ಮಹಾಕ್ಷತ್ರಿಯ

Author : ದೇವುಡು ನರಸಿಂಹಶಾಸ್ತ್ರಿಗಳು

Pages 244

₹ 160.00




Year of Publication: 2014
Published by: ದೇವುಡು ಪ್ರತಿಷ್ಠಾನ

Synopsys

ದೇವುಡು ಅವರ ತ್ರಿವಳಿ ಕಾದಂಬರಿಗಳಾದ ’ಮಹಾಬ್ರಾಹ್ಮಣ’, ’ಮಹಾಕ್ಷತ್ರಿಯ’, ಮಹಾದರ್ಶನ ಕೃತಿಗಳ ಪೈಕಿ ಒಂದು. ಮಹಾಕ್ಷತ್ರಿಯ ಕೃತಿಗೆ ಕೇಂದ್ರ ಸಾಹಿತ್ಯ ಅಕಾಡೆಮಿಯ ಪ್ರಶಸ್ತಿ ದೊರೆತಿದೆ. ಪೌರಾಣಿಕ ಕಥಾವಸ್ತು ಹೊಂದಿರುವ ಈ ಕಾದಂಬರಿ ಸರಾಗವಾಗಿ ಓದಿಸಿಕೊಂಡು ಹೋಗುತ್ತದೆ. ದೇವುಡು ಅವರ ಕಥನ ಶೈಲಿ ಗಮನ ಸೆಳೆಯುವ ಹಾಗಿದೆ.

About the Author

ದೇವುಡು ನರಸಿಂಹಶಾಸ್ತ್ರಿಗಳು
(29 December 1886 - 27 October 1962)

’ಮಹಾಕಾದಂಬರಿಕಾರ’ ಎಂದು ಹೆಸರುವಾಸಿಯಾಗಿದ್ದ ದೇವುಡು ನರಸಿಂಹಶಾಸ್ತ್ರಿಗಳು ಶಿಕ್ಷಕರಾಗಿ, ಸಂಪಾದಕರಾಗಿ, ನಟರಾಗಿ, ವಿಮರ್ಶಕರಾಗಿ ತಮ್ಮ ಪ್ರತಿಭೆ- ಪಾಂಡಿತ್ಯ ಮೆರೆದಿದ್ದರು. ನರಸಿಂಹ ಶಾಸ್ತ್ರಿಗಳು ಜನಿಸಿದ್ದು ಮೈಸೂರಿನ ರಾಜಪುರೋಹಿತರ ಮನೆತನದಲ್ಲಿ.  1896ರ ಡಿಸೆಂಬರ್‌ 26ರಂದು ಜನಿಸಿದ ಅವರು ಬಾಲ್ಯದಲ್ಲಿಯೇ ತಂದೆಯನ್ನು ಕಳೆದುಕೊಂಡರು. ತಾಯಿಯ ಆಸರೆಯಲ್ಲಿ ಬೆಳೆದ ನರಸಿಂಹಶಾಸ್ತ್ರಿಗಳು ತೀಕ್ಷ್ಣ ಬುದ್ಧಿಯುಳ್ಳವರಾಗಿದ್ದರು. ಹನ್ನೆರಡನೆಯ ವಯಸ್ಸಿನಲ್ಲಿಯೇ ರಾಮಾಯಣ, ಮಹಾಭಾರತದಂತಹ ಕಾವ್ಯ ಮತ್ತುಭಾಗವತದಂತಹ ಪುರಾಣಗಳನ್ನು ಓದಿ ಅರಿತಿದ್ದರು. ಹದಿನೈದನೆಯ ವಯಸ್ಸಿನಲ್ಲಿಯೇ ಛಂದೋಬದ್ಧವಾಗಿ ಕಾವ್ಯ ರಚಿಸುವ ಹವ್ಯಾಸ ಬೆಳೆಸಿಕೊಂಡರು. ಸಾಂಪ್ರದಾಯಿಕ ವೈದಿಕ ವಿದ್ಯೆಯ ಜೊತೆಯಲ್ಲಿಯೇ ಬಿ.ಎ., ಎಂ.ಎ. ಪದವಿಯನ್ನು ಸಂಸ್ಕೃತ ಹಾಗೂ ಭಾರತೀಯ ತತ್ವಶಾಸ್ತ್ರದಲ್ಲಿ ಪಡೆದಿದ್ದರು. ಸರ್ವಪಲ್ಲಿ ...

