ಸರಸಮ್ಮನ ಸಮಾಧಿ

Author : ಶಿವರಾಮ ಕಾರಂತ

Pages 128

₹ 70.00




Year of Publication: 2014
Published by: ಸಪ್ನ ಬುಕ್ ಹೌಸ್
Address: 3ನೇ ಮುಖ್ಯ ರಸ್ತೆ. ಗಾಂಧಿನಗರ, ಬೆಂಗಳೂರು, 560009
Phone: 080 4011 4455

Synopsys

ಖ್ಯಾತ ಕಾದಂಬರಿಕಾರ ಶಿವರಾಮ ಕಾರಂತರ ಕಾದಂಬರಿ-ಸರಸಮ್ಮನ ಸಮಾಧಿ. ದಾಂಪತ್ಯ ಬದುಕಿನ ವಿರಸಮಯವಾದ ಚಿತ್ರಣಗಳನ್ನು ಈ ಕಾದಂಬರಿ ನೀಡುತ್ತದೆ. ತಿಮ್ಮಪ್ಪಯ್ಯ-‘ಹೆಣ್ಣುಮಕ್ಕಳಿಗೆ ಬುದ್ದಿ ಇಲ್ಲ’ ಎನ್ನುವ ಸ್ವಭಾವದ ವ್ಯಕ್ತಿ. ಪತ್ನಿ ಜಾನಕಿ-ಎದುರು ಮಾತನಾಡದ ಸೌಮ್ಯ ಸ್ವಭಾವದಾಕೆ. ನೀಲಾಚಲಯ್ಯನ ಮಡದಿ ಮಹಾಸತಿ ಸರಸಮ್ಮ. ಅವಳು ಸತ್ತ ಮೇಲೆ ಅವಳ ಹೆಸರಲ್ಲಿ ಒಂದು ಮಾಸ್ತಿ ಕಲ್ಲು ಸ್ಥಾಪನೆ ಮಾತ್ರವಲ್ಲ ಗುಡಿಯೂ ನಿರ್ಮಾಣವಾಗಿ, ದಂಪತಿಯಲ್ಲಿ ವಿರಸ ಬಂದರೆ ಅದನ್ನು ನಿವಾರಿಸುವ ಶಕ್ತಿ ದೇವತೆಯೂ ಆಗುತ್ತಾಳೆ.  ಊರಿನ ಶ್ರೀಮಂತ ವ್ಯಾಪಾರಿ ಅಣ್ಣಪ್ಪ ಕಮ್ತಿಯ ಪತ್ನಿಯದ್ದೂ (ಸುನಾಲಿನಿ) ಇದೇ ಸಮಸ್ಯೆ.

ಇದೇ ರೀತಿ ಮತ್ತೊಂದು ಸಂಸಾರದ ಕಥೆಯೂ ಅಂದರೆ ಹಿರಣ್ಣಯ್ಯನ ಪತ್ನಿ ತವರಿನಲ್ಲೇ ಸೇರಿದ್ದು, ಗಂಡನ ಮನೆಗೆ ಬರುವುದಿಲ್ಲ ಎಂದು ಹಠ ಹಿಡಿದಿದ್ದಳು. ಹೀಗಾಗಿ, ಸುನಾಲಿನಿಯಂತೆ ಹಿರಣ್ಣಯ್ಯನೂ ಸರಸಮ್ಮನ ಸಮಾಧಿ ಮುಂದೆ ಹರಕೆ ಹೊತ್ತಿದ್ದ. ಹೀಗೆ ಭಯದೊಂದಿಗೆ ಹರಕೆ ಹೊತ್ತವರನ್ನು ವಂಚಿಸಿ, ಬಿಳಿ ವಸ್ತ್ರ ಧರಿಸಿ ರಾತ್ರಿ ಹೊತ್ತಲ್ಲಿ ತಿರುಗಾಡುವ ವೇಶ್ಯೆ ಬೆಳ್ಳಕ್ಕ, ಇಂತಹ ಪಾತ್ರಗಳ ಮೂಲಕ ಕಥೆಯ ಹರಿವು ವಿಸ್ತಾರವಾಗುತ್ತಾ ಕುತೂಹಲ ಕೆರಳಿಸುತ್ತದೆ. ಪತಿ ಸತ್ತಾಗ ಅವನ ಚಿತೆಗೆ ಪತ್ನಿ ಸರಸಮ್ಮಳನ್ನು ಬಲವಂತದಿಂದ ಚಿತೆಗೆ ನೂಕಿದ ಜನರೇ ಗುಡಿ ಕಟ್ಟುತ್ತಾರೆ. ಪ್ರೇತ ರೂಪದಲ್ಲಿ ಸರಸಮ್ಮ ಸಂಚರಿಸುತ್ತಿರುತ್ತಾಳೆ. ಆಕೆಯ ದೈಹಿಕ ಬಯಕೆ ಈಡೇರಿದ್ದಿಲ್ಲ ಎಂಬುದು ಇದಕ್ಕೆ ಕಾರಣ ಎಂಬುದು ಕಾದಂಬರಿಯ ವಸ್ತು. ಕೊನೆಗೆ, ಚಂದ್ರಯ್ಯನನ್ನು ತಡೆದ ಪ್ರೇತ ತನ್ನನ್ನು ಮದುವೆಯಾಗೆಂದು ಕೇಳಿಕೊಳ್ಳುತ್ತದೆ. ಈ ವೈಚಿತ್ಯ್ರದೊಂದಿಗೆ ಕಾದಂಬರಿ ಮುಕ್ತಾಯಗೊಳ್ಳುತ್ತದೆ.

'ಸತಿಪದ್ದತಿ'ಯ ಸಾಮಾಜಿಕ ಅನ್ಯಾಯವನ್ನು ಕತೆ ಸೂಚ್ಯವಾಗಿ ತಿಳಿಸುತ್ತದೆ. ನಮ್ಮ ಜನರ ಧಾರ್ಮಿಕ ಮೂಢನಂಬಿಕೆಯನ್ನು ಅನಾವರಣಗೊಳಿಸುವ ಸನ್ನಿವೇಶವನ್ನು ಸೃಷ್ಟಿಸಿದೆ. ಕತೆಯ ಅಂತ್ಯ ಅವಾಸ್ತವಿಕ, ನಾಟಕೀಯ ಘಟನೆ, ದೃಶ್ಯಗಳಿಂದ ಕೂಡಿದ್ದರೂ ಕಾದಂಬರಿಯ ವಿಶಿಷ್ಟ ತಂತ್ರ ಗಮನಾರ್ಹ. ಮೂಢನಂಬಿಕೆಯಿಂದ ಜಡ್ಡುಗಟ್ಟಿದ್ದ ಮನಸ್ಸನ್ನು ಬಡಿದೆಬ್ಬಿಸುವ ನಿಟ್ಟಿನಲ್ಲಿಈ  ಕಾದಂಬರಿ ಇದೆ. 

ಧಾರವಾಡದ ಮನೋಹರ ಗ್ರಂಥಮಾಲೆಯು 1937ರಲ್ಲಿ (ಪುಟ: 120) ಈ ಕಾದಂಬರಿಯನ್ನು ಮೊದಲ ಬಾರಿಗೆ ಪ್ರಕಟಿಸಿತ್ತು. 

About the Author

ಶಿವರಾಮ ಕಾರಂತ
(10 October 1902 - 09 December 1997)

ತಮ್ಮ ಬಹುಮುಖ ಪ್ರತಿಭೆಯಿಂದ ಕನ್ನಡ ಸಾಹಿತ್ಯ ಶ್ರೀಮಂತಗೊಳಿಸಿದ ಕೋಟ ಶಿವರಾಮ ಕಾರಂತರ ಕೊಡುಗೆ ಅನನ್ಯ- ಅಭೂತಪೂರ್ವ. 1902ರ ಅಕ್ಟೋಬರ್ 10ರಂದು ಜನಿಸಿದರು. ತಂದೆ ಶೇಷ ಕಾರಂತ ತಾಯಿ ಲಕ್ಷ್ಮಮ್ಮ. ಕುಂದಾಪುರದಲ್ಲಿ ಪ್ರೌಢಶಾಲಾ ವ್ಯಾಸಂಗವನ್ನು ಮುಗಿಸಿ ಮಂಗಳೂರಿನ ಸರ್ಕಾರಿ ಕಾಲೇಜನ್ನು ಸೇರಿದಾಗಲೆ ಗಾಂಧೀಜಿಯವರ ಅಸಹಕಾರ ಚಳುವಳಿಗೆ ಧುಮುಕಿದರು. ಆಡು ಮುಟ್ಟದ ಸೊಪ್ಪಿಲ್ಲ ಎಂಬಂತೆ ಕಾರಂತರು ಪ್ರವೇಶಿಸದ ಕ್ಷೇತ್ರವಿಲ್ಲ. ಅವರು ಸರ್ಕಾರದಲ್ಲಿ ಅಥವಾ ಇತರರ ಆಶ್ರಯದಲ್ಲಿ ದುಡಿಯಲಿಲ್ಲ. ಒಂಟಿಸಲಗದಂತೆ ನಡೆದರು, ವ್ಯಾಪಾರ ಮಾಡಿದರು, ವಸಂತ, ವಿಚಾರವಾಣಿ ಪತ್ರಿಕೆ ನಡೆಸಿದರು. ಬಾಲವನ ಸ್ಥಾಪಿಸಿದ್ದರು. ಚಲನಚಿತ್ರ , ಯಕ್ಷಗಾನ ಪ್ರಯೋಗಗಳನ್ನು ನಡೆಸಿದ್ದರು, ಹೀಗೆ ...

