ಆತ್ಮಕತೆ

Author : ಧೀರಜ್ ಪೊಯ್ಯೆಕಂಡ

Pages 160

₹ 195.00
Year of Publication: 2024
Published by: ಸ್ನೇಹ ಬುಕ್ ಹೌಸ್
Address: 165, 10ನೇ ಮುಖ್ಯರಸ್ತೆ, ಶ್ರೀನಗರ, ಬೆಂಗಳೂರು - 560050
Phone: 9845031335

Synopsys

‘ಆತ್ಮಕತೆ’ ಧೀರಜ್ ಪೊಯ್ಯೆಕಂಡ ಅವರ ಹಾರರ್ ಥ್ರಿಲ್ಲರ್ ಕಾದಂಬರಿ. ಕೃತಿಯ ಕುರಿತು ಬರೆದಿರುವ ಧೀರಜ್ ಅವರು ‘ನಮ್ಮ ಹುಟ್ಟು ನಮ್ಮ ಕೈಯಲ್ಲಿಲ್ಲ. ಬಹುತೇಕ ಸಂದರ್ಭಕ್ಕೆ ನಮ್ಮ ಸಾವು ಕೂಡ ನಮ್ಮ ಕೈಯಲ್ಲಿಲ್ಲ. ಮೋಡಗಳೆರಡರ ಕದನ ಗುಡುಗು ಮಿಂಚಿನ ರೂಪದಲ್ಲಿ ಪ್ರಾಣಿ-ಪಕ್ಷಿಗಳ ಪ್ರಾಣ ತೆಗೆಯಬಹುದು. ಶಿಲಾಪದರಗಳ ನಡುವಿನ ಘರ್ಷಣೆ ಭೂಕಂಪದ ರೂಪದಲ್ಲಿ ಊರಿಗೆ ಊರನ್ನೇ ಆಪೋಷಣೆ ತೆಗೆದುಕೊಳ್ಳಬಹುದು. ಚಾಲಕರಿಬ್ಬರ ನಡುವಿನ ಪೈಪೋಟಿ ಪ್ರಯಾಣಿಕರನ್ನು ಬಲಿ ತೆಗೆದುಕೊಳ್ಳಬಹುದು. ಆಡಳಿತ ಪಕ್ಷ ಮತ್ತು ವಿಪಕ್ಷಗಳ ರಾಜಕೀಯ ಸಂಘರ್ಷ ಪ್ರಜೆಗಳ ಸಾವಿಗೆ ಕಾರಣವಾಗಬಹುದು. ಹೀಗೆ ಅಕಾಲಿಕ ಮರಣಕ್ಕೆ ಕಾರಣ ನಾವೇ ಆಗಬೇಕೆಂದಿಲ್ಲ. ಯಾರದ್ದೋ ಸ್ವಾರ್ಥಕ್ಕೆ, ಯಾರದ್ದೋ ಜಿದ್ದಿಗೆ, ಇನ್ಯಾರದ್ದೋ ಸಂಘರ್ಷಕ್ಕೆ ತಣ್ಣಗೆ ತನ್ನ ಪಾಡಿಗೆ ತಾನು ಬದುಕುತ್ತಿದ್ದವನು ಪ್ರಾಣ ಕಳೆದುಕೊಳ್ಳುತ್ತಾನೆ.

