ಕಾಡಿನ ದಾರಿ

Author : ಜಿ.ಪಿ. ಬಸವರಾಜು

Pages 120

₹ 110.00
Year of Publication: 2018
Published by: ಮನೋಹರ ಗ್ರಂಥ ಮಾಲಾ
Address: ಲಕ್ಷ್ಮಿಭವನ, ಸುಭಾಸ್ ರೋಡ್, ಧಾರವಾಡ- 580001

Synopsys

ಪತ್ರಕರ್ತ, ಬರಹಗಾರರಾದ ಜಿ.ಪಿ.ಬಸವರಾಜು ಅವರ ಕಾದಂಬರಿಕಾಡಿನ ದಾರಿ’.

ಕಾಡೊಳಗೆ ಸಾಕ್ಷ್ಯಚಿತ್ರ ಮಾಡಲು ಬರುವನಾಗರಿಕರು ಅಲ್ಲಿನ ಬುಡಕಟ್ಟು ಜನರ ಜೀವನವನ್ನು ಹೇಗೆ ಪಲ್ಲಟಗೊಳಿಸುತ್ತಾರೆ ಎನ್ನುವುದನ್ನು ಈ ಕಾದಂಬರಿ ಚಿತ್ರಿಸುತ್ತದೆ. ನಾಗರಿಕರ ಳನೋಟಗಳ ವಿಸ್ತೃತ ವಿವರಗಳೂ ಬುಡಕಟ್ಟು ಜನರ ಬದುಕಿನ ಹಾಡುಪಾಡುಗಳೂ ಕಾದಂಬರಿಯಲ್ಲಿ ಪ್ರಮುಖವಾಗಿವೆ.  ಇಲ್ಲಿ ನಾಗರಿಕರ ಅನಾಗರಿಕ ಮನಸ್ಸುಗಳ ನಡುವೆ ನಡೆಯುವ ಜಂಜಾಟ, ಮನಸ್ಥಿತಿಗಳನ್ನು ಕೆಲವು ಪಾತ್ರಗಳ ಮೂಲಕ ಕಟ್ಟುತ್ತಾರೆ.

ರಾಮಪ್ಪನೆಂಬ ನಿರ್ದೇಶಕ, ಬುಡಕಟ್ಟು ಜನರ ಹಾಡು ಪಾಡುಗಳ ದಾರಿ ವಿನಾಶದ ರೂಪವೋ ಎಂಬಂತೆ ಈ ಕಾದಂಬರಿಯಲ್ಲಿ ಬರುವ ಆನೆಗಳು ಎಲ್ಲ ವಿಷಾದವನ್ನಷ್ಟೆ ಉಳಿಸುತ್ತಾ ಕಾದಂಬರಿಯ ವಸ್ತುವನ್ನು ಜಾಗೃತಗೊಳಿಸಿ ಆದಿವಾಸಿಗಳ ಕಾಡಿನ ಚಿತ್ರಣವನ್ನು ಓದುಗರಿಗೆ ಹತ್ತಿರವಾಗಿಸುತ್ತದೆ.

About the Author

ಜಿ.ಪಿ. ಬಸವರಾಜು
(03 August 1952)

ಹಿರಿಯ ಪತ್ರಕರ್ತ, ಸಾಹಿತಿ ಜಿ.ಪಿ ಬಸವರಾಜು ಅವರು ಹುಟ್ಟಿದ್ದು 1952 ಆಗಸ್ಟ್ 3ರಂದು. ಕತೆ, ಕವಿತೆ, ಪ್ರವಾಸ ಕಥನ, ವಿಮರ್ಶೆ, ಕಾದಂಬರಿ ಹೀಗೆ ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕ್ರಿಯಾಶೀಲರಾಗಿರುವ ಜಿ.ಪಿ. ಬಸವರಾಜು ಅವರು ಮೂರು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಪುಸ್ತಕ ಪ್ರಶಸ್ತಿಯನ್ನು ಪಡೆದಿದ್ದಾರೆ. ಇವರ ಪ್ರಮುಖ ಕೃತಿಗಳೆಂದರೆ ಬೆತ್ತಲೆಯ ಬೆಳಕನುಟ್ಟು, ಕೊಳ್ಳದ ಹಾದಿ, ಶಿಖರ ಸಾಲು, ಕಾಗೋಡು, ಕಾಡಿನ ದಾರಿ. ಅವರಿಗೆ ಪುತಿನ ಕಾವ್ಯ ಪ್ರಶಸ್ತಿ, ಜಿಎಸ್‍ಎಸ್‍ ಕಾವ್ಯ ಪ್ರಶಸ್ತಿ, ಬೆಸಗರಹಳ್ಳಿ ರಾಮಣ್ಣ ಕಥಾ ಪ್ರಶಸ್ತಿ, ಕಿ.ರಂ. ಪುರಸ್ಕಾರ ಮುಂತಾದ ಗೌರವ ಪ್ರಶಸ್ತಿಗಳು ಸಂದಿವೆ. ...