READ MORE

Awards & Recognitions

Reviews

ಮಹಾಕ್ಷತ್ರಿಯ

'ಮಹಾಬ್ರಾಹ್ಮಣ', 'ಮಹಾಕ್ಷತ್ರಿಯ ಹಾಗೂ 'ಮಹಾದರ್ಶನ' ಈ ಮೂರು ಕೃತಿಗಳು ದೇವುಡು ಅವರ ಪೌರಾಣಿಕ ಕಾದಂಬರಿಗಳು ಇವುಗಳಿಗೆ ಸಂಹಿತ, ಬ್ರಾಹ್ಮಣ, ಉಪನಿಷತ್ತು, ಪುರಾಣಗಳಿಂದ ವಸ್ತುವನ್ನು ಆಯ್ದುಕೊಂಡು ದೇವುಡು ಅವರು ತಮ್ಮ ವಿಚಾರಶೀಲತೆಗೆ ಒಂದು ವೇದಿಕೆಯನ್ನು ನಿರ್ವಿುಸಿಕೊಂಡಿದ್ದಾರೆ. 'ಮಹಾಕ್ಷತ್ರಿಯ' ಕೃತಿಯಲ್ಲಿ ಬ್ರಹ್ಮನಿಯಮ, ದೇವತೆಗಳು ಮನುಷ್ಯರು ಇವರ ಸಂಬಂಧ, ದೇವತೆಗಳ ಅಧಿಕಾರಮಿತಿ, ಧರ್ಮಸೂಕ್ಷ್ಮಗಳು ಇವೆಲ್ಲ ಗೊಂದಲವಿಲ್ಲದ ನಿರಾಯಾಸವಾದ ಬರವಣಿಗೆಯಲ್ಲಿ ಇಳಿದಿವೆ.  ಕೃತಿ ಪ್ರಾರಂಭದಲ್ಲಿ ದೇವಸಭೆಯಲ್ಲಿ ವಿರಾಜಿತನಾದ ಇಂದ್ರನಿಗೆ ದೇವ ಗುರು ಬೃಹಸ್ಪತಿಯ ಆಸನ ಬಿಡುವಾಗಿರುವುದು ಕಿನಿಸಿಗೆ ಕಾರಣವಾಗುತ್ತದೆ. ತಪೋಲೋಕದ ಮಹರ್ಷಿಗಳೊಡನೆ ಇಂದ್ರ ಜಿಜ್ಞಾಸೆಯಲ್ಲಿದ್ದಾಗ ಬೃಹಸ್ಪತಿ ಸಭೆಗೆ ಬರುತ್ತಾನೆ. ಪೂರ್ಣಧ್ಯಾನದಿಂದ ವಿಚಲಿತನಾಗದ ಇಂದ್ರನ ವರ್ತನೆಯಿಂದ ನೊಂದು ಸಭಾತ್ಯಾಗ ಮಾಡಿ ಅಜ್ಞಾತವಾಸಕ್ಕೆ ತೆರಳುತ್ತಾನೆ. ತ್ವಷ್ಟೃ ಬ್ರಹ್ಮನಿಗೆ ಅಸುರ ಸ್ತ್ರೀಯಲ್ಲಿ ಜನಿಸಿದ ವಿಶ್ವರೂಪನು ದೇವಗುರು ಸ್ಥಾನಕ್ಕೆ ಬರುತ್ತಾನೆ. ಇಂದ್ರನಿಗೆ ಬೃಹಸ್ಪತಿಯ ಬೆಂಬಲ ತಪ್ಪಿದ್ದೂ ಈಗಿನ ದೇವಗುರುವಿಗೆ ಅಸುರಕುಲ ಮಾತಾಮಹವರ್ಗಕ್ಕೆ ಸೇರಿದ್ದೂ ಅಸುರರ ಸಂತೋಷಕ್ಕೆ ಕಾರಣವಾಗುತ್ತವೆ. ಇಂದ್ರನ ಕ್ಷಾತ್ರಸ್ವಭಾವದಿಂದ ವಿಶ್ವರೂಪಾಚಾರನ ವಧೆಯಾಗಿ ಬೃಹಸ್ಪತಿಯೇ ದೇವಗುರುವಾಗುತ್ತಾನೆ. ಪುತ್ರವಧೆಯಿಂದ ನೊಂದ ತ್ವಷ್ಟೃ ವೃತನನ್ನು ಯಾಗದಲ್ಲಿ ಪಡೆದು ಇಂದ್ರವಧೆಗೆ ನೇಮಿಸುತ್ತಾನೆ. ಯಾಗಸಮಯದಲ್ಲಿ ಸರಸ್ವತಿ ಮಾಡಿದ ಸ್ವರಭೇದದಿಂದ ಇಂದ್ರನ ಪ್ರಾಣವುಳಿದರೂ ಇಂದ್ರ ತಾತ್ಕಾಲಿಕವಾಗಿ ವೃತ್ತನಿಗೆ ಸೋಲಬೇಕಾಗುತ್ತದೆ. ದಧೀಚಿಯಿಂದ ಪಡೆದ, ವಜ್ರಾಯುಧದಿಂದ - ಇಂದ್ರ ಸಮಯ ಕಾದು ವೃತ್ರನನ್ನು ವಧಿಸುತ್ತಾನೆ, ಆದರೆ ವೃತ್ರಹತ್ಯಾ