READ MORE

Conversation

Reviews

ಸರಸಮ್ಮನ ಸಮಾಧಿ-ಶಿವರಾಮ ಕಾರಂತ-ವಿ ರೀಡ್ ದಟ್ ಟೂ

ಸರಸಮ್ಮನ ಸಮಾಧಿ-ಶಿವರಾಮ ಕಾರಂತ-ಪುಸ್ತಕ ಪ್ರೇಮಿ

----

‘ಸರಸಮ್ಮನ ಸಮಾಧಿ’ ಕೆಂಡಸಂಪಿಗೆ’ ಕೃತಿಯ ವಿಮರ್ಶೆ

ಶಿವಕಾರಂತರ ‘ಸರಸಮ್ಮನ ಸಮಾಧಿ’ ಕಾದಂಬರಿಯನ್ನು ಹಿನ್ನೆಲೆಯಾಗಿಟ್ಟುಕೊಂಡು ಭಾರತೀಯ ಸಂಸ್ಕೃತಿಯ ಕುರಿತು ಕೆಲವು ವಿಮರ್ಶಾತ್ಮಕವಾದ ಕೆಲವು ವಿಚಾರಗಳನ್ನು ಪ್ರಸ್ತಾಪಿಸುವುದು ಈ ಲೇಖನದ ಉದ್ದೇಶವಾಗಿದೆ.

ನವೋದಯ ಕಾಲದ ಪ್ರಮುಖ ಕಾದಂಬರಿಕಾರರಾದ ಶಿವರಾಮ ಕಾರಂತರ ಒಟ್ಟು ಸಂವೇದನೆಯ ಮೇಲೆ ಸ್ವಾತಂತ್ರಪೂರ್ವ ಯುಗದ ಆದರ್ಶಗಳು, ರಾಷ್ಟ್ರೀಯತಾ ಆಂದೋಲನ ಮತ್ತು ಆಧುನಿಕತೆಗಳು ಎಂಥ ಪ್ರಭಾವ ಬೀರಿವೆ ಎಂಬ ಕುರಿತು ಬೇರೆ ಬೇರೆ ಸಂದರ್ಭಗಳಲ್ಲಿ ವಿವರವಾದ ಚರ್ಚೆಗಳು ನಡೆದಿವೆ. ಕಾರಂತರನ್ನೂ ಒಳಗೊಂಡಂತೆ ಸ್ವಾತಂತ್ರಪೂರ್ವ ಯುಗದಲ್ಲಿ ಬರೆಯುತ್ತಿದ್ದ ಕುವೆಂಪು, ಬೇಂದ್ರೆ ಮೊದಲಾದ ಲೇಖಕರೆಲ್ಲ ಬಹಳ ಜಟಿಲವಾದ ಪ್ರಶ್ನೆಗಳನ್ನು ಮುಖಾಮುಖಿಯಾಗುವ ಸಂದರ್ಭವೊಂದರ ಮೂಲಕ ಹಾದುಹೋಗುತ್ತಿದ್ದರು. ವಸಾಹತುಶಾಹಿಯ ಮೂಲಕ ಬಂದ ಕೈಗಾರಿಕೀಕರಣ, ಆಧುನಿಕತೆ, ಪಾಶ್ಚಾತ್ಯ ಪ್ರಭಾವ ಇತ್ಯಾದಿಗಳ ಕಾರಣದಿಂದ ತಮ್ಮ ದೇಶೀಯ ಸಂಸ್ಕೃತಿ ಆಚಾರ ವಿಚಾರಗಳ ಬಗ್ಗೆ ಏಕಕಾಲಕ್ಕೆ ಪರಸ್ಪರ ವಿರುದ್ಧವಾದ ಅಭಿಮಾನ, ಸ್ವವಿಮರ್ಶೆ, ಜಿಗುಪ್ಸೆಯ ಮನೋಭಾವವನ್ನು ಹೊಂದಿದ್ದರು. ಇಷ್ಟೇ ಅಲ್ಲದೆ ಕೈಗಾರಿಕೀಕರಣ, ತಂತ್ರಜ಼್ಞಾನ, ಆಧುನಿಕ ಶಿಕ್ಷಣಗಳ ಕುರಿತಾಗಿ ಅಪಾರ ಕುತೂಹಲ, ಆಕರ್ಷಣೆಗಳು ದೇಶೀಯ ಸಮಾಜಗಳಲ್ಲಿ ಉಂಟಾಗಿದ್ದವು. ಹಾಗಾಗಿ ಸ್ವಾತಂತ್ರ್ಯಪೂರ್ವ ಮತ್ತು ರಾಷ್ಟ್ರೀಯತಾವಾದಿ ಯುಗದಲ್ಲಿ ದೇಶೀಯ ಸಮಾಜಗಳಲ್ಲಿ ಅಭಿಮಾನ-ತಿರಸ್ಕಾರ, ಆಕರ್ಷಣೆ- ವಿಕರ್ಷಣೆ, ಹೊಸತರ ಬಗೆಗಿನ ಹಂಬಲ-ನಿರಾಕರಣೆಯಂಥ ದ್ವಂದ್ವಾತ್ಮಕವಾದ ಮತ್ತು ಸಂದಿಗ್ಧತೆಯ ನಿಲುವುಗಳು ಕಾಣುತ್ತವೆ. ಹಾಗೆಯೇ ರಾಷ್ಟ್ರೀಯತೆಯ ದೃಷ್ಟಿಕೋನದ ತೀವ್ರ ಪ್ರಭಾವದ ಕಾರಣದಿಂದ ನಮ್ಮ ಸಮಾಜದ ಆಗುಹೋಗುಗಳ ಕುರಿತು ಅವಿಮರ್ಶಾತ್ಮಕವಾದ ಮನೋಭಾವವೊಂದು ಗಟ್ಟಿಯಾಯಿತು. ರಾಷ್ಟ್ರೀಯತೆ ಮತ್ತು ಸ್ವಾತಂತ್ರ್ಯಯುಗದ ಆದರ್ಶ-ಆವೇಶಗಳ ಕಾರಣದಿಂದ ಆದರ್ಶವನ್ನೇ ವಾಸ್ತವವೆಂದು ಭ್ರಮಿಸಿ ನಮ್ಮ ಸಾಮಾಜಿಕ ವ್ಯವಸ್ಥೆಯಲ್ಲಿರುವ ಹುಳುಕುಗಳನ್ನು ಕಾಣಲಾರದಂತಹ ಕುರುಡುತನವೂ ಆವರಿಸಿಕೊಂಡಿತು.

ಇಂಥ ಹಿನ್ನೆಲೆಯಲ್ಲಿ ಕಾರಂತರಂಥ ಬರಹಗಾರರು ತಮ್ಮ ವೈಚಾರಿಕ, ವಿಮರ್ಶಾತ್ಮಕ ಒಳನೋಟಗಳಿಂದ ವಾಸ್ತವವಾದಿ ಗ್ರಹಿಕೆಯಿಂದ ನಾವು ಬದುಕುತ್ತಿರುವ ಸಮಾಜವನ್ನು, ಇಲ್ಲಿ ಬಹಳ ಗಟ್ಟಿಯಾಗಿ ಬೇರೂರಿರುವ ಸಂಸ್ಥೆಗಳಾದ ಜಾತಿಪದ್ಧತಿ, ಕುಟುಂಬ ವ್ಯವಸ್ಥೆ, ಸ್ತ್ರೀ ಸ್ವಾತಂತ್ರ್ಯ ಮೊದಲಾದವನ್ನು ಬಹಳ ನಿರ್ದಿಷ್ಟವಾಗಿ ತೆರೆದಕಣ್ಣಿನಿಂದ ಯಾವ ಅತಿಗಳಿಗೂ ಹೋಗದೆ ವಿಮರ್ಶಿಸುವ ದೃಷ್ಟಿಕೋನವನ್ನು ಬೆಳೆಸಿಕೊಂಡಿದ್ದರು. ಹಾಗೆ ನೋಡಿದರೆ ೧೯೪೦ರ ದಶಕದಲ್ಲಿ ಬಂದ “ಸರಸಮ್ಮನ ಸಮಾಧಿ” ಕಾದಂಬರಿಯು ಪಾಶ್ಚಾತ್ಯ ಪ್ರಭಾವ, ಆಧುನಿಕ ಶಿಕ್ಷಣ ಮೊದಲಾದ ಹಲವು ಹೊಸಬಗೆಯ ಚಲನೆಗಳನ್ನು ಗುರುತಿಸಿದರೂ ಕಾರಂತರ ಮುಖ್ಯ ಗುರಿ ತನ್ನ ಸಮಾಜದ ಒಳರಚನೆಗಳನ್ನು ಪರೀಕ್ಷಿಸುವುದೇ ಆಗಿದೆ.ಕಾದಂಬರಿಯಲ್ಲಿ ಇಂಗ್ಲಿಶ್ ಪೇಪರ್ ಓದುವ, ಬಿಬಿಸಿ ವಾರ್ತೆ ಕೇಳುವ, ಐನ್ ಸ್ಟೀನ್ ಬಗ್ಗೆ ಮಾತಾಡುವ, ಪ್ರೇತಸಂಭಾಷಣೆಯಲ್ಲಿ ಆಸಕ್ತಿಯಿರುವ ಹಲವು ಹೊಸಕಾಲದ ಬದಲಾವಣೆಗಳ ಬಗೆಗೆ ಉಲ್ಲೇಖಗಳಿವೆ. ಆಧುನಿಕ ಸಮಾಜದ ಪ್ರತಿನಿಧಿಯಂತಿರುವ ಅಡಾವುಡಿ ಚಂದ್ರಯ್ಯನ ವ್ಯಂಗ್ಯಭರಿತ ಚಿತ್ರಣವೂ ಇದೆ. ಕಾರಂತರಿಗೆ ಹೊಸಕಾಲದ ಬದಲಾವಣೆಗಳ ಪರಿಣಾಮವನ್ನು ಪರೀಕ್ಷಿಸುವುದಕ್ಕಿಂತ ನಾವು ಇದುವರೆಗೆ ನಂಬಿಕೊಂಡು ಬಂದಿರುವ ಅನೂಚಾನವಾಗಿ ಪರಿಪಾಲಿಸಿಕೊಂಡು ಬಂದಿರುವ ಸಾಮಾಜಿಕ ಸಂಸ್ಥೆಗಳನ್ನು ಪರೀಕ್ಷಿಸುವುದರಲ್ಲಿಯೇ ಹೆಚ್ಚಿನ ಆಸಕ್ತಿ. ಕಾರಂತರಲ್ಲಿ ಕಾಣುವ ಸ್ವವಿಮರ್ಶೆಯ ಸಾಮಾಜಿಕತೆಯ ನಿಲುವನ್ನು ಬಹಳ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಅದರಲ್ಲೂ ಭಾರತೀಯ ಸಮಾಜದ ಮೂಲಾಧಾರವೇ ಆಗಿರುವ ಕುಟುಂಬ-ದಾಂಪತ್ಯ ವ್ಯವಸ್ಥೆ, ಅಲ್ಲಿ ಸ್ತ್ರೀಯರಿಗೆ ದೊರಕಿರುವ ಸ್ಥಾನಮಾನ, ಲೈಂಗಿಕ ಸ್ವಾತಂತ್ರ್ಯ ಮುಂತಾದ ಪ್ರಶ್ನೆಗಳನ್ನು ಬಹಳ ತೀಕ್ಷ್ಣವಾದ ವಿಮರ್ಶೆಗೆ ಒಳಪಡಿಸಿದ್ದಾರೆ.