READ MORE

Reviews

 ಕಾಡು-ನಾಡುಗಳ ಮುಖಾಮುಖಿಯ ಕಥೆ

ಪತ್ರಕರ್ತರೂ, ಕಥೆಗಾರರೂ ಆಗಿರುವ ಜಿ.ಪಿ. ಬಸವರಾಜು ಅವರ ಮೊದಲ ಕಾದಂಬರಿ ಇದರ ಹೆಸರು ಮತ್ತು ಸ್ವರೂಪದಿಂದ ಮೇಲ್ನೋಟಕ್ಕೆ ಕಾಡಿನ ಅನುಭವಗಳ ಕುರಿತ ಪ್ರವಾಸ ಕಥನದಂತೆ ಕಾಣುತ್ತದೆ. ಆದರೆ ಪುಟ ತಿರುವಿದಂತೆ ಕಾಡು, ಅಲ್ಲಿನ ಹಸಿರು, ನೆಲ-ಜಲ ಮತ್ತು ಕಾಡನ್ನೇ ನಂಬಿ ಬದುಕಿರುವ ಆದಿವಾಸಿಗಳ ಕುತೂಹಲಕರ ಚಿತ್ರಣವುಳ್ಳ ಒಂದು ವಿಶಿಷ್ಟ ಕಾದಂಬರಿಯನ್ನಾಗಿಸುವ ಲೇಖಕರ ಮಹತ್ವಾಕಾಂಕ್ಷೆ ಎದ್ದು ಕಾಣುತ್ತದೆ. ಕರ್ನಾಟಕದ ಪ್ರಸಿದ್ದ ಆದಿವಾಸಿ ಸಮುದಾಯವಾದ ಜೇನುಕುರುಬರ ಬಗ್ಗೆ ಸಾಕ್ಷ ಚಿತ್ರ ಮಾಡಲು ಹೊರಟ ಚಿತ್ರ ತಂಡವೊಂದರ ಅನುಭವಗಳು ಮತ್ತು ತಂಡದ ನಿರ್ದೇಶಕ ರಾಮಪ್ಪನ ಚಿಂತನೆಗಳ ರೂಪದಲ್ಲಿ ಕಾದಂಬರಿಯ ಕಥಾಹಂದರ ಕಟ್ಟಿಕೊಳ್ಳುತ್ತಾ ಹೋಗುತ್ತದೆ.

ಜೇನುಕುರುಬರ ಗಿಡಮೂಲಿಕೆಗಳ ಜ್ಞಾನ, ಅವರ ಹಾಡು-ಹಸೆ, ದೈವದ  ಪೂಜೆ, ಆವಾಹನೆಯ ವಿವರಗಳೊಂದಿಗೆ ಕಾದಂಬರಿ ಕುತೂಹಲದಿಂದ ಓದಿಸಿಕೊಂಡು ಹೋಗುತ್ತದೆ. ಕಾಡಿನ ಮೂಲ ನಿವಾಸಿಗಳಿಗೆ ನಾಗರಿಕ ಸೌಕರ್ಯಗಳನ್ನು ಒದಗಿಸುವ ನೆಪದಲ್ಲಿ ಸರ್ಕಾರ ಅವರನ್ನು ಒಕ್ಕಲೆಬ್ಬಿಸುವ ವಿಚಾರವನ್ನು ಕಾದಂಬರಿ ತುಲನಾತ್ಮಕವಾಗಿ ಚರ್ಚಿಸುತ್ತದೆ. ಅರಣ್ಯ ನಿವಾಸಿಗಳ ವಿಷಯದಲ್ಲಿ ಅರಣ್ಯ ಇಲಾಖೆಯವರೇ ರಾಕ್ಷಸರಾಗುವ ಸನ್ನಿವೇಶ ಒಂದೆಡೆಯಾದರೆ, ಮೂಲನಿವಾಸಿಗಳಿಗೆ ಶಿಕ್ಷಣ ನೀಡುವ ಸ್ವಯಂ ಸೇವಾ ಸಂಸ್ಥೆಗಳು ಅವರನ್ನು ಇತ್ತ ನಾಡಿಗೂ ಸಲ್ಲದೇ, ಅತ್ತ ಕಾಡಿಗೂ ಎರವಾಗಿ ತ್ರಿಶಂಕುಗಳನ್ನಾಗಿಸುವ ಸಂದೇಹವನ್ನು ಕಾದಂಬರಿ ದಾಖಲಿಸುತ್ತದೆ. ನಾಗರಿಕ ಮನುಷ್ಯನ ಕೊನೆ ಇಲ್ಲದ ಆಸೆಗಳೇ ಬಹುದೊಡ್ಡ ಸಂಘರ್ಷವನ್ನು ಸೃಷ್ಟಿಸಿರುವಾಗ ಕಾಡಿನ ಸರಳ ಜೀವಿಗಳನ್ನು ನಾಗರಿಕರನ್ನಾಗಿಸುವುದು ಅವರಿಗೆ ಮಾಡುವ ಒಳಿತೇ ಅಥವಾ ಕೇಡೇ ಎಂಬ ಮೂಲಭೂತ ಪ್ರಶ್ನೆಯನ್ನು ಎತ್ತುವ ಮೂಲಕ ಕಾದಂಬರಿ ಹೆಚ್ಚು ಪ್ರಸ್ತುತವಾಗುತ್ತದೆ.

