಯಲ್ಲಿ ಘಟಿಸುವ ತರಹೇವಾರಿ ಕಾನೂನು ಭಂಜಕರ ಚಟವಟಿಕೆಗಳನ್ನು ಗಮನಿಸುತ್ತದೆ. ಅದು ಜಗದೀಶ ಹೆಸರಿನ ಲೇಖಕನಿಗೆ ತಾನು ಕಂಡುಂಡ ಕಹಿ ಘಟನೆಗಳನ್ನು ನಿವೇದಿಸುತ್ತದೆ. ಲೇಖಕ ಜಗದೀಶನ ಮೂಲಕ ಶಶಿರೇಖಾಳ ಕೊಲೆಗಾರ ಚಂದ್ರಶೇಖರನನ್ನು ನ್ಯಾಯಾಲಯದ ಕಟಕಟೆಯಲ್ಲಿ ನಿಲ್ಲಿಸುತ್ತದೆ. ಇದು ನಿಸ್ಸಂದೇಹವಾಗಿ ನಿಮ್ಮ ಪ್ರಾತಿನಿಧಿಕ ಕಥೆ ಎಂದು ತಿಳಿಸಿದ್ದಾರೆ.
ಮಲ್ಲಿಕಾರ್ಜುನ ಶೆಲ್ಲಿಕೇರಿ ಅವರು 1998 ರ ಗೆಜೆಟೆಡ್ ಪ್ರೋಬೆಷನರ್ ಬ್ಯಾಚ್ ನ ಅಧಿಕಾರಿ. ಪ್ರಸ್ತುತ ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದಲ್ಲಿ ಸಿ.ಎ.ಓ ಹುದ್ದೆಯಲ್ಲಿ ಕಾರ್ಯನಿರ್ವಹಿಸುತಿದ್ದಾರೆ . ಕಾಲೇಜು ದಿನಗಳಿಂದಲೂ ಸಾಹಿತ್ಯ ಆಸಕ್ತಿ ಹೊಂದಿದ್ದ ಅವರು ಕಥೆ ಕವನ,ಚುಟುಕುಗಳು ಕಾಲೇಜ್ ಸಾಹಿತ್ಯ ಪತ್ರಿಕೆಗಳಲ್ಲಿ ಪ್ರಕಟಿಸಿದ್ದಾರೆ. ಕಥೆ,ಚುಟುಕು,ಹಾಸ್ಯಬರಹ,ಲೇಖನಗಳು ಮಯೂರ, ಕರ್ಮವೀರ,ತುಷಾರ,ಸಮಾಜಮುಖಿ,ವಿಜಯವಾಣಿಯಲ್ಲಿ ಪತ್ರಿಕೆಗಳಲ್ಲಿ ಪ್ರಕಟವಾಗಿದೆ .ಕಥೆಗಳು ಆಕಾಶವಾಣಿ ಧಾರವಾಡ ಕೇಂದ್ರದಿಂದ ಪ್ರಸಾರವಾಗಿವೆ, ಪ್ರಸ್ತುತ ಲೋಕಾರ್ಪಣೆಯಾಗುತ್ತಿರುವ ಅವರ "ದೀಡೆಕರೆ ಜಮೀನು" ಕಥಾಸಂಕಲನ ಅವರ ಪ್ರಥಮ ಕೃತಿಯಾಗಿದೆ. ಕೃತಿ- ದೀಡೆಕರೆ ಜಮೀನು ...
READ MORE