ಹಾಗೆ ನೋಡಿದರೆ ಸ್ವಾತಂತ್ರ್ಯ ಚಳವಳಿ- ಮುಖ್ಯವಾಗಿ ರಾಷ್ಟ್ರೀಯತೆಯ ಉಚ್ಛ್ರಾಯದ ಸಂದರ್ಭದಲ್ಲಿ ಹೆಣ್ಣಿನ ಸ್ಥಾನಮಾನ, ಶಿಕ್ಷಣ ಮೊದಲಾದವುಗಳ ಬಗ್ಗೆ ಬಹಳ ದೊಡ್ಡ ಪ್ರಮಾಣದಲ್ಲಿ ಚರ್ಚೆ ನಡೆಯಿತು. ಕನ್ನಡದ ಮೊದಲ ಕಾದಂಬರಿಗಳಲ್ಲಿ ಮತ್ತು ಭಾರತದ ಇತರ ಭಾಷೆಗಳ ಆರಂಭದ ಕಾದಂಬರಿಗಳಲ್ಲೂ ಹೆಣ್ಣಿನ ಪ್ರಶ್ನೆ ಬಹಳ ಮುಖ್ಯವಾಗಿ ಚರ್ಚಿತವಾಯಿತು. ಹಾಗಿದ್ದರೂ ಹೆಣ್ಣಿನ ಸ್ಥಿತಿಯಲ್ಲಿ ನಿರ್ಣಾಯಕವಾದ ಬದಲಾವಾಣೆ ಯಾಕೆ ಸಾಧ್ಯವಾಗಲಿಲ್ಲ? ಸ್ವಾತಂತ್ರ್ಯ ಚಳವಳಿ ತನ್ನ ತೀವ್ರತೆಯನ್ನು ಮುಟ್ಟಿದರೂ, ರಾಷ್ಟ್ರೀಯವಾದಿ ಭಾವನೆಗಳು ಪರಾಕಾಷ್ಠೆಗೆ ತಲುಪುತ್ತಿದ್ದರೂ ಸ್ತ್ರೀ ಸ್ವಾತಂತ್ರ್ಯದ ಪ್ರಶ್ನೆ ಯಾಕೆ ಇದ್ದಕ್ಕಿದ್ದಂತೆ ಗೌಣವಾಯಿತು ಎಂಬ ಬಗ್ಗೆ ಪಾರ್ಥಾ ಚಟರ್ಜಿಯಂಥ ಚಿಂತಕರು ಆಳವಾದ ಚಿಂತನೆ ನಡೆಸಿದ್ದಾರೆ. ರಾಷ್ಟ್ರೀಯತಾವಾದಿ ಚಿಂತನೆ ಗಟ್ಟಿಗೊಳ್ಳುತ್ತಲೇ ಅದು ಆಳದಲ್ಲಿ ಸಾಂಪ್ರದಾಯಿಕ ಮನೋಭಾವವನ್ನು ರೂಢಿಸಿಕೊಂಡಿದ್ದು ಸ್ತ್ರೀ ಸ್ವಾತಂತ್ರ್ಯದ ಪ್ರಶ್ನೆ ಗೌಣವಾಗಲು ಕಾರಣವಾಗಿರಬಹುದೇ ಎಂದು ಜಿಜ್ಞಾಸೆ ನಡೆಸಿದ್ದಾರೆ. ಅಂಥ ಸಂದರ್ಭದಲ್ಲಿ ಬಂದ ಕಾರಂತರ ಈ ಕಾದಂಬರಿ ಭಾರತೀಯ ಸಮಾಜದ ಕುಟುಂಬ ವ್ಯವಸ್ಥೆ, ದಾಂಪತ್ಯ ಸಂಬಂಧಗಳು, ಹೆಣ್ಣಿನ ಸ್ವಾತಂತ್ರ‍್ಯ, ಲೈಂಗಿಕತೆ ಮುಂತಾದವುಗಳ ಬಗ್ಗೆ ಬಹಳ ಗಂಭೀರವಾದ ಚಿಂತನೆಯನ್ನು ನಡೆಸುತ್ತದೆ.

ಭಾರತೀಯ ಸಮಾಜದಲ್ಲಿ ಕುಟುಂಬ, ಮದುವೆ ಮೊದಲಾದ ಸಂಸ್ಥೆಗಳು ಮೇಲ್ನೋಟಕ್ಕೆ ಬಹಳ ಸಮೃದ್ಧವಾಗಿ ಸುಂದರವಾಗಿ ಕಾಣಿಸಿಕೊಂಡರೂ ಆಳದಲ್ಲಿ ಅವು ಬಹಳ ಜಟಿಲವಾದ ಶ್ರೇಣೀಕರಣವನ್ನು ಗಂಡಾಳ್ವಿಕೆಯನ್ನು ಪೋಷಿಸುತ್ತಾ ಬಂದಿವೆ ಎಂಬುದನ್ನು ಹಲವು ಸಮಾಜವಿಜ್ಞಾನಿಗಳು, ಸ್ತ್ರೀವಾದಿ ಚಿಂತಕರು ತೋರಿಸಿಕೊಟ್ಟಿದ್ದಾರೆ. ಮೂಲಭೂತವಾಗಿ ಫ್ಯಾಮಿಲಿ ಎಂಬುದೇ ಒಂದು ಅಸಮಾನ ವ್ಯವಸ್ಥೆಯಾಗಿ ಗಂಡುಹೆಣ್ಣಿನ ಶ್ರೇಣೀಕರಣವನ್ನು ಗಟ್ಟಿಗೊಳಿಸುವ ಸಾಧನವಾಗಿದೆ ಎಂಬುದನ್ನು ಹಲವರು ಚರ್ಚಿಸಿದ್ದಾರೆ. ಮುಖ್ಯವಾಗಿ ಫ್ಯಾಮಿಲಿ ಎಂಬ ಪದವೇ ಫ್ರೆಡರಿಕ್ ಎಂಗೆಲ್ಸ್ ನ ಪ್ರಕಾರ ಫ್ಯಾಮಿಲಸ್ ಎಂದರೆ ಡೊಮೆಸ್ಟಿಕ್ ಸ್ಲೇವ್ ಎಂಬರ್ಥ ಬರುವ ಲ್ಯಾಟಿನ್ ಪದದಿಂದ ಬಂದಿದೆ. ಹಲವಾರು ಡೊಮೆಸ್ಟಿಕ್ ಸ್ಲೇವ್ ಗಳನ್ನು ಹೊಂದಿರುವ ವ್ಯಕ್ತಿಯನ್ನು ಫ್ಯಾಮಿಲಿಯಾ ಎಂದು ಕರೆಯಲಾಗುತ್ತದೆ. ಫ್ಯಾಮಿಲಿ ಎಂಬುದು ಡೊಮೆಸ್ಟಿಕ್ ಸ್ಲೇವ್ ಗಳನ್ನು ಒಳಗೊಂಡಿರುವ ಘಟಕವಾದರೆ ಅದನ್ನು ನಿಯಂತ್ರಿಸುವವರು ಯಾರು ಅಲ್ಲಿ ಪರಮಾಧಿಕಾರವನ್ನು ಹೊಂದಿರುವವರು ಯಾರು ಎಂಬುದನ್ನು ಬಿಡಿಸಿಹೇಳಬೇಕಾಗಿಲ್ಲ. ಅದಕ್ಕಾಗಿಯೇ ಸ್ತ್ರೀವಾದಿ ಚಿಂತಕರು ಕುಟುಂಬವನ್ನು ಹೆಣ್ಣಿನ ಶೋಷಣೆಯ, ಲೈಂಗಿಕ ರಾಜಕಾರಣದ ಕೇಂದ್ರಬಿಂದುವಾಗಿದೆ ಎಂದು ಬಹಳ ತೀಕ್ಷ್ಣವಾಗಿ ವಿಮರ್ಶಿಸಿದ್ದಾರೆ. ಸ್ತ್ರೀ ಶೋಷಣೆಯನ್ನು ಬಹಳ ಯಥೇಚ್ಛವಾಗಿ ಕಾಣುವುದು, ಅವಳ ಲೈಂಗಿಕತೆಯನ್ನು- ಸ್ವಾತಂತ್ರ್ಯವನ್ನು ದಮನಗೊಳಿಸುವುದು ಮದುವೆ ಎಂಬ ವ್ಯವಸ್ಥೆಯಲ್ಲಿಯೇ. ಕುಟುಂಬವನ್ನು ವಂಶವಾಹಿ ಸಂಬಂಧಗಳ ಘಟಕವಾಗಿ ನೋಡುವುದು ಒಂದು ನೆಲೆಯಾದರೆ ಅದೇ ಘಟಕವು ಇನ್ನೊಂದು ನೆಲೆಯಲ್ಲಿ ಶ್ರೇಣೀಕರಣದ-ಶೋಷಣೆಯ ಕೇಂದ್ರವಾಗಿ ಪರಿಣಮಿಸಿದೆ. ಕುಟುಂಬ ವ್ಯವಸ್ಥೆಯ ಮೂಲಕವೇ ಸಮಾಜದ ನೈತಿಕತೆ, ರೂಢಿಗತ ಮೌಲ್ಯಗಳು ಜಾರಿಗೆ ಬರುತ್ತವೆ. ಅದಕ್ಕಾಗಿಯೇ ಫ್ರಾಯ್ಡ್ ‘ಫ್ಯಾಮಿಲಿ ಈಸ್ ವೇರ್ ಒನ್ ಲರ್ನ್ಸ್ ದಿ ನ್ಯೂರಾಸಿಸ್ ಅಂಡ್ ಫೋಬಿಯಾಸ್ʼ ಎಂದು ಅಭಿಪ್ರಾಯ ಪಡುತ್ತಾನೆ. ಮನುಷ್ಯನ ಮನೋವೈಕಲ್ಯಗಳು, ಆಳವಾದ ಭಯಗಳು ರೂಪುಗೊಳ್ಳುವುದು ಕೌಟುಂಬಿಕ ಚೌಕಟ್ಟಿನಲ್ಲಿಯೇ. ಫ್ರಾಯ್ಡ್ ಹೇಳುವ ನ್ಯೂರಾಸಿಸ್, ಚಿತ್ತವಿಕಲತೆಗಳು ಕಾರಂತರ ಇತರ ಕಾದಂಬರಿಗಳಲ್ಲಿ ಕಾಣಿಸಿಕೊಂಡಿವೆ. ಇದೇ ಎಳೆಯನ್ನು ಆಧರಿಸಿ ಪ್ರಸ್ತುತ ಕಾದಂಬರಿಯ ಚರ್ಚೆಯನ್ನು ಬೆಳೆಸಬಹುದು.

