ಅಸ್ತಮಾನ

Author : ವೀರೇಂದ್ರ ನಾಯಕ್ ಚಿತ್ರಬೈಲು

₹ 150.00




Year of Publication: 2022
Published by: ಶ್ರೀನಿವಾಸ ಪುಸ್ತಕ ಪ್ರಕಾಶನ ಬೆಂಗಳೂರು

Synopsys

ಉದಯೋನ್ಮುಖ ಲೇಖಕರಾದ ವೀರೇಂದ್ರ ನಾಯಕ್ ಚಿತ್ರಬೈಲು ಅವರು ಚೊಚ್ಚಲ ಕಾದಂಬರಿ ಅಸ್ತಮಾನ. ಹಂತಹಂತವಾಗಿ ವೃದ್ಧಾಶ್ರಮಗಳಂತಾಗುತ್ತಿರುವ ಹಳ್ಳಿಗಳು, ಕುಸಿಯುತ್ತಿರುವ ನಂಬಿಕೆಗಳು, ಮೌಲ್ಯಗಳು, ಕೇವಲ ಔಪಚಾರಿಕವಾಗುತ್ತಿರುವ ಗೆಳೆತನ ಮತ್ತು ಸಂಬಂಧಗಳು, ಕಾಣೆಯಾಗುತ್ತಿರುವ ಪರಸ್ಪರರ ನಡುವಿನ ವಿಶ್ವಾಸಗಳು, ಧಾರ್ಮಿಕ ಆಚರಣೆಗಳಲ್ಲಿ ಭಕ್ತಿಯ ಬದಲಾಗಿ ಢಾಳಾಗಿ ಗೋಚರಿಸುವ ಆಡಂಬರಗಳು ಮತ್ತು ರಾಜಕೀಯ ಹಸ್ತಕ್ಷೇಪಗಳು, ಒಟ್ಟಾರೆಯಾಗಿ ಒಂದು ಕಾಲಘಟ್ಟದ ಸಂಸ್ಕೃತಿ, ಪರಂಪರೆ ಕಾಲಾಂತರದಲ್ಲಿ ನೇಪಥ್ಯಕ್ಕೆ ಸರಿದು ಹೊಸದನ್ನು ಒಪ್ಪಿಕೊಂಡು ಅಪ್ಪಿಕೊಳ್ಳುವ ಸ್ಥಿತ್ಯಂತರಗಳನ್ನು ಶೋಧಿಸುವ ಕೃತಿ "ಅಸ್ತಮಾನ". ಒಂದು ಕಾಲಘಟ್ಟವು ಹಲವಾರು ಸ್ಥಿತ್ಯಂತರಗಳನ್ನು ಕಂಡು ಅವನತಿಯತ್ತ ಸಾಗಿ ಹೊಸ ಉದಯಕ್ಕೆ ತನ್ನನ್ನು ತಾನು ತೆರೆದುಕೊಳ್ಳುವ ಪ್ರಕ್ರಿಯೆಯನ್ನು ಅತ್ಯಂತ ನಾಜೂಕಾಗಿ ಹೆಣೆದದ್ದು ಲೇಖಕರ ಜಾಣ್ಮೆ… ಕರಾವಳಿ ಭಾಗದ ಕಾಡಬೆಟ್ಟು ಎಂಬ ಹಳ್ಳಿಯಲ್ಲಿ ಪ್ರಾರಂಭವಾಗುವ ಕಥೆ ಮುಂದೆ ಮುಂಬೈ, ಕೋಲ್ಕತಾಗಳಲ್ಲಿ ಸಾಗಿ ತಿರುಗಿ ಕಾಡಬೆಟ್ಟುವಿಗೆ ಮರಳಿ ಗೋವಾದಲ್ಲಿ ಪರ್ಯಾವಸನವಾಗುತ್ತದೆ. ಕರಾವಳಿಯ ಮಳೆಬೆಳೆಗಳು, ಮಳೆಗಾಲದಲ್ಲಿ ಶಾಲೆಗೆ ಹೋಗಲು ಮಾಡುತ್ತಿದ್ದ ಹರಸಾಹಸ, ಭೂತಾರಾಧನೆ,ಅಂದಿನ ಕಾಲಮಾನದಲ್ಲಿ ಮುಂಬೈ ಮಹಾನಗರ ಕರಾವಳಿಗರನ್ನು ತನ್ನ ತೆಕ್ಕೆಗೆ ತೆಗೆದುಕೊಂಡು ಉದರಪೋಷಣೆಯನ್ನು ನಿರ್ವಹಿಸಿದ ಬಗೆಯನ್ನು ಅಚ್ಚುಕಟ್ಟಾಗಿ ಹೇಳುವ ಲೇಖಕರು, ಇಂದು ಅಭಿವೃದ್ಧಿಯ ಹೊಸ ಗಾಳಿಗೆ ಹಳ್ಳಿಗಳು ತನ್ನ ಅಸ್ಮಿತೆಯನ್ನು ಕಳೆದುಕೊಂಡು ಬೋಳು ಗುಡ್ಡಗಳಾಗುವವರೆಗಿನ ಸೂಕ್ಷ್ಮ ಗಮನಿಸುವಿಕೆ ಮತ್ತು ಅವರ ಅನುಭವ ಇಂದಿನ ವಾಸ್ತವಕ್ಕೆ ಅಂಗೈ ಕನ್ನಡಿ. ಈ ಬದಲಾವಣೆಗಳು ಭೌಗೋಳಿಕವಾಗಿ ಮಾತ್ರವಲ್ಲದೇ ಜನಗಳ ದೃಷ್ಟಿಕೋನದಲ್ಲಾದ ಬದಲಾವಣೆಗಳನ್ನು ಸಹ ಉದಾಹರಿ‌ಸುತ್ತದೆ. ಒಬ್ಬ ವ್ಯಕ್ತಿಯ ಗುಣಾವಗುಣಗಳನ್ನು ವಿಶ್ಲೇಷಿಸುವಲ್ಲಿ ಅವನ ಧರ್ಮ, ಜಾತಿಗಳು ಪ್ರಾಮುಖ್ಯತೆಯನ್ನು ಪಡೆಯುವುದು ಇಂತಹ ಒಂದು ಪಲ್ಲಟಗಳಿಗೆ ಉದಾಹರಣೆ.

About the Author

ವೀರೇಂದ್ರ ನಾಯಕ್ ಚಿತ್ರಬೈಲು

ವೀರೇಂದ್ರ ನಾಯಕ್ ಚಿತ್ರಬೈಲು. ಮೂಲತಃ ಉಡುಪಿ ಜಿಲ್ಲೆಯ ಕಾರ್ಕಳ ತಾಲೂಕಿನವರು. ಸಂಖ್ಯಾಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಬೆಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ವೃತ್ತಿ ನಿರ್ವಹಿಸುತಿದ್ದಾರೆ. ಕೃತಿ: ಅಸ್ತಮಾನ (ಕಾದಂಬರಿ).  ...

READ MORE

Related Books