ಮಂಗಳಾ ಸಿ. ಅವರ ’ಕೃಷ್ಣ ಮುದ್ರಿಕೆ’ ಕಾದಂಬರಿಯು 2017ನೇ ಸಾಲಿನ ಕರ್ನಾಟಕ ಸಾಹಿತ್ಯ ಅಕಾಡೆಮಿ ಪ್ರಶಸ್ತಿಗೆ ಭಾಜನವಾಗಿದೆ.
ಈ ಕಾದಂಬರಿಯ ಕುರಿತು ಮತ್ತೊಬ್ಬ ಲೇಖಕ ಕೃಷ್ಣಮೂರ್ತಿ ಹನೂರು ಅವರು ’ಬಹುಮಟ್ಟಿಗೆ ಮಧ್ಯ ಮತ್ತು ಉತ್ತರ ಕರ್ನಾಟಕ ಭಾಗಗಳಲ್ಲಿ ವಾಸವಾಗಿರುವ ಕuಯಲ್ಲಿ ಸಮುದಾಯಗಳ ಬಲವಾದ ನಂಬಿಕೆ, ಆಚರಣೆ ಮತ್ತು ದೈವಸಂಗತಿಗಳಿಂದ ಕೂಡಿರುವ ಹೋರಾಟದ ಬದುಕನ್ನು ಚಿತ್ರಿಸಲು ಲೇಖಕಿ ಮಂಗಳ ಅವರು 'ಕೃಷ್ಣಮುದ್ರಿಕೆ' ಕಾದಂಬರಿಯಲ್ಲಿ ಪ್ರಯತ್ನಿಸಿದ್ದಾರೆ. ಬುಡಕಟ್ಟು ಸಮುದಾಯದವೆನಿಸುವ ಈ ಗೊಲ್ಲರು ತಮ್ಮ ಸಂಪ್ರದಾಯಗಳನ್ನು ಅನುಸರಿಸುತ್ತಲೇ ಅವುಗಳು ಸೃಷ್ಟಿಸಿರುವ ಸಮಸ್ಯೆಗಳನ್ನು ಎದುರು ಹಾಕಿಕೊಂಡು ಬದುಕಿದ ಮುಗ್ದರು. ಅಂಥದೊಂದು ಸಂಸ್ಕಾರವನ್ನು ಕೇಂದ್ರವಾಗಿಸಿ ಮಂಗಳ ಮೂರು ತಲೆಮಾರಿನ ಕಥೆಯನ್ನು ಕಟ್ಟಿ ಕೊನೆಯಲ್ಲಿ ಆಧುನಿಕತೆ ಅವರನ್ನು ತಕ್ಕ ಮಟ್ಟಿಗಾದರೂ ಒಂದು ನೆಲೆಗೆ ತಂದಿರುವುದನ್ನು ನಿರೂಪಿಸುತ್ತಾರೆ. ಈ ಬಗೆಯ ಬುಡಕಟ್ಟು ಜೀವನಕ್ಕೆ ಶತಮಾನಗಳಿಂದ ಯಾವ ಕಡೆಯಿಂದಲೂ, ಯಾವ ನಾಗರಿಕತೆಯಿಂದಲೂ ಪರಿಹಾರವಿರುವುದಿಲ್ಲ. ಇದೀಗ ಸರ್ಕಾರದಿಂದಲೂ ಕೂಡ. ಇಂಥ ಅದೆಷ್ಟೋ ಸಮುದಾಯಗಳು ಕರ್ನಾಟಕದಲ್ಲಿ ತಂತಮ್ಮ ನಂಬಿಕೆಗಳು ಸಮಸ್ಯೆಯ ನಡುವೆ ಇನ್ನೂ ನೆಲೆ ಕಾಣದೆ ಕೊಸರಾಟ ಮಾಡುತ್ತಲೇ ಇವೆ ಎಂಬ ಯೋಚನೆಗೆ ಈಡು ಮಾಡುವಂತೆ ಈ ಕಾದಂಬರಿಯ ಸಂಗತಿಗಳಿರುತ್ತವೆ’ ಎಂದು ಅಭಿಪ್ರಾಯಪಟ್ಟಿದ್ದಾರೆ.
ಚಿಂತಕ ಬಂಜಗೆರೆ ಜಯಪ್ರಕಾಶ್ ಅವರು ’ಕೃಷ್ಣ ಮುದ್ರಿಕೆ’ ಸಾರವನ್ನು ಹೀಗೆ ಕಟ್ಟಿಕೊಟ್ಟಿದ್ದಾರೆ-
ಕೃಷ್ಣಮುದ್ರಿಕೆಯ ಕಥನವೃತ್ತಾಂತ ಆರಂಭದಲ್ಲಿಯೇ ಗಂಡ ಸತ್ತ ಮೇಲೆ ಗರ್ಭಿಣಿಯಾದ ಈರಮ್ಮ ಸತ್ಯ ರುಜುವಾತು ಪಡಿಸಲಾಗದೆ, ದಂಡನೆಗೊಳಗಾಗಿ ಹಾಲುಕುಡಿಯುವ ಕಂದನನ್ನು ತಂದೆ ತಾಯಿಯ ಬಳಿ ಬಿಟ್ಟು ಮತ್ತೆಂದೂ ಹಿಂದಿರುಗಿ ಬರುವ ಅವಕಾಶವಿರದ ಕೆಟ್ಟೋರಟ್ಟಿಗೆ ಹೋಗಿ ಸೇರುವ ವಿದ್ಯಮಾನ ನಡೆಯುತ್ತದೆ. ಹಾಗೇ ಗರ್ಭಿಣಿಯಾಗಿದ್ದಕ್ಕೆ ಅವಳಿಗೆ ದಂಡನೆಯಾಗುತ್ತದೆಯೇ ಹೊರತೆ ಹಾಗೆ ಗರ್ಭಿಣಿಯಾಗುವುದಕ್ಕೆ ಕಾರಣವಾದ ಗಂಡಸಿನ ಬಗ್ಗೆ ಯಾವುದೇ ದಂಡನಾ ಕ್ರಮ ಕೈಗೊಳ್ಳದೇ ಹೊಗುವುದು ಕಣ್ಣಿಗೆ ರಾಚುತ್ತದೆ, ಹೆರಿಗೆಯಾದಾಗಇಡೀ ಹೆರಿಗೆಯ ಸೂತಕವನ್ನು ಬಾಣಂತಿಯೊಬ್ಬಳೇ ಹೊರಬೇಕು. ಹಟ್ಟಿ ಹೊರಗಿನ ತಾತ್ಕಾಲಿಕ ಗುಡ್ಲುನಲ್ಲಿ ಗಾಳಿ, ಮಳೆ ಲೆಕ್ಕವಿಲ್ಲದಂತೆ ಅವಳು ತನ್ನ ಕಂದನನ್ನ ಸಲಹಿ ತಿಂಗಳ ಕಾಲದ ಸೂತಕ ಕಳೆದ ಮೇಲೆ ಜವಿಗೆ ಹಾಲು ಹಾಕಿಸಿಕೊಂಡು ಹಟ್ಟಿಯ ಒಳಕ್ಕೆ ಬರಬೇಕು.
©2021 Bookbrahma.com, All Rights Reserved