ಕಾದಂಬರಿಯ ಆರಂಭವೇ ಬಹಳ ಸಾಂಕೇತಿಕವಾಗಿದ್ದು ಅದು ಬಹಳ ಪರಿಣಾಮಕಾರಿಯಾಗಿ ದಾಂಪತ್ಯ ವ್ಯವಸ್ಥೆಯ ಸಂಘರ್ಷಮಯ ಆಯಾಮವನ್ನು ಸೂಚಿಸುತ್ತದೆ. ಮುಖ್ಯ ಪಾತ್ರಗಳಲ್ಲಿ ಒಬ್ಬಳಾದ ಜಾನಕಿ ತನ್ನ ಸಂಸಾರದಲ್ಲಿ ಗಂಡನ ಸರ್ವಾಧಿಕಾರಿ ಧೋರಣೆಯಿಂದ ನೊಂದು ಸರಸಮ್ಮನ ಸಮಾಧಿಯ ಬಳಿ ತನ್ನ ದುಃಖವನ್ನು ಹೇಳಿಕೊಳ್ಳಲು ಬಂದಾಗ ಅವಳ ಹಣೆಯ ಕುಂಕುಮ ಬೆವರಿನೊಂದಿಗೆ ಬೆರೆತು ರಕ್ತದಂತೆ ಕಾಣಿಸಿಕೊಳ್ಳುವುದರೊಂದಿಗೆ ಕಾದಂಬರಿ ಆರಂಭವಾಗುತ್ತದೆ. ಹಲವು ಪಾತ್ರಗಳು, ವೈವಿಧ್ಯಮಯ ಕೌಟುಂಬಿಕ ಸಂಬಂಧಗಳು ಕಾದಂಬರಿಯ ಹರಹಿನಲ್ಲಿ ಬರುತ್ತವೆ. ಜಾನಕಿ-ತಿಮ್ಮಪ್ಪಯ್ಯ, ಸುನಾಲಿನಿ-ಅಣ್ಣಪ್ಪ ಕುಮ್ತಿ, ಹಿರಣ್ಯ-ಭಾಗೀರತಿ ಮತ್ತು ಚಂದ್ರಪ್ಪಯ್ಯನವರನ್ನೊಳಗೊಂಡ ಮೂರು ಕುಟುಂಬಗಳಿಗೆ, ಬೆಳ್ಯಮ್ಮ-ಗುಲಾಬಿ ಎಂಬ ತಾಯಿ ಮಗಳಿಗೆ ಕಾದಂಬರಿಯಲ್ಲಿ ಸರಸಮ್ಮನ ಸಮಾಧಿ ಕೇಂದ್ರವಾಗಿದೆ. ಅದು ಊರಜನರ ಶ್ರದ್ಧೆಯ ಕೇಂದ್ರವಾಗಿರುವಂತೆ, ಅವರ ಸಮಸ್ಯೆಗಳಿಗೆ ಪರಿಹಾರ ಕಾಣಿಸುವ ಸಾಧನವೂ ಆಗಿದೆ.

ಜಾನಕಿ-ತಿಮ್ಮಪ್ಪಯ್ಯ, ಸುನಾಲಿನಿ-ಅಣ್ಣಪ್ಪ ಕುಮ್ತಿ, ಹಿರಣ್ಯ-ಭಾಗೀರತಿ ಇವೆಲ್ಲ ಕುಟುಂಬಗಳಿಗೆ ನೇರವಾದ ಸಂಬಂಧಗಳಿಲ್ಲ. ಈ ಎಲ್ಲ ಕುಟುಂಬಗಳ ಕತೆಯನ್ನು ಬಿಡಿಬಿಡಿ ಸನ್ನಿವೇಶಗಳಂತೆ ಚಿತ್ರಿಸುವ ಕಾರಂತರು ಅವುಗಳ ನಡುವೆ ಇರುವ ಸಾಮ್ಯತೆಯನ್ನು –ವಿರೋಧಾಭಾಸಗಳನ್ನು ತೋರಿಸುತ್ತ ಕಾದಂಬರಿಯ ಕಥನವನ್ನು ಬೆಳೆಸುತ್ತಾರೆ. ಈ ಎಲ್ಲ ಕುಟುಂಬಗಳು ಒಂದಲ್ಲ ಒಂದು ರೀತಿಯಿಂದ ಒಂದು ಸಮಸ್ಯೆಯಿಂದ ಬಳಲುತ್ತಿವೆ.

ಜಾನಕಿ-ತಿಮ್ಮಪ್ಪಯ್ಯನ ಸಂಸಾರದಲ್ಲಿ ಜಾನಕಿಯ ಮಾತಿಗೆ ಪ್ರಾಧಾನ್ಯವಿಲ್ಲ. ಮನೆಯ ಎಲ್ಲ ವ್ಯವಹಾರಗಳೂ ತನ್ನ ಅಣತಿಯಂತೆ ನಡೆಯಬೇಕೆಂಬ ಗಂಡಾಳ್ವಿಕೆಯ ಧೋರಣೆ ತಿಮ್ಮಪ್ಪಯ್ಯನದು. ಅವನ ಪ್ರಕಾರ ತನ್ನ ಹೆಂಡತಿ ಜಾನಕಿಗೆ ಸಂಸಾರದ ಹಣಕಾಸಿನ ವಿಚಾರದಲ್ಲಿ ಯಾವುದೇ ಪ್ರವೇಶವಿಲ್ಲ. ಅಡುಗೆಮನೆ, ಮುಸುರೆ ಪಾತ್ರೆ ಇಷ್ಟೇ ಆಕೆಯ ಹಣೆಬರಹವಾಗಿರಬೇಕು. ಹಾಗಿದ್ದರೂ ಗೇಣಿ ಕೊಡದೆ ತಪ್ಪಿಸುತ್ತಿದ್ದ ಮಹಾಲಿಂಗನ ಬಳಿ ಒಳ್ಳೆಯ ಮಾತಿನಲ್ಲೇ ಹಣವಸೂಲಿ ಮಾಡಿ ಮಗಳಿಗೆ ಚಿನ್ನ ಮಾಡಿಸಬೇಕು ಎಂಬ ಯೋಚನೆಯಲ್ಲಿ ಜಾನಕಿ ಇದ್ದಾಳೆ. ಹೆಂಗಸರ ಹಣೆಬರಹದಲ್ಲಿ ಕಣ್ಣೀರು ಬಿಟ್ಟರೆ ಬೇರೇನೂ ಇಲ್ಲ ಎಂದು ಅಸಹಾಯಕಳಾಗಿರುವ ಜಾನಕಿಗೂ ಅವಳ ಗೆಳತಿ ಸೀತಕ್ಕನಿಗೂ ದಾಂಪತ್ಯವೂ ಹಾಗೂ ಅದನ್ನು ಪೋಷಿಸುತ್ತಿರುವ ಶಾಸ್ತ್ರ ಧರ್ಮಗಳೂ ಎಷ್ಟು ಪೊಳ್ಳಾಗಿವೆ ಎಂಬುದರ ಅರಿವಿದೆ. ಅವಳು ಹೇಳುವ ಮಾತುಗಳಲ್ಲಿ ದಾಂಪತ್ಯ ಶಾಸ್ತ್ರ ಧರ್ಮಗಳ ಬಗೆಗೆ ತೀಕ್ಷ್ಣವಾದ ವಿಮರ್ಶೆಯಿದೆ “ನಾವು ಪಡೆದುಕೊಂಡು ಬಂದಿದ್ದನ್ನು ತಪ್ಪಿಸಲು ಯಾರಿಂದಲೂ ಸಾಧ್ಯವಿಲ್ಲ. ಮನೋಬಲ ಅದು ಗಟ್ಟಿ. ಜಾತಕ ಎಷ್ಟು ಕೂಡಿದರೇನು?….. ಈ ವಯಸ್ಸಿನಲ್ಲಾದರೂ ಕೈಹಿಡಿದವಳನ್ನು ಗೋಳಾಡಿಸಬಾರದು ಎಂಬ ಬುದ್ಧಿ ಬರಬಾರದೇ? ತಿಮ್ಮಪ್ಪಯ್ಯ ಊರವರನ್ನೆಲ್ಲ ಕೂರಿಸಿಕೊಂಡು ಮಳೆ ಚಿರ್ರೆನುವಾಗ ರಾಮಾಯಣ ಮಹಾಭಾರತ ಎಂದು ಪುರಾಣ ಹೇಳುತ್ತಿರುತ್ತಾರೆ” ಎಂದು ಸೀತಕ್ಕ ಹೇಳುತ್ತಾಳೆ. ಅದಕ್ಕೆ ಜಾನಕಿ “ಸೀತಕ್ಕ ಪುರಾಣ ಗಿರಾಣ ನಮ್ಮನ್ನೇನು ಮಾಡೀತು? ಕೈ ಬೇವಿನ ಗಿಡಕ್ಕೆ ಬೆಲ್ಲದ ಪಾನಕ ಎರೆದರೆ ಬೇವಿನ ಚಿಗುರು ಸಿಹಿ ಆದೀತೆ ಹೇಳು” ಎನ್ನುತ್ತಾಳೆ. ಜಾನಕಿ ತನ್ನ ದಾಂಪತ್ಯದ ಕಗ್ಗಂಟನ್ನು ಬಿಡಿಸಲು ಸರಸಮ್ಮನ ಸಮಾಧಿಗೆ ಹರಕೆ ಸಲ್ಲಿಸಿ ತನ್ನ ಸಮಸ್ಯೆಗಳಿಂದ ಪಾರಾಗಲು ಯೋಚಿಸುತ್ತಿದ್ದಾಳೆ.