ದೋಷನಿವಾರಣೆ ಆಗದೆ ಇಂದ್ರ ಸಿಂಹಾಸನವನ್ನೇರಲಾಗದು. ಅದೆಲ್ಲ ವೃತ್ರ ಪ್ರೇತಭಯದಿಂದ ಇಂದ್ರ ತಲೆಮರೆಸಿಕೊಳ್ಳುತ್ತಾನೆ. ಮಧ್ಯಮಲೋಕದ ಧರ್ಮಪರ ರಾಜ ನಹುಷನು ಇಂದ್ರಪದವಿಗೆ ಬರುತ್ತಾನೆ. ಶಚೀ ಪತಿಯಾಗದ ಇಂದ್ರದ್ವ ಪೂರ್ಣವಾಗದೆಂಬ ಮತಕ್ಕೆ ದೇವಸಭೆಯು ಬೆಂಬಲ ದೊರಕಿದಾಗಲೂ ವಿಚಲಿತನಾಗದೆ ನಿಯತಿಯ ಆಣತಿಗೆ ಒಪ್ಪಿ ಸ್ವಯಂಶಿಕ್ಷೆಗೆ ಒಳಗಾಗುತ್ತಾನೆ. ಶಿಬಿಕೋತ್ಸವ ಅದಕೊಂದು ನೆಪವಾಗುತ್ತದೆ. ಮೊದಲ ಇಂದ್ರನಿಗೆ ಅಧಿಕಾರ ದೊರೆವ ಸೂಚನೆಯೊಂದಿಗೆ ಕಾದಂಬರಿ ಮುಗಿಯುತ್ತದೆ,

ಮಹಾಭಾರತದ ನಹುಷ ಕಾಮಾಂಧ, ಗರ್ವಿಷ್ಟ, ಸಪ್ತರ್ಷಿಗಳು ಹೊರುವ ಪಲ್ಲಕ್ಕಿಯಲ್ಲಿ ವೇಗವಾಗಿ ಹೋಗಲು ಆರಿಸಿ ಋಷಿಗಳನ್ನು ಅವಮಾನಿಸಿ ಸರ್ಪವಾಗುವ ಶಾಪವನ್ನು ಪಡೆದವನು. ಇಲ್ಲಿನ ನಹುಷ ಪಾತ್ರವಾದರೋ ದೇವುಡು ಅವರ ಕಲ್ಪನೆಯ ಮೂಸೆಯಲ್ಲಿ ಹಾಯ್ದು ಹೊಸಬೆಳಕನ್ನು ಪಡೆದಿದೆ. 'ಮಹಾಕ್ಷತ್ರಿಯ'ದ ನಹುಷ ದೇವತ್ವಕ್ಕೇರಿದ್ದರೂ ಮಾನವತದ 'ಮಿತಿ’ಗಳನ್ನು ಮೀರದವನು. ತನ್ನ ಹೊಸ ಪದವಿ ತೀರ ತಾತ್ಕಾಲಿಕ ಎಂಬದನ್ನರಿತವನು. ಶಚಿ ತನಗೆ ದಕ್ಕಬಹುದಾದ ಸಂದರ್ಭದಲ್ಲಿ ಅವನು ಸಂಯಮಿಯಾಗಿದ್ದಾನೆ. ನಿರ್ವಿಕಲ್ಪ ಸಮಾಧಿಯಿಂದ ವಿಚಲಿತನಾಗಿ ತನಗೆ ತಾನೇ ಅಜಗರಜನ್ಮದ ಶಿಕ್ಷೆ ವಿಧಿಸಿಕೊಳ್ಳುವ ನ್ಯಾಯನಿಷ್ಟುರತೆಯನ್ನು ಮೆರೆಯುತ್ತಾನೆ. ನಹುಷನ ಪಾತ್ರದ ಸಿದ್ದಿ ಎಂದರೆ ಅವನ ಜ್ಞಾನಾರ್ಜನೆಯ ಪರಿಪಾಕ, ಪರಿಗ್ರಹದ ನಂತರ ತ್ಯಾಗ ಎಂಬ ತಿಳುವಳಿಕೆ, ಅದರಿಂದುಂಟಾಗುವ ನಿರ್ಲಿಪ್ತತೆ, ದೇವುಡು ಅವರಿಗೆ ಇಲ್ಲೆಲ್ಲ ನಹುಷನ ಔನ್ನತ್ಯವನ್ನು ಮೆರೆಸುವ ಚಪಲವಿಲ್ಲದಿರುವುದು ಗಮನಾರ್ಹವಾಗಿದೆ. ದೇವುಡು ಅವರ ಮೂಲ ಉದ್ದೇಶ ಹಳೆಯ ಕಥಾಸಾಮಗ್ರಿಯಲ್ಲಿನ ಸತ್ಯಕ್ಕೆ ಪ್ರಕಾಶ ಬೀರುವುದು ಹಾಗೂ ಬುದ್ಧಿ ವಿಲಾಸದ ನಡುವೆ ಜ್ಞಾನದ ಪ್ರಭೆಗೆ ಒತ್ತು ಕೊಡುವುದು, ನಹುಷನ ಔನ್ನತ್ಯ ಆನುಷಂಗಿಕ ಮಾತ್ರ.

