ಮಹಾಭಾರತದ ಕತೆಯನ್ನು ಆಧರಿಸಿದ ಕಾದಂಬರಿಯಿದು. ಭೈರಪ್ಪನವರ ’ಪರ್ವ’ಕ್ಕೆ ಮಹಾಭಾರತವೇ ಆಧಾರ. ’ವ್ಯಾಸಕೃತ’ ಭಾರತ ಎಂಬುದು ಯಾವುದು? ಎಂಬ ಪ್ರಶ್ನೆ ಇದೆ. ಭೈರಪ್ಪನವರು ಮಹಾಭಾರತವನ್ನು ತನ್ನದೇ ವಿಶಿಷ್ಟ ಮತ್ತು ವಿಭಿನ್ನ ನೆಲೆಯಲ್ಲಿ ಚಿತ್ರಿಸಿದ್ದಾರೆ. ಇದನ್ನು ಮಹಾಭಾರತದ ಪುನರ್ ಸೃಷ್ಟಿ ಎನ್ನಬಹುದು. ಭೈರಪ್ಪನವರು ಈ ಕಾದಂಬರಿಯಲ್ಲಿ ನಿರೂಪಣಾ ವಿಧಾನವನ್ನು ಕೈ ಬಿಟ್ಟು ಪಾತ್ರಗಳೇ ಕಥನವನ್ನು ನಿರ್ವಹಿಸುತ್ತವೆ. ಮಹಾಭಾರತವನ್ನು ರೂಢಿಗತವಾಗಿ ಹೇಳುವ ಕ್ರಮ ಮಹಾಕಾವ್ಯ ಶೈಲಿಯದು. ಭೈರಪ್ಪನವರ ಭಾರತದಲ್ಲಿ ಅದು ಪಾತ್ರವೇ ತನ್ನ ಆತ್ಮಶೋಧ ಮಾಡುತ್ತ ಹೇಳುತ್ತ ಹೋಗುವ ಕಾರಣದಿಂದ ಭಾವಗೀತಾತ್ಮಕ ಆಗಿದೆ. ಪಾತ್ರಗಳ ಅಂತರಂಗ ಪರಿವೀಕ್ಷಣೆಯು ಕೇವಲ ಕಥನಕ್ರಮ ಮಾತ್ರ ಆಗಿರದೆ ಆಯಾ ಪಾತ್ರಗಳ ಸ್ವವಿಮರ್ಶೆಗೂ ಬಳೆಯಾಗಿದೆ. ಪರ್ವದಲ್ಲಿ ಪಾತ್ರಗಳ ವರ್ತನೆಯನ್ನು ನಿರೂಪಣೆ ಮಾಡುವ ಪಾತ್ರಗಳೇ ನಿರ್ಧರಿಸಿ ಚಿಂತನ ನಡೆಸುತ್ತವೆ. ಪರ್ವ ಕಾದಂಬರಿಯು ಮಹಾಭಾರತದ ಎಷ್ಟೋ ವಿವರಗಳನ್ನು ಕಾಲ-ದೇಶಕ್ಕೆ ಅನುಗುಣವಾದ ಘಟನೆಗಳನ್ನಾಗಿ ರೂಪಿಸಿದೆ. ಮಹಾಭಾರತದ ಪಾರಂಪರಿಕ ಕಥನದಲ್ಲಿ ವಾಸ್ತವಕ್ಕೆ ಅತೀತವಾದ, ದೇಶಮುಕ್ತವಾದ ವಿವರಗಳು ಬರುತ್ತವೆ. ಆದರೆ, ಪರ್ವ ಕಾದಂಬರಿಯಲ್ಲಿ ಬರುವ ಪ್ರತಿಯೊಂದು ವಿವರವೂ ಮಾನವ ಸಾಧ್ಯತೆ ಮತ್ತು ಸಂಭಾವ್ಯತೆಗಳೆರಡನ್ನೂ ಒಳಗೊಂಡಿದೆ.
ಕಾದಂಬರಿಯ ಬಗ್ಗೆ ವಿಮರ್ಶಕ ಕೆ.ವಿ. ನಾರಾಯಣ ಹೀಗೆ ಬರೆದಿದ್ದಾರೆ-
ಪರ್ವ ಕಾದಂಬರಿ ಮಾನವಶಾಸ್ತ್ರಜ್ಞ, ಸಮಾಜವಿಜ್ಞಾನಿ ಹಾಗೂ ಮನೋವಿಜ್ಞಾನಿಗಳ ಟಿಪ್ಪಣಿಗಳ ಮೇಳವೆಂದು ಹೇಳುವುದು ತಪ್ಪಾಗುತ್ತದೆ. ಏಕೆಂದರೆ ಇವರ ಯಾರ ಟಿಪ್ಪಣಿಯಲ್ಲಿಯೂ ಇರದ ಆಯಾಮವೊಂದು ಕಾದಂಬರಿಗೆ ಇದೆ. ಅದೇ ಅದರ ಜೀವಕೇಂದ್ರ, ಮೌಲ್ಯಗಳು ತೀವ್ರ ಪ್ರಶ್ನಿತವಾಗಿ ಬದುಕಿನ ಒಳ ವೈರುಧ್ಯಗಳು ಪರಸ್ಪರ ಮುಖಾಮುಖಿಯಾಗಿ, ಅದರ ಪರಿಣಾಮವೋ ಎಂಬಂತೆ ನಡೆದ ಯುದ್ಧದ ನಂತರದ ಜೀವನದ ಆಕಾರವೇ ಇಂದಿನ ನಮ್ಮ ಕಾಲದ ಮುಖ್ಯ ನಿರ್ದೇಶಕ ಶಕ್ತಿಯಾಗಿದೆ ಎನ್ನುವುದನ್ನು ನಿರೂಪಿಸುವುದೇ ಕಾದಂಬರಿಯು ಹೊಂದಿರುವ ವಿಶಿಷ್ಟ ಆಯಾಮ’.
ಎಸ್. ಎಲ್. ಬೈರಪ್ಪ ಅವರ ಕಾದಂಬರಿ ‘ಪರ್ವ’ದ ವಿಚಾರ ಸಂಕಿರಣ- ಬೈರಪ್ಪ
©2021 Bookbrahma.com, All Rights Reserved