ಕಾರಂತರಲ್ಲಿ ಕಾಣುವ ಸ್ವವಿಮರ್ಶೆಯ ಸಾಮಾಜಿಕತೆಯ ನಿಲುವನ್ನು ಬಹಳ ಗಂಭೀರವಾಗಿ ಪರಿಗಣಿಸುವ ಅಗತ್ಯವಿದೆ. ಅದರಲ್ಲೂ ಭಾರತೀಯ ಸಮಾಜದ ಮೂಲಾಧಾರವೇ ಆಗಿರುವ ಕುಟುಂಬ-ದಾಂಪತ್ಯ ವ್ಯವಸ್ಥೆ, ಅಲ್ಲಿ ಸ್ತ್ರೀಯರಿಗೆ ದೊರಕಿರುವ ಸ್ಥಾನಮಾನ, ಲೈಂಗಿಕ ಸ್ವಾತಂತ್ರ್ಯ ಮುಂತಾದ ಪ್ರಶ್ನೆಗಳನ್ನು ಬಹಳ ತೀಕ್ಷ್ಣವಾದ ವಿಮರ್ಶೆಗೆ ಒಳಪಡಿಸಿದ್ದಾರೆ.

ಇನ್ನೊಂದು ಕಡೆ ಸುನಾಲಿನಿ ಮತ್ತು ಅಣ್ಣಪ್ಪ ಕುಮ್ತಿಯ ನಡುವಿನ ಸಾಂಸಾರಿಕ ಸಂಬಂಧವೂ ಕಹಿಯಾಗಿದೆ. ಇಂಗ್ಲಿಶ್ ಕಲಿತಿರುವ, ಸ್ವದೇಶಾಭಿಮಾನಿ-ಸುಪ್ರಭಾತದಂತಹ ಪತ್ರಿಕೆ ಓದುವ ಆಧುನಿಕ ಮನೋಭಾವದ ಹೆಣ್ಣಾಗಿರುವ ಸುನಾಲಿನಿಗೆ ತನ್ನ ಗಂಡ ಅಣ್ಣಪ್ಪ ಕುಮ್ತಿ ಯಾವಾಗಲೂ ಅಡಿಕೆ ಧಾರಣೆ, ಮಂಗಳೂರಿನಲ್ಲಿ ಗೋಟಡಿಕೆ ದರ, ಬೊಂಬಾಯಿಯಲ್ಲಿ ಜಿಂಕ್ ಶೀಟಿನ ದರ ಎಷ್ಟಾಯಿತು ಎಂದು ತಲೆ ಕೆಡಿಸಿಕೊಂಡು ತನ್ನನ್ನು ಸಂಪೂರ್ಣ ಅಲಕ್ಷಿಸಿದ್ದಾನೆ ಎಂಬ ಬಗ್ಗೆ ಅಸಹನೆ ಇದೆ. “ಮಾತಿಗೂ ಬರಗಾಲವೇ? ಮಾತಿಗೂ ಪುರಸೊತ್ತಿಲ್ಲದವರು ಮದುವೆಯಾಗುವುದಾದರೂ ಯಾತಕ್ಕೆ” ಎಂಬ ಪ್ರಶ್ನೆ ಆಕೆಯನ್ನು ಕಾಡುತ್ತದೆ. ಸುನಾಲಿನಿಯ ಅಸ್ತಿತ್ವಕ್ಕೆ ಅವಳ ಹಂಬಲಗಳಿಗೆ ದಾಂಪತ್ಯವೆಂಬ ಸಂಸ್ಥೆಯಲ್ಲಿ ಯಾವುದೇ ಸ್ಥಾನಮಾನವಿಲ್ಲ. ಹಾಗಾಗಿ ಅವಳಿಗೆ ಅದು ಹೆಣ್ಣಿನ ಸ್ವತಂತ್ರ ಅಸ್ತಿತ್ವವನ್ನು ಹತ್ತಿಕ್ಕುವ ವ್ಯವಸ್ಥೆಯಾಗಿದೆ. ಅದಕ್ಕಿಂತ ಆಘಾತಕಾರಿಯಾದ ಸಂಗತಿಯೆಂದರೆ ಸುನಾಲಿನಿಯ ಕಷ್ಟವನ್ನು ಸ್ವತಃ ಹೆಣ್ಣಾದ ಅವಳ ಅತ್ತೆ ರಾಜೀವಿ ಸಹ ಅರ್ಥ ಮಾಡಿಕೊಳ್ಳಲು ತಯಾರಿಲ್ಲ.

ಹೆಂಡತಿ ಗಂಡ ಅತ್ತೆ ಮಾವ ತಂದೆ ತಾಯಿಯರೆಂಬ ರೂಢಿಗತ ಕೌಟುಂಬಿಕ ಸಂಬಂಧಗಳು ಹೆಣ್ಣಿನ ಸ್ವತಂತ್ರ ಅಸ್ತಿತ್ವಕ್ಕೆ ಹೇಗೆ ಮಾರಕವಾಗಿವೆ ಎಂಬುದು ಸುನಾಲಿನಿಯ ಪಾತ್ರದ ಮೂಲಕ ವ್ಯಕ್ತವಾಗುತ್ತದೆ. ಸುನಾಲಿನಿಯ ಅತ್ತೆ ರಾಜೀವಿ “ಅವಳಿಗೆ ಗಂಡನೇಕೆ? ನ್ಯೂಸ್ ಪೇಪರಿಲ್ಲವೆ? ಈ ಮನೆಯಲ್ಲಿ ಏನು ಕಡಿಮೆಯಾಗಿದೆ? ಉಣ್ಣಲಿಕ್ಕಿಲ್ಲವೇ? ಉಡಲಿಕ್ಕಿಲ್ಲವೇ?” ಎಂದು ಸುನಾಲಿನಿಯನ್ನು ದಮನ ಮಾಡುವ ಪ್ರಯತ್ನದಲ್ಲಿದ್ದಾಳೆ. ಇದೆಲ್ಲದರಿಂದ ರೋಸಿ ಹೋಗಿರುವ ಸುನಾಲಿನಿಗೆ “ಎರಡು ಅಪರಿಚಿತ ಹೆಣ್ಣು ಗಂಡುಗಳನ್ನು ಬೇರೆ ಬೇರೆ ಬೆಳೆಸಿ ಒಂದು ದಿವಸ ಅವರನ್ನು ಮಂಟಪದೊಳಗೆ ಕುಳ್ಳಿರಿಸಿ ದಾಂಪತ್ಯದಲ್ಲಿ ಬೆಸೆಯುತ್ತೇವೆ ಎಂಬುದು ಭ್ರಮೆಯಲ್ಲವೇ” ಎಂಬ ಪ್ರಶ್ನೆ ಎದುರಾಗಿದೆ. ಹೀಗಾಗಿ ಸುನಾಲಿನಿಯೂ ಸರಸಮ್ಮನ ಸಮಾಧಿಯ ಮೊರೆ ಹೋಗಿದ್ದಾಳೆ.

ಮೂರನೆಯದಾಗಿ ಹಿರಣ್ಯ ಮತ್ತು ಭಾಗೀರತಿಯ ದಾಂಪತ್ಯವೂ ಮುರಿದುಬೀಳುವ ಸ್ಥಿತಿಯಲ್ಲಿದೆ. ಹೊಸದಾಗಿ ಮದುವೆಯಾಗಿ ಬಂದ ಭಾಗೀರತಿಯೊಂದಿಗೆ ಅನ್ಯೋನ್ಯವಾಗಿರುವುದು ಪರಸ್ಪರ ಹರಟುತ್ತ ನಿಲ್ಲುವುದು ಹಿರಣ್ಯನ ತಂದೆತಾಯಿಗಳಿಗೆ ಬೇಕಿಲ್ಲ. ಹಿರಣ್ಯನ ತಂದೆ ವೆಂಕಟರಮಣಯ್ಯ ತನ್ನ ಹೆಂಡತಿಗೆ “ನಿನ್ನ ಮಗನಿಗೆ ಸ್ವಲ್ಪ ಬುದ್ಧಿ ಹೇಳು. ಹೆಂಡತಿ ಮನೆಗೆ ಬಂದಳು ಎಂದು ನಾಯಿಯ ಹಿಂದಿನ ಬಾಲವಾಗುವುದಲ್ಲ. ಯಾವುದು ಎಲ್ಲಿರಬೇಕೋ ಅದು ಅಲ್ಲಿದ್ದರೇನೇ ಚಂದ. ಕಾಲಿನದ್ದು ಕಾಲಿಗೇ ತಲೆಗಲ್ಲ” ಎಂದು ಹೇಳಿ ಭಾಗೀರತಿಯನ್ನು ಅವಮಾನಿಸುತ್ತಾನೆ. ಹಿರಣ್ಯನ ಮಾತು ಕೇಳಿ ಭಾಗೀರತಿಯ ಸ್ವಾಭಿಮಾನಕ್ಕೆ ಕುಂದುಬಂದು ಮದುವೆಯಾದ ಮೂರು ನಾಲ್ಕು ದಿನಗಳಲ್ಲೇ ಗಂಡನನ್ನು ಬಿಟ್ಟು ತಂದೆತಾಯಿಯ ಮನೆ ಸೇರಿದ್ದಾಳೆ. ಇದೇ ಸಂದರ್ಭವನ್ನು ಬಳಸಿ ಭಾಗೀರತಿಯ ವಿರುದ್ಧ ಇಲ್ಲಸಲ್ಲದ ಆರೋಪಗಳನ್ನು ಹೊರಿಸಿ ಹಿರಣ್ಯನಿಗೆ ಇನ್ನೊಂದು ಮದುವೆ ಮಾಡಿ ಅವಳ ಸೊಕ್ಕನ್ನು ಮುರಿಯುವ ಪ್ರಯತ್ನವೂ ನಡೆದಿದೆ. ವಿಚಿತ್ರವೆಂದರೆ ಕಾರಂತರ ಕಾದಂಬರಿ ಮದುವೆ ಎಂಬ ಒಪ್ಪಿತವಾದ, ಸಾಂಪ್ರದಾಯಿಕವಾದ ಸಂಸ್ಥೆ ಗಂಡ ಹೆಂಡಿರ ನಡುವಿನ ಅಸಮಾನ ಸಂಬಂಧವನ್ನು ಪೋಷಿಸುವ (ಜಾನಕಿ- ತಿಮ್ಮಪ್ಪಯ್ಯ) ಹೆಣ್ಣಿನ ಅಸ್ತಿತ್ವವನ್ನು ನಾಶಮಾಡುವ (ಸುನಾಲಿನಿ) ಹಾಗೆಯೇ ಹೆಣ್ಣಿನ ಮೇಲೆ ಸೇಡು ತೀರಿಸುವ ಸಾಧನವಾಗಿಯೂ ಬಳಕೆಯಾಗುವುದನ್ನು ತೋರಿಸುತ್ತದೆ. ಹಾಗಾಗಿ ಕಾದಂಬರಿಯಲ್ಲಿ ದಾಂಪತ್ಯವೆಂಬ ವ್ಯವಸ್ಥೆಯ ಹಲವು ಬಗೆಯ ವಿಮರ್ಶೆಯನ್ನು ಕಾಣಬಹುದು.