ನೂರು ಪುಟಗಳ ಕಿರುಕಾದಂಬರಿಯಲ್ಲಿ ಜೇನುಕುರುಬರು ಮತ್ತು ವನ್ಯಜೀವಿಗಳ ಚಿತ್ರಣದ ಜೊತೆಗೆ ಅದನ್ನು ಚಿತ್ರಿಸಲು ಹೋದ ತಂತ್ರಜ್ಞರನ್ನೂ ಪಾತ್ರಗಳನ್ನಾಗಿಸುವ ಮೂಲಕ ಅವರವರ ಭಾವನಾ ಲೋಕದ ವಿವರಗಳಿಗೂ ಅವಕಾಶ ಕಲ್ಪಿಸಲಾಗಿದೆ. ಆದರೆ ಇದು ಕಾದಂಬರಿಯ ಓಘಕ್ಕೆ ತೊಡಕಾಗಿ ಕಥಾವಸ್ತುವಿನೊಂದಿಗೆ ಪಾತ್ರಗಳು ಮಿಳಿತವಾಗದೇ ಹೊರಗುಳಿಯುವುದರಿಂದ ಎಲ್ಲವೂ ಗೋಜಲಾಗಿ ಬಿಡುತ್ತದೆ. ಅಲ್ಲಲ್ಲಿ ಭಾಷೆಯ ಕ್ಲೀಷೆ, ಕೃತಕ ಶೈಲಿಯ - ನಿರೂಪಣೆಗಳಿಂದಾಗಿ ಸಾಹಿತ್ಯ ಕೃತಿಯೊಂದರ ಓದಿನ ಅನುಭವವಾಗದೇ - ಕಾದಂಬರಿ ದೃಷ್ಟಿಯಿಂದ ನಿರಾಸೆಯನ್ನೂ ಮೂಡಿಸುತ್ತದೆ.

ಆದಾಗ್ಯೂ ಕಾಡಿನ ಜೀವಿಗಳ ಜೀವನ ಶ್ರದ್ಧೆ, ನದಿ-ಮರ-ಪರಿಸರ ಕುರಿತ - ರಾಮಪ್ಪನ ಚಿಂತನೆಯ ರೂಪದಲ್ಲಿ ಕಾದಂಬರಿಯ ಉದ್ದಕ್ಕೂ ಹೊಮ್ಮುವ  ಲೇಖಕರ ಒಳನೋಟಗಳು ಕೃತಿಯ ತೂಕವನ್ನು ಕಾಯ್ದುಕೊಂಡಿದೆ. ಕಾಡುಪ್ರಾಣಿಗಳು ಮೈಸೂರು ನಗರಕ್ಕೆ ನುಗ್ಗುವುದರ ಚಿತ್ರಣದೊಂದಿಗೆ ಕಾದಂಬರಿ ಮುಕ್ತಾಯವಾಗುತ್ತದೆ. ಪರಿಸರ ನಾಶದಿಂದಾಗಿ ನಮ್ಮ ನಾಗರಿಕತೆಯ ನಾಶಕ್ಕೆ = ನಾವೇ ಕಾರಣವಾಗುವ ಸಾಧ್ಯತೆಯನ್ನು ಇದು ಮನಗಾಣಿಸುತ್ತದೆ. ಕಾದಂಬರಿಗೆ ಬೆನ್ನುಡಿ ಬರೆದಿರುವ ಜಿ. ರಾಜಶೇಖರ ಅವರು ನಾಡಿನವರು ಕಾಡನ್ನು, ಕಾಡಿನ ಜನರನ್ನು ಪರಕೀಯವೆಂಬಂತೆ ಕಂಡು ಅವರನ್ನು ಕೇವಲ ತಮ್ಮ ನೋಟ ಮತ್ತು ಅಧ್ಯಯನದ ವಸ್ತುವನ್ನಾಗಿಸಿಕೊಳ್ಳುವುದರ ಬಗ್ಗೆ ಪ್ರಶ್ನಿಸುತ್ತಾ ಪ್ರಕ್ರಿಯೆ ತಿರುವು ಮುರುವುಗೊಳ್ಳಬೇಕೆಂದು ಆಶಿಸುತ್ತಾರೆ. ಕಾದು ನೋಡಬೇಕಾಗಿದೆ!

-ಎನ್.ಎಂ. ಕುಲಕರ್ಣಿ

ಕೃಪೆ : ಹೊಸ ಮನುಷ್ಯ ಮಾಸಿಕ (ನವೆಂಬರ್ 2018)

Related Books