ಆಡಂಬರವಿಲ್ಲದ ವರ್ಣನೆಗಳು ಕಾದಂಬರಿಯಲ್ಲಿ ಹೇರಳವಾಗಿವ. ಸಮುದ್ರತೀರದಲ್ಲಿ ಇಂದ್ರ ವೃತರ ಕಲಹದಿಂದಾದ ವೃತ್ರವಧೆ, 'ತಪಸ್ಸಿನಲ್ಲಿ ಲೀನನಾಗಿದ್ದ ಚ್ಯವನನ ದೇಹ ಮೀನಿನಾಕಾರ ತಾಳಿ ಬೆಸ್ತರ ಬಲೆಯಲ್ಲಿ ಸಿಕ್ಕಿ ಕೊಂಡಿದ್ದು, ಇಂದ್ರ ಅಡಗಿದ್ದ ಸ್ಥಳವನ್ನು ಉಪಶ್ರುತಿಯಿಂದ ತಿಳಿದು ಶಚಿ ಆತನನ್ನು ಸಂಧಿಸುವುದು ಮುಂತಾದ ಸಂದರ್ಭಗಳು ವಾತಾವರಣವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿತವಾಗಿವೆ. ಆಡುನುಡಿಯಿಂದ ದೂರವಾಗದ, ಶಿಷ್ಟ ಭಾಷೆಯ ಕೋಮಲತೆ ಹೊರತಾಗದ ಒಂದು ಹದ ಕಾದಂಬರಿಯು ಭಾಷೆಯಲ್ಲಿದೆ.  ದೇವುಡು ಅವರ ವೇದಾಂತ ಸಂಸ್ಕೃತ ಸಾಹಿತ್ಯಗಳ ಆಳವಾದ ಪಾಂಡಿತ್ಯ ಹಾಗೂ ಸಂಸ್ಕೃತಿಯಲ್ಲಿನ ನಿಷ್ಠೆ ಇವುಗಳು ಇಲ್ಲಿ ಕೈ ಕೈ ಹಿಡಿದು ಸಾಗಿವೆ. ಹಳೆಯ ಕಥಾಸಾಮಗ್ರಿ ಮತ್ತು ಕಲ್ಪನೆಗಳ ಹಿತಮಿತ ಸಂಯೋಜನೆಯಿಂದ ಚೊಕ್ಕಚಿನ್ನಕ್ಕೆ ಹೊಸ ಹೊಳಪು ದೊರೆತಂತಾಗಿದೆ. ಈ ಗುಣಗಳಿಂದ 'ಮಹಾಕ್ಷತ್ರಿಯ' ಕಾದಂಬರಿಯ ಸ್ಥಾನ ವಿಶಿಷ್ಟವಾಗಿದೆ.

-ಎಚ್ ಎಸ್ ಸುಜಾತಾ

 

ಮಹಾಕ್ಷತ್ರಿಯ (ಕಾದಂಬರಿ) 

ಎರಡನೆಯ ಮುದ್ರಣ 1966 ಸ್ಯಾಂಡರ್ಡ್ ಬುಕ್‌ಡಿಪೋ ಬೆಂಗಳೂರು

244 ಪುಟಗಳು , ಬೆಲೆ ರೂ.4-50

ಕೃಪೆ: ಗ್ರಂಥಲೋಕ, ಜೂನ್‌ 1981

 

 

Related Books