ಅದಕ್ಕಾಗಿಯೇ ಹಿರಣ್ಯನ ತಂದೆ ತಾಯಿಗಳು ಭಾಗೀರತಿಯೇನು ನನ್ನ ಮಗನಿಗೆ ನೂರು ಹೆಣ್ಣು ಸಿಗುತ್ತವೆ ಎಂದು ಹೇಳುತ್ತ ಮಗನಿಗೆ ಇನ್ನೊಂದು ಮದುವೆ ಮಾಡಿ ಭಾಗೀರತಿಯ ವಿರುದ್ಧ ಸೇಡು ತೀರಿಸಿಕೊಳ್ಳಲು ಹವಣಿಸುತ್ತಿದ್ದರೂ ಹಿರಣ್ಯ ತನ್ನ ತಂದೆಯ ಮಾತುಗಳಿಗೆ ಬೆಲೆ ಕೊಡದೆ “ಸಾಯಲಿ ಬದುಕಲಿ ಭಾಗೀರತಿಯೇ ಬೇಕು” ಎಂದು ನಿರ್ಧರಿಸಿದ್ದಾನೆ. ಅಷ್ಟೇ ಅಲ್ಲ ಭಾಗೀರತಿಯನ್ನು ಪಡೆಯಲೇ ಬೇಕೆಂಬ ತನ್ನ ತೀವ್ರ ಹಂಬಲವನ್ನು ಈಡೇರಿಸುವ ಹಂಬಲಕ್ಕಾಗಿ ಸರಸಮ್ಮನ ಸಮಾಧಿಯ ಮೊರೆ ಹೊಕ್ಕಿದ್ದಾನೆ. ಮೂಲಭೂತವಾಗಿ ಪಿತೃಪ್ರಧಾನ ಧೋರಣೆಗಳನ್ನು ಪೋಷಿಸುವ ದಾಂಪತ್ಯ ವ್ಯವಸ್ಥೆ ಹಿರಣ್ಯ-ಭಾಗೀರತಿಯಲ್ಲಿರುವ ಸಹಜವಾದ -ಸಮಾನವಾದ ಸಂಬಂಧವನ್ನು ಮಾನ್ಯ ಮಾಡುವುದಿಲ್ಲ ಎಂಬ ಸೂಚನೆಯೂ ಕಾದಂಬರಿಯಲ್ಲಿ ದೊರೆಯುತ್ತದೆ. ಮುಖ್ಯವಾದ ಸಂಗತಿಯೆಂದರೆ ಸರಸಮ್ಮನ ಸಮಾಧಿ ಏಕಕಾಲಕ್ಕೆ ಜನರ ಶ್ರದ್ಧೆಯ ಕೇಂದ್ರವೂ ಹೌದು. ಹಾಗೆಯೇ ದಾಂಪತ್ಯ ವ್ಯವಸ್ಥೆಯಲ್ಲಿರುವ ವಿಕಾರಗಳನ್ನು ಎತ್ತಿತೋರುವ ಸಂಕೇತವೂ ಹೌದು. ನಿಜವಾದ ಅರ್ಥದಲ್ಲಿ ಸರಸಮ್ಮನ ಸಮಾಧಿಯು ದಾಂಪತ್ಯದಲ್ಲಿ ಬೆಂದು ಬೂದಿಯಾದ ಜಾನಕಿ, ಸುನಾಲಿನಿ, ಭಾಗೀರತಿ, ಹಿರಣ್ಯರಂಥವರ ಸಹಜ ಹಂಬಲಗಳ ಸಮಾಧಿಯೂ ಹೌದು. ಕಾದಂಬರಿಯಲ್ಲಿ ಕಾರಂತರ ವಿಮರ್ಶೆ ಎಷ್ಟು ವಸ್ತುನಿಷ್ಟವಾಗಿದೆಯೆಂದರೆ ದಾಂಪತ್ಯವೆಂಬ ವ್ಯವಸ್ಥೆಯಲ್ಲಿ ಏಕಕಾಲಕ್ಕೆ ಹೆಣ್ಣು-ಗಂಡುಗಳಿಬ್ಬರನ್ನೂ ಬಲಿಪಶುಗಳಾಗಿದ್ದಾರೆ ಎಂಬುದನ್ನು ತೋರಿಸುತ್ತದೆ. ಅದು ಸರಳವಾಗಿ ಬರೀ ಹೆಂಗಸರನ್ನು ಮಾತ್ರ ಬಲಿಪಶುಗಳಾಗಿ ನೋಡುವುದಿಲ್ಲ. ಹಿರಣ್ಯನಂಥವರ ಮೂಲಕ ಗಂಡಿಗೂ ಸಹ ಸಂಸಾರವೆಂಬ ಸಾಂಪ್ರದಾಯಿಕ ಸಂಸ್ಥೆ ಮಾರಕವಾಗಿದೆ ಎಂಬುದನ್ನು ಕಾರಂತರು ಕಾಣಿಸುತ್ತಾರೆ.

ಕಾದಂಬರಿಯ ನಿಜವಾದ ಸ್ವಾರಸ್ಯವಿರುವುದು ತಮ್ಮ ತಮ್ಮ ವೈವಾಹಿಕ ಸಮಸ್ಯೆಗಳಿಂದ ಬಳಲುತ್ತಿರುವ ಜಾನಕಿ, ಸುನಾಲಿನಿ, ಹಿರಣ್ಯ ಮುಂತಾದವರು ಸರಸಮ್ಮನ ಸಮಾಧಿಗೆ ಮೊರೆ ಹೋಗುವ ಸಂದರ್ಭದಲ್ಲಿ. ಅಲ್ಲಿ ಒಬ್ಬರನ್ನು ಇನ್ನೊಬ್ಬರಿಗೆ ಮುಖಾಮುಖಿಯಾಗಿಸುವ ಮೂಲಕ ಕಾರಂತರು ಕಾದಂಬರಿಯ ಒಟ್ಟು ಕಥನಕ್ಕೆ ಸಂಕೀರ್ಣತೆಯನ್ನು ತರುತ್ತಾರೆ.