ಒಂದರ ಮೇಲೊಂದು ಶ್ರಮದ ಕಲ್ಲು ಇಡುತ್ತಾ, ಭವ್ಯ ಭವಿಷ್ಯಕ್ಕೆ ಬುನಾದಿ ಹಾಕುತ್ತಾ, ಇನ್ನೇನು ಸಾಧನೆಯ ಹಾದಿಯಲ್ಲಿ ಹೆಜ್ಜೆ ಇಟ್ಟೆ ಅನ್ನುವಾಗ ಸಾವು ನಿರ್ದಾಕ್ಷಿಣ್ಯವಾಗಿ ತನ್ನ ಮಡಿಲಿಗೆ ಎಳೆದುಕೊಳ್ಳುತ್ತದೆ. ಅಷ್ಟಕ್ಕೂ ಈ ಸಾವು ಬರುವುದು ಶರೀರಕ್ಕೆ ತಾನೆ?. ಈ ಶರೀರವನ್ನು ನಡೆಸುವ ಚೈತನ್ಯ ಇದೆಯಲ್ಲ... ಅದೇ ಆತ್ಮ. ಅವಿನಾಶಿ ಆತ್ಮ... ಅದಕ್ಕೆ ಸಾವಿಲ್ಲವಲ್ಲ.! ಆತ್ಮ ಅಂತ ಯಾವುದಕ್ಕೆ ಹೇಳುತ್ತಾರೆ? ಆತ್ಮ ಎಂದರೆ ನಾನು ಎನ್ನುವ ಭಾವನೆ ಅನ್ನುತ್ತಾರೆ ಕೆಲವರು. ಒಂದು ಸಲ ಯೋಚನೆ ಮಾಡಿ ನೋಡಿ. ಹುಟ್ಟು- ಸಾವಿಲ್ಲದ, ಬಾಲ್ಯ, ಕೌಮಾರ್ಯ, ಯೌವ್ವನ, ವಾರ್ಧಕಾವಸ್ಥೆಗಳಿಲ್ಲ “ಆತ್ಮ” ಶರೀರದಿಂದ ಮುಕ್ತಗೊಂಡ ಮೇಲೆಯೂ, ಆ “ನಾನು” ಎನ್ನುವ ಭಾವನೆಯಿಂದ ಮುಕ್ತಗೊಳ್ಳದಿದ್ದರೆ, ಮನುಷ್ಯ ಸಹಜವಾದ ಅರಿಷಡ್ವರ್ಗಗಳನ್ನು ಹಾಗೆಯೇ ಉಳಿಸಿಕೊಂಡರೆ, ತನ್ನ ಶರೀರದ ಸಾವಿಗೆ ಕಾರಣರಾದವರ ಸಾವನ್ನು ಕಾಣುವ ಹಪಾಹಪಿಗೆ ಬಿದ್ದುಬಿಟ್ಟರೆ ಏನಾಗಬಹುದು? ಬಹುಶಃ ಮನುಷ್ಯ ಇನ್ನೊಂದು ಜೀವವನ್ನು ತೆಗೆಯುವ ಯೋಚನೆಯನ್ನೂ ಮಾಡುವುದಿಲ್ಲ.

‘ಆತ್ಮಕತೆ’ಯ ಕತೆಯೂ ಇದೇ. ತಾನೇನೂ ಮಾಡದಿದ್ದರೂ, ಪರರ ಮೋಜಿಗಾಗಿ ಪ್ರಾಣ ಕಳೆದುಕೊಂಡು ಪ್ರತೀಕಾರದ ಜಿದ್ದಿಗೆ ಬಿದ್ದ ಆತ್ಮದ ಕತೆ ಇದು. ಈ ಕಾದಂಬರಿ ಹಾರರ್ ಜಾನರ್‌ಗೆ ಸಲ್ಲುತ್ತದೆಯಾದರೂ ಇಲ್ಲಿ ಪ್ರೀತಿ, ಸ್ನೇಹ, ತಾಯಿ ಮಮತೆ, ಕನಸು, ಪಶ್ಚಾತ್ತಾಪ ಎಲ್ಲವೂ ಇದೆ. “ಕಥೆಯೊಳಗೆ ಕಥೆ” ಹೇಳುವ ತಂತ್ರವನ್ನು ಈ ಕಾದಂಬರಿಯಲ್ಲೂ ಬಳಸಿಕೊಳ್ಳಲಾಗಿದೆ ಎಂದಿದ್ದಾರೆ.

About the Author

ಧೀರಜ್ ಪೊಯ್ಯೆಕಂಡ

ಯುವ ಲೇಖಕ ಧೀರಜ್ ಪೊಯ್ಯೆಕಂಡ ಅವರು ಮೂಲತಃ ಬಂಟ್ವಾಳ ತಾಲೂಕಿನ ಅಮ್ಟೂರು ಗ್ರಾಮದ ಪೊಯ್ಯೆಕಂಡದವರು. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವೀಧರರು. ಇವರು ಹವ್ಯಾಸಿ ಬರಹಗಾರ, ಫೋಟೋಗ್ರಾಫರ್ ಹಾಗೂ ಗ್ರಾಫಿಕ್ ಡಿಸೈನರ್ ಕೂಡ ಹೌದು. ಪ್ರಸ್ತುತ ವಿಜಯಕರ್ನಾಟಕದಲ್ಲಿ ಪುರವಣಿ ವಿಭಾಗದಲ್ಲಿ  ಕಾರ್ಯನಿರ್ವಹಿಸುತಿದ್ದಾರೆ. ‘ಮಿತಿ’ ಅವರ ಮೊದಲ ಕಾದಂಬರಿ. ಕೃತಿಗಳು: ಮಿತಿ, ಪರಾಶರ, 2035 ...

READ MORE

Related Books