ಇದಕ್ಕಿಂತ ಮುಖ್ಯವಾಗಿ ಊರಜನರ ಶ್ರದ್ಧೆಯ ಕೇಂದ್ರವಾಗಿರುವ ಸರಸಮ್ಮನ ಸಮಾಧಿಯ ಬಳಿ ಬೆಳ್ಯಕ್ಕನೆಂಬ ಅತೃಪ್ತ ಆತ್ಮ ಪ್ರೇತವಾಗಿ ಓಡಾಡುತ್ತಿದೆ. (ವಿಚಿತ್ರವೆಂದರೆ ಆ ಪ್ರೇತಕ್ಕೂ ಒಂದು ಜೊತೆ ಬೇಕಾಗಿದೆ) ಅಷ್ಟೇ ಅಲ್ಲದೆ ಬೆಳ್ಯಕ್ಕನೆಂಬ ವೇಶ್ಯೆ ತನ್ನ ಮಗಳು ಗುಲಾಬಿಯೊಂದಿಗೆ ಸಮಾಧಿಯ ಸುತ್ತ ಸುಳಿದಾಡುತ್ತ ಊರಿನ ಬೇರೆ ಬೇರೆ ಕುಟುಂಬಗಳ ಹುಳುಕುಗಳನ್ನು ತಿಳಿದುಕೊಂಡು ತನ್ನ ವ್ಯಾಪಾರ ಕುದುರಿಸಿಕೊಳ್ಳಲು ಹೊಂಚುಹಾಕಿದ್ದಾಳೆ. ಯಾಕೆಂದರೆ ಯಾರಾದರೂ ಸರಸಮ್ಮನ ಸಮಾಧಿಯ ಬಳಿ ಓಡಾಡುತ್ತಿದ್ದಾರೆ ಎಂದರೆ ಅವರ ಸಂಸಾರದಲ್ಲಿ ಏನೋ ಏರುಪೇರು ಆಗಿದೆ ಎಂದು ಅರ್ಥ. ಅದರ ಲಾಭವನ್ನು ಪಡೆಯಲು ಬೆಳ್ಯಕ್ಕ ತನ್ನ ಎಳೆಯ ವಯಸ್ಸಿನ ಮಗಳು ಗುಲಾಬಿಯ ಜೊತೆ ರಾತ್ರಿ ಸರಸಮ್ಮನ ಸಮಾಧಿಯ ಬಳಿ ಸುಳಿದಾಡುತ್ತಿದ್ದಾಳೆ. ಅದಕ್ಕಾಗಿಯೇ “ಮದುವೆಯ ಬೆಲೆಯನ್ನು ಸರಸಮ್ಮನ ಗುಡಿಯನ್ನು ಸುತ್ತುವ ಜನರನ್ನು ಕಂಡೇ ತಿಳಿಯಬೇಕು” ಎಂಬ ಮಾತು ಬರುತ್ತದೆ. ಸಮಾಜದಲ್ಲಿ ಮದುವೆಯೆಂಬ ಪ್ರಾಚೀನ ಹಾಗೂ ಶಾಸ್ತ್ರಸಮ್ಮತ ವ್ಯವಸ್ಥೆ ಶಿಥಿಲವಾಗಿರುವುದರಿಂದಲೇ ಸರಸಮ್ಮನ ಸಮಾಧಿ ಸೃಷ್ಟಿಯಾಗಿದೆ ಎಂಬ ವ್ಯಂಗ್ಯವನ್ನು ಕಾದಂಬರಿ ಸೂಚಿಸುತ್ತದೆ. ಇಷ್ಟೇ ಅಲ್ಲ ಸಮಾಜ ಒಪ್ಪಿಕೊಂಡು ಬಂದಿರುವ ಶ್ರದ್ಧೆಯ ಕೇಂದ್ರವಾದ ಸರಸಮ್ಮನ ಸಮಾಧಿ, ಅಲ್ಲಿ ಪ್ರೇಮಕ್ಕಾಗಿ ಸಂಗಾತಿಗಾಗಿ ಹುಡುಕಾಡುತ್ತಿರುವ ಬೆಳ್ಯಕ್ಕನ ಅತೃಪ್ತ ಆತ್ಮ, ಸಮಾಧಿಯ ಬಳಿ ಸುಳಿದಾಡಿಕೊಂಡೇ ಬೆಳ್ಯಮ್ಮ ಮುಂದುವರಿಸಿಕೊಂಡು ಹೋಗುತ್ತಿರುವ ವೇಶ್ಯಾವೃತ್ತಿ ಇವೆಲ್ಲವನ್ನೂ ಒಂದೇ ರೇಖೆಯಲ್ಲಿ ತಂದು ನಿಲ್ಲಿಸುವ ಮೂಲಕ, ಅಕ್ಕ ಪಕ್ಕ ಇಟ್ಟು ನೋಡುವ ಮೂಲಕ ಸಮಾಜದ ಬಗ್ಗೆ ಬಹಳ ದೊಡ್ಡದಾದ ಒಳನೋಟವೊಂದನ್ನು ಕಾರಂತರು ಕೊಡುತ್ತಾರೆ.

ಸರಸಮ್ಮನ ಸಮಾಧಿಯ ಬಳಿ ಇವೆಲ್ಲವನ್ನೂ ತರುವ ಮೂಲಕ ಭಾರತೀಯ ಸಮಾಜ ಬಹುದೊಡ್ಡ ಆದರ್ಶವೆಂದು ಪಾಲಿಸಿಕೊಂಡು ಬಂದಿರುವ ವಿವಾಹವೆಂಬ ಅಸಮಾನ ವ್ಯವಸ್ಥೆಯ ಫಲಿತಾಂಶಗಳೇ ಎಂಬುದನ್ನು ಸೂಚಿಸುತ್ತಾರೆ. ಸರಸಮ್ಮನ ಸಮಾಧಿಯ ಬಗೆಗಿನ ಅಂಧ ಶ್ರದ್ಧೆ (?), ಅಲ್ಲಿ ಸುಳಿದಾಡುತ್ತಿರುವ ಅತೃಪ್ತಿ/ಮನೋವೈಕಲ್ಯ, ವೇಶ್ಯಾವೃತ್ತಿ ಇವೆಲ್ಲವುಗಳು ಸಾಂಸಾರಿಕ ವ್ಯವಸ್ಥೆ ಶಿಥಿಲಗೊಂಡ ಪರಿಣಾಮಗಳೇ ಆಗಿವೆ. ಕಾದಂಬರಿಯಲ್ಲಿ ಒಂದು ಕಡೆ ಬರುವ ಹಾಗೆ “ಶಾಸ್ತ್ರದ ಹೆದರಿಕೆಯಿಂದ ನರಕದ ಹೆದರಿಕೆಯಿಂದ” ದಾಂಪತ್ಯವೆಂಬ ಸಂಸ್ಥೆ ಪೋಷಿತವಾಗಿದೆ. “ಮದುವೆಯಾಯಿತು ಎಂದರೆ ಮನಸು ಕೂಡುವುದೇ” ಎಂಬುದು ಕಾದಂಬರಿ ನಮ್ಮೆದಿರು ಮಂಡಿಸುವ ಮುಖ್ಯ ಪ್ರಶ್ನೆಯಾಗಿದೆ.

ಇದೆಲ್ಲದರ ನಡುವೆ ಭೂತಗಳ ಇರುವಿಕೆಯ ಬಗ್ಗೆ ಆಸಕ್ತಿ- ಕುತೂಹಲವಿರುವ ಅಡಾವುಡಿ ಚಂದ್ರಯ್ಯನೂ ಇದ್ದಾನೆ. ಅವನು ಸರಸಮ್ಮನ ಸಮಾಧಿಯ ಬಳಿ ಭೂತಗಳ ಸತ್ಯಾಸತ್ಯತೆಯನ್ನು ತಿಳಿದುಕೊಳ್ಳಲು ಹುಡುಕಾಡುತ್ತಿದ್ದಾನೆ. ಸ್ವಾರಸ್ಯದ ಸಂಗತಿಯೇನೆಂದರೆ, ಭೂತಗಳನ್ನು ಹುಡುಕಿಕೊಂಡು ಹೊರಟ ಚಂದ್ರಯ್ಯನಿಗೆ ಅಣ್ಣಪ್ಪ ಕುಮ್ತಿಯ ಅಲಕ್ಷ್ಯದಿಂದ ಬೇಸತ್ತ ಸುನಾಲಿನಿ ದೊರಕುತ್ತಾಳೆ. ಹಾಗೆಯೇ ಈ ಹುಡುಕಾಟದ ನಡುವೆಯೇ ಅವನು ಬೆಳ್ಯಕ್ಕನಂಥ ವೇಶ್ಯೆಯನ್ನು ಭೇಟಿಯಾಗುವುದೂ ಸಹ ಸಾಂಕೇತಿಕವಾಗಿದೆ. ಅವನ ನಿಶಾಚರಿ ಹುಡುಕಾಟಗಳ ಸಂದರ್ಭದಲ್ಲೇ ಹಿರಣ್ಯನಿಂದ ಬೇರಾದ ಭಾಗೀರತಿಯ ಭೇಟಿಯಾಗಿ ಅವರಿಬ್ಬರ ನಡುವೆ ಪ್ರೀತಿ ಬೆಳೆಯುತ್ತದೆ. ಹಾಗೆಯೇ ಬೆಳ್ಯಕ್ಕನೆಂಬ ಪ್ರೇತವೂ ಚಂದ್ರಯ್ಯನ ಬಗ್ಗೆ ಆಸಕ್ತವಾಗಿ ಅವನನ್ನು ಮದುವೆಯಾಗು ಎಂದು ಕೇಳುವುದು ಕಾದಂಬರಿಯ ಸ್ವಾರಸ್ಯಕರ ಭಾಗಗಳಲ್ಲಿ ಒಂದಾಗಿದೆ. ಹಾಗೆ ನೋಡಿದರೆ ಅಡಾವುಡಿ ಚಂದ್ರಯ್ಯ ಮತ್ತು ಅವನ ಆಧುನಿಕ ಮನೋವೃತ್ತಿ ಕಾದಂಬರಿಯಲ್ಲಿ ಲೇವಡಿಗೆ ಕಾರಣವಾಗಿದೆ. ಅವನು ಆಧುನಿಕ ಮನೋವೃತ್ತಿಯವನಾದರೂ ಆಧುನಿಕ ಮನುಷ್ಯನ ನಿಜವಾದ ಗುಣವಾದ ವಿಶ್ಲೇಷಣಾತ್ಮಕ ಗುಣ ಅವನಲ್ಲಿಲ್ಲ. ಕಣ್ಣಿಗೆ ಕಾಣದ ಭೂತಗಳನ್ನು ಹುಡುಕುತ್ತ ಹೊರಟ ಅವನು ಸುತ್ತಮುತ್ತಲಿನ ಸಮಾಜದಲ್ಲೇ ಇರುವ ಸಮಸ್ಯೆಗಳಿಗೆ ಕುರುಡನಾಗಿರುವುದು- ಕೊನೆಗೆ ಅವನು ಅವುಗಳಿಗೆ ಮುಖಾಮುಖಿ ಆಗುವಂತೆ ಮಾಡುವುದು ಕಾದಂಬರಿ ಅಡಾವುಡಿ ಚಂದ್ರಯ್ಯನ ಆಧುನಿಕ ಮನೋವೃತ್ತಿಯನ್ನು ಲೇವಡಿ ಮಾಡುತ್ತಿರುವುದಕ್ಕೆ ಉತ್ತಮ ಉದಾಹರಣೆಯಾಗಿದೆ.

ಇವೆಲ್ಲವುಗಳ ನಡುವೆಯೇ, ಬೆಳ್ಯಕ್ಕನೆಂಬ ಪ್ರೇತ ಪೂರ್ಣ ಬೆತ್ತಲಾಗಿ ಯಾವ ಕಟ್ಟುಪಾಡುಗಳಿಗೂ ಒಳಗಾಗದೆ ಸಹಜ ಸಾಂಗತ್ಯಕ್ಕೆ ಯಾಚನೆ ಮಾಡುವುದು ವಾಡಿಕೆಯ ದಾಂಪತ್ಯ ವ್ಯವಸ್ಥೆ ರೋಗಗ್ರಸ್ತವಾಗಿರುವುದಕ್ಕೆ ಮತ್ತೊಂದು ಉದಾಹರಣೆಯಾಗಿದೆ. ಆದರೆ ಚಂದ್ರಯ್ಯನಿಗೆ ಅಶರೀರಿಯಾದ ಬೆಳ್ಯಕ್ಕನೆಂಬ ಪ್ರೇತದ ಜೊತೆಗಿನ ಸಂಬಂಧ ಪೂರ್ಣಗೊಳ್ಳುವುದು ಸಾಧ್ಯವಿಲ್ಲ. ಅದೇನೇ ಇರಲಿ, ಕಾದಂಬರಿಯಲ್ಲಿ ಭೂತಗಳನ್ನು ಹುಡುಕಿಕೊಂಡು ಹೊರಟ ಚಂದ್ರಯ್ಯ ಅಂತಿಮವಾಗಿ ಹಿರಣ್ಯನ ಹೆಂಡತಿ ಭಾಗೀರತಿಯಲ್ಲಿ ಅನುರಕ್ತನಾಗುವುದು ಏನನ್ನು ಸೂಚಿಸುತ್ತದೆ ಎಂಬುದನ್ನು ವಿವರವಾಗಿ ಪರಿಶೀಲಿಸಬಹುದು. ಬಹುಶಃ ಇದರ ಮೂಲಕ ಕಾರಂತರು ಸಮಾಜದ ನಿಷಿದ್ಧ ಸಂಬಂಧಗಳ ಆಚೆ ಮನುಷ್ಯ ಸಂಬಂಧಗಳು ಅದರಲ್ಲೂ ಮುಖ್ಯವಾಗಿ ಹೆಣ್ಣುಗಂಡಿನ ಸಂಬಂಧಗಳು ಸಹಜವಾಗಿ ಸಮಾನವಾಗಿ ಇರಬಹುದೇ ಎಂದು ಯೋಚಿಸುತ್ತಿರುವಂತೆ ಕಾಣುತ್ತದೆ. ಮೇಲ್ನೋಟಕ್ಕೆ ಇದು ಕಾರಂತರು ಬದುಕಿದ್ದ ಕಾಲಮಾನದ ಸಾಮಾಜಿಕ ಆದರ್ಶಗಳಿಗೆ ವಿರುದ್ಧವಾಗಿ ಕಾಣಿಸಿದರೂ ಈ ನಿಲುವು ಹೆಚ್ಚು ವಸ್ತುನಿಷ್ಠವೂ ವೈಚಾರಿಕವೂ ಆಗಿದೆ. ಸಾಂಸಾರಿಕ ಸಂಬಂಧಗಳು ಮಧುರವಾಗಿರುವುದು ಕೇವಲ ಮದುವೆಯೆಂಬ ಸಾಮಾಜಿಕ-ನೈತಿಕ ಸಂಸ್ಥೆಯಲ್ಲಿ ಮಾತ್ರವಲ್ಲ. ಮದುವೆಯೆಂಬ ಸ್ವೀಕೃತ ಚೌಕಟ್ಟಿನ ಆಚೆಯೂ ಅರ್ಥಪೂರ್ಣವಾದ ಸಹಜವಾದ ಗಂಡುಹೆಣ್ಣಿನ ಸಂಬಂಧಗಳು ಇರಬಹುದೇ ಎಂಬ ಸಾಧ್ಯತೆಯನ್ನು ಕಾರಂತರು ಪರಿಶೀಲಿಸುವಂತೆ ಕಾಣುತ್ತದೆ. ಹಾಗಾಗಿಯೇ ಚಂದ್ರಯ್ಯ ಬೆಳ್ಯಕ್ಕನೆಂಬ ನಿಷಿದ್ಧ ಆತ್ಮದೊಡನೆ ಆಸಕ್ತನಾಗುವುದು, ಹಾಗೆಯೇ ಹಿರಣ್ಯನ ಹೆಂಡತಿ ಭಾಗೀರತಿಯಲ್ಲಿ ಅನುರಕ್ತನಾಗುವುದು –ಎರಡೂ ಸಹ ಸಮಾಜಬದ್ಧ ವಿವಾಹ ವ್ಯವಸ್ಥೆಯ ಆಚೆಯೂ ಸಹಜ ಪ್ರೀತಿ ಸಂಬಂಧಗಳು ಬೆಳೆಯಲು ಸಾಧ್ಯವೆ ಎಂಬುದನ್ನು ಪರಿಶೀಲಿಸುವಂತೆ ಕಾಣುತ್ತದೆ.

ಕೊನೆಯಲ್ಲಿ ಕಾದಂಬರಿಯ ಕೇಂದ್ರವೂ ಊರ ಜನರ ಶ್ರದ್ಧಾ ಕೇಂದ್ರವಾಗಿರುವ ಸರಸಮ್ಮನ ಸಮಾಧಿಯಲ್ಲಿ ಇರುವುದು ಮಹಾಪತಿವ್ರತೆ ಸರಸಮ್ಮ ಅಲ್ಲ, ದಾಂಪತ್ಯದಲ್ಲಿ ಅತೃಪ್ತವಾದ ಬೆಳ್ಯಕ್ಕನೇ ಸಾಧ್ವಿ ಸರಸಮ್ಮಳಾಗಿ ಪೂಜಿಸಲ್ಪಡುತ್ತಿದ್ದಾಳೆ ಎಂಬುದು ಗೊತ್ತಾಗುತ್ತದೆ. ವಿಚಿತ್ರವೆಂದರೆ ಯಾರನ್ನು ತಮ್ಮ ಸಂಸಾರದ ಕಷ್ಟಕೋಟಲೆಗಳನ್ನು ನೀಗುವ ಮಹಾಶಕ್ತಿ ಎಂದು ಪೂಜಿಸಿದ್ದರೋ ಅವಳೇ ಸ್ವತಃ ಗಂಡನ ಅಲಕ್ಷಕ್ಕೆ ಗುರಿಯಾಗಿ ಅತಂತ್ರವಾಗಿರುವ ಪ್ರೇತಾತ್ಮವಾಗಿದ್ದಾಳೆ. ಅದಕ್ಕಾಗಿಯೇ ಕೊನೆಯಲ್ಲಿ ಮಹಾಸತಿ ಸರಸಮ್ಮಳೆಂದು ತಪ್ಪಾಗಿ ಆರಾಧಿಸಲ್ಪಟ್ಟ ಬೆಳ್ಯಕ್ಕನ ಪ್ರೇತ ಹೇಳುವ ಮಾತುಗಳು ಬಹಳ ಮಾರ್ಮಿಕವಾಗಿವೆ. ಅವಳು ಹೇಳುತ್ತಾಳೆ “ನನ್ನ ಪತಿಗೆ ನಾನು ಬೇಡವಾಗಿದ್ದೆ. ನನಗೆ ಬೇಕಾದವನೊಬ್ಬನಿದ್ದ. ಅವನೊಂದಿಗಿರಲು ಶಾಸ್ತ್ರ, ಸಮಾಜ ಎರಡೂ ಅಡ್ಡವಾದವು. ಉಪಾಯಗಾಣದೆ ಶಾಸ್ತ್ರ ಹಿಂಬಾಲಿಸಿಯೇ ನಾನೀ ಅವಸ್ಥೆಗೆ ಬಂದೆ. ಕೊನೆಯ ತನಕವೂ ನನ್ನ ಬಯಕೆ ಪತಿಯಿಂದ ಪೂರ್ಣವಾಗಲಿಲ್ಲ”. ಹಾಗೆಯೇ ಈ ಪ್ರೇತ ಹೇಳುವ ಇನ್ನೊಂದು ಮಾತು ಬಹಳ ಮುಖ್ಯವಾಗಿದೆ “ನನ್ನ ಪತಿ ನನ್ನನ್ನು ಈ ಸ್ಥಿತಿಗೆ (ಪಿಶಾಚಿಯ ತ್ರಿಶಂಕು ಸ್ಥಿತಿಗೆ) ಇಳಿಸಿದವನು….. ಅವನ ಪ್ರೇತ ನನ್ನನ್ನು ಅಂಕೆಯಲ್ಲಿ ಇರಿಸುತ್ತಿದೆ (ವಿಚಿತ್ರವೆಂದರೆ ಬದುಕಿದ್ದಾಗ ಬೆಳ್ಯಕ್ಕನನ್ನು ನಿಯಂತ್ರಿಸಿದ ಗಂಡನ ಪ್ರೇತ ಸತ್ತ ಮೇಲೂ ತನ್ನ ಅಧಿಕಾರವನ್ನು ಬಿಟ್ಟುಕೊಟ್ಟಿಲ್ಲ) ನಾನು ಬೇಡವೆಂದು ರೋಧಿಸಿದರೂ ಅವನ ರೋಗಿಷ್ಠ ಶರೀರದೊಂದಿಗೆ ನನ್ನನ್ನು ಸುಟ್ಟರು. ನರಘಾತಕರು ನನ್ನನ್ನು ಸುಟ್ಟು ಮಹಾಸತಿಯಾಗಿ ಮಾಡಿದರು. ಏನು ನೀನು ಮಹಾಸತಿ ಸರಸಮ್ಮನೇ ಈ ಹಾಳು ಜನರ ಪಾಲಿಗೆ”. ಕಾರಂತರು ಇಂಥ ಕಟುವಾದ ಮಾತುಗಳ ಮೂಲಕ ಒಂದು ಸುಖೀ ಸಂಸಾರದ ಪರಿಕಲ್ಪನೆ ಪಿತೃಪ್ರಧಾನ ಮೌಲ್ಯಗಳಿಂದ ಗಂಡುಹೆಣ್ಣಿನ ಬಗೆಗಿನ ಅಸಮಾನ ದೃಷ್ಟಿಕೋನದಿಂದ ಜಡಸಂಪ್ರದಾಯಗಳಿಂದ ಬರಿಯ ಮಿತ್ ಆಗಿ ಶಿಥಿಲವಾಗಿದೆ ಎಂದು ಸೂಚಿಸುತ್ತಿದ್ದಾರೆ.

(ಕೃಪೆ : ಕೆಂಡಸಂಪಿಗೆ, ಬರಹ : ಎಸ್.ಸಿರಾಜ್ ಅಹಮದ್)

